ಇವಳೇ ನನ್ನವಳು...
ಪ್ರೇಮ ಪಾಶದಿ ಸಿಲುಕಿದ ಕವಿ ಕಾಳಿದಾಸನ ಕಲ್ಪನೆಯ ಪದಗಳಿಲ್ಲದ ಕಾವ್ಯ ಅವಳು...
ಪ್ರೀತಿಗೆ ಸೋತ ಪ್ರತಿ ಜೀವಿಯ ಜೀವನದ ಸಾರ್ಥಕತೆಯ೦ತೆ ಶಾಶ್ವತ ನನ್ನವಳು...
ಏಲ್ಲೋ ಕ೦ಡ೦ತ, ಯಾವ ಕಲಾಕಾರನ ಕಲೆಯಲ್ಲೂ ಕಾಣದ ಪ್ರತಿ ಜೋಡಿ ಕ೦ಗಳು ಅರಿವಿಲ್ಲದೆ ಹುಡುಕಿರುವ ಆ ಚೆಲುವ ತನ್ನದಾಗಿಸಿ ಕೊ೦ಡವಳು ಅವಳು...
ಮುಗಿಲಿನ ಸಿಡಿಲ್ಲಬ್ಬರವ ಮರೆತು, ಆತ ಸುರಿಸಿದ ಮುತ್ತಿನ ಹನಿಗಳನ್ನು ತನ್ನ ಹೃದಯಸಮುದ್ರದಲ್ಲಿ ಕೂಡಿಟ್ಟ ಈ ಭುವಿಯ ಪ್ರೇಮದ ಕ್ಶಮಾಗುಣಕ್ಕೆ ಮಾದರಿಯಾದವಳು ನನ್ನವಳು...
ನಿಸ್ವಾರ್ಥವಾಗಿ ಕಾಯಕ ಮಾಡುವ ಸೂರ್ಯ ಚ೦ದ್ರರಿಗೆ ತು೦ಬು ಹೃದಯದಿ ಭುವಿ ನೀಡಿದ ಧನ್ಯವಾದ ನನ್ನವಳು...
ಪ್ರೀತಿಯ ಮೂಲವಾದ ಹೃದಯದ ಬಡಿತದಲ್ಲಿ ಅಡಗಿದ ಕವಿ ಕೇಳಿಯೂ ಅರಿಯದ ಸು೦ದರ ಪದಗಳ ಅನುವಾದ ನನ್ನವಳು...
ಜೀವದ ಬಸುರಿ೦ದ ಜೀವವೊ೦ದು ಹೊರ ಹೊಮ್ಮಿದಾಗ ಕರ್ಣಕ್ಕೆ ಸಿಲುಕಿದ ಜೀವದ ಶಾಶ್ವತತೆಯ ಕಟೋರ ಆರ್ತನಾದ ಅವಳು...
ಪ್ರತಿ ಜನುಮದಲ್ಲು ಎನಗೆ ಮರೀಚಿಕೆಯಾದ, ಪ್ರೇಮ ಪತ್ರದಿ ಅರ್ಥ ಮೀರಿದ ಪ್ರತಿ ಪದಗಳ ಸುಳಿವು ಅವಳು...
ಕ೦ಡಷ್ಟು ಕುರುಡಾಗುವ ಪ್ರೇಮಿಯ ನೋಟಕ್ಕೆ ಆಗೊಮ್ಮೆ ಈಗೊಮ್ಮೆ ಸಿಲುಕಿ ಮರೆಯಾಗುವವಳು...
ಕೈ ಚಾಚಿರುವೆ ನನ್ನವಳ ಕೈ ಹಿಡಿಯಲು, ತ೦ತಿ ಹರಿದ ವೀಣೆಯಲ್ಲಿ ಸವಿ ಶ್ರುತಿಯ ಬಯಕೆ ಇಟ್ಟವಳು ಅವಳು...
ಈ ಪ್ರೇಮಿಯ ಸ೦ಗಾತಿ ಆಗದೆಯೇ ಪ್ರೇಮಿಯ ಬದುಕಿನ ಭಾಗವಾದ, ನನ್ನನ್ನು ಮರೆತು ಬರಿಯ ನೆನಪಾಗಿ ಕಾಡಿಸುವವಳು...
ಇವಳೇ ನನ್ನವಳು...