ಈ ಬಾರಿಯ ನೊಬೆಲ್ (ಸಾಹಿತ್ಯ) ಪಡೆದ ಸ್ವೀಡಿಶ್ ಕವಿ ಟ್ರಾನ್ಸತೋಮರ್

4

ಟ್ರಾನ್ಸತೋಮರ್‌
ಈ ಬಾರಿಯ ಸಾಹಿತ್ಯಕ್ಕೆ ಕೊಡಮಾಡುವ ನೊಬೆಲ್‌ ಪಾರಿತೋಷಕ ಸ್ವೀಡಿಶ್‌ ಭಾಷೆಯ ಹೆಸರಾಂತ ಕವಿ Tomas Transtromerಗೆ ಸಂದಿದೆ. ೧೯೩೧ರಲ್ಲಿ ಸ್ಟಾಕ್‌ಹೋಂನಲ್ಲಿ ಹುಟ್ಟಿದ ಟ್ರಾನ್ಸತೋಮರ್‌ ಸ್ವೀಡನ್ನಿನ ಅತ್ಯಂತ ಹೆಸರುವಾಸಿ ಕವಿ. (ಸ್ವೀಡಿಶ್‌ ಭಾಷೆಯ ಮತ್ತೊಬ್ಬ ಹೆಸರಾಂತ ಮಹಾಕವಿ ಗುನ್ನಾರ್‌ ಏಕಲೋ. ಈ ಕವಿಯ ಆಯ್ದ ಕವನಗಳನ್ನು ನಾನು ಕನ್ನಡಕ್ಕೆ ತಂದಿದ್ದು ಕನ್ನಡ ಪುಸ್ತಕ ಪ್ರಾಧಿಕಾರ ಅದನ್ನು ಪ್ರಕಟಿಸಿದೆ.) ಇವತ್ತು ಬರೆಯುತ್ತಿರುವ ಯೂರೋಪಿನ ಕವಿಗಳಲ್ಲೆಲ್ಲ ಟ್ರಾನ್ಸತೋಮರ್‌ ಶ್ರೇಷ್ಠ ಎಂಬ ಅಭಿಪ್ರಾಯವಿದೆ. ಆತ ಬಾಲಾಪರಾಧಿಗಳ ಜೈಲುಗಳಲ್ಲಿ, ಮತ್ತು ಅಂಗವಿಕಲರ, ಶಿಕ್ಷಿಸಲ್ಪಟ್ಟವರ, ಮಾದಕ ವಸ್ತುವ್ಯಸನಿಗಳ ಸಹಾಯಕ್ಕೆ ಕೆಲಸಮಾಡುವ ಹೆಸರಾಂತ ಮನಶ್ಶಾಸ್ತ್ರಜ್ಞ ಸಹ. ಟ್ರಾನ್ಸತೋಮರ್‌ನ ಕವಿತೆಗಳು ಛಾಯಾಚಿತ್ರವೊಂದರ ಅನುಭವವನ್ನು ಕಟ್ಟಿಕೊಡುತ್ತವೆ. ಅಲ್ಲಿನ ಲ್ಯಾಂಡ್‌ಸ್ಕೇಪ್‌ ಸಹ ಹಾಗೆಯೆ.

ಗ್ರಾಂಟಾದ ಸಂಪಾದಕ ಜಾನ್‌ ಫ್ರೀಮ್ಯಾನ್‌ ಟ್ರಾನ್ಸತೋಮರ್‌ನ ಬಗ್ಗೆ ಹೇಳುವ ಮಾತುಗಳಿವು:
The torque of an unexpected image frequently disturbs these poems' natural stoicism. Like so many great poets before him, Transtromer is forever reminding us that the world is not what it appears to be; that with mindfulness and close attention, you might get a glimpse of something vast and strange. "Hear the swish of rain," he writes in a late haiku. "To reach right into it/I whisper a secret."

ಟ್ರಾನ್ಸತೋಮರ್‌ ನ ಎರಡು ಕವಿತೆಗಳು
ಒಂದು ಸಾವಿನ ನಂತರ
ಅಲ್ಲೊಂದು ಆಘಾತ ಬಂದೆರಗಿತ್ತು
ಅದು ಬಳಿಕ ಉಳಿಸಿದ್ದು ಒಂದು ಉಲ್ಕೆಯ
ಮಿನುಗುವ ದೊಡ್ಡ ಬಾಲವನ್ನು
ನಮ್ಮನ್ನು ಒಳಗೇ ಇರಿಸುತ್ತದೆ, ಅದು
ಟಿ.ವಿಯ ಚಿತ್ರಗಳನ್ನು ಮಸಕಾಗಿಸುತ್ತದೆ
ಟೆಲಿಫೋನ್‌ ತಂತಿಗಳ ಮೇಲೆ
ಥಣ್ಣನೆಯ ಹನಿಯಲ್ಲಿ ನಿಂತುಬಿಡುತ್ತದೆ

ಆದರೂ ಜಾರುಹಲಗೆಗಳ ಮೇಲೆ 
ಚಳಿಗಾಲದ ಹಗಲಲ್ಲಿ ನಿಧಾನ ಜಾರಬಹುದು
ಒಂದಿಷ್ಟು ಎಲೆ ಕಚ್ಚಿಕೊಂಡಿರುವ ಪೊದೆಗಳ ನಡುವೆ
ಅವು ಹಳೆಯ ಟೆಲಿಫೋನ್‌ ಡೈರೆಕ್ಟರಿಯ
ಹರಿದ ಪುಟಗಳ ಹೋಲುತ್ತವೆ
ಹೆಸರುಗಳನ್ನು ಶೀತ ನುಂಗಿಹಾಕಿದೆ

ಎದೆಯ ಬಡಿತವನ್ನು ಕೇಳುವುದು ಇನ್ನೂ ಚಂದವೆ
ಆದರೆ ಬಹಳ ಸಲ ಶರೀರಕ್ಕಿಂತ ನೆರಳೇ ವಾಸ್ತವವೆನ್ನಿಸುತ್ತದೆ.
ಸಮುರಾಯಿಯು ಗೌಣನೆಂಬಂತೆ ಕಾಣಿಸುತ್ತಿದ್ದಾನೆ
ಅವನ ಕಪ್ಪು ಡ್ರಾಗನ್‌ ಸ್ಕೇಲ್ಸ್‌ ಕವಚದ ನಡುವೆ

ಹೊರವಲಯ

ಮಣ್ಣಿನ ಬಣ್ಣದ ಉಡುಪು ತೊಟ್ಟ ಜನ
ಏಳುತ್ತಾರೆ ಒಂದು ಹಳ್ಳದೊಳಗಿಂದ
ಅದೊಂದು ಸಂಕ್ರಮಣ ಸ್ಥಳ, ನನೆಗುದಿಗೆ ಬಿದ್ದಂತೆ
ಅತ್ತ ಹಳ್ಳಿಯೂ ಅಲ್ಲ, ಇತ್ತ ಪಟ್ಟಣವೂ ಅಲ್ಲ
ನಿರ್ಮಾಣ ಕೆಲಸದ ಕ್ರೇನುಗಳು ದಿಗಂತದಲ್ಲಿ
ಬಲು ದೊಡ್ಡ ಹೆಜ್ಜೆಯಿಡಲು ಬಯಸುತ್ತಿವೆ
ಆದರೆ ಕಾಲ ಅದಕ್ಕೆ ಸಮ್ಮತಿಸುತ್ತಿಲ್ಲ
ಕಾಂಕ್ರೀಟಿನ ಕೊಳವೆಗಳು ಹರಡಿ ಬಿದ್ದಿವೆ
ಕೊರೆವ ನಾಲಗೆಗಳಿಂದ ಬೆಳಕ ನೆಕ್ಕುತ್ತ
ಹಳೆಯ ತೋಟದ ಮನೆಯನ್ನು ಆಟೋ ಬಾಡಿಯ
ಅಂಗಡಿಗಳು ಆಕ್ರಮಿಸಿಕೊಂಡಿವೆ
ಚಂದಿರನ ಮೇಲಿನ ವಸ್ತುಗಳಷ್ಟು ಮೊನಚಾಗಿರುವ
ನೆರಳುಗಳನ್ನು ಕಲ್ಲುಗಳು  ಚೆಲ್ಲಿವೆ
ಈ ಸೈಟುಗಳು ದೊಡ್ಡದಾಗುತ್ತಲೇ ಇರುತ್ತವೆ,
ಜುದಾಸನ ಕಾಸಿಂದ ಕೊಂಡ ನೆಲದಂತೆ:
ಅಪರಿಚಿತರನ್ನು ಗತಿಗೇಡಿಗಳನ್ನು
ಹೂಳಲಿಕ್ಕಿರುವ ಸ್ಮಶಾನದಂತೆ
R.Vijayaraghavan

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ವಿಜಯ ರಾಘವನ್ ಅವರೇ, ಸ್ವೀಡಿಶ್ ಕವಿ ಟ್ರಾನ್ಸ್^ತೋಮರನ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು. ಅವನ ಕವಿತೆಗಳನ್ನು ನನ್ನ0ತ ಸಾಮಾನ್ಯ ಓದುಗ ಅರ್ಥಮಾಡಿಕೊಳ್ಳುವುದು ತುಸು ಕಷ್ಟದ ಕೆಲಸ; ಆ ಕವಿತೆಗಳ ಬಗ್ಗೆ ಸ0ಕ್ಷಿಪ್ತವಾದ‌ ವಿವರಣೆಯಿದ್ದರೆ ಚೆನ್ನಾಗಿರುತ್ತಿತ್ತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.