ಐದು ವರ್ಷದ ಪ್ರೇಮ ಕಥೆ!! ಭಾಗ -೧

5

ಐದು ವರ್ಷದ ಪ್ರೇಮ ಕಥೆ!! ಭಾಗ -೧

 

ಕ್ಲೈಮಾಕ್ಸಿನ ಕೊನೆಯ ಹಂತದಲ್ಲಿರುವ ನನ್ನ ಪ್ರೀತಿಯ ಕಥೆಯನ್ನು ಎಲ್ಲಿಂದ ಪ್ರಾರಂಭಿಸಬೇಕೆಂದೇ ತಿಳಿಯುತ್ತಿಲ್ಲ.  ಐದು ವರ್ಷ ಜೀವಕ್ಕೆ ಜೀವ ಎಂದು ಕೈಹಿಡಿದು ಜೊತೆಯಲ್ಲಿದ್ದವಳು, ಕೊನೆಗೂ ಎನೇನೋ ನೆಪ ಹೇಳಿ, ಒಂದಷ್ಟು ಕಣ್ಣೀರು ಸುರಿಸಿ ಹೊರಟು ಹೋದಾಗ - ಮನಸ್ಸೆಲ್ಲಾ ಖಾಲಿ ಖಾಲಿಯಾಗಿ, ಎದೆ ಭಾರವೆನಿಸಿತು!  

ಬೇಡ ಬೇಡವೆಂದರೂ ಮನಸ್ಸು ಮತ್ತದೇ ಹಳೇ ಟೇಪ್-ರೆಕಾರ್ಡರನ್ನು ತಿರುಗಿಸಿ ಮತ್ತೆ ಮತ್ತೆ ಕೇಳಿಸುತ್ತೆ.  ಎಲ್ಲವನ್ನೂ ಎಲ್ಲದಾರೂ ಹೊತ್ತು ಹಾಕಿ ಮನಸ್ಸು ಖಾಲಿ ಮಾಡಬೇಕೆಂದು ಅನ್ನಿಸ್ಸುತ್ತಿದೆ.  ಅದರ ಪ್ರಯತ್ನವೇ ಈ ಬರವಣಿಗೆ.  ಹೆಸರಿಗೆ ಪ್ರೇಮಕಥೆಯೆಂದರೂ, ಇದರಲ್ಲಿ ಇನ್ನೂ, ತುಂಬಾ ಇದೆ,  ತುಂಬಾ ಜನ ಇದ್ದಾರೆ - ನನ್ನ ಜೀವನದ ಪಯಣದಲ್ಲಿ ಬಂದವರು, ಹೋದವರು, ಈಗಲೂ ಇರುವವರು!!

ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ನನಗೆ, ಜೀವನದಲ್ಲಿ ಕಷ್ಟವೆಂದರೇನೆಂದು ಚೆನ್ನಾಗಿ ಗೊತ್ತಿತ್ತು.  ಅಪ್ಪ ಅಮ್ಮನಿಗೆ ನಾನು ಮತ್ತು ಅಕ್ಕ ಇಬ್ಬರೇ ಮಕ್ಕಳು.  ಮನೆಯ ಪರಿಸ್ಥಿತಿ ಹೇಳಿಕೊಳ್ಳುವಷ್ಟು ಉತ್ತಮವಾಗೇನೂ ಇರಲಿಲ್ಲ.  ಒಂದು ಕಾಲದಲ್ಲಿ ಗ್ರಾಮದಲ್ಲಿ ಅತ್ಯಂತ ಹೆಚ್ಚು ಆಸ್ತಿ ಹೊಂದಿದ್ದು, ಅಪ್ಪನ ಬೇಜಾವಭ್ದಾರಿಯಿಂದಾಗಿ ಎಲ್ಲಾ ಕೈಬಿಟ್ಟು ಹೋಗಿ ಒಂದು ರಾತ್ರಿ ಮನೆಯನ್ನೇ ಬಿಟ್ಟು ಹೋಗುವ ಪರಿಸ್ಠಿತಿ ಬಂದಿತ್ತು.  ಇದೆಲ್ಲ ನಾನು ಹುಟ್ಟುವುದಕ್ಕಿಂತ ಮೊದಲು ನಡೆದ ಘಟನೆಗಳು.  ಅಮ್ಮ ಈ ಕಥೆಯನ್ನು ಆಗಾಗ ಹೇಳುತ್ತಿರುತ್ತಾರೆ.  ಕೊನೆಗೂ ಅಪ್ಪ ಕಾಸರಗೋಡು ಜಿಲ್ಲೆಯ, ಪೆರಡಾಲ ಎಂಬ ಪುಟ್ಟ ಹಳ್ಳಿಯಲ್ಲಿರುವ ದೇವಸ್ಥಾನದಲ್ಲಿ ಸುಮಾರು ಮೂವತ್ತು ವರುಷ ದುಡಿದರು.  ನಾನು ಹುಟ್ಟಿ ಬೆಳೆದದ್ದೂ ಎಲ್ಲ ಇಲ್ಲೇ.  ಮನೆಯಿಂದ ಮೂವತ್ತು ಹೆಜ್ಜೆ ಇಟ್ಟರೆ ದೇವಸ್ಥಾನ.  ಶಾಲೆಗೆ ಸುಮಾರು ಎರಡು ಕಿಲೋಮೀಟರಿನಷ್ಟು ನಡೆಯಬೇಕಿತ್ತು.  ಮನೆಯ ಪರಿಸ್ಥಿತಿ ತುಂಬಾ ಉತ್ತಮವಾಗೇನೂ ಇರದಿದ್ದರೂ, ಕೊರತೆಯೆನಿಸಿರಲಿಲ್ಲ. ನಾನು ಒಂಬತ್ತನೆಯ ತರಗತಿ ತಲುಪುವವರೆಗೆ ಮನೆಗೆ ಕರೆಂಟ್ ಕೂಡ ಇರಲಿಲ್ಲ.  ರವಿವಾರ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ, ಶ್ರೀಕೃಷ್ಣ, ಚಂದ್ರಕಾಂತ, ಜಂಗಲ್ ಬುಕ್ ನೋಡಲು ಪಕ್ಕದ ಮನೆಗೆ ಓಡುತ್ತಿದ್ದೆ.  ಹೀಗೇ ನಾನು ಒಂಬತ್ತನೆಯ ತರಗತಿಯಲ್ಲಿರುವಾಗ ಅಕ್ಕನ ಮದುವೆಯಾಗಿತ್ತು. ಆಕೆ ನನಗಿಂತ ಎಂಟು ವರ್ಷಕ್ಕೆ ಹಿರಿಯಳು.  ಕೊನೆಗೆ  ಹತ್ತನೆಯ ತರಗತಿ ಬಂದಾಗಲೂ ನಾನು ಓದನ್ನು ಅಷ್ಟೇನೂ ಗಂಭೀರವಾಗೇನೂ ತೆಗೆದುಕೊಳ್ಳಲಿಲ್ಲ.  ಅಮ್ಮ ಜೋರು ಮಾಡುತ್ತಿದ್ದರು ಎಂಬ ಒಂದೇ ಕಾರಣಕ್ಕೆ, ಪುಸ್ತಕ ಹಿಡಿದು ಕೂರುತ್ತಿದ್ದೆ.  ಅದೇ ಸಮಯಕ್ಕೆ, ನನಗೆ ಇನ್ನೂ ಚೆನ್ನಾಗಿ ನೆನಪಿದೆ; ಗುಜರಾತನಲ್ಲಿ ಭೂಕಂಪವಾಗಿದ್ದ ದಿನಗಳವು.  ನನ್ನ ಅಕ್ಕನ ಬದುಕಿನಲ್ಲೂ ಅಪಘಾತವೊಂದು ಸಂಭವಿಸಿ, ಬದುಕನ್ನೇ ಬುಡಮೇಲು ಮಾಡಿತು.  ಮನೆಯ ಮೇಲಿನ ಸುಮಾರು ಹದಿನೈದು ಮೆಟ್ಟಲುಗಳ ಮೇಲಿನಿಂದ ಕಾಲು ಜಾರಿ ಬಿದ್ದ ಆಕೆಯ ತಲೆಗೆ ಗಂಭೀರವಾಗಿ ಪೆಟ್ಟಾಗಿತ್ತು.  ಎರಡು ದಿನ ಕೋಮದಲ್ಲಿದ್ದವಳು, ತಲೆಯ ನರಗಳಿಗೆ ಹಾನಿಯಾಗಿದ್ದರಿಂದ ಎರಡೂ ಕಿವಿಯ ಕೇಳಿಸುವಿಕೆ ಇಲ್ಲವಾಯಿತು.  ಹಲವಾರು ಡಾಕ್ಟರುಗಳಿಗೆ ತೋರಿಸಿದರೂ, ಮಷೀನ್ ಹಾಕಿಸಿದರೂ ಏನೂ ಪ್ರಯೋಜನವಾಗಲಿಲ್ಲ.  ಅಕ್ಕನಿಗೆ ಅಪಘಾತವಾದ ಸಂದರ್ಭದಲ್ಲಿ ಅಪ್ಪ ಅಮ್ಮ ಇಬ್ಬರೂ ಆಸ್ಪತ್ರೆಯಲ್ಲಿ ಇರಬೇಕಾಗಿ ಬಂದ ಕಾರಣ, ಮನೆಯಲ್ಲಿ ನಾನೊಬ್ಬನೆ ಇರಬೇಕಾಯಿತು.  ಹತ್ತನೆಯ ತರಗತಿಯಲ್ಲಿದ್ದೆ ಆಗ. ಆದರೂಸುಮಾರು ಎರಡು ವಾರಗಳ ಕಾಲ ಶಾಲೆಗೆ ರಜೆ ಹಾಕಬೇಕಾಗಿ ಬಂತು.  ಬೆಳಗ್ಗೆ ಐದು ಗಂಟೆಗೆ ದೇವಸ್ಥಾನಕ್ಕೆ ಹೋಗಿ ಬೆಳಗ್ಗಿನ ಪೂಜೆಗೆ ಬೇಕಾದ ಎಲ್ಲವನ್ನೂ ತಯಾರಿ ಮಾಡಿ ಕೊಟ್ಟು ಪುನಹ ಮನೆಗೆ ಬರುತ್ತಿದ್ದೆ.  ಚಾ ಕುಡಿದು, ದನಕ್ಕೆ ಬೇಕಾದ ಆಹಾರ ಕೊಟ್ಟು, ಹಾಲು ಕರೆದು, ಅದನ್ನು ಮೇಯಲು ಬಿಡಬೇಕಿತ್ತು.  ಏಳೂವರೆಗೆ ದೇವಸ್ಥಾನದಲ್ಲಿ ಬೆಳಗ್ಗಿನ ಪೂಜೆ, ಪುನಹ ದೇವಸ್ಥಾನಕ್ಕೆ ಓಟ.  ಮುಗಿಸಿಸ್ ಮನೆಗೆ ಬರುವಾಗ ಎಂಟು ಗಂಟೆ.  ಆಮೇಲೆ ಪೇಪರ್ ತರಲು ಪೇಟೆಗೆ ಸುಮಾರು ಎರಡು ಕಿಲೋಮೀಟರ್ ನಡೆದು ಹೋಗಬೇಕಿತ್ತು.  ಹತ್ತೂವರೆಗೆ ಪುನಹ ದೇವಸ್ಥಾನಕ್ಕೆ.  ಹೀಗೆ ಮೂರು ಹೊತ್ತು, ದೇವಸ್ಥಾನದ ಕೆಲಸ, ಮನೆ ಕೆಲಸ ಅಂತ ಎರಡು ವಾರ ಮುಗಿಯುವಷ್ಟರಲ್ಲಿ, ಅರ್ಧ ಸತ್ತು ಹೋಗಿದ್ದೆ.  ಅಕ್ಕನನ್ನು ಮನೆಗೆ ಕರೆದುಕೊಂಡು ಬಂದು ಸುಮಾರು ಮೂರ್ನಾಲ್ಕು ತಿಂಗಳ ಬಳಿಕ, ಗಂಡನ ಮನೆಗೆ ಕಳಿಹಿಸಿದೆವು. ಪೂರ್ಣವಾಗಿ ಚೇತರಿಸಿ ಕೊಂಡಿದ್ದರೂ, ಕೇಳಿಸುವಿಕೆ ಪೂರ್ಣವಾಗಿ ಇಲ್ಲವಾಯಿತು.   

ಹತ್ತನೆಯ ತರಗತಿಯಲ್ಲಿ ನನಗೆ ಹೇಳಿಕೊಳ್ಳುವಷ್ಟು ಮಾರ್ಕ್ಸ್ ಏನೂ ಬಂದಿರಲಿಲ್ಲ.  ನಾನು ಪಾಸಗೋದೇ ಡೌಟು ಎಂಬಂತಿದ್ದೆ.  ಆದರೂ ಸುಮಾರು ಅರುವತ್ತು ಪರ್ಸೆಂಟ್ ಬಂದಿತ್ತು.  ಮುಂದೇನು ಎಂದು ನಿಶ್ಚಯವಾಗಿ ಒಂದು ಗುರಿ ಇರಲಿಲ್ಲ.  ಹೇಳುವವರೂ ಯಾರೂ ಇರಲಿಲ್ಲ.  ಹೇಗೂ ಪಿಯುಸಿ ಮಾಡಬೇಕೆಂದು, ಕಾಮ್ಮರ್ಸ್ ವಿಷಯ ತೆಗೆದುಕೊಂಡು ಪಿಯುಸಿ ಮುಗಿಸಿದೆ.  ಪಿಯುಸಿಯಲ್ಲಿ ಎಂಬತ್ತು ಪರ್ಸೆಂಟ್ ವರೆಗೆ ಮಾರ್ಕ್ಸ್ ಬಂದಿತ್ತು.  ಮುಂದೆ ಡಿಗ್ರಿಗೆ ಸೇರಿದೆನಾದರೂ, ಅಪ್ಪನ ಅನಾರೋಗ್ಯದಿಂದಾಗಿ, ಮುಂದುವರಿಸಲಾಗಲಿಲ್ಲ.  
ಫ಼ೊಟೊಗ್ರಾಫ಼ಿಯಲ್ಲಿ ಹುಚ್ಚು ಇದ್ದುದರಿಂದ, ಸ್ಟುಡಿಯೊ ಒಂದರಲ್ಲಿ ಕೆಲಸಕ್ಕೆ ಸೇರಿದೆ,  ಆ ಪುಣ್ಯಾತ್ಮ ಸೇರಿ ಮೂರು ತಿಂಗಳಾದರೂ, ಸಂಬಳ ವಿಷಯವನ್ನೇ ಎತ್ತಿರಲಿಲ್ಲ,  ದೊಡ್ಡ ನಮಸ್ಕಾರ ಹಾಕಿ ಅಲ್ಲಿಂದ ಹೊರಬಂದೆ.  

ನಂತರ ಒಂದು ವರ್ಷ ಊರಿನ, ಭಾರತೀ ವಿದ್ಯಾಪೀಠ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡಿದೆ.  ತಿಂಗಳಿಗೆ ಸಿಗುತ್ತಿದ್ದ ಸಂಬಳ ಒಂದು ಸಾವಿರ ರೂಪಾಯಿ! ಆಗಲೇ ನನಗೆ ಜೀವನದಲ್ಲಿ ಇದು ಎನೆನೂ ಸಾಲದು ಎನಿಸತೊಡಗಿತ್ತು.  ಆಗಲೇ ನನ್ನ ಗಮನ ಡಿಸೈನಿಂಗ್ ಮತ್ತು ಆನಿಮೇಷನ್ ಕಡೆಗೆ.  ಮೊದಲಿನಿಂದಲೂ ಚಿತ್ರ ಬರೆಯುದರಲ್ಲಿ ತುಂಬಾ ಆಸಕ್ತಿಯಿದ್ದುದರಿಂದ ಸುಲಭವಾಯಿತು.  ಹಾಗೆ ಮಂಗಳೂರಿನ ಜಿ-ಟೆಕ್ ಕಂಪ್ಯೂಟರ್ ಸೆಂಟರನಲ್ಲಿ ಹದಿನೆಂಟು ತಿಂಗಳುಗಳ ಆನಿಮೇಷನ್ ಕೋರ್ಸಗೆ ಸೇರಿದೆ.  ದಿನವೂ ಊರಿಗೆ ಹೋಗಿ ಬರುವುದು ಕಷ್ಟವಾದ್ದರಿಂದ, ಅಲ್ಲೇ ಒಂದು ಸೈಬರ್ ನಲ್ಲಿ ಪಾರ್ಟ್ ಟೈಮ್ ಕೆಲಸಕ್ಕೆ ಸೇರಿಕೊಂಡೆ.  ಕ್ಲಾಸ್ ಹೆಚ್ಚೆಂದರೆ ದಿನಕ್ಕೆ ಮೂರು-ನಾಲ್ಕು ಗಂಟೆ ಇರುತ್ತಿತ್ತು.  ಸೈಬರನಲ್ಲಿ ಸಂಜೆ ಐದು ಗಂಟೆಯಿಂದ ರಾತ್ರಿ ಹನ್ನೊಂದು ಗಂಟೆಯವರೆಗೆ ಡ್ಯೂಟಿ.  ಆಮೇಲೆ ಒಂದೂವರೆ ಕಿಲೋಮೀಟರಿನಷ್ಟು ನಡೆದು ನನ್ನ ರೂಮ್ ಸೇರಬೇಕಿತ್ತು.  ಹೆಸರಿಗೆ ಮಾತ್ರ ಅದು ರೂಮ್.  ಯಾವ ಸೌಲಭ್ಯವೂ ಸರಿಯಿರಲಿಲ್ಲ. ರೂಮಿನಲ್ಲಿ ಒಂದು ಬಲ್ಬ್ ಬಿಟ್ಟರೆ ಬೇರೆನೂ ಇರಲಿಲ್ಲ.  ಆದರೆ ನಾನು ನನ್ನ ವಕ್ರ ಬುದ್ಧಿ ಉಪಯೋಗಿಸಿ, ಬಲ್ಬ್ ನ ಹೋಲ್ಡರನ್ನು ಕಳಚಿ ಅದರಿಂದಲೇ ಬೇರೆ ಕನ್ನೆಕ್ಷನ್ ತೆಗೊಂಡಿದ್ದೆ. ಒಂದು ಲಾಪಟಾಪ್ ತೆಗೆದುಕೊಳ್ಳಲು ಅಮ್ಮ ಹೇಗೋ ಸ್ವಲ್ಪ ಹಣ ಹೊಂದಿಸಿ ಕೊಟ್ಟಿದ್ದರು.  ಎರಡು ವರುಷ ಹೋದದ್ದೇ ತಿಳಿಯಲಿಲ್ಲ,  ಕೋರ್ಸ್ ಮುಗಿಸಿ ಇನ್ನೆನು ಎಂಬ ಚಿಂತೆಯಲ್ಲಿರುವಾಗಲೇ,  ಅದೇ ಸಂಸ್ಥೆಯಲ್ಲಿ, ಶಿಕ್ಷಕನಾಗಿ ಕೆಲಸ ಮಾಡಲು ಆಫ಼ರ್ ಬಂತು.  ಒಪ್ಪಿಕೊಂಡೆ.  ಪ್ರಾರಂದಲ್ಲಿ, ಮೂರುಸಾವಿರ ಕೊಡುತ್ತಿದ್ದರು.  ನನ್ನನ್ನೂ ಸೇರಿ ಸುಮಾರು ಎಂಟು ಜನ ಸ್ಟಾಫ಼್ ಇದ್ದರು.  

ನಾನು ಕೆಲಸ ಮಾಡಲು ಪ್ರಾರಂಭಿಸಿ ಸುಮಾರು ಒಂದು ವರುಷವಾದ ನಂತರ, ಫ಼್ರಂಟ್ ಆಫ಼ೀಸ್ ರಿಸಪ್ಷನ್ ಆಗಿ ಸೇರಿದವಳೇ ಅವಳು!! ಹೆಸರು ಮಧು.  ಸುಮಾರು ಒಂದು ವರ್ಷದವರೆಗೆ ನನಗೆ ಅವಳ ಹೆಸರು ಬಿಟ್ಟು ಇನ್ನೆನೂ ಗೊತ್ತಿರಲಿಲ್ಲ.  ಯಾರೊಂದಿಗೂ ನಾನು ಅಗತ್ಯಕ್ಕಿಂತ ಹೆಚ್ಚು ಬೆರೆಯುತ್ತಿರಲಿಲ್ಲ.  ನಾನಾಯಿತು ನನ್ನ ಕೆಲಸವಾಯಿತು.  ಬೆಳಗ್ಗಿನಿಂದ ಸಂಜೆಯವರೆಗೂ ಕಂಪ್ಯೂಟರ್ ಎದುರಲ್ಲೇ ಕಳೆಯುತ್ತಿದ್ದೆ.   

(ಮುಂದುವರಿಯುವುದು)

 

shiva

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):