ಒಂದು ಮರ‌, ಮೂರು ಬಳ್ಳಿ...

Submitted by Nitte on Thu, 01/23/2014 - 09:29
ಬರಹ

                           ೧.

ಕರಕು ನೆಲದಲ್ಲಿ, ಬಿಸಿಯೆಬ್ಬಿಸಿದ‌ ಒಂಟಿ ಕಣ್ಣಿನ‌ ನೇಸರ‌...

ವಿರಸದಿ ಭೂಮಿ, ತೋರಿದೆ ಬರಡು ಹುಸಿಬಿಂಬ, ತೋರಿ ಕಾತರ‌...

 

ಬೆಂದ‌ ನೆಲದಿ ಬಿರುಕುಗಳು ಮೂಡಿದೆ, ಹೆಪ್ಪುಗಟ್ಟಿದ‌ ರಕ್ತ‌ ಒಡೆದಂತೆ...

ಸೂರ್ಯನಿಂದ‌ ಸುಡುವ‌ ಒಡಲು, ರಾತ್ರಿಯ‌ ಬೆಂಕಿಗೆ ನೆನಪುಗಳು ಒಣ‌ ಕಟ್ಟಿಗೆಯಂತೆ...

 

ಒಂಟಿ ಸರ್ಪ‌, ಒಂಟಿ ಸೂರ್ಯ‌, ಒಂಟಿ ಮರದ‌ ನೆರಳಲ್ಲಿದೆ ಸಾಂತ್ವಾನ‌...

ಬೆಂದ‌ ಗಾಳಿಯು ಚಳಿಗೆ ಕಾದಿದೆ. ಉಸುರಿ ಹೇಳಿದೆ ತಂಗಾಳಿಯ‌ ಮೇಲೆ ದೂರು, ದುಮ್ಮಾನ‌...

 

ನಾಲ್ದೆಸೆಗೂ ಹರಡಿದ‌ ಒಣ‌ ನಾಲಿಗೆ, ಮೋಡದ‌ ರುಚಿಗೆ ಕಾದಿದೆ ಬಿಟ್ಟು ನಾಚಿಕೆ...

ಶೂನ್ಯ‌ ವ್ಯೂಹದಲ್ಲಿ ಮೂಡಿದ‌ ಸೌ೦ದರ್ಯವದು, ಬರಡು ಭೂಮಿಗೆ ಬರಿಯ‌ ಮರೀಚಿಕೆ...

 

ದ್ರೋಹಿ ಕಣ್ಣೀರು, ಆವಿ ವೇಷದಿ ಬಿಟ್ಟೋಡಿದೆ ಬಸಿರ‌, ನೇಸರನೊಡನೆ ನೆಡೆಸಿ ಸಂಚು...

ಬೂದಿ ಆಗಸವ‌ ತೊರೆಯದೆ, ಬರಡು ಭೂಮಿಯ‌ ಮರೆಯದೆ, ನರಳಿದೆ ಮೋಡದೆದೆಯಲ್ಲಿ ಮಿಂಚು...

 

ಮೋಡಗಳ‌ ವಯ್ಯಾರ‌, ಭೂಮಿಯ ತಾಳ್ಮೆಯ‌ ಸಂಹಾರ‌, ಬರಡು ಹೃದಯದಿ ಕಣ‌ ಕಣವೂ ಸೋಲಲು...

ಬರಸೆಳೆದಪ್ಪಲು ಮೋಡವನು, ಭುವಿಯ‌ ತೋಳ್ಗಳಲ್ಲಿ, ಮಳೆಹನಿಗಳಾಗಿ ಮುರಿದಳು ಅವಳು...

 

                           ೨.

 

ಮೌನವರಿಯದ‌ ಸಾಗರದಲ್ಲಿ, ಹಡಗದು ಸಾಗಿದೆ, ಗುರಿಯಿಲ್ಲದ‌ ತೊರೆದ‌ ತೊಟ್ಟಿಲು...

ಇದ್ದಲಿನ‌ ಆಕಾಶದಲ್ಲಿ, ಮಿರುಗಿದೆ ಚಂದ್ರ‌ ಮುತ್ತು ರತ್ನಗಳಿಂದ‌ ತುಂಬಿದ‌ ಬಟ್ಟಲು...

 

ದಡದ‌ ಕೆಸರಲ್ಲಿ, ಗಟ್ಟಿಯಾಗಿದೆ, ಕಾನನದಿ ಹೊರಟವರ‌ ಹೆಜ್ಜೆ ಮುದ್ರ...

ಹಣ್ಣು ಹಂಪಲುಗಳ್ಳನ್ನು ಅನಾದರಿಸಿ, ನಡೆದಿದೆಲ್ಲರ‌ ಹುಡುಕಾಟ‌ ಮರೆತು ಹಸಿವು ನಿದ್ರೆ...

 

ಮುರಿದ‌ ಪ್ರಶ್ನೆಗೆ, ತುಂಡು ಉತ್ತರದ‌ ನಿರೀಕ್ಷೆಯಲ್ಲಿ ಹೊರಟ‌ ಉಪಾಸಕರಿಗೆ ಪ್ರತಿ ನೆಲವೂ ದೇಶಾಂತರ‌...

ಪ್ರತಿ ಹೃದಯಕ್ಕೂ ಸ್ವಂತಿಕೆಯ‌ ಇಚ್ಚೆ, ಸ್ವಾರ್ಥವು ಮಾಡಿರೆ ಸ್ನೇಹದಿ ಅಂತರ‌...

 

ಅವಳ‌ ಹೂಗಳಲ್ಲಿ ಕಂಡರು, ಅವಳ‌ ಗಾಳಿಯಲ್ಲಿ ಮಿಂದರು, ಅವಳ‌ ಬೇಗೆಯಲ್ಲಿ ಬೆಂದರು, ಇವರದು ನಿಲ್ಲದ‌ ಮೆರವಣಿಗೆ...

ಅವಳು ಕರಗಿದ‌ ನಿರಂತರ‌ ಮಳೆಯಲ್ಲಿ ನೆನೆದರೂ, ಆರದು ಇವರೆಲ್ಲರ‌ ಆತ್ಮದಿ ನೆಲಸಿದ‌ ಬೇಸಗೆ...

 

ಕೊಂಬೆ ಬಂಡೆಗಳ‌ ಮೂಲೆಯಲ್ಲಿ, ಗಹನವಾಗದ‌ ಗಾಳಿಮಾತಿನಲ್ಲಿ, ಅವಳ‌ ಸಂಚಿನ‌ ಅನುಮಾನ‌...

ಅವಳ ಭಕ್ತಿ, ಅವಳ‌ ಆಸೆ, ಅವಳ ದ್ರೋಹ‌, ಅವಳ‌ ಒಡಲಲ್ಲಿ ಮಾತ್ರ‌ ಇವರ‌ ಪಾಪಕ್ಕೆ ಸಾಂತ್ವಾನ‌...

 

ಬೆಂಕಿಯಲ್ಲಿ ಅವಳ ಕಂಡರು, ಪ್ರತಿಫಲಿಸಿದ‌ ಇತರ‌ ಕಣ್ಣ‌ ಬಿಂಬದಲ್ಲಿ ಕಂಡರು, ಕುರುಡಾದರು ಹಿಡಿಯಲು, ಚೂರಿ ಬೆರಳು...

ಕುರುಡು ಮರುಳರ‌ ಮಧ್ಯೆ, ಹೊಳೆಯುತ‌ ಪ್ರತಿಫಲಿಸಿದ‌ಳು, ಮೊದಲ‌ ಸ್ವಾರ್ಥ‌ ಸ್ಪರ್ಷಕ್ಕೆ ಮುರಿದಳು ಅವಳು...

 

                           ೩.

 

ಓಡಿತು ಸಮಯ‌, ಸೆಟೆದ‌ ತಂತಿಗಳ‌ ಮೇಲೆ...

ನುಡಿಸುತ‌ ಸುಮಧುರ‌ ಸಂಗೀತ‌, ನಡೆಸುತ‌ ಮೌನದ‌ ಕೊಲೆ...

 

ಅವಳದು ಅಶಾಂತ‌ ನಿದ್ರೆ, ಅರಸುತ‌ ಕನಸುಗಳ ಕಂತೆ...

ಅಲಕ್ಷ್ಯದಿ ಸಿಕ್ಕಾಪಟ್ಟೆ ಹಂಚಿದ‌, ಅರೆಜೀವ‌ ಆಸೆಗಳ‌ ಸಂತೆ...

 

ಬರಡು ನೆಲದಲ್ಲಿ ಮೂಡಿದೆ ಹಸಿರು, ಕರಗಿದ‌ ಮೋಡವೂ ಅಲ್ಲಿ ಬರಿಯ‌ ಭಾಷ್ಪ‌...

ಕಣ‌ ಕಣವೂ ಒಂದಾಗಿ, ಪ್ರತಿ ಕಣವೂ ಚಲಿಸುತ‌, ವಲಸೆ ಹೋಗುವ‌ ಹೊಯಿಗೆಯಲ್ಲಿ ಕೋಪ‌...

 

ವಿಶಾಲ‌ ಸಾಗರದ‌, ಉದಾರ‌ ಕಾನನದೊಳು, ಅವಳ ಕನಸು ಕಾಣುವ‌ ಕುರುಡರ‌ ವ್ಯಾಮೋಹ‌...

ಮಳೆಯಾಗಿ ಬಂದವಳಿಗೆ, ಬಿಂಬವಾಗಿ ಹೊಳೆದವಳಿಗೆ, ಮರಳಿ ಬರಲು, ಕಣ್ಣೀರಲ್ಲೇ ಭಿನ್ನಹ‌...

 

ಬೆಂಕಿಯಾಗಿದ್ದಳು, ತನ್ನ‌ ಬೇಗೆಯಲ್ಲೇ ಬೆಂದಳು, ಭಾಷ್ಪವಾದಳು, ಸುಳಿದಳಾಗಿ ಮೋಡ‌...

ಹನಿಯಾದಳು, ಗುಡುಗಿದಳು, ಕಣ್ಣೀರಾದಳು, ಅನುಭವಿಸಿದ‌ ತೀವ್ರ‌ ನೋವಿಗೆ ಕಾರಣ‌ ನಿಗೂಢ‌...

 

ತೊರೆದಳು ನೇಸರನ‌ ಒಡೆನಾಟ‌, ಹಳಸಲು ಚಂದಿರನ‌ ಹುಡುಗಾಟ‌...

ಕುಣಿಯುತ‌ ಹೋದಳು, ಆಸೆಯಿಂದ‌ ಆಸೆಯೆಡೆಗೆ ವಲಸೆ...

 

ಕಂಡವು ಕಣ್ರೆಪ್ಪೆಯಲಗಿಸದೆ ಚುಕ್ಕಿಗಳು, ಸಮ್ಮೋಹಕ‌ ಇವಳ‌ ಮೈಮಾಟ‌...

ಮುರಿದ‌ ಇವಳು, ತನ್ನ‌ ಚೂರ‌ ಬೊಗಸೆ ಮಾಡಿ, ಓಡೆಯದೊಂದು ಅವನ‌ ಕಾಣುವ‌ ಕನಸೇ...

 

ನಾಟ್ಯವಿಲ್ಲ‌, ಪಾಪವಿಲ್ಲ‌, ಪ್ರತಿಫಲಿಸಲಿಲ್ಲ‌, ಕರಗಲಿಲ್ಲ‌, ವಯ್ಯಾರವಿಲ್ಲ‌, ಅವಳಾದಳು ಅವಳು...

ಸಂಚಿಲ್ಲ‌, ಗಾಳಿಮಾತಿಲ್ಲ‌, ಹೆಣೆಯುತ್ತ‌ ಹೆಜ್ಜೆಯನ್ನು, ಅವನರಸಿದಳು ತಣಿಯಲು ಕಾದ‌ ಕಂಗಳು...

 

ಅರಳಿ ಆನಂದದಿ, ಯುಗ‌ ಯುಗಗಳ‌ ಬೇಗೆ ನಂದಲು, ಒಪ್ಪಿದಳು ಒಲವಿನಲ್ಲಿ ಸೋಲು...

ಮೆಲ್ಲ‌ ಭಯದಲ್ಲಿ, ನವಿರಾಗಿ ಹಿಡಿದಪ್ಪಲು, ಚೂರು ಚೂರಾಗಿ ಬಂಧನದಲ್ಲಿ ಮುರಿದನು ಅವನು...