ಓಟ ಮತ್ತು ದಾರಿ

4


ಕೆಲವು ವರ್ಷಗಳ ಹಿಂದಿನ ಮಾತು. ಕ್ರಾಸ್-ಫಿಟ್ ಎನ್ನುವ ಒಂದು ವ್ಯಾಯಾಮಶಾಲೆಗೆ ಮೊದಲ ಬಾರಿ ಭೇಟಿ ನೀಡಿದ್ದೆ, ಇಲ್ಲಿನ ಪೋಲೀಸರು, ಫ಼ೈರ್-ಮೆನ್ಗಳು, ಸೈನ್ಯದ ಸಿಪಾಯಿಗಳಾದ ಮರೀನ್ಗಳು ದೇಹದಂಡನೆಗೆ ಪಾಲಿಸುವ ಒಂದು ವ್ಯಾಯಾಮ ವಿಧಾನ ಕ್ರಾಸ್-ಫಿಟ್. ಒಂದು ದೊಡ್ದ ಖಾಲಿ ಶೆಡ್ ಥರ ಕಾಣಿಸುತ್ತಿದ್ದ ಕ್ರಾಸ್-ಫಿಟ್ ವ್ಯಾಯಾಮಶಾಲೆಯ ಕೋಚ್ ಬಳಿ ಮಾತನಾಡುತ್ತಾ ಕೇಳಿದೆ “ಇಲ್ಲಿ ಏನು ಬರಿ ತೂಕ ಎತ್ತೋದು ಅಷ್ಟೇ ಮಾಡ್ತೀರಾ?” ಎಂದು. ಅವನಿಗೆ ಅರ್ಥವಾಯ್ತು ಅನ್ಸುತ್ತೆ. ಹೇಳಿದ “ಇಲ್ಲಿ ಟ್ರೆಡ್-ಮಿಲ್ ಬಳಸಲ್ಲ ನಾವು. ಓಡುವುದಿದ್ದರೆ ನೀನು ಯಾವಾಗ್ಲೂ ರಸ್ತೆಯ ಮೇಲೆ ಒಡೋದು” ಎಂದ. ನನಗೆ ಒಡುವುದು ಅಂದ್ರೆ ಇಷ್ಟವೇ ಇಲ್ಲ. ಇನ್ನು ರಸ್ತೆಯ ಮೇಲೆ ಬಿಸಿಲು-ಚಳಿಯಲ್ಲಿ ಓಡುವುದೇ? ಸಾಧ್ಯವೇ ಇಲ್ಲ! ಅಂಥ ಪ್ರಮೇಯ ಬಂದರೆ ಕಾಲು ನೋವು ಅಂತ ಹೇಳಿ ತಪ್ಪಿಸಿಕೊಳ್ಳೋದು ಅಂತ ಅಂದುಕೊಂಡು ಸೇರಿಕೊಂಡೆ.

ಸೇರಿದ ಎರಡು ವಾರಗಳಿಲ್ಲಿ ಒಂದು ದಿನ ಕೋಚ್ ೮೦೦ ಮೀಟರ್ ಓಡಲು ಹೇಳಿದ. ಕಷ್ಟ ಬಿದ್ದು ೪ ನಿಮಿಷಗಳಲ್ಲಿ ಓಡಿ ಮುಗಿಸುವ ಹೊತ್ತಿಗೆ ಪ್ರಾಣ ಹೋಗುವಂತಾಗಿತ್ತು. ಬಂದ ಕೂಡಲೇ ಕೋಚ್ ಹೇಳಿದ “ಒಂದು ನಿಮಿಷ ಸುಧಾರಿಸಿಕೋ. ಮತ್ತೆ ಮೂರು ಸಲ ೮೦೦ ಮೀಟರ್ ಓಡು.  ಮಧ್ಯೆ ಒಂದು ನಿಮಿಷ ವಿಶ್ರಾಂತಿ. ಪ್ರತಿ ಸಲವೂ ೪ ನಿಮಿಷದ ಒಳಗೇ ಓಡಬೇಕು” ಎಂದ. ಕೇಳಿದ ಕೂಡಲೇ ಕಣ್ಣು ಕತ್ತಲೆ ಬಂದತಾಯ್ತು! ದೈತ್ಯಾಕಾರದ ಆ ಕೋಚ್ ಮುಂದೆ ಇಲ್ಲ ಎನ್ನಲು ಧೈರ್ಯ ಬರಲಿಲ್ಲ. ತಲೆಯ ಮೇಲೆ ಸುಡುವ ಬಿಸಿಲಿನಲ್ಲಿ ಕಾಲು ಎಳೆದುಕೊಳ್ಳುತ್ತಾ ಇನ್ನೂ ೩ ಸಲ ಓಡುವ ವೇಳೆಗೆ ಹೊಟ್ಟೆ ತೊಳಸಿ ಜೀವನವೇ ಬೇಸರ ಬರುವಂತಾಗಿತ್ತು!

ಇನ್ನೂ ಒಂದು ವಾರದ ನಂತರ ಕೋಚ್ ಬೋರ್ಡಿನ ಮೇಲೆ ದಿನದ ವರ್ಕ್-ಔಟ್ ಬರೆದ “೫ ಕಿಲೋಮೀಟರ್ ಓಟ”!! ೫ ಕಿಲೋಮೀಟರ್ ಅಂದ್ರೆ ಹುಡುಗಾಟಾನ? ದಾರಿ ಮಧ್ಯ ನಾನು ಮೂರ್ಛೆ ತಪ್ಪಿ ಬಿದ್ದರೆ ಯಾರು ಕೇಳೋರು ಅಂತ ಕೇಳಿದೆ. ಅವನು ನಕ್ಕ. “ಯೋಚಿಸಬೇಡ, ನೀನು ಹಾಗೇನಾದರೂ ಒಂದು ಪಕ್ಷ ಬಿದ್ದರೆ ನೀರು ಕುಡಿಸಿ ಎಬ್ಬಿಸಿ ಓಡಿಸ್ತೀನಿ” ಅಂದ. ಓಡುತ್ತಾ ಓಡುತ್ತಾ ಪಾದ ನೋವಲು ಶುರುವಾಯ್ತು. ಮಂಡಿ ಉಳುಕಿದಂತಾಯ್ತು. ತಲೆ ತಿರುಗುವಂತಾಯ್ತು. ಆದರೂ ಬಿಡದೆ ಓಡಿ ಜಿಮ್ ಸೇರಿ ಧೊಪ್ಪನೆ ಕುಸಿದುಬಿದ್ದೆ “೩೩ ನಿಮಿಷಗಳಲ್ಲಿ ನಿಲ್ಲದೇ ೫ ಕಿ.ಮೀ ಓಡಿದ್ದೀಯಾ, ಶಹಬಾಸ್” ಎಂದ ಕೋಚ್. ನನ್ನ ಬಗ್ಗೆ ನನಗೇ ಅಭಿಮಾನ ಮೂಡಿತು.

ಅದಾದ ನಂತರ ೫ ಕಿ.ಮೀ ಓಟದ ಬಗ್ಗೆ ಭಯ ಮಾಯವಾಯ್ತು. ಆಗಾಗ ೫ ಕಿ.ಮೀ ಓಡುವುದು ಸಾಮಾನ್ಯವಾಯ್ತು. ಇಲ್ಲಿ ಆಗಾಗ ನಡೆಯುವ ೫ ಕಿ.ಮೀ ಓಟಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದೆ. ಮೌಂಟನ್-ವ್ಯೂನ ಸುಂದರ ಶೋರ್-ಲೈನ್ ಪಾರ್ಕಿನಲ್ಲಿ ಈ ರೀತಿ ಒಂದೆರಡು ಈವೆಂಟುಗಳಲ್ಲಿ ಭಾಗಗೊಂಡ ನಂತರ ಕ್ಯಾಲಿಫ಼ೋರ್ನಿಯಾದ ಸಾಂತಾ-ಕ್ರೂಜ಼ಿನ “ವಾರ್ಫ಼್-ಟು-ವಾರ್ಫ಼್” ೬ ಮೈಲಿ ಓಡುವ ಮನಸ್ಸಾಯ್ತು. ೧೫೦೦೦ ಜನ ಭಾಗವಹಿಸುವ ಈ ಓಟ ಸಾಂತಾ-ಕ್ರೂಜ಼್ ಸಮುದ್ರ ತೀರದಿಂದ ಕ್ಯಾಪಿಟೋಲಾ ಸಮುದ್ರ ತೀರದವರೆಗೆ ಸಮುದ್ರದ ಪಕ್ಕದಲ್ಲಿ ಓಡುವ ಒಂದು ಸುಂದರ ಅನುಭವ. ದಾರಿಯಲ್ಲಿ ನದಿ ಸಮುದ್ರ ಸೇರುವ ಸುಂದರ ತಾಣದಲ್ಲಿ ನಿಂತ ಬ್ಯಾಗ್-ಪೈಪರ್ ವಾದ್ಯಗಾರರು, ಓಡುಗರನ್ನು ಹುರಿದುಂಬಿಸಲು ಸಂಗೀತ ನುಡಿಸುತ್ತಾ ನಿಂತ ಹಲವು ಬ್ಯಾಂಡ್ಗಳು, ಓಡುಗರಿಗೆ ಕಿತ್ತಲೆ ಹಣ್ಣು, ಐಸ್-ಕ್ರೀಮ್ ಹಂಚುವ ವೃದ್ಧರು ಅಲ್ಲದೇ ದಾರಿಯುದ್ದಕ್ಕೂ ಪ್ರಕೃತಿ ಸೌಂದರ್ಯ! ನಾಯಿಯಂತೆ ನಾಲಿಗೆ ಚಾಚಿ ಏದುಸಿರು ಬಿಡುತ್ತಾ ಬೆಟ್ಟದ ಮೇಲೆ ಓಡುವಾಗ, ಇನ್ನೇನು ಸಾಕು ಎನ್ನುವಷ್ಟರಲ್ಲಿ “ಎಕ್ಸ್ಕ್ಯೂಸ್ ಮಿ” ಎಂದು ಸರಿಸಿ ಮುಂದೆ ಓಡುವ ೭೦ ವರ್ಷದ ಅಜ್ಜಿಯ ಉತ್ಸಾಹ ಸಾಂಕ್ರಾಮಿಕವಾಗಿ, ಹೊಸ ಚೈತನ್ಯವಾಗಿ ಮತ್ತೆ ಓಡಿಸುತ್ತದೆ. ೫ ಮೈಲಿಗಳಾಗುತ್ತಿದಂತೆ ನಗಾರಿ ಬಾರಿಸುತ್ತಾ ನಿಂತ ಜಪಾನಿನ “ಟೈಕೋ” ಡ್ರಮ್ಸ್ ಸದ್ದು ಎಂಥವರನ್ನೂ ಹುರಿದುಂಬಿಸುವಂತಿತ್ತು. ಆ ಸುಂದರ ವಾತಾವರಣದಲ್ಲಿ ಓಡಿದ ಸುಸ್ತು ಅರಿವಾಗಲೇ ಇಲ್ಲ. ನಂತರ ಒಂದು ವಾರ ಕುಂಟುತ್ತಾ ಕಳೆದ ವಿಷಯ ಬೇರೆ.

ಇನ್ನೂ ವಿಶಿಷ್ಟವಾದ ಓಟಗಳೆಂದರೆ ಸ್ಯಾನ್ ಫ಼್ರಾನ್ಸಿಸ್ಕೋ ನಗರದ “ಬೇ-ಟ್-ಬ್ರೇಕರ್ಸ್” ಮತ್ತು “ಜಯಂಟ್ ರನ್”. ಪ್ರತಿ ರನ್-ನ ನಂತರ ನೀಡುವ ಮೆಡಲ್ ಹಾಗೂ ಟೀ-ಷರ್ಟ್ಗಳು ಸ್ನೇಹಿತರ ಬಳಿ ಕೊಚ್ಚಿಕೊಳ್ಳಲು ಉಪಯೋಗವಾಗುವ ಸಾಮಗ್ರಿಗಳು!!

ಇಷ್ಟೆಲ್ಲ ಆದರೂ ಈಗಲೂ ನನಗೆ ಓಡುವುದಂದರೆ ಇಷ್ಟವೇ ಇಲ್ಲ. ಆದರೆ ನಾನು ಓಡುವ ’ದಾರಿ’ ಈಗ ನನ್ನ ಉತ್ತಮ ಸ್ನೇಹಿತ. ಈ ’ದಾರಿ’ ನಾನು ಓಡಲಿರುವ ದೂರದುದ್ದಕ್ಕೂ ನನ್ನ ಜೊತೆಗಿರುವ ಸಂಗಾತಿ. ಪ್ರತಿ ಹೆಜ್ಜೆಗೂ ನನ್ನನ್ನು ಹುರಿದುಂಬಿಸುತ್ತಾ, ಉಳಿದ ದೂರದ ಬಗ್ಗೆ ನೆನಪು ಮಾಡುತ್ತಾ, ಮಾತನಾಡದೆಯೇ ಎಲ್ಲವನ್ನೂ ತಿಳಿಸುವ ಗೆಳೆಯ. ನನ್ನ ಕಾಲುನೋವಿನ ಬಗ್ಗೆ, ಸುಸ್ತಿನ ಬಗ್ಗೆ ಇವನಿಗೆ ಕರುಣೆಯಿಲ್ಲ. ನನ್ನ ನೆಪಗಳಿಗೆ ಇವನ ಬಳಿ ಸಮಯವಿಲ್ಲ. ನಾನು ನೆಪಗಳನ್ನು ಹೇಳಲಾರಂಭಿಸಿದರೆ ಅವನು ನನಗೆ ಮೊನ್ನೆ ತಿಂದ ಆಲೂ ಬೋಂಡಾ, ನಿನ್ನೆ ಆಸ್ವಾದಿಸಿದ ಐಸ್-ಕ್ರೀಮ್ ನೆನಪಿಸುತ್ತಾನೆ. ಹೊಟ್ಟೆಯಲ್ಲಿ ಗರ್ಭದಂತೆ ಬೆಳೆಯುತ್ತಿರುವ ಬೊಜ್ಜು, ಹೃದಯಕ್ಕೆ ಹತ್ತಿರವಾಗಲೆತ್ನಿಸುತ್ತಿರುವ ಕೊಬ್ಬಿನ ಕಣಗಳನ್ನು ನನ್ನಿಂದ ದೂರವಿಡಲು ಪ್ರಯತ್ನಿಸುತ್ತಾನೆ. ಆದರೆ ನಾನು ಮನದಾಳದಿಂದ ಅವನೊಂದಿಗೆ ಹಂಚಿಕೊಳ್ಳುವ ಎಲ್ಲ ಮಾತುಗಳನ್ನೂ ನನ್ನ ಬಗ್ಗೆ ಯಾವುದೇ ಮೌಲ್ಯಮಾಪನ ಮಾಡದೇ, ಮೌನವಾಗಿ ಕೇಳಿಸಿಕೊಳ್ತಾನೆ.

ಆದರೆ ಇವನು ಕೇವಲ ನನ್ನ ಸ್ನೇಹಿತನಷ್ಟೇ ಅಲ್ಲ. ಓಡಲು, ನಡೆಯಲು ಆಸಕ್ತಿಯಿದ್ದಲ್ಲಿ ನಿಮಗೂ ಆಪ್ತಮಿತ್ರನಾಗಬಲ್ಲ ಇವನು. ಇವನೊಟ್ಟಿಗೆ ಸ್ನೇಹ ಬೆಳೆಸಿಕೊಳ್ಳುವಿರಾ?

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.