ಓಷೋ ರಜನೀಶ್ ಗ್ರೀಸ್ ಪತ್ರಕರ್ತರಿಗೆ ನೀಡಿದ ಒಂದು ಸಂದರ್ಶನ

5

ಸಾಕ್ರಟೀಸನ ತಾಯ್ನೆಲವಾದ ಗ್ರೀಸ್‌ನಲ್ಲಿ ನಿಮಗೆ ಹೇಗನ್ನಿಸುತ್ತಿದೆ?
ನಾನು ತುಂಬ ಇಷ್ಟ ಪಡುವ ವ್ಯಕ್ತಿಗಳಲ್ಲಿ ಸಾಕ್ರಟೀಸನೂ ಒಬ್ಬ. ಅವನು ಉಸಿರಾಡಿದ ಗಾಳಿಯನ್ನೇ ನಾನೂ ಉಸಿರಾಡುತ್ತಿದ್ದೇನೆ, ಅವನು ಹೆಜ್ಜೆ ಇಟ್ಟಿದ್ದ ನೆಲದಲ್ಲೇ ನಾನೂ ಓಡಾಡುತ್ತಿದ್ದೇನೆ, ಅವನು ಮಾತನಾಡಿದ ಜನಗಳೊಂದಿಗೇ ನಾನೂ ಮಾತನಾಡುತ್ತಿದ್ದೇನೆ ಎಂಬ ಭಾವನೆ ನನ್ನ ಮನಸ್ಸನ್ನು ತುಂಬುತ್ತಿದೆ. ಸಾಕ್ರಟೀಸ್ ಇಲ್ಲದ ಗ್ರೀಸ್ ನನ್ನ ಪಾಲಿಗೆ ಒಂದು ಬಂಜೆನೆಲ. ಸಾಕ್ರಟೀಸ್ ಜೀವನವಿಡೀ ತನ್ನ ಸುತ್ತ ಒಂದು ಧರ್ಮ, ಒಂದು ಸಿದ್ಧಾಂತ, ಅಥವ ಒಬ್ಬ ಅನುಯಾಯಿ ಹುಟ್ಟಿಕೊಳ್ಳದಂತೆ ಎಚ್ಚರಿಕೆ ವಹಿಸಿದ. ಆತ ಯೇಸು, ಮೋಸೆಸ್, ಪೈಗಂಬರರಿಗಿಂತ ಹೆಚ್ಚು ಪ್ರತಿಭಾವಂತನಾಗಿದ್ದರೂ ಅವರ ರೀತಿಯ ಯಾವ ಕೆಲಸವನ್ನೂ ಮಾಡಿದವನಲ್ಲ. ಅಥೆನ್ಸ್‌ನ ಒಂದು ಸಣ್ಣ ಭಾಗದಿಂದಾಚೆ ಆತ ಹೊರಹೋದವನಲ್ಲ. ಕೊನೆಯ ತನಕ ಅಥೆನ್ಸ್ ಪ್ರಜೆಯಾಗಿ ಉಳಿದ. ನಾನಾದರೂ ಬೃಹದ್ದೇಶೀಯ, ಇಡೀ ಜಗತ್ತಿಗೆ ಸೇರಿದವನು. ಚಿಕ್ಕ ಊರಿನಲ್ಲಿ ಹೆಚ್ಚು ಜನ ಸಾಹಸಿಗಳು ಸಿಗಲಾರರು. ನಾನಾದರೂ ಸಾಕ್ರಟೀಸನಿಗಿಂತಲೂ ಅದೃಷ್ಟಶಾಲಿ.
ಗ್ರೀಕ್ ಪ್ರಜೆಗಳಿಗೆ ನಿಮ್ಮನ್ನು ನೀವು ಹೇಗೆ ಪರಿಚಯಿಸಿಕೊಳ್ಳುವಿರಿ?
ಗ್ರೀಕರಿಗೆ ನನ್ನ ಪರಿಚಯವಿಲ್ಲವೇ? ನೀವು ಎರಡುಸಾವಿರದ ಐನೂರು ವರ್ಷಗಳ ಹಿಂದೆ ವಿಷಪ್ರಾಶನ ಮಾಡಿ ಕೊಂದ ವ್ಯಕ್ತಿಯೇ ನಾನು. ನೀವು ನನ್ನನ್ನು ಮರೆತರೂ ನಿಮ್ಮನ್ನು ಮರೆಯಲು ನನ್ನಿಂದಾದೀತೇ? ಇಲ್ಲಿಗೆ ಬಂದ ಮೇಲೆ ಈ ಎರಡುಸಾವಿರದ ಐನೂರು ವರ್ಷಗಳಲ್ಲಿ ಸಾಕಷ್ಟು ಬೆಳವಣಿಗೆಯಾಗಿರಬಹುದು ಎಂದು ಕೊಂಡೆ. ಆದರೆ ಎರಡೇ ದಿನಗಳಲ್ಲಿ ನನಗೆ ನಿರಾಶೆಯಾಯಿತು. ಈ ಎರಡು ದಿನಗಳಲ್ಲಿ ಗ್ರೀಕ್ ಪತ್ರಿಕೆಗಳು ನನ್ನ ಬಗ್ಗೆ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುತ್ತಿವೆ, ಬುಡವಿಲ್ಲದ ಆಪಾದನೆಗಳನ್ನು ಮಾಡಿವೆ. ಇಲ್ಲಿನ ಬಿಷಪ್ ಎನಿಸಿಕೊಂಡವನು ನನ್ನ ವಿರುದ್ಧ ಕರಪತ್ರಗಳನ್ನು ಹಂಚುತ್ತಿದ್ದಾನಂತೆ. ನನ್ನ ಬಗ್ಗೆ ಏನೇನೂ ಗೊತ್ತಿಲ್ಲದ ಅವನು ಈ ಭಾನುವಾರ ಚರ್ಚಿನಲ್ಲಿ ನನ್ನ ವಿರುದ್ಧ ಮಾತನಾಡಲಿರುವನಂತೆ.
ಪತ್ರಕರ್ತರುಗಳಿಗೆ ಸಂದರ್ಶನ ನೀಡಲು ನಿಖರವಾದ ಕಾರಣವೇನಾದರೂ ಇದೆಯೇ?
ಎಲ್ಲ ಕಾಲಕ್ಕೂ ನಾನು ಸನ್ಯಾಸಿಗಳೊಂದಿಗೆ ಮಾತ್ರ ಮಾತನಾಡುತ್ತಿರುತ್ತೇನೆ. ಪತ್ರಕರ್ತರೊಂದಿಗೆ ಮಾತನಾಡಿದರೂ ಅದು ನನ್ನ ಸನ್ಯಾಸಿಗಳನ್ನೇ ತಲುಪುತ್ತಿರುತ್ತದೆ. ಪತ್ರಕರ್ತರನ್ನು ಒಂದು ಮಾಧ್ಯಮದಂತೆ ಬಳಸುತ್ತಿರುತ್ತೇನೆ. ನನ್ನ ಸಂದೇಶವನ್ನು ಹರಡಲು ಸಿಗುವ ಯಾವ ಮಾಧ್ಯಮವನ್ನೂ ಬಳಸದೆ ಬಿಡುವವನಲ್ಲ. ನಾನು ಪತ್ರಕರ್ತರ ಬಗ್ಗೆ ಒಂದು ಚಕಾರವನ್ನೆತ್ತದಿದ್ದರೂ ಅವರು ಮಾತ್ರ ನನ್ನ ಬಗ್ಗೆ ಒಂದೇ ಸಮನೆ ಬಾಯಿಗೆ ಬಂದಂತೆ ಬರೆಯುತ್ತಿದ್ದರು. ಹಾಗಾಗಿ ಅವರೊಂದಿಗೇ ನೇರವಾಗಿ ಮಾತನಾಡಿಬಿಡೋಣ ಎಂದು ನಿರ್ಧರಿಸಿಕೊಂಡೆ. ತನ್ನ ಓದುಗರಿಗೆ ಸತ್ಯವನ್ನಷ್ಟೇ ತಲುಪಿಸಬೇಕಾದ್ದು ಎಲ್ಲ ಪತ್ರಕರ್ತರ ಹೊಣೆ. ನಾನಂತೂ ವ್ಯಕ್ತಿಗೌರವವನ್ನು, ವ್ಯಕ್ತಿಸ್ವಾತಂತ್ರ್ಯವನ್ನು ಕಾಪಾಡುವ ಪತ್ರಿಕೋದ್ಯಮವನ್ನು ಗೌರವಿಸುತ್ತೇನೆ. ಪತ್ರಕರ್ತರ ಬೆಂಬಲ ಸಿಕ್ಕಿಬಿಟ್ಟರೆ ಒಬ್ಬ ವ್ಯಕ್ತಿ ಎಲ್ಲ ಸರ್ಕಾರಗಳಿಗಿಂತಲೂ ಶಕ್ತಿಶಾಲಿಯಾಗಿ ಬೆಳೆದುಬಿಡಬಲ್ಲ ಎಂಬುದು ನನಗೆ ಅಮೆರಿಕಾದಲ್ಲಿ ಮನವರಿಕೆಯಾಗಿದೆ. ಅಲ್ಲಿ ಪತ್ರಕರ್ತರ ಬೆಂಬಲವಿರದಿದ್ದರೆ ಅಮೆರಿಕನ್ ಸರ್ಕಾರ ನನ್ನನ್ನು ಎಂದೋ ಹತ್ಯೆ ಮಾಡಿಬಿಡುತ್ತಿತ್ತು. ಆದರೆ ಭಾರತೀಯ ಪತ್ರಿಕೋದ್ಯಮ ಇನ್ನೂ ಸಾಕಷ್ಟು ಬೆಳೆದಿಲ್ಲ. ತಮ್ಮ ಪತ್ರಿಕೆಗಳಲ್ಲಿ ನಾನು ಹೇಳಿರದ ಮಾತುಗಳನ್ನೇಲ್ಲ ಸೇರಿಸಿರುತ್ತಾರೆ. ಕೊನೆಯ ಪಕ್ಷ ಹಾಗೆ ಸೇರಿಸುವ ಮುನ್ನ ಅದನ್ನು ನನ್ನ ಗಮನಕ್ಕೆ ತರುವ ಸೌಜನ್ಯವನ್ನೂ ತೋರಿಸುವುದಿಲ್ಲ.

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):