ಕಡಲ ಹಂಬಲವಿಲ್ಲ ಎನಗೆ

ಕಡಲ ಹಂಬಲವಿಲ್ಲ ಎನಗೆ

ಕವನ

 
ಪಡುವಣದ ಪರ್ವತದ ತಪ್ಪಲಲಿ ಹುಟ್ಟಿಹೆನು, ಸ್ನೇಹಿತರ
ಬರವಿಲ್ಲ ಎತ್ತ ನೋಡಿದರತ್ತ ಮುಗ್ಧ ಮನಸ್ಸಿನ ತೊರೆಗಳು.
 
ಕಾಡು ಕಡಿದೆಂಬ ಕಾರಣಕ್ಕೆ ನನ್ನ ಮುಟ್ಟುವರಿಲ್ಲ
ಕಾಡಿಗೋ ನಾನೆಂದರೆ ಪ್ರಾಣ, ಎನಗೆ ಬಯಲಿಗೋಡುವ ಆಸೆ.
 
ತೊರೆಗಳ ಜೀವಕ್ಕೆ ಮುಕುತಿ ನೀಡಲು
ಕಾದು ಕುಂತಿದೆಯಂತೆ ಅಲ್ಲೊಂದು ಕಡಲು
ಬಹುದೂರದ ಪಯಣವದು
ಹರಿಯಬೇಕಿದೆ ರಾತ್ರಿ ಹಗಲುಗಳು.
 
ನನ್ನಯ ಬದಿಗೆ ಬೇರಿಳಿಸಿ ಬೆನ್ನ ತಟ್ಟಿವೆ ಮರಗಳು
ದಾಹದ ನೆಪವೇರಿ ಮುತ್ತಿಟ್ಟಿವೆ ಪ್ರಾಣಿಪಕ್ಷಿಗಳು
 
ಹೊರಟೆನು ಇರುವುದೆಲ್ಲವ ಬಿಟ್ಟು ಕಾಣದ
ಕಡಲಿಗೆ ಹಂಬಲಿಸಿ, ನಾ ಇಳಿದ
ರಭಸಕೆ ಕಾಡು ಪ್ರತಿಧ್ವನಿಸಿತು, ಕೇಳುವ
ವ್ಯವಧಾನವಿಲ್ಲ ನನಗೆ, ಗುರಿಯೊಂದೆ ಮುಖ್ಯ
 
ಹರಿದೆನು ಮಿತ್ರರೊಡಗೂಡಿ ಕಣಿವೆಗಳಲಿ, ಸುತ್ತಿ ಹೊರಟೆನು
ನಮ್ಮ ಬೆಟ್ಟ ಗುಡ್ಡಗಳ, ದೂರದಾಚೆಯ ಕಡಲ ಸೇರಲು.
ಬಂದು ಸೇರಿದೆ ಬಯಸಿದ ಬಯಲನು, ನಿಧಾನಿಸಿದೆ
ಪರಿಸರವನರಿಯಲು, ಹೊಲಗಳು, ಪಟ್ಟಣಗಳು, ಜನನಿಬಿಡ ಸ್ಥಳಗಳು.
 
ನಾನಿನ್ನು ಬರಿಯ ತೊರೆಯಲ್ಲ, ಜೀವ ನದಿಯ ಭಾಗ
ಪಡೆದೆನು ಗೆಳೆಯರನು ಕಳೆದುಕೊಂಡೆನು ಅಸ್ಥಿತ್ವವನು.
ಸಹಭಾಗಿಗಳ ಕೂಗಲಿ ಕರಗಿತು ಎನ್ನ ದನಿ
ಮರಳಿ ಬಯಸಿಹೆನು ನನ್ನ ಕಾಡು ಬೆಟ್ಟಗಳ.
 
ತೊರೆಗಳಂತೆಯೇ ಬಂದು ಸೇರಿವೆ ಕಲ್ಮಷಗಳು
ನದಿಯ ‘ಜೀವ’ ಇನ್ನಿಲ್ಲ, ಕಡಲ ಸೇರಲು ಕೆಲವೆ ದಿನಗಳು.
ಕಾಡು ಒಣಗಿದೆಯಂತೆ, ನನ್ನ ನೆನಪಲ್ಲೇ ಸೊರಗಿತೇ?
ಬರ ಬಾರದಿತ್ತು ನಾನು ಕಡಲ ಅರಸುತ, ಮರುಗಿದೆಯೀ ಒಡಲು.
 
ಬಂದು ನಿಂತಿಹೆ ಕಡಲ ಬಾಯಿಗೆ, ಕಂಡೆನು ಕಡಲನು.
ಕಾಡು ಮರ ಗಿಡ ಹಕ್ಕಿಗಳ ಸುಳಿವಿಲ್ಲ. ಎತ್ತ ನೋಡಿದರತ್ತ ನೀರು.
ಜೀವ ನೀಡುವ ನದಿಯಲ್ಲವಿದು, ನಮ್ಮ ಮಸಣ, ಸೇರುವ ಹಂಬಲವಿಲ್ಲ ನನಗೆ.
ಹಿಂತಿರುಗಿ ಹರಿಯ ಬಲ್ಲೆನೆ ನಾನು? ಪರ್ವತದ ಮಡಿಲ ಸೇರಲು.....