ಕಥೆ: ಪರಿಭ್ರಮಣ..(09)

4.666665

(ಪರಿಭ್ರಮಣ..(08)ರ ಕೊಂಡಿ -  http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...)

ಸುವರ್ಣಕ್ಕೆ ಹತ್ತಿರದ ಪದ ಸುವನ್ನ . ಸುವನ್ನ ಎಂದರೆ ಬಂಗಾರ ಎಂದೆ ಅರ್ಥ ಥಾಯ್ ನಲ್ಲಿ ಕೂಡ. ಬಂಗಾರದ ಮೋಹ ಜಗತ್ತಿನ ಎಲ್ಲಾ ದೇಶಗಳ ಸಾಮಾನ್ಯ ಕಥೆಯೆಂದು ಕಾಣುತ್ತದೆ. ಅದಕ್ಕೆಂದೊ ಏನೊ ಇಲ್ಲಿಯೂ ಹೆಣ್ಣುಮಕ್ಕಳ ಹೆಸರಲ್ಲೆ ಬಂಗಾರವಿದೆ, ನಮ್ಮ ಬಂಗಾರಮ್ಮ, ಸುವರ್ಣ, ಚಿನ್ನಮ್ಮಗಳ ಹಾಗೆ . ಶ್ರೀನಾಥ ಕಂಡ ಸ್ತ್ರೀ ನಾಮಗಳಲ್ಲಿ ಕುನ್. ಸುವನ್ನ ಸಹ ಒಂದು ಸಾಧಾರಣವಾಗಿ ಕಾಣುವ ಮತ್ತು ತುಂಬಾ ಸಾಮಾನ್ಯವಾಗಿ ಬಳಕೆಯಲ್ಲಿರುವ ಹೆಸರು. ಸುವನ್ನ ಕೂಡಾ ಸುವರ್ಣದಿಂದಲೆ ಅಪಭ್ರಂಶವಾಗಿ ಬಂದಿದ್ದ ಪದವೊ ಏನೊ - ಅರ್ಥ, ಹೋಲಿಕೆ ಮಾತ್ರ ಒಂದೆ ತೆರದಲ್ಲಿತ್ತು. ನಡುವೆ ನಡುವೆ ಕುನ್.ರತನ, ಕುನ್. ಸುಚಿತ್ರ ರೀತಿಯ ಭಾರತೀಯ ಮೂಲದ ಹೆಸರುಗಳಿದ್ದಂತೆ ಕಾಣುವ ಹೆಸರಿನ ವನಿತೆಯರೂ ಕಣ್ಣಿಗೆ ಬಿದ್ದಿದ್ದರು. ಅವಳ ಹೆಸರು ಸುವನ್ನ ಆದರೂ ಆಫೀಸಿನಲ್ಲಿ ಎಲ್ಲರು ಕುನ್. ಸೂ ಎಂದೆ ಕರೆಯುತ್ತಿದ್ದರು. ಅವರಲ್ಲೆ ಹೆಸರಿಡಿದು ಕೂಗುವಾಗ ಅಲ್ಲಿನ ವಾಡಿಕೆಯ ಒಂದು ಸಾಮಾನ್ಯ ಅಂಶವೊಂದನ್ನು ಶ್ರೀಧರ ಗಮನಿಸಿದ್ದ - ಅದರಲ್ಲೂ ವಿಶೇಷವಾಗಿ ವನಿತಾ ವರ್ಗದಲ್ಲಿ. ಅವರನ್ನು ಪರಸ್ಪರ ಕರೆಯುವಾಗ ಪೂರ್ತಿ ಹೆಸರನ್ನು ಬಳಸದೆ ಹೆಸರಿನ ಮೊದಲ ಭಾಗಾಂಶವನ್ನು ಮಾತ್ರ ಬಳಸುತ್ತಿದ್ದರು. ಇದರಿಂದಾಗಿ ಕುನ್. ಸುವನ್ನ ಹೋಗಿ ಕುನ್. ಸೂ ಆದಂತೆ, ಕುನ್. ತಿದಾರತ್ ಹೋಗಿ ಕುನ್. ತೀ ಆಗಿಬಿಡುತ್ತಿತ್ತು. ಟೀಮಿನ ಕೆಲ ಹುಡುಗರು ಅದನ್ನೆ ಮಹಾಭಾರತದ ಕುಂತಿಗೆ ಸಮೀಕರಿಸಿ ಕುನ್.ತೀ, ಕುನ್.ತೀ ಎಂದು ಹಾಸ್ಯ ಮಾಡಿಕೊಂಡಿದ್ದು ಉಂಟು...ಆದರೇಕೊ ಗಂಡಸರಲ್ಲಿ ಈ ಅಭ್ಯಾಸ ಅಷ್ಟಿದ್ದಂತೆ ಕಾಣಲಿಲ್ಲ. ಅವನಿಗೆ ನೆನಪಿರುವಂತೆ ಎಲ್ಲ ಪೂರ್ತಿ ಹೆಸರಲ್ಲೆ ಕರೆಯುತ್ತಿದ್ದರು - ಕುನ್. ಸೊಂಚಾಯಿ, ಕುನ್. ವಾಂಚಾಯಿ, ಕುನ್. ಸುಖುಮ್, ಕುನ್. ರಕ್ ಚಾಯಿ - ಎಲ್ಲರದು ಪೂರ್ತಿ ಹೆಸರುಗಳೆ ಹೊರತು ಭಾಗಾಂಶಗಳಾಗಿರಲಿಲ್ಲ. ಇದೇನು ಅಲ್ಲಿಯ ಜನಪದರ ಸಾಮಾನ್ಯ ಅಭ್ಯಾಸವೊ ಅಥವಾ ಇವನು ಅಲ್ಲಿ ಮಾತ್ರ ಕಂಡ ವಿಶೇಷತೆಯೊ ಗೊತ್ತಾಗಿರಲಿಲ್ಲ.

ಕುನ್ ಸೂ ಸುಮಾರು ಮುವ್ವತ್ತೈದರ ಆಚೀಚೆಯ ಸಾಧಾರಣ ಎತ್ತರದ ಹೆಣ್ಣು. ತುಸು ನಸುಗೆಂಪಿನ ಬಣ್ಣದ ಕುಳ್ಳಗಿನ ತೆಳುವೂ ಅಲ್ಲದ ದಢೂತಿಯೂ ಅಲ್ಲದ ಮಧ್ಯಮ ಗಾತ್ರದ ಶರೀರ. ಅವಳ ಹಾಗೆ ಇನ್ನು ಮೂವ್ವರು, ಸದಾ ಆಫೀಸಿನ ಸಮವಸ್ತ್ರದಲ್ಲಿ ತೀರಾ ಸಾಧಾರಣವಾಗಿ ಕಾಣುವಂತಿದ್ದರೂ ಅದೇನೊ ಈಕೆಯೊಬ್ಬಳು ಮಾತ್ರ ಸ್ವಲ್ಪ ಬೇರೆಯ ತರವೆ ಇರುತ್ತಿದ್ದಳು. ಚೆನ್ನಾಗಿ ಮೇಕಪ್ಪು ಮಾಡಿಕೊಂಡು ಸದಾ ಸುಂದರಳಂತೆ ಕಾಣಲು ಯತ್ನಿಸುತ್ತಿದ್ದಳು ಎನ್ನುವುದಕ್ಕಿಂತ ಹೆಚ್ಚಾಗಿ, ಅವಳಿಗಿದ್ದ ಲಕ್ಷಣವಾಗಿ ಸಮ ಪ್ರಮಾಣದಲ್ಲಿದ್ದ ಸ್ವಾಭಾವಿಕವಾದ ಸುಂದರ ಮುಖದಿಂದಾಗಿ ಎಲ್ಲರು ಅವಳತ್ತ ಮತ್ತೊಮ್ಮೆ ತಲೆಯೆತ್ತಿ ನೋಡಬೇಕೆನಿಸುವಂತೆ ಮಾಡುತ್ತಿತ್ತು.  ಸಾಧಾರಣವಾಗಿ ಮುಖದ ಯಾವುದಾದರೊಂದೊ ಎರಡೊ ಅಂಗಗಳು ಆಕರ್ಷಣೀಯವಾಗಿ, ಸುಂದರವಾಗಿರುವುದು ಮಾಮೂಲಿನ ಸಂಗತಿ; ಆದರೆ ಈಕೆಯ ವಿಷಯದಲ್ಲಿ ಮಾತ್ರ ಯಾವುದೊ ಅಪರೂಪದ ತಪ್ಪು ನಡೆದುಹೋದಂತೆ ಕಣ್ಣು, ಕಿವಿ, ಬಾಯಿ, ಮೂಗು, ಮುಂಗುರುಳು - ಎಲ್ಲವು ತಿದ್ದಿ ತಿಡಿದಂತೆ , ಲಕ್ಷಣವಾಗಿ ರೂಪುಗೊಂಡುಬಿಟ್ಟಿತ್ತು... ಆ ಲಕ್ಷಣಕ್ಕೆ ಕಲಶವಿಟ್ಟಂತೆ ಅವಳು ನಗಲೆಂದು ಬಾಯಿ ತೆರೆದಾಗೆಲ್ಲಾ, ಸಾಲಾಗಿ ಮೆಕ್ಕೆ ಜೋಳದ ಕಾಳು ಜೋಡಿಸಿಟ್ಟಂತ ನೀಟಾದ ದಂತ ಪಂಕ್ತಿ ಫಳಕ್ಕನೆ ಮಿಂಚಿ, ಕೊಂಕು ನೋಟದ ತುಂಟತನಕ್ಕೆ ಸಾಟಿಯಾಗಿ ಸುಂದರ ಬೆಳದಿಂಗಳು ಚೆಲ್ಲಿದ ಭಾವನೆ ಹುಟ್ಟಿಸುತ್ತಿತ್ತು. ಅದೆಲ್ಲಾ ಗೊತ್ತಿದ್ದೆ ಅವಳಷ್ಟಿಷ್ಟು ಥಳಕು, ಬಳಕು, ವೈಯಾರ ಮಾಡುತ್ತಿದ್ದಳೊ ಅಥವಾ ಸಹಜವಾಗಿ ಅವಳಿದ್ದುದ್ದೆ ಹಾಗೆಯೊ - ಅವಳು ಬರಿಯ ಥಾಯ್ ಭಾಷೆ ಮಾತ್ರ ಮಾತನಾಡುತ್ತಿದ್ದುದರಿಂದ ಶ್ರೀನಾಥನಿಗಂತೂ ಗೊತ್ತಾಗುತ್ತಿರಲಿಲ್ಲ. ಆದರೆ ಆಫೀಸಿನಲ್ಲಿ ಎಲ್ಲರೂ ಅವಳ ಜತೆ ಸಹಜ ಒಡನಾಟದಲ್ಲೆ ವ್ಯವಹರಿಸುತ್ತಿದ್ದುದರಿಂದ ಬಹುಶಃ ಅವಳ ನಡಾವಳಿ, ನಡೆ-ನುಡಿಗಳೆಲ್ಲ ಸ್ಥಳೀಯ ರೀತಿಯ ಅನುಸಾರ ಸಹಜವೆ ಇರಬೇಕೆಂದು ಅಂದುಕೊಂಡಿದ್ದ. ಅದೇನೆ ಇದ್ದರೂ, ಅವಳು ಬರಿ ಸುಂದರಿ ಮಾತ್ರವಲ್ಲ, ವ್ಯವಹಾರದಲ್ಲೂ ಚಾತುರ್ಯವುಳ್ಳ ಕಿಲಾಡಿ ಹೆಂಗಸೂ ಸಹ ಎಂದು ಅರಿವಾಗಿದ್ದು ಅವಳ 'ಕಾಫಿ ಕ್ಲಬ್' ಪ್ರಸಂಗದಿಂದಾಗಿ...

ಬಂದ ಹೊಸತರಲ್ಲಿ ಬೆಳಿಗ್ಗೆ ಮತ್ತು ಮಧ್ಯಾಹ್ನ ಕಾಫಿ ಅಥವ ಟೀಗೆಂದು ಎಲ್ಲರ ಹಾಗೆ ಶ್ರೀನಾಥನೂ ಬ್ರೇಕು ತೆಗೆದುಕೊಳ್ಳುತ್ತಿದ್ದ. ಆಫೀಸಿನಲ್ಲೆ ಒಂದು ತುದಿಯಲ್ಲಿ ಪ್ಯಾಂಟ್ರಿಯೊಂದು ಇದ್ದು, ಅಲ್ಲಿನವರೆಲ್ಲ ಅಲ್ಲಿಗೆ ಹೋಗಿಯೆ ತಮಗೆ ಬೇಕಾದ ಪೇಯ ತಯಾರಿಸಿಕೊಂಡು ಬರುವುದೊ, ಆಹಾರ ಬಿಸಿ ಮಾಡಿಕೊಂಡು ತರುವುದೊ ಮಾಡುತ್ತಿದ್ದರು. ಕುನ್ ಸೂ ಸೇರಿದಂತೆ ಎಲ್ಲಾ ಈ ಕೆಲಸದ ಹೆಣ್ಣುಗಳು, ಬೇರೇನೂ ಕೆಲಸವಿರದಿದ್ದಾಗ ಅಲ್ಲಿ ಕೂತೆ ಕಾಲ ಕಳೆಯುತ್ತಿದ್ದ ಜಾಗ. ಅಲ್ಲದೆ ಒಂದು ರೀತಿ ಆಫೀಸಿನ ಮಹಿಳೆಯರೆಲ್ಲಾ ದೇಹಭಾದೆ ತೀರಿಸಿಕೊಳ್ಳಲೊ, ಮೇಕಪ್ಪು ತಿದ್ದಿ ತೀಡಲೊ, ಸಂಡಾಸಕ್ಕೆ ಹೋಗಿ ಬರಲೂ ಈ ಕೊಠಡಿಯ ಮೂಲಕವೆ ಹೋಗಬೇಕಾದ್ದರಿಂದ ಅಲ್ಲಿ ಸಾಧಾರಣ ಒಬ್ಬರಲ್ಲ ಒಬ್ಬರು ಲಲನಾಮಣಿಗಳು ಇದ್ದೆ ಇರುತ್ತಿದ್ದರು. ಹೀಗಾಗಿ ಅಲ್ಲಿಗೆ ಹೆಚ್ಚು ಗಂಡಸರಾರು ಹೋಗುತ್ತಲೆ ಇರಲಿಲ್ಲವೆಂದು ಕಾಣುತ್ತದೆ... ಮೊದಲೊಂದೆರಡು ದಿನ ಅಲ್ಲಿ ಹೋಗಿ ಕಾಫಿ ತಯಾರಿಸಬೇಕೆಂದು ಲೋಟ ಹಿಡಿದು ಹೊರಟವನಿಗೆ ಸದಾ ಅಲ್ಲಿರುವ ಮಹಿಳಾಮಣಿಗಳ ದಿಂಡು ಕಂಡು ದಿಗಿಲಾಗಿ ಬಾಗಿಲತನಕ ಹೋಗಿ ಹಿಂದೆ ಬಂದಿದ್ದ. ಇದೆ ಒಂದೆರಡು ದಿನ ಪುನರಾವರ್ತನೆಯಾದ ಮೇಲೆ, ಯಾಕೊ ಈ ಸಹವಾಸವೆ ಬೇಡವೆನಿಸಿ ಪಕ್ಕದ ಬಿಲ್ಡಿಂಗಿನಲ್ಲಿದ್ದ 'ಸ್ಟಾರ್ ಬಕ್'ನಲ್ಲಿ ತಂದ ಕಾಫಿ ಕುಡಿಯತೊಡಗಿದ. ಆದರೂ ಪ್ರತಿದಿನ ಹದಿನೈದನೆ ಪ್ಲೋರ ಲಿಪ್ಟಿನಿಂದಿಳಿದು ಪಕ್ಕದ ಬಿಲ್ಡಿಂಗಿಗೆ ಹೋಗಿ ಕಾದು ಕಾಫಿ ತರುವಷ್ಟರಲ್ಲಿ ಅರ್ಧ ಗಂಟೆಯೆ ಕಳೆದು ಹೋಗಿ, ಯಾಕೊ ಇದು ದಿನಾ ಹೀಗೆ ನಡೆಯದ ಕಥೆ ಅನಿಸಿಬಿಟ್ಟಿತು. ಹಾಗೆಯೆ ಮತ್ತೊಂದು ಅಚ್ಚರಿಯೂ ಆಯ್ತು - ಆಫೀಸಿನ ಅರ್ಧದಷ್ಟು ಗಂಡಸರೆ ತುಂಬಿದ್ದರೂ ಒಮ್ಮೆಯೂ ಅವರಾರು ಪ್ಯಾಂಟ್ರಿಯ ರೂಮಿನತ್ತ ಸುಳಿದಿದ್ದನ್ನು ಶ್ರೀನಾಥ ನೋಡಿರಲೆ ಇಲ್ಲ..  ಲಂಚಿಗೆ ಮಾತ್ರ ಹೊರ ಹೋಗುತ್ತಿದ್ದುದನ್ನು ಗಮನಿಸಿದ್ದ... ಆದರೆ ಕಾಫಿ, ಟೀ ಗೆ ಇವನಂತೆ ಅವರಾರು ಹೊರಗೆ ಹೋಗಿದ್ದನ್ನು ಕಂಡಿರಲಿಲ್ಲ. ಸಾಲದೆಂಬಂತೆ ಪ್ರಾಜೆಕ್ಟು ಟೀಮಿನ ಜನರೆಲ್ಲ ಹೆಚ್ಚಾಗಿ ಮಹಿಳೆಯರೆ.. ಇದ್ದ ಗಂಡಸರೆಲ್ಲ ಈ ಭಾರತೀಯ ತಂಡದವರು ಮಾತ್ರ. ಒಂದಿಬ್ಬರು ಐಟಿ ಹುಡುಗರಿದ್ದರೂ, ಅವರಿಗೆ ಇಂಗ್ಲಿಷಿನ ಗಾಳಿಯೂ ಇರಲಿಲ್ಲ ಮತ್ತು ದಿನವೆಲ್ಲಾ ಅವರು ಅಲ್ಲಿಲ್ಲಿ ಓಡಾಡಿಕೊಂಡು ಸೀಟಿನಲ್ಲಿ ಕಾಣುತ್ತಲೆ ಇರಲಿಲ್ಲ. ಗುಂಪಿನವರದೆಲ್ಲ ಇದೆ ಸಮಸ್ಯೆಯಾಗಿ, ಮೀಟಿಂಗು ಕೆಲಸದ ನಡುವೆ ಒಂದೆರಡು ದಿನ ಪೂರ ಕಾಫಿಯೆ ಇಲ್ಲದೆ ಕಳೆಯುವ ಸ್ಥಿತಿಯೂ ಬಂತು. ಆಗ ಮಾತ್ರ ಈ ಆಫೀಸಿನ ಗಂಡಸರೆಲ್ಲ ಅದಾವ ರೀತಿ ನಿಭಾಯಿಸಿಕೊಂಡಿದ್ದಾರೊ ಎಂದು ಸೋಜಿಗವೂ ಆಗಿತ್ತು. ಈ ಥಾಯ್ ಗಂಡಸರೇನು ಟೀ, ಕಾಫಿಯೆ ಕುಡಿಯುವುದಿಲ್ಲವೇನೊ ಎಂದು ಅನುಮಾನ ಬರಲು ಆರಂಭವಾಗಿತ್ತು....ಆದರೆ ಒಂದೆರಡು ದಿನದಲ್ಲೆ ಆ ರಹಸ್ಯವೂ ಬಯಲಾಯಿತು ಆ ಕುರಿತು ಎಚ್.ಆರ್. ವಿಭಾಗದಲ್ಲಿ ಕೊಂಚ ವಿವರಗಳಿಗಾಗಿ ತಡವಿದಾಗ ..!

ಎಚ್.ಆರ್. ವಿಭಾಗದಲ್ಲಿ ಇದ್ದುದರಲ್ಲೆ ಸ್ವಲ್ಪ ಒಳ್ಳೆಯ ಆಂಗ್ಲ ಪ್ರಭುತ್ವವಿದ್ದ ಕುನ್. ತಿದಾರತ್ ಹತ್ತಿರ ಹೊರಗೆ ಹೋಗಿ ಕಾಫಿ, ಟೀ ಕುಡಿಯುವುದಕ್ಕೆ ಪ್ಯಾಂಟ್ರಿಯ ಸ್ವಯಂಸೇವೆ ಬಿಟ್ಟು ಬೇರಾವುದಾದರೂ ಆಯ್ಕೆಗಳಿವೆಯೆ ಎಂದು ಕೇಳಿದಾಗ ಆಕೆ ನಕ್ಕು ಯಾರಿಗೊ ಪೋನ್ ಮಾಡಿ ಬರ ಹೇಳಿ ನಂತರ ಅಲ್ಲಿನ 'ಗಂಡಸರಿಗಾಗಿ ನಡೆವ ಕಾಫಿ ಕ್ಲಬ್ಬಿನ' ಕಥೆ ಹೇಳಿದಳು. ಗಂಡಸರು ಹೆಂಗಸರು ಇರುವ ಕಡೆ ಅಡ್ಡಾಡದ ಮತ್ತು ಅಡಿಗೆ ಮನೆಯತ್ತ ಮುಖ ಹಾಕದ ಸಂಸ್ಕೃತಿಯಿಂದಾಗಿ ಆಫೀಸಿನ ಗಂಡಸರಾರು ಪ್ಯಾಂಟ್ರಿಯತ್ತ ಹೋಗುವುದೆ ಇಲ್ಲವಂತೆ.... ಬದಲಿಗೆ, ಆ ಪ್ಯಾಂಟ್ರಿಯ ಕಾಫಿ ಟೀಯೆ ತಾನಾಗಿ ಅವರ ಟೇಬಲಿನತ್ತ ಬರುವ ಹಾಗೆ ಮಾಡಿಕೊಂಡಿದ್ದರು ಚಾಣಾಕ್ಷ್ಯತೆಯಿಂದ. ಅಲ್ಲಿನ ಉದ್ಯೋಗಿ ಹೆಣ್ಣೊಬ್ಬಳು ದಿನ ಬೆಳಗು ಮತ್ತು ಮಧ್ಯಾಹ್ನ ಅವರಿಗೆಲ್ಲ ಅವರ ಬೇಡಿಕೆಯ ಪ್ರಕಾರ ಕಾಫಿ ಅಥವಾ ಟೀ ತಯಾರಿಸಿ ಸರಬರಾಜು ಮಾಡುವವಳು...ದಿನವೊಂದಕ್ಕೆ ಹತ್ತು ಬಾತಿನಂತೆ ತಿಂಗಳಿಗೊಮ್ಮೆ ಕುಡಿದ ದಿನಗಳ ಮೊತ್ತದ ಲೆಕ್ಕ ತೀರಿಸಿಬಿಟ್ಟರೆ ಸರಿ. ಆಕೆಯ ಬಡ ಹಿನ್ನಲೆಯಿಂದಾಗಿ ಅವಳಿಗು ಇದೊಂದು ಅನಧಿಕೃತ ಆದಾಯದಂತೆ ಆಗಿ ಅಷ್ಟಿಷ್ಟು ಕಾಸು ಮಾಡಿಕೊಳ್ಳಲು ಸಹಾಯಕವಾಗಿತ್ತು. ಪ್ರತಿ ದಿನ ಅವರವರ ನಿಗದಿತ ಸಮಯಕ್ಕೆ ಸರಿಯಾಗಿ, ಅವರು ಕೇಳಿದ ಪೇಯವನ್ನು ನೇರ ಟೇಬಲ್ಲಿಗೆ ತಂದುಕೊಡುವುದು ಅವಳ ಕೆಲಸ. ಇದರಿಂದಾಗಿ ಯಾವ ಗಂಡಸೂ ಮೇಲೆದ್ದು ಹೋಗುವ ಪ್ರಮೇಯವೆ ಇರುತ್ತಿರಲಿಲ್ಲ - ಬರಿ ಪ್ರಕೃತಿಯ ಕರೆಗೊಂದಕ್ಕೆ ಬಿಟ್ಟು. ನೀರಿನ ಬಾಟಲಿಯೂ ಟೇಬಲ್ಲಿಗೆ ಬಾಟಲಿನ ರೂಪದಲ್ಲಿ ಸಪ್ಲೈ ಆಗಿ ಅದಕ್ಕು ಓಡಾಡುವ ಅವಶ್ಯಕತೆ ಇರಲಿಲ್ಲ. ಆ ಕಾಫಿ ಸರಬರಾಜು ವ್ಯವಸ್ಥೆಯ ವಿವರ ಕೇಳಿದ ಮೇಲಷ್ಟೆ ಶ್ರೀನಾಥನಿಗೂ ಅರ್ಥವಾಗಿದ್ದು - ಯಾಕೆ ಯಾವ ಗಂಡಸರೂ ಹೆಚ್ಚಾಗಿ ಪ್ಯಾಂಟ್ರಿಯತ್ತ ಸುಳಿಯುತ್ತಿರಲಿಲ್ಲ ಎಂದು. ಪ್ಯಾಂಟ್ರಿಯೆ ಅವರ ಟೇಬಲ್ಲಿನತ್ತ ಸುಳಿಯುವಾಗ ಅವರು ಹೋಗುವ ಅಗತ್ಯವಾದರೂ ಏನು?

ಹಾಗೆ ನೋಡಿದರೆ ಇವರುಗಳೆ ಅಲ್ಲಿನ ಅನಧಿಕೃತ ಕಾಫಿ ಕ್ಲಬ್ ಪದ್ದತಿಯ ಅರಿವಿಲ್ಲದೆ, ಪೆದ್ದು ಶಿಖಾಮಣಿಗಳಾಗಿ ಓಡಾಡುವಂತಾಗಿತ್ತು.. ಅದನ್ನೆ ವಿವರಿಸಿದ ಕುನ್. ತಿದಾರಾತ್, ಇವರೂ ಬೇಕಿದ್ದರೆ ಅದೆ ವಿಧಾನ ಅನುಕರಿಸಬಹುದು, ಬೇಕಿದ್ದರೆ ಆ ಹೆಂಗಸಿನ ಹತ್ತಿರ ಮಾತನಾಡಿ ಆ ದಿನದಿಂದಲೆ 'ಪಾನೀಯ ಸೇವೆ' ಆರಂಭಿಸಲು ಹೇಳುವುದಾಗಿ ನುಡಿದಿದ್ದಳು. ಅದೆ ಹೊತ್ತಿಗೆ ಅವಳು ಪೋನ್ ಮಾಡಿ ಕರೆದ ಹೆಣ್ಣು ಬಂದ ಸದ್ದಾಗಿ, ತಿರುಗಿ ನೋಡಿದರೆ - ಫಳಫಳನೆ ಹೊಳೆವ ಮುಗುಳ್ನಗೆಯೊಂದಿಗೆ ಅಲ್ಲಿ ನಿಂತಿದ್ದವಳೆ ಕುನ್. ಸೂ.. ಅವಳನ್ನು ನೋಡಿದ್ದು, ಭೇಟಿಯಾಗಿದ್ದು ಅದೆ ಮೊದಲ ಬಾರಿ... ಆ ಕ್ಷಣದಲ್ಲೆ ಮಾತುಕತೆಯೆಲ್ಲಾ ಮುಗಿದು, ಅಲಿಖಿತ ಕಾಂಟ್ರಾಕ್ಟಿನ ನೀತಿ ನಿಯಮಾವಳಿಯೆಲ್ಲ ಪರಸ್ಪರ ಒಪ್ಪಿತವಾಗಿ, ಅವಳ ಕೈಗೆ ಮೊದಲ ತಿಂಗಳ ಅಡ್ವಾನ್ಸೂ ಕೊಟ್ಟುಬಿಟ್ಟಿದ್ದ - ಬೆಳಗಿನ ಹೊತ್ತು ಕಾಫಿ ಮತ್ತು ಮಧ್ಯಾಹ್ನಕ್ಕೆ ಟೀ. ಹೊರಗೆ ಕೊಡುತ್ತಿದ್ದ ಮೂವತ್ತು ಬಾತಿಗೆ ಲೆಕ್ಕ ಹಾಕಿದರೆ ಹೊತ್ತಿಗೆ ಐದು ಬಾತಿನ ಈ 'ಡೀಲ್' ಬಹಳ ಆಕರ್ಷಕವಾಗಿಯು ಇತ್ತು - ಅದೂ ಸುಂದರ ಹೆಣ್ಣೊಂದರ ದರ್ಶನ ಸಹಿತ. ಮತ್ತೆ ವಾಪಸು ಸೀಟಿಗೆ ಬಂದು ಈ ಕಥೆಯೆಲ್ಲಾ ಹೇಳುತ್ತಿದ್ದ ಹಾಗೆ ಮತ್ತಿಬ್ಬರು ತಕ್ಷಣವೆ 'ಕಾಫಿ ಕ್ಲಬ್ಬಿನ' ಮೆಂಬರ್ಶಿಪ್ಪಿಗೆ ಅರ್ಜಿ ಗುಜರಾಯಿಸಿದ್ದರು. ದುಡ್ಡು ಬಿಚ್ಚಲು ಸದಾ ತಿಣುಕಾಡುವ ವೆಂಕಟಮೂರ್ತಿ ತಾನೊಲ್ಲೆ ಎಂದುಬಿಟ್ಟ. ಕುನ್. ಸೂ ನೋಡಲು ಮಾತ್ರವಷ್ಟೆ ಸುಂದರವಾಗಿದ್ದಲ್ಲದೆ, ಅವಳ ಕಾಫಿ, ಟೀಗಳು ಅಷ್ಟೆ ಸೊಗಸಾಗಿದ್ದವು. ದಿನವೂ ಚಪ್ಪರಿಸಿಕೊಂಡು ಕುಡಿಯುತ್ತಿದ್ದೆವೆಂದೊ ಅಥವಾ ಅವಳೆದುರಿಗೆ ಕಳಪೆ ಕಾಣಬಾರದೆಂದೊ - ಕೊನೆಗೊಂದು ವಾರದ ನಂತರ ಅವನೂ ಕ್ಲಬ್ಬಿನ ಮೆಂಬರನಾಗಿ ಸೇರಿ, ಎಲ್ಲರೂ ಅವಳ ಕಾಫಿ ಕ್ಲಬ್ಬಿನ ಗಿರಾಕಿಗಳಾದಂತಾಗಿತ್ತು..

ಈ ಹಿನ್ನಲೆಯ ಕಾರಣದಿಂದಲೆ ಶ್ರೀನಾಥನಿಗೆ ಅವಳ ಪರಿಚಯ ಚೆನ್ನಾಗಿತ್ತು - ದಿನವೂ ಕುಡಿಯುವ ಕಾಫಿ, ಟೀ ಒಡನಾಟದಿಂದಾಗಿ. ಇವನಿಗೆ ಥಾಯ್ ಬರದ ಕಾರಣ ಏನು ಮಾಡಲೂ ಇನ್ನೊಬ್ಬರ ನೆರವು ಬೇಕಾಗುತ್ತಿತ್ತು. ಅವಳಿಗೊ ಇಂಗ್ಲೀಷಿನ 'ಯೆಸ್' 'ನೊ' ಗಳೂ ಸರಿಯಾಗಿ ತಿಳಿಯದೆ ಥಾಯ್ ನಲ್ಲೆ ಬಂದು ಏನೇನೊ ಮಾತಾಡುತ್ತಿದ್ದಳು. ಅವಳೇನು ಪ್ರಶ್ನೆ ಕೇಳುತ್ತಿದ್ದಾಳೊ, ಅಥವಾ ಬೇರೇನಾದರೂ ಹೇಳುತ್ತಿದ್ದಾಳೊ ಅನ್ನುವುದೂ ತಿಳಿಯದೆ ಬರಿ ಪೆದ್ದು ಮುಖದಲ್ಲಿ ಅವಳ ಮಾತು ಕೇಳುತ್ತ , ಮೊಗ ದಿಟ್ಟಿಸುತ್ತ  ಕೂತಿದ್ದೆ ಹೆಚ್ಚು.  ತಾನಾಡುವ ಮಾತೇನೂ ಅರ್ಥವಾಗದೆಂದು ತಿಳಿಯಲೆ ಅವಳಿಗೆ ಒಂದೆರಡು ದಿನ ಹಿಡಿಯಿತು. ಆಗಿನಿಂದ ಬರಿಯ ಸನ್ನೆಯ ಭಾಷೆಗಿಳಿಯಿತು ಅವರ ಸಂಭಾಷಣೆ. ಆದರೂ, ತನ್ನ ಸುಂದರ ರೂಪನ್ನು, ಮೊಗವನ್ನು ಕದ್ದು ಕದ್ದು ನೋಡುವ ಗಂಡಸಿನ ಬಲಹೀನ ಮನಸ್ಸತ್ವ, ಅವಳ ಸೂಕ್ಷ್ಮ ಅಂತರಾಳಕ್ಕರಿವಾಯ್ತೊ ಏನೊ - ಒಂದು ತರಹದ ನಾಚಿಕೆ, ಹೆಮ್ಮೆ, ಬಿಂಕ ಬೆರೆತ ಭಾವದಲ್ಲಿ ಬಂದಾಗೆಲ್ಲ ಕಣ್ಣಲ್ಲೆ ನಗುತ್ತಾ, ಅವನೆಡೆಗೊಂದು ಕೊಂಕು ನೋಟ ಬೀರುತ್ತಾ ನಗೆಯ ಮಲ್ಲಿಗೆಯರಳಿಸುವುದು ನಡೆದೆ ಇತ್ತು. ಅದೆ ಹೊತ್ತಿನಲ್ಲಿ ಕಾಫಿ, ಟೀ ಲೋಟ ಟೇಬಲಿನ ಮೇಲಿಡಬಿಡದೆ ಕೈಗೆ ತೆಗೆದುಕೊಳ್ಳುತ್ತಾ ಆ ನೆಪದಲ್ಲೆ ಕರಸ್ಪರ್ಷವನ್ನನುಭವಿಸುವುದು, ಅವಳೂ ಸರಕ್ಕನೆ ಕೈ ಎಳೆದುಕೊಂಡು ತುಂಟ ಕೊಂಕು ನಗೆ ಚೆಲ್ಲುತ್ತಾ ಹೋಗುವುದು ನಡೆದೆ ಇತ್ತು. ಅದೇನು ಎಲ್ಲರ ಬಳಿಯು ಇದು ಹೀಗೆ ಆಗುತ್ತಿತ್ತೊ ಅಥವಾ ಇವನ ಹತ್ತಿರ ಮಾತ್ರವೊ ಎಂದು ಎಷ್ಟೊ ಬಾರಿ ಅನುಮಾನವೂ ಆಗಿಬಿಡುತ್ತಿತ್ತು. ಆ ದೈನಂದಿನ ಒಡನಾಟದ ಸಲಿಗೆಯಿಂದಾಗಿ ತಿಂಗಳಲ್ಲಿ ಕೆಲ ದಿನ ಮೀಟಿಂಗಿನ ಅಥವಾ ಇನ್ನಾವುದೊ ಕಾರಣದಿಂದ ಕಾಫಿ, ಟೀ ಕುಡಿಯದೆ ಇದ್ದಾಗ್ಯೂ ತಿಂಗಳ ಮೊತ್ತದ ಹಣವನ್ನು ಲೆಕ್ಕ ಹಾಕದೆ ಕೊಟ್ಟುಬಿಡುತ್ತಿದ್ದ, ಅದೆಷ್ಟೋ ಬಾರಿ... ಆ ದಿನ ವಾಕಿಂಗ್ ಸ್ಟ್ರೀಟಿನಲ್ಲಿ ಅವಳ ದನಿ ಕೇಳಿ ಅವಳ ಮುಖ ಕಂಡಾಗ, ಇವನ ಮುಖದ ಮಂದಹಾಸ ಚಂದ್ರಹಾಸವಾಗಿದ್ದು ಈ ಎಲ್ಲಾ ಪರಿಚಯ, ಒಡನಾಟದ ಹಿನ್ನಲೆಯ ಕಾರಣದಿಂದಲೆ...

ಸಿಲೋಮ್ ರಸ್ತೆಯಲ್ಲಿ ಅವಳನ್ನು ಆಕಸ್ಮಿಕವಾಗಿ ಕಂಡಾಗ ಅವನಿಗರಿವಿಲ್ಲದೆಯೆ ಅವನ ಮುಖ ಪ್ರಪುಲ್ಲಿತವಾಗಿತ್ತು. ಅವಳ ಬಿರಿದ ಹೂವಿನ ನಗುಮೊಗ ನೋಡುತ್ತಲೆ ಶ್ರೀನಾಥನಲ್ಲೂ ಆಯಾಚಿತವಾಗಿ ಕಿರುನಗೆಯೊಂದರಳಿ, ಬಾಯಿಂದ ತನ್ನಂತಾನೆ ಥಾಯಿ ಶೈಲಿಯಲ್ಲೆ ರಾಗದಲ್ಲಿ  -'ಸವಾಡೀ ಕಾಪ್' ಹೊರಬಿತ್ತು. ಮಾರುತ್ತರವಾಗಿ ಅವಳ ಬಾಯಿಂದಲೂ 'ಸವಾಡೀ ಕಾ...' ಉದ್ದನೆಯ ರಾಗದ ದನಿಯಲ್ಲಿ ಹೊರಬಿತ್ತು. 'ಸವಾಡಿ' ಎನ್ನುವುದು ಥಾಯಿ ಭಾಷೆಯ ನಮಸ್ಕಾರದಂತೆ ದಿನದ ಯಾವ ಹೊತ್ತಿನಲ್ಲಿ ಬೇಕಾದರೂ ಬಳಸಬಹುದು. ಗಂಡಸರಾದರೆ ಜತೆಗೆ 'ಕಾಪ್' ಸೇರಿಸುತ್ತಾರೆ. ಹೆಂಗಸರಾದರೆ ಬರಿ ' ಕಾ' ಸೇರಿಸುತ್ತಾರೆ. ಬಂದ ಹೊಸದರಲ್ಲಿ ಇದನ್ನು ಉಪಯೋಗಿಸುವ ಉತ್ಸಾಹದಲ್ಲಿ ಸಿಕ್ಕಿದ ಗಂಡಸರೆಲ್ಲರಿಗೂ 'ಸವಾಡಿ ಕಾಪ್' ಅಂದದ್ದೆ ಅಂದದ್ದು...ಅವರು ಖುಷಿಯಿಂದ ಮುಗುಳ್ನಕ್ಕು 'ಸವಾಡಿ ಕಾಪ್' ಎಂದು ಮಾರುತ್ತರಿಸಿದಾಗ ಹೆಮ್ಮೆಯಿಂದ ಸಹೋದ್ಯೋಗಿಗಳತ್ತ ನೋಡಿದ್ದ ಶ್ರೀನಾಥ.. ಅದೆ ರೀತಿ ಪರಿಚಿತ ಮುಖದ ಆಫೀಸಿನ ಹೆಂಗಸರು ಎದುರು ಸಿಕ್ಕಾಗ 'ಸವಾಡಿ ಕಾ..' ಎಂದು ಹೇಳಿದರೆ, ಯಾಕೊ ಅವರೆಲ್ಲ ಮಾರುತ್ತರಿಸದೆ ಮುಸಿಮುಸಿ ನಗುತ್ತ ಓಡಿಹೋಗಿಬಿಟ್ಟಿದ್ದರು. ಯಾಕೊ ಈ ಜನರ ಸಂಸ್ಕೃತಿಯಲ್ಲಿ ನಾಚಿಕೆ, ಸಂಕೋಚ ನಮ್ಮವರಿಗಿಂತಲೂ ಹೆಚ್ಚಿರುವಂತಿದೆ - ಅದರಲ್ಲೂ ವಿದೇಶಿಯರ ಜತೆ ಅಂದುಕೊಳ್ಳುತ್ತಿರುವಾಗಲೆ, ಯಾರೊ ಹೇಳಿಕೊಟ್ಟಿದ್ದರು: ಗಂಡಸರು ಯಾವಾಗಲೂ ಗಂಡಸರಿರಲಿ, ಹೆಂಗಸರಿರಲಿ 'ಕಾಪ್' ಅನ್ನೆ ಸೇರಿಸಬೇಕು ಎಂದು! ಹಾಗೆಯೆ ಹೆಂಗಸರು ಸದಾ 'ಕಾ' ಸೇರಿಸಬೇಕು ಎಂದು ಗೊತ್ತಾದಾಗ ಕುಗ್ಗಿಯೆಹೋಗಿದ್ದ, ಎಷ್ಟೊಂದು ಮಹಿಳಾ ಸಹೋದ್ಯೋಗಿಗಳ ಜತೆ ಆಗಲೆ 'ಕಾ' ಹೇಳಿ ಪೆದ್ದಾಗಿಬಿಟ್ಟೆನಲ್ಲಾ ಎಂದು. ಹಾಗೆಯೆ ಅವರು ಮುಸಿ ಮುಸಿ ನಗುತ್ತ ಓಡಿಹೋಗುತ್ತಿದ್ದಕ್ಕೆ ಕಾರಣವೂ ಆಗ ಅರಿವಾಗಿತ್ತು.. ಹಾಗೆ 'ಕಾ' ಹೇಳಿಸಿಕೊಂಡವರಲ್ಲಿ ಕುನ್ ಸು ಕೂಡ ಒಬ್ಬಳಾಗಿದ್ದಾಳು..ಆದರೆ ಅವಳದನ್ನು ಕೇಳಿ ನಕ್ಕು ಓಡಿ ಹೋಗುವ ಬದಲು, ಬಿದ್ದು ಬಿದ್ದು ನಗತೊಡಗಿದ್ದಳು. ಆ ನಗುವಿಂದಲೆ ಅನುಮಾನವಾಗಿ, ಶ್ರೀನಾಥ ಅದರ ಸರಿಯಾದ ಪ್ರಯೋಗವನ್ನು ವಿಚಾರಿಸಿ ಖಚಿತಪಡಿಸಿಕೊಳ್ಳಲು ಹೋಗಿದ್ದು..!

ಇದೆಲ್ಲ ಹಿನ್ನಲೆಯಲ್ಲೊ ಏನೊ ಆಫೀಸಿನಲ್ಲಿ ಚೆನ್ನಾಗೆ ಪರಿಚಿತಳಾಗಿದ್ದ ಕುನ್.ಸೂ ವಾಕಿಂಗ್ ಸ್ಟ್ರೀಟಿನಲ್ಲಿ ಸಿಕ್ಕಾಗ ಅಪರಿಚಿತೆಯಂತೆ ಓಡದೆ ಪರಿಚಯದ ನಗೆ ಬೀರುತ್ತ ಮಾತನಾಡಿಸಿದ್ದು. ಹಾಗೆ ನಗುತ್ತಲೆ ಹತ್ತಿರ ಬಂದವಳು ಅವನ ಬಲಕ್ಕಿದ್ದ ಆ ಹುಡುಗನತ್ತ ಮತ್ತು ತೂಗು ಹಾಕಿದ್ದ ಚಿತ್ರಗಳನ್ನು ತೋರಿಸುತ್ತ, ಮತ್ತೆ 'ಸುವೈ ಮಾಕ್' ಎಂದಳು. 'ಸುವೈ ಮಾಕ್' ಎಂದರೆ ಥಾಯಿನಲ್ಲಿ 'ತುಂಬಾ ಸುಂದರ' ಎಂದರ್ಥ - ಅವಳ ಇಂಗಿತ ಹುಡುಗನಾದರೂ ಚಿತ್ರ ಚೆನ್ನಾಗಿ ಬರೆಯುತ್ತಾನೆ ಎಂದಾಗಿತ್ತು. ಅಲ್ಲಿ ತೂಗು ಹಾಕಿದ್ದ ಚಿತ್ರಗಳು ನಿಜಕ್ಕೂ ಚೆನ್ನಾಗಿಯೆ ಇದ್ದವು. ಜತೆಗೆ ಆ ಹುಡುಗನೂ, 'ಸೀ ಸಿಪ್ ಬಾತ್, ಸೀ ಸಿಪ್ ಬಾತ್..'ಎಂದು ಬರಿ ನಲವತ್ತೆ ಬಾತಿಗೆ ಚಿತ್ರ ಮಾಡಿಕೊಡುವೆ ಎಂಬ ಇಂಗಿತ ಕೊಡುತ್ತಿದ್ದ. ನಿಜವಾಗಿಯೂ ಅಲ್ಲಿ ಯಾರು ಅಷ್ಟು ಕಮ್ಮಿಗೆ ಮಾಡುತ್ತಿರಲಿಲ್ಲ - ಅದರೆ ಚಿಕ್ಕ ಬಾಲಕನೆಂದೊ ಏನೊ, ಗಿರಾಕಿಗಳನ್ನು ಹೊಂದಿಸಲು ಅವನು ಆ ದರಕ್ಕಿಳಿಯಬೇಕಾಗಿತ್ತೇನೊ...? ಸರಿ, ಅವಳ ಇಂಗಿತ ಅರ್ಥವಾದವನಂತೆ ಆ ಹುಡುಗನಿಗೆ ಸಹಾಯವಾಗಲೆಂದು ಐವತ್ತು ಬಾತ್ ಕೊಟ್ಟು ಅಲ್ಲಿದ್ದ ಕುರ್ಚಿಯ ಮೇಲೆ ಸಿದ್ದನಾಗಿ ಕುಳಿತ. ಚಿತ್ರ ಬರೆಸಿಕೊಂಡರೆ ಹುಡುಗನಿಗೂ ಗಿರಾಕಿ ಸಿಕ್ಕಿ ಸಹಾಯಕವಾಗುವುದೆಂಬ ಶಿಫಾರಸಿನ ಸುಳಿವು ಅವಳ ಇಂಗಿತದಲ್ಲಿ ಅಡಗಿತ್ತು. ಶ್ರೀನಾಥನಿಗೆ ಬರೆಸಿಕೊಳ್ಳುವ ಹವಣಿಕೆಯೇನೂ ಇರದಿದ್ದರೂ ಅವಳ ಪ್ರೇರಣೆಯಿಂದ 'ಬರಿ ನಲ್ವತ್ತು ಬಾತ್ ತಾನೆ? ಯಾಕೆ ಬರೆಸಬಾರದು ?' ಅನಿಸಿತು. ಅಲ್ಲದೆ ಅವಳ ಮಾತಿಗಿತ್ತ ಬೆಲೆಯಿಂದ ಅವಳಿಗೂ ಖುಷಿಯಾಗುತ್ತದಲ್ಲ? 

ಅದೇನು ಬರೆಯುವನೊ ನೋಡುವ ಕುತೂಹಲದಿಂದ ಕುನ್. ಸೂ ಸಹ ಹತ್ತಿರದ ಸ್ಟೂಲೊಂದರಲ್ಲಿ ಎದುರಿಗೆ ಕುಳಿತಳು. ನೇರವಾಗಿ ಕುಳಿತವಳ ಮೇಲೆ ಹತ್ತಿರದಲ್ಲಿದ್ದ ಫ್ಲಾಷ್ ಲೈಟೊಂದರ ಪ್ರಖರ ಬೆಳಕು ಬಿದ್ದು, ಮೊದಲೆ ಸುಂದರವಾಗಿದ್ದ ಅವಳ ಮೊಗವನ್ನು ಮತ್ತಷ್ಟು ಮನಮೋಹಕಗೊಳಿಸಿ, ಅವಳ ಚೆಲುವಿನ ಸೊಬಗನ್ನು ದ್ವಿಗುಣಗೊಳಿಸುವಂತೆ ಎತ್ತಿ ತೋರಿಸುತ್ತಿತ್ತು. ಅದನ್ನು ನೋಡುತ್ತಲೆ ಶ್ರೀನಾಥನಿಗೆ, ಕೆಲಸದವಳಾದರೂ ಎಂಥಾ ಸುಂದರ ಮೊಗವನ್ನು ಕೊಟ್ಟಿದ್ದಾನೆ ಆ ಭಗವಂತ ಎಂದುಕೊಂಡ ಮನಸಿನಲ್ಲೆ ? ನಿಜಕ್ಕೂ 'ಸುವೈ ಮಾಕ್' ಎಂದು ಹೇಳಿಕೊಂಡಿತು ಅದೆ ಮನಸು. ಆ 'ಸುವೈ ಮಾಕ್' ಪದ ಕೂಡ ಅವಳಿಂದಲೆ ಕಲಿತದ್ದು ನೆನಪಾಯ್ತು - ಒಂದೆರಡು ಬಾರಿ ಅವಳು ಕಾಫಿ ತಂದಿಟ್ಟು ಹೋದ ಮೇಲೆ ಹತ್ತಿರವಿದ್ದ ಸಹೋದ್ಯೋಗಿಯೊಬ್ಬಳಿಗೆ, 'ಶೀ ಈಸ್ ಬ್ಯೂಟಿಫುಲ್' ಎಂದಿದ್ದ. ಆಗ ಆಕೆಯು 'ಯೆಸ್ ..ಯೆಸ್...ಸುವೈ ಮಾಕ್..' ಎಂದಿದ್ದಳು. ಆಗ ಆಕೆಯನ್ನೆ ಅದರ ಅರ್ಥ ಕೇಳಿದಾಗ 'ಸುವೈ' ಅಂದರೆ 'ಸುಂದರ' , 'ಮಾಕ್' ಎಂದರೆ 'ತುಂಬಾ' ಎಂದು ವಿವರಿಸಿದ್ದಳು. ಮುಂದಿನ ಬಾರಿ ಕಾಫಿ ತಂದಾಗ, 'ಕುನ್ ಸುವೈ ಮಾಕ್..' ಎಂದು ಹೇಳಿ, ಅವಳು ನಾಚಿ ಓಡಿ ಹೋಗುವಂತೆ ಮಾಡಿದ್ದು ನೆನಪಾಗಿ, ಮತ್ತೆ ತುಟಿಯಂಚಲಿ ಕಿರುನಗೆ ಮೂಡಿತು. ಈ ನಡುವೆ ಅವಳ ಮಾತಿಗೆ ಬೆಲೆಯಿತ್ತು ಬರೆಸುತ್ತಿರುವನೆಂಬ ಖುಷಿಗೊ ಏನೊ, ಜತೆಗೆ ಅವನಿಗೆ ಭಾಷೆ ಬರದೆಂಬ ಪ್ರಜ್ಞಾಪೂರ್ವಕ ಅರಿವಿನಿಂದಲೊ - ಚಿತ್ರ ಬರೆಸುವ ಜವಾಬ್ದಾರಿಯನೆಲ್ಲಾ ತಾನೆ ಹೊತ್ತುಕೊಂಡಂತೆ ಅವಳು ಆ ಹುಡುಗನಿಗೆ ಏನೇನೊ ನಿರ್ದೇಶನ ಕೊಡುತ್ತಿದ್ದ ಹಾಗೆ, ಅವನು ಚಕಚಕನೆ ಚಿತ್ರ ಮೂಡಿಸತೊಡಗಿದ. ಅದರಲ್ಲೂ ತನ್ನ ಕಿರುನಗೆಯ ಚಿತ್ರವೆ ಮೂಡತೊಡಗಿದಾಗ ಬಹುಶಃ ಇದು ಅವಳ ಕೈವಾಡವೆ ಇರಬೇಕೆನಿಸಿತು - ಅವಳೆ ಹಾಗೆ ಬರೆಯಲು ಹೇಳಿರಬೇಕೆಂದು. ನೋಡುನೋಡುತ್ತಿದ್ದಂತೆ ಅಲ್ಲಿ ಅದ್ಭುತ ಚಿತ್ರವೊಂದು ಮೂಡಿದಾಗ ಶ್ರೀನಾಥನಿಗೆ ದಿಗ್ಭ್ರಮೆಯಾಗಿತ್ತು ಆ ಹುಡುಗನ ಕಲಾ ನೈಪುಣ್ಯತೆಯನ್ನು ಕಂಡು.

ನೋಡಲು ಅನುಭವವಿಲ್ಲದ ಚಿಕ್ಕ ಹುಡುಗನಂತೆ ಕಂಡರೂ ಆ ಹುಡುಗ ನಿಜಕ್ಕೂ ಅಪ್ರತಿಮ ಕಲಾಕಾರನಾಗಿ ಕಂಡ ಶ್ರೀನಾಥನಿಗೆ. ಅವನು ಚಿತ್ರ ಬಿಡಿಸಿದ ವೇಗ, ಚಾಕಚಕ್ಯತೆ, ಕುಶಲತೆ ಮಾತ್ರವಲ್ಲದೆ ಚಿತ್ರದ ಫಲಿತ ಗುಣಮಟ್ಟವನ್ನು ನೋಡಿದಾಗ ತಾನು ಕೊಡುವ ಹಣ ತೀರಾ ಕ್ಷುಲ್ಲಕವಾಗಿ ಕಂಡಿತು. ಅವನೊಬ್ಬ ಅಪ್ಪಟ ಕಲಾವಿದನಂತೆ ಕಂಡರೂ ಯಾಕೆ ಅವನ ಮುಂದೆ ಜನಸಂದಣಿಯಿರಲಿಲ್ಲವೊ ಅರ್ಥವಾಗಲಿಲ್ಲ. ಬಹುಶಃ ಕಸುಬಿಗೆ ತೀರಾ ಹೊಸಬನೆಂದೊ, ಹುಡುಗನೇನು ಬರೆಯಬಲ್ಲಾ ಎಂಬ ಉಢಾಫೆಗೊ ಕಡಿಮೆ ದುಡ್ಡಿದ್ದರೂ ಅಲ್ಲಿಗೆ ಹೆಚ್ಚು ಜನ ಬರುತ್ತಿದ್ದ ಹಾಗೆ ಕಾಣಲಿಲ್ಲ. ಅಥವಾ ಅವನಿಲ್ಲಿಗೆ ತೀರ ಹೊಸದಾಗಿ ಬಂದು ಸೇರಿ ತನ್ನ ಅವಕಾಶಾಸ್ಥಾನ ಸೃಷ್ಟಿಸಲು ಹೆಣಗುತ್ತಿರುವ ಪ್ರಾರಂಭಿಕ ಹಂತದಲ್ಲಿರಬೇಕು. ಹೇಗಿದ್ದರೂ ಸರಿ, ಅವನ ಚಿತ್ರ ಮಾತ್ರ ಬರಿ ಚಿತ್ರವಾಗಿರದೆ ಒಂದು ದೃಶ್ಯ ಕಾವ್ಯವಾಗಿ, ಅಮೋಘವಾಗಿ ರೂಪುಗೊಂಡಿತ್ತು. ಹಿನ್ನಲೆಯಲ್ಲಿ ಚಿತ್ರಿಸಿದ್ದ ಅದೆ ಸಿಲೋಮ್ ವಾಕಿಂಗ್ ಸ್ಟ್ರೀಟ್ ಹಿನ್ನಲೆಯಂತೂ ಅತ್ಯದ್ಭುತವಾಗಿ ಮೂಡಿ ಬಂದಿತ್ತು. ಆ ಖುಷಿಗೆ ಜೇಬಿನಿಂದ ಮತ್ತೊಂದು ಐವತ್ತರ ನೋಟು ತೆಗೆದು ಕೈಗಿತ್ತಾಗ, 'ಕಾಪ್ ಕುನ್ ಕಾಪ್..'ಎಂದು ಥಾಯ್ ರಾಗದಲ್ಲೆ ನುಡಿದು, ಕೈ ಜೋಡಿಸಿ ಎದೆಯ ಹತ್ತಿರ ತಂದು ನಮಸ್ಕರಿಸಿದ ಆ ಕಲಾವಿದ. ಸಾಲದೆಂಬಂತೆ, ಆ ಹೆಚ್ಚು ಹಣ ಪಡೆದ ಋಣ ತೀರಿಸಲೊ ಎಂಬಂತೆ ಹಾಗೆ ಕೂತಿರುವಂತೆ ಸೂಚಿಸುತ್ತಾ, ಮತ್ತೊಂದು ಚಿತ್ರದ ಸ್ಕೆಚ್ ಹಾಕತೊಡಗಿದ. ಈ ಬಾರಿ ಬರಿ ಶ್ರೀನಾಥನ ಚಿತ್ರದ ಬದಲು ಅವನ ಎದುರು ಕೂತಿದ್ದ ಕುನ್. ಸೂ ಳನ್ನು ಕೂಡ ಜತೆಗೆ ಸೇರಿಸಿ, ಇಬ್ಬರು ವಾಕಿಂಗ್ ಸ್ಟ್ರೀಟಿನ ಬೀದಿಯ ಮಧ್ಯೆ ಸ್ಟೂಲಿನ ಮೇಲೆ ಕೂತಿರುವ ಚಿತ್ರವನ್ನೆ ಬಿಡಿಸತೊಡಗಿದ. ಚಿತ್ರ ಅದೆಷ್ಟು ಸರಳವಾಗಿ, ಸ್ವಾಭಾವಿಕವಾಗಿ ಮೂಡತೊಡಗಿತೆಂದರೆ ಅದನ್ನು ಒಮ್ಮೆ ನೋಡಿದರೆ ಸಾಕು ಇಡಿ 'ವಾಕಿಂಗ್ ಸ್ಟ್ರೀಟ್' ರಸ್ತೆಯ ಅನುಭವವೆಲ್ಲ ಒಂದೆ ಬಾರಿಗೆ ಕಣ್ಣಿಗೆ ಕಟ್ಟುವಂತಾಗುತ್ತಿತ್ತು. ಪಕ್ಕದಲ್ಲಿದ್ದ ಸುಂದರಿ ಹೆಣ್ಣನ್ನು, ನೋಡುತ್ತ ಅವಳ ಸೌಂದರ್ಯವನ್ನು ಸವಿಯುವ ಅವಕಾಶವನ್ನು ಮರೆತು, ಅವನ ಚಿತ್ರ ಬರಹವನ್ನೆ ತದೇಕಚಿತ್ತನಾಗಿ ನೋಡುತ್ತ ಕುಳಿತಿದ್ದ ಶ್ರೀನಾಥ, ಏನೊ ನೆನಪಾದವನಂತೆ ಆ ಹುಡುಗನನ್ನು ಚಿತ್ರದಲ್ಲಿ ಸೇರಿಸಲಾಗುವುದೆ ಎಂದು ಸಂಜ್ಞೆಯಲ್ಲಿ ಕೇಳಿದ. ತನ್ನನ್ನು ನೋಡದೆ ತನ್ನನ್ನೆ ಹೇಗೆ ಬರೆಯುವನೊ ಎಂದು ನೋಡುವ ಕುತೂಹಲ ಮಾತ್ರವಲ್ಲದೆ, ಬರಿ ತಾನು ಮತ್ತು ಕುನ್.ಸು ಇರುವ ಚಿತ್ರಕ್ಕಿಂತ ಅವನು ಇದ್ದರೆ ಹೆಚ್ಚು ಸುಲಭದಲ್ಲಿ ಯಾರಿಗೆ ಬೇಕಾದರೂ ತೋರಿಸಬಹುದೆಂಬ ಜಾಣತನವೂ ಸೇರಿತ್ತೊ ಏನೊ? ಆ ಹುಡುಗ ತಲೆಯಾಡಿಸಿ ತನ್ನನ್ನು ಸೇರಿಸಿಯೆ ಬರೆಯತೊಡಗಿದಾಗ ಅವನ ಕಲಾ ಪ್ರತಿಭೆಗೆ ಇನ್ನೊಂದಷ್ಟು ದುಡ್ಡೆತ್ತಿ ಕೊಡುವುದಲ್ಲದೆ ಬೇರೇನೂ ಮಾಡಲೂ ತೋಚಲಿಲ್ಲ ಶ್ರೀನಾಥನಿಗೆ..

ಆ ಅದ್ಭುತ ಚಿತ್ರಗಳನ್ನು ತೆಗೆದುಕೊಂಡು ಅದನ್ನು ಪ್ಲಾಸ್ಟಿಕ್ಕಿನ ಪಾರದರ್ಶಕ ತೆಳು ಚೀಲವೊಂದಕ್ಕೆ ಸೇರಿಸಿ ಕೈಗಿತ್ತಾಗ ಅದನ್ನು ಹಾಗೆ ಎತ್ತಿಕೊಂಡು ಹೊರಡಲನುವಾದವನನ್ನು ಹಾಗೆಯೆ ಕೈ ಹಿಡಿದೆಳೆದುಕೊಂಡು ಹತ್ತಿರದಲ್ಲಿದ್ದ ಮತ್ತೊಂದು ಬೀದಿಯಂಗಡಿಯತ್ತ ಎಳೆದೊಯ್ದಿದ್ದಳು ಕುನ್. ಸೂ... ಯಾಕೆ ಹೀಗೆ ಎಳೆಯುತ್ತಿರುವಳೆಂದು ಆಲೋಚನೆಗಿಳಿವ ಮೊದಲೆ ಕಣ್ಣಿಗೆ ಬಿದ್ದಿತ್ತು, ತೆಳು ಹಳದಿ ಬಣ್ಣದ ಮರದ ತುಂಡುಗಳನ್ನು ಬಳಸಿ ಅಚ್ಚುಕಟ್ಟಾಗಿ ತಯಾರಿಸಿದ ಬಗೆಬಗೆಯ ಪೋಟೊ ಫ್ರೇಮುಗಳಿಂದ ತುಂಬಿಹೋಗಿದ್ದ ಅಂಗಡಿ. ಅದರ ಮೇಲೆಲ್ಲ ಬಣ್ಣ ಬಣ್ಣದ ಚಿತ್ತಾರ, ವಿನ್ಯಾಸಗಳನ್ನು ತುಂಬಿದ್ದರೂ ಸರಳವಾಗಿಯೆ, ಅಮೋಘವಾಗಿ ಕಾಣುತ್ತಿದ್ದವು. ಇವನ ಕೈಲಿದ್ದ ಚಿತ್ರಗಳನ್ನೆತ್ತಿಕೊಂಡು ಅಲ್ಲಿದ್ದ ಹೆಂಗಸೊಬ್ಬಳ ಜತೆ ರಾಗವಾದ ಥಾಯ್ ಭಾಷೆಯಲ್ಲಿ ಏನೊ ಹೇಳುತ್ತಿದ್ದಂತೆ ಆ ಹೆಂಗಸು ಹತ್ತೆ ನಿಮಿಷದಲ್ಲಿ ಅವೆರಡು ಚಿತ್ರಕ್ಕೆ ಸೂಕ್ತವಾದ ಫ್ರೇಮುಗಳನ್ನು ಹುಡುಕಿ ಸುಂದರವಾದ ಟೇಬಲ್ಲಿನ ಮೇಲಿಡಬಹುದಾದ ರೂಪಕ್ಕೆ ಪರಿವರ್ತಿಸಿ ಕೊಟ್ಟೆಬಿಟ್ಟಳು. ಅದನ್ನೆ ನೋಡುತ್ತಿದ್ದವನನ್ನು 'ಸಾಮ್ ಸಿಪ್ (ಮೂವತ್ತು)' ಎಂದವಳ ದನಿ ಎಚ್ಚರಿಸಿ, 'ಅರೆ! ಸ್ಥಳೀಯಳಾದ, ಭಾಷೆ ಗೊತ್ತಿರುವ ಇವಳ ಜತೆಗ್ಹೋದರೆ ಎಲ್ಲವೂ ಅಗ್ಗವಲ್ಲಾ' ಅನ್ನುವ ಅಚ್ಚರಿಯೊಂದಿಗೆ ಪರ್ಸಿನಿಂದ ಹಣ ಎಣಿಸಿಕೊಟ್ಟ. ಆ ಮೇಲೆ ಜತೆಜತೆಯಲ್ಲೆ ಸಾಗುತ್ತ ಅದೆ ರಸ್ತೆಯಲ್ಲಿ ಹಿಂದಿರುಗುವ ಹಾದಿಯಲ್ಲಿ ಇಬ್ಬರೂ ಸೇರಿ ನಡೆಯುವಾಗ, ತಟ್ಟನೆ ಪಕ್ಕದಲ್ಲಿದ್ದ ಓಣಿಯ ದೊಡ್ಡ ಕಟ್ಟಡದ ಮೂಲೆಯಲಿದ್ದ ಭಾರತೀಯ ರೆಸ್ಟೋರೆಂಟು ಕಣ್ಣಿಗೆ ಬಿದ್ದಾಗ ಅವತ್ತಿನ ಹೊಟ್ಟೆ ಪಾಡು ಅಲ್ಲೆ ತೀರಿಸಿಕೊಳ್ಳಬಹುದಲ್ಲ ಅನಿಸಿತು. ಚಕ್ಕನೆ ಇಷ್ಟೆಲ್ಲ ಸಹಾಯ ಮಾಡಿದಳಲ್ಲ ಅವಳಿಗ್ಯಾಕೆ ಅಲ್ಲಿಗೆ ಆಹ್ವಾನಿಸಬಾರದು ಎನಿಸಿ , ಅವಳತ್ತ ತಿರುಗಿದವನೆ ಕೈಯಿಂದ ಆ ಮೂಲೆಯತ್ತ ತೋರಿಸುತ್ತ, ಬಲದ ಕೈ ಬೆರಳುಗಳ ತುದಿಗಳನ್ನೆಲ್ಲ ಒಟ್ಟುಗೂಡಿಸಿ ತುಟಿಯ ಹತ್ತಿರ ಸುತ್ತಿಸಿ ಆಡಿಸುತ್ತ, ಅವಳತ್ತ ತೋರು ಬೆರಳು ಮಾಡಿ, 'ಅಲ್ಲಿ ತಿನ್ನಲು ಬರುವೆಯ?' ಎನ್ನುವ ಅರ್ಥ ಬರುವಂತೆ ತಲೆ ಕುಣಿಸಿ ಸಂಜ್ಞೆ ಮಾಡಿದ. ಸಾಮಾನ್ಯ ಥಾಯಿ ರೀತಿಯ ಊಟ ತಿಂಡಿಗಳನ್ನೆ ತಿನ್ನುವ ಅವಳಿಗೆ ಇದು ನಿಜಕ್ಕೂ ಹೊಸದಾಗಿರಬಹುದೆಂಬ ಅನಿಸಿಕೆ ಮತ್ತು ಜತೆಗೆ ಈ ರೀತಿಯ ತುಟ್ಟಿಯ ಜಾಗಕ್ಕೆ ಹೋಗಿ ತಿನ್ನಲು ಅವಳ ಆದಾಯದಲ್ಲಿ ಅಸಾಧ್ಯವೆಂಬ ತಿಳುವಳಿಕೆ, ಆ ಗಳಿಗೆಯಲ್ಲಿ ಅವಳನ್ನು ಅಲ್ಲಿಗೆ ಅಹ್ವಾನಿಸಲು ಪ್ರೇರೇಪಿಸಿತ್ತು. ಆದರೂ ಅವಳು ಬರಲು ಒಪ್ಪುವಳೊ ಬಿಡುವಳೊ ಎಂಬ ಸಂದೇಹವಂತೂ ಇತ್ತು. ದಿನಾ ಯಾವುದಾದರೂ ಮಾಂಸದ ಜತೆಯಿಲ್ಲದೆ ಊಟ ಮಾಡದ ಅಲ್ಲಿನ ಜನಕ್ಕೆ ನಮ್ಮವರ ಸಸ್ಯಾಹಾರ ಹಿಡಿಸುವುದೊ ಇಲ್ಲವೊ ಎಂಬ ಅನುಮಾನ ಇದ್ದೆ ಇತ್ತು. ಭಾರತೀಯ ಮಾಂಸಾಹಾರ ಸಿಗುವ ತಾಣಕ್ಕೆ ಹೋದರೂ ಸ್ಥಳೀಯ ಪಾಕ ಪದ್ದತಿಗೂ, ಭಾರತೀಯ ಪದ್ದತಿಗೂ ಇರುವ ಅಜಗಜಾಂತರದಿಂದಾಗಿ ಮೆಚ್ಚಿಕೊಳ್ಳುವರೊ ಇಲ್ಲವೊ ಹೇಳುವುದು ಕಷ್ಟವೆ. ಅವಳಂತೂ ಕಣ್ಣರಳಿಸಿ ಅತ್ತಲೆ ನೋಡುತ್ತ, 'ಮಾಂಗ್ ಸಾ ವಿರಾಟ್?' ಎಂದಳು (ಸಸ್ಯಾಹಾರ ಇರಬೇಕಲ್ಲವೆ?) - ಅವನು ಹೆಚ್ಚು ಬರಿ ಸಸ್ಯಾಹಾರ ಮಾತ್ರವೆ ತಿನ್ನುವುದನ್ನು ಗಮನಿಸಿದ್ದಳೆಂದು ಕಾಣುತ್ತದೆ, ಆ ಆಧಾರದಿಂದ ಈ ರೆಸ್ಟೋರೆಂಟೂ ಸಸ್ಯಾಹಾರಿಯದಿರಬೇಕೆಂದು ಸರಿಯಾಗಿಯೆ ಊಹಿಸಿದ್ದಳು. ಹೌದೆಂದು ತಲೆಯಾಡಿಸಿದವನ ಜತೆ ಹೊರಡುವ ಉತ್ಸಾಹ ತೋರಿದಾಗ ಅವಳೇನು ಇಷ್ಟಪಡುವಳೊ ಇಲ್ಲವೊ ಎಂಬ ಅಳುಕಿನ ಜತೆಗೆ ಗೊತ್ತಿರುವವರಾರಾದರೂ ಕಣ್ಣಿಗೆ ಕಾಣುವರೊ ಎಂದು ಸುತ್ತಲು ಗಮನಿಸುತ್ತಲೆ, ಆ ಮೂಲೆಯತ್ತ ಹೆಜ್ಜೆ ಹಾಕಿದ್ದ, ಅವಳ ಜತೆ ಜತೆಯಲ್ಲೆ.

ಈ ಕಡೆಯ ದೇಶಗಳಲೆಲ್ಲ ಸಸ್ಯಾಹಾರಿಗಳಾಗಿ ಬದುಕುವುದೆಂದರೆ ತುಸು ಕಷ್ಟದ ಕೆಲಸವೆ...ಭಾರತೀಯ ಸಸ್ಯಾಹಾರಿಗಳಿಗಂತೂ ಇನ್ನು ಕಷ್ಟ. ಅದರಲ್ಲು ಥಾಯ್ಲ್ಯಾಂಡಿನಲ್ಲಿ ದಿನ ನಿತ್ಯ ಸಸ್ಯಾಹಾರ ತಿನ್ನುವವರೆಂದರೆ ಬರಿ ಬೌದ್ಧ ಮಾಂಕ್ ಗಳು ಮಾತ್ರ. ಹೀಗಾಗಿ ಯಾರಾದರೂ ಸಸ್ಯಾಹಾರಿಗಳು ಕಣ್ಣಿಗೆ ಬಿದ್ದರೆ ಅಚ್ಚರಿಯಿಂದ ಕಣ್ಣರಳಿಸುತ್ತ ಅವರನ್ನೆ ಮಾಂಕ್ ಗಳೆಂಬ ರೀತಿಯಲ್ಲಿ ಗೌರವಾದರ ತೋರಿಸುತ್ತಾರೆ. ಬಹುಶಃ ಭಾರತದಿಂದ ಇಲ್ಲಿಗೆ ಬಂದು ಭೇಟಿಯಿತ್ತವರಲ್ಲೂ ಬಹುತೇಕ ಸಸ್ಯಾಹಾರಿಗಳನ್ನೆ ನೋಡಿರುವುದರಿಂದ, ಅಲ್ಲದೆ ಅಲ್ಲಿನ ಶೇಕಡಾ ತೊಂಭತ್ತೈದಕ್ಕಿಂತ ಹೆಚ್ಚು ಜನ ಅನುಕರಿಸಿ, ಪರಿಪಾಲಿಸುವ ಬೌದ್ಧ ಧರ್ಮದ ನೈಜ್ಯ ಮೂಲ ಭಾರತದ್ದು ಎಂಬ ಅರಿವಿನಿಂದಲೊ - ಭಾರತದಲ್ಲಿರುವವರೆಲ್ಲ ಸಸ್ಯಾಹಾರಿಗಳೆ ಇರಬೇಕೆಂಬ ಕಲ್ಪನೆಯೂ ಹೆಚ್ಚಿನವರಲ್ಲಿ ಕಾಣುತ್ತದೆ. ಎಷ್ಟೊ ಬಾರಿ ಟೀಮಿನ ಜತೆ ಲಂಚು ಡಿನ್ನರುಗಳಿಗೆ ಹೋದಾಗ ಒಬ್ಬರಲ್ಲ ಒಬ್ಬರು ಈ ಕುರಿತು ಪ್ರಶ್ನೆ ಕೇಳುತ್ತಲೆ ಇರುತ್ತಿದ್ದರು. ಆಗೆಲ್ಲ ಶ್ರೀನಾಥನ ಉತ್ತರವೂ ಹೆಚ್ಚು ಕಡಿಮೆ ಒಂದೆ ಬಗೆಯದಿರುತ್ತಿತ್ತು.. 'ಸಸ್ಯಾಹಾರ ಭಾರತೀಯ ಜೀವನದ ಪ್ರಮುಖ ಅಂಗವಾದರೂ ಅದರರ್ಥ ಎಲ್ಲಾ ಭಾರತಿಯರೂ ಸಸ್ಯಾಹಾರಿಗಳು ಎಂದಲ್ಲ..ಮೊದಲಿಗೆ, ಭಾರತವೆಂದರೆ ಬರಿ ಹಿಂದುಗಳು ಮಾತ್ರವೆ ಇದ್ದಾರೆಂದಲ್ಲ.. ಶೇಕಡಾ ಹದಿನೇಳರ ಆಚೀಚೆ ಮುಸ್ಲೀಮರು, ಶೇಕಡಾ ಹನ್ನೆರಡರಷ್ಟು ಕ್ರಿಶ್ಚಿಯನ್ನರು, ಸಿಕ್ಕರು, ಬೌದ್ದರು, ಜೈನರು..ಹೀಗೆ ಎಷ್ಟೊ ಧರ್ಮಗಳು ಸಂಗಮಿಸಿದ ನೆಲ.. ಪ್ರತಿ ಧರ್ಮದವರು ಅವರವರ ಸಂಪ್ರದಾಯ, ಆಚಾರ ವಿಚಾರ ಆಹಾರ ಪದ್ದತಿಗಳನ್ನು ಅನುಕರಿಸುವ ಸ್ವಾತ್ಯಂತ್ರವಿರುವ ದೇಶ ಭಾರತ. ಹೀಗಾಗಿ ಆಹಾರದ ಕುರಿತು ಯಾವುದೆ ಒಂದು ರೀತಿಯನ್ನೆ ಸಾರ್ವತ್ರಿಕವಾಗಿಸಲಾಗದು.. ಬದಲಿಗೆ ಎಲ್ಲವೂ ಅದರದೆ ರೀತಿಯಲ್ಲಿ ಸಾರ್ವತ್ರಿಕವಾದ ಪದ್ದತಿಗಳೆ...ಅದರಲ್ಲೂ ಭಾರತದ ಜನಸಂಖ್ಯೆಯನ್ನು ಪರಿಗಣಿಸಿದಾಗ. ಅಷ್ಟು ದೊಡ್ಡ ದೇಶದ ಶೇಕಡ ಹನ್ನೆರಡರಷ್ಟು ಭಾಗ ಮಾತ್ರ ಸಂಪೂರ್ಣ ಸಸ್ಯಾಹಾರಿಗಳು. ಮಿಕ್ಕವರೆಲ್ಲ ಮಾಂಸಾಹಾರ ಭಕ್ಷಿಸಬಲ್ಲವರು..' ಇತ್ಯಾದಿ, ಇತ್ಯಾದಿಯಾಗಿ ಪುರಾಣ ಪ್ರವರ ಬಿಚ್ಚಬೇಕಾಗುತ್ತಿತ್ತು ಪ್ರತಿಬಾರಿ - ಅವನಿಗೆ ಅದೆಲ್ಲದರ ಕುರಿತು ಖಚಿತ ಮಾಹಿತಿಯಿರದಿದ್ದರೂ !

ಅದರ ಜತೆಗೆ ಮಾಂಸಾಹಾರಿಗಳಾದರೂ ಅಲ್ಲಿನವರ ಹಾಗೆ ಪ್ರತಿದಿನವೂ ಮಾಂಸ ತಿನ್ನುವ ಪದ್ದತಿ ಭಾರತದ ಮಾಂಸಾಹಾರಿಗಳಲ್ಲಿ, ಅದರಲ್ಲೂ ಮಧ್ಯಮ ಹಾಗು ಕೆಳವರ್ಗಗಳಲ್ಲಿ ಅಪರೂಪವವೆಂದು ಕೇಳಿ ಅವರಿಗೆಲ್ಲ ಸೋಜಿಗವೆನಿಸುತ್ತಿತ್ತು. ಸಾಮಾನ್ಯ ವಾರಕ್ಕೊಮ್ಮೆಯೊ, ಎರಡು ಬಾರಿಯೊ ಮಾಂಸಾಹಾರ ತಂದುಣ್ಣುವ ಜನ ಮಿಕ್ಕ ದಿನ ಏನು ತಾನೆ ತಿಂದು ಬದುಕಬಹುದು ಎಂಬುದೆ ಅವರ ಕುತೂಹಲ... ಸಸ್ಯಾಹಾರವೆಂದರೆ ಬರಿ ಅನ್ನ ತಿಂದೆ ಬದುಕಬೇಕೆಂಬ ಭಾವ ಅವರಲ್ಲಿ. ಆಗೆಲ್ಲಾ ಶ್ರೀನಾಥನಿಗೆ ಭಾರತೀಯ ಸಸ್ಯಾಹಾರದ ಸಿದ್ದಾಂತ, ವೈವಿಧ್ಯ, ಪುಷ್ಟಿದಾಯಕತೆ ಇತ್ಯಾದಿಗಳ ಕುರಿತು ಪ್ರವಚನ ಆರಂಭಿಸಬೇಕಾಗುತ್ತಿತ್ತು - ತಾನಾಗೆ ನೆಟ್ಟಗೆ ಬರಿ ಅನ್ನ ಮಾಡಿಕೊಳ್ಳಲು ಬರದಿದ್ದರೂ..! ಜತೆಯಲ್ಲೆ ಆನೆ, ಕುದುರೆ, ಒಂಟೆಯಂತಹ ಮಹಾನ್ ಬಲದ ಘಟಾನುಘಟಿ ಪ್ರಾಣಿಗಳು ಸಸ್ಯಾಹಾರದಲ್ಲೆ ಬದುಕಿಲ್ಲವೆ ಎಂದು ಛೇಡಿಸುತ್ತಲೆ, ನಮ್ಮ ಸಸ್ಯಾಹಾರವೆಂದರೆ ಪ್ರಾಣಿಗಳಂತೆ ಬರಿ ಹುಲ್ಲು ತಿಂದು ಬದುಕುವುದಲ್ಲ ಎಂದು ವಿವರಿಸುತ್ತಲೆ ತರಕಾರಿ, ಕಾಳು, ಸೊಪ್ಪು, ಹಾಲು, ಹಣ್ಣು, ಮಸಾಲೆಗಳ ವಿವರಣೆ ನೀಡಬೇಕಾಗಿ ಬರುತ್ತಿತ್ತು. ಜತೆಜತೆಗೆ ಭಾರತದ ಮಾಂಸಾಹಾರವೆಂದರೆ ಎಡ್ಡಾದಿಡ್ಡಿ ಸಿಕ್ಕಿದ್ದೆಲ್ಲ ತರಹದ ಮಾಂಸಹಾರವಲ್ಲವೆಂದು, ಸಾಮಾನ್ಯವಾಗಿ ಬರಿ ಕೋಳಿ, ಕುರಿ, ಮೀನುಗಳ ಸುತ್ತಲೆ ಸುತ್ತುವ ಜಗವೆಂದು ಹೇಳುತ್ತಿದ್ದ. ತೀರ ಪ್ರದೇಶಗಳಲ್ಲಿ ಸಮುದ್ರದಾಹಾರ, ಕಾಡಿನ ಸುತ್ತಲ ಪ್ರಾಕೃತಿಕ ಪರಿಸರಗಳಲ್ಲಿ ಹಂದಿ, ಮೊಲ ಇತ್ಯಾದಿಗಳು ಸಾಧಾರಣವಾದರೂ ನಗರಗಳಲ್ಲಿ ಹೆಚ್ಚು ಬಿಕರಿಯಾಗುವುದು ಮೀನು, ಕೋಳಿ, ಕುರಿಗಳೆಂದೂ ವಿವರಿಸುತ್ತಿದ್ದ. 

ಆ ಹೊತ್ತಿನಲ್ಲಿ ತಪ್ಪದೆ ಬರುತ್ತಿದ್ದ ಮತ್ತೊಂದು ಖಚಿತ ಪ್ರಶ್ನೆ ಎಂದರೆ ಬೀಫ್...ಭಾರತದಲ್ಲಿ ಯಾಕೆ ಹಸು ಪವಿತ್ರ? ಯಾಕೆ ಅದನ್ನು ತಿನ್ನುವುದಿಲ್ಲ? ಇತ್ಯಾದಿ. ಮತ್ತೆ ಅದರ ಹಿನ್ನಲೆಯ ಧಾರ್ಮಿಕ ಕಾರಣಗಳ ಜತೆಗೆ ವ್ಯವಸಾಯವೆ ಪ್ರಮುಖವಾದ ದೇಶದಲ್ಲಿ ಉತ್ತುಳುವ ಎತ್ತು , ಹಾಲು ಕರೆವ ಹಸುಗಳು ಅನ್ನ ಕೊಡುವ ಜೀವಂತ ದೇವರೆನಿಸಿ ಅದರಿಂದಲೆ ದೇವರೆಂಬ ಪವಿತ್ರ ಭಾವನೆಗೆ ರೂಪು ಕೊಟ್ಟಿರಬಹುದಾದ ಸಾಮಾಜಿಕ, ಪಾರಂಪರಿಕ, ಪರಿಸರಿಕ ಕಾರಣಗಳನ್ನು ಮುಂದಾಗಿಸಿ ಅದೆ ನಂಬಿಕೆಗಳೆ ಸಂಪ್ರದಾಯದ ಹೆಸರಲ್ಲಿ ಆಳವಾಗಿ ಬೇರೂರಿರುವುದನ್ನು ವಿವರಿಸಬೇಕಾಗುತ್ತಿತ್ತು. ಅಲ್ಲದೆ ವಿವಿಧ ಜಾತಿ, ಧರ್ಮ, ವರ್ಣಗಳ ಹಿನ್ನಲೆಯಲ್ಲಿ ಭಾರತದಲ್ಲೂ ಬೀಫ್ ತಿನ್ನುವವರಿದ್ದಾರೆಂದು ಹೇಳಿ ಅರ್ಥ ಮಾಡಿಸಬೇಕಾಗುತ್ತಿತ್ತು. ವೈವಿಧ್ಯತೆಯಲ್ಲಿ ಏಕತೆಯ ಮಂತ್ರ ನುಡಿಸುವ ಸಿದ್ದಾಂತವನ್ನು ಬಿಚ್ಚಿಡಬೇಕಾಗುತ್ತಿತ್ತು. ಇದಾದ ನಂತರ ತಪ್ಪದೆ ಸೇರಿಕೊಳ್ಳುತ್ತಿದ್ದ ಪ್ರಶ್ನೆ ಜಾತಿ ಮತ ಪದ್ದತಿಯ ಕುರಿತು. ಅದರಲ್ಲೂ ವರ್ಣ ಪದ್ದತಿಯ ಕುರಿತು ಅಗಾಧ ಕುತೂಹಲ... ಬಹುತೇಕ ಮದುವೆಗಳು ಸಾಂಪ್ರದಾಯಿಕವಾದ ರೀತಿಯಲ್ಲಿ ತಂದೆ ತಾಯಿಯರ ಮುಖೇನ ನಡೆಯುತ್ತದೆಂದರೆ ಅವರಿಗೆ ನಂಬಲೆ ಅಸಾಧ್ಯವಾಗುತ್ತಿತ್ತು. ಬಾಯ್ ಫ್ರೆಂಡ್ ಗರ್ಲ್ ಪ್ರೆಂಡುಗಳಾಗಿ ಅರ್ಥ ಮಾಡಿಕೊಳ್ಳಲು ಒಡನಾಡದೆ, ಪ್ರೀತಿಸದೆ ಅದು ಹೇಗೆ ಮದುವೆಯಾಗಲಿಕ್ಕೆ ಸಾಧ್ಯ ಎಂಬುದು ಅವರ ಸೋಜಿಗ... ಅಂತೆಯೆ ವರದಕ್ಷಿಣೆ ಪದ್ದತಿಯ ಕುರಿತು ತುಸು ನಿರಾಶೆಯ ಪ್ರತಿಕ್ರಿಯೆ... ಅದಕ್ಕೆ ಕಾರಣ ಆ ಪದ್ದತಿಯ ಕುರಿತಾದ ಖೇದವಲ್ಲ; ಬದಲಿಗೆ , ಥಾಯ್ ನಲ್ಲಿ ಬಳಕೆಯಲ್ಲಿರುವ ಪದ್ದತಿ ವಧುದಕ್ಷಿಣೆ - ಮದುವೆಯಾಗುವ ಗಂಡಸೆ ತೆರ ತೆತ್ತು ಕೊಳ್ಳಬೇಕು ಹೆಣ್ಣನ್ನು, ಅದಕ್ಕೆ ..!

ಶ್ರೀನಾಥನ ಜತೆಗೆ ಪ್ರಾಜೆಕ್ಟಿಗೆ ಬಂದಿದ್ದ ತಂಡದಲ್ಲಿ ಒಂದಿಬ್ಬರು ಪಕ್ಕಾ ಸಸ್ಯಾಹಾರಿಗಳೂ ಇದ್ದರು. ಪ್ರಾಜೆಕ್ಟ್ ಆರಂಭದ ಮೊದಲ ದಿನಗಳಲ್ಲಿ ಪ್ರಾಜೆಕ್ಟಿನ ವತಿಯಿಂದ ಕೆಲವು ಟೀಮ್ ಬಿಲ್ಡಿಂಗ್ ಲಂಚು , ಡಿನ್ನರುಗಳು ಸಾಧಾರಣವಾಗಿ ಇರುತ್ತಿದ್ದವು. ಆದರೆ ಈ ಸಸ್ಯಾಹಾರಿಗಳು ಮಾತ್ರ ಅದೆ ಕಾರಣವನ್ನು ಮುಂದೊಡ್ಡಿ ಬರದೆ ತಪ್ಪಿಸಿಕೊಳ್ಳಬೇಕಾಗುತ್ತಿತ್ತು. ಉಳಿದವರನ್ನು ಭಾರತೀಯ ಸಸ್ಯಾಹಾರಕ್ಕೆ ಒಯ್ಯಲಾಗದ ಕಾರಣ ಕೆಲವು ಬಾರಿ ಇದು ಅನಿವಾರ್ಯವೂ ಆಗಿಬಿಡುತ್ತಿತ್ತು. ಅವರೇನೊ ಮಾಂಸಾಹಾರಿಗಳ ಜತೆ ಕೂತು ತಿನ್ನಲೇನು ಅಭ್ಯಂತರ ಪಡದಿದ್ದರೂ ಅಲ್ಲಿ ಸಸ್ಯಾಹಾರ ಸಿಗುವ ಸಾಧ್ಯತೆಯೆ ಇರುವುದಿಲ್ಲವಾದ ಕಾರಣ ತಾವಾಗಿಯೆ ಹಿಂದುಳಿದುಬಿಡುತ್ತಿದ್ದರು. ಇದನ್ನು ಗಮನಿಸಿದ್ದ ಅಕೌಂಟ್ಸ್ ಡಿಪಾರ್ಟ್ಮೆಂಟಿನ ಕುನ್. ಸುನನ್, ಮುಂದುನ ಬಾರಿ ವ್ಯವಸ್ಥೆ ಮಾಡುವಾಗ ಈ ಬಾರಿ ಸಸ್ಯಾಹಾರವನ್ನು ವ್ಯವಸ್ಥೆ ಮಾಡುವುದಾಗಿ, ಅವರಿಬ್ಬರನ್ನು ಜತೆಗೆ ಕರೆದು ತರಬೇಕೆಂದು ಶ್ರೀನಾಥನಿಗೆ ತಾಕೀತು ಮಾಡಿದ್ದಳು. ಶ್ರೀನಾಥನಿಗೇನೊ ಅನುಮಾನವಿದ್ದರೂ ಇಲ್ಲವೆನ್ನಲಾಗದೆ ಅವರನ್ನು ಬರಹೇಳಿದ್ದ. ಆದರೂ ಒಂದು ಮುನ್ನೆಚ್ಚರಿಕೆಯ ಮಾತಾಗಿ ಮಾನಸಿಕವಾಗಿ ಸಿದ್ದವಾಗಿ ಬರಲು ಹೇಳಿದ್ದ - ಇಲ್ಲಿ ಸಸ್ಯಾಹಾರವೆಂದರೆ ಇಡ್ಲಿ, ವಡೆ, ಸಾಂಬಾರುಗಳಲ್ಲವಲ್ಲಾ? ಬೌದ್ಧ ಧರ್ಮದ ಪ್ರಯುಕ್ತ ತಿನ್ನಬಹುದಾದ ಕೆಲವು ಥಾಯ್ ಸಸ್ಯಾಹಾರ ಸಿಗಬಹುದೆಂದು ಶ್ರೀನಾಥನ ಎಣಿಕೆ. ಎಲ್ಲರೂ ಬಂದು ರೆಸ್ಟೋರೆಂಟಿನಲ್ಲಿ ಕೂತಾಗ ಚಕಚಕನೆ ಎಲ್ಲರ ಮುಂದೆ ಮಾಂಸಾಹಾರಿ ಭಕ್ಷ್ಯಗಳನ್ನು ತಂದಿಡುತ್ತಿದ್ದರೂ, ಇವರಿಬ್ಬರ ಸಸ್ಯಾಹಾರದ ಆಹಾರವೆ ಪತ್ತೆಯಿಲ್ಲ...ಬಹುಶಃ ವಿಶೇಷವಾಗಿ ಮಾಡುತ್ತಿರುವ ಕಾರಣ ತಡವಾಗಿರಬಹುದೆಂದುಕೊಂಡಿದ್ದರೆ, ಸರಿ ಸುಮಾರು ಅರ್ಧ ಗಂಟೆಯ ನಂತರ ಅವರ ತಟ್ಟೆಗಳೂ ಬಂದವು. ಇವರಿಗೊ ಅದೇನಿದೆಯೊ ಎಂಬ ಕುತೂಹಲದಿಂದ ಕಾತರದಿಂದ ನೋಡಿದರೆ - ಅಲ್ಲೆನಿದೆ? ನಾಕಾರು ಬೇಯಿಸಿದ ಅಣಬೆ ಮತ್ತು ಅದೆಂತದ್ದೊ ಬೇಯಿಸದ ಸೊಪ್ಪಿನ ಕಡ್ಡಿಗಳು. ಅವರಿಬ್ಬರೂ ಶ್ರೀನಾಥನ ಮುಖ ನೋಡಿದರೆ ಶ್ರೀನಾಥ ತಲೆ ತಗ್ಗಿಸಿ ತನ್ನ ತಟ್ಟೆ ನೋಡುವಂತಾಯ್ತು. ಕೊನೆಗೊಮ್ಮೆ ಅಕಸ್ಮಾತಾಗಿ ಮೆನು ತಿರುಗಿಸುತ್ತಿದ್ದಾಗ ಕಂಡುಬಂದ 'ಮ್ಯಾಂಗೊ ರೈಸ್' ಚಿತ್ರ ನೋಡಿ ಅದು ಪೂರ್ಣ ಸಸ್ಯಾಹಾರಿ ಎಂದರಿವಾದಾಗ ಅದನ್ನೆ ಆರ್ಡರು ಮಾಡಿಸಿದ್ದ. ಆಮೇಲೆ ಅರಿವಾಗಿತ್ತು ಅದು ಒಂದು ಡೆಸರ್ಟ್ ಎಂದು....ಆದರೆ ಅವರೆಲ್ಲ ತಿಂದ ಥಾಯ್ ತಿನಿಸುಗಳಲ್ಲೆ ಅತ್ಯಂತ ಇಷ್ಟ ಪಟ್ಟು ಎಲ್ಲರೂ ತಿಂದ ತಿನಿಸೆಂದರೆ ಅದೊಂದೆ...ಅಷ್ಟು ಸೊಗಸಾಗಿತ್ತು! ಜೊತೆಗೆ ಕೊನೆಯಲ್ಲಿ ಬಂದ ಕತ್ತರಿಸಿದ ಕಲ್ಲಂಗಡಿ, ಕರಬೂಜ, ಪೈನಾಫಲ್, ದ್ರಾಕ್ಷಿ ಹಣ್ಣು ಮತ್ತು ಐಸ್ಕ್ರೀಮ್ ಸೇರಿ ಪಟ್ಟಾದ ಊಟವೆ ಆಗಿಹೋಗಿತ್ತು, ಸಸ್ಯಾಹಾರಿಗಳಿಗೂ...

ಅಲ್ಲಿಂದಾಚೆಗೆ ಸಸ್ಯಾಹಾರಿಗಳಿಗೊಂದು ದಾರಿ ಸಿಕ್ಕಂತೆ ಆಗಿ ಎಲ್ಲರೂ ಒಟ್ಟಾಗಿ ಭಾಗವಹಿಸಲು ಸಾಧ್ಯವಾಗುವಂತಾಗಿತ್ತು. ಆ ಸಸ್ಯಾಹಾರಿಗಳ ದಿನದ ಊಟಕ್ಕು ತೊಂದರೆಯೆ ಆಗುತ್ತಿತ್ತೊ ಏನೊ - ಯಾಕೆಂದರೆ ಇಬ್ಬರೂ ಬ್ರಹ್ಮಚಾರಿಗಳೆ ; ಅದೃಷ್ಟವಶಾತ್ ಸಿಲೋಮ್ ರಸ್ತೆಯ ತುದಿಯಲ್ಲಿರುವ ಭಾರತೀಯ ಮಾರಿ ಗುಡಿಯ ಪಕ್ಕದ ರೋಡಿನಲ್ಲೆ 'ಮದ್ರಾಸ್ ಕಿಚೆನ್' ಹೆಸರಿನ ಅಪ್ಪಟ ಸಸ್ಯಾಹಾರಿ ಬಡ್ಜೆಟ್ ರೆಸ್ಟೋರೆಂಟು ಇರದಿದ್ದರೆ. ಇಲ್ಲಿನ ಏಳೆಂಟು ಟೇಬಲ್ಲಿನ ಪುಟ್ಟ ರೆಸ್ಟೊರೆಂಟಲ್ಲೆ ತುಂಬಾ ಶುಚಿಯಾಗಿ ಪಕ್ಕಾ ತಮಿಳುನಾಡಿನ ಸೌತ್ ಇಂಡಿಯನ್ ತಿಂಡಿ ಸಿಗುತ್ತಿತ್ತು. ಮಾಮೂಲಿ ಇಡ್ಲಿ ದೋಸೆ ಪೊಂಗಲ್ಲುಗಳಲ್ಲದೆ ತೊಂಬತ್ತೈದು ಬಾತ್ ಗೆ ಲಂಚಿಗೆ ಸೌಥ್ ಇಂಡಿಯನ್ ಸೆಟ್ ಮೀಲ್ ಕೂಡ ಸಿಗುತ್ತಿತ್ತು. ಆಫೀಸಿನಿಂದ ಎರಡು ಕಿಲೊ ಮೀಟರು ದೂರ ಬಿಸಿಲಲ್ಲಿ ನಡೆದೆ ಹೋಗಬೇಕಾಗಿದ್ದರೂ ಅವರಿಬ್ಬರೂ ದಿನವೂ ಅಲ್ಲಿಗೆ ಲಂಚು ಮತ್ತು ಡಿನ್ನರಿಗೆ ಹೋಗಿ ಬರಲು ಕಾರಣ - ಒಂದು ಹತ್ತಿರದಲ್ಲಿ ಬೇರಾವ ಆಯ್ಕೆಯೂ ಇರದಿದ್ದದು, ಮತ್ತು ಇದ್ದರೂ ಆ ಬೆಲೆಗೆ ಅಷ್ಟು ಅಚ್ಚುಕಟ್ಟಾದ ಭಾರತೀಯ ಆಹಾರ ಸಿಗದೆ ಇದ್ದುದ್ದು...

- ಕುನ್. ಸೂ ಜತೆ ಸಸ್ಯಾಹಾರಿ ರೆಸ್ಟೋರೆಂಟಿಗೆ ಕಾಲಿಡುತ್ತಿದ್ದಂತೆ ಇವೆಲ್ಲವೂ ಕ್ಷಣ ಕಾಲ ನೆನಪಿನ ಸುಳಿಯಂತೆ ಮಿಂಚಿ ಮರೆಯಾಯ್ತು ಶ್ರೀನಾಥನ ತಲೆಯಲ್ಲಿ.

(ಇನ್ನೂ ಇದೆ)

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಾಗೇಶ ಮೈಸೂರು ರವರಿಗೆ ವಂದನೆಗಳು
ಪರಿಭ್ರಮಣ ಒಂದು ಕಥೆಯೆಂದು ನಾನು ಭಾವಿಸಿದ್ದೆ, ಆದರೆ ಅದು ನೀಳ್ಗತೆ ಪ್ರಾಕಾರ ದಾಟಿ ಮಿನಿ ಕಾದಂಬರಿಯ ರೂಪ ತಾಳುತ್ತಿದೆ, ಆದರೂ ಚೆನ್ನಾಗಿ ಮೂಡಿ ಬರುತ್ತಿದೆ, ಪರಿಭ್ರಮಣ ತನ್ನದೆ ದಾರಿಯಲ್ಲಿ ಸಾಗಲಿ, ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾಟೀಲರೆ ನಮಸ್ಕಾರ. ನೋಡಿ ಇದನ್ನೆ ಅನುಭವದ ಕೊರತೆಯೆನ್ನುವುದು. ನಾನು ಕಥಾಹಂದರ ಸಿದ್ದ ಮಾಡಿಟ್ಟುಕೊಂಡಾಗ ಬಹುಶಃ ನೀಳ್ಗಥೆಯನ್ನಷ್ಟೆ ಬರೆಯಲು ಸಾಧ್ಯವೇನೊ ಅಂದುಕೊಂಡಿದ್ದೆ. ಆದರೆ ಹಂದರವನ್ನು ಯೋಜನೆಯ ಪ್ರಕಾರವೆ ವಿಸ್ತರಿಸುತ್ತ ಹೋದರೂ ನೀಳ್ಗಥೆಯ ವ್ಯಾಪ್ತಿಯನ್ನು ಮೀರುತ್ತಿದೆ. ಆದರೂ ಮೂಲತಃ ಬರೆಯಬೇಕೆಂದುಕೊಂಡಿದ್ದ ರೀತಿಗೆ ಅಪಚಾರ ಮಾಡದೆ ಒರಿಜಿನಲ್ ಐಡಿಯಾದಲ್ಲೆ ಮುಂದುವರೆಸಿದ್ದೇನೆ, ಉದ್ದವಾದರೂ ಚಿಂತೆಯಿಲ್ಲ ಎಂದುಕೊಂಡು. ನನಗೆ ಈ ರೀತಿಯ ಕಥೆ ಬರೆಯಲು ಇದು ಮೊದಲ ಅನುಭವವಾದ ಕಾರಣ ಮೊದಲೆ ನಿಖರವಾಗಿ ಅಂದಾಜು ಮಾಡಲು ಆಗಲಿಲ್ಲ (ಪಾರ್ಥರ ರೀತಿಯ ಪ್ರೊಪೆಶನಲ್ ಅನುಭವವಿಲ್ಲ :-) ). ಆದರೂ ಸಂಪದ ವೇದಿಕೆಯಲ್ಲಿ ಇದನ್ನು ಕಲಿಕೆಯ ಅವಕಾಶವೆಂದೆ ಪರಿಗಣಿಸಿ ಮುಂದುವರೆಸಿದ್ದೇನೆ. ಅಷ್ಟೆ ಅಲ್ಲದೆ ಕಥಾನಕದ ದೃಶ್ಯ ಸ್ವಾಭಾವಿಕವಿರುವಂತೆ ಕಟ್ಟಿಕೊಡುವುದು ಕಾವ್ಯ ಪ್ರಾಕಾರಕಿಂತ ಹೆಚ್ಚು ಕಷ್ಟಕರ ಎಂಬ ಅನುಭವವೂ ಆಗುತ್ತಿದೆ. ಒಟ್ಟಾರೆ ಕಡೆಯಲ್ಲಿ ಚೆನ್ನಾದ ಸಿದ್ದ ಪದಾರ್ಥವಾಗುವುದೊ ಇಲ್ಲವೊ ಹೇಳಬರದಿದ್ದರೂ ಕಲಿಕೆಯ ಅನುಭವದ ಮಟ್ಟಿಗೆ ನನಗೊಂದು ವಿಶೇಷ ಪ್ರಯತ್ನವಾದೀತೆಂಬ ನಂಬಿಕೆಯಿದೆ. ತಮ್ಮ ಪ್ರತಿಕ್ರಿಯೆಗೆ ಮತ್ತೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಾಗೇಶ ಮೈಸೂರು ರವರಿಗೆ ವಂದನೆಗಳು
ಈ ಕಥಾನಕದ ಕುರಿತು ನನ್ನ ಪ್ರತಿಕ್ರಿಯೆ ಆಕ್ಷೇಪಣೆಯೆಂದು ದಯವಿಟ್ಟು ಭಾವಿಸಬೇಡಿ. ಅದು ಮಿನಿ ಕಾದಂಬರಿ ಬಿಟ್ಟು ಬೃಹತ್ತಾದ ಕಾದಂಬರಿಯೆ ಆಗಲಿ ಓದುಗನನ್ನು ಆಸಕ್ತಿಯಿಂದ ಓದಿಕೊಂಡು ಹೋಗುವಂತೆ ಮಾಡುವ ಗುಣ ನಿಮ್ಮ ಕಥಾ ನಿರೂಪಣಾ ಶೈಲಿಗಿದೆ. ಕಥೆಗೆ ಓನಾಮ ಹಾಡಿದ್ದೀರಿ ಅದರ ದಾರಿಯಲ್ಲಿ ಅದು ಮುನ್ನಡೆಯುತ್ತೆ, ನಡೆಯಲಿ ಬಿಡಿ ಓದಲು ನಾವಿದ್ದೇವೆ. ಕಥೆ ಚೆನ್ನಾಗಿಯೆ ಸಾಗುತ್ತಿದೆ ಶಂಕೆ ಬೇಡ ದನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾಟೀಲರೆ ನಮಸ್ಕಾರ. ತಮ್ಮ ಹೇಳಿಕೆಯನ್ನು ಗಮನ ಸೆಳೆವ ಅಂಶದಂತೆ ಪರಿಗಣಿಸಿದೆನೆ ಹೊರತು ಅಕ್ಷೇಪಣಯಾಗಿ ಖಂಡಿತ ಅಲ್ಲ. ನಿಮ್ಮ ಮಾತಿನಿಂದ ಈಗ ಮತ್ತಷ್ಟು ಬಲ ಬಂದಂತಾಯ್ತು. ಅದರಪಾಡಿಗೆ ಅದನ್ನು ಓಡಿಸಿ ಕೊನೆ ಮುಟ್ಟಿಸುತ್ತೇನೆ. ಆದರು ಏನೆ ತಪ್ಪು, ದೋಷ ಕಂಡರೆ ಹೀಗೆ ಎತ್ತಿ ತೋರಿಸುತ್ತಿರಿ. ಕಲಿಕೆಗೆ ಸಹಾಯಕವಾಗುತ್ತದೆ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸಾರ್ ನಾನು ಪ್ರೋಫೆಷನಲ್ ಏನು ಅಲ್ಲ, ಹೀಗೆ ಸುಮ್ಮನೆ ಕಾಲಹರಣ ಎನ್ನುವಂತೆ ಬರೆಯುವನು,
ನನಗೂ ಪ್ರಾರಂಭದಲ್ಲಿ ಹೀಗೆ ಕತೆಯ ವಿಸ್ತಾರವನ್ನು ಮೊದಲೇ ಊಹೆ ಮಾಡುವುದು ಕಷ್ಟವಾಗುತ್ತಿತ್ತು, ಕೆಲವರು 'ಸಣ್ಣಕತೆ' ಎನ್ನುವ ಶೀರ್ಷಿಕೆಯನ್ನು ನೋಡಿ ನಗುತ್ತಿದ್ದರು, ಆಮೇಲೆ ಅಭ್ಯಾಸವಾಯಿತು,
ಸಣ್ಣಕತೆ ಎಂದರೆ ಸಾಮಾನ್ಯ ೩೦೦೦ ಪದಗಳೊಳಗೆ , ಅದನ್ನು ಹಿಡಿದಿಡುವುದು ನನಗೆ ಈಗಲು ಸಾದ್ಯವಾಗುತ್ತಿಲ್ಲ, ಹೇಗೋ ನೀಳ್ಗತೆಗೆ ಹೋಗಿಬಿಡುತ್ತದೆ.
ನಾವು ತೆಗೆದುಕೊಳ್ಳುವ ವಿಷ್ಯದ ಮೇಲೆ, ನಿರೂಪಣೆಯ ಮೇಲೆ ಕತೆಯ ಗಾತ್ರ ನಿಗದಿಯಾಗುತ್ತದೆ,
ಸಣ್ಣದೊಂದು ಘಟನೆಯ ಸುತ್ತಲಾದರೆ ಸಣ್ಣಕತೆ, ಇಲ್ಲ ವಸ್ತು ಒಂದನ್ನು ಹಿಡಿದು ಬರೆಯಲು ಹೊರಟರೆ ನೀಳ್ಗತೆ, ಫ್ರೀ ಹಾಂಡ್ ಅನ್ನುತ್ತಾರಲ್ಲ ಹಾಗೆ ಮನಸಿನ ನೆಮ್ಮದಿಗೆ ಬರೆಯಲ್ಲು ಹೊರಟರೆ ಮಿನಿ ಕಾದಂಬರಿ,
ಅದೆಲ್ಲ ಮುಖ್ಯವಾಗಲ್ಲ,
ನಿರೂಪಣೆಯಲ್ಲಿ ನೀವು ಓದುಗರನ್ನು ಹಿಡಿದಿಡಲು ಸಾದ್ಯವಾದರೆ ಅದು ಕತೆಯ ಗೆಲುವು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾರ್ಥಾ ಸಾರ್, ಒಟ್ಟಾರೆ ಸಾರಾಂಶದಲ್ಲಿ ಹೇಳುವುದಾದರೆ ಮನಸಿನ ನೆಮ್ಮದಿ ಮತ್ತು ಓದುಗರನ್ನು ಹಿಡಿದಿಡುವ ಸಾಮರ್ಥ್ಯ - ಇವರಡರ ನಡುವಣ ಸೂಕ್ತ ಸಮತೋಲನದ ಮಿಶ್ರಪಾಕ ಮಾಡಿ ಬಡಿಸಬಲ್ಲವ ಕಥೆಯನ್ನು ಗೆಲ್ಲಿಸುತ್ತಾನೆ, ಹಾಗೆಯೆ ತಾನೂ ಗೆಲ್ಲುತ್ತಾನೆ ಎಂದಾಯ್ತು. ನೀವು ಬರೆದ ಸುಮಾರು 3000 ಪದ ಎಂದು ಓದಿದಾಗ ನಗು ಬಂತು - ಕೆಲವೊಮ್ಮೆ ಛಾಲೆಂಜ್ ಉದ್ದ ಬರೆಯುವುದಲ್ಲ , ಕಾಂಪ್ರೊಮೈಸ್ ಆಗದ ರೀತಿ ಉದ್ದ ತುಂಡಿರಿಸುವುದೂ ಆಗಿರುತ್ತದೆ. ಅದು ಅಷ್ಟು ಸುಲಭದಲ್ಲಿ ಸಿದ್ದಿಸುವ ಸಿದ್ಧಿಯಲ್ಲವಾದರೂ ಅನುಭವದಿಂದ, ಪ್ರಯತ್ನಪೂರ್ವಕವಾಗಿ ಸಾಧಿಸಬಹುದಾದದ್ದು. ಅದೇನೆ ಆದರೂ ಈ ರೀತಿಯ ಕಲಿಕೆ, ಪ್ರಯೋಗಗಳಿಗೆಲ್ಲ ಸಂಪದದಂತಹ ಒಂದು ಮುಕ್ತ ವೇದಿಕೆಯಿದೆಯಲ್ಲ - ಅದು ಪುಣ್ಯ - ಒಂದು ರೀತಿ ವರ್ಚುವಲ್ ಗುರುಕುಲ ಇದ್ದ ಹಾಗೆ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕುತೂಹಲ ಉಳಿಸಿ ಮುಂದಿನ ಕಂತನ್ನು ಓದುವಂತೆ ಮಾಡುವ ಚಾಣಾಕ್ಷತೆ, ಜೊತೆಗೆ ಹಿತವಾದ ನಿರೂಪಣಾ ಶೈಲಿ! ಚೆನ್ನಾಗಿದೆ, ಮುಂದುವರೆಯಲಿ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕವಿಗಳೆ ನಮಸ್ಕಾರ. ನಿರೂಪಣೆ, ಶೈಲಿಯ ಮಟ್ಟವನ್ನು ಆ ಸ್ತರದಲ್ಲೆ ಉಳಿಸಿಕೊಂಡು ಹೋಗಲಿಕ್ಕೆ ಪ್ರಯತ್ನಿಸುತ್ತೇನೆ. ತಮ್ಮ ಬೆಂಬಲ ಹೀಗೆ ಸತತವಾಗಿರಲಿ. ಧನ್ಯವಾದಗಳು :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಾಗೇಶರೆ,
ಕಾಪ್ ಕುನ್ ಕಾಪ್.
’ಮಾಂಗ್ ಸಾ ವಿರಾಟ್?' - ವಿರಾಟ್ ಕೊಹ್ಲಿ :)
ಮಾಂಸ( ಮಾಂಗ್ ಸಾ)ನ ಸಸ್ಯಾಹಾರ ಅಂತಾರಲ್ಲಾ:) ಶ್ರೀನಾಥ್ ಸಿಕ್ಕಿದರೆ ಒಂದು ವಿಷಯ ತಿಳಿಸಿಬಿಡಿ-
>>>ಶೇಕಡಾ ಹದಿನೇಳರ ಆಚೀಚೆ ಮುಸ್ಲೀಮರು, ಶೇಕಡಾ ಹನ್ನೆರಡರಷ್ಟು ಕ್ರಿಶ್ಚಿಯನ್ನರು, ....
-ಕ್ರಿಶ್ಚಿಯನ್ನರು ೧೨% ಅಲ್ಲಾ ೨.೫%,ಮುಸಲ್ಮಾನರು ಅಂದಾಜು ೧೨%.. http://www.worldpopulationstatistics.com/india-population-2013/
>>>ಅಷ್ಟು ದೊಡ್ಡ ದೇಶದ ಶೇಕಡ ಹನ್ನೆರಡರಷ್ಟು ಭಾಗ ಮಾತ್ರ ಸಂಪೂರ್ಣ ಸಸ್ಯಾಹಾರಿಗಳು.
-೩೧% http://en.wikipedia.org/wiki/Vegetarianism_by_country ಇದೆಲ್ಲಾ ಅಂಕೆ ಸಂಖ್ಯೆಗಳು ಸುಮ್ಮನೆ ಹಾಕಿದ್ದು, ನಿಮ್ಮ ಲೇಖನ ನೋಡಿದಾಗ ಒಮ್ಮೆ ಇತ್ತೀಚೆಗಿನ ಗಣತಿ ನೋಡೋಣ ಅಂತ ಹುಡುಕಿದೆ ಅಷ್ಟೆ..:)
ಕತೆ ಚೆನ್ನಾಗಿ ಸಾಗುತ್ತಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

" ಮಾಂಗ್ ಸಾ ವಿರಾಟ್ " - ಮಾಂಸ , ವಿರಾಟ್ ಎರಡೂ ಒಳ್ಳೆಯ ಹಿಂಟ್ ನೆನಪಿಟ್ಟುಕೊಳ್ಳಲು ಸುಲಭ! ಸಸ್ಯಾಹಾರಿಗಳು ಥಾಯ್ಲ್ಯಾಂಡಿಗೆ ಪ್ರವಾಸ ಹೋದರೆ ಈ ಪದ ತುಂಬ ಉಪಯೋಗಕ್ಕೆ ಬರುತ್ತದೆ ಎಂದು ಬೇಕೆಂದೆ ಸೇರಿಸಿದ್ದೆ :-)

ಯಾವಾಗಲೋ ಎಲ್ಲೋ ತುಂಬಾ ಹಿಂದೆ ಓದಿದ್ದ ಬರಹವೊಂದರ ಮಸುಕು ನೆನಪಿನ ಆಧಾರದ ಮೇಲೆ ಆ ಸಂಖ್ಯೆಗಳನ್ನು ಬಳಸಿದ್ದೆ. ಅದರ ನಿಖರತೆಯನ್ನು ಪರಿಶೀಲಿಸಲು ಹೋಗಿರಲಿಲ್ಲ.  ಗಣೇಶ್ ಜಿ. ನಿಮ್ಮ ದೆಸೆಯಿಂದ ಹುಡುಕುವ ಶ್ರಮವಿಲ್ಲದೆ ಹೆಚ್ಚು ನಿಖರ ಮಾಹಿತಿ ಸಿಕ್ಕಿದಂತಾಯ್ತು. ತುಂಬಾ ಧನ್ಯವಾದಗಳು - ಮೂಲ ಪ್ರತಿಯಲ್ಲೂ ಇದರ ತಿದ್ದುಪಡಿ ಮಾಡಿಕೊಳ್ಳುತ್ತೇನೆ. ಸಂಪದದಲ್ಲಿ ಇದೆ ದೊಡ್ಡ ಅನುಕೂಲ - ತಪ್ಪು ಮಾಹಿತಿ ಯಾರ ಕಣ್ಣಿಗಾದರೂ ಬಿದ್ದರೆ ಸರಿಪಡಿಸಿಕೊಳ್ಳುವ ಸದಾವಕಾಶ ಆಯಾಚಿತವಾಗಿ ಬರುತ್ತದೆ  :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.