ಕಥೆ: ಪರಿಭ್ರಮಣ..(53)

5

( ಪರಿಭ್ರಮಣ..52ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...)

ಈಗ ಬದಲಾದ ದೃಶ್ಯದ ಅಖಾಡ ನೇರ ಮತ್ತೊಂದು ಶಾಲೆಯ ಅವರಣಕ್ಕೆ ಜಿಗಿದುಬಿಟ್ಟಿದೆ... ಮತ್ತೆ ಅದೇ ಹತ್ತಾರು ಹುಡುಗರ ಗುಂಪು..ಬೆಳೆದು ದೊಡ್ಡವರಾದ ಹದಿನೈದು, ಹದಿನಾರರ ಆಸುಪಾಸಿನ ಚಿಗುರು ಮೀಸೆ ಮೊಳೆಯುತ್ತಿರುವ ಹುಡುಗರ ದಂಡು.. ಅಂದೇನೊ ಶಾಲೆಗೆ ರಜೆಯ ದಿನವಾದರು ಇವರುಗಳು ಮಾತ್ರ ತರಗತಿಯ ರೂಮಿನಲ್ಲಿ ಬಂದು ಸೇರಿದ್ದಾರೆ, ಮಿಕ್ಕೆಲ್ಲಾ ಕಡೆ ಶಾಲೆಗೆ ಶಾಲೆಯೆ ನಿರ್ಜನವಾಗಿ 'ಬಿಕೋ' ಅನ್ನುತ್ತಿದ್ದರೂ.. ಅವರೆಲ್ಲ ರಜೆಯಾದರೂ ಅಲ್ಲಿ ಸೇರಿರುವುದು, ಆ ನಾಳೆಗೆ ಆಚರಿಸ ಹೊರಟಿರುವ ಸರಸ್ವತಿ ಪೂಜೆಯ ಸಿದ್ದತೆಗಾಗಿ.. ತರಗತಿಯನ್ನೆಲ್ಲಾ ಪೂರ್ತಿ ಬಣ್ಣಬಣ್ಣದ ಕಾಗದದಿಂದ ಅಲಂಕರಿಸಿ, ಟೇಬಲ್ಲನ್ನು ಮಂಟಪವಾಗಿಸಿ ಸರಸ್ವತಿಯ ಕಟ್ಟುಹಾಕಿದ ಪೋಟೊವನ್ನಿಟ್ಟು ಹೂಗಳಿಂದ ಸಿಂಗರಿಸುವ ಕಾರ್ಯಕ್ಕೆಂದು ಅವರಿಗೆ ರಜೆಯ ದಿನವೂ ಬಂದು ಓಡಾಡಲು ಅನುಮತಿ ಸಿಕ್ಕಿದೆ... ಅದು ಹೈಸ್ಕೂಲಿನ ಕೊನೆಯ ವರ್ಷದ ಎಸ್ಸೆಸ್ಸೆಲ್ಸಿ ಹುಡುಗರು ಪ್ರತಿ ವರ್ಷ ಮಾಡುವ ಕಾರ್ಯಕ್ರಮ.. ಪೂಜೆಯ ನೆಪದಲ್ಲಿ ಸ್ವೀಟು, ಖಾರ ಹಂಚಿ 'ಗುಡ್ ಬೈ' ಹೇಳುತ್ತ ಬೇಕು ಬೇಕಾದ ಹುಡುಗ, ಹುಡುಗಿಯರ ಆಟೋಗ್ರಾಫ್ ಪಡೆದು, ಅವರಿಗೂ ಆಟೋಗ್ರಾಫ್ ಬರೆದು 'ಥ್ರಿಲ್ಲಾಗುವ' ಸಮಯ... ಮುಂದಿನ ವರ್ಷ ಕಾಲೇಜು ಮೆಟ್ಟಿಲು ಹತ್ತಿದರೆ ಇನ್ನೆಲ್ಲೊ, ಇನ್ನೆಂದೊ ಭೇಟಿ? ಆದರೆ ಉಂಟು, ಆಗದಿದ್ದರೆ ಇಲ್ಲ. ಹಾಗೆ ಬಂದವರು ಅಲಂಕಾರ, ಸಿದ್ದತೆ ಮುಗಿಸಿ ತಮ್ಮ ಪಾಡಿಗೆ ತಾವು ಹೊರಟಿದ್ದರೆ ಸಾಕಿತ್ತೇನೊ? ಆದರೆ ಆ ಭಾನುವಾರದ ಉರಿ ಬಿಸಿಲಿನ ದಿನ ಈ ಐದಾರು ಹುಡುಗರ ಗಮನ ಕ್ಲಾಸಿನ ಹೊರಗೆ ಕಾರಿಡಾರಿಗೆ ಅಂಟಿಕೊಂಡಿದ್ದಂತೆ ಇದ್ದ ಸಾಲು ತೆಂಗಿನ ಮರದ ಮೇಲೆ ಬೀಳಬೇಕೆ ?... ಜತೆಗೆ ಅದರಲ್ಲಿರುವ ಎಳನೀರಿನ ಮೇಲೂ..! ಅಲ್ಲಿರುವ ಹುಡುಗಿಯರ ಮುಂದೆ ಹೀರೊಗಳಾಗಲಿಕ್ಕೆ ಮತ್ತಿನ್ನೇನು ಬೇಕು? ಕಪಿಗಳಂತೆ ಮರ ಹತ್ತಿದವರೆ ಎಳನೀರೆಲ್ಲ ಕೆಡವಿದ್ದೆ ಕೆಡವಿದ್ದು, ಎಲ್ಲರಿಗೂ ಕುಡಿಸಿದ್ದೆ ಕುಡಿಸಿದ್ದು - ಕೊನೆಗೆ ಯಾವ ಮರದಲ್ಲೂ ಒಂದೆ ಒಂದು ಬುರುಡೆಯೂ ಉಳಿಯದ ರೀತಿ.. ಮಂಗನ ಚಪಲದ ವಯಸಿನ ಹುಡುಗ ಬುದ್ಧಿಯ ಹುಡುಗರಾದರೂ, ಸ್ಕೂಲಿನಲ್ಲಿ ಅದರಲ್ಲೂ ಸರಸ್ವತಿ ಪೂಜೆಯ ಸಿದ್ದತೆಗೆಂದೆ ಬಂದವರು ಕಪಿ ಚೇಷ್ಟೆ ಮಾಡಿದರೆ ತಾಯಿ ಸರಸ್ವತಿ ಸುಮ್ಮನಿರುವಳೆ? ಸಾಹಸವೇನೊ ಅಸೀಮವಾದರೂ ಈ ಮಟ್ಟದಲ್ಲಿ ಸವರಿ ಹಾಕಿದರೆ ಮುಖ್ಯಸ್ಥರ ಗಮನಕ್ಕೆ ಹೋಗದೆ ಇದ್ದೀತೆ? ಮರುದಿನವೆ ಹೆಡ್ ಮಾಸ್ಟರರ ಬುಲಾವು...ದೊಡ್ಡ ಮೊತ್ತದ ಫೈನ್ ಕಟ್ಟಿದರಷ್ಟೆ ಪರೀಕ್ಷೆಯ ಹಾಲ್ಟಿಕೇಟ್ ಲಭ್ಯವೆಂದು ಚೆನ್ನಾಗಿ ಉಗಿಯುತ್ತಿರುವ ನಿಚ್ಛಳ ದೃಶ್ಯ..  ಅದರ ಮುಂದೇನಾಗಿತ್ತೆಂದು ಮತ್ತೆ ನೆನಪಿನ ಸರಣಿ ಬಿಚ್ಚಿಕೊಳ್ಳುವ ಮೊದಲೆ ಮತ್ತೆ ಸೀನು ಬದಲು.. 

ಈ ಬಾರಿ ಶಾಲಾ ಪ್ರಾರ್ಥನೆ ನಡೆಯುತ್ತಿರುವ ಬೃಹತ್ ಮೈದಾನ.. ಇಡೀ ಶಾಲೆಯ ಎಲ್ಲಾ ತರಗತಿಯ ಹುಡುಗರು ಅಲ್ಲಿ ತಂತಮ್ಮ ಸಾಲಲ್ಲಿ ನಿಂತಿದ್ದಾರೆ... ಪ್ರೈಯರು ಮುಗಿಯುತ್ತಿದ್ದಂತೆ ಎಲ್ಲಾ ಸಾಲುಸಾಲಾಗಿ ಮೈದಾನದಿಂದ ಹೊರಟು ಬಾಗಿಲ ಮೂಲಕ ಹಾದು ಕ್ಲಾಸ್ ರೂಮಿಗೆ ತಲುಪಬೇಕು.. ಆದರೆ ಈ ಒಂದೆರಡು ಹುಡುಗರು ಮಾತ್ರ ಬಿಲ್ಡಿಂಗಿನ ಹತ್ತಿರವಾಗುತ್ತಿದ್ದಂತೆ ಅಲ್ಲೆ ಹತ್ತಿರವಿದ್ದ ಮತ್ತೊಂದು ಕುಸಿದ ಗೋಡೆಯತ್ತ ನಡೆಯುತ್ತಾರೆ.. ಸಾಲಿನ ಕೊನೆಯವರಾದ ಇವರು ನೋಡು ನೋಡುತ್ತಿದ್ದಂತೆ ಕಾಂಪೌಂಡ್ ನೆಗೆದು 'ಪೋಟಾಗಿ' ಪರಾರಿ ! ಅದೆಲ್ಲಿಗೆ ಹೋದರೊ ಗೊತ್ತಾಗುವ ಮೊದಲೆ ಮತ್ತೆ ಇನ್ನೊಂದು ದೃಶ್ಯ.. ಈ ಬಾರಿ ಅದೇ ದೃಶ್ಯದ ಪುಟ್ಟ ಆದರೆ ತುಸು ವಿಭಿನ್ನ ಅವೃತ್ತಿ... ಅವರಿರುವ ಆ ತರಗತಿ ಆ ಮೊದಲ ಮಹಡಿ-ಅಂತಸ್ತಿನ ಸಾಲಿನಲ್ಲಿರುವ ಕಡೆಯ ಕೊಠಡಿ.. ಮಧ್ಯಾಹ್ನ ಮೊದಲ ಪಿರಿಯೆಡ್ಡಿನ ಟೀಚರು ಬಂದು ಮಧ್ಯಾಹ್ನದ ಅಟೆಂಡೆನ್ಸ್ ತೆಗೆದುಕೊಂಡು ಕ್ಲಾಸು ಆರಂಭಿಸುತ್ತಾರೆ.. ಆ ಪಿರಿಯೆಡ್ ಮುಗಿದು ಅವರು ಹೊರಡುತ್ತಿದ್ದಂತೆ ಮತ್ತೆ ಮುಂದಿನ ಪಿರಿಯೆಡ್ಡಿನ ಟೀಚರು ಬರಲು ಇರುವ ಐದಾರು ನಿಮಿಷದ 'ಸ್ಥಿತ್ಯಂತರ ಅವಧಿ'.. ಆ ಹುಡುಗನೂ ಸೇರಿದಂತೆ ಮತ್ತಿಬ್ಬರು ಮೆಲ್ಲಗೆ ಕ್ಲಾಸ್ ರೂಮಿನಿಂದ ಹೊರಗೆ ಇಣುಕಿ ಹಾಕಿ ಸುತ್ತ ಮುತ್ತ ಯಾರೂ ಇಲ್ಲವೆಂದು ಮನವರಿಕೆ ಮಾಡಿಕೊಂಡವರೆ, ನೀರು ಕುಡಿಯಲೊ, ಟಾಯ್ಲೆಟ್ಟಿಗೊ ಏನೊ ಹೊರಟವರಂತೆ ಮೆಟ್ಟಿಲಿಳಿದು ಕೆಳಗೆ ಜಾರಿಕೊಂಡು ಬಿಡುತ್ತಾರೆ.. ಆ ಇಳಿಯುವ ಹಾದಿಯಲ್ಲಿ ಮೆಟ್ಟಿಲಿಳಿಯುತ್ತಿರುವಂತೆಯೆ ಸರಸರನೆ ಸಮವಸ್ತ್ರದ ಷರಟು ತೆಗೆದು ಬಿಡುತ್ತಾರೆ - ಒಳಗಿನ ಬನೀಯನ್ ಬದಲು ಧರಿಸಿರುವ ಬಣ್ಣದ ಟೀ ಷರಟು ಮಾತ್ರ ಎದ್ದು ಕಾಣುವಂತೆ. ಅದರ ಜತೆಗೆ ಹೊಟ್ಟೆಗೆ ಸಿಕ್ಕಿಸಿಕೊಂಡಂತಿದ್ದ ಎರಡು ನೋಟ್ ಪುಸ್ತಕಗಳು ಕೈಗೆ ಬರುತ್ತವೆ.. ಈಗ ಮೂವರೂ ಆ ಸ್ಕೂಲಿನ ಜತೆಯಲ್ಲೆ ಇರುವ ಜೂನಿಯರ ಕಾಲೇಜಿನ ಬಿಲ್ಡಿಂಗಿನ ಪಕ್ಕವೆ ಹೋಗುತ್ತಿದ್ದಾರೆ - ಆ ಕಾಲೇಜು ಹುಡುಗರ ಹಾಗೆಯೆ. ಸಮವಸ್ತ್ರವಿಲ್ಲದ ಟೀ ಷರ್ಟು ಮತ್ತು ಕೈಲ್ಹಿಡಿದ ನೋಟ್ ಪುಸ್ತಕಗಳಿಂದ ಥೇಟ್ ಕಾಲೇಜು ಹುಡುಗರ ಹಾಗೆಯೆ ಕಾಣುತ್ತಿದ್ದಾರೆ ಸಹ.. ಮೂವರು, ನೇರ ಕಾಲೇಜು ದಾಟಿ ಪಕ್ಕದ ಕ್ಯಾಂಟೀನಿನತ್ತ ನುಗ್ಗಿ ಅಲ್ಲಿಂದ ಹೊರಬೀಳುತ್ತಾರೆ - ಎಲ್ಲರೂ ಅವರವರ ದಾರಿ ಹಿಡಿದು... ಎಲ್ಲಿಗೆ ಹೋಗುತ್ತಾರೆಂದು ಕಾಣುವ ಕುತೂಹಲ ಆರುವ ಮೊದಲೆ ಮತ್ತೆ ಸೀನ್ ಚೇಂಜ್..

ಈ ಬಾರಿ ಯಾವುದೊ ದೊಡ್ಡ ಕಾಲೇಜು ದೃಶ್ಯ...ಕಾಲೇಜಿನ ಕ್ಲಾಸಿಗೆ ಹೋಗದೆ ಮತ್ತೊಂದಷ್ಟು ಹುಡುಗರ ಜತೆ ಗುಂಪುಗಟ್ಟಿಕೊಂಡು ಹರಟೆ ಹೊಡೆಯುತ್ತ ಸಿಗರೇಟು ಸೇದುತ್ತಾ, ಕಾಫಿ ಕುಡಿಯುತ್ತ ಕುಳಿತಿದ್ದಾನೆ ಅದೆ ಮೀಸೆ ಬಲಿತ ಹುಡುಗ...ಜತೆಗೊಂದಿಬ್ಬರು ಹುಡುಗಿಯರೂ ಜತೆಯಲ್ಲಿ..ಇದ್ದಕ್ಕಿದ್ದಂತೆ ಎಲ್ಲಾ ಎದ್ದು ಸೈಕಲ್, ಬೈಕು, ಸ್ಕೂಟರನೇರಿ ಹೊರಟು ಬಿಡುತ್ತಾರೆ ಸಿನೆಮಾ ಥಿಯೇಟರೊಂದರ ಕಡೆಗೆ.. ಅಲ್ಲಾವುದೊ ಜಾಕೀ ಚಾನನ ಸಿನಿಮಾ - ಪೋಲೀಸ್ ಸ್ಟೋರಿ ಇರಬಹುದೇನೊ? ಪರದೆಯ ಮೇಲೆ ಪ್ರದರ್ಶಿತವಾಗುತ್ತಿರುವ ಸ್ಟಂಟುಗಳು ಕಾಣಿಸುತ್ತಿವೆ.. ಆ ಸ್ಟಂಟಿಗೆ ಸಂವಾದಿಯೇನೊ ಎಂಬಂತೆ ಪ್ರತಿಯೊಂದು ಕಿಕ್ಕೂ, ನೆಗೆತ, ಜಿಗಿತ, ಪಲ್ಟಿಗೆ ಕತ್ತಲ ಮಂದಿರದಲ್ಲೆ ಫ್ಲಾಷ್ ಕ್ಯಾಮರ ಹಿಡಿದ ಮಂದಿ ಕ್ಲಿಕ್ಕಿಸುತ್ತ ಪೋಟೊ ತೆಗೆವ 'ಫಳಾರ್' 'ಫಳಾರ್' ಮಿಂಚುಗಳು...ಅಲ್ಲಿಗೆ ಒಳ ಹೊಕ್ಕು ಮುಂದೇನಾಗಲಿದೆಯೊ ಪರದೆಯ ಮೇಲೆ ಎನ್ನುವ ಕುತೂಹಲದಲ್ಲಿ ನೋಡುತ್ತಿದರೆ ಮತ್ತೆ ದೃಶ್ಯ ಬದಲು... 

ಈಗಲ್ಲಿ ಒಂದು ಬಾರಿನ ಟೇಬಲ್ ಕಾಣಿಸುತ್ತಿದೆ... ಬೆಳಗಿನ ಹನ್ನೊಂದಕ್ಕೆ ತೆರೆಯುವ ಆ ಬಾರು ಕಮ್ ರೆಸ್ಟೋರೆಂಟಿನಲ್ಲಿ, ಅದೂ ಹನ್ನೊಂದರ ಬೆಳಗಿನ ಹೊತ್ತಲ್ಲಿ - ಅಲ್ಲಿ ಇವರ ಗುಂಪನ್ನು ಬಿಟ್ಟರೆ ಬೇರಾರೂ ಇಲ್ಲ..  ಅಲ್ಲಿಂದ, ಬೆಳ್ಳಂಬೆಳಗಿನ ಆ ಅವೇಳೆಯಲ್ಲಿ ಆರಂಭವಾದ ಬಿಯರು, ಆರ್ ಸಿ ಮತ್ತಿತರ ಡ್ರಿಂಕುಗಳ ಸೇವನೆ ಅವಿರತ ನಡೆಯುತ್ತಿದೆ ಕುರುಕು ತಿಂಡಿಗಳ ಸೇವನೆ ಜತೆಗೆ.. ರಾತ್ರಿ ಹನ್ನೆರಡಾದರು ನಿಲ್ಲದಂತೆ... ಗಾನ ಪಾನ ಸೇವೆ ಅವಿರತ ನಡೆಯುತ್ತಿರುವಂತೆ ನಡುವಲೆಲ್ಲೊ ಮತ್ತೊಬ್ಬಿಬ್ಬರು ಬಂದು ಜತೆಗೆ ಸೇರಿಕೊಳ್ಳುತ್ತಾರೆ.. ಇದ್ದಕ್ಕಿದ್ದಂತೆ ಬಾರಿನ ಮಾಲೀಕನಿಗೆ ಸೌಂಡ್ ಸಿಸ್ಟಂನ ಬಾಯಿ ಮುಚ್ಚಿಸಲು ಆಜ್ಞಾಪಿಸುತ್ತಾರೆ.. ಅವರಲ್ಲೆ ಒಬ್ಬನ ಮೋಹಕ ಕಂಠದಲ್ಲಿ ಹಾಡುಗಳ ಖಜಾನೆ ಹರಿದು, ಅವರೆಲ್ಲರ ಮೆದುಳಿಗೆ ಮಿಂಚಿನ ಸಂಚಲನೆಯಾಗಿ ರವಾನೆಯಾಗತೊಡಗುತ್ತದೆ... ಕುಡಿತದ ಅಮಲೇರಿ ಗಾನದ 'ಗರಂ' ಹೆಚ್ಚಿತೊ, ಗಾನದಿಂದ ಕುಡಿತದ ಅಮಲಿನ ಹಗುರ ತೇಲಾಡುವ ಗರಿಯ ಪುಳಕದ ಭಾವ ಮತ್ತೊಂದು ಸ್ತರಕ್ಕೇರಿತೊ - ಎಲ್ಲವೂ ಅಯೋಮಯ... ಹೀಗೆ ಉರುಳುತ್ತ ಹೋಗುವ ಕಾಲದ ಗಡಿಯಾರ ರಾತ್ರಿ ಹನ್ನೆರಡರ ಹತ್ತಿರ ತಲುಪಿ ಬಾರು ಮುಚ್ಚುವ ವೇಳೆಯಾಯ್ತೆಂದು ಜ್ಞಾಪಿಸುತ್ತದೆ. ಇವರ ನಂತರ ಬಂದವರೆಲ್ಲರೂ ಇವರಿಗೂ ಮೊದಲೆ ಕುಡಿದು ಮುಗಿಸಿ ಜಾಗ ಖಾಲಿ ಮಾಡಿ ಹೋದರೂ ಇವರು ಮಾತ್ರ ಹಾಡಿಕೊಳ್ಳುತ್ತ , ಹಾರಾಡಿಕೊಂಡು, ತೂರಾಡಿಕೊಂಡು ಟೇಬಲ್ ಹಿಡಿದೆ ಕೂತಿದ್ದಾರೆ.. ಕೊನೆಗೂ  ಬಾರಿನ ಮಾಲೀಕನಾಣತಿಯಂತೆ ಆ ಟೇಬಲ್ ಸರ್ವ್ ಮಾಡುತ್ತಿದ್ದ ಬೇರರ ಬಂದು ವಿನಯದಿಂದ, ಮೈಯೆಲ್ಲಾ ಹಿಡಿಯಾದವನಂತೆ, ಯಾವುದೊ ತಪ್ಪು ಮಾಡಿದವನಂತೆ - ಬಾರು ಮುಚ್ಚುವ ವೇಳೆಯಾಯ್ತೆಂದು ವಿನಂತಿಸಿಕೊಂಡಾಗ, ಜ್ಞಾನೋದಯವಾದವರಂತೆ ಎಲ್ಲಾ ತರದ ನರ್ತನ ಭಂಗಿಯಾಡುವ ದೇಹಗಳನ್ನು ಮೇಲೆತ್ತಿ ಹಿಡಿದುಕೊಂಡು, ಜಾಕೇಟು ತಗಲಿಸಿ ಹೊರಡುವ ಹೊತ್ತಿಗೆ ಕಾಲ ಬುಡದಲ್ಲಿ ಸರಿಯಾಗಿ ಇಪ್ಪತ್ತೆಂಟು ಖಾಲಿಯಾದ ಬಿಯರು ಬಾಟಲುಗಳು, ನಾಲ್ಕಾರು ರಾಯಲ್ ಚಾಲೇಂಜ್, ಒಂದಷ್ಟು ಡಾಕ್ಟರ ಸ್ಪೆಷಲ್ ಮತ್ತು ಚೆಲ್ಲಾಪಿಲ್ಲಿಯಾಗಿ ಬಿದ್ದ ಮೂರ್ನಾಲ್ಕು ತ್ರಿಬಲ್ ಎಕ್ಸ್ ರಂ ದೊಡ್ಡ ಬಾಟಲಿಗಳು ಅಣಕಿಸುತ್ತಿರುತ್ತವೆ... ಅವರಲ್ಲೆ ಯಾರೊ ಒಬ್ಬ ಬಿಲ್ಲು ತೆರುತ್ತಾನೆ. ತೂರಾಡಿಕೊಂಡೆ ಪಾರ್ಕಿಂಗ್ ಲಾಟಿನ ಗಾಡಿಗಳತ್ತ ನಡೆಯುತ್ತಾರೆ. ಇದ್ದ ಎರಡೇ ಗಾಡಿಗಳಲ್ಲಿ - ಅದರಲ್ಲೂ ಒಂದು ಬೈಕು, ಮತ್ತೊಂದು ಲೂನ ಮೊಪೆಡ್ - ಅಷ್ಟೂ ಜನರೂ ಹೊರಡುತ್ತಾರೆ... ಲೂನಾದಲ್ಲೂ ನಾಲ್ಕು ಜನರನ್ನು ತುಂಬುವುದು ಹೇಗೆಂಬ ಚಿಂತೆಯೂ ಬರುವುದಿಲ್ಲ ಅವರಿಗೆ.. ಒಬ್ಬ ಬಾಲ್ಕನಿ ಸೀಟು (ಹಿಂದಿನ ಕ್ಯಾರಿಯರು ಸೀಟು) ಹಿಡಿದರೆ, ಮತ್ತೊಬ್ಬ 'ಗಾಂಧಿ ಕ್ಲಾಸ್' (ಮುಂದಿನ ಸೀಟು ಮತ್ತು ಹ್ಯಾಂಡಲಿನ ನಡುವಲಿರುವ ಜಾಗ)... ಮತ್ತಿಬ್ಬರು ಇರುವ ಒಂದೆ ಸೀಟಿನುದ್ದವನ್ನು ಆರಾಮವಾಗಿ ಹಂಚಿಕೊಂಡು ಕೂರುತ್ತಾರೆ...ಅಲ್ಲಿ ಎರಡು ಅದ್ಭುತಗಳು ಒಟ್ಟಿಗೆ ಜರುಗುತ್ತಿವೆ.. ಒಂದು ಆ ನಾಲ್ಕು ದೇಹಗಳನ್ಹೊತ್ತ ನರಪೇತಲ ಲೂನ ನಿಜಕ್ಕು ರಸ್ತೆಯಲ್ಲಿ ಚಲಿಸುತ್ತಿದೆ - ಅವರನ್ನೆಲ್ಲ ಹೊತ್ತುಕೊಂಡೆ ಎನ್ನುವುದು ಮೊದಲ ಅದ್ಭುತ. ಎರಡನೆಯದು - ಅದೇನು ಅವರೆ ಲೂನಾ ನಡೆಸುತ್ತಿದ್ದಾರೊ, ಅಥವಾ ಲೂನ ಅವರನ್ನು ನಡೆಸುತ್ತಿದೆಯೊ? - ಒಂದು ಲೂನಾ ರಸ್ತೆಯಲ್ಲಿ ಹಾವಿನಂತೆ ಚಲಿಸಿದರೆ ಹೇಗೆ ಹೋಗಲಿಕ್ಕೆ ಸಾಧ್ಯವೊ , ಯಥಾವತ್ ಅದೇ ರೀತಿಯಲ್ಲಿ ಮುನ್ನುಗ್ಗಿ ಚಲಿಸುತ್ತಿದೆ ಗಾಡಿ.. ಪುಣ್ಯವಶಾತ್ ಮಧ್ಯರಾತ್ರಿಯಾದ ಕಾರಣ ರಸ್ತೆಯಲ್ಲಿ ಯಾರೂ ಇಲ್ಲ, ಪೋಲೀಸರೂ ಸೇರಿದಂತೆ...!

ಮತ್ತೆ ಬದಲಾದ ದೃಶ್ಯವೀಗ, ಯಾವುದೊ ಪ್ರತಿಷ್ಟಿತ ವೈಭವೋಪೇತ ದುಬಾರಿ ರೆಸ್ಟೊರೆಂಟೊಂದರ ಟೇಬಲಿನತ್ತ.. ಅಲ್ಲಿ ಕೂತ ಹತ್ತು ಮಂದಿಯಲ್ಲಿ ಆರು ಹುಡುಗಿಯರು, ನಾಲ್ವರು ಹುಡುಗರು - ಎಲ್ಲಾ ಕಾಲೇಜು, ಕ್ಲಾಸು ಮೇಟುಗಳಿದ್ದಂತಿದೆ.. ಹುಡುಗಿಯರ ಮುಂದೆ ತಮ್ಮ ಧಾರಾಳತನ ತೋರಿಸಿಕೊಂಡು ತಾವೆಷ್ಟು 'ದಿಲ್ದಾರ್' ಎಂದು ತೋರಿಸಲು ಹೊರಟಂತಿದೆ ಹುಡುಗರ ಬಳಗ - ಅದಕ್ಕೆಂದೆ ಈ ದುಬಾರಿ ಜಾಗ, ಅವರಿಗೂ ಅದೆ ಮೊದಲ ಬಾರಿಯಾದರೂ ಕೂಡ ! ಆ ಹುಡುಗಿಯರಿಗೆ ಗೊತ್ತಿರದ ವಿಷಯವೆಂದರೆ, ನಾಲ್ವರೂ ತಮ್ಮ ಆ ತಿಂಗಳ ಪಾಕೇಟ್ ಮನಿ ಮತ್ತು ಹಾಸ್ಟೆಲ್ ಹಣವನ್ನೆಲ್ಲ ಒಗ್ಗೂಡಿಸಿ ಆ ರೆಸ್ಟೋರೆಂಟಿನ ಖರ್ಚಿಗೆ ಹಣ ಹೊಂದಿಸಿದ್ದಾರೆಂದು ! ಆದರೆ, ಮೆನು ನೋಡಿ ಆರ್ಡರು ಮಾಡಲು ಶುರುವಾಗುತ್ತಿದ್ದಂತೆ ಹುಡುಗರ ಮುಖದಲ್ಲಿ ಬೆವರಿಳಿಯುತ್ತಿದೆ - ಪ್ರತಿ ತಿಂಡಿಯ ಪಕ್ಕದಲ್ಲಿ ಹಾಕಿರುವ ದರ ಪಟ್ಟಿಯನ್ನು ನೋಡುತ್ತ.. ಮೊದಲ ಸುತ್ತಿನ ಆರ್ಡರಿನಲ್ಲೆ ಅವರಿಗೆ ತಿಳಿದುಹೋಗಿದೆ, ತಮ್ಮಲ್ಲಿರುವ ಹಣ ಮೊದಲ ಸುತ್ತಿನ ಆರ್ಡರಿನ ಅರ್ಧಕ್ಕೂ ಸಾಕಾಗುವುದಿಲ್ಲ ಎಂದು. ಆಗ ಇದ್ದಕ್ಕಿದ್ದಂತೆ ಅವರಲ್ಲಿಬ್ಬರು ಹುಡುಗರು ಆಚೆ ಎದ್ದು ಹೋಗುತ್ತಾರೆ, ಮೊಪೆಡ್ಡಿನಲ್ಲಿ ಅವಸರವಸರವಾಗಿ ಹೊರಟಿದ್ದರು, ಒಳಗಿನವರಿಗೆ ಏನೂ ಸುಳಿವು ಸಿಗದ ಹಾಗೆ.. ಸುಮಾರು ಅರ್ಧಗಂಟೆಯ ತನಕ ಕಾಣೆಯಾಗಿದ್ದವರು ನಂತರ ಬಂದಾಗ ಗೆಲುವಿನ, ಹೆಮ್ಮೆಯ ಮುಖ. ಸಿಗರೇಟು ಸೇದಲು ಹೋದರೆಂದುಕೊಂಡ ಹುಡುಗಿಯರು ಅದಕ್ಕೆ ಅರ್ಧಗಂಟೆ ಬೇಕೇ? ಎಂದು ತಿನ್ನುವುದರ ನಡುವೆಯೆ ಚರ್ಚಿಸುತ್ತಿದ್ದರೆ, ಹೋಗದೆ ಜತೆಯಲ್ಲಿದ್ದ ಮತ್ತೊಬ್ಬನ ಕಣ್ಣಿಗೆ ಮಾತ್ರ ಗೊತ್ತಾಗುತ್ತದೆ, ಹೋಗಿದ್ದವನೊಬ್ಬನ ಕೈ ಬೆರಳಿನಲಿದ್ದ ಚಿನ್ನದ ಉಂಗುರ ಅದೃಶ್ಯವಾಗಿದೆ ಎಂದು. ಪಾನ್ ಶಾಪಿನ ಸಂದೂಕ ಸೇರಿ ಉಂಗುರವನ್ನು ಅಡವಿರಿಸಿಕೊಂಡು ತಂದ ದುಡ್ಡಿಂದಲೆ ಮತ್ತಷ್ಟು ಮರುಕಳಿಸಿದ ಕಳೆಯಿಂದ, ಪೊಗರಿನ ಹಮ್ಮಿನಿಂದ ಅವರಷ್ಟು ಬೀಗುತ್ತ, ಎಗರಾಡುತ್ತಿದ್ದಾರೆಂದು ಅವನಿಗಿನ್ನೂ ಗೊತ್ತಾಗಿಲ್ಲ... ಎಲ್ಲ ಒಗಟಂತೆ ಕಾಣುತ್ತಿದ್ದರೂ ಅವರು ಅದೆಂತೊ ದುಡ್ಡು ಹೊಂದಿಸಿಕೊಂಡು ಬಂದಿದ್ದಾರೆಂದು ಮಾತ್ರ ಅವನಿಗೂ ಅರಿವಾಗಿದೆ.. ಹೇಗೊ, ಹುಡುಗಿಯರ ಮುಂದೆ ಅವಮಾನವಾಗದಿದ್ದರೆ ಸರಿ...! 

ಅಂತೂ ಎಲ್ಲರ ಊಟ ಮುಗಿದು ಇನ್ನೇನು ಹೊರಡಬಹುದೆನ್ನುವ ಹೊತ್ತಲ್ಲಿ 'ಸದ್ಯ, ಇರುವ ಹಣದೊಳಗೆ ಮುಗಿಯುತ್ತಿದೆಯಲ್ಲ, ಕೇವಲ ಆಟೋ ಚಾರ್ಜಿಗೆ ಮಾತ್ರ ಉಳಿಸಿ ' ಎಂದು ನಿಟ್ಟುಸಿರಿಡುವ ಹೊತ್ತಿಗೆ ಸರಿಯಾಗಿ, ಹುಡುಗಿಯೊಬ್ಬಳಿಂದ ಧುತ್ತನೆ ಬೇಡಿಕೆಯೊಂದು ಬರುತ್ತದೆ - ಡೆಸರ್ಟು ಆರ್ಡರ ಮಾಡಬಹುದಲ್ಲ? ಎಂದು. ಹುಡುಗರ ಮುಖವೆಲ್ಲಾ ಪೆಚ್ಚು...ಆದರೆ ತೋರಿಸಿಕೊಳ್ಳುವಂತಿಲ್ಲ. ಐಸ್ ಕ್ರಿಂ , ಪ್ರೂಟ್ ಸಲಾಡ್ ಆರ್ಡರಿಂಗ್ ನಡೆದ ಹೊತ್ತಲೆ ಮತ್ತೆ ಅವರಿಬ್ಬರು ಹುಡುಗರು ಮಾಯವಾಗುತ್ತಾರೆ..! ಹೋಗುವ ಮೊದಲು ಕ್ಯಾಷಿಯರನ ಕೌಂಟರಿನಲ್ಲು ಏನೊ ವಿಚಾರಿಸುವುದು ಕಾಣುತ್ತಿದೆ.. ಈ ಬಾರಿ ಇಪ್ಪತ್ತು ನಿಮಿಷಕ್ಕೆ ವಾಪಸ್ಸು ಬಂದು ಮಿಕ್ಕಿದ್ದ ಐಸ್ಕ್ರೀಮ್, ಪ್ರೂಟ್ ಸಲಾಡ್ ತಿನ್ನುತ್ತಾರೆ. ಮತ್ತೆ ಮುಖದಲ್ಲಿ ಗೆಲುವಿನ ಕಳೆ. ಈ ಬಾರಿಯೂ ಆ ಹುಡುಗನೊಬ್ಬನ ಗಮನಕ್ಕೆ ಮಾತ್ರ ಬರುತ್ತದೆ - ತೋಳಿನ ಮೇಲಕ್ಕೆ ಮಡಿಸಿಕೊಂಡಿದ್ದ ತುಂಬು ತೋಳಿನ ಷರಟು, ಯಾಕೆ ಮರ್ಯಾದಸ್ತನಂತೆ ಈಗ ಪೂರ್ತಿ ಕೈ ಮುಚ್ಚಿಕೊಂಡಿದೆ ಎಂದು. ಅದರ ಮಣಿಕಟ್ಟಿನ ಉಬ್ಬಿರಬೇಕಾದ ಜಾಗ ಯಾಕೊ ಮಟ್ಟಸವಾಗಿ ಕಾಣುತ್ತಿದೆ; ಅಲ್ಲಿದ್ದ ವಾಚು ಕೂಡ ಅದೆ ಪಾನ್ ಶಾಪಿನ ಸಂದೂಕ ಸೇರಿದೆಯೆಂದು ಅವನಿಗಿನ್ನೂ ಊಹಿಸಲಾಗದಿದ್ದರೂ ಏನೊ ನಡೆದಿರುವುದೆಂದು ಮಾತ್ರ ಗೊತ್ತಾಗುತ್ತಿದೆ... ಹೊರಗೆ ಹೋಗಿ ಬಂದ ಅವರಿಬ್ಬರು ಹುಡುಗರು ಮಾತ್ರ ಯಾಕೆ ಪದೇಪದೇ ಮುಖ ನೋಡಿಕೊಂಡು, ಪೆದ್ದುಪೆದ್ದಾಗಿ ತಮ್ಮತಮ್ಮಲ್ಲೆ ನಗುತ್ತಿದ್ದಾರೆಂದು ಅಲ್ಲಿದ್ದ ಹುಡುಗಿಯರಿಗೆ ಯಾರಿಗೂ ಗೊತ್ತಾಗುತ್ತಲೆ ಇಲ್ಲ.. ತಮಗೆ ಹೇಳಬಾರದ 'ನಾನ್ ವೆಜ್' ಜೋಕೇನೊ ತಮ್ಮಲ್ಲೆ ಹಂಚಿಕೊಂಡಿರಬೇಕೆಂದೊ ಅಥವಾ ತಮ್ಮನ್ನು ಕುರಿತೆ ಏನೊ ಲೇವಡಿ ಮಾಡಿಕೊಳ್ಳುತ್ತಿರಬೇಕೆಂದು ಅವರ ಅನುಮಾನ, ಗುಮಾನಿ..

ಮತ್ತೆ ಆ ದೃಶ್ಯವೆಲ್ಲಿಗೆ ಒಯ್ಯಲಿದೆಯೊ ಎನ್ನುವಲ್ಲಿಗೆ ಸರಿಯಾಗಿ ಮತ್ತೆ ದೃಶ್ಯ ಬದಲು..ಒಂದರ ಹಿಂದೆ ಒಂದು ಸ್ಲೈಡ್ ಪ್ರೊಜೆಕ್ಟರಿನಲ್ಲಿ ಹಾಕಿ ತೋರಿಸಿದ ಹಾಗೆ ಮೂಡಿ, ಮೂಡಿ ಮಾಯವಾಗುತ್ತಿವೆ ಎಲ್ಲೆಲ್ಲಿಂದಲೊ ಹೆಕ್ಕಿ ತಂದ ಹಕ್ಕಿ ಕಾಳುಗಳ ಹಾಗೆ. ಮತ್ತೀಗ ಅಲ್ಲಿಯ ತನಕದ ದೃಶ್ಯ ಬದಲಾಗಿ ಮತ್ತಿನ್ನೇನೊ ಮೂಡುವ ಮೊದಲೆ, ಅಲ್ಲಿಯವರೆವಿಗೂ ಮೂಡಿದ್ದವುಗಳ ಒಂದು ಸರಳ ಸಿಂಹಾವಲೋಕನದಂತಹ ವಿಶ್ಲೇಷಣೆ ಮಾಡಬೇಕೆನಿಸುತ್ತಿದೆ ಶ್ರೀನಾಥನಿಗೆ. ಅಲ್ಲಿಯವರೆಗು ಕಾಣುತ್ತಿದ್ದ ದೃಶ್ಯಗಳೆಲ್ಲ ಅವನ ದರ್ಪ, ಅಟ್ಟಹಾಸ, ಒಣಹಮ್ಮು, ಗರ್ವ, ಅಧಿಕಾರ, ಸ್ವಾಭಿಮಾನಗಳನ್ನು ನೆನಪಿಸುವ, ನಿರೂಪಿಸುವ ಘಟನೆಗಳೆ ಆಗಿದ್ದುದು ವಿಶೇಷ. ಆ ಸರಪಳಿ ದೃಶ್ಯಗಳನ್ನು ತುಸು ಆಳವಾಗಿ ಹೊಕ್ಕು ನೋಡಿದರೆ ಅವುಗಳಲ್ಲೇನೊ ಅನುಕ್ರಮತೆ, ಸಾಮ್ಯತೆ ಇರುವಂತೆ ಕಾಣುತ್ತಿದೆಯಲ್ಲ? ಹೌದು, ನಿಜ...ಇವೆಲ್ಲಾ ದೃಶ್ಯಗಳು ತನ್ನಲ್ಲಿ ಅಡಕವಾಗಿರುವ 'ರಾಜಸ' ಗುಣದ ಅಂಶವನ್ನು ಎತ್ತಿ ಹಿಡಿದು ತೋರುವ ಪ್ರಕರಣಗಳು. ತಾನು ನೇರವಾಗಿಯಾದರೂ ಸರಿ, ಪರೋಕ್ಷವಾಗಿಯಾದರು ಸರಿ ಭಾಗಿಯಾಗಿದ್ದ ಈ ಎಲ್ಲಾ ದೃಶ್ಯಗಳು ತನ್ನ ಪ್ರವೃತ್ತಿಗೆ ಕನ್ನಡಿ ಹಿಡಿಯುವಂತೆ ಮೂಡಿ ಬಂದ ನೆನಪಿನೋಲೆಗಳಿರಬೇಕು.. ಬಹುಶಃ ಕೆತ್ತುತ್ತಾ ಹೋದರೆ ಇನ್ನೂ ನೂರಾರು ಇಂತಹುದೆ ದೃಶ್ಯಗಳು ಇನ್ನೂ ಬರುತ್ತಲೆ ಇರಬಹುದು.. ಆದರೆ ಅಕ್ಕಿ ಬೆಂದಿದೆಯೊ ಇಲ್ಲವೊ ನೋಡಲಿಕ್ಕೆ ಅಗುಳನ್ನವೆ ಸಾಕಲ್ಲವೆ? ವನ್ಯಾಶ್ರಮಧಾಮದಲ್ಲಿ ಹೀಗೆ ಆಲೋಚಿಸಲು ಸಾಕಷ್ಟು ಸಮಯವೇನೊ ಇರುತ್ತಿದ್ದರೂ ಅತಿಥಿಗಳಾಗಿ ಪ್ರತಿ ದಿನವೂ ಭಾಗವಹಿಸಲೆ ಬೇಕಾದ, ಪಾಲ್ಗೊಳ್ಳಲೇ ಬೇಕಾದ ಕಾರ್ಯಕ್ರಮಗಳು ದಿನವೂ ಇರುತ್ತಿದ್ದ ಕಾರಣ ಕೆಲವೊಮ್ಮೆ ವಿಚಾರ ಲಹರಿಯ ಸರಣಿಗೆ ಬ್ರೇಕ್ ಹಾಕಿ ಹೋಗಬೇಕಾಗಿ ಬರುತ್ತಿತ್ತು. ಅದೆಲ್ಲ ಮುಗಿದು ವಾಪಸ್ಸು ಬಂದಾಗ ಆ ಹಳೆಯ ಜಾಡೆ ಮರೆತಂತಾಗಿ, ಹೊಸದಾಗಿ ಆರಂಭಿಸುವ ಪಾಡು ಉಂಟಾಗುತ್ತಿತ್ತು. ಆದರೆ ಮಾಂಕ್ ಸಾಕೇತರು ಸ್ಪಷ್ಟವಾಗಿ ಹೇಳಿದ್ದರು - ಯಾವುದನ್ನು ಬಲವಂತವಾಗಿ ಎಳೆತಂದು ಕೂರಿಸುವ ಅಗತ್ಯವಿಲ್ಲವೆಂದು. ಬಂದದ್ದನ್ನಷ್ಟೆ ವೀಕ್ಷಿಸುತ್ತ ನಡೆದರೆ ಸಾಕಿತ್ತು. ಹೀಗೆಲ್ಲಾ ಯೋಚಿಸುತ್ತಿದ್ದ ಶ್ರೀನಾಥನಿಗೆ ತನ್ನ  ಮನಃಪಟಲದಲ್ಲಿ ಮುಂದೇನು ಮೂಡಬಹುದೆಂಬ ಕುತೂಹಲ ಮತ್ತೆ ತೀಡಿದಂತಾಗಿ ಮನಸನ್ನು ತುಸು ಹೊತ್ತಿಗೆ ಮುಂಚೆ ಮೂಡುತ್ತಿದ್ದ ಹುಡುಗನ ಚಿತ್ರಣದತ್ತ ಮತ್ತೆ ಜಾರಿಸಿದ ತನ್ನ ಮನಸನ್ನು. ಆದರೆ ಆ ಹೊತ್ತಿಗಾಗಲೆ ದಣಿದು ಹೋದಂತಿದ್ದ ಮನ ಇನ್ನಾವುದೊ ಯೋಜನೆ ಹಾಕಿದಂತಿತ್ತು ; ಆ ಜಾರುವ ಯತ್ನದಲ್ಲೆ ಅದಾವುದೊ ಮಾಯೆಗೆ ಸಿಕ್ಕಿದಂತೆ ಮನಃಪಟಲದ ಸ್ಮೃತಿಯಿಂದ ಎಲ್ಲವೂ ಮರೆಯಾಗಿ ಅಳಿಸಿ ಹೋಗಿ, ಲೌಕಿಕಾಲೌಕಿಕ ಅನುಭವಗಳ ಗ್ರಹಿಕೆಯಲ್ಲಿ ತಲ್ಲೀನವಾದಂತಿದ್ದ ಪ್ರಜ್ಞಾ ಮನವನ್ನು ತನ್ನ ಹಿಡಿತದಿಂದ ಸಡಿಲಿಸುತ್ತ, ಅರಿವಳಿಕೆಯುಡಿಸಿ ಮತ್ತಾವುದೊ ಲೋಕಕ್ಕೆ ಕಳಿಸಿಬಿಟ್ಟಿತ್ತು - ನಿದಿರೆಯೆಂಬ ಮಂಪರಿನ ಮಾಯಜಾಲದಲ್ಲಿ ಸುತ್ತಿಟ್ಟು. 

ಮೊದಲ ದಿನ ರಾತ್ರಿ ಹೀಗೆ ಯಾವುದೊ ಹೊತ್ತಲ್ಲಿ ಗೊತ್ತಿಲ್ಲದಂತೆ ನಿದ್ರಾವಶನಾಗಿದ್ದ ಶ್ರೀನಾಥ, ಎರಡನೆ ದಿನ ಬೆಳಿಗ್ಗೆ ಅಚ್ಚರಿಯೆಂಬಂತೆ ಮೂರು ಗಂಟೆಗೆಲ್ಲ ಎದ್ದು ಕುಳಿತುಬಿಟ್ಟಿದ್ದ. ಆ ಹೊತ್ತಿನ ಎಚ್ಚರದಲ್ಲೂ ಆಲಸಿಕೆಯಾಗಲಿ, ನಿದ್ರಾಹೀನತೆಯಾಗಲಿ ಕಾಡದೆ ಶುದ್ಧ ನಿರಾಳ ಪ್ರಶಾಂತತೆ ಮನೆ ಮಾಡಿಕೊಂಡಿತ್ತು. ಅದಕ್ಕೂ ಮೀರಿದ ವಿಸ್ಮಯವೆಂದರೆ ಒಂದು ತಿಲ ಮಾತ್ರದಷ್ಟು ಹಸಿವಿನ ಸುಳಿವಿರಲಿಲ್ಲ, ದೈನಂದಿನ ಶೌಚಕ್ಕಿರುತ್ತಿದ್ದ ಮಾಮೂಲಿ ಒತ್ತಡದ ಸುಳಿವೂ ಇರಲಿಲ್ಲ..! ಯಾವುದೊ ಪರಿಶುದ್ಧ ಅಂತರ್ವ್ಯಾಪಿ ಅದೃಶ್ಯ ಶಕ್ತಿಯೊಂದು ಒಳ ಹೊರಗೆಲ್ಲ ಪಸರಿಸಿಕೊಂಡು ಅದರ ಕಾವಿನಲ್ಲೆ ಒಳಗು-ಹೊರಗನ್ನು ಬೆಚ್ಚಗಿರಿಸಿದಂತಹ ಹಿತಕರವಾದ ಭಾವನೆಯನ್ನು ಮಾತ್ರ ಒಡಮೂಡಿಸಿಬಿಟ್ಟಿತ್ತು. ಅಂದು ಬೆಳಗಿನ ಭಿಕ್ಷಾಟನೆಗೆ ಹೊರಡುವ ಮೊದಲೆ ಮಾಂಕ್. ಸಾಕೇತರು ಶ್ರೀನಾಥನಿದ್ದ ಕುಟಿಗೆ ನೇರ ಬಂದು, ಆ ದಿನ ಬೆಳಗಿನ ಹದಿನೈದು ನಿಮಿಷವಷ್ಟೆ ಕಾಲಾವಕಾಶ ಅವನೊಡನೆ ಕಳೆಯಲು ಸಾಧ್ಯವೆಂದು ಹೇಳಿ ಹಿಂದಿನ ದಿನದ ಪ್ರಗತಿಯ ಕುರಿತು ವಿಚಾರಿಸಿಕೊಂಡಿದ್ದರು. ತನ್ನೆಲ್ಲಾ ರಾಜಸ ಗುಣ ಪ್ರೇರಿತ ದೃಶ್ಯಾವಳಿಯ ವಿವರಗಳನ್ನೆಲ್ಲ ವರ್ಣಿಸದೆ ಬರಿ ಸಾರಾಂಶದಲ್ಲಿ ಏನಾಗುತ್ತಿದೆಯೆಂದು ಹೇಳಿಕೊಳ್ಳಲೆತ್ನಿಸಿದ ಶ್ರೀನಾಥ.

'ಹೂಂ... ಸ್ವ- ಸಂಕಲನ, ವ್ಯವಕಲನದ ಪ್ರಕ್ರಿಯೆಯ ಮೊದಲ ಹೆಜ್ಜೆಯಂತೂ ಆರಂಭವಾಯಿತೆನ್ನು...ಆದರಿದಿನ್ನು ಆರಂಭವಷ್ಟೆ..ಇನ್ನು ಪ್ರತಿಬಿಂಬದ ಪ್ರತಿಫಲನ ತನ್ನೆಲ್ಲಾ ಆಯಾಮಗಳನ್ನು ಪೂರ್ತಿಯಾಗಿ ತೆರೆದಿಟ್ಟಿಲ್ಲ.. ಆದರೆ ಇಷ್ಟೆಲ್ಲ ಆರಂಭವಾದ ಮೇಲೆ, ಮಿಕ್ಕಿದ್ದೂ ತಾನಾಗೆ ಮೂಡಿ ಬರಲೆ ಬೇಕು.. ಈಗೆಲ್ಲ ಬರಿ 'ರಾಜಸ'ವೆ ಕಾಣಿಸಿಕೊಂಡಿದ್ದರೂ 'ತಾಮಸ'ದ ರೋಚಕ ಹಾಗೂ 'ಸಾತ್ವಿಕ'ದ ನೀರಸಗಳೂ ಅನಾವರಣಗೊಳ್ಳಲೇಬೇಕಲ್ಲ..? ಬಹುಶಃ ಇಂದೆಲ್ಲಾ ಮಿಕ್ಕುಳಿದವುಗಳ ಧಾಳಿಯೆ ಆಗುತ್ತದೆಂದು ಕಾಣುತ್ತಿದೆ, ಈ ದಿನದ ಪೂರ್ತಿ. ಆದರೂ ಚಿಂತೆಯಿಲ್ಲ..ಇಲ್ಲಿ ವೇಗವಲ್ಲ ಪ್ರಮುಖ, ಸರಾಗವಷ್ಟೆ ಇರಬೇಕು ಅಭಿಮುಖ ...' ಎಂದಿದ್ದರು ತಮ್ಮಲ್ಲೆ ಹೇಳಿಕೊಳ್ಳುವಂತೆ. 

ಅವರು ತ್ರಿಗುಣಗಳಾದ ಸಾತ್ವಿಕ, ರಾಜಸ, ತಾಮಸಗಳ ಹೆಸರನ್ನೆತ್ತುತ್ತಿದ್ದಂತೆ ಅಚ್ಚರಿಯಲ್ಲಿ ಮತ್ತೆ ಬೆಚ್ಚಿ ಬಿದ್ದಿದ್ದ ಶ್ರೀನಾಥ - ತಾನವರ ಜತೆ  ತ್ರಿಗುಣಗಳ ಕುರಿತು ಆ ಮೊದಲೆಂದು ಮಾತಾಡೆ ಇರಲಿಲ್ಲ - ಬರಿ ಆ ಆಯಾಮದಲ್ಲಿ  'ಸ್ವಯಂ' ಮಥನ ಮಾಡಿಕೊಂಡಿದ್ದನ್ನು ಬಿಟ್ಟರೆ. ಅದಾಗ ತಾನೆ ಮಾತಾಡುವಾಗ ಸಹ ಆ ಪದದ ಬಳಕೆ ಮಾಡದೆಯೆ ಮಾತಾಡಿದ್ದ...ಆ ಗೊಂದಲದಲ್ಲಿ ' ಆದರೆ ಮಾಸ್ಟರ...?' ಎಂದ.

'ನಿನ್ನ ತ್ರಿಗುಣ ಪ್ರೇರಿತ ಚಿಂತನೆ ನನಗೆ ಹೇಗೆ ತಿಳಿಯಿತೆಂದು ಮತ್ತೆ ಚಿಂತಿಸಲ್ಹೊರಟೆಯಾ ಕುನ್. ಶ್ರೀನಾಥಾ? ಬಿಡು, ಬಿಡು. ನೀನೆ ಕಂಡುಕೊಂಡಂತೆ 'ದ್ವಂದ್ವ ಸಿದ್ದಾಂತ' ಎಂದರೂ ಅಷ್ಟೆ, 'ತ್ರಿಗುಣ ಸಮಭಾರ ಸ್ಥಿತಿ' ಎಂದು ಕರೆದರೂ ಅಷ್ಟೆ - ಏನು ವ್ಯತ್ಯಾಸವಾದೀತು? ಮೊದಲಿಗೆ ಈ ಹೆಸರಿನಲ್ಲೇನಿದೆ ಹೇಳು? ಕರೆಯಲೆಂದಷ್ಟೆ ಇರುವ ಹೆಸರುಗಳ ಮೋಹವನ್ನು ತ್ಯಜಿಸುವುದು ಕೂಡ ಈ ತ್ಯಜಿಸುವಿಕೆಯ ಆಯಾಮದ ಒಂದು ಭಾಗ...ಯಾವುದೊಂದು ಸಿದ್ದಾಂತ, ವಸ್ತು-ವಿಶೇಷದ ಅರ್ಥ ಗ್ರಹಿಕೆಯಲ್ಲಿ ಅದನ್ನು ಯಾವ ಹೆಸರಿಂದ ಕರೆಯುತ್ತಾರೆನ್ನುವುದು ಮುಖ್ಯವಾಗುವುದಿಲ್ಲ.. ಅದರ ಅಂತಃಸತ್ವ ಅರ್ಥವಾಗಿ ಅಂತರಾಳದಲ್ಲಿ ಚಿಗುರ್ಹೊಡೆಯುವ ಸಸಿಯಾಯಿತೆ ಎನ್ನುವುದಷ್ಟೆ ಮುಖ್ಯ.. ಬರಿ ಇತರರ ಸಂವಹನದಲ್ಲಿ ಮಾತ್ರ ಈ ಹೆಸರಿನ ತಿಕ್ಕಾಟ ಸ್ವಲ್ಪ ಕೆಲಸಕ್ಕೆ ಬರಬಹುದೆನ್ನುವುದನ್ನು ಬಿಟ್ಟರೆ , ಮಿಕ್ಕಂತೆ ಅದು ಗೌಣವೆಂದೆ ಹೇಳಬೇಕು...' ಅವನು ಪ್ರಶ್ನೆ ಕೇಳುವ ಮೊದಲೆ ತಡೆದು ಉತ್ತರಿಸಿದ್ದರೂ ಮಾಂಕ್ ಸಾಕೇತ್.

ಅದನ್ನು ಕೇಳುತ್ತಲೆ ಶ್ರೀನಾಥ, ' ಇಲ್ಲೂ ಅದೆ ದ್ವಂದ್ವ ಸಿದ್ದಾಂತದ ಕುರುಹೆ ಕಾಣಿಸುತ್ತಿದೆ ಮಾಸ್ಟರ.. ಹೆಸರಿನ ದ್ವಂದ್ವ....' ಎಂದು ನಕ್ಕ.

' ಸತ್ಯದ ಪರಿಗ್ರಹಿಕೆಯಲ್ಲಿ ಎಲ್ಲರ ಹಾದಿಯೂ ಅವರವರ ಅನುಕೂಲಕ್ಕೆ ತಕ್ಕಂತೆ ನಾಮಕರಣಗೊಳ್ಳುತ್ತದೆ ಕುನ್. ಶ್ರೀನಾಥ. ಆದರೆ ಕಾಲಾಂತರದ ಕಾಲ ಹೊಡೆತದಲ್ಲಿ ಉಳಿದುಕೊಂಡು ಗಟ್ಟಿಯಾಗಿ ನೆಲೆ ನಿಲ್ಲುವುದು ಕೆಲವು ಮಾತ್ರವೆ... ನಿನಗೆ ತ್ರಿಗುಣಗಳ ಮೂಲಕವೆ ಸತ್ಯವನ್ನರಿಯುವ ಹಾದಿ ಸುಲಭವೆನಿಸಿದರೆ ಅದರಲ್ಲೆ ಮುನ್ನಡೆ.. ತಪ್ಪೇನೂ ಇಲ್ಲಾ... ನನ್ನ ಎಣಿಕೆ ಸರಿಯಾಗಿದ್ದರೆ ಇವೆಲ್ಲಾ ಸಂದಿಗ್ದ, ಗೊಂದಲಗಳು ಮೇಳೈಸಿಕೊಂಡು ತಮ್ಮ ತಮ್ಮಲ್ಲೆ ದ್ವಂದ್ವ ಯುದ್ಧ ಮಾಡಿಕೊಂಡು ಅರಿವಿನ ಸಮತೋಲನದ 'ಪ್ರಾಥಮಿಕ ಸ್ಥಿತಿ' ತಲುಪುವತನಕ ಇಂದು ಮತ್ತು ನಾಳೆ ಕಳೆದುಹೋಗಿರುತ್ತದೆ..'

'ಪ್ರಾಥಮಿಕ ಸ್ಥಿತಿ..? ಇನ್ನೂ ಪ್ರಾಥಮಿಕವನ್ನೆ ದಾಟಿಲ್ಲವೆ ?' ಇನ್ನು ಎಷ್ಟು ಹಂತಗಳಿದೆಯೊ ಎನ್ನುವ ಆತಂಕದಲ್ಲಿ ಕೇಳಿದ್ದ ಶ್ರೀನಾಥ...

ಅದಕ್ಕೆ ಮೆಲುವಾಗಿ ನಕ್ಕ ಮಾಂಕ್ ಸಾಕೇತರು, ' ಚಿಂತಿಸದಿರು, ನಾನು ಪ್ರಾಥಮಿಕವೆಂದದ್ದು ಧ್ಯಾನದಿಂದ ಜ್ಞಾನ ಗ್ರಹಿಸುವ ಪ್ರಕ್ರಿಯೆಗೆ - ಒಂದು ರೀತಿಯ 'ಥಿಯರಿ' ಕಲಿತ ಹಾಗೆ. ಅದನ್ನು ನಂತರ ಪ್ರಾಯೋಗಿಕತೆಗೊಳಪಡಿಸಬೇಕು.. ಅಂದರೆ ಸಿದ್ದಾಂತಕ್ಕು, ನೈಜತೆಗೂ ಇರುವ ನಡುವಿನ ತೆಳು ಗೆರೆ ಅಳಿಸಿ ಹೋಗಿ ಎರಡರ ಏಕೋಮುಖ ಭಾವ ನಿರ್ವಿಘ್ನವಾಗಿ ಮೂಡಿ ಬರಬೇಕು ಯಾವುದೆ ಪರಸ್ಪರತೆಯ ವ್ಯತ್ಯಾಸವೆ ತಿಳಿಯದಂತೆ. ಅದಕ್ಕಾಗಿ ಈ ವ್ಯವಸ್ಥೆಯ ಸಿದ್ದತೆ. ಮೊದಲ ಮೂರು ದಿನದ ಅಂತರ್ಮಥನ ಕಳೆದು ಒಳಗಿನ 'ನಿರಾಳತೆಯ ತೇಜ' ಹೊರಗಿನ ಪ್ರಶಾಂತ ವದನವಾಗಿ ಹೊರಹೊಮ್ಮಿದಾಗ ಮೂಡುವ, ತನ್ನರಿವಿಲ್ಲದೆ ಉದ್ಭವವಾಗಿಬಿಡುವ ಗರ್ವದ ದ್ವಂದ್ವವನ್ನು ಬೇರಿನಲ್ಲೆ ಹೊಸಕಿ ಹಾಕಿಬಿಡಬೇಕು... ಅದರ ತಳಪಾಯ ಹಾಕುವ ಕೆಲಸ ನಾಲ್ಕನೆ ಮತ್ತು ಐದನೆ ದಿನ ನಡೆಯಬೇಕು...' ಎಂದರು.

(ಇನ್ನೂ ಇದೆ)
__________
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಹೀಗೆ ಹಿಂದಿನ ದೃಷ್ಯಗಳು ಮೂಡಿಬರಲು ಸಾಧ್ಯವೇ, ಮೂಡಿದರೂ ನೆನಪು ಸಾಧ್ಯವೇ ಎಂಬ ಅಚ್ಚರಿ ಮೂಡಿತು. ಕನಸುಗಳಾದರೆ ಕೊನೆಯ ಕನಸು ಮಾತ್ರ ನೆನಪಿರುತ್ತದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕವಿಗಳೆ ನಮಸ್ಕಾರ. ದೃಶ್ಯಗಳೆಂದರೆ ನಮ್ಮ ಜ್ಞಾನೇಂದ್ರಿಯಗಳಿಗೆ ಗೋಚರವಾಗುವ ದೃಶ್ಯ ಎಂದಲ್ಲ. ಅಂತರ್ದೃಷ್ಟಿ, ಅಂತರ್ಪ್ರಜ್ಞೆಯ ಅರಿವಿಗೆ ನಿಲುಕುವ ಸ್ಮೃತಿಯ ಅಥವಾ ನೆನಪಿನ ತುಣುಕುಗಳು. ನಾವು ಟೀವಿಯಲ್ಲೊ, ನಿಜ ಜೀವನದಲ್ಲೊ ಕಂಡಂತೆ ಧ್ಯಾನದಲ್ಲಿ ಕಣ್ಣು ಮುಚ್ಚಿಕೊಂಡು, ಮನಃಪಟಲದಲ್ಲಿ ಯಥಾವತ್ತಾಗಿ ದೃಶ್ಯ ಚಿತ್ರ ಮೂಡಿಸುವುದು ಸಾಧ್ಯವಿಲ್ಲವೆಂದೆ ಕಾಣುತ್ತದೆ - ಯಾಕೆಂದರೆ ಅಲ್ಲಿ ಆ ಕೆಲಸ ಮಾಡಬೇಕಾದ ಜ್ಞಾನೇಂದ್ರಿಯಗಳು ಸಕ್ರೀಯವಾಗಿರುವುದಿಲ್ಲ. ಬಹುಶಃ ಕಥನದಲ್ಲಿ ಇವು ದೃಶ್ಯದ ಸ್ಮೃತಿಗಳು ಮಾತ್ರ, ದೃಶ್ಯಗಳೇ ಅಲ್ಲ ಎಂಬುದು ಸ್ಪಷ್ಟವಾಗಿ ಮೂಡಿ ಬಂದಿಲ್ಲವೆಂದು ಕಾಣುತ್ತದೆ. ಅದರ ಕುರಿತಾದ ನಿಮ್ಮ ಪ್ರಶ್ನೆಯಿಂದ ಆ ವಿವರಣೆ, ಸ್ಪಷ್ಟನೆ ಕೊಡಲು ಸಾಧ್ಯವಾಯಿತು, ಅದಕ್ಕೆ ಧನ್ಯವಾದಗಳು :-)

ಆದರೆ ನೆನಪಿನ ವಿಷಯಕ್ಕೆ ಬಂದರೆ ಎಷ್ಟೊ ಮರೆತು , ಹೂತು ಹೋದಂತಿದ್ದ ನೆನಪುಗಳು ಸ್ಮೃತಿ ಪಟಲದಿಂದ ಚಕ್ಕನೆ ಮೇಲೆದ್ದು ಬಂದು ಗೋಚರಿಸಲು ಸಾಧ್ಯವಿದೆ. ಅವೆಲ್ಲ ಮರೆತಂತಿದ್ದರೂ ಮೆದುಳಿನ ಆಳದಲೆಲ್ಲೊ ಅಗೋಚರವಾಗಿ ಬಿದ್ದುಕೊಂಡಿರುತ್ತದೆ. ಯಾವುದೊ ಪ್ರೇರೇಪಣೆ ಅಥವಾ ನೆನಪಿನ ಕೊಂಡಿಯ ಕಾರಣದಿಂದ ಅವು ಮೇಲೆದ್ದು ಬರಲು ಸಾಧ್ಯವಿದೆ. ಅದಕ್ಕೆ ಮೆದುಳಿನ ಶಕ್ತಿ ಅಪಾರವೆನ್ನುತ್ತಾರೆ. ನಮ್ಮ ಎಷ್ಟೊ ಮೇಲ್ಮಟ್ಟದ ಕಂಪ್ಯೂಟರುಗಳಲ್ಲು ಒಂದು ಬಾರಿ 'ನೆನಪನ್ನು' ಭೌತಿಕವಾಗಿ ಅಳಿಸಿಬಿಟ್ಟರೆ ಅದನ್ನು ಮತ್ತೆ ಹಿಂದಕ್ಕೆ ಪಡೆಯುವುದು ಅಸಾಧ್ಯ. ಆದರೆ ಯಾವುದೆ ಸಂಗ್ರಹ ಶಕ್ತಿಯ ಮಿತಿಯಿಲ್ಲದೆ ಮೆದುಳು ತನಗೆ ಬೇಕಾದ್ದೆಲ್ಲವನ್ನು ನೆನಪಿನ ಜೋಳಿಗೆಯಲ್ಲಿ ಯಾವುದೊ ಬೀಜಾಕ್ಷರ ರೂಪದಲ್ಲಿ ಶೇಖರಿಸಿಟ್ಟುಕೊಂಡಿರುತ್ತದೆ. ಅಗತ್ಯ ಬಿದ್ದಾಗ ಮಾತ್ರ ಅದನ್ನು 'ಡೀಕೋಡ್' ಮಾಡಿ ಮೇಲಕ್ಕೆ ತರುತ್ತದೆ. ಉದಾಹರಣೆಗೆ ನೀವು ವರ್ಷಾಂತರಗಳಿಂದ ನೋಡಿರದಿದ್ದ ಬಾಲ್ಯದ ಗೆಳೆಯನೊಬ್ಬ ತಟ್ಟನೆ ಎದುರಾದನೆನ್ನಿ.. ಅವನ ಜತೆಯಲ್ಲಿ ಎಂದೊ ಏನೊ ಮಾಡಿದ್ದ ಕಾರ್ಯದ ನೆನಪು (ಅಥವಾ ಸಂಬಂಧಿತ ಘಟನೆಯ ನೆನಪು) ಮೇಲೆದ್ದು ಬರುತ್ತದೆ, ಅದನ್ನು ಪ್ರಜ್ಞಾಪೂರ್ವಕವಾಗಿ ನೆನಪಿನಲ್ಲಿರಿಸಿಕೊಂಡಿರದಿದ್ದರೂ. ಹೀಗಾಗಿ ನೆನಪು ಮತ್ತೆ ಎದ್ದು ಬರಲು ಖಂಡಿತ ಸಾಧ್ಯವಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.