ಕನ್ನಡ ಪತ್ರಿಕಾ ಲೋಕ (ಮಾಲಿಕೆ 1 ಮತ್ತು 2)

‘ಕನ್ನಡ ಪತ್ರಿಕಾ ಲೋಕ’ದ ಎರಡೂ ಮಾಲಿಕೆಗಳನ್ನು ಇತ್ತೀಚೆಗೆ ಓದಿದೆನು. ತುಂಬಾ ಖುಷಿಯಾಯಿತು. ಕನ್ನಡ ನಿಯತಕಾಲಿಕಗಳನ್ನು ನಿಯಮಿತವಾಗಿ ಓದುವ ಓದುಗರಿಗೆ ಇವೆರಡೂ ಪುಸ್ತಕಗಳು ‘ಅಮೂಲ್ಯ ರತ್ನಗಳು’ ಎಂದೇ ಹೇಳಬಹುದು. ಈ ಎರಡೂ ಪುಸ್ತಕಗಳಲ್ಲಿ ಒಟ್ಟು ೧೦೪ ಪತ್ರಿಕೆಗಳ ಬಗ್ಗೆ ಮಾಹಿತಿ ನೀಡಿದ್ದು ಸಂತಸದ ವಿಷಯ. ಪ್ರತಿ ಪತ್ರಿಕೆಯ ಮಾಹಿತಿ ನೀಡುವಾಗ, ಆ ಪತ್ರಿಕೆಯು ಪ್ರಕಟಗೊಳ್ಳುತ್ತಿದ್ದ ಊರು, ಅದರ ಸಂಪಾದಕರು, ಪ್ರಕಾಶಕರು ಮತ್ತು ಅದರ ಮುಖಬೆಲೆ ನೀಡುವುದರ ಜೊತೆಗೆ ಆ ಪತ್ರಿಕೆಯು ಯಾವ ಯಾವ ವಿಷಯಗಲನ್ನು ಒಳಗೊಂಡಿತ್ತು ಎಂಬ ಬಗ್ಗೆ ವಿವರವಾದ ಮಾಹಿತಿ ನೀಡಲಾಗಿದೆ. ಇಲ್ಲಿ ಪರಿಚಯಿಸಿದ ಎಷ್ಟೋ ಪತ್ರಿಕೆಗಳು ಈಗ ನಿಂತು ಹೋಗಿವೆ. ಆದರೂ ಕೂಡ ಆ ಪತ್ರಿಕೆಯ ಮಾಹಿತಿ ಓದಿದಾಗ ಮನಸ್ಸು ಅರಳುತ್ತದೆ. ಇಂಥ ಒಂದು ಪತ್ರಿಕೆ ಇತ್ತಾ? ಇಷ್ಟೆಲ್ಲಾ ವಿಷಯ ನೀಡುತ್ತಿತ್ತಾ? ಎಂದು ಆಶ್ಚರ್ಯವಾಗುತ್ತದೆ. ವಿವಿಧ ಮಾಹಿತಿಗಳನ್ನು ಸಂಗ್ರಹಿಸುವ ಸಂಗ್ರಹಕಾರರಿಗೆ ಈ ಎರಡೂ ಪುಸ್ತಕಗಳು ತುಂಬಾ ಉಪಯುಕ್ತವಾಗಿವೆ.
ಇಂತಹ ಅದ್ಭುತ ಮಾಹಿತಿಗಳನ್ನು ತುಂಬಾ ಅಚ್ಚುಕಟ್ಟಾಗಿ ನೀಡುತ್ತಿರುವ ಶ್ರೀರಾಮ ದಿವಾಣ ಅವರಿಗೆ ಧನ್ಯವಾದಗಳನ್ನು ಹೇಳಲೇಬೇಕು. ಇದೇ ರೀತಿ ಈ ಮಾಲಿಕೆಯ ಮುಂದಿನ ಪುಸ್ತಕಗಳು ಆದಷ್ಟು ಶೀಘ್ರದಲ್ಲಿ ಹೊರಬರಲಿ ಅದರ ಮುಖಾಂತರ ನನ್ನಂತಹ ಸಾವಿರಾರು ಓದುಗರ ಜ್ಞಾನದ ಹಸಿವನ್ನು ನೀಗಿಸಲಿ ಎಂದು ವಿನಂತಿಸಿಕೊಳ್ಳುವೆ.
-ಶಂಕರಗೌಡ ವೈ.ಪಾಟೀಲ, ಬಾದಾಮಿ