ಕನ್ನಡ ಸಾಹಿತ್ಯದ ವೈದೇಹಿ , ಸಾಹಿತ್ಯದ ಹಸಿವು ನೀಗಿಸುವ ಜ್ಞಾನದೇವಿ

3.666665

ಕನ್ನಡ ಸಾಹಿತ್ಯ ಹಿರಿಮೆಯನ್ನು ಎಂತು ವರ್ಣಿಸಲಿ , ಅದರ ಹಿರಿಮೆಗೆ ನನ್ನ ಚಿಕ್ಕ ಅನುಭವ ಸಾಕಾಗದು, ಈಗಾಗಲೇ ಶಾಸ್ತ್ರೀಯ ಸ್ಥಾನಮಾನ ಗಳಿಸಿರುವ ಕನ್ನಡ ಭಾಷೆ ತನ್ನ ಒಡಲಲ್ಲಿ ಅನೇಕ ಅಮೋಘ ಸಾಹಿತಿಗಳಿಗೆ ಆಶ್ರಯ ಸ್ಥಾನವಾಗಿದೆ. ಅನೇಕ ಹಿರಿಯ ಚೇತನರ ಹಾದಿ ಮತ್ತು ಅವರ ಜೀವನ ನಮ್ಮ ಮುಂದೆ ಇದೆ ಅವರಿಂದ ಅವರ ಜೀವನದಿಂದ ಕಲಿಯಬೇಕಾದ ಅನೇಕ ಅಂಶಗಳು ಅವರ ಬದುಕಿನ ಪ್ರತಿಯೊಂದು ದಾರಿ ಯುವ ಪೀಳಿಗೆಗೆ ತುಂಬಾ ಅನುಕರಣೀಯವಾಗಿದೆ.

ನಮ್ಮ ಸಾಹಿತ್ಯಕ್ಕೆ ಸಾಹಿತಿಗಳು ನೀಡಿದ ಕೊಡುಗೆ ತುಂಬಾ ಇದೆ. ಹಲವರ ಜೀವನ ಬದಲಿಸುವ ಸಾಹಿತ್ಯ ನಮ್ಮ ಕನ್ನಡ ಸಾಹಿತ್ಯಕ್ಕೆ ಇದೆ ಎಂದರೆ ತಪ್ಪಾಗದು. ಹೊಸಬರು ಬರಿ ಓದಿ ಕಲಿಬೇಕಾದದ್ದು ನಮ್ಮ ಶ್ರೀಮಂತ ಸಾಹಿತ್ಯದಲ್ಲಿ ತುಂಬಾ ಇದೆ ಅದನ್ನು ಅನುಸರಿಸಿದರೆ ಸಾಕು ಜೀವನ ಪಾವನದ ಕಡೆಗೆ ವಾಲುತ್ತದೆ. ಅಲ್ಲಿನ ಸಾಹಿತ್ಯದ ರುಚಿ ಮಾನವ ಜೀವನವನ್ನು ಪವಿತ್ರದಡೆಗೆ ಹೋಗುವಹಾಗೆ ಅವಕಾಶ ಮಾಡಿಕೊಡುವ ಏಕೈಕ ಶಕ್ತಿ ಇರುವುದು ನಮ್ಮ ಕನ್ನಡ ಸಾಹಿತ್ಯಕ್ಕೆ ಮಾತ್ರ ಅನಿಸುತ್ತದೆ.

ಹಲವಾರು ಸಾಹಿತಿಗಳ ಬಗ್ಗೆ ಮತ್ತು ಅವರ ಸಾಹಿತ್ಯದ ಬಗ್ಗೆ ಓದುವಾಗ ನನಗೆ ಹೃದಯಕ್ಕೆ ಹತ್ತಿರವಾಗುವ ಸಾಹಿತಿಗಳ ಬಗ್ಗೆ ಒಂದಿಷ್ಟು ಬರೆಯುವ ಮನಸ್ಸಾಯಿತು ಅದಕ್ಕಾಗಿ ಮಾನ್ಯ ವೈದೇಹಿಯವರ ಜೀವನದ ಕೆಲವು ತುಣುಕಿನ ಪುಟ ಹೀಗೆ ತಿರುವಿದಾಗ ಸಿಕ್ಕ ಅದ್ಭುತ ಮಾಹಿತಿ ಮತ್ತು ಮನಸ್ಸೇಳೆದ ಅವರ ಸಾಹಿತ್ಯ .

ವೈದೇಹಿ ಕನ್ನಡದ ಸಾಹಿತ್ಯ ಆಸಕ್ತರು ಮತ್ತು ಸಾಹಿತ್ಯಲೋಕದಲ್ಲಿ ಅಗ್ರ ಪಂಕ್ತಿಯಲ್ಲಿ ಕಾಣುವ ಅನೇಕ ಸಾಹಿತಿಗಳ ಹೆಸರಿನಲ್ಲಿ ಇವರು ಒಬ್ಬರು. ಸಣ್ಣಕಥೆ, ಕಾವ್ಯ,ಕಾದಂಬರಿಗಳು, ಮಕ್ಕಳ ಸಾಹಿತ್ಯ, ಅನುವಾದ ಸಾಹಿತ್ಯ, ಪ್ರಬಂಧ ಮುಂತಾದವುಗಳಲ್ಲಿ ತೊಡಗಿಸಿಕೊಂಡಿರುವ ಲೇಖಕಿ.

ಇವರ ನಿಜ ನಾಮಧೇಯ ಜಾನಕಿ ಶ್ರೀನಿವಾಸ ಮೂರ್ತಿ. ತವರು ಮನೆಯಲ್ಲಿ ವಸಂತಿ ಎಂದೂ ಇವರನ್ನು ಕರೆಯುತ್ತಾರೆ. ಇವರಿಗೆ ನಯನಾ ಹಾಗೂ ಪಲ್ಲವಿ ಎಂಬ ಇಬ್ಬರು ಪುತ್ರಿಯರು. 12.02.1941 ರಲ್ಲಿ ಜನಿಸಿದ ವೈದೇಹಿ, ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರದವರು. ಇವರ ತಂದೆ ಎ. ವಿ. ಎನ್. ಹೆಬ್ಬಾರ್, ತಾಯಿ ಮಹಾಲಕ್ಶ್ಮಿ. ಕುಂದಾಪುರದ ಭಂಡಾರ್ಕರ್ ಕಾಲೇಜಿನ ಬಿ.ಕಾಂ ಪದವೀಧರೆ. ಓದಿದ್ದು ಬಿ.ಕಾಂ. ಆಗಿದ್ದು ಕನ್ನಡ ಸಾಹಿತ್ಯ ಅವರನ್ನು ಕೈಬೀಸಿ ಕರೆಯಿತು. ಅವರ ಆಸಕ್ತಿ ಮತ್ತು ಅಭಿರುಚಿ ಕನ್ನಡ ಸಾಹಿತ್ಯ ಲೋಕಕ್ಕೆ ಅಮೋಘವಾದ ಕಾಣಿಕೆ ನೀಡಲು ಅವಕಾಶ ಕೊಟ್ಟಿತು ಎಂದು ಹೇಳಬಹುದು.

ಹೆಚ್ಚಾಗಿ ಸಾಹಿತಿಗಳಿಗೆ ಕೆಲವು ಘಟನೆಗಳು ಅವರನ್ನು ಸಾಹಿತಿಯಾಗಿ ಕವಿಯಾಗಿ ಮಾರ್ಪಡಿಸುತ್ತವೆ. ಅಂತಹ ಚಿಕ್ಕ ನೈಜ ಘಟನೆಯು ಮಾನ್ಯರ ಜೀವನದಲ್ಲಿ ನಡೆಯಿತು. ಅವರು ಬರೆದ "ನೀರೆಯರ ಮನ" ಎಂಬ ಕತೆಯನ್ನು ಸುಧಾ ವಾರಪತ್ರಿಕೆಗೆ ಜಾನಕಿ ಎಂಬ ಕಾವ್ಯನಾಮದಲ್ಲಿ ಪ್ರಕಟಣೆಗೆ ಕಳುಹಿಸಿದರು. ನೈಜ ಘಟನೆಯಾದ್ದರಿಂದ ಪ್ರಕಟಿಸಬೇಡಿ ಎಂದು ಜಾನಕಿ ಪತ್ರವನ್ನೂ ಬರೆದರು. ಆದರೆ ಸುಧಾದ ಆಗಿನ ಸಂಪಾದಕರು ವೈದೇಹಿ ಎಂಬ ಕಾವ್ಯನಾಮ ನೀಡಿ ಈ ಕಥೆಯನ್ನು ಪ್ರಕಟಿಸಿಯೇ ಬಿಟ್ಟರು. ಅಂದಿನಿಂದ ಇವರಿಗೆ ವೈದೇಹಿ ಎಂಬುದೇ ಕಾವ್ಯನಾಮವಾಯಿತು.

ಇವರ ಕಥೆಗಳ ಅತ್ಯಂತ ಪ್ರಮುಖ ಲಕ್ಷಣಗಳೆಂದರೆ, ಕುಂದಾಪುರ ಕನ್ನಡದ ಬಳಕೆ, ಹಾಗೂ ಸ್ತ್ರೀ ಲೋಕದ ಸೂಕ್ಷ್ಮ ಅಂಶಗಳ ಅನಾವರಣ. ಇವರು ಬರೆದ ಕಥೆಯನ್ನು ಆಧರಿಸಿದ, ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದ ಗುಲಾಬಿ ಟಾಕೀಸು ಚಲನಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ 2009 ರಾಷ್ಟ್ರೀಯ ಪ್ರಶಸ್ತಿ, ಹಾಗೂ ಚಿತ್ರದ ಪ್ರಮುಖ ಪಾತ್ರಧಾರಿ ಉಮಾಶ್ರೀ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಗಿದೆ.

ಸಣ್ಣಕಥೆಗಳು: ಮರಗಿಡ ಬಳ್ಳಿ (1979) ,ಅಂತರಂಗದ ಪುಟಗಳು (1984) ,ಗೋಲ (1986) , ಸಮಾಜ ಶಾಸ್ತ್ರಜ್ಞೆಯ ಟಿಪ್ಪಣಿಗೆ (1991) , ಅಮ್ಮಚ್ಚಿ ಎಂಬ ನೆನಪು (2೦೦೦) , ಹಗಲು ಗೀಚಿದ ನೆಂಟ , ಕ್ರೌಂಚ ಪಕ್ಷಿಗಳು(2005) , ಬಿಂದು ಬಿಂದಿಗೆ

ಕವನಗಳ ಸಂಗ್ರಹ : ಬಿಂದು ಬಿಂದಿಗೆ (1990) , ಅಸ್ಪೃಶ್ಯರು (1992) , ಪಾರಿಜಾತ (1999).

ಮಕ್ಕಳ ಸಾಹಿತ್ಯ: ಧಾಂ ಧೂಂ ಸುಂಟರಗಾಳಿ , ಮೂಕನ ಮಕ್ಕಳು , ಗೊಂಬೆ ಮ್ಯಾಕ್ ಬೆಥ್ , ಢಣಾಡಂಗೂರ ನಾಯಿಮರಿ ನಾಟಕ , ಕೋಟು ಗುಮ್ಮ ,ಜುಂ ಜಾಂ ಆನೆ ಮತ್ತು ಪುಟ್ಟ , ಸೂರ್ಯ ಬಂದ , ಅರ್ಧಚಂದ್ರ ಮಿಠಾಯಿ , ಹಕ್ಕಿ ಹಾಡು , ಸೋಮಾರಿ ಓಳ್ಯಾ.

ಅನುವಾದ ಸಾಹಿತ್ಯ: ಭಾರತೀಯ ಮಹಿಳೆಯರ ಸ್ವಾತಂತ್ರ್ಯ ಹೋರಾಟ ( ಕಮಲಾದೇವಿ ಚಟ್ಟೋಪಾಧ್ಯಾಯ ಅವರ 'Indian women's freedom struggle' ನಿಂದ ಅನುವಾದಿಸಿದ್ದು) , ಬೆಳ್ಳಿಯ ಸಂಕೋಲೆಗಳು ( ಮೈತ್ರೇಯಿ ಮುಖ್ಯೋಪಾಧ್ಯಾಯ ಅವರ 'Silver Shakles' ನಿಂದ ಅನುವಾದಿಸಿದ್ದು) , ಸೂರ್ಯಕಿನ್ನರಿಯರು ( ಸ್ವಪ್ನ ದತ್ತ ಅವರ 'Sun Fairies' ನಿಂದ ಅನುವಾದಿಸಿದ್ದು) , ಸಂಗೀತ ಸಂವಾದ (ಭಾಸ್ಕರ್ ಚಂದಾವರ್ಕರ್ ಅವರ ಟಿಪ್ಪಣಿಗಳಿಂದ) , ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ

ಆತ್ಮಕಥೆ ನಿರೂಪಣೆ : ಕೋಟ ಲಕ್ಷ್ಮೀನಾರಾಯಣ ಕಾರಂತ (ಕೋ ಲ ಕಾರಂತ) ರವರ ಆತ್ಮಕಥೆ "ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು" , ಸೇಡಿಯಾಪು ಕೃಷ್ಣಭಟ್ಟರ "ಸೇಡಿಯಾಪು ನೆನಪುಗಳು" , ಬಿ.ವಿ. ಕಾರಂತರ "ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ".

ಪ್ರಶಸ್ತಿಗಳು : 'ಕರ್ನಾಟಕ ಲೇಖಕಿಯರ ಸಂಘ'ದಿಂದ ಗೀತಾ ದೇಸಾಯಿ ದತ್ತಿ ನಿಧಿ ಪುರಸ್ಕಾರ (ಅಂತರಂಗದ ಪುಟಗಳು ಮತ್ತು ಬಿಂದು ಬಿಂದಿಗೆ ಕೃತಿಗಳಿಗೆ). 'ವರ್ಧಮಾನ ಪ್ರಶಸ್ತಿ ಪೀಠ', ಮೂಡಬಿದಿರೆ ಯಿಂದ ವರ್ಧಮಾನ ಉದಯೋನ್ಮುಖ ಪ್ರಶಸ್ತಿ (ಗೊಲ ಕೃತಿಗೆ). 'ಕಥಾ ಆರ್ಗನೈಝೆಶನ್' ನವದೆಹಲಿ ಯಿಂದ ಕಥಾ ಪುರಸ್ಕಾರ (ಹಗಲು ಗೀಚಿದ ನೆಂಟ ಕೃತಿಗೆ). 'ಕರ್ನಾಟಕ ಲೇಖಕಿಯರ ಸಂಘ'ದಿಂದ ಅನುಪಮಾ ಪುರಸ್ಕಾರ (ಸಮಾಜ ಶಾಸ್ತ್ರಗ್ನೆಯ ಟಿಪ್ಪಣಿಗೆ ಕೃತಿಗೆ). 'ಕರ್ನಾಟಕ ಸಂಘ' ಶಿವಮೊಗ್ಗ ದಿಂದ ಎಂ.ಕೆ.ಇಂದಿರಾ ಪುರಸ್ಕಾರ (ಅಸ್ಪೃಶ್ಯರು ಕೃತಿಗೆ). ಕರ್ನಾಟಕ ಸಾಹಿತ್ಯ ಅಕೆಡಮಿ ಪುರಸ್ಕಾರ (ಐದು ಮಕ್ಕಳ ನಾಟಕಗಳು ಕೃತಿಗೆ) , 'ಅತ್ತಿಮಬ್ಬೆ ಪ್ರತಿಷ್ಠಾನ' ದಿಂದ ಅತ್ತಿಮಬ್ಬೆ ಪುರಸ್ಕಾರ. ಸಾಹಿತ್ಯ ಅಕೆಡಮಿ ಪುರಸ್ಕಾರ (ಮಲ್ಲಿನಾಥನ ಧ್ಯಾನ ಕೃತಿಗೆ). ಕರ್ನಾಟಕ ರಾಜ್ಯ ಸರ್ಕಾರದಿಂದ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ , ಕ್ರೌಂಚ ಪಕ್ಷಿಗಳು ಎಂಬ ಸಣ್ಣ ಕಥಾ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ .

ಇವರ 'ಅಸ್ಪೃಶ್ಯರು' ಕಾದಂಬರಿ, ಮಂಗಳೂರು ವಿ‌ಶ್ವವಿದ್ಯಾಲಯದ ಪದವಿ ತರಗತಿಗೆ ಪಠ್ಯಪುಸ್ತಕವಾಗಿದೆ. 'ವೈದೇಹಿಯವರ ಸಣ್ಣ ಕಥೆಗಳು' ಬೆಂಗಳೂರು ವಿಶ್ವ ವಿದ್ಯಾಲಯದ ಪದವಿ ತರಗತಿಗೆ ಪಠ್ಯಪುಸ್ತಕವಾಗಿದೆ. ಹಲವಾರು ಸಣ್ಣ ಕಥೆಗಳು ಹಿಂದಿ, ಮಲೆಯಾಳಂ, ತಮಿಳು, ತೆಲುಗು, ಗುಜರಾತಿ ಭಾಷೆಗಳಿಗೆ ಅನುವಾದಿವಾಗಿವೆ. ಇವರು ಮೇರು ವ್ಯಕ್ತಿತ್ವದ ಕಥೆಗಾರತಿ ಹಾಗೂ ಮೇರು ವ್ಯಕ್ತಿತ್ವದ ಸಾಹಿತಿ ಇವರ ಸಾಹಿತ್ಯ ಓದುತ್ತಾ ಹೋದಾಗ ಮಹಿಳೆಯ ಹಲವು ವೇಧನೆ ಎತ್ತಿ ಇಡಿಯುತ್ತಾರೆ ಮತ್ತು ಮಕ್ಕಳ ಪ್ರಪಂಚದಲ್ಲೂ ಅಷ್ಟೆ ಅವರ ಹಲವು ಹಾಡುಗಳು ತುಂಬಾ ಜನಪ್ರೀಯವಾಗಿವೆ.

ಹೀಗೆ ಹಲವು ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಖ್ಯಾತ ಸಾಹಿತಿ ಮಾನ್ಯ ವೈದೇಹಿಯವರು ಇಂದಿನ ಯುವ ಸಾಹಿತಿಗಳಿಗೆ ಆದರ್ಶ ಸಾಹಿತಿಗಳು ಮತ್ತು ದಾರಿದೀಪವಾಗಿದ್ದಾರೆ. ನಮ್ಮ ಯುವ ಪೀಳಿಗೆ ಅವರ ಸಾಹಿತ್ಯವನ್ನು ಅರಿತು ಅನುಸರಿಸಿಬೇಕಾದ ಅಗತ್ಯವಿದೆ ಎನಿಸುತ್ತದೆ. ಬನ್ನಿ ಸಾಹಿತ್ಯ ಆಸಕ್ತರೆ ಅವರ ಸಾಹಿತ್ಯದ ಸಿಹಿ ಊಟವ ಮಾಡಿ ಅವರ ರೀತಿ ನೀತಿಯನ್ನು ಜೀವನದಲ್ಲಿ ಅನುಸರಿಸೋಣಾ ಏನಂತೀರಾ?

ಕೆ.ಎಂ.ವಿಶ್ವನಾಥ (ಮಂಕವಿ) ಮರತೂರ.

ಲೇಖಕರು, ರಾಜ್ಯ ರಾಷ್ಟ್ರಕವಿ ಕುವೆಂಪು ಕಾವ್ಯ ಪ್ರಶಸ್ತಿ ಪುರಸ್ಕೃತರು.

9620633104

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಮಸ್ಕಾರ ಕೆ.ಎಂ. ವಿಶ್ವನಾಥರವರೆ, ವೈದೇಹಿಯವರ ಕುರಿತಾದ ಮಾಹಿತಿಗೆ ತುಂಬಾ ಧನ್ಯವಾದಗಳು - ಗೊತ್ತಿರದ ಎಷ್ಟೊ ವಿಷಯಗಳು ತಿಳಿದಂತಾಯ್ತು. ಅಂದ ಹಾಗೆ ಅವರ ಹುಟ್ಟಿದ ವರ್ಷ 1945 ಇರಬೇಕಿತ್ತಲ್ಲವೆ? - ನಾಗೇಶ ಮೈಸೂರು, ಸಿಂಗಾಪುರದಿಂದ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.