ಕಲಾಂ..ನಿಮಗೆ ಸಲಾಂ

ಕಲಾಂ..ನಿಮಗೆ ಸಲಾಂ

ಕವನ

ಇಷ್ಟು ಅವಸರವೇನಿತ್ತು?
ನಿಮ್ಮಯ ಮಾತುಗಳನ್ನು
ಕೇಳಿಸಿಕೊಂಡು ಕಿವುಡರಂತಿದ್ದ,
ಅಂತರಾತ್ಮದ ಅಗೋಚರ ಶಕ್ತಿಯನ್ನು
ಕಾಣದ ಕುರುಡರಂತಿದ್ದ
ನಮ್ಮ ಅಜ್ಞಾನವನ್ನ ವಿಜ್ಞಾನದ ಮೂಲಕ
ಹೋಗಲಾಡಿಸಲು ನೀವು ಇರಬೇಕಿತ್ತು ಕಲಾಂ
ಅರ್ಪಿಸಿಕೊಳ್ಳಿ ನಮ್ಮ ಭಾವಪೂರ್ಣ ಸಲಾಂ

ಕನಸುಗಳ ಬಿತ್ತಿ, ಸಾಧನೆಯ ಬೆಳೆ ತೆಗೆದು
ವೈಜ್ಞಾನಿಕ ಕ್ರಾಂತಿಯಿಂದ ಭಾರತ ಮಾತೆಯ
ಶೀಲ ಕಾಪಾಡಲು ಪಟ್ಟ ಶ್ರಮಕ್ಕೆ…..... ಸಲಾಂ

ಹಿಂದು-ಮುಸ್ಲಿಂ ಎಂಬ ಕಚ್ಚಾಟದಲ್ಲಿ
ದಿನಗಳನ್ನು ಕಳೆವ ಜನರ ಮಧ್ಯ 
ನಿಮ್ಮ ಬದುಕಿನ ರೀತಿಗೆ….....ಸಲಾಂ

ಬಂದು ಹೋಗುವ ನಡುವೆ ಏನು ಉಳಿಯುವುದು
ಅವಿಷ್ಕಾರಗಳೇ ಸಾಕಾರಗೊಳ್ಳುತ್ತವೆ ಅಂತಿಮವಾಗಿ
ತುಂಬಿದ ಕೊಡ ಎಂದು ತುಳುಕದಲ್ಲವೇ….....ಕಲಾಂ

ಪೋಖ್ರಾನನಲ್ಲಿ ಅಣುಗಳ ಸಿಡಿಸಿದಿರಿ
ಪರಕೀಯರ ಅಣುಕುಗಳ ಅಲ್ಲಗಳಿದಿರಿ
ಭಾರತೀಯರ ಅಣು ಅಣುವಿನಲ್ಲಿ 
ಬುದ್ಧನ ಶಾಂತ ನಗೆಯೇ ತುಂಬಿದೆ ಎಂದು
ವಿಶ್ವಕ್ಕೆ ನಗುವಿನಿಂದಲೇ ತಿಳಿಸಿದ್ದೀರಿ….....ಕಲಾಂ

ಹೋಗಿ ಬನ್ನಿ ಕಲಾಂ
ಹುಟ್ಟು ಆಕಸ್ಮಿಕ ಸಾವು ನಿಶ್ಚಿತ
ನಿಮ್ಮ ವಿಜ್ಞಾನ, ಮಾನವತೆಯ ಶ್ರೇಷ್ಠತೆ,
ಆಧ್ಯಾತ್ಮದ ನಿರೂಪಣೆ, ಆಚರಣೆ,
ಎಲ್ಲ ರತ್ನಗಳನ್ನು ನೀಡಿದ 
ನೀವೇ ನಮ್ಮೆಲ್ಲರ ಭಾರತ ರತ್ನ

ಭಾರತ ಮಾತೆಯ ಗರ್ಭದಿಂದ 
ಮತ್ತೊಮ್ಮೆ ಹುಟ್ಟಿ ಬನ್ನಿ ಕಲಾಂ
ಈ ದುಃಖದ ಕ್ಷಣದಲ್ಲೊಂದು
ನಿಮಗೆ ನಮ್ಮ ಅಂತಿಮ ಸಲಾಂ.....ಸಲಾಂ

ಚಿತ್ರ್