ಕಿರಂ ಹೇಳಿದ ಕತೆಗಳು

4.8

 (ಈ ಪ್ರಸಂಗವನ್ನು ಹಿಂದೊಮ್ಮೆ ಕಿರಂ ತಮ್ಮ ವಿದ್ಯಾರ್ಥಿಗಳೊಡನೆ ನೆನಪಿಸಿಕೊಂಡಿದ್ದರು)

 

          ಒಮ್ಮೆ ಲಂಕೇಶರ ಆಫೀಸಿಗೆ ಹೋದಾಗ ಅವರು ಎರಡೂ ಕೈಗಳನ್ನು ಹಣೆಯ ಮೇಲಿಟ್ಟುಕೊಂಡು ಏನನ್ನೋ ಚಿಂತಿಸುತ್ತಿದ್ದರು. ನನ್ನನ್ನು ಕಂಡೊಡನೆ “ಬನ್ನಿ ಕಿರಂ,  ನೋಡಿ ಪಾಪ ಕೆ.ಎಸ್. ನರಸಿಂಹಸ್ವಾಮಿಯವರನ್ನು ಬನಶಂಕರಿಯ ಯಾವುದೋ ಆಸ್ಪತ್ರೆಗೆ ಸೇರಿಸಿದ್ದಾರಂತೆ. ಸಾಧ್ಯವಾದರೆ ಬಿಡುವಿನ ವೇಳೆಯಲ್ಲಿ ಹೋಗಿ ಅವರನ್ನು ನೋಡಿಕೊಂಡು ಬನ್ನಿ, ಅವರ ಯೋಗಕ್ಷೇಮದ ಬಗ್ಗೆ ಬಂದು ನನಗೆ ತಿಳಿಸಿ” ಎಂದು ತುಂಬ ಕಾಳಜಿಯಿಂದ ಕೇಳಿದರು. ನಾನು “ಆಗಲಿ ಸರ್, ನಾಳೆ ಯೂನಿವರ್ಸಿಟಿ ಕ್ಲಾಸ್‍ಗಳು ಮುಗಿದ ಕೂಡಲೆ ಹೋಗುತ್ತೇನೆ” ಎಂದು ಹೇಳಿ ಮರುದಿನ ತರಗತಿಗಳು ಮುಗಿದ ಮೇಲೆ ಸಂಜೆ ಬನಶಂಕರಿ ಕಡೆ ಹೋಗುವ ವಿಶ್ವವಿದ್ಯಾಲಯದ ಬಸ್ ಹಿಡಿದು ನೇರವಾಗಿ ಆಸ್ಪತ್ರೆಗೇ ಹೋದೆ. ಸಾಧಾರಣವಾಗಿ ಆಸ್ಪತ್ರೆಗೆ ಭೇಟಿ ನೀಡುವವರೆಲ್ಲರೂ ’ಆರೋಗ್ಯ ಹೇಗಿದೆ’, ’ವೈದ್ಯರು ಏನು ಹೇಳಿದರು’ ಇತ್ಯಾದಿ ಸಂತಾಪದಾಯಕ ಪ್ರಶ್ನೆಗಳನ್ನೇ ಕೇಳಿ ರೋಗಿಗಳಿಗೆ ವಿಪರೀತ ಇರಿಸು ಮುರುಸು ಉಂಟು ಮಾಡುತ್ತಾರೆ. ನಾನೂ ಸಹ ಹಾಗೆಯೇ ಮಾಡಿ ಕವಿ ಮನಸ್ಸಿಗೆ ಬೇಸರ ಉಂಟುಮಾಡಬಾರದೆಂದು ಯೋಚಿಸಿಕೊಂಡು ಹೊರಟೆ. ಅವರಿದ್ದ ವಾರ್ಡಿನ ಒಳಗೆ ಹೋದ ಕೂಡಲೆ ಕಾಯಿಲೆಯ ಬಗ್ಗೆ ಏನೂ ತಿಳಿಯದವನಂತೆ ಸುಮ್ಮನೆ ಅವರ ಕಾವ್ಯದ ಬಗ್ಗೆ ಹಾಗು ಅವರು ನಿರ್ಮಿಸಿದ್ದ ಹಲವು ಪ್ರತಿಮೆ-ರೂಪಕಗಳ ಬಗ್ಗೆ ಚರ್ಚಿಸಲಾರಂಭಿಸಿದೆ. ನಿಶ್ಯಕ್ತರಾಗಿ ಮಲಗಿದ್ದ ಅವರೊಳಗೆ ಇದ್ದಕ್ಕಿದ್ದಂತೆ ಅದೆಂತಹ ಚೈತನ್ಯ ಬಂದಿತೋ ಏನೋ ತಿಳಿಯದು! ಅರ್ಧ ಗಂಟೆಗಳ ಕಾಲ ನನ್ನೊಡನೆ ಉತ್ಸಾಹದಿಂದ ಚರ್ಚಿಸಿದರು. ನರಸಿಂಹಸ್ವಾಮಿಯವರಿಗೆ ಕಾಯಿಲೆ ಇದ್ದಾಗ ಅವರ ಧರ್ಮಪತ್ನಿ ಶ್ರೀಮತಿ ವೆಂಕಮ್ಮನವರು ಹಾಗೆಲ್ಲ ಯಾರಿಗೂ ಅವರ ಬಳಿ ಚರ್ಚೆ, ಸಂಭಾಷಣೆ ನಡೆಸಲು ಬಿಡುತ್ತಿರಲಿಲ್ಲ. ಆದರೆ ಅಂದು ನಾನು ಹೊರಡುವಾಗ ಮಾತ್ರ ಅವರು “ನಾಗರಾಜ್, ದಯವಿಟ್ಟು ನಾಳೆಯೂ ಬನ್ನಿ, ನಿಮ್ಮ ಜೊತೆ ಮಾತನಾಡುವಾಗ ಅವರು ತುಂಬ ಲವಲವಿಕೆಯಿಂದ ಇರುತ್ತಾರೆ” ಎಂದು ಹೇಳಿ ಕಳಿಸಿದರು. ಅಂದು ಸಂಜೆ ನಾನು ನೇರವಾಗಿ ಲಂಕೇಶರ ಕಛೇರಿಗೆ ಬಂದು ಕೆ.ಎಸ್.ನ.ರ ಯೋಗಕ್ಷೇಮದ ಕುರಿತು ತಿಳಿಸಿದ್ದಲ್ಲದೆ ಅಲ್ಲಿ ನನ್ನ ಹಾಗು ಕವಿಯ ನಡುವೆ ನಡೆದ ಮಾತುಕತೆಯನ್ನೂ, ಅವರ ಧರ್ಮಪತ್ನಿಯ ಕೋರಿಕೆಯನ್ನೂ ಅವರಿಗೆ ತಿಳಿಸಿದೆ. ಆಗ ಲಂಕೇಶ್ “ಅರೆ, ಹಾಗಾದರೆ ಪ್ರತಿದಿನ, ಅವರು ಆಸ್ಪತ್ರೆಯಲ್ಲಿ ಇರುವಷ್ಟೂ ಕಾಲ ಹೋಗಿಬಾರಯ್ಯ” ಎಂದು ನನಗೆ ಹೇಳಿದರು.


ನಾನೂ ಸಹ ವಿಶ್ವವಿದ್ಯಾಲಯದ ತರಗತಿಗಳು ಮುಗಿಯುತ್ತಿದ್ದಂತೆಯೇ ಬನಶಂಕರಿ ಬಸ್ ಹಿಡಿದು ನೇರವಾಗಿ ಆಸ್ಪತ್ರೆಗೆ ಹೋಗುತ್ತಿದ್ದೆ. ಪ್ರತಿಸಲ ಹೋದಾಗಲೂ ಅವರ ಕಾವ್ಯವನ್ನು ಬಿಟ್ಟು ಬೇರೆ ಮತ್ತೇನನ್ನೂ ಚರ್ಚಿಸಬಾರದು ಎಂದು ಮುನ್ನವೇ ನಿರ್ಧರಿಸಿದ್ದೆ. ಕೆಲವು ಸಲ ಅವರ ಕವಿತೆಯ ಯಾವುದಾದರೂ ಒಂದು ಸಾಲನ್ನು ಗುಣುಗುಟ್ಟುತ್ತಲೇ ವಾರ್ಡಿನೊಳಗೆ ಪ್ರವೇಶಿಸುತ್ತಿದ್ದೆ. ನಾನು ಹೋಗುತ್ತಿದ್ದಂತೆಯೇ ಕೆ.ಎಸ್.ನ. ಗುಣಮುಖರಾದಂತೆ ಹಾಸಿಗೆಯ ಮೇಲೆ ಕುಳಿತುಬಿಡುತ್ತಿದ್ದರು. ನಮ್ಮ ಸಂಭಾಷಣೆ ನಡೆಯುವಾಗ ವೆಂಕಮ್ಮನವರು ಹೊರಗೇ ಇದ್ದು ಯಾರನ್ನೂ ಒಳಗೆ ಬಿಡುತ್ತಿರಲಿಲ್ಲ. ನಾವಿಬ್ಬರೂ ಕುಳಿತು ಗಂಟೆ ಗಟ್ಟಲೆ ಮಾತನಾಡುತ್ತಿದ್ದೆವು. ತಪಾಸಣೆಗೆ ಬರುತ್ತಿದ್ದ ವೈದ್ಯರುಗಳು ಸಹ ನಿಂತುಕೊಂಡೇ ನಮ್ಮ ಸಂಭಾಷಣೆಯನ್ನು ಸವಿಯುತ್ತಿದ್ದರು. ಬಳಿಕ ಅಲ್ಲಿಂದ ನೇರವಾಗಿ ಲಂಕೇಶರ ಆಫೀಸಿಗೆ ಹೋಗಿ ಅವರಿಗೆ ಕವಿಯ ಯೋಗಕ್ಷೇಮದ ಕುರಿತು ತಿಳಿಸುತ್ತಿದ್ದೆ. ಹೀಗೆ ಒಂದು ವಾರಗಳ ಕಾಲ ಪ್ರತಿದಿನ ಇದೇ ನನ್ನ ದಿನಚರಿಯಾಗಿತ್ತು. ಕೊನೆಯ ದಿನ ಲಂಕೇಶ್‍ಗೆ “ಸರ್, ಕವಿಗಳು ಈಗ ಎಷ್ಟೋ ಚೇತರಿಸಿಕೊಳ್ಳುತ್ತಿದ್ದಾರೆ. ಆದರೂ ನಿನ್ನೆ ರಾತ್ರಿ ಕೆ.ಎಸ್.ನ.ಗೆ ಒಂದು ವಿಚಿತ್ರ ಕನಸು ಬಿದ್ದಿತಂತೆ, ಒಂದು ಕೋಗಿಲೆಯ ಸುತ್ತ ಹಲವು ಕಾಗೆಗಳು ಕುಳಿತುಕೊಂಡು ಆ ಕೋಗಿಲೆಯ ತಲೆಗೆ, ನೆತ್ತಿಗೆ ಒಂದೇ ಸಮನೆ ಕುಟುಕುತ್ತಿದ್ದವಂತೆ. ’ಆ ದುಃಸ್ವಪ್ನದಿಂದಾಗಿ ನನಗೆ ಸರಿಯಾಗಿ ನಿದ್ದೆಯೇ ಬರಲಿಲ್ಲ ನಾಗರಾಜ್’ ಎಂದು ಹೇಳಿದರು” ಎಂದೆ. ವಾಸ್ತವವಾಗಿ ಅಂದು ರಾತ್ರಿ ತಪಾಸಣೆ ಮಾಡಲು ಕೆಲವು ಕಾಂತೀಯ ಸೆನ್ಸರ್‍ಗಳನ್ನು ಅವರ ತಲೆಯ ಎಲ್ಲ ಭಾಗಗಳಿಗೂ ಅಳವಡಿಸಿದ್ದರು. ಆ ಬಾಧೆಯಿಂದಾಗಿ ಅವರಿಗೆ ಆ ರಾತ್ರಿ ನಿದ್ರೆ ಬರದೆ ಅಂಥದೊಂದು ಕನಸು ಬಿದ್ದಿತ್ತು. ಇದನ್ನು ಲಂಕೇಶರಿಗೆ ತಿಳಿಸಿದಾಗ ಅವರು ಬೆರಗಿನಿಂದ “ಎಂತಹ ಮೆಟಫರ್ ಕಣಯ್ಯ” ಎಂದು ಅವರು ಅಚ್ಚರಿ ಪಟ್ಟಿದ್ದರು.

 

 

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಒಳ್ಳೆಯ ನೆನಪು- ಆತ್ಮೀಯತೆಯ -ಆಪ್ತ ಭಾವದ ಬರಹ.. ಕೆ ಎಸ್ ನ ಅವರನ್ನ ಪ್ರೇಮಿಗಳ ದಿನದಂದೇ ನೆನಪಿಸಿಕೊಂಡು ಬರೆದ ನಿಮ್ಮ ಈ ಬರಹ ಸಕಾಲಿಕ.. ಇಲ್ಲಿ ಲಂಕೇಶರು ಕಿ ರಂ ಮತ್ತು ಕೆ ಎಸ್ ನ ಎಲ್ರ ಹೃದಯ ವೈಶಾಲ್ಯತೆಯ -ಪರಸ್ಪರ ಪ್ರೀತ್ಯಾದರಗಳ ಪರಿಚಯ ಆಯ್ತು.. ಒಳ್ಳೆಯ ಬರಹ ವಂದನೆಗಳು.....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಡಾ.ಟಿ.ಎನ್.ವಾಸುದೇವ ಮೂರ್ತಿ ಯವರಿಗೆ ವಂದನೆಗಳು ಕಿ.ರಂ ಹೇಳಿದ ಕತೆಗಳು ಲೇಖನ ಓದಿದೆ. ಕಿ.ರಂ ಮತ್ತು ಕವಿ ಕೆ.ಎಸ್.ನರಸಿಂಹ ಸ್ವಾಮಿ ಯವರ ಭೇಟಿ ಕವಿಗಳ ಕಾವ್ಯ ವಿಮರ್ಶೆಗೆ ಬಳಕೆಯಾದದ್ದು, ಈ ಚರ್ಚೆಗಳಿಂದ ಅವರು ಉಲ್ಲಸಿತರಾದದ್ದು ಓದಿ ಸಂತಸವಾಯಿತು. ಇಂತಹ ಅವಿಸ್ಮರಣೀಯ ಸಂಗತಿಗಳ ಕುರಿತು ಆಗಾಗ ಬರೆಯುತ್ತಿರಿ. ಉತ್ತಮ ಲೇಖನ ನೀಡಿದ್ದಕ್ಕೆ ಧನ್ಯವಾದಗಳು..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕೆ ಎಸ್ ನ ಅವರೊಂದಿಗೆ ನೀವು ಆಸ್ಪತ್ರೆಯಲ್ಲಿ ಗಂಟೆಗಟ್ಟಲೆ ಮಾತನಾಡುತ್ತಾ, ಅವರು ಚೇತರಿಸಿಕೊಳ್ಳಲು ಸಹಾಯ ಮಾಡಿದ್ದು ನಿಜಕ್ಕೂ ಅನನ್ಯ. ಅಷ್ಟೇ ಮುಖ್ಯವಾದದ್ದು, ಲಂಕೇಶ್ ಅವರು “ಅರೆ, ಹಾಗಾದರೆ ಪ್ರತಿದಿನ, ಅವರು ಆಸ್ಪತ್ರೆಯಲ್ಲಿ ಇರುವಷ್ಟೂ ಕಾಲ ಹೋಗಿಬಾರಯ್ಯ” ಎಂದು ನಿಮ್ಮೊಂದಿಗೆ ಹೇಳಿದ್ದು. ಹಳೆಯ ತಲೆಮಾರಿನ ಕವಿಗಳ ಕುರಿತು ಲಂಕೇಶರಿಗೆ ಅಷ್ಟು ಕಾಳಜಿ, ಆದರ ಇತ್ತೆಂಬ ವಿಚಾರವೇ ಕನ್ನಡದ ಸಾರಸ್ವತ ಲೋಕದ ಒಂದು ಗಮನಾರ್ಹ ವಿಚಾರ. ಧನ್ಯವಾದಗಳು ಸರ್, ಈ ರೀತಿಯ ಬರಹಗಳನ್ನು ಹೆಚ್ಚು ಹೆಚ್ಚು ಸಂಪದದಲ್ಲಿ ಪ್ರಕಟಿಸಿ, ಪ್ಲೀಸ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಉತ್ತಮ ಬರಹ. ರೋಗಿಗಳನ್ನು ನೋಡಹೋಗುವವರಿಗೆ ಒಳ್ಳೆಯ ಸಲಹೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕಿರಂ ಅವರಂತೆ outside the box ಯೋಚಿಸುವುದನ್ನು ಕಲಿತುಕೊಳ್ಳಬೇಕು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಇಂಥ ುತ್ತಮ ಪ್ರಸಂಗವನ್ನು ನೆನಪಿಸಿಕೊಂಡ ನೀವು ಧನ್ಯರು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಡಾ||ವಾಸುದೇವ್ ಅತ್ಯುತ್ತಮ ಪ್ರಸಂಗವನ್ನು ಹಂಚಿಕೊಂಡಿದ್ದೀರಿ. ಕವಿಮನ ಸದಾ ಕಾವ್ಯಕ್ಕಾಗಿ , ಕಾವ್ಯ ಚಿಂತನೆಗಾಗಿ ವಿಡಿಯುತ್ತಿರುತ್ತದೆ. ಎಂಥ ಸಮಯದಲ್ಲೂ ಕಾವ್ಯದ ವಿಚಾರಕ್ಕೆ ಸ್ಪಂದಿಸುತ್ತದೆ, ಸಮ ಮನಸ್ಕರು ಮಾತ್ರ ಇದನ್ನು ಅರಿಯಲು ಸಾಧ್ಯಎನ್ನುದು ಈ ಪ್ರಕರಣದಿಂದ ತಿಳಿದು ಬರುತ್ತದೆ. ಕವಿ ಮನಸ್ಸು, ಸಹೃದಯಿ ಸ್ನೇಹ ಜೀವಿ ಪತ್ರಕರ್ತ, ಹಾಗೂ ಸಮಯ ಪ್ರಜ್ಞೆಯುಳ್ಳ ಹೃದಯವಂತ ಉತ್ತಮ ಶಿಕ್ಷಕರ ಪರಿಚಯವನ್ನು ಈ ಪ್ರಸಂಗದೊಂದಿಗೆ ಮಾಡಿಕೊಟ್ಟಿರುವುದಕ್ಕೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.