ಕೆರೆತದ ಕಪಿಮುಷ್ಟಿಯಲ್ಲಿ

4.166665ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ರಾಜಹಂಸದ ಜೊತೆಗೆ ಕೊಟ್ಟ ಉಚಿತ ಉಡುಗೊರೆಯಿಂದ ರಾತ್ರಿ ಪೂರ್ತಿ ನಿದ್ರೆ ಎಕ್ಕುಟ್ಟಿ ಹೋಗಿತ್ತು. ಬಹುಶಃ ರಾಜಹಂಸದಲ್ಲಿ ಪ್ರಯಾಣಿಸಿದವರಿಗೆ ಮೊದಲ ಸಾಲು ಓದಿದ ಕೂಡಲೇ ಅವರ ನಿದ್ರೆ ಹಾರಿದ ರಾತ್ರಿಗಳು ನೆನಪಿಗೆ ಬಂದಿರಬಹುದು. ಸೀಟಿನಲ್ಲಿ ಸುಖವಾಗಿ ನಿದ್ರಿಸುತ್ತಿದ್ದ ತಿಗಣೆಗಳು ನಮ್ಮ ದೇಹವನ್ನು ಸೀಟಿನ ಮೇಲೆ ಊರಿದಾಗ ಬೆಂಗಳೂರಿನ ಹಸಿದ ಬೀದಿ ನಾಯಿಗಳು ಮನುಷ್ಯರ ಮೇಲೆ ಆಕ್ರಮಣ ಮಾಡುವಂತೆ ನಮ್ಮ ದೇಹವನ್ನೆಲ್ಲಾ ಮುತ್ತತೊಡಗಿದವು. ರಕ್ತಕಣ್ಣೀರು ಚಿತ್ರದಲ್ಲಿ ಉಪೇಂದ್ರರ ಕೆರೆತವನ್ನೂ ಮೀರಿಸುವಂತಿತ್ತು ನಮ್ಮ ಕೆರೆತ. ಕಣ್ಮುಚ್ಚಿಕೊಂಡೇ ಕೈಗಳು ಮೈಮೇಲೆ ಹರಿದಾಡುತ್ತಿದ್ದವು. ಅಂತೂ ಇಂತೂ ಮುಂಜಾನೆಯ ಹೊತ್ತಿಗೆ ಪೇಟೆ ತಲುಪಿದ್ದಾಯಿತು. ಪಕ್ಕದಲ್ಲಿ ಕೂತಿದ್ದ ಮಾವನವರಿಗೂ ನಿದ್ರೆ ಬಂದಿರಲಿಲ್ಲ, ಆದರೆ ಫಾರ್ಮಾಲ್ಯಿಟಿಗಾದರೂ ಕೇಳಬೇಕೆಂದು ಬಸ್ಸಿಂದ ಇಳಿದ ಮೇಲೆ ನಿದ್ರೆ ಬಂತೆ ಚೆನ್ನಾಗಿ? ಅಂದೆ. 'ತಿಗಣೆ' ಅಂತ ಕೇವಲ ಒಂದೇ ಪದದಲ್ಲಿ ನನ್ನ ಪ್ರಶ್ನೆಗೆ ಉತ್ತರ ಹೇಳಿ ಸುಮ್ಮನಾದರು. ಶರ್ಟ್ ಕಾಲರ್ ತೆಗೆದು ತಿಗಣೆ ಏನಾದರೂ ಇದೆಯೋ ನೋಡಿ ಅಂದರು, ನಾನು ನೋಡಿ ಇಲ್ಲ ಅಂದೆ. ಮುಂದೆ ಆ ವಿಚಾರದ ಬಗ್ಗೆ ಯಾವುದೇ ಪ್ರಶ್ನೆಯೆತ್ತಲಿಲ್ಲ.

ಚಳಿಗೆ ನಡುಗುತ್ತಿದ್ದ ದೇಹಕ್ಕೆ ಬೆಚ್ಚನೆಯ ಕಾಫಿ ಕುಡಿಸಿ ಊರಿನ ಬಸ್ಸಿಗಾಗಿ ಕಾಯುತ್ತಾ ಕುಳಿತೆವು. ೧೦ ನಿಮಿಷದ ನಂತರ ಬಸ್ಸು ಬಂತು. ಹಾಲು ತೆಗೆದುಕೊಂಡು ಬಾ ಎಂದು ಅಮ್ಮ ಹೇಳಿದ್ದರಿಂದ ಡ್ರೈವರಿಗೆ ಹೇಳಿ ಬಸ್ಸನ್ನು ನಂದಿನಿ ಹತ್ತಿರ ನಿಲ್ಲಿಸಿ ಹಾಲು ತರಲು ಓಡಿದೆ, ನನ್ನ ನಿದ್ರೆಯಿಲ್ಲದ ನೇತ್ರಗಳನ್ನು ನೋಡಿದ ಮತ್ತು ಬಸ್ಸು ನನಗಾಗಿ ಕಾಯುತ್ತಿದೆ ಎಂದು ಅರಿತ ಡೈರಿಯಲ್ಲಿದ್ದ ವ್ಯಕ್ತಿ ಪರಿಸ್ತಿತಿಯ ಲಾಭ ಪಡೆದು ಎರಡು ರೂಪಾಯಿಯನ್ನು ಜಾಸ್ತಿ ತೆಗೆದುಕೊಂಡು ನನಗೆ ಏಮಾರಿಸಿದ್ದ. ಅರ್ಧ ಘಂಟೆಯ ಹಾದಿ ಊರಿಗೆ, ಆ ಅರ್ಧ ಘಂಟೆ ಸಂಪೂರ್ಣವಾಗಿ ನಿದ್ರಾದೇವಿ ನಮ್ಮ ಸಂಕಷ್ಟವನ್ನ ನೋಡಲಾರದೆ ನಮಗೆ ನಿದ್ರೆಯನ್ನ ದಯಪಾಲಿಸಿದ್ದಳು.

ಊರು ಬಂದ ಬಳಿಕ ಬಸ್ಸಿಂದಿಳಿದು ಮನೆಯ ಕಡೆ ಹೆಜ್ಜೆ ಹಾಕಿದೆವು. ಮಲೆನಾಡಿನಲ್ಲಿ ಸಾಮಾನ್ಯವಾಗಿ ಈ ಸಮಯದಲ್ಲಿ ಮಳೆ ಒಂದೇ ಸಮನೆ ಸಣ್ಣಗೆ ಸುರಿಯಬೇಕಾಗಿತ್ತು ಆದರೆ ಈ ವರ್ಷ ಕಣ್ಣಾಮುಚ್ಚಾಲೆ ಆಡುತ್ತಿದ್ದುದರಿಂದ ಬೇಸಗೆಯಂತೆ ಇತ್ತು. ಮನೆ ತಲುಪಿದ ತಕ್ಷಣ ಅಮ್ಮ ಬಂದು ಯೋಗಕ್ಷೇಮ ವಿಚಾರಿಸಿದ ಬಳಿಕ ಮಾವನವರು ಕೈ-ಕಾಲು ತೊಳೆಯಲು ಒಳಗೆ ಹೋದರು. ನಾನು ಅಲ್ಲೇ ಕೂತದ್ದನ್ನು ನೋಡಿ 'ಯಾಕೆ ಇಲ್ಲೇ ಕೂತ್ಕೊಂಡೆ, ಚಳಿ ಇದೆ ಕೈ ಕಾಲು ತೊಳ್ಕೊಂಡು ಬಿದ್ಕೋ, ಕಾಫಿ ತಂದ್ಕೊಡ್ತೀನಿ' ಅಂದಾಗ 'ಕಾಫೀ ಏನ್ಬೇಡಮ್ಮ, ಬಸ್ಸಲ್ಲಿ ನಿದ್ರೇನೆ ಬರ್ಲಿಲ್ಲ. ತಿಗಣೆಗಳು' ಅಂದಾಗ ಅಮ್ಮ ಹೌಹಾರಿದರು. 'ತಿಗಣೆ ಅನ್ನೋ ಸುದ್ದಿನೇ ಸುತ್ತಮುತ್ತ ಕೇಳಿಲ್ಲ, ಮೊದಲು ಬಟ್ಟೆ ಬಿಚ್ಚಿ ಎಲ್ಲಾ ಕೊಡವಿ ಮನೆ ಒಳಗೆ ಬಾ' ಅಂದಾಕ್ಷಣ 'ಆಹಾ, ಎಂಥಾ ವೆಲ್ಕಂ ಮಗನಿಗೆ!' ಅಂದು ಪಕ್ಕದಲ್ಲಿಯೇ ಇದ್ದ ಶೆಡ್ ಬಳಿ ಹೋಗಿ ಬಟ್ಟೆಯನ್ನ ಜೋರಾಗಿ ಕೊಡವಿ ಮನೆಯೊಳಕ್ಕೆ ಹೋದೆ. ನಡುಮನೆಯಲ್ಲಿ ಇದ್ದ ಅಪ್ಪನಿಗೆ ನಾನು ಮಾತನಾಡುತ್ತಿದ್ದ ಯಾವ ವಿಷಯಗಳೂ ಕೇಳಿಸುತ್ತಿರಲಿಲ್ಲ. ಒಂದೊಮ್ಮೆ ಕೇಳಿದ್ದರೆ ಚಾವಡಿಗೆ ಬಿಸಿನೀರ ಕಳಿಸಿ ಅಲ್ಲಿಯೇ ಸ್ನಾನ ಮಾಡಲು ಹೇಳಿ ಆಮೇಲೆ ಮನೆ ಒಳಗೆ ಬಿಟ್ಟುಕೊಳ್ಳುತ್ತಿದ್ದರು!

ಸ್ನಾನ ಮಾಡಿ ಬೇರೆ ಬಟ್ಟೆ ಹಾಕಿಕೊಂಡು ಹೊರಗಿನ ಸುಂದರ ವಾತಾವರಣದಲ್ಲಿ ಚಾವಡಿಯಲ್ಲಿ ಕುಳಿತು ಅಮ್ಮ ತಂದುಕೊಟ್ಟ ಕಾಫಿ ಕುಡಿದ ಬಳಿಕ ನಿದ್ರೆ, ತಿಗಣೆಗಳ ವಿಚಾರ ಎಲ್ಲಾ ಮನಸ್ಸಿನಿಂದ ಹಾರಿಹೋಗಿತ್ತು. ಅಲ್ಲೇ ನಿಂತಿದ್ದ ಅಮ್ಮ ರಾತ್ರಿಯೆಲ್ಲಾ ನಿದ್ರೆ ಮಾಡಿಲ್ವಲ್ಲ ಹೋಗಿ ಸ್ವಲ್ಪಹೊತ್ತು ಬಿದ್ಕೊಳ್ಳೋ ಅಂದ್ರು ಆದರೆ ಊರಿಗೆ ಹೋದಾಗ ಬೆಳಗಿನ ಸಮಯದಲ್ಲಿ ಗದ್ದೆ ಮತ್ತೆ ತೋಟಕ್ಕೆ ಹೋಗಿ ಪ್ರಕೃತಿ ಸೌಂದರ್ಯ ಅನುಭವಿಸುವ, ಚಿತ್ರಗಳನ್ನ ತೆಗೆಯುವ, ಹಣ್ಣುಗಳ ಅನ್ವೇಷಣೆಯಲ್ಲಿ ತೊಡಗುವ ನಾನು ಅಮ್ಮನಿಗೆ ನಿದ್ರೆ ಯಾವಾಗ್ಲೂ ಇದ್ದಿದ್ದೆ ಗದ್ದೆ ಕಡೆ ಹೋಗಿಬರ್ತೀನಿ ಅಂದು ಚಪ್ಪಲಿ ಹಾಕಿಕೊಂಡು ಹೊರಟೆ. ಊರಲ್ಲಿದ್ದಾಗ ಇಂತಹ ಸಾವಿರಾರು ಹುಚ್ಚಾಟಗಳನ್ನ ನೋಡಿ ಸಹಿಸಿಕೊಂಡಿದ್ದ ನಮ್ಮಮ್ಮ ಬೇರೇನನ್ನೂ ಹೇಳದೆ ಬಾಗಿಲು ಹಾಕಿಕೊಂಡು ಒಳಕ್ಕೆ ಹೋದರು. ನಾನು ಕೆಳಗೆ ಹೊರಟಿದ್ದನ್ನು ನೋಡಿದ ಮೋತಿ ನನ್ನನ್ನು ಹಿಂಬಾಲಿಸಿತು.

ಸ್ವಲ್ಪ ಸಮಯ ಹಿಂದೆ ಬರುತ್ತಿದ್ದ ಮೋತಿ ನನ್ನನ್ನು ಹಿಂದಕ್ಕೆ ಹಾಕಿ ಅದು ಮುಂದೆಹೋಯಿತು. ಯಜಮಾನ ನಾನೋ ಅಥವಾ ಅದೋ ಎಂಬ ಜಿಜ್ಞಾಸೆಯನ್ನ ನನ್ನಲ್ಲಿ ಉಂಟುಮಾಡಿ ಅದರ ಪಾಡಿಗೆ ಅದು ಮುಂದೆ ಹೋಗುತ್ತಿತ್ತು! ಮೊದಲೆಲ್ಲಾ ಇದ್ದ ನಾಯಿಗಳೆಲ್ಲಾ ಕಂತ್ರಿ ನಾಯಿಗಳಾಗಿದ್ದುದರಿಂದ ಅವು ನಮ್ಮನ್ನು ಹಿಂಬಾಲಿಸುತ್ತಿದ್ದವೇ ಹೊರತು ಮುಂದೆ ಹೋಗುತ್ತಿರಲಿಲ್ಲ, ಆದರೆ ಏನೋ ಅಪಾಯವಿದೆ ಎಂದು ಛೂ ಎಂದರೆ ಸಾಕು ಮುಂದೆ ನುಗ್ಗುತ್ತಿದ್ದವು ಬಾಕಿಯಂತೆ ಹಿಂದೆಯೇ (ಬೇರೆ ಮನೆಯವರ ಕಂತ್ರಿ ನಾಯಿಗಳ ಬಗ್ಗೆ ಗೊತ್ತಿಲ್ಲ!).

ಹೀಗೆ ಮೋತಿಯು ನಮಗಿಂತ ಮುಂದೆ ಹೋಗುವುದರ ಲಾಭವೊಂದಿತ್ತು, ಅಮ್ಮ ನನಗೆ ಹೇಳಿದ ಮೇಲೆ ಗೊತ್ತಾಯ್ತು. ಅದೇನೆಂದರೆ, ಗದ್ದೆ ತೋಟಗಳಲ್ಲಿ ಹಾವುಗಳು ಸಾಮಾನ್ಯವಾಗಿ ಇರುತ್ತವೆ. ಅದಕ್ಕಾಗಿಯೇ ಅಮ್ಮ ಮೋತಿಯನ್ನು ಮುಂದೆ ಬಿಟ್ಟು ತಾನು ಹಿಂದೆ ಹೋಗುತ್ತಿತ್ತು. ಏನಾದರೂ ಇದ್ದಲ್ಲಿ ಮೋತಿ ಬೆರೆಸಿಕೊಂಡು ಹೋಗುತ್ತಿತ್ತು, ಹಾಗಾಗಿ ದಾರಿಯಲ್ಲಿ ನಿಶ್ಚಿಂತೆಯಿಂದ ಸಾಗಬಹುದಿತ್ತು. ನನಗೂ ಇದರ ಅನುಭವವಾಗಿತ್ತು. ಒಮ್ಮೆ ಗದ್ದೆಗೆ ಹೋಗುವಾಗ ಎಂದಿನಂತೆ ಅಂದು ಮುಂದೆ ಹೋಗುತ್ತಿತ್ತು, ಸ್ವಲ್ಪ ದೂರ ಹೋದ ಮೇಲೆ ಅಲ್ಲೇ ನಿಂತು ಬೊಗಳಲಾರಂಭಿಸಿತು, ನಾನು ಸ್ವಲ್ಪ ಮುಂದೆ ಹೋಗಿ ನೋಡಿದರೆ ದೂರದಲ್ಲಿದ್ದ ಬಾವಿಯ ಬಳಿ ಎರಡು ಹಾವುಗಳು ಕುಳಿತಿದ್ದವು??!! ಮೋತಿಯನ್ನು ಹಿಂದಕ್ಕೆ ಕರೆಯಲು ಪ್ರಯತ್ನಪಟ್ಟೆ, ಉಹುಂ ಅಲ್ಲಾಡಲಿಲ್ಲ. ನಾನು ಇನ್ನೂ ಸ್ವಲ್ಪ ಹಿಂದೆ ಹೋಗಿ ಮತ್ತೆ ಕರೆದೆ, ತಿರುಗಿ ನೋಡಿದ ಅದು ಮತ್ತೆ ಮುಂದೆ ತಿರುಗಿ ಬೊಗಳಲಾರಂಭಿಸಿತು. ನಾನು ವಾಪಸ್ ಹೋಗುವ ಹಾಗೆ ನಾಟಕ ಮಾಡಿ ಅದನ್ನು ಕರೆದೆ. ಆಗ ಬಂತು. ನಂತರ ಬೇರೆ ದಾರಿಯಲ್ಲಿ ಗದ್ದೆಗೆ ಹೋದೆ.

ಸದ್ಯ ವಿಷಯಕ್ಕೆ ಬರೋಣ, ಹಾಗೆ ಗದ್ದೆಯಲ್ಲಿ ಹೋಗುವಾಗ ಅಲ್ಲಿದ್ದ ಬೆಟ್ಟದ ನೆಲ್ಲಿ ಕಾಯಿ ಮರ ಕಾಣಿಸಿತು. ಹಲವು ಸಮಯಗಳಲ್ಲಿ ನೋಡಿದಾಗೆಲ್ಲ ಬೋಳು ಮರ ಅಥವಾ ಸ್ವಲ್ಪ ಎಲೆಗಳು ಕಾಣಿಸುತ್ತಿದ್ದವು ಆದರಿಂದು ಸಣ್ಣ ನೆಲ್ಲಿಕಾಯಿ ಕಾಣಿಸಿತು ಹತ್ತಿರವಿದ್ದ ಕೊನೆಯಲ್ಲಿ.
ಹಾಗೇ ಕಣ್ಣರಳಿಸಿ ನೋಡಿದಾಗ ಅಲ್ಲಲ್ಲಿ ಒಂದೊಂದು ಇರುವುದು ಕಾಣಿಸಿತು. ಹತ್ತಲೋ ಬೇಡವೋ ಎಂದು ಯೋಚಿಸಿದೆ, ನಾಳೆ ಬಂದರಾಯಿತು ಅಂತ ಒಮ್ಮೆ ಸುಮ್ನಾದೆ ಆದ್ರೆ ಅಕಸ್ಮಾತ್ ಬೇರೆ ಯಾರಾದರೂ ನೋಡಿ ಕಿತ್ಕೊಂಡು ಹೋಗಬಹುದು ಅದೂ ಅಲ್ಲದೆ ಅಕಸ್ಮಾತ್ ಇದ್ದರೂ ಮೊದಲೇ ಮಳೆಗಾಲದ ಸಮಯ ಯಾವಾಗ ಮಳೆ ಬರುವುದೆಂದು ಹೇಳುವುದಕ್ಕಾಗುವುದಿಲ್ಲ ಎಂದುಕೊಂಡು ಮರ ಹತ್ತಿದೆ (ನನ್ನ ಎಣಿಕೆ ನಿಜವಾಗಿತ್ತು, ಮಾರನೇ ದಿನ ಭಾರೀ ಮಳೆ ಶುರುವಾಗಿತ್ತು).

 ಚಿಕ್ಕವನಿದ್ದಾಗ ಹಲಸಿನ ಮರ, ನೇರಳೆ, ಪನ್ನೇರಳೆ, ಚಕೋತ, ಕಿತ್ತಳೆ ಮರಗಳನ್ನ ಸರಾಗವಾಗಿ ಹತ್ತುತ್ತಿದ್ದೆ, ಆದರೆ ಓದುವುದಕ್ಕೆಂದು ಹೊರಗಡೆ ಹೋದಾಗಿನಿಂದ ಅವೆಲ್ಲವೂ ಮರೆತುಹೋಗಿತ್ತು. ನೆಲ್ಲಿಕಾಯಿಯ ಮರ ತುಂಬಾ ಎತ್ತರವೇನೂ ಇರಲಿಲ್ಲ ಹಾಗಂತಾ ಚಿಕ್ಕದೂ ಆಗಿರಲಿಲ್ಲ. ಆದರೆ ಹತ್ತುವುದಕ್ಕೆ ಕೆಳಗೆ ಯಾವುದೇ ಕೊನೆಗಳಿರಲಿಲ್ಲ, ಹೀಗಾಗಿ ಕಷ್ಟಪಟ್ಟೇ ಹತ್ತಬೇಕಾಗಿತ್ತು ಅದೂ ಅಲ್ಲದೆ ಮರ ಗದ್ದೆಯ ಮೇಲ್ಬದಿಯಲ್ಲಿ ಇದ್ದುದರಿಂದ ಮರದಾಚೆಯ ಸಾಲಿನಲ್ಲಿ ಕಲ್ಲೇವು (ಕಾಲುವೆ) ಹರಿಯುತ್ತಿತ್ತು, ಅಪ್ಪಿ ತಪ್ಪಿ ಜಾರಿದರೆ ಮತ್ತೊಮ್ಮೆ ಸ್ನಾನ ಮಾಡುವ ಸಂದರ್ಭ ಬರುತ್ತಿತ್ತು! ಜೊತೆಗೆ ಮೂಳೆ ಮುರಿಯುವ ಅವಕಾಶವೂ ಒದಗುತ್ತಿತ್ತು!  ಬೆಳಗಿನ ಸಮಯ, ಯಾರೂ ಆ ಗದ್ದೆಯ ಬಯಲಿನಲ್ಲಿ ಕಾಣಿಸುತ್ತಿರಲಿಲ್ಲ. ಬಹುಶಃ ಯಾರಾದ್ರೂ ಬಂದು ನನ್ನನ್ನ ನೋಡಿದ್ರೆ, ಬೆಳ್ಗ್ಬೆಳ್ಗೆ ಬೆಂಗ್ಳೂರಿಂದ ಬಂದು ಇವ್ನಿಗೇನು ಬಂತಪ್ಪಾ!? ಅಂತಿದ್ರು. ಸದ್ಯ ಹಾಗಾಗಲಿಲ್ಲ. ಕೆಳಗೆ ನಿಂತಾಗ ಸ್ವಲ್ಪವೇ ಕಾಣಿಸುತ್ತಿದ್ದ ಕಾಯಿಗಳು ಮೇಲೆ ಹೋದ ಹಾಗೆ ಜಾಸ್ತಿ ಕಾಣಲಾರಂಭಿಸಿತು, ಬಹುಶಃ ಕುಡಿದವರ ಪರಿಸ್ತಿತಿಯೂ ಇದಕ್ಕಿಂತ ಭಿನ್ನವಾಗಿರಲಿಕ್ಕಿಲ್ಲ!!.ಕೈ ಚಾಚುವ ಕಡೆಯೆಲ್ಲಾ ಹೋಗಿ ನೆಲ್ಲಿಕಾಯಿ ಕಿತ್ತು ಜೇಬಿಗೆ ತುಂಬಿಕೊಂಡೆ. ಎರಡೂ ಜೇಬು ತುಂಬಿದ ಬಳಿಕ ಸಾಕೆನ್ನಿಸಿ ಇಳಿಯಲಾರಂಭಿಸಿದೆ. ಇದ್ದಕಿದ್ದಂತೆ ದೂರದಿಂದ ಯಾರೋ ಕೂಗಿದಂತಾಯ್ತು??!!.

 

 

'ಓಯ್ ಯಾರ್ರೋ ಅದು ನಮ್ಗೌಡ್ರ ಗದ್ದೆಲೀ ಮರ ಹತ್ತಿರೋದು?' ಎಂದು ದನಿ ಕೇಳಿಸಿತು. ಬೇರೆಯವರ ಗದ್ದೆಯ ಮರಕ್ಕೆ ಹತ್ತಿದ್ದರೆ ಬಹುಶಃ ಹೆದರಿ ಹಾರಿ ಚರಂಡಿಗೆ ಬೀಳುತ್ತಿದ್ದೆನೇನೋ (ಸಣ್ಣವನಾಗಿದ್ದಾಗ!!! ಆದರೆ ಈಗ ಹತ್ತುತ್ತಿರಲಿಲ್ಲ. ವಿಚಿತ್ರ ಎಂದರೆ ಇದೇ ಇರ್ಬೇಕು ನೋಡಿ, ಬೇರೆಯವರ ಗದ್ದೆ ತೋಟದಲ್ಲಿ ಏನಾದರೂ ಹಣ್ಣುಗಳನ್ನು ಕದಿಯಲು ಹೋದರೆ ಅದರ ವಾರಸುದಾರರು ಆಗ ಬಯ್ದೋ ಇಲ್ಲವೋ ತಮಾಷೆ ಮಾಡಿದರೆ ಈಗ ಗೇಲಿ ಮಾಡುವ ಸಂದರ್ಭ ಬರುತ್ತಿತ್ತು). ನಮ್ಮದೇ ಗದ್ದೆಯಾದುದರಿಂದ ಹೆದರದೆ ಶಬ್ಧ ಬಂದ ಕಡೆ ತಿರುಗಿ ನೋಡಿದೆ. ದೂರದಲ್ಲಿ ಚಿಕ್ಕ ಬರುವುದು ಕಾಣಿಸಿತು, ಮರದ ಮೇಲಿಂದಲೇ 'ನಾನು ಕಣೋ' ಅಂದೆ. 'ಓ ಗೌಡ್ರು, ಯಾವಾಗ ಬಂದದ್ದು? ಇದೇನು ಬೆಳ್ಗ್ಬೆಳ್ಗೆನೆ ನೆಲ್ಲಿಕಾಯಿ ಕೀಳ್ತಿದೀರಾ? ಯಾರ್ಯಾರು ಬಂದ್ರಿ? ಚಿಕ್ಕಮ್ಮೋರು ಬಂದ್ರಾ??' ಉಸಿರಾಡುವುದಕ್ಕೂ ಪುರುಸೊತ್ತಿಲ್ಲದ
ಹಾಗೆ ಒಂದೇ ಸಮನೆ ಪ್ರಶ್ನೆಗಳ ಮಳೆಯನ್ನೇ ಸುರಿದ. ಅವನ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟು, ಮರದ ಬಳಿ ಕುಳಿತಿದ್ದ ಮೋತಿಯನ್ನು ಕರೆದುಕೊಂಡು ಮನೆಕಡೆ ಹೊರಟೆ.

ಅಲ್ಲಿಗೆ ಒಂದು ಕೆಲಸ ನೀಟಾಗಿ ಆಗಿತ್ತು. ಮನೆಗೆ ಹೋಗಿ ತಿಂಡಿ ತಿಂದು ಪೇಪರ್ ಓದುತ್ತಾ ಕುಳಿತೆ, ಊರು ಮನೆಯವರು ಒಂದಷ್ಟು ಜನ ಬಂದ್ರು, ಅವರ ಜೊತೆ ಮಾತನಾಡಿ ಅಲ್ಲಿ ಇಲ್ಲಿ ತಿರುಗಾಡುವಷ್ಟರಲ್ಲಿ ಮಧ್ಯಾಹ್ನವಾಗಿತ್ತು. ಊಟವಾದ ನಂತರ ವೀಳ್ಯದೆಲೆ ಬೇಕೆಂದು ತೆಗೆದುಕೊಂಡು ಬರಲು ಅಮ್ಮ ಹೇಳಿದರು, ಮನೆಯ ಹತ್ತಿರದಲ್ಲೇ ಇರುವ ಹಾಲುವಾಣ ಮರಕ್ಕೆ ಅಮ್ಮ ಹಾಕಿದ ಬಳ್ಳಿಯಿಂದ ಒಂದಷ್ಟು ಕಿತ್ತುಕೊಂಡು ಬರೋಣವೆಂದು ಹೋದೆ. ಸುಮಾರು ೨೦ ಎಲೆಗಳನ್ನು ಕಿತ್ತುಕೊಂಡು ಅದಕ್ಕೆ ಸ್ವಲ್ಪ ಕಾಫಿಯ ಎಲೆಗಳನ್ನು (ಎರಡೂ ಒಂದೇ ರೀತಿ ಕಾಣುವುದರಿಂದ) ಬೆರೆಸಿ ಅಮ್ಮನಿಗೆ ಕೊಟ್ಟೆ!. ಅಮ್ಮ ಹಾಗೇ ನೋಡಿ ಅಲ್ಲೇ ಇಟ್ಟರು, ಮತ್ಯಾಕೋ ಅನುಮಾನ ಬಂದಂತಾಗಿ ತೆಗೆದುನೋಡಿದರು. 'ಇದೇನೋ ಕಾಫೀ ಎಲೇನೂ ಕುಯ್ದಿದೀಯಲ್ಲೋ??' ಅಂದಾಗ ನಾನು ಅಮ್ಮನ ಮುಖ ನೋಡಿ ನಕ್ಕೆ 'ಬರೀ ಇಂಥಾ ಕೆಲ್ಸ್ಗಳ್ನೆ ಮಾಡು!' ಅಂದು ಒಳಗೆ ಹೋದರು.

ಸಂಜೆಯಾಗುತ್ತಿದ್ದಂತೆ ಸೀಬೆಹಣ್ಣನ್ನು ತಿನ್ನುವ ಮನಸ್ಸಾಯಿತು.ತೋಟದ ಕಡೆ ಹೆಜ್ಜೆ ಹಾಕಿದೆ, ಚಾವಡಿಯ ಬಳಿ ಮಲಗಿದ್ದ ಮೋತಿ ಮತ್ತೆ ನನ್ನನ್ನ ಹಿಂಬಾಲಿಸಿತು. ಮನೆಯ ಹತ್ತಿರದಲ್ಲೇ ಇರುವ ಸೀಬೇಗಿಡಗಳ ಬಳಿ ಹೋದೆ. ಒಂದು ಗಿಡದ ತುದಿಯಲ್ಲಿ ಒಂದೆರಡು ಸೀಬೆಹಣ್ಣುಗಳು ಕಂಡವು. ಗಿಡವಾದ್ದರಿಂದ ಹತ್ತುವಂತಿರಲಿಲ್ಲ. ಕೆಳಗಿನಿಂದ ಕೊನೆಗಳನ್ನ ಎಳೆದು ಎಳೆದು ಒಂದೊಂದರ ತುದಿಯನ್ನ ಹಿಡಿದು ಕೊನೆಗೆ ಕೊನೆಯ ಕೊನೆಯನ್ನು ಕೈಗಳು ತಲುಪಬೇಕಾಗಿತ್ತು!! ಹತ್ತು ನಿಮಿಷಗಳ ಹರಸಾಹಸದ ನಂತರ ಅಂತೂ ಕೊನೆಯನ್ನ ಹಿಡಿದೆ, ಆದರೆ ಕೈ ಬಳಿ ಏನೋ ತುರಿಸಿದಂತಾಗಿ ಹಿಡಿದುಕೊಂಡಿದ್ದ ಕೊನೆಯನ್ನೆಲ್ಲಾ ಬಿಟ್ಟೆ. ಮೋತಿ ನನ್ನ ಮಂಗನಾಟವನ್ನ ನೋಡಿ ಮನೆಯ ಕಡೆ ಹೆಜ್ಜೆ ಹಾಕಿತು. ಕೈಯನ್ನ ಕೆರೆದುಕೊಂಡು ಮತ್ತೆ ಕೊನೆಗೆ ಕೈ ಹಾಕಿದೆ. ಅಂತೂ ಎರಡು ಸೀಬೆಹಣ್ಣನ್ನು ಕಿತ್ತೆ. ಒಂದರ ಅರ್ಧಭಾಗವನ್ನು ದೇವರು ಗಿಳಿಗೆ ಕೊಟ್ಟಿದ್ದ ಹಾಗಾಗಿ ಇನ್ನರ್ಧ ಭಾಗ ನನಗೊಲಿದಿತ್ತು!. ತಿನ್ನುತ್ತಾ ಮನೆಕಡೆ ಹೆಜ್ಜೆ ಹಾಕಿದೆ, ಕೈ ತುರಿಸುತ್ತಲೇ ಇತ್ತು ನನ್ನ ಬೆರಳುಗಳು ಕೆರೆಯುತ್ತಲೇ ಇತ್ತು!.ಭಯಂಕರ ತುರಿಕೆಯಾಗತೊಡಗಿತು ಇದ್ದಕಿದ್ದಂತೆ ಯೋಚನೆ ಬಂತು, ತಿಗಣೆಗಳು ಇನ್ನೂ ದೇಹವನ್ನು ಬಿಟ್ಟು ತೊಲಗಿಲ್ಲವೇನೋ ಎಂದು. ಚೆನ್ನಾಗಿ ಸ್ನಾನ ಮಾಡಿದ್ದಾಯಿತು, ಬೇರೆ ಬಟ್ಟೆಯನ್ನೂ ಹಾಕಿದ್ದಾಯಿತು ಆದರೂ ಹೀಗಾಯಿತಲ್ಲವೆಂದುಕೊಂಡೆ. ಹಾಗೇ ಬರುವಾಗ ಅಪ್ಪ ಮತ್ತುಮಾವ ಚಾವಡಿಯ ಬಳಿ ಕೂತಿದ್ದರು. ಕೈ ಊದಿರುವುದನ್ನ ನೋಡಿದ ಮಾವ ಏನಾಯಿತು ಅಂತ ವಿಚಾರಿಸಿ ಅರಶಿನದ ಪುಡಿ ಹಚ್ಕೊಳ್ಳಿ ಅಂದ್ರು, ನಮ್ಮಪ್ಪ ಇವ್ನ್ದಿದ್ದಿದ್ದೆ ಅಂತ ಏನೂ ಹೇಳದೆ ಅವರೊಂದಿಗೆ ಮಾತಾಡುತ್ತಾ ಕುಳಿತರು.


ಅಮ್ಮನ ಬಳಿ ಹೋಗಿ ಅಲ್ಲಲ್ಲಿ ದಪ್ಪದಾಗಿ ಊದಿಕೊಂಡ ಕೈಯನ್ನು ತೋರಿಸಿದೆ, ತಿಗಣೆಗಳು ಇನ್ನೂ ಇರ್ಬೇಕು ನೋಡು ಅಂದೆ. ನನ್ನ ಇಂಥಾ ಅನೇಕ ಹುಚ್ಚಾಟಗಳನ್ನ ನೋಡಿದ್ದ ಅಮ್ಮ 'ತಿಗಣೆನೂ ಇಲ್ಲ, ಮಣ್ಣೂ ಇಲ್ಲ, ಕಂಬ್ಳಿಹುಳ ಇರ್ಬೇಕು. ತಲೆಕೂದ್ಲಲ್ಲಿ ಊದಿರೋ ಜಾಗಕ್ಕೆ ಚೆನ್ನಾಗಿ ತಿಕ್ಕು' ಅಂದು ಅವರ ಕೆಲಸಕ್ಕೆ ಹೋದರು. ಹಾಗೇ ಮಾಡುತ್ತಾ ಕೂತಿದ್ದೆ. ಅಲ್ಲೇ ಇದ್ದ ದೊಡ್ಡತ್ತೆ, ಏನೂ ಆಗಲ್ಲ ರಾತ್ರಿ ಹೊತ್ತಿಗೆ ಸರಿಯಾಗತ್ತೆ ಅಂದ್ರು.  ಅದೇ ಸಮಯಕ್ಕೆ ನನ್ನ ಹೆಂಡತಿಯ ಕಾಲ್ ಬಂತು. ಅವಳಿಗೆ ಈ ವಿಷಯ ಹೇಳಿದೆ. ಕಂಬ್ಳಿ ಇದ್ರೆ ಅದಕ್ಕೆ ಉಜ್ಜಿ ಅಂದ್ಲು (ಪಾಪ, ಹಳ್ಳಿಗಳೂ ನಗರೀಕರಣವಾಗುತ್ತಿದೆ. ಹಳೆಯದೆಲ್ಲವೂ ಹೋಗಿ ಹೊಸತು ಬರುತ್ತಿದೆ ಎಂದು ತಿಳಿದಿದ್ದರೂ ಹಾಗೆ ಹೇಳಿದ್ದಳು!, ಇದ್ದರೂ ಇರಬಹುದೇನೋ ಎಂದು). ಕಂಬ್ಳಿ ನಮ್ಮ ಅಜ್ಜನ ಜೊತೆಯೇ ಹೋಯ್ತು ಅಂತ ಮನಸ್ನಲ್ಲಿ ಅಂದ್ಕೊಂಡು 'ಈಗೆಲ್ಲಿದೆ ಕಂಬ್ಳಿ, ಇದ್ರೂ ಸದ್ಯ ನಮ್ಮನೇನಲ್ಲಿ ಇಲ್ಲ ಕಣೇ' ಅಂದೆ. ರಾತ್ರಿಯ ಹೊತ್ತಿಗೆ ಸ್ವಲ್ಪ ಕಡಿಮೆಯಾಗಿತ್ತು. ಒಟ್ಟಿನಲ್ಲಿ ರಾತ್ರಿ ತಿಗಣೆಯ ಕಾಟ ಸಂಜೆ ಕಂಬ್ಳಿಹುಳದ ಕಾಟ, ಎರಡು ಮೂಕಪ್ರಾಣಿಗಳು ನನ್ನ ನೆಮ್ಮದಿಯನ್ನು ಇನ್ನಿಲ್ಲದಂತೆ ಕೆಡಿಸಿದ್ದವು. ನೆಲ್ಲಿಕಾಯಿ, ವೀಳ್ಯದೆಲೆ ಕೀಳುವಾಗ ಇದ್ದ ಅದೃಷ್ಟ ಸೀಬೆಹಣ್ಣು ಕೀಳುವಾಗ ಹೋಗಿತ್ತು!.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ಚನ್ನಾಗಿದೆ ನಿಮ್ಮ " ಕೆರೆತದ " ಕಥೆ, ಆದರೆ ನಿಮ್ಮ ತಾಯಿ ನಿಮಗೆ ಮಾತ್ರ ಬಟ್ಟೆಗಳನ್ನು ಕೊಡವಿ ಬರಲು ಹೇಳಿ ನಿಮ್ಮ ಮಾವನವರನ್ನ ಹಾಗೆ ಒಳಗೆ ಬಿಟ್ಟರಲ್ಲ ಬಹಶಃ ಅವರು ಒಳಗೆ ಹೋದ ಮೇಲೆ ನೀವು ತಿಗಣೆ ಬಗ್ಗೆ ಹೇಳಿರ ಬೇಕು ಅಲ್ಲವೆ? ...ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದ ಸತೀಶವ್ರೆ.... ಅವ್ರಿಗೆ ಹಾಗೆ ಹೇಳೋಕಾಗಲ್ವಲ್ಲ, ಸ್ನಾನ ಮಾಡ್ಲಿಕ್ಕೆ ಹೋದರು ಹಾಗಾಗಿ ನೋ ಪ್ರಾಬ್ಲಂ!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಚೆನ್ನಾಗಿದೆ ತುಂಬಾ ಅನುಭವಿಸಿ ಬರೆದಿದ್ದೀರಾ....:)))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

:) :) :) :) ಗೋಪಾಲವ್ರೆ ಅನುಭವಿಸಿದಾಗಲೇ ಬರಹಗಳು ಹೊರಹೊಮ್ಮುವುದು, ಆದರೆ ಇದೇನು ಅಲ್ಲಾ ಬಿಡಿ. ತಿಗಣೆಗಳ ಕಾಟದಿಂದ ನಾವು ಬಾಡಿಗೆ ಮನೆಯನ್ನೇ ಬದಲಾಯಿಸಿದ್ದೆವು ಧನ್ಯವಾದ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸೂಪರ್ ಚೇತನ್, ಚೆನ್ನಾಗಿದೆ ನಿಮ್ಮ ಕೆರೆತದ ಕಥೆ...  ಃ-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದ ಮಂಜಣ್ಣ ತುಂಬಾ ದಿನಗಳಾದ ಮೇಲೆ ನಿಮ್ಮ ಮುಖದರ್ಶನವಾಗಿದೆ ಸಂಪದದಲ್ಲಿ, ಎಲ್ಲಿ ಹೋಗಿದ್ರಿ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಚಿಕ್ಕೂ ಹೀಗೆ ಅನ್ಯಾಯ ಮಾಡಬಹುದಾ? ಕೇವಲ ತಿಗಣೆ ಮತ್ತು ಕಂಬಳಿ ಹುಳುವನ್ನಷ್ಟೇ ನೆನೆಪಿಸಿಕೊಂಡಿದ್ದೀರಾ! ಪಾಪ ಸೊಳ್ಳೆಗಳು, ಉಂಬುಳಗಳ ಮಹಿಮೆಯನ್ನೂ ಕೊಂಡಾಡಬಾರದಿತ್ತೇ? ಹಾಸ್ಯರಸವನ್ನು ಸೂಪರ್ ಆಗಿ ಹೊರಹಾಕಿದೆ ನಿಮ್ಮ ಅನುಭವ ಕಥನ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

+1 ಶ್ರೀಧರ್ ಜಿ ಅವರ ಪ್ರತಿಕ್ರಿಯೆಗೆ.... ಚಿಕ್ಕು ಏನಪ್ಪಾ ನಿನ್ನ ಅವಸ್ಥೆ .... ಚಿಕ್ಕ ಮಕ್ಕಳ ತರಹದ ಬುದ್ಧಿ ಇನ್ನು ಹೊಗಿಲ್ಲವಲ್ಲ್ಲ.. ಮದ್ವೆ ಆಗಿದೆ ಸೀರಿಯಸ್ ಆಗಿರ್ಬೇಕಪ್ಪ... ಈಗಲೂ ಮರ ಹತ್ತೋದು ಅಂದ್ರೆ.... ! ಹೀಗೆಲ್ಲಾ ಹೇಳಿ ನಿಮ್ಮನ್ನು ಬೇಜಾರು ಮಾಡೋಲ್ಲ........!! ನಿಮ್ಮ ಅನುಭವ ಕೇಳಿ - ಪ್ಚ್... ಅನ್ನಿಸಿತು....!! ಕೆರೆದುಕೊಳ್ಳುವುದರಲ್ಲೂ ಸುಖ ಇದೆ ಅಂತ ಉಪೇಂದ್ರ ಹೇಳಿದ್ದಾರೆ....(ಅದೇ- ರಕ್ತ ಕಣ್ಣೀರು)... ಶುಭವಾಗಲಿ... ಶುಭ ಸಂಜೆ... \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

>> ಕೆರೆದುಕೊಳ್ಳುವುದರಲ್ಲೂ ಸುಖ ಇದೆ ಅಂತ ಉಪೇಂದ್ರ ಹೇಳಿದ್ದಾರೆ....(ಅದೇ- ರಕ್ತ ಕಣ್ಣೀರು).. ನಾನು ಹೇಳೋಣ ಅಂದುಕೊಳ್ಳೊದ್ರಲ್ಲಿ ನೀವು ಹೇಳಿದ್ರಿ ಇರ್ಲಿ ಬಿಡಿ ನಾನೆ ಚಿಕ್ಕುಗೆ ಪಾಪ ಮುಂಗಾರಿನ ಗಣೇಶನ ಡೈಲಾಗು ನೆನಪಿಸಿಕೊಳ್ಳ ಲು ಹೇಳ್ತೀನಿ ಅದೇನೊ ಪರ ಪರ ಕೆರಕೊಂಡೆ ಅಂತ ಹೇಳ್ತಾನಲ್ಲ ಅವನು........ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ತಿಗಣೆಗಳು ಇದ್ದಾಗ ಮನುಷ್ಯ ಸುಮ್ನಿದ್ರೂ ತಿಗಣೆಗಳು ನಮ್ಮ ದೇಹಕ್ಕೆ ಬಂದು, ರಕ್ತ ಹೀರಿ, ರಕ್ತ ಎಲ್ಲಾ ಖಾಲಿಯಾಗಿ ಬ್ಲಡ್ ಬ್ಯಾಂಕಿಗೆ ಹೋದ್ರೂ ಡಾಕ್ಟರುಗಳು ಬ್ಲಡ್ ಹಾಕಲ್ಲ ಅಂತಾರೆ ಅಂತಾದ್ರಲ್ಲಿ ಈ ಸೀಟ್ ಕೆ ಎಸ್ಸಾರ್ಟಿಸಿ ಸೀಟ್ ಅಂತಾರಲ್ಲ ಅದನ್ನ ಪರ ಪರ ಅಂತ ಕೆರೆದುಬಿಟ್ಟಿದೀನ್ರೀ, ನಮ್ ಉಗುರೇ ಹಾಳಾಗಿ ಹೋಯ್ತು. ಬಿಟ್ಬಿಟ್ಟೆ ಕಣ್ರೀ, ಕೆರೆಯೋದು ಬಿಟ್ಬಿಟ್ಟೆ!! ಧನ್ಯವಾದ ಪಾರ್ಥವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸಗಿಯವ್ರೆ ಹುಡುಗಾಟ ಇರ್ಬೇಕು ಕಣ್ರೀ, ನಮ್ಮ ಖುಷಿ ನಮಗೆ. ಬೇರೆಯವರು ಏನು ಅಂದ್ಕೋತಾರೆ ಅಂತ ನಮ್ಮ ಖುಷಿಯನ್ನ ಯಾಕೆ ಹಾಳುಮಾಡ್ಬೇಕು ಆದರೆ ಅದರಿಂದ ಯಾರಿಗೂ ತೊಂದರೆ ಆಗಬಾರದು ಅಷ್ಟೇ!! ಅದ್ಕೆ ಉಪೇಂದ್ರ ಬಗ್ಗೆ ಹಾಕಿರೋದು!! ಧನ್ಯವಾದ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶ್ರೀಧರವ್ರೆ, ೨ ಕ್ರಿಮಿಗಳು ಸಾಕು ಇನ್ನು ಅವುಗಳನ್ನೂ ನೆನೆಸಿಕೊಂಡಿದ್ರೆ ಇಲ್ಲಿ ಬರೆಯೋಕೆ ಆಗ್ತಿರ್ಲಿಲ್ವೇನೋ!!! ಉಂಬುಳಗಳ ಕಥೆ ಬೇಜಾನ್ ಇದೆ, ನಾವು ಚಾರಣ ಮಾಡಿದ ಕಡೆಗಳೆಲ್ಲಾ ಅವುಗಳದ್ದೇ ಸಾಮ್ರಾಜ್ಯ. ಬಾರೀ ಅನುಭವಿಸಿ ಬಿಟ್ಟಿದೀವಿ ಬಿಡಿ!! ಧನ್ಯವಾದ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಚಿಕ್ಕು, >>ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ರಾಜಹಂಸದ ಜೊತೆಗೆ ಕೊಟ್ಟ "ಉಚಿತ" ಉಡುಗೊರೆಯಿಂದ ರಾತ್ರಿ ಪೂರ್ತಿ ನಿದ್ರೆ ಎಕ್ಕುಟ್ಟಿ ಹೋಗಿತ್ತು. -ಊರಿಂದ ಬರುವಾಗ ತಿಗಣೆಗೆ ಎಂದು ೫೦ ರೂ ಎಕ್ಸ್‌ಟ್ರಾ ಬಸ್ ಫೇರ್ ತೆಗೆದುಕೊಳ್ಳುವರು. :) ಕೆರೆತದ..... ಸೂಪರ್. :) ಮರ-ಗಿಡ ಹೂ ಹಣ್ಣು ಹಾವು ಯಾವುದರ ಚಿತ್ರವೂ ಹಾಕಿಲ್ಲ ಯಾಕೆ? ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯ ಚೇತನ್ ರವರೆ, ನಿಮ್ಮ ಪ್ರಯಾಸದ ಕಥನ ಓದುತ್ತ ಸಾಗಿತ್ತಿದ್ದಂತೆ ನಂಗೂ ಯಾಕೋ ಎಲ್ಲೆಲ್ಲೋ ಕೆರದುಕೊಳ್ಳುವ ಹಾಗೆ..........................! ಉತ್ತಮ ನಿರೂಪಣೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹಾಗಾದ್ರೆ ಕೆರೆತ ನಿಮಗೆ ತಲುಪಿದೆ ಅಂದ ಹಾಗಾಯ್ತು!! ಧನ್ಯವಾದ ಪ್ರಕಾಶವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹ್ಹ ಹ್ಹ ಹ್ಹ ನಿಜ ಗಣೇಶಣ್ಣ. ಕೆರೆತವೇ ಜಾಸ್ತಿಯಾಗಿದ್ದರಿಂದ ಅವನ್ನು ಹಾಕಲು ಸಾಧ್ಯವಾಗಲಿಲ್ಲ!! ಧನ್ಯವಾದ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

+1
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದ ಪ್ರೇಮಾವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಉತ್ತಮವಾದ ಬರಹ. ಪದಗಳನ್ನು ಚೆನ್ನಾಗಿ ಹೆಣೆದಿದ್ದೀರ! ತಿಗಣೆಗಳಿಂದ ನಿಮಗೆ ಮುಕ್ತಿ ದೊರಕಲಿ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

:) :) :) ಮೆಚ್ಚುಗೆಗೆ ಧನ್ಯವಾದ ನಂದಕುಮಾರವ್ರೆ ಮುಕ್ತಿ ಅಂದೇ ಸಿಕ್ಕಿತು!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.