ಕೊಡವರ ಆಯುಧ ಪೂಜೆ, ಕೈಲ್‌ಪೊಳ್ದ್

4

ಸೆಪ್ಟೆಂಬರ್ ತಿಂಗಳು ಸಮೀಪಿಸಿದಂತೆ ಕೊಡಗಿನಲ್ಲಿ ಹಾಗೂ ಕೊಡಗಿನ ಹೊರಗಿರುವ ಕೊಡವರಲ್ಲಿ ತಮ್ಮ ಕ್ಷಾತ್ರಧರ್ಮದ ಕೈಲ್‌ಪೊಳ್ದ್ ಹಬ್ಬವನ್ನು ಆಚರಿಸುವ ಸಂಭ್ರಮ ಮೂಡಲಾರಂಭಿಸುತ್ತದೆ. ಸುಮಾರು ಎರಡು ತಿಂಗಳವರೆಗೆ ಭತ್ತದ ವ್ಯವಸಾಯದಲ್ಲಿ ನಿರತರಾಗಿದ್ದು, ಎಲ್ಲಾ ವಿಧದ ಹಬ್ಬ, ಉತ್ಸವಗಳಿಂದ ದೂರವಾಗಿದ್ದವರಿಗೆ ಪೂಜೆ, ಆಟೋಟಗಳ ಸ್ಪರ್ಧೆ, ಭಕ್ಷ್ಯ-ಭೋಜನಗಳಲ್ಲಿ ಒಂದಾಗುವ ಹಬ್ಬವನ್ನು ಎದುರು ನೋಡುತ್ತಿರುತ್ತಾರೆ. ಯುಗಾದಿಯಿಂದಲೇ ಆರಂಭವಾದ ಮಳೆ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಮುಸಲಧಾರೆಯಾಗಿ ಬೀಳುತ್ತಿರುತ್ತದೆ. ಈ ತಿಂಗಳುಗಳಲ್ಲಿ ದಟ್ಟ ಮೋಡಗಳನ್ನು ಸರಿಸಿ ಸೂರ್ಯನೇನಾದರೂ ಒಂದು ವೇಳೆ ಇಣುಕಿದರೆ ಸಾಕು, ಜನರೆಲ್ಲಾ "ಮಳೆಗಾಲದಲ್ಲಿ ಬಿಸಿಲೇ?" ಎಂದು ಗಾಬರಿಯಾಗುತ್ತಾರೆ. ಆಗಸ್ಟ್ ಕೊನೆಗೊಳ್ಳುತ್ತಿರುವಂತೆಯೇ ದಿನನಿತ್ಯವೆಂಬಂತೆ ಅವಿರತವಾಗಿ ಗದ್ದೆಗಳನ್ನು ಉತ್ತು, ಬಿತ್ತಿ, ನಾಟಿ ನೆಟ್ಟು, ಮಳೆಯ ಆರ್ಭಟಕ್ಕೆ ಹೊಳೆ, ತೋಡುಗಳು ಒಡೆದು ಹೋಗದಂತೆ ಎಚ್ಚರಿಕೆಯಿಂದಿದ್ದು, ದುಡಿದವರಿಗೆ ಕೈಲ್‌ಪೊಳ್ದ್ ಶ್ರಮಪರಿಹಾರಕ್ಕೆ ಯೋಗ್ಯ ಹಬ್ಬವಾಗಿ ಬರುತ್ತದೆ.

 
ಕೈಲ್‌ಪೊಳ್ದ್ ಎನ್ನುವದು ಕೊಡವರು ಮತ್ತು ಕೊಡಗಿನ ಹಲಕೆಲವು ಜನಾಂಗಗಳು ಆಚರಿಸುವ ಆಯುಧಪೂಜೆ. ಇದಕ್ಕೆ ಮೊದಲು ಕೈದುಪೊಳ್ದ್ ಎನ್ನುತ್ತಿದ್ದದೂ ಇದೆ. ಕೈದು ಎಂದರೆ ಆಯುಧ ಎಂದರ್ಥ. ಪೊಳ್ದ್ ಎಂದರೆ ಹಳೆಗನ್ನಡದ ಪೊಳ್ತು, ಹೊಸಗನ್ನಡದ ಹೊತ್ತು ಎಂದರ್ಥ. ಇದಕ್ಕೆ ಸಮಯ, ಮುಹೂರ್ತ ಎಂಬ ಅರ್ಥಗಳೂ ಇವೆ. ಈ ಕಾರಣದಿಂದ ಈ ಹಬ್ಬಕ್ಕೆ ಕೈಲ್ ಮುಹೂರ್ತ ಎನ್ನುವ ಹೆಸರೂ ಇದೆ.


 
ಹಬ್ಬದ ಮೂಲೇತಿಹಾಸ
ಕೊಡವರು ಮೂಲತಃ ಕುರು ವಂಶದವರು; ಕುರುಕ್ಷೇತ್ರ ಯುದ್ಧದ ನಂತರ ಚದುರಲಾರಭಿಸಿದ ಆ ಜನರಲ್ಲಿ ಕೆಲವರು ಈಗ ಕೊಡಗು ಎಂದು ಕರೆಯಲ್ಪಡುವ ಪ್ರದೇಶದಲ್ಲಿ ನೆಲೆನಿಂತರು ಎನ್ನುವ ಒಂದು ಸಿದ್ಧಾಂತವಿದೆ. ಕುರುಗಳು ಎಂಬುದು ಕುಡುವರು ಎಂದಾಗಿ, ಅವರಿರುವ ಬೆಟ್ಟಗುಡ್ಡಗಳ ಪ್ರದೇಶ ಕುಡುಮಲೆಯಾಗಿ, ಕೊಡಗು ಎಂದಾಯಿತೆಂದು ಅಭಿಪ್ರಾಯ. ಅವರ ಜಾನಪದ ಗೀತೆಗಳಲ್ಲಿ ಹನ್ನೆರಡು ವರ್ಷಗಳ ವನವಾಸದ ಬಳಿಕ ಪಾಂಡವರು ತಮ್ಮ ಅಜ್ಞಾತವಾಸದಲ್ಲಿ ಆಯುಧಗಳನ್ನು ಬಚ್ಚಿಟ್ಟು, ಅಜ್ಞಾತವಾಸದ ಕಳೆದ ಮೇಲೆ ಅವುಗಳನ್ನು ತೆಗೆದು ಪೂಜಿಸಿ, ಯುಧಿಷ್ಠಿರನಿಂದ ಇತರ ಸೋದರರು ಪಡೆದು ಗೋಗ್ರಹಣ ಯುದ್ಧಕ್ಕೆ ಹೋದ ಉಲ್ಲೇಖವಿದೆ. ಅಂತೆಯೇ, ವರ್ಷಕ್ಕೊಮ್ಮೆ ಆರಂಬ ಕಳೆದ ನಂತರ ಕೈಲ್ ಪೊಳ್ದ್ ಕಟ್ಟ್ (ಕೈಲ್ ಪೊಳ್ದ್ ಕಟ್ಟಳೆ) ಪ್ರಕಾರ, ಕರ್ಕಾಟಕ ಮಾಸಾದಿಯಲ್ಲಿ ತೆಗೆದಿರಿಸಿಟ್ಟಿದ್ದ ಆಯುಧಗಳನ್ನು ಪೂಜಿಸಿ ಬಳಸುವದನ್ನು ಪಾಂಡವರ ವಂಶಸ್ಥರಾದ್ದರಿಂದ ಕೊಡವರು ಅನುಸರಿಸುತ್ತಿದ್ದಾರೆಂದು ಹೇಳಲಾಗಿದೆ.
 
ಪ್ರತಿ ವರ್ಷವೂ ಸೆಪ್ಟೆಂಬರ್ ತಿಂಗಳ ೩ನೇ ದಿನಾಂಕಕ್ಕೆ ಸರಿಯಾಗುವ ಸೌರಮಾನದ ಸಿಂಹ ತಿಂಗಳ ೧೮ರಂದು ಈ ಹಬ್ಬವನ್ನು ಆಚರಿಸುತ್ತಾರೆ. ಆದರೆ ಕೊಡಗಿನ ನಾಲ್ಕುನಾಡು, ಮುತ್ತುನಾಡ್ (ನಾಪೋಕ್ಲು,ಗಾಳಿಬೀಡು) ಮುಂತಾದ ಕಡೆಗಳಲ್ಲಿ ಆಗಸ್ಟ್ ಕೊನೆಯ ವಾರದಲ್ಲಿ ಆಚರಿಸುತ್ತಾರೆ. ಶತಮಾನಕ್ಕೂ ಹಿಂದೆ ಕೊಡವರು ತಮ್ಮ-ತಮ್ಮ ದೇವಸ್ಥಾನಗಳಲ್ಲಿ ಊರ್ ತಕ್ಕ(ಊರಿನ ಮುಖ್ಯಸ್ಥ)ನ ನೇತೃತ್ವದಲ್ಲಿ ಸೇರಿ ಕಣಿಯ ಅಥವಾ ಆ ದೇವಸ್ಥಾನದ ಅರ್ಚಕನನ್ನು ಕಂಡು ಅವನಿಂದ ಪೂಜೆಯ ಮುಹೂರ್ತ, ನಂತರದಲ್ಲಿ ಬೇಟೆಯಾಡಬೇಕಾದ ದಿಕ್ಕು, ಯಾವ ನಕ್ಷತ್ರದಲ್ಲಿ ಹುಟ್ಟಿದವನಿಗೆ ಬೇಟೆ ಫಲಿಸುತ್ತದೆ, ಇತ್ಯಾದಿ ವಿಷಯಗಳೂ ನಿಗದಿತಪಡಿಸಿಕೊಳುತ್ತಿದ್ದರು.
 
ಆಚರಣೆ
ವಿಷು ಸಂಕ್ರಮಣ (ಬಿಸುಸಂಕ್ರಮಣ)ದಂದು ಮೊದಲು ನೇಗಿಲು ಕಟ್ಟಿದರೆ, ಸೌರಮಾನದ ಕರ್ಕಾಟಕ ತಿಂಗಳಿನಲ್ಲಿ ಉಳುವ ಮತ್ತು ನಾಟಿಯ ಕೆಲಸಗಳು ಬಿರುಸಾಗುವವು. ಆ ಕಾರಣ, ಕರ್ಕಾಟಕ ತಿಂಗಳ ಮೊದಲ ದಿನದಿಂದ, ಅಂದರೆ ಜುಲೈ ಮಧ್ಯದಿಂದ ಆಯುಧಗಳನ್ನೆಲ್ಲಾ ತೆಗೆದಿರಿಸಿ ಬೇಟೆಯಾಡುವದನ್ನು ಪೂರ್ಣವಾಗಿ ನಿಲ್ಲಿಸಿಬಿಡಬೇಕು. ಕೋವಿ, ಕತ್ತಿ, ಒಡಿಕತ್ತಿ, ಪೀಚೆಕತ್ತಿ, ಮುಂತಾದ ಆಯುಧಗಳನ್ನೆಲ್ಲ ಅವರು ತಮ್ಮ ಮನೆಯ ಕನ್ನಿ ಕೋಂಬರೆ ಎಂದು ಕರೆಯಲ್ಪಡುವ ದೇವರ ಕೋಣೆಯಲ್ಲಿಟ್ಟುಬಿಡುವರು. ಹೀಗೆ ಆಯುಧಗಳನ್ನಿಡುವಾಗ ಕೆಲವು ನೇಮ-ಪದ್ಧತಿಗಳನ್ನು ಅನುಸರಿಸುವರು. ಇವುಗಳಿಗೆ ಕೈಲ್‌ ಪೊಳ್ದ್  ಕಟ್ಟ್ (ಕೈಲ್ ಮುಹೂರ್ತದ ಕಟ್ಟಳೆ) ಎನ್ನುವರು. ಇದರ ಪ್ರಕಾರ ಎಂತಹದ್ದೇ ಸಾಮಾನ್ಯ ಸಂದರ್ಭದಲ್ಲೂ ಈ ಆಯುಧಗಳನ್ನು ಮುಟ್ಟುವಂತಿಲ್ಲ. ಹಾಗೇನಾದರೂ ಅನಿವಾರ್ಯತೆಯುಂಟಾದರೆ, ಅಂದರೆ ಯಾರಾದರೂ ತೀರಿಕೊಂಡಿದ್ದು, ಪದ್ಧತಿಯಂತೆ ಕೋವಿಯಿಂದ ಜೋಡಿಗುಂಡು ಹೊಡೆಯಬೇಕಾದರೆ, ಅಥವಾ ಇನ್ನಿತರ ಸಮಯ ಬಂದರೆ, ಅದಕ್ಕೆ ತಕ್ಕ ಕಟ್ಟುಪಾಡುಗಳನ್ನು ಅನುಸರಿಸಿ ನಡೆದುಕೊಳ್ಳಬೇಕು.
 
ಸಿಂಹಮಾಸದ ಹದಿನೇಳರೊಳಗೆ ಎಲ್ಲರೂ ತಮ್ಮ ಗದ್ದೆಗಳಲ್ಲಿ ನಾಟಿ ಕೆಲಸವನ್ನು ಮುಗಿಸಲೇಬೇಕು. ಒಂದು ವೇಳೆ ಯಾರದಾದರೂ ಲಸ ಮುಗಿಯುವಂತೆ ತೋರುತ್ತಿಲ್ಲವೆಂದು ಈ ದಿನಕ್ಕೆ ಎರಡು-ಮೂರು ದಿನ ಮುಂಚಿತವಾಗಿ ಊರವರ ಗಮನಕ್ಕೆ ಬಂದರೆ, ಅವರು ಮನೆಗೊಬ್ಬರಂತೆ ಮುಯ್ಯಾಳಾಗಿ ಹೋಗಿ ಕೆಲಸವನ್ನು ಮುಗಿಸುವರು. ಮುಯ್ಯಾಳು ಎಂದರೆ ಒಂದು ಕೆಲಸಕ್ಕೆ ಸಹಾಯಕನಾಗಿ ಬಂದವನಿಗೆ ಪ್ರತಿಯಾಗಿ ಹೋಗುವವನು.
 
ಹದಿನೆಂಟನೇ ದಿನದಂದು ಈ ಮೊದಲು ತೆಗೆದಿರಿಸಿದ ಆಯುಧಗಳನ್ನು ನೇಮಾನುಸಾರ ಧಾರಣಮಾಡಬೇಕು. ಸ್ನಾನಾದಿ ಕೆಲಸಗಳ ನಂತರ ಕನ್ನಿಕೋಂಬರೆಯಲ್ಲಿಟ್ಟಿರುವ ಕೈದುಗಳನ್ನು ಹೊರದೆಗೆದು ಸ್ವಚ್ಛಗೊಳಿಸಿ, ಕನ್ನಿಕೋಂಬರೆಯಲ್ಲಿ ತಾಳೆಯೋಲೆಯ ಚಾಪೆಯ ಮೇಲೆ ಪೂರ್ವಕ್ಕೆ ಅಭಿಮುಖವಾಗಿ ಓರಣವಾಗಿ ಇರಿಸುವರು. ನೆಲ್ಲಕ್ಕಿ ನಡುಬಾಡೆ ಎಂದು ಕರೆಯಲ್ಪಡುವ ಮನೆಯ ನಡುಹಜಾರದಲ್ಲಿಯೂ ಇವುಗಳನ್ನಿಡಬಹುದು. ಅಲ್ಲಿರುವ ತೂಗುದೀಪವನ್ನು ಹಚ್ಚುವರು. ಆಯುಧಗಳನ್ನು ವಿವಿಧ ಹೂವುಗಳಿಂದ ಸಿಂಗರಿಸುವರು. ವಿಶೇಷವಾಗಿ ಕೋವಿಯನ್ನು ತೋಕ್ ಪೂ (ಕೋವಿಹೂ)ಗಳಿಂದ ಅಲಂಕರಿಸುವರು. ಈ ಹೂವಿಗೆ ಕನ್ನಡದಲ್ಲಿ ಗೌರಿ ಹೂ ಎನ್ನುವರು. ಇದು ಆರ್ಕಿಡ್ ಜಾತಿಗೆ ಸೇರಿದ್ದು ಆಂಗ್ಲದಲ್ಲಿ ಗ್ಲೋರಿಯೊಸ ಎನ್ನುವ ಹೆಸರಿದೆ. ಮನೆಯವರೆಲ್ಲರೂ ಸೇರಿದ ಮೇಲೆ ಮನೆಯ ಯಜಮಾನನು ಆಯುಧಗಳ ಮೇಲೆ ಚಂದನದ ಬೊಟ್ಟುಗಳನ್ನಿಟ್ಟು, ಅವುಗಳನ್ನು ಧೂಪ, ದೀಪಾದಿಗಳಿಂದ ಪೂಜಿಸುವನು. ಒಂದು ತುದಿಬಾಳೆಯೆಲೆಯಲ್ಲಿ ಮಾಡಿದ ವಿಶೇಷ ಅಡಿಗೆಯನ್ನೆಲ್ಲಾ ಸ್ವಲ್ಪ-ಸ್ವಲ್ಪ ಹಾಕಿ, ಅದನ್ನು ಆಯುಧಗಳ ಪಕ್ಕದಲ್ಲಿಡುವರು. (ಇದು ತಾವು ಪೂಜಿಸುವ, ಕಾರಣರೆಂದು ಕರೆಯಲ್ಪಡುವ, ಗತಿಸಿದ ತಮ್ಮ ಪೂರ್ವಜರಿಗೆ ಇಡುವ ನೈವೇದ್ಯ.) ಎಲ್ಲರೂ ತೂಗುದೀಪವನ್ನೂ, ಆಯುಧಗಳನ್ನೂ ಕೈಗಳಿಂದ ಮುಟ್ಟಿ ನಮಸ್ಕರಿಸುವರು. ಕಿರಿಯರು ಹಿರಿಯರ ಕಾಲ್ಮುಟ್ಟಿ  ನಮಸ್ಕರಿಸುವರು.
 
ಆಮೇಲೆ ಸಂಭ್ರಮದ ಔತಣದೂಟ. ಎಲ್ಲರೂ ಉಂಡು ಮುಗಿಸಿದ ನಂತರ ಸುಮಾರು ಮೂರು ಗಂಟೆಯ ವೇಳೆಗೆ ಮನೆಯ ಗಂಡಸರೆಲ್ಲರೂ ಆಯುಧಗಳ ಬಳಿ ನಿಲ್ಲುವರು. ಮನೆಯ ಕೊರವುಕಾರ (ಯಜಮಾನ)ನು ಒಂದು ಕೋವಿಯನ್ನು ಕೈಯಲ್ಲೆತ್ತಿಕೊಂಡು, "ಹುಲಿ ಮತ್ತು ಕಾಡುಹಂದಿಗಳು ಓಡಾಡುವ ದಾರಿಗೆ ಅಡ್ಡನಿಲ್ಲದೆ ಎದುರಿಸು; ಶತ್ರುವನ್ನು ಕೆಣಕದಿರು; ಶತ್ರುವನ್ನು ಎದುರಿಸುವ ಸಂದರ್ಭ ಬಂದರೆ ಅವನ ದಾರಿ ತಡೆದು ಹೋರಾಡು; ಮಿತ್ರನ ಸಹಾಯಕ್ಕೆ ನಿಲ್ಲು;  ರಾಜನ ಮೇಲೆ ಮುನಿಯಬೇಡ; ದೇವರನ್ನು ಮರೆಯಬೇಡ," ಎಂದು ಹೇಳಿ, ನೆರೆದವರಲ್ಲಿ ತನ್ನ ಬಳಿಕದ ಹಿರಿಯನೆದುರು ಆ ಕೋವಿಯನ್ನು ಹಿಡಿಯುವನು. ಅವನು ಯಜಮಾನನ ಕಾಲ್ಮುಟ್ಟಿ ನಮಸ್ಕರಿಸಿ ಆ ಕೋವಿಯನ್ನು ತೆಗೆದುಕೊಳ್ಳುವನು. ಹೀಗೆಯೇ ಎಲ್ಲಾ ಆಯುಧಗಳನ್ನೂ ಉಳಿದ ಗಂಡಸರು ಪಡೆಯುವರು.
 
ನಂತರ ಗಂಡಸರೆಲ್ಲರೂ ಊರ ಅಂಬಲ(ಊರವರು ಸಭೆ ಸೇರುವ ಸ್ಥಳ)ಕ್ಕೆ ಇಲ್ಲವೇ ಮಂದ್(ಮೈದಾನ)ಗೆ ಹೋಗುವರು. ಅಲ್ಲಿ ಇತರ ಮನೆಗಳಿಂದ ಬಂದ ಪುರುಷರೊಡಗೂಡಿ ಎಲ್ಲರೂ ಊರ್ ತಕ್ಕನ ನೇತೃತ್ವದಲ್ಲಿ ಊರಿನ ದೇವಸ್ಥಾನಕ್ಕೆ ಹೋಗುವರು. ದೇವಸ್ಥಾನದ ಅರ್ಚಕನು ಗ್ರಾಮದೇವತೆ ಹಾಗೂ ಗ್ರಾಮದ ದೇವರಕಾಡಿನ ಬೇಟೆದೇವರಾದ ಅಯ್ಯಪ್ಪನ ಪೂಜೆಮಾಡಿ ಎಲ್ಲರಿಗೂ ತೀರ್ಥ-ಪ್ರಸಾದವನ್ನೀಯುವನು. ಅಂದು ಬೆಳಿಗ್ಗೆ ಕೆಲವು ತರುಣರು ಅಲ್ಲೇ ಹತ್ತಿರದ ಒಂದೆಡೆ ಒಂದು ಎತ್ತರದ ಮರದಲ್ಲಿ ಎತ್ತರಕ್ಕೆ ಬೆಳೆದು ನಿಂತ ಕೊಂಬೆಗೆ ತೆಂಗಿನಕಾಯಿಗಳನ್ನು ಕಟ್ಟಿರುತ್ತಾರೆ. ಆ ಮರದ ಬುಡಕ್ಕೆ ಎಲ್ಲರೂ ಹೋಗುವರು. ಊರಿನ ತಕ್ಕನು ಮೊದಲು ಒಂದು ತೆಂಗಿನಕಾಯಿಯ ಈಡಿಗೆ ಗುಂಡುಹೊಡೆಯುವನು. ಬಳಿಕ ಒಬ್ಬೊಬ್ಬರಾಗಿ ಗುಂಡುಹೊಡೆಯುವರು. ಗುಂಡುಹೊಡೆದು ಕಾಯನ್ನು ಉರುಳಿಸಿದವರಿಗೆ ಸ್ವಲ್ಪ ಹಣವನ್ನು ಸಾಂಕೇತಿಕ ಬಹುಮಾನವನ್ನಾಗಿ ಕೊಡುವರು. ಆನಂತರ ಊರಿನ ಮಂದಿನಲ್ಲಿ ಓಟ, ಜಿಗಿತ, ಭಾರದ ಕಲ್ಲೆತ್ತುವದು, ಎತ್ತಿ ತಲೆಯ ಮೇಲ್ಗಡೆಯಿಂದ ಹಿಂದಕ್ಕೆಸೆಯುವದು, ಮೊದಲಾದ ಕ್ರೀಡಾಸ್ಪರ್ಧೆಗಳು ನಡೆಯುವವು.  ಕೆಲವು ಊರುಗಳಲ್ಲಿ ಬಾಳೆ ಬಿರುದಿನ ಸ್ಪರ್ಧೆಯೂ ಇರುತ್ತದೆ. ಇದರಲ್ಲಿ ಗೂಟದ ಸಹಾಯದಿಂದ ನೆಲದಲ್ಲಿ ಒಂದು ಮೀಟರಿನಷ್ಟು ಎತ್ತರದ ಹಲವಾರು ಬಾಳೆಯ ದಿಂಡುಗಳನ್ನು ನಿಲ್ಲಿಸಿರುತ್ತಾರೆ. ಸ್ಪರ್ಧಿಯು ಮೂರು ದಿಂಡುಗಳನ್ನು ಒಂದರ ಬಳಿಕ ಒಂದನ್ನು ಒಂದೇ ಏಟಿಗೆ ಒಡಿಕತ್ತಿಯಲ್ಲಿ ಕತ್ತರಿಸಬೇಕು.
 
ಬೇಟೆಯಾಡುವದನ್ನು ನಿಷಿದ್ಧಗೊಳಿಸುವ ಮುನ್ನಾ ದಿನಗಳಲ್ಲಿ ಕೈಲ್ ಪೊಳ್ದ್ ಹಬ್ಬದ ಮರು ದಿನ ಊರಿನ ಕೊಡವರು ಸಾಮೂಹಿಕ ಬೇಟೆಗೆ ಹೋಗುತ್ತಿದ್ದರು. ಇದಕ್ಕೆ ಊರಬೇಟೆ ಎನ್ನುವರು. ಜ್ಯೋತಿಷ್ಯದ ಮೂಲಕ ನಿಶ್ಚಯವಾದ ದಿನದಂದು ಬೇಟೆಗಾರರು ಊರ ಅಂಬಲದಲ್ಲಿ ಕೋವಿ, ಕತ್ತಿ, ಮೊದಲಾದ ಆಯುಧಗಳೊಡನೆಯೂ, ನಾಯಿಗಳೊಂದಿಗೂ ಸೇರುತ್ತಿದ್ದರು. ಎಲ್ಲರೂ ಕಾಡಿಗೆ ತೆರಳಿ ಒಂದು ನಿರ್ದಿಷ್ಟ ರೀತಿಯಲ್ಲಿ ಬೇಟೆಯಾಡುತ್ತಿದ್ದರು. ದೊರೆತ ಬೇಟೆಯನ್ನು ಎಲ್ಲರೂ ಹಂಚಿಕೊಂಡು ಮನೆಗೆ ತೆರಳುವರು. ಗುಂಡುಹೊಡೆದವನಿಗೆ, ಬಿದ್ದ ಪ್ರಾಣಿಯನ್ನು ಮೊದಲು ಮುಟ್ಟಿದವನಿಗೆ ವಿಶೇಷ ಪಾಲಿರುತಿತ್ತು. ಬೇಟೆನಾಯಿಗಳಿಗೂ ಪಾಲು ಕೊಡುತ್ತಿದ್ದರು. ಊರಬೇಟೆಯ ಮಾರಣೆಯ ದಿನ ನಾಡುಬೇಟೆಯಿರುತಿತ್ತು. ಇದರಲ್ಲಿ ಆಯಾಯ ನಾಡಿಗೆ ಸೇರಿದ ಅನೇಕ ಊರುಗಳ ಬೇಟೆಗಾರರು ಸೇರಿ ಒಟ್ಟಾಗಿ ಬೇಟೆಯಾಡುತ್ತಿದ್ದರು.
 
ಹೆಚ್ಚಿನ ಕುತೂಹಲಕ್ಕೆ

ಕೈಲ್ ಪೊಳ್ದ್ ಹಬ್ಬದ ಬಗ್ಗೆ ಹೆಚ್ಚಿನ ವಿವರಗಳಿಗೆ ಕೀರ್ತಿಶೇಷ ನಡಿಕೇರಿಯಂಡ ಚಿಣ್ಣಪ್ಪನವರು ಸಂಪಾದಿಸಿದ್ದು, ಮೈಸೂರಿನ ಕನ್ನಡ ಅಧ್ಯಯನ ಸಂಸ್ಥೆ ಪ್ರಕಟಿಸಿರುವ "ಪಟ್ಟೋಲೆ ಪಳಮೆ" ಪುಸ್ತಕವನ್ನು ನೋಡಬಹುದು. ಕೀರ್ತಿಶೇಷ ಶ್ರೀ ಬಿ ಡಿ ಗಣಪತಿಯವರು ಬರೆದಿರುವ "ಕೊಡಗು ಮತ್ತು ಕೊಡವರು" ಪುಸ್ತಕವೂ ಅವರೇ ಆಂಗ್ಲದಲ್ಲಿ ಬರೆದ "Kodavas" ಪುಸ್ತಕವೂ ಸಹಾಯಕ. ಕೊಡವರು ಕುರುವಂಶಸ್ಥರು ಎನ್ನುವ ಪ್ರತಿಪಾದನೆಯನ್ನು ಮೈಸೂರಿನ ಪ್ರಸಾರಾಂಗವು ಪ್ರಕಟಿಸಿರುವ ಡಾಪಿಎಸ್ರಾಮಾನುಜಂ IPS ರವರು ಬರೆದಿರುವ "ಕೊಡವರು" ಪುಸ್ತಕದಲ್ಲಿ ನೋಡಬಹುದು. ಈ ಕುರಿತ ಜಾನಪದ ಹಾಡುಗಳು ಪೇರಿಯಂಡ ಚಂಗಪ್ಪನವರು ಬರೆದ "ಕೊಡವರ ಮೂಲ ಪದ್ಧತಿಗಳು" ಎಂಬ ಪುಸ್ತಕದಲ್ಲಿವೆ. ಕೊಡವರ ಹಳೆಯ ಕಾಲದ ಬೇಟೆಗಳನ್ನು ಕುರಿತು ಕನ್ನಡ ಪುಸ್ತಕ ಪ್ರಾಧಿಕಾರವು ಪ್ರಕಟಿಸಿರುವ "ಗ್ರಾಮೀಣ ಬೇಟೆಗಳು" ಎಂಬ ಸಂಕಲನದಲ್ಲಿ ಓದಬಹುದು. ಅವರ ಆಯುಧಗಳಾದ ಒಡಿಕತ್ತಿ, ಪೀಚೆಕತ್ತಿ, ಇತ್ಯಾದಿಗಳ ಬಗ್ಗೆ ಕನ್ನಡ ಪುಸ್ತಕ ಪ್ರಾಧಿಕಾರವು ಪ್ರಕಟಿಸಿರುವ "ಗ್ರಾಮೀಣ ಉಡುಗೆ ತೊಡುಗೆಗಳು" ಎಂಬ ಸಂಕಲನದಲ್ಲಿ ‘ಕೊಡವರ ಉಡುಪುಗಳು’ಎಂಬ ಲೇಖನದಲ್ಲಿ ತಿಳಿಯಬಹುದು. ಇಂಟರ್ ನೆಟ್‌ನಲ್ಲಿ kn.wikipedia.org, ಮತ್ತಿತರ ಸೈಟ್‌ಗಳನ್ನು ನೋಡಬಹುದು.
 
 

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಪ್ರಭುಕುಮಾರ್ ಅವರೆ, ಕೊಡವರ ಕೈಲ್ ಹಬ್ಬದ ಕುರಿತಾಗಿ ಸಂಕ್ಷಿಪ್ತವಾಗಿ ಎಲ್ಲಾ ವಿಷಯಗಳನ್ನೂ ತಿಳಿಸಿಕೊಟ್ಟಿದ್ದೀರ ಮತ್ತು ಕೊಡವರ ವಿಷಯವಾಗಿ ಸಾಕಷ್ಟು ಮಾಹಿತಿಯನ್ನು ಒದಗಿಸಿದ್ದೀರ. ಜೊತೆಗೆ ಸೂಕ್ತ ಆಕರ ಗ್ರಂಥಗಳನ್ನೂ ಉಲ್ಲೇಖಿಸಿದ್ದೀರ. ನಿಮ್ಮ ಈ ಕಾರ್ಯ ನಿಜಕ್ಕೂ ಶ್ಲಾಘನೀಯ. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪ್ರಿಯ ಶ್ರೀಧರ್ ಅವರೆ, ನಿಮ್ಮ ಮೆಚ್ಚುಗೆಗೆ ಎದೆಯಾಳದ ಧನ್ಯವಾದಗಳು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.