ಗುಲಗಂಜಿ
ಇಂದು ಸಂಜೆ ಲೈಬ್ರರಿಯಿಂದ ಮನೆಯತ್ತ ನಡೆದಂತೆ ಥಟ್ಟನೆ ಕವಿಯಿತು ಕಾರ್ಮೋಡ, ಗುಡುಗು ಜೊತೆ ಹನಿಗಳು ಟಪಟಪನೆ ತಲೆಯ ಮೇಲೆ ಬೀಳಲು ಶುರುವಾಯಿತು. ಎದುರಿಗೆ ಕಂಡ ಮರದತ್ತ ಓಡಿದೆ. ಕೆಳಗೆ ಕಂಡದ್ದು ಗುಲಗಂಜಿ. ವಾಹ್, ಎಂದು ಮಳೆಯನ್ನೋ ಲೆಕ್ಕಿಸದೆ ಗುಲಗಂಜಿ ಆರಿಸಲು ತೊಡಗಿದೆ. ನನ್ನಂತೆಯೇ ಮರದಾಸರೆಗೆ ಬಂದ ಈರ್ವರು ಬೀಜಗಳನ್ನು ಆರಿಸುತ್ತಿದ್ದ ನನ್ನ ಕಂಡು ವಿಚಿತ್ರವಾಗಿ ನೋಡಿದರು. ಮಳೆ ಜೋರಾಯಿತು ಒಂದು ಹಿಡಿ ಗುಲಗಂಜಿಯನ್ನು ಆಯ್ದುಕೊಂಡು ಹತ್ತಿರವಿದ್ದ ಬಸ್‌ಸ್ಟಾಪಿನತ್ತ ಓಡಿದೆ.
ಕೈಯಲ್ಲಿದ್ದ ಗುಲಗಂಜಿ ಹಿತವೆನಿಸಿತ್ತು. ಕೈಯಲ್ಲಿ ಹಿಡಿದು ಎಣಿಸಿದಂತೆ ಬಾಲ್ಯದ ಅಳಗುಳಿ ಮಣೆ, ಚೌಕಾಬಾರ, ಒಗಟುಗಳ ನೆನಹು ಮನದ ಮನೆಯಲಿ ಪಟಪಟನೆ ಕುಣಿಯಿತು. ಕಾಲಘಟ್ಟದಲ್ಲಿ ಕವಡೆ, ಪಗಡೆ, ಅಳಗುಳಿ ಮಣೆ, ಚೌಕಾಬಾರ, ಗೋಲಿ, ಬುಗುರಿಗಳು ಅದೆಲ್ಲಿ ಮಾಯವಾದವೋ?
ಚಿಕ್ಕಂದಿನಲ್ಲಿ "ಅಟ್ಟದ ಮೇಲಿರೋ ಗಿಡ್ಡ ಗೋಪಾಲ, ನಿನಗ್ಯಾರಿಟ್ಟರೋ ಸಾದಿನ ಬೊಟ್ಟು"? (ಉತ್ತರ-ಗುಲಗಂಜಿ) ಎಂಬ ಈ ಒಗಟು ಅದೆಷ್ಟು ಮಂದಿಗೆ ಕೇಳಿದ್ದೆವೋ ಗೊತ್ತಿಲ್ಲ. ಉತ್ತರ ನಮಗೆ ಗೊತ್ತಿದೆ ಎಂದು ಬೀಗಿದ್ದೇ ಬೀಗಿದ್ದು.
ಮೈಸೂರಿಗೆ ಕೇವಲ 32 ಕಿಲೋ ಮೀಟರ್ ದೂರದಲ್ಲಿರುವ ತಿರುಮಕೂಡಲು ನರಸೀಪುರ ಪವಿತ್ರ ಪುಣ್ಯಕ್ಷೇತ್ರ. ನರಸಿಂಹಸ್ವಾಮಿ ನೆಲೆಸಿಹ ತಾಣವಿದಾದ್ದರಿಂದ ಇದು ತಿರುಮಕೂಡಲು ನರಸೀಪುರ ಎನಿಸಿದೆ. ಇಲ್ಲಿನ ನರಸಿಂಹ ತನ್ನ ಬಲಗೈಯಲ್ಲಿ ಗುಲಗಂಜಿ ಹಿಡಿದಿದ್ದಾನೆ ಏಕೆಂದರೆ ಭಾರತದ ಮಿಕ್ಕೆಲ್ಲ ನರಸಿಂಹರಿಗಿಂತ ಒಂದು ಗುಲಗಂಜಿ ಶ್ರೇಷ್ಠನಂತೆ ಈತ. ಅದಕ್ಕೆ ಗುಂಜಾ ನರಸಿಂಹ ಎಂದು ಹೆಸರು. ಹಂಪಿ ಮತ್ತು ಕಾಶಿ ಹೆಚ್ಚೋ ಎಂಬ ಪಾವಿತ್ರತೆಯ ತೂಕ ಮಾಡುವ ಭಾರ ಶ್ರೀಕೃಷ್ಣನ ಮೇಲೆ ಬಿತ್ತಂತೆ. ಒಮ್ಮೆ ತಕ್ಕಡಿಯಲಿ ತೂಗಿಸಿಕೊಂಡವ ತಾನೇ ಅವನು. ಹಂಪಿಯ ತೂಕ ಒಂದು ಗುಲಗಂಜಿ ಕಾಳಿನಷ್ಟು ಹೆಚ್ಚು ಬಂದಿತಂತೆ. ತೂಕ ಮಾಡಿದ ಕೃಷ್ಣನನ್ನು "ಗುಲಗಂಜಿ ಕೃಷ್ಣ" ಎಂದೂ ಹಂಪಿಯ ವಿರೂಪಾಕ್ಷ ದೇವರ ಗುಡಿಯ ಆವರಣದಲ್ಲಿ ಕೃಷ್ಣನಿಗೂ ಗುಡಿ ಕಟ್ಟಿದರಂತೆ. ಪೈಪೋಟಿ ಯಾರನ್ನು ಬಿಟ್ಟಿಲ್ಲ ನೋಡಿ! ಅಂತೆ-ಕಂತೆಗಳೇನಿದ್ದರೂ ಗುಲಗಂಜಿ ತೂಕ ಇನ್ನೂ ಹಳ್ಳಿಯಗಳಲ್ಲಿ ಬಳಕೆಯಲ್ಲಿ ಇದೆ ಎಂಬುದಂತೂ ಸತ್ಯ.
ಗುಲಗಂಜಿ ಬರೀ ಆಟಕ್ಕೊಂದೇ ಅಲ್ಲ ಹಿರಿಯರ ಮಾತಿನಲ್ಲೂ ಮನೆ ಮಾಡಿದೆ. "ಆಕಾಶಕ್ಕೆ ಆಸೆಪಟ್ಟರೆ ಗಿಟ್ಟೋದು ಗುಲಗಂಜಿ; ದಕ್ಕಿದ್ದಷ್ಟೇ ಈ ಜನುಮದಲ್ಲಿ". ಹಾಗೆಯೇ ಹಿರಿಯರ ಬಯ್ಗಳಲ್ಲೂ "ಥು ಗುಲಗುಂಜಿಯಷ್ಟೂ ಅವನಿಗೆ ಮಾನ ಇಲ್ವಲ್ಲಾ" ಎಂದೋ ಅಥವ "ಅಲ್ಲ ಒಂದು ಗುಲಗುಂಜಿಯಷ್ಟಾದರೂ ಅಭಿಮಾನ ಇರಬೇಕಲ್ವಾ" ಗುಲಗಂಜಿಯ ಬಳಕೆ ಉಂಟು.
ಗುಲಗಂಜಿ ನನಗಿಂತ ಸುಂದರಿಯರಿಲ್ಲ ಎಂದು ಬೀಗಿತಂತೆ. ಬೇರೆ ಬೀಜಗಳ ಬಣ್ಣ ನೋಡಿ ನಗುತ್ತಿದ್ದ ಗುಲಗಂಜಿ ಬೀಜಕ್ಕೆ ತನ್ನಲ್ಲೇ ಇದ್ದ ಕಪ್ಪು ತಿಳಿದಿರೋಲ್ಲ ಎಂದು ಹಳ್ಳಿಗಳಲ್ಲಿ ದುರಭಿಮಾನಿಗಳಿಗೆ, ಬೀಗುವ ಜನರಿಗೆ ಹಳ್ಳಿಗರು ಹೇಳುವ ಬುದ್ಧಿವಾದವೂ ಅಡಗಿದೆ. ರಾಣಿ ಪದ್ಮಿನಿಯ ಚೆಲುವಿಗಿಂತ ಆಕೆಯ ಬುದ್ಧಿ ಒಂದು ಗುಲಗಂಜಿ ತೂಕದಷ್ಟು ಹೆಚ್ಚು ಎಂದು ಹೇಳುತ್ತಾರೆ ಏಕೆಂದರೆ ಅವಳು ತಾನು ಕಳುಹಿಸುವ ರಾಖಿ ಕಟ್ಟಿಸಿಕೊಂಡು 'ಅಣ್ಣ'ನಾದರೆ ಮಾತ್ರ ಮುಖ ತೋರುವೆನೆಂದಳಂತೆ.
ಕನ್ನಡದಲಿ ಗುಲಗಂಜಿ, ಮಲಯಾಳಂ ಕುನ್ನಿ-ಕುರು, ಸಂಸ್ಕೃತದಲಿ ಗುಂಜ, ಹೀಗೆ ಹೆಸರಿಪ ಗುಲಗಂಜಿ ಒಂದು ವೃಕ್ಷದ, ಕಡು ಕೆಂಪಗಿನ ತುದಿಯಲಿ ಕಪ್ಪಾದ ಟೊಪ್ಪಿ ಇರುವ ಸಣ್ಣ ಬೀಜ. ಇವುಗಳನ್ನು ನಾವು ಚೌಕಾಬಾರ, ಅಳುಗುಳಿ ಮಣೆ ಆಟದಲಿ ಉಪಯೋಗಿಸುತ್ತಿದ್ದೆವು. ಗುಲಗಂಜಿಯ ಮೋಹಕ ಬಣ್ಣವುಳ್ಳದ್ದಾಗಿದ್ದು, ಇದೂ ಕೂಡಾ ಪ್ರಕೃತಿಯ ಸುಂದರ ಕೊಡುಗೆಗಳಲ್ಲಿ ಒಂದೆನ್ನಬಹುದು.
ಈ ಸಣ್ಣ ಒಂದು ಬೀಜ ಇಂದಿಗೂ ಹಳ್ಳಿಗಳಲ್ಲಿ ಅಕ್ಕಸಾಲಿಗರು ಚಿನ್ನಕ್ಕೆ ತೂಕಮಾಡುವ ಬೀಜ. ಗುಂಜಿ ಎಂದರೆ ಅಂದಾಜು 122 ಮಿಲಿ ಗ್ರಾಂ. ಒಂದು ಆಣೆಗೆ 6 ಗುಂಜಿ. ಅಪ್ಪಟ ಹದಿನಾರಾಣೆ ತೂಕ ಎಂದು ಹೇಳುವುದು ಬಂಗಾರಕ್ಕೆ ತಾನೆ. ಗುಲಗಂಜಿಯ ಎಲ್ಲ ಕಾಳುಗಳು ಒಂದೇ ತೂಕ ಇರುತ್ತವಂತೆ. ಅದಕ್ಕಾಗಿ ಗುಲಗಂಜಿಯನ್ನು ತೂಕಕ್ಕೆ ಬಳುಸುತ್ತಾರೆ ಎಂದು ಹೇಳುತ್ತಾರೆ.
ಗುಲಗಂಜಿಯ ಸಸ್ಯಶಾಸ್ತ್ರೀಯ ನಾಮಧೇಯ ಏಬ್ರಸ್ ಪ್ರಿಕಟೋರಿಯಸ್. ಇಂಗ್ಲೀಷಿನಲ್ಲಿ ಇದನ್ನು ಇಂಡಿಯನ್ ಲಿಕೋರಿಸ್ ಅಥವ ಕ್ರಾಬ್ಸ್ ಐ ಎಂದು ಕರೆಯುವರು. ಇಂಡೋನೇಶಿಯ, ಭಾರತ, ಮಲೇಶಿಯದ ಕಾಡುಗಳಲ್ಲಿ ಮಧ್ಯಮ ಮಟ್ಟದ ಮರವಾಗಿ ಬೆಳೆಯುತ್ತದೆ.
ಗುಲಗಂಜಿಯ ರೂಪು ಬಣ್ಣ ಆಕರ್ಷಕವಾದರೂ ಅದು ಅಪಾಯಕಾರಿ. ಸಸ್ಯಗಳಲ್ಲಿ ಟಾಕ್ಸಿಕಾಲಜಿ ಎಂಬ ಅಧ್ಯಯನದಲ್ಲಿ ಗುಲಗಂಜಿ ಕೂಡ ಒಂದು ಮುಖ್ಯ ಅಧ್ಯಾಯವಾಗಿದೆ. ಈ ಅಧ್ಯಯನದಲ್ಲಿ ಕಂಡು ಬಂದದ್ದು ಗುಲಗಂಜಿ ಬೀಜ ಜೀವಹಾರಕ ಗುಣವನ್ನು ಹೊಂದಿದೆಯಂತೆ. ಬೀಜ ವಿಷವಾದರೂ ಆದರೆ ಸಸ್ಯಕ್ಕೆ ಔಷಧೀಯ ಗುಣವಿದೆ ಎನ್ನುತ್ತಾರೆ. ಗಿಡ ಹಳದಿ ಬಣ್ಣದ್ದಾಗಿದ್ದು ಕೆಂಪು ಹೂಗಳನ್ನು ಬಿಡುತ್ತದೆ. ವಿಶ್ವ ಯುದ್ಧದ ಸಮಯದಲ್ಲಿ ಗುಲಗಂಜಿ ಬೀಜಗಳನ್ನು ಅರೆದು ಶತ್ರುಗಳನ್ನು ಕೊಲ್ಲಲ್ಲು ಬಳಸುತ್ತಿದ್ದರಂತೆ.
ಜಾನಪದದಲ್ಲಿ ಗುಲಗಂಜಿ ವಿಶೇಷ ಸ್ಥಾನ ಪಡೆದಿದೆ. ಇದರ ಸುತ್ತಲೂ ಅನೇಕ ಒಗಟುಗಳಿವೆ. ಕೆಲವು ಸಂದರ್ಭಗಳಲ್ಲಿ ಹೆಣ್ಣನ್ನು ಗುಲಗಂಜಿಗೆ ಹೋಲಿಸುವುದುಂಟು. ಜಿ.ಪಿ. ರಾಜರತ್ನಂ ಅವರ ಕಾವ್ಯಮಾಲೆಯ ಹೆಸರೂ "ಗುಲಗಂಜಿ". ಮಾಗಡಿಯಿಂದ ಜಾಲಮಂಗಲ ಮಾರ್ಗದಲಿ ಗುಲಗಂಜಿ ಗುಡ್ಡ ಎಂದು ಸಣ್ಣ ಗುಡ್ಡಕ್ಕೆ ಹೆಸರು. ಕೆ. ಯುವರಾಜ್ ಸಂಯೋಜನೆಯ ಹಾಡುಗಳ ಹೆಸರೂ ಗುಲಗಂಜಿ.
ಲಂಬಾಣಿಯರಲ್ಲಿ ಗುಲಗಂಜಿ ಸರ, ಬಳೆಗಳನ್ನಾಗಿ ಧರಿಸುವರು. ಚೀನಾದಲ್ಲಿ ಈ ಬೀಜ ಪ್ರೀತಿಯ ಸಂಕೇತ. ಇದನ್ನು ಮ್ಯೂಚುಯಲ್ ಲವ್ ಬೀನ್ ಎಂದೂ ಹೇಳುವರು. ಟ್ರಿನಿಡ್ಯಾಡ್, ವೆಸ್ಟ್ ಇಂಡೀಸಿನಲ್ಲಿ ತೋಳ್ಬಂದಿಯಂತೆ ಕಟ್ಟಿ "ದೃಷ್ಟಿ ನಿವಾರಕ" ಎಂದು ತೋಳ್ಬಂದಿಯಾಗಿ ಬಳಸುವರು.
ನನ್ನೊಡನೆ ಮನೆಗೆ ಬಂದ ಹಿಡಿ ಗುಲಗಂಜಿಗಳನ್ನು ಪುಟ್ಟ ಡಬ್ಬಿಯಲ್ಲಿ ತಳವೂರುವ ಮುನ್ನ ಮೆಲ್ಲನೆ ನೇವರಿಸಿದೆ. ಒಂದು, ಎರಡು...ಚೌಕಾಬಾರ, ಅಳಗುಳಿ ಮಣೆ, ಲಂಬಾಣಿಯರು, ಮೈಸೂರಿನ ಕುಕ್ಕನಹಳ್ಳಿ ಕೆರೆಯ ಬದಿಯಲ್ಲಿದ್ದ ಗುಲಗಂಜಿ ಮರ....ಅಮ್ಮಾ ನೋಡಮ್ಮಾ, ನಂದೆಲ್ಲಾ ಗುಲಗಂಜಿ ತೆಗೋತಾನೇ ರಾಗ....ನಮ್ಮೀ ಜೀವನದಲಿ ಒಂದೇ ಬಾಲ್ಯ, ಒಂದೇ ಹರೆಯ ಅದೆಷ್ಟು ಸುಂದರ.....ಎಲ್ಲರ ಜೀವನದ ಸುಂದರಕಾಂಡ.