ಗೆಲ್ಲಲಾರದೇಹೋದ ಛಾಂಪಿಯನ್ನರು!
ನಿನ್ನೆ ಮಧ್ಯರಾತ್ರಿ ಆರಂಭವಾಗಿ ಇಂದು ಬೆಳಗಿನ ಜಾವ ಮುಕ್ತಾಯಗೊಂಡ ಇಟಲಿ-ಪರಗ್ವೆ ನಡುವಣ ವಿಶ್ವಕಪ್ ಫುಟ್ಬಾಲ್ ಪಂದ್ಯವು ಅನಿರೀಕ್ಷಿತ ಫಲಿತಾಂಶ ನೀಡಿತು. ಹಾಲಿ ಛಾಂಪಿಯನ್ ಹಾಗೂ ಐದನೇ (ವಿಶ್ವ)ಶ್ರೇಯಾಂಕಿತ ಇಟಲಿ ತಂಡವು ಎಷ್ಟೇ ಸೆಣಸಿದರೂ ವಿಶ್ವಶ್ರೇಯಾಂಕ ಪಟ್ಟಿಯಲ್ಲಿ ೩೧ನೇ ಸ್ಥಾನದಷ್ಟು ಕೆಳಗಿರುವ ಪರಗ್ವೆ ತಂಡವನ್ನು ಸೋಲಿಸಲಾರದೇಹೋಯಿತು. ಪಂದ್ಯವು ೧-೧ ಗೋಲುಗಳಿಂದ ಡ್ರಾ ಆಯಿತು.
೩೯ನೇ ನಿಮಿಷದಲ್ಲಿ ಅರೆಲಿಯಾನೊ ಟೊರೆಸ್ಸ್ ನೀಡಿದ ಪಾಸನ್ನು ಹೆಡ್ ಮಾಡಿ ಗೋಲು ಗಳಿಸುವ ಮೂಲಕ ಆಂಟೊಲಿನ್ ಅಲ್ಕರಾಸ್ ಪರಗ್ವೆಗೆ ಮುನ್ನಡೆ ಒದಗಿಸಿಕೊಟ್ಟರು. ಕಾರ್ನರ್ ಒದೆತದಿಂದ ಬಂದ ಚೆಂಡನ್ನು ಕಾಲಿಂದ ಗೋಲಿನೊಳಕ್ಕೆ ತೂರಿಸಿ ತನ್ನ ದೇಶದ ಮಾನ ಕಾಪಾಡಲು ಇಟಲಿ ಆಟಗಾರ ಡೇನಿಯೆಲ್ ಡಿ ರೊಸ್ಸಿ ೬೩ನೇ ನಿಮಿಷದವರೆಗೂ ಕಾಯಬೇಕಾಯಿತು.
ಪರಗ್ವೆ ಗೋಲು ಗಳಿಸಿದ ಮರುಕ್ಷಣದಿಂದ ಇಟಲಿಯ ನಾಯಕ ಫ್ಯಾಬಿಯೊ ಕನವಾರೊ ತಮ್ಮ ತಂಡವೇ ಅಂತಿಮದಲ್ಲಿ ಗೆಲ್ಲುವುದೆಂಬಂತೆ ರೆಫ್ರಿಯೆದುರು ಹಾಗೂ ಕ್ಯಾಮೆರಾಗಳೆದುರು ಅಬ್ಬರದ ಪೋಸು ನೀಡುತ್ತಿದ್ದುದು ನೋಡಲು ತಮಾಷೆಯಾಗಿತ್ತು. ಆದರೆ, ’ಅಬ್ಬರಿಸಿ ಬೊಬ್ಬಿರಿದರಿಲ್ಲಾರಿಗೂ ಫಲವಿಲ್ಲ’ ಎಂಬಂತೆ ಇಟಲಿಯು ಕೊನೆಗೂ ಪಂದ್ಯ ಗೆಲ್ಲುವಲ್ಲಿ ವಿಫಲವಾಯಿತು. ಈ ಹಿಂದೆ ಮಂಡಿರಜ್ಜು (ಹ್ಯಾಮ್ಸ್ಟ್ರಿಂಗ್) ಕ್ಷತಿಗೆ ಒಳಗಾಗಿದ್ದ ಇಟಲಿಯ ಹೆಸರಾಂತ ಗೋಲ್ಕೀಪರ್ ಗಿಯಾನ್ಲ್ಯೂಗಿ ಬಫನ್ ಅವರನ್ನು ಆಟದ ದ್ವಿತೀಯಾರ್ಧದಲ್ಲಿ ಕೈಬಿಟ್ಟು ಬದಲಿ ಗೋಲ್ಕೀಪರನ್ನು ಕೋಚ್ ಕಣಕ್ಕಿಳಿಸಿದುದನ್ನು ಗಮನಿಸಿದಾಗ ಇಟಲಿ ತಂಡವು ಅದೆಷ್ಟು ಒತ್ತಡಕ್ಕೊಳಗಾಗಿತ್ತೆಂಬುದು ವೇದ್ಯವಾಗುತ್ತದೆ.