ಜಯ ನಾಮ ಸಂವತ್ಸರಕೆ ಜಯ ಜಯ

ಜಯ ನಾಮ ಸಂವತ್ಸರಕೆ ಜಯ ಜಯ

ಕವನ

ನಮ್ಮೊಳಿರುವ ಜೀವ ಚೈತನ್ಯಕೆ ಭೇದವಿಲ್ಲವೆಂದು,
ನೀನೇ ನಾನೆಂದು, ನಾನೇ ನೀನೆಂದು, ಎಲ್ಲರೊಳು ತನ್ನತನವ ಕಂಡ ಸ್ನೇಹಜೀವಿಗೆ,
ಕಾಲಚಕ್ರದಡಿ ಜೀವ ಕೊರಡು ಸವೆದು ಅರೆದು ಸಮಚಿತ್ತ ಪಡೆದವಗೆ,
ಸುಖವೇನು? ದುಃಖವೇನು ? ಸಿಹಿಯೇನು ? ಕಹಿಯೇನು?
ಲಾಭವೇನು ? ನಷ್ಟವೇನು? ಮಾನಾಪಮಾನವೇನು?
ಹೊಸತೇನು ? ಹಳತೇನು ? ಹರೆಯ ಕಳೆದು ಮುಪ್ಪಾದರೇನು ?
ದಿವಸ ಮಾಸ ಕಳೆದು ಹೊಸ ಸಂವತ್ಸರ ಬಂದರೇನು?

ನಿದ್ದೆಯಳಿದ ಅನುಕ್ಷಣಕೇ ಹೊಸಜೀವನ, ಜೀವ ತಂತಾನ !
ದಿನ ಸವೆದ ಬಗೆಯೇ ಸಮಯ ಸಾರ್ಥಕತೆಯ ಮೌಲ್ಯಮಾಪನ !
ನಡೆ ನುಡಿಯ ಕಂಪೇ ವ್ಯಕ್ತಿ ವಕ್ತಿತ್ವದ ಪರಿಮಾಣ !
ಈ ಎಲ್ಲ ಯೋಗ್ಯ ಜೀವನದ ಸಾಧನೆಗೆ ಹಾದಿಯಾಗಿಹುದೀ ಜಯ,
ಇಂದ್ರಿಯ ನಿಗ್ರಹಕೆ ಸೋಪಾನವಾಗೇ ಬಂದಿಹುದು ಜಯ,
ಮನದ ವಿಕೃತಿಯನಳಿಸಿ ಸುಕೃತಿಯೆಡೆ ಕರೆಯೋಡ್ಡಿದೆ ಜಯ,
ಸತ್ಯಧರ್ಮಶಾಂತಿ ಪಥದಲ್ಲಿ ನಡೆವ ನಮನಿಮಗೆಲ್ಲ ಜಯ ಜಯ.

ನಿಮ್ಮೆಲ್ಲರಿಗೂ ಹೊಸ ವರ್ಷದ ಶುಭಾಶಯ - ಸಾಯಿನಾಥ ಬಾಲಕೃಷ್ಣ, ಬೆಂಗಳೂರು.