ಡೀಕಯ್ಯ ನಾಯ್ಕನ ಅಭಿವೃದ್ಧಿಯ ಕತೆ

4.285715

ಬನ್ನಿ ಬೆಳಾಲಿನ ಡೀಕಯ್ಯ ನಾಯ್ಕನನ್ನು ನಿಮಗೆ ಪರಿಚಯಿಸುತ್ತೇನೆ.
 
ಸಾಯಂಕಾಲದ ವೇಳೆ, ತಂಪಾದ ಗಾಳಿ, ಡೀಕಯ್ಯ ನಾಯ್ಕ ಮನೆಯೆದುರು ಕುಳಿತು ಕಣ್ಣು ಹಾಯಿಸುತ್ತಿದ್ದಾನೆ. ಸುತ್ತೆಲ್ಲ ಹಸಿರು. ನಡುವೆ ಒಪ್ಪಾದ ಮನೆ. ಮಡದಿ, ಎರಡು ಮಕ್ಕಳು. ಮುಖದಲ್ಲಿ ತೃಪ್ತಿಯ ಮಂದಹಾಸ.
 
ಐದು ವರ್ಷದ ಹಿಂದೆ ಡೀಕಯ್ಯ ಹೀಗಿರಲಿಲ್ಲ. ಬೋಳುಗುಡ್ಡದಂತಿದ್ದ ಪಾಳು ಜಾಗದಲ್ಲಿ ಅವನು ಕುಳಿತಿದ್ದ. ಅಲ್ಲಿ ಮಣ್ಣು, ಕಲ್ಲು ಬೆಳೆಯಬಹುದಿತ್ತಷ್ಟೆ. ಮನೆಯೋ-ಈಗ ಅವನ ಮನೆಯ ದನಗಳಿಗೂ ಇನ್ನೂ ಒಳ್ಳೆಯ ಕೊಟ್ಟೆಗೆ ಉಂಟು. ಅವನು ದಿನಬೆಳಗಾದರೆ ಕೂಲಿಗೆ. ಹೊಟ್ಟೆ ತುಂಬಾಬೇಕಾದರೆ ಹೆಂಡತಿಯೂ ಬರಬೇಕು ಜತೆಗೆ. ಹೊಟ್ಟೆಪಾಡಿಗಾಗಿ ಬೇರೆಯವರ ಜಮೀನನ್ನು ಹಸನು ಮಾಡುವುದರಲ್ಲೇ ಅವನ ಜೀವ ಸವೆಯುತ್ತಿತ್ತು. 
 
ಈಗ ಡೀಕಯ್ಯ ಸಂಪೂರ್ಣ ಬದಲಾಗಿದ್ದಾನೆ. ಕೂಲಿಗೆ ಹೋಗದೇ ತನ್ನ ಜಾಗದಲ್ಲಿ ದುಡಿಯುತ್ತಾನೆ. ಅಲ್ಲೀಗ ತೆಂಗು ಕಾಯಿ ಕಚ್ಚಿದೆ. ರಬ್ಬರ್ ಗಿಡ ಪುಟಿದೆದ್ದಿದೆ. ಹಿಪ್ಪುನೇರಳೆ ಸೊಪ್ಪು ಸೊಂಪಾಗಿ ಬೆಳೆದಿದೆ. ಬಾಳೆ, ಬದನೆ, ನುಗ್ಗೆ, ಮಾವು, ಹಲಸು, ಚಿಕ್ಕು, ನಡುವೆ ಚೊಕ್ಕಾದ ಕುಟೀರ ಅವನನ್ನು ಮಾದರಿ ಕೃಷಿಕನನ್ನಾಗಿ ಮಾಡಿವೆ. ಇಂಗ್ಲೆಂಡು-ಫಿನ್‍ಲ್ಯಾಂಡು ಹೀಗೆಲ್ಲ ಎಲ್ಲ ಲ್ಯಾಂಡುಗಳ ಜನರೂ ಆಗಾಗ ಅವನನ್ನು ನೋಡಲು ಬರುತ್ತಾರೆ. ಅವನ ಅಭಿವೃದ್ಧಿಯ ಕಥೆ ಕೇಳಿ ಫೋಟೋ ಕ್ಲಿಕ್ ಮಾಡಿ ಒಯ್ಯುತ್ತಾರೆ. 
 
ನಿಮಗೆ ನೆನಪಿರಬಹುದು. 1982ರಲ್ಲಿ ಧರ್ಮಸ್ಥಳದಲ್ಲಿ ಬಾಹುಬಲಿ ಪ್ರತಿಷ್ಠಾಪನೆಯಾಯಿತು. ಈ ಸಂದರ್ಭದ ಸವಿನೆನಪಿಗೆ ಏನಾದರೊಂದು ದೂರಗಾಮೀ ಪರಿಣಾಮವುಳ್ಳ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂಬ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ಆಶಯದ ಕೂಸು- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ (ಎಸ್.ಕೆ,ಡಿ.ಆರ್.ಡಿ.ಪಿ) ಈ ಏಳು ವರ್ಷಗಳಲ್ಲಿ ಬೆಳ್ತಂಗಡಿ ತಾಲ್ಲೂಕಿನ ಎಲ್ಲಾ 81 ಹಳ್ಳಿಗಳಿಗೂ ವ್ಯಾಪಿಸಿದ ಈ ಯೋಜನೆ ಮೂರು ಎಕರೆಗಿಂತ ಕಡಿಮೆ ಭೂಮಿಯಿರುವ ಎಲ್ಲರನ್ನೂ ಗುರುತಿಸಿದೆ. ತನ್ನ ತೆಕ್ಕೆಗೆ ಕರೆದುಕೊಂಡಿದೆ. ಮತ್ತೆ, ಅವರ ಬಾಳಿಗೆ ಬೆಳಕು-ಭವಿಷ್ಯ ತಂದುಕೊಟ್ಟಿದೆ. ಇದು ಸಾಧ್ಯವಾದದ್ದು ಹೇಗೆ?
 
ಡೀಕಯ್ಯ ನಾಯ್ಕನ ಉದಾಹರಣೆಯನ್ನೇ ಪರಿಶೀಲಿಸೋಣ. ಅವನಿಗೆ ಇದ್ದದ್ದು ಎರಡೂವರೆ ಎಕರೆ ಪಾಳುಭೂಮಿ. ಅವನಿಗೆ ಅದನ್ನು ಹಸನುಗೊಳಿಸುವ ಆಸೆಯಿದ್ದರೂ ಕಾಸಿರಲಿಲ್ಲ. ಕೂಲಿಗೆ ಹೋಗದೇ ಮನೆಯಲ್ಲಿ ದುಡಿದರೆ ಅಂದಿನ ಊಟಕ್ಕೆ ಇರುತ್ತಿರಲಿಲ್ಲ. ಅಂದಿನ ದುಡಿಮೆ ಅಂದಿನ ಗಂಜಿಗೆ. ಡೀಕಯ್ಯ, ಅದಕ್ಕೇ ಒಣ ಜಾಗವೊಂದರಲ್ಲಿ ಹರಕು ಬಿಡಾರ ಹೂಡಿ ತಳವೂರಿದ್ದು ಬಿಟ್ಟರೆ ಭವಿಷ್ಯಕ್ಕೆ ಏನೂ ಮಾಡಿರಲಿಲ್ಲ. 
 
ಧರ್ಮಸ್ಥಳದ ಯೋಜನೆಯನ್ನು ಅನುಷ್ಠಾನಗೊಳಿಸಲು ಪ್ರತಿ ಹಳ್ಳಿಯಲ್ಲೂ ಸೇವಾ ನಿರತರಿದ್ದಾರೆ. ಹಾಗೆ ಬೆಳಾಲಿನಲ್ಲೂ ಇದ್ದವರು ಅವನ ಕಷ್ಟವನ್ನು ಗುರುತಿಸಿದರು. ಅಗತ್ಯಗಳನ್ನು ಒಂದೊಂದಾಗಿ ಪಟ್ಟಿ ಮಾಡಿದರು. ಆತ ಸಾಗಬೇಕಾದ ದಾರಿಯ ನೀಲ ನಕ್ಷೆ ತಯಾರಿಸಿದರು. 
 
ಆ ಪ್ರಕಾರ ಡೀಕಯ್ಯನ ಮೊದಲ ಬೇಡಿಕೆ ಜಾಗದ ಸುತ್ತ ಅಗಳ (ಕಂದಕ) ತೋಡುವುದು. ಆದರೆ ಅಗಳ ತೋಡಿಸಲು, ಸರ್ಕಾರಿ ಯೋಜನೆಗಳ ಹಾಗೆ ಧರ್ಮಸ್ಥಳವೇನೂ ಹಣ ಕೊಡುವುದಿಲ್ಲ. ಅವನೇ ಅಗಳ ತೋಡಬೇಕು. ಅವನ ಜಾಗದಲ್ಲೇ ಅವನು ದುಡಿದರೆ ರಾತ್ರಿಯ ಗಂಜಿ ಮತ್ತು ಉಪ್ಪಿನ ವ್ಯವಸ್ಥೆಯನ್ನು ಯೋಜನೆಯ ಕಾರ್ಯಕರ್ತರು ಮಾಡಿಕೊಡುತ್ತಾರೆ. ಇದರಲ್ಲಿ ಎರಡು ಲಾಭವುಂಟು. ಅವನ ಹೊಟ್ಟಯೂ ತುಂಬಿತು. ಹಾಗೆಯೇ ಅವನ ಜಾಗದ ಕೆಲಸವೂ ಆಯ್ತು. ದುಡ್ಡು ಕೊಟ್ಟು ಮಾಡಿಸಿದರೆ ನೂರು ಆಳಿಗೆ ಮುಗಿಯದ ಅಗಳ ಹತ್ತೇ ಆಳಿಗೆ ಮುಗಿದುಹೋಯ್ತು. 
 
ಆಗಳ ತೋಡಿದ ಮೇಲೆ ಬಾವಿ. ಅದನ್ನು ಅವನೊಬ್ಬನೇ ಮಾಡಲಾರ. ಪಕ್ಕದ ಮನೆಯ ಗೌಡನೂ ಸಹಾಯಕ್ಕೆ ಬಂದ. ಪ್ರತಿಯಾಗಿ ಅವನ ಮನೆಯ ಇನ್ಯಾವುದೋ ಕೆಲಸಕ್ಕೆ ಡೀಕಯ್ಯ ಹೋಗುತ್ತಾನೆ. ಹೀಗೆ ಪರಸ್ಪರ ಸಹಕಾರದಿಂದ ಇಬ್ಬರ ಕೆಲಸವೂ ಸರಾಗ. ಅಗಳದಿಂದಾಗಿ ಕಾಂಪೌಂಡು ಭದ್ರವಾಗಿ ಒಳಗೆ ಬಾವಿಯೂ ಆಯ್ತು. ಈಗ ಸೇವಾನಿರತರು ಅವನನ್ನು ಬ್ಯಾಂಕಿಗೆ ಕರಕೊಂಡು ಹೋದರು. ಅವನಿಗೆ ಪಂಪ್‍ಸೆಟ್ಟು ಸಾಲ ನೀಡುವಂತೆ ಅಧಿಕಾರಿಗಳನ್ನು ಕೇಳಿಕೊಂಡರು. ಇವರ ಆಗ್ರಹ ಬೆಂಬಲದ ಮೇರೆಗೆ ಡೀಕಯ್ಯನ ಬಾವಿಗೆ ಪಂಪ್‍ಸೆಟ್ ಬಂತು. ಸೀಮೆಎಣ್ಣೆ ಹಾಕಿ ಶುರುಮಾಡಿದಂತೆ ಬಾವಿಯೊಳಗಿನ ಗಂಗೆ ಹೊನಲಾಗಿ ಹರಿದಳು. 
 
ಡೀಕಯ್ಯ ಮೊದಲಿಗೆ ಮೊದಲ ವರ್ಷವೇ ಫಲ ನೀಡಬಲ್ಲ ಕೃಷಿಗಾಗಿ ಯೋಚಿಸಿದ. ಬಾಳೆ-ಸುವರ್ಣಗಡ್ಡೆ, ತರಕಾರಿ ಬೆಳೆಯುತ್ತೇನೆ ಎಂದ. ಸೇವಾನಿರತರು ಅವನಿಗೆ ತರಕಾರಿ ಬೀಜ, ಬಾಳೆಯ ಕಂದು ಒದಗಿಸಿಕೊಟ್ಟರು. ಅವನು ನೆಟ್ಟು ದಿನ ನಿತ್ಯ ಕೂಲಿಯಿಂದ ಬಂದವನೇ ನೀರುಕೊಟ್ಟ. ಬದನೆ- ಹಾಗಲು- ಬೆಂಡೆ ಹದವಾಗಿ ಬೆಳೆಯಿತು. ಅವನ ಭೂಮಿ ಹಸಿರಾಗಿ ನಲಿಯಿತು. 
 
ಸೇವಾನಿರತರು ಅವನಿಗೆ ಹಿಪ್ಪುನೇರಳೆ ಹಾಕುವಂತೆ ಸೂಚಿಸಿದರು. ರೇಷ್ಮೆ ಬೆಳೆಯುವುದು ಹೇಗೆಂದು ಉಜಿರೆಯ ಸ್ವುಉದ್ಯೋಗ ತರಬೇತಿ ಕೇಂದ್ರದಲ್ಲಿ ತೋರಿಸಿಕೊಟ್ಟರು. ಡೀಕಯ್ಯ ಹೊಸ ಹುರುಪಿನಿಂದ ರೇಷ್ಮೆ ಕೃಷಿ ಕೈಗೆತ್ತಿಕೊಂಡ. ತಾಯಿ- ಹೆಂಡತಿ- ಮಕ್ಕಳೂ ಕೈಗೂಡಿಸಿದರು. ಮೊದಲನೇ ಬೆಳೆ- ಮೂರು ಸಾವಿರ ಕೈಗೆ ಬಂತು. ಡೀಕಯ್ಯ ಅಷ್ಟೊಂದು ದುಡ್ಡನ್ನು ಒಮ್ಮೆಗೇ ನೋಡಿದ್ದು, ಹೆಂಡತಿ ಹೊಸ ಸೀರೆಯನ್ನೂ, ಮಕ್ಕಳು ಹೊಸ ಬಟ್ಟೆಯನ್ನೂ ಕಂಡದ್ದು ಅದೇಮೊದಲು!
 
ಜೊತೆಗೆ ಡೀಕಯ್ಯ ದೀರ್ಘಾವಧಿ ಬೆಳೆಗಳ ಬಗ್ಗೂ ಯೋಚಿಸಿದ. ಧರ್ಮಸ್ಥಳದಿಂದ ಅಡಿಕೆ, ತೆಂಗಿನ ಮೊಳಕೆಗಳನ್ನು ತಂದು ನೆಟ್ಟ. ಸೇವಾ ನಿರತರು ರಬ್ಬರ್ ಸಸಿಗಳನ್ನು ತರಿಸಿ ಹೇಗೆ ನೆಡುವುದೆಂದು ಹೇಳಿದರು. ಇದೀಗ ಡೀಕಯ್ಯನ ತೋಟದ ತೆಂಗು - ರಬ್ರ್ ಸಸಿಗಳಿಗೆ 4-5 ವರ್ಷಗಳಗಿವೆ. ಇನ್ನೆರಡು ವರ್ಷಕ್ಕೆ ರಬ್ಬರ್ ಒಂದರಿಂದಲೇ ಅವನಿಗೆ ದಿನಾ 150 ರೂ. ಆದಾಯ ಬರುತ್ತದೆ. ಆಗ ಅವನಿಗೆ ಅಷ್ಟೊಂದು ದುಡ್ಡನ್ನು ಏನು ಮಾಡುವುದೆಂದೇ ಸಮಸ್ಯೆಯಾಗಬಹುದು!
 
ಆಶ್ಚರ್ಯವೆಂದರೆ ಬೆಳ್ತಂಗಡಿ ತಾಲೂಕನ್ನು ನಾವೀಗ ಒಮ್ಮೆ ಸುತ್ತಿ ಬಂದರೆ ಇಂಥ ಅನೇಕ ಡೀಕಯ್ಯ ನಾಯ್ಕರುಗಳನ್ನು ಕಾಣುತ್ತೇವೆ. ಇಲ್ಲಿ ಕೃಷಿ ಕಾರ್ಮಿಕರಾಗಿದ್ದ ಡೊಂಬ, ಐತ, ಔಡ ಮೇರಗಳೆಲ್ಲ ಇನ್ನೆರಡು ವರ್ಷಗಳಲ್ಲಿ ತಾವೇ ಇತರರಿಗೆ ಕೂಲಿ ನೀಡುವಷ್ಟು ಸ್ಥಿತಿವಂತರಾಗುತ್ತಾರೆ. ಸರ್ಕಾರ ಬಡವರಿಗಾಗಿ ಮಾಡಿದ ಯೋಜನೆಗಳು ಈ 40 ವರ್ಷಗಳಲ್ಲಿ ಅವರ ಬದುಕಿನ ಬವಣೆಗಳನ್ನು ಏನೆಂದೂ ನೀಗಿಸದಿರುವಾಗ, ಧರ್ಮಸ್ಥಳದ ದೇವಸ್ಥಾನ ಏಳು ವರ್ಷಗಳ ಹಿಂದೆ ಪ್ರಾಯೋಗಿಕವಾಗಿ ಆರಂಭಿಸಿದ ಗ್ರಾಮೀಣ ಅಭಿವೃದ್ಧಿ ಯೋಜನೆ ನೀಡಿದ ಫಲ ಮುಖ್ಯವಾಗುತ್ತದೆ. ಮಾದರಿಯೆನಿಸುತ್ತದೆ. 
 
 
 
(ಚಿತ್ರ ಕೃಪೆ - ಗೂಗಲ್)
( ಲೇಖನ ಬರೆದ ವರ್ಷ - 1994)
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.