ತುಳಸಿಗಿಂದು ಸಂಭ್ರಮ!

4

ಇಂದು ತುಳಸಿ ಹಬ್ಬ. ತುಳಸಿ ಜನಪದರ ಮನೆಮನಗಳಲ್ಲಿ ಸಾಂಪ್ರದಾಯಿಕವಾಗಿ ಹಾಸುಹೊಕ್ಕಾಗಿರುವ ಬಗೆ ನೋಡಿದಾಗ ಅಚ್ಚರಿಯಾಗುತ್ತದೆ. ಅಂತಸ್ತುಗಳ ಗೊಡವೆಯಿಲ್ಲದೆ ಮನೆಯಲ್ಲಿ ಖಾಲಿ ಡಬ್ಬಕ್ಕೊ, ಹೂ ಕುಂಡಕ್ಕೊ ಹಾಕಿ ಬೆಳೆಸಿದ ಸಸಿಯಾಗೊ, ಇಲ್ಲವೆ ಅಂಗಳದಲ್ಲಿ ಕಟ್ಟಿಸಿದ ಕಟ್ಟೆಯಲ್ಲರಳಿದ ದೇವತೆಯಾಗೊ ಸರ್ವೆ ಸಾಧಾರಣವಾಗಿ ಕಂಡು ಬರುವ ತುಳಸಿ, ಬಹುಶಃ ಆ ಕಾರಣದಿಂದಲೆ ವಿಶೇಷವೆಂಬಂತೆ ಭಾಸವಾಗುವುದಿಲ್ಲ. ಅರಿಶಿನ, ಕುಂಕುಮ ಹಚ್ಚಿ ಹೂ ಮುಡಿಸಿ, ಹತ್ತಿಯಲ್ಲಿ ಹೊಸೆದ ಹಾರವನ್ನು ಅರ್ಪಿಸಿ ಬೃಂದಾವನದ ಸುತ್ತಲೊ, ಕುಂಡ ಯಾ ಡಬ್ಬದ ಸುತ್ತಲೊ ಸುತ್ತುತ್ತ ಪೂಜಿಸುತ್ತಿರುವ ಸಾಂಪ್ರದಾಯಿಕ ಹೆಂಗಳೆಯರ ಚಿತ್ರಣ ಕಣ್ಮುಂದೆ ನಿಲ್ಲುತ್ತದೆ. ಅದರಲ್ಲೂ ಕೆಲ ಗೃಹಿಣಿಯರಿಗೆ ದಿನದ ಸ್ನಾನದ ನಂತರ, ಒಣಗದ ಕೇಶರಾಶಿಯ ಸುತ್ತ ಸುತ್ತಿದ ವದ್ದೆ ಬಟ್ಟೆಯ ಸಮೇತ ಹಾಡು ಹೇಳಿಕೊಂಡು ಪೂಜಿಸುತ್ತ ಕಟ್ಟೆ ಸುತ್ತುತ್ತಿದ್ದುದ್ದು ನೆನಪಲಿನ್ನು ಅಚ್ಚ ಹಸಿರು. ಬಹುಶಃ ನೀರು, ಬೆಳಕಿನ ವ್ಯವಸ್ಥೆಗೆ ಸುಲಭವಿರಲೆಂದೊ ಏನೊ, ತುಳಸಿಯನ್ನು ಮನೆಯ ಹೊರಗಡೆಯೊ, ಅಥವಾ ಅಂಗಳದಲ್ಲೆ ಕಾಣುವುದು ಹೆಚ್ಚು. ಕೆಲವು ಮನೆಗಳಲ್ಲಂತೂ ಒಳಗೆ ಹೋಗುವ ಮುನ್ನ ಅಂಗಳದಲ್ಲಿರುವ ತುಳಸಿ ಕಟ್ಟೆಯನ್ನು ದಾಟಿಯೆ ಹೋಗಬೇಕು; ಕನಿಷ್ಠ ಸಮೀಪದಲ್ಲಿ ಹಾದಾದರೂ ಹೋಗಬೇಕು.
.
ಅಂತೆಯೆ ತುಳಸಿಗೆ ಮಡಿವಂತಿಕೆ, ಭಕ್ತಿಭಾವದಲ್ಲಿ ಒಂದು ರೀತಿ ವಿಶೇಷ ಸ್ಥಾನಮಾನ. ಅವಳು ಚೆನ್ನಾಗಿ ಬೆಳೆದು ನಳನಳಿಸುತ್ತಿದ್ದಾಳೆಂದರೆ ಅದನ್ನು ಬೆಳೆಸಿದ ಗೃಹಿಣಿಗೆ ತೃಪ್ತಿ, ಹೆಮ್ಮೆ. ಬೆಳೆಸಲೆತ್ನಿಸಿದ ತುಳಸಿ ಬಾಡಿಹೋದರೆ ಶುಭಕರವಲ್ಲವೆಂದು ಬಾಡಿದ ಮುಖ ಮಾಡಿಕೊಳ್ಳುವ ವನಿತೆಯರೆಷ್ಟೊ ಜನ ಪಾಪ. ಸಿಂಗಪುರದಲ್ಲಿ ಲಿಟಲ್ ಇಂಡಿಯಾದಲ್ಲಿ ಕುಂಡದಲ್ಲಿ ಬೆಳೆಸಿದ ತುಳಸಿ ಸಿಗುತ್ತದೆ. ಆದರೆ ಇದರ ಎಲೆಯ ಗಾತ್ರ ತುಂಬಾ ದೊಡ್ಡದು. ನಮ್ಮಲ್ಲಿರುವ ನಾನು ನೋಡಿರುವ ಎಲೆಗಳ ನಾಕೈದು ಪಟ್ಟೆ ದೊಡ್ಡದೆಂದು ಕಾಣುತ್ತದೆ. ಪರಿಮಳ ಕೂಡ ನಮ್ಮದರ ಹಾಗೆ ಸಮೃದ್ದವಿದ್ದ ಹಾಗೆ ಕಾಣುವುದಿಲ್ಲವಾದರೂ, 'ಸದ್ಯ ಇಷ್ಟಾದರೂ ಸಿಗುತ್ತಲ್ಲಾ' ಎಂದು ಗೃಹಿಣಿಯರು ಸಮಾಧಾನ ಪಟ್ಟುಕೊಳ್ಳಬಹುದು. 
.
ಈ ದಿನದ ಹಬ್ಬದ ನೆನಪಿಗೆ ನನ್ನ ನೆನಪಿನ ತುಣುಕುಗಳನ್ನು ಜೋಡಿಸಿದ ಒಂದು ಪುಟ್ಟ ಕವನ ಇದೊ, ಈ ಕೆಳಗೆ :-)
.
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
.
.
ತುಳಸಿಗಿಂದು ಸಂಭ್ರಮ!
______________
.
ತುಳಸಿ
ಗಿಡ ಬೆಳೆಸಿ
ಸಂಭ್ರಮಿಸಿ ಸರತಿ
ಸಂಪ್ರದಾಯದ ಗರತಿ ||
.
ಬೃಂದಾವನ
ಕಟ್ಟಿದ ಅಂಗಣ
ವಠಾರಕು ಬಿಡದೆ
ತುಲಸಿಯ ಸರಹದ್ದೆ ||
.
ತುಳಸಿ ಕಟ್ಟೆ
ನಾಲ್ಕು ಬದಿಗಿಟ್ಟೆ
ದೀಪ ಮಲ್ಲಿಗೆ ಗೂಡು
ಬೆಳಗಿದಾಗೆಲ್ಲ ಸರಿ ಹಾಡು ||
.
ಅಭ್ಯಂಜನ
ಹಚ್ಚಿ ನೀಲಾಂಜನ
ಮುಡಿಗೆ ವಸ್ತ್ರ ಬಿಗಿದೆ
ಅರಿಶಿನ ಕುಂಕುಮ ಹಚ್ಚಿದೆ ||
.
ಒದ್ದೆ ತಲೆ ವಸ್ತ್ರ
ಪೂಜೆ ಪರಿಕರ ಶಸ್ತ್ರ
ಸುತ್ತುವ ಗೃಹಿಣಿ ಸಿತಾರೆ
ತುಳಸಿಗ್ಹಾಡಾಗ್ಹರಿದು ಧಾರೆ ||
.
ಪ್ರತಿದಿನ ಪೂಜೆ
ಸುತ್ತುವಾ ಗೋಜೆ
ಕಟ್ಟೆಗೇಕೆ ಮನೆಯಾಚೆ
ನೀರು ಬೆಳಕಿನು ಹೊಂಚೆ ? ||
.
ಬಾಡದಂತೆಚ್ಚರ
ಶಕುನ ಅಶುಭಕರ
ಒಳಿತಲ್ಲ ಮನೆ ಮನಕೆ
ಶ್ರದ್ದೆ ಭಕ್ತಿ ಸರಿಯಿಲ್ಲದ್ದಕ್ಕೆ ||
.
ವರಿಸಿದ ಮಾಲೆ
ವಿಷ್ಣುವಿನ ಕೊರಳಲೆ
ಪರಿಣಯದಲಿ ಪರಿಮಳ
ಶ್ರೀಹರಿಗು ಪ್ರಿಯಳಾದವಳ  ||
.
ವೈಭವ ತುಳಸಿಗೆ
ಸಿಂಗರಿಸಿಕೊಂಡ ಕಟ್ಟೆಗೆ
ಭಕ್ತಿ ನೇತು ಹಾಕಿ ಹೂವ್ವಲೆ
ಹತ್ತಿ ಅರಿಶಿನ ಹಾರದ ಮಾಲೆ ||
.
ತುಲಸಿಯೆಲೆ ಹಿತ
ಆಚರಣೆ ಮನ ವಿಹಿತ
ದೈವತ್ವ ಔಷಧಿಯ ತತ್ವ
ಸಂಪ್ರದಾಯದಲಡಗಿ ಮಹತ್ವ ||
.
.
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಾಗೇಶರೆ,
ಸ್ವದೇಶದಲ್ಲಿರುವವರು ಮರೆತರೂ ವಿದೇಶದಲ್ಲಿರುವ ನೀವು ನಮ್ಮ ಹಬ್ಬ-ಹರಿದಿನಗಳಿಗೆ ತಪ್ಪದೇ ಹೊಸ ಕವನ ಹೊಸೆಯುತ್ತಿದ್ದೀರ ಮತ್ತು ಎಲ್ಲಾ ವಿವರಗಳನ್ನು ಅದು ಒಳಗೊಂಡಿರುತ್ತದೆ ಎನ್ನುವುದೇ ಸೋಜಿಗ. ಆದರೆ ಅದೇಕೋ ಈ ಕವನದಲ್ಲಿ ತುಳಸೀ ವಿವಾಹದಲ್ಲಿ ನೆಲ್ಲಿಕಾಯಿಯ ಪಾತ್ರವನ್ನು ಕೈಬಿಟ್ಟಿದ್ದೀರ ಅದನ್ನೂ ಸೇರಿಸಿದ್ದರೆ ಚೆನ್ನಾಗಿರುತ್ತಿತ್ತು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶ್ರೀಧರರೆ, ನಿನ್ನೆಯೆಲ್ಲಾ ಯಾವುದೊ ಕೆಲಸದ ಗಡಿಬಿಡಿಯಲ್ಲಿ ಸಂಜೆಯವರೆಗೂ ಪುರುಸೊತ್ತೆ ಆಗಲಿಲ್ಲ. ಸಂಜೆ ಮನೆಗೆ ಹೊರಡುವ ಹೊತ್ತಿನಲ್ಲಿ, ದಿನ ಮುಗಿದು ಹೋಗುವ ಮುನ್ನ ಬರೆದು ಸೇರಿಸಿಬಿಡೋಣ ಅಂದುಕೊಂಡು ಆತುರಾತುರವಾಗೆ, ಬಸ್ಸಿನಲ್ಲಿ ಪಯಣಿಸುತ್ತಲೆ ಹೊಸೆದದ್ದು. ಹೀಗಾಗಿ ತಿದ್ದಿ ಪೂರ್ಣರೂಪ ಕೊಡಲು ಆಗಲಿಲ್ಲ. ಈಗ ನಿಮ್ಮ ಪ್ರತಿಕ್ರಿಯೆಯಿಂದ ಲಲಿತಾಬ್ರಹ್ಮ ಪ್ರತೀಕವಾದ ನೆಲ್ಲಿಕಾಯಿಯೂ ಸೇರಿದಂತಾಯಿತು. ಹೀಗಾಗಿ ಇಬ್ಬರೂ ಸೇರಿ ಹೊಸೆದು ಪೂರ್ಣಗೊಳಿಸಿದಂತೆ ಲೆಕ್ಕ - ಅದಕ್ಕೆ ನಿಮಗೂ ಧನ್ಯವಾದಗಳು :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಾಗೇಶ ಮೈಸೂರು ರವರಿಗೆ ವದನೆಗಳು
' ತುಳಸಿಗಿಂದು ಸಂಭ್ರಮ ' ತುಳಸಿ ಹಬ್ಬದ ಅಷ್ಟೇ ಏಕೆ ಭಾರತೀಯ ಪರಂಪರೆಯಲ್ಲಿ ಹಾಸು ಹೊಕ್ಕಾದ ತುಳಸಿ ಕಟ್ಟೆ ಮತ್ತು ತುಳಸಿ ಪೂಜೆಯ ಮಹತಿಯನ್ನು ಸಾರುವ ಲೇಖನ ಮತ್ತು ಕವನ, ಓದುತ್ತ ಹೊದಂತೆ ನಮ್ಮ ಬಾಲ್ಯದ ಮತ್ತು ಇಂದಿನ ದಿನಗಳ ವರೆಗೆ ನಮ್ಮ ನಮ್ಮ ಮನೆಯ ತುಳಸಿ ಪೂಜೆ ಚಿತ್ರಿಕೆಗಳು ಮನದಲ್ಲಿ ಮೂಡಿ ಹರುಷ ತಂದವು, ನಿಮ್ಮ ಗ್ರಹಿಕೆಗಳು ಅವುಗಳನ್ನು ಬರಹ ರೂಪಕ್ಕಿಳಿಸುವ ಪರಿ ಅನುಪಮವಾದುದು, ನಿಮ್ಮ ಲೇಖನಿ ಹೀಗೆಯೆ ನಿರಂತರವಾಗಿ ಮುಂದುವರಿಯುತಿರಲಿ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾಟೀಲರಿಗೆ ನಮಸ್ಕಾರ. ನಮ್ಮ ಪೀಳಿಗೆಯತನಕ ಇವೆಲ್ಲಾ ನೆನಪುಗಳು ಬಾಲ್ಯದಿಂದಲೆ ಬೆಸೆದುಕೊಂಡು ಬಂದ ಆತ್ಮೀಯ, ಆಪ್ಯಾಯತೆ ನೀಡುವ ಭಾವ ಬಂಧಗಳು. ಹೊಸ ಪೀಳಿಗೆಯ ಎಷ್ಟು ಜನ ಇದೆ ತರಹದ ಭಾವನಾತ್ಮಕತೆಯ ನಂಟಿಗೆ ಗಂಟು ಬೀಳುತ್ತಾರೊ ಹೇಳಲಾಗದು. ಅವರವರ ಪರಿಸರಗಳು ಅವರ ಮೇಲಾಗಿಸುವ ಪರಿಣಾಮದ ಮೇಲೆ ಅವಲಂಬಿತವಾಗಿರುತ್ತವೆ. ಅಷ್ಟರಮಟ್ಟಿಗೆ ನಾವಂತೂ ಭಾಗ್ಯವಂತರು - ನಮ್ಮ ಬಾಲ್ಯದಲ್ಲೆ ಇವೆಲ್ಲಾ ಹಾಸುಹೊಕ್ಕಾಗಿ ಇದ್ದ ಕಾರಣ. ಅದನ್ನು ಆ ಗ್ರಹಿಕೆಯ ಬಂಧದಲ್ಲೆ ಕಟ್ಟಿಡುವ ಯತ್ನ ಈ ಕವನ. ಇದು ತಮ್ಮಲ್ಲಿಯೂ ಹಳೆಯ ನೆನಪುಗಳನ್ನುದ್ದೀಪಿಸುವಲ್ಲಿ ಯಶಸ್ವಿಯಾಯಿತೆಂದರೆ, ಗ್ರಹಿಕೆಯ ಆಶಯ ಬಹುತೇಕ ಸರಿಯಿದೆಯೆಂದು ಭಾವಿಸಬಹುದು; ಇನ್ನು ಕವನದ ದನಿ ಚೆನ್ನಾಗಿ ಬಿಂಬಿತವಾಗಿದ್ದರೆ - ಅದಕ್ಕೆ ನಿರಂತರ ಸ್ಪೂರ್ತಿಯಾದ ನಿಮ್ಮಂತಹ ಸಂಪದಿಗರ ಪ್ರತಿಕ್ರಿಯೆ, ಪ್ರೋತ್ಸಾಹಗಳೆ ಮುಖ್ಯ ಕಾರಣ. ತಪ್ಪಿದ್ದಾಗ ತಿದ್ದುತ್ತಲೆ ಇರಿ, ಸರಿಯಿದ್ದಾಗ ಬೆನ್ನು ತಟ್ಟುತ್ತಲೆ ಇರಿ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.