ನಾ ಬರೆಯದ ಕಥೆ

0

ಖಾಲೀ ಪುಸ್ತಕದ ಕೊನೆಯ ಪುಟದಲಿ
ಬರೆದ ಹೆಸರು ನಿನ್ನದು…
ಮರೆಯ ಬಯಸಿದ ಬಾಳ ಕಥೆಯಲಿ
ನೆನಪಿಗೊಡೆತನ ನನ್ನದು...

ಕೃತಕ ಕಥೆಯಲಿ ಕಳೆದೆ ನಾನು
ನನ್ನ ಕನಸಲಿ ಕಂಡ ಆಸೆಗೆ...
ಕಥೆಯ ಕೃತಕತೆ ಅರಿತಮೇಲೆಯೂ
ಮುಗಿಸಲಾರೆ ನೋವುಮಾಡಿ ಮನಸಿಗೆ...

ಮನದ ಒಳಗಿನ ನೂರು ಭಾವವ
ಗೀಚಲಾರದೆ ಹೋದೆನು...
ನನ್ನ ಹತ್ತಿರ ಎಂದೂ ಬಾರದ
ನಿನಗಾಗೇ ನಾ ಕಾದೆನು...

ನನ್ನ ಕಥೆಯ ಖಾಲೀ ಪುಟಗಳೆ
ನನ್ನ ಮನಸಿಗೆ ಹಿಡಿದ ಕನ್ನಡಿ...
ಕಥೆಯು ಬಹಳ ದೊಡ್ಡದಿದ್ದರೂ
ಬರೆಯಲಾರದೆ ಹೋದೆ ಮುನ್ನುಡಿ...

ಕಥೆಯು ನಿನ್ನ ಕುರಿತೆ ಆದರೂ
ವ್ಯಥೆಗೆ ಹೊಣೆಯೆಲ್ಲ ನನ್ನದೇ...
ನಾ ಬರೆಯದ ಕಥೆ ಮುಗಿದೆಹೋದರು
ನಿನ್ನ ನೆನಪೇಕೆ ಹೀಗೆ ಕಾಡಿದೆ...
**********
ಸಂತೋಷ ಹೆಗಡೆ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.