ನೆನಪಿನ ಚಿತ್ರಕಲಾ ಶಾಲೆ: ತ್ಯಾಗ, ಸ್ಕೆಚ್ ಮತ್ತು ಮೆಕೆಟ್‌ಗಳ ನಡುವಿನ ತೂಗುಯ್ಯಾಲೆ ಭಾಗ-೬

0

 

 
                                                                            (೧೬)
 
ಸಂಜೆ ಆರು ಗಂಟೆಯಾಗುತ್ತಿತ್ತು. ಶಿಲ್ಪಕಲೆ ಮತ್ತು ಚಿತ್ರಕಲಾ ವಿಭಾಗದಲ್ಲಿ ಆಗಲೇ ದೀಪ ಹತ್ತಿಸಿದ್ದಾಗಿತ್ತು. ಕಾಲುಮುರಿದುಕೊಂಡ ನೋವಿನಲ್ಲಿ ಸಿ.ಅಶ್ವತ್ಥರ ಧ್ವನಿಯ ಮಟ್ಟದಲ್ಲಿ ಕಿರುಚುತ್ತಿದ್ದ ಮಲ್ಲುಮೋಗನನ ದನಿಯು ಈಗ ಪಿ.ಬಿ.ಶ್ರೀನಿವಾಸರ ಲೆವಲ್ಲಿಗೆ ಇಳಿದು, ಹರಿಹರನ್ನನ ಪಿಸುದನಿಯ ಲೆವಲ್ಲಿಗೆ ಅಥವ ಇಳಯರಾಜರ ಮೂಗಿನ ಧ್ವನಿಯ ಮಟ್ಟಕ್ಕೆ ಇಳಿದಿತ್ತು. ಇನ್ನೂ ಸ್ವಲ್ಪ ಹೊತ್ತಿನ ನಂತರ ಆತನ ಧ್ವನಿಯು ನಾಯಿಗುತ್ತಿಯೋ, ಕಿವಿಯೆಂಬ ನಾಯಿಯೋ ಏನನ್ನೋ ತಿಂದು ಗಂಟಲು ಕೆಟ್ಟಿಸಿಕೊಂಡು ಕುಯ್ಯೋಮರ್ರೋ ಎಂಬಂತೆ ಆಗಿತ್ತು ಮುರುಳಿಮೋಗನನ ದನಿ. ಕನ್ನಡ ಸಾಹಿತ್ಯದ ವಿಮರ್ಶೆಯು ದೃಶ್ಯಕಲೆಯ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯದಂತೆಯೂ ಕೇಳಿಸುತ್ತಿದು. 
 
ಮೋಗನ ನಿಂತು ಓಡಾಡಲು ಪ್ರಯತ್ನಿಸಿದಾಗ, ಅಸಮ’ಕಾಲಿ’ನ ಕಲಾವಿದನಂತೆ ಕಾಣತೊಡಗಿದ್ದ. ಹೆಚ್ಚೂ ಕಡಿಮೆ ಅಳಿದುಳಿದಿದ್ದ ವಿದ್ಯಾರ್ಥಿಗಳೆಲ್ಲರೂ ಶಿಲ್ಪಕಲಾ ವಿಭಾಗದಲ್ಲೇ ಸೇರಿದ್ದೆವು. ಆ ಕಡೆ ಚಿತ್ರಕಲಾ ವಿಭಾಗದಲ್ಲಿ ಕೇವಲ ಇಬ್ಬರಿದ್ದರು. ಅಲ್ಲ, ಇಬ್ಬರು ನೆಲದ ಮೇಲೆ ಮತ್ತೊಬ್ಬರು ಎಲ್ಲಿಯೂ ಇಲ್ಲದೆಯೂ ಅದೇ ಕೋಣೆಯಲ್ಲಿದ್ದರು. ವೀರಾ ’ಏನೋ ಬರೆಯುತ್ತಿದ್ದೇನೆ’ ಎಂದು ಅಲ್ಲಿಂದಲೇ ಕೂಗಿ ಹೇಳಿದ. ಅಣ್ತಮ್ಮ ಬಾಗಿಲಿನ ಬಳಿಯೇ ನಿಂತಿದ್ದಾತ, ಕ್ರಮೇಣ ಕುಂತಲ್ಲೇ, ಬೀಡಿ ಎಳೆಯುತ್ತಲೇ ತೂಕಡಿಸುತ್ತಿದ್ದ. ಆತ ಕಣ್ತೆಗೆದು ನಿದ್ರೆಮಾಡುವ ಸಾಮರ್ಥ್ಯವನ್ನು ರೂಢಿಸಿಕೊಂಡಿದ್ದು, ದೃಶ್ಯಕ್ಕೇ ಕೇಂದ್ರೀಕೃತವಾಗಿದ್ದ ನಮ್ಮ ಕಲಾಶಾಲೆಯಲ್ಲಿ ಬಹಳ ಮಹತ್ವಪೂರ್ಣ ಸಾಂಸ್ಕೃತಿಕ ನಿರ್ವಚನವಾಗಿತ್ತು ಆತನ ಈ ಕ್ರಿಯ.
 
ಪ್ರಶ್ನಾಮೂರ್ತಿಯ ಮುಂಡದ ಭಾಗವು ಶಿಲ್ಪಕಲಾ ವಿಭಾಗದಲ್ಲಿದ್ದರೂ ಸಹ ಅದರೊಳಗಿದ್ದ ಕಣ್ಣುಗಳು ಮಾತ್ರ ಚಿತ್ರಕಲಾ ವಿಭಾಗದಲ್ಲಿದ್ದ ಪ್ರಶ್ನಾಮೂರ್ತಿಯದ್ದೇ ಆದ ಕುಂಡದೆಡೆ ಮುಖಮಾಡಿ, ಅಕ್ಷರಶಃ ಹಾಗೆ ಮಾಡಲಾಗದ್ದರಿಂದ ಗೊಂದಲಕ್ಕೆ ಬಿದ್ದಿದ್ದವು. ಅಥವ ತನ್ನ ದೇಹದ ಆ ಭಾಗವು ವೀರಾ ಎಂಬ ತರಲೆಯ ಹಿಡಿತಕ್ಕೆ ಸಿಕ್ಕಿ ಏನೇನೆಲ್ಲಾ ಶೇಪು ಪಡೆಯಬಹುದು ಎಂಬ ಆತಂಕವನ್ನೇ ಚಿತ್ತಾರವನ್ನಾಗಿ ಕಲ್ಪಿಸಿಕೊಳ್ಳತೊಡಗಿತ್ತು. ಚೀನೀ ಕಲೆಯಲ್ಲಿ ತನ್ನ ಬಾಲವನ್ನು ಯಾವುದೋ ಪ್ರಾಣಿಯದ್ದು ಎಂದು ಭಾವಿಸಿ ತಿನ್ನುವಂತಹ ಕಲಾಇತಿಹಾಸದ ಚಿತ್ರವೊಂದನ್ನು ನೆನಪಿಸುತ್ತಿತ್ತು ಪ್ರಶ್ನೆಯ ಆತಂಕ. ಎಲ್ಲರೂ ಏಣಿ ಬರಲು ಕಾಯುತ್ತಿದ್ದೆವು. ಅಥವ ತರುವವರನ್ನು ನಿರೀಕ್ಷಿಸುತ್ತಿದ್ದರು. ಏಕೆಂದರೆ, ಪ್ರಶ್ನೆಯನ್ನು ಹಾಗೇ ಇಳಿಸುವ ಒರಟು ಪ್ರಯತ್ನ ಮಾಡಿದಲ್ಲಿ ಆತನಿಗೆ ಮಲ್ಟಿಪಲ್ ಫ್ರಾಕ್ಚರ್ ಆಗುವ ಸಾಧ್ಯತೆಯೇ ಹೆಚ್ಚಿತ್ತು. ಅದೂ ಎರಡು ಏಣಿಯ ಅವಶ್ಯಕತೆ ಇತ್ತು. ಅತ್ತಲೊಂದು, ಇತ್ತಲೊಂದು. ಪಕ್ಕಾ ಕೋಆರ್ಡಿನೇಷನ್ ಮೂಲಕ ಆತನನ್ನು ಹುಷಾರಾಗಿ ಧರೆಗಿಳಿಸಬೇಕಿತ್ತು.
 
ದಿನಾ ಸಾಯುವವರಿಗೆ ಅಳೋರ‍್ಯಾರು ಎನ್ನುವವರು ಮಾಡುವಂತೆ ಎಲ್ಲರೂ ಪ್ರಶ್ನಾಮೂರ್ತಿಯ ಭೌತಿಕ ಸಮಸ್ಯೆಯನ್ನು ಬದಿಗಿರಿಸಿ, ಮೇಲಿನವನ ಪಾದಕ್ಕರ್ಪಿಸಿ, ತಾತ್ವಿಕ ಸಂವಾದವನ್ನು ಆರಂಭಿಸಿದರುಃ
 
ಪ್ರಶ್ನೆಯನ್ನ ಕೆಳಗಿಳಿಸಿದ ಮೇಲೆ ಆತನ ಶೇಪು ಪ್ರಶ್ನಾಕಾರದಲ್ಲಿರುತ್ತದೆಯೋ ಅಥವ ಉತ್ತರ ರೂಪದಲ್ಲೋ? ಎಂದು ಕೇಳಿದ ಶೇಗಿ. ಶೇಗಿಯ ನಿಜ ನಾಮಧೇಯ ಶೇಷಗಿರಿ, ಅಥವ ಎಲ್ಲರೂ ಆತ್ಮೀಯವಾಗಿ ಕರೆಯುತ್ತಿದ್ದಂತೆ ’ಅವಶೇಷಗಿರಿ’. ಸ್ವಲ್ಪ ವರ್ಷಗಳ ನಂತರ ನಾವುಗಳೆಲ್ಲ ರವಷ್ಟು ಇಂಗ್ಲೀಷು ಕಲಿತ ನಂತರ, ಅದನ್ನು ನಮ್ಮಗಳಲ್ಲೇ ಇದ್ದಿರಬಹುದಾದ ಪೋಲೀತನವನ್ನು ಇನ್ನೂ ರವಷ್ಟು ಬೆರೆಸಿ, ’ಶೇಗಿ’ಯನ್ನು ’ಶಾಗಿ’ಯನ್ನಾಗಿಸಿದ್ದೆವು. ಕೊಳಕರು ಆತನನ್ನು ’ಶಾಬಿ’ ಎನ್ನುತ್ತಿದ್ದರು. ಆತನನ್ನು ಗೆಳೆಯರು ಕರೆಯುವ ರೀತಿಯಲ್ಲೇ ಯಾರ‍್ಯಾರಿಗೆ ಎಷ್ಟೆಷ್ಟು ಇಂಗ್ಲೀಸು ಬರುತ್ತಿತ್ತೆಂಬುದು ಗೊತ್ತಾಗಿಬಿಡುತ್ತಿತ್ತು. 
 
ಆತ ಉತ್ತರ ರೂಪಕ್ಕೆ ಬದಲಾಗಿದ್ದರೂ ಸಹ, ಉತ್ತರಕ್ಕೆ ಪ್ರಶ್ನೆಗಿದ್ದಂತೆ ’ಆಕಾರ’ ಎಂಬುದೊಂದಿರುತ್ತದೆಯೋ? ಎಂದು ಕೊಂಕು ನುಡಿದಿದ್ದ ಮಲ್ಲುಮೋಗನ್. ಯಾರೂ ಆತನಿಗೆ ಉತ್ತರ ಹೇಳುವ ’ಶೇಪಿ’ನಲ್ಲಿರಲಿಲ್ಲ. ತನ್ನ ಗಾಯಗೊಂಡ ಕಾಲಿನ ದುರವಸ್ಥೆಗೆ ನೇರವಾಗಲ್ಲದಿದ್ದರೂ, ಪ್ರಶ್ನೆಯೇ ಮೇಲಿನಿಂದ ಕಾರಣನಾದನೆಂಬ ಸಿಟ್ಟನ್ನು ಒಳಗೊಂಡಿದ್ದ ಅನುಮಾನವನ್ನೊಳಗೊಂಡ ಪ್ರಶ್ನೆಯಾಗಿತ್ತು ಮೋಗನನ ಒಳನೋಟವು.
ಮೊದಲೇ ಕಾರ್ಟೂನ್ ಇದ್ದ ಹಾಗಿದ್ದಾನೆ, ಈಗ ಥ್ರೀಡಿಯಿಂದ ಟೂಡಿ ಕಾರ್ಟೂನ್ ಆಗಿ ಮಾರ್ಪಾಡಾಗಿರುತ್ತಾನೆ ಬಿಡು, ಕೆಳಗಿಳಿದಾಗ.
ಮಲ್ಲು ಮೋಗನ ನಿನ್ನ ಈ ಅವಸ್ಥೆಗೆ ಕಾರಣ ಎಲ್ಲಾ ಆ ಮೇಲಿನವನ ದಯೆ ಕಣೋ.
ಮಕ್ಳಾ, ನನ್ನನ್ನು ಈ ಅವಸ್ಥೆಗೆ ತಂದ್ರೂ, ನನ್ನ ಬಗ್ಗೇನೇ ಮಾತಾಡ್ತಿದ್ರೂ ನನ್ನನ್ನೇ ಮಾತಾಡಿಸೋಲ್ವಲ್ರೋ ಯಾರೂ ಎಂದು ಅಶರೀರವಾಣಿ ಬಂದಂತೆ ಬಂದಿತು ಮೇಲುಸ್ತರದ ಪ್ರಶ್ನೆಯ ಪ್ರಶ್ನೆ.
ಪ್ರಶ್ನೆ, ನೀನು ಇಡಿಯ ಕಾಲೇಜಿನಲ್ಲೇ ಅತ್ಯಂತ ಚೇತೋಹಾರಿ ವ್ಯಕ್ತಿ. ನಿನ್ನನ್ನು ಯಾರೂ ಯಾಕೆ ಸೀರಿಯಸ್ಸಾಗಿ ತೆಗೆದುಕೊಳ್ಳೋಲ್ಲವೆಂದರೆ, ನೀನು ಗಂಭೀರ ಲೇಖನಗಳ ಅಡಿಟಿಪ್ಪಣಿ ಇದ್ದ ಹಾಗೆ, ಬೆಲ್ ಬಾಟಮ್ ಪ್ಯಾಂಟಿನ ಕಾಲಿನ ತುದಿಯ ಭಾಗದ ಜಿಪ್ ಇದ್ದ ಹಾಗೆ, ಅಣ್ಣಾವ್ರ ಸಿನೆಮದ ಟಿಕೆಟ್ ಇದ್ದ ಹಾಗೆ. ಆರಾಮವಾಗಿರು ಗುರುವೆ ಎಂದು ಸಮಾಧಾನ ಮಾಡಿದ ಅನೇಖ.
ಪ್ರಶ್ನಾಮೂರ್ತಿ ಇದ್ದಲ್ಲೇ, ಅಥವ ನೇತಾಡುತ್ತಿದ್ದಂತೆಯೇ ದುಃಖಿತನಾದ.
ಅದನ್ನರಿತ ಅನೇಖ ಕೂಡಲೆ ತನ್ನ ತಪ್ಪನ್ನು ಸರಿಮಾಡಿಕೊಂಡ, ಅಂದ್ರೆ ನಾನೇನು ಹೇಳಿದ್ದು ಅಂದ್ರೆ, ನೀನು ರಿಮೋಟ್ ಕಂಟ್ರೋಲಿನ ಶೆಲ್ ಇದ್ದ ಹಾಗೆ ಗುರುವೆ. ಶೆಲ್ ಇಲ್ಲದಿದ್ದರೆ ರಿಮೋಟ್ ಇದ್ದರೆಷ್ಟು ಇಲ್ಲದಿದ್ದರೆಷ್ಟು, ಅಲ್ಲವೆ? ಎಂದ. ಪ್ರಶ್ನೆ ಚಾರ್ಜ್ ಆದವನಂತೆ ಪ್ರಸನ್ನವದನನಾದ. ಆತನ ದೇಹದಾಕಾರವು ಪ್ರಶ್ನಾಕಾರದಿಂದ ಫುಲ್ ಸ್ಟಾಪಿಗೆ ಬಂದಂತಾಯಿತು.
 
(೧೭)
 
ಈ ನಡುವೆ ಒಂದು ಸಮಸ್ಯೆ ಉದ್ಭವವಾಯಿತು. ಯಾರು? ಯಾರು? ಎಲ್ಲಿ? ಎಂದು ಎಲ್ಲರೂ ಎಲ್ಲರನ್ನೂ ಕೇಳತೊಡಗಿದರು. ಆಗಿದ್ದಿದ್ದಿಷ್ಟು. ಏಣಿ, ಅಥವ ಏಣಿಗಳನ್ನು ತರಲು ಯಾರು ಹೋಗಿದ್ದಾರೆ ಎಂದು ಯಾರಿಗೂ ಗೊತ್ತಿರಲಿಲ್ಲ. ಯಾರೋ ಹೋಗಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಹೋದವರು ಇಲ್ಲಿಲ್ಲವೆಂದಾರರೆ, ಇಲ್ಲಿಲ್ಲದವರ‍್ಯಾರ‍್ಯಾರು ಎಂದು ಲೆಕ್ಕ ತೆಗೆದುಕೊಳ್ಳಲು ಪ್ರಾರಂಭಿಸಿದೆವು. ಹೋದವರಲ್ಲಿ ಏಣಿ ತರಲು ಇಬ್ಬರು ಮೂವರು ಹೋಗಿದ್ದಲ್ಲಿ, ಉಳಿದವರೆಲ್ಲ ಮನೆಗೆ ಹೋದವರೇ. ಹಾಗೆ ಹೊರಹೋದವರ ನಡುವೆ ವ್ಯತ್ಯಾಸ ಮಾಡಲಾಗದೆ, ಏನೂ ಮಾಡಲಾಗದೆ, ಮತ್ತಿಬ್ಬರನ್ನು ಏಣಿ ತರಲು ಹೋದವರನ್ನು ಹುಡುಕಲು ಮತ್ತು/ಅಥವ ಮತ್ತೆರೆಡು ಏಣಿ ತರಲು ಕಳಿಸಿದೆವು.  
 
ಪ್ರಶ್ನಾಮೂರ್ತಿ ಆಗಲೇ ಮಾಡೆಲ್ ಆಗಿ ಪರಿವರ್ತಿತನಾಗಿಬಿಟ್ಟಿದ್ದ. ಮಲ್ಲುಮೋಗನ ಕಾಲ್ಮುರಿತದಿಂದ ಸುಧಾರಿಸಿಕೊಂಡು, ಕೈಕೆಲಸದಲ್ಲಿ ತೊಡಗಿದ್ದ. ಅಂದರೆ ನೇತಾಡುತ್ತಿದ್ದ ಪ್ರಶ್ನಾಮೂರ್ತಿಯ ಶಿಲ್ಪದ ಮಕೆಟ್ (ಜೇಡಿಮಣ್ಣಲ್ಲಿ ಕರಡುಪ್ರತಿ) ನಿರ್ಮಿಸತೊಡಗಿದ್ದ. ಒಂದಿಬ್ಬರು ಆಗಲೇ ಪ್ರಶ್ನಾಮೂರ್ತಿಯ ಕರಡು ರೇಖಾಚಿತ್ರವನ್ನು ಬಿಡಿಸತೊಡಗಿದ್ದರು. ಕಿಂಡಿಯಿಂದ ಕ್ರಮೇಣ ಕೈಗಳನ್ನು ಮುಂಡವಿದ್ದ ಶಿಲ್ಪವಿಭಾಗದೆಡೆಗೆ ಇಳೆಬಿಟ್ಟ ಪ್ರಶ್ನೆಯು, ತನ್ನ ಹೇರ್ ಸ್ಟೈಲ್ ಅನ್ನು ಸರಿಮಾಡಿಕೊಂಡ. ಗುರುವೆ, ನಾವೆಲ್ಲಾ ಬಿಡಿಸುತ್ತಿರುವುದು ನಿನ್ನ ರೇಖಾಚಿತ್ರವೇ ಹೊರತು ನಿನ್ನ ಫೋಟೋ ಕ್ಲಿಕ್ಕಿಸುತ್ತಿಲ್ಲ, ಎಂದದಾರೋ ಲೇವಡಿ ಮಾಡಿದರು. ಹೊಸದಾಗಿ ಬಂದು, ಪ್ರಶ್ನೆಯನ್ನು ನೋಡಿ ಗಾಭರಿಬಿದ್ದವರಿಗೆಲ್ಲ, ಪ್ರಶ್ನೆಯೇ ಸಮಾಧಾನ ಮಾಡುತ್ತಿದ್ದ, ಡೋಂಟ್ ವರಿ ಮ್ಯಾನ್. ನಾನು ಓಕೆ. ಐ ಆಮ್ ಫೈನ್. ಮಿಕ್ಕ ಡೀಟೈಲ್ ಎಲ್ಲ ಮಮಾನನ್ನು ಕೇಳಿಕೊಳ್ಳಿ ಎಂದು. ಮನೆಗೆ ಹೋಗಿದ್ದವರಲ್ಲಿ ಕೆಲವರು, ಕುಮಾರ‍್ಸ್ ಟೀ ಅಂಗಡಿಯಲ್ಲಿ ಟೀ ಕುಡಿದು ಹಾಗೇ ಬಸ್ ಹತ್ತಲು ಹೊರಟಿದ್ದ ವಿದ್ಯಾರ್ಥಿಗಳೂ ಸಹ, ’ಪ್ರಶ್ನೆಯು ನೇತಾಡುತ್ತಿದ್ದ’ ಸುದ್ಧಿ ಕೇಳಿ ವಾಪಸ್ ಬಂದಿದ್ದರು. ’ಯಾರೋ ಸಿಕ್ಕಿಕೊಂಡಿದ್ದರೆ ನಾಳೆ ಬಂದು ನೋಡುತ್ತಿದ್ದೆವು. ಆದರೆ ನಮ್ಮ ಪ್ರೀತಿಯ ಪ್ರಶ್ನೆಯಲ್ಲವೆ. ಅದಕ್ಕೆ ಬಂದೆವು ಪ್ರಶ್ನೆ’, ಎಂದದಾರೋ ಹೇಳಿದಾಗ ಪ್ರಶ್ನೆಗೆ ಆತ್ಮೀಯತೆಯ ಭಾವಾವೇಷವುಕ್ಕಿ, ಹರಿದು, ಆತನ ಕಂಗಳಲ್ಲಿ ನೀರು ಹರಿಯತೊಡಗಿತು. ಆತನ ಅಸ್ತಿಪಂಜರ ಸೈಜಿನ ದೇಹ ಅಭಿಮಾನದಿಂದ ಸ್ವಲ್ಪ ಉಬ್ಬಿದಂತಾಗಿ, ಅದು ತಗುಲಿಹಾಕಿಕೊಂಡಿದ್ದ ಸಂದಿಯು ಇನ್ನೂ ಇಕ್ಕಾಟ್ಟಾದಂತಾಯ್ತು. ’ಇರು, ಆ ನೀರು ಆತನ ರುಂಡ ಮತ್ತು ಕಿಂಡಿಯ ನಡುವೆ ಇರುವ ಅಂಟುಗುಣವನ್ನು ಬಿಡಿಸಿ ಆತ ಜಾರಿಕೊಂಡು ಕೆಳಗೆ ಬಿದ್ದಾನು’ ಎಂದು ಮಮಾ ತಮಾಷೆ ಮಾಡುವಾಗ, ಪ್ರಶ್ನೆಯು ಸ್ವಲ್ಪ ಹಾಗೆ ಜಾರಿದಂತಾಯಿತು, ಹಿಂದಕ್ಕೆ. ಅದು ಒಂದು ಕ್ಷಣದ ಭ್ರಮೆಯಷ್ಟೇ ಎಂದು ಹೇಳುವ ಆವಶ್ಯಕತೆ ಇಲ್ಲವಷ್ಟೇ.
 
           ಪ್ರಶ್ನಾರ್ಥಕವಾಗಿದ್ದ ಸಮಸ್ಯೆಯನ್ನು ಕುರಿತು ಚರ್ಚೆಗೆ ಬಿಸಿ ಏರಿತುಃ ಸುಮ್ನಿರ್ರೋ, ಆತ ನರಳ್ತಾ ಇದ್ದಾನೆ. ನಾವೆಲ್ಲ ಆತನನ್ನ ಅಕ್ಷರಶಃ ಮುಟ್ಟುಬಲ್ಲ ಮಟ್ಟದ ಎತ್ತರಕ್ಕೂ ಬೆಳೆದಿಲ್ಲ. ಆತನ ಬಗ್ಗೆ ಮಾತನಾಡುವುದು ಬೇಡ. 
ಏನಪ್ಪಾ ಕಲಾಕೃತಿಗಳೆಲ್ಲ ಹೇಗೆ ಕಾಣ್ತಿದ್ದಾವೆ ಅಲ್ಲಿಂದ? ಎಂದು ಶಿಲ್ಪಕಲಾ ವಿಭಾಗದ ಸಹಾಯಕ ಮಾರಾಯಣನೂ ದನಿಗೂಡಿಸಿದ್ದ. ಆತ ಪರಿಷತ್ತಿನ ಗ್ಯಾಲರಿಗಳಲ್ಲಿ ಕಲಾಕೃತಿಗಳನ್ನು ಡಿಸ್‌ಪ್ಲೇ ಮಾಡುವ ಎಕ್ಸ್‌ಪರ್ಟ್ ಕೂಡ ಆಗಿಬಿಟ್ಟಿದ್ದ. ’ಗ್ಯಾಲರಿಯ ಕೋಣೆಯೊಂದರಲ್ಲಿ ಡಿಸ್‌ಪ್ಲೇ ಮಾಡಬೇಕಿರುವ ಎಲ್ಲ ಕಲಾಕೃತಿಗಳ ಒಟ್ಟಾರೆ ಅಗಲಕ್ಕಿಂತಲೂ ಮೂರು ಪಟ್ಟು ಹೆಚ್ಚಿರಬೇಕು ಅವುಗಳ ನಡುವಣ ಖಾಲಿ ಗೋಡೆ’, ’ಪ್ರತಿ ಕೃತಿಯ ಮಧ್ಯಭಾಗವು ಮನುಷ್ಯನೊಬ್ಬ ಅದರೆದಿರು ನಿಂತಾಗ, ಆತನ/ಆಕೆಯ ಕಣ್ಣುಗಳ ಎತ್ತರಕ್ಕಿರಬೇಕು’, ಇತ್ಯಾದಿ ರೂಲ್ಸುಗಳನ್ನು ಸದಾ ಎಲ್ಲರ ಕಿವಿಗಳೂ ತೂತು ಬೀಳುವಷ್ಟು ಜೋರಾಗಿ ಹೇಳುತ್ತಿದ್ದರಿಂದ ಆತನನ್ನು ಮಾರಾಂiiಣ ಎಂದು ಕರೆಯಲಾಗುತ್ತಿತ್ತು. 
 
ಆ ವಿಶೇಷ ದಿನದ ಸಂಜೆ ಏಳುಗಂಟೆಯ ಸಮಯವಾಗತೊಡಗಿತ್ತು. 
 
ಶಿಲ್ಪಕಲಾ ವಿಭಾಗದಲ್ಲಿ ಸುಮಾರು ಇಪ್ಪತ್ತು ಮಂದಿ ಹಿರಿಕಿರಿಯ ಕಲಾವಿದರೆಲ್ಲಾ ನೆರೆದಿದ್ದರು. ೧೯೮೫ರಿಂದ ೯೦ರವರೆಗೂ ನಾನಲ್ಲಿ ಚಿತ್ರಕಲೆಯ ಸ್ನಾತಕ ಪದವಿಗಾಗಿ ಅಧ್ಯಯನ ಮಾಡಿದ್ದು. ೧೯೯೭ರ ಸುಮಾರಿನ ಘಟನೆಯಿದು. ಈ ಘಟನೆಯ ನಂತರವಷ್ಟೇ ಪ್ರಶ್ನಾಮೂರ್ತಿಗೆ ಮಮಾ, ಡಾಡಿ (ಬಿಗ್ ಡ್ಯಾಡಿ) ಮತ್ತು ಕಲ್ಪನಕ್ಕರ ಪ್ರೇರಣೆಯಿಂದಾಗಿ, ಹನುಮಂತನ ಪಾತ್ರವನ್ನು ತೊಡಿಸಿ, ಕಬ್ಬನ್ ಪಾರ್ಕಿನ ಮರ ಹತ್ತಿಸಿ, ಆತನ ಕಣ್ಣನ್ನು ಮಾತ್ರ ಮುಚ್ಚಿಸಿ, ಎಲ್ಲರೂ ನೋಡುನೋಡುತ್ತಿದ್ದಂತೆಯೆ ಶೂಟಿಂಗ್ ಸಿಬ್ಬಂದಿಯೊಂದಿಗೆ ಕಾರಿನಲ್ಲಿ ಅಲ್ಲಿಂದ ಜಾಗ ಖಾಲಿ ಮಾಡಿ, ಕಾಸು ಇಟ್ಟಿಕೊಳ್ಳಲೂ ಜೇಬಿಲ್ಲದ ಹನುಮನವತಾರದಲ್ಲೇ ಪ್ರಶ್ನೆಯನ್ನು ಆಟೋದಲ್ಲಿ ಶ್ರೀರಾಮಪುರದ ತನ್ನ ಮನೆಯವರೆಗೂ ಹೋಗುವಂತೆ ಮಾಡಿದ್ದು; ಮತ್ತು ಇದಕ್ಕೆಲ್ಲಾ ಸಾಕ್ಷಿಯಾಗಿ ಚಿತ್ರಕಲಾ ಪರಿಷತ್ತಿನ ಆಗಿನ ಬಹುತೇಕ ಪ್ರತಿಭಾವಂತರೆಲ್ಲರೂ (’ತರಲೆಗಳು’ ಎಂದರ್ಥ) ಕಬ್ಬನ್ ಪಾರ್ಕಿನ ಮರಗಿಡಬಳ್ಳಿಗಳ ಮರೆಯಿಂದ ಇಡೀ ಪ್ರಸಂಗವನ್ನು ನೋಡುತ್ತ, ವಿಕಾಸಪಥದಲ್ಲಿ ತಿರುವುಮರುವಾಗಿ ಚಲಿಸಬಲ್ಲ ಮನುಷ್ಯನೊಬ್ಬನ ಅವತಾರವನ್ನೂ, ಅದನ್ನೂ ನೋಡುವಲ್ಲಿ ಸಮಕಾಲೀನರಿಗೆ ಇರುವ ಪ್ರಾದಿಮ ಆಸಕ್ತಿಯನ್ನೂ-ಒಟ್ಟಾಗಿ ಕಂಡುಕೊಂಡಿದ್ದರು. (ಓದಿಃ ಈ ವಿವರವು ’ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ’ ಪುಸ್ತಕದಲ್ಲಿದೆ, <hಣಣಠಿ://sಚಿmಠಿಚಿಜಚಿ.ಟಿeಣ/ಚಿಡಿಣiಛಿಟe/೨೬೮೨೮>).
 
ಪ್ರಶ್ನೆಯ ತ್ರಿಶಂಕು ಸ್ಥಿತಿಯೇ ಸ್ಥಾವರವಾದಂತಾಗಿ ಹೋಗಿತ್ತು. ಏಣಿ ತರುವವರಲ್ಲಿ ಬಹುತೇಕರು ಮನೆಗೆ ಹೋಗಿಬಿಟ್ಟಿದ್ದರು. ’ಏರುವವರೆಗೂ ಏಣಿ’ ಎಂಬ ಗಾದೆಯು ಇಲ್ಲಿ ಕಲಸುಮಲೋಗರವಾಗಿಬಿಟ್ಟಿತ್ತು. ವಿದ್ಯಾರ್ಥಿಗಳಾಗಿದ್ದ ನಮ್ಮಗಳ ಮೌಡ್ಯದಿಂದಾಗಿ ಈ ಘಟನೆಯ ಪರಿಹಾರವು ತುಂಬಾ ತಡವಾಗುವಂತಾಗಿ, ಬುದ್ಧಿವಂತ ವರ್ಗದವರು ’ಅಮಾನುಷ’ ಎಂದು ಕೆಟಗರೈಸ್ ಮಾಡುವ ಲೆವೆಲ್ಲಿಗೆ ಬಂದು ತಲುಪಿತ್ತು. ಪ್ರಶ್ನಾಮೂರ್ತಿ ಕ್ರಮೇಣ ತ್ರಾಣ ಕಳೆದುಕೊಳ್ಳತೊಡಗಿದ್ದ. ಕುರ್ಚಿಯನ್ನು ಹಾಕಿಕೊಂಡೇ ಅದಾರೋ ಹುಡುಗ, ಆತನಿಗೆ ಅದಾರೋ ಹುಡುಗಿ--ಪ್ರೀತಿಯ ಆರಂಭಿಕ ಹಂತವೆಂದು ಭಾವಿಸಿಯೋ ಏನೋ-ಮಧ್ಯಾಹ್ನ ಕೊಟ್ಟಿದ್ದ ಫ್ರೂಟಿ ಜ್ಯೂಸನ್ನು, ಪ್ರಶ್ನೆಗೆ ಕುಡಿಸಿದ್ದ, ಅಮೂಲ್ಯವಾದದ್ದೇನನ್ನೋ ಕಳೆದುಕೊಂಡ ಭಾವದಲ್ಲಿ. ಬಹುಶಃ ಆ ಫ್ರೂಟಿ ಪ್ಯಾಕನ್ನು, ಅದರೊಳಗಿನ ಜ್ಯೂಸಿನ ಸಮೇತ, ತನ್ನ ಮೊಮ್ಮೊಕ್ಕಳಿಗೆ ಗಿಫ್ಟ್ ಕೊಡುವಷ್ಟು ಸುದೀರ್ಘ ಕಾಲ ಇರಿಸಿಕೊಳ್ಳುವ ಆ ಹುಡುಗನ ತುಡಿತವು, ಒಂದು ಅಣ್ಣಾವ್ರ ಸಿನೆಮ ನೋಡಿಬರಲು ಬೇಕಾಗುವ ಕಾಲದಷ್ಟು ಹೊತ್ತೂ ಸಹ (ಕ್ಯೂ ನಿಂತು, ಟಿಕೆಟ್ ’ಸಂಪಾದಿಸಿ’, ಹಾಗಾಗಿಯೂ ಥಿಯೇಟರಿನೊಳಕ್ಕೆ ನುಸುಳಿ, ಸೀಟು ಗಿಟ್ಟಿಸಿ, ಸಿನೆಮ ನೋಡಿ, ಅದನ್ನು ಹೊರಗೆ ಸೆಲಬ್ರೇಟ್ ಮಾಡಿ ಮನೆ ಸೇರಿವ ಒಟ್ಟಾರೆ ಹೊತ್ತನ್ನು ’ಅಣ್ಣಾವ್ರ ಸಿನೆಮ ನೋಡುವ ಹೊತ್ತು (ಸಮಯ)’ ಎಂದು ಆಗೆಲ್ಲ ನಾವುಗಳು ಹುಟ್ಟಿಹಾಕಿದ್ದ ನಂಬಿಕೆಯಾಗಿತ್ತು). ಅನೇಖ ’ಖಾ’ಗುಣಿತದ ತಪ್ಪುಗಳನ್ನು ಮಾಡಿದರೂ ಸಹ, ಇಂತಹ ನವನವೀನ ’ರಾಜ್’ಕೀಯ ಗಾದೆಗಳನ್ನು ಹುಟ್ಟಿಹಾಕುವಲ್ಲಿ ನಿಪುಣನಾಗಿದ್ದ. 
 
’ಸಾರಿ ಮಗಾ. ನನಗೋಸ್ಕರ ನಿನ್ನ ಪ್ರೀತೀನೇ ತ್ಯಾಗ ಮಾಡಿದ್ಯಲ್ಲೋ’ ಎಂದು ಪ್ರಶ್ನೆ ಆ ಸುಸ್ತಿನ ನಡುವೆಯೂ, ಜ್ಯೂಸ್ ಕುಡಿಸಿದ ಮುರುಳಿಗೆ ಧನ್ಯವಾದ ಹೇಳುವ ಮಾನವೀಯತೆಯನ್ನು ಮೆರೆದಿದ್ದ. ಟೀನೇಜಿನಲ್ಲಿ, ಅದು ಉಂಟಾದವರನ್ನು ಹೊರತುಪಡಿಸಿ ಮಿಕ್ಕವರಿಗೆಲ್ಲ ನಗೆಬುಗ್ಗೆ ಉಕ್ಕಿಸುವುದನ್ನು ವಿರಹ ಎನ್ನುತ್ತೇವೆ. ಈಗ ಜ್ಯೂಸ್ ಮುರುಳಿ ಒಮ್ಮೆಲೆ ತನ್ನ ಪಾಡಿಗೆ ತಾನೇ ವಿರಹಿ ಹಾಗೂ ಇತರರ ದೃಷ್ಟಿಯಲ್ಲಿ ತ್ಯಾಗಿಯಾಗಿಬಿಟ್ಟಿದ್ದ!//
 
 
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):