ನೆನಪಿನ ಚಿತ್ರಕಲಾ ಶಾಲೆ: ಭಾಗ ೧೪ - ಕಾಲಕುಂಠಿತ ಪತ್ರೋತ್ತರಗಳು

4

 

 
(೩೬)

ಸೆಪ್ಟೆಂಬರ್, ೧೯೮೮: 
ಆ ಹುಣ್ಣಿಮೆಯೋ ಅಥವ ಅಮಾವಾಸ್ಯೆಯ ರಾತ್ರಿಯಂದೋ ಕತ್ತಲಿನಲ್ಲಿ ಅನೇಖನ ಫೋಟೋಗಳನ್ನು ತೆಗೆದು ಪ್ರಿಂಟ್ ಹಾಕಿಸಿದಾಗ, ಮೂಡಿದ ವಿಚಿತ್ರವನ್ನು ಅದನ್ನು ತೆಗೆದ ವೀರಾನಿಗೆ ಮಾತ್ರ ಅರಗಿಸಿಕೊಳ್ಳಲಿಕ್ಕೆ ಆಗಿರಲಿಲ್ಲ. ಈ ಕಗೂ ಖಗೂ ವ್ಯತ್ಯಾಸ ಗೊತ್ತಿಲ್ಲದ ನನ್ನ ಸಹಪಾಠಿ ಇಷ್ಟು ಖತರ್ನಾಕಾಗಿ ಮಾಯಾಮಂತ್ರ ಮಾಡುತ್ತಾನಲ್ಲ ಎಂದು ಮೂಗಿನ ಮೇಲೆ ಬೆರೆಳಿಟ್ಟುಕೊಂಡಿದ್ದ ವೀರಾ, ಅನೇಖನ ಫೋಟೋದೊಳಗಿನ ಮೂಗಿನ ಮೇಲೆ. ಅಲ್ಲೆಲ್ಲೋ ಕಾಂಪೌಂಡಿನ ಮೂಲೆಯಲ್ಲಿ ಗೋಚರಿಸುತ್ತಿದ್ದ ಅನೇಖ, ಹಾಗೆ ಕಾಣುತ್ತಿದ್ದುದು ಸುಮಾರು ಇನ್ನೂರು ಅಡಿ ದೂರದ ಕಟ್ಟಡದ ಮೇಲ್ಛಾವಣೆಯ ಮೇಲಿದ್ದ ಟ್ರೈಪಾಡಿನ ಮೇಲಿದ್ದ ಕ್ಯಾಮರದ ಲೆನ್ಸನ್ನೊಳಗಿನಿಂದ. ಅಲ್ಲಿ ಕ್ಯಾಮರಾವನ್ನು ಹಿಡಿದಿದ್ದ ವೀರಾ, ಅನೇಖನ ಛಾಯಾಚಿತ್ರವನ್ನು ಸೆರೆಹಿಡಿವ ಮುನ್ನವೇ ಹಿಂದಿರುಗಿ ನೋಡಲಾಗಿ, ಹಿಂದೆ ಅನೇಖ ನಿಂತಿದ್ದ-ಕ್ಷಣಾರ್ಧದಲ್ಲಿ ಇನ್ನೂರು ಅಡಿ ಅಂತರವನ್ನು, ಅದೂ ಕಟ್ಟಡದ ಮೇಲ್ಭಾಗಕ್ಕೆ ಮನುಷ್ಯರಾದವರಾರೂ ಬರಲು ಆಗದಿರುವಾಗ, ಅನೇಖ ಬಂದಿದ್ದ, ಸ್ತಬ್ಧನಾಗಿ ನಿಂತಿದ್ದ ಮತ್ತು ವೀರಾ ಆತನನ್ನು ದಾಟಿ ಹೋಗುವಾಗ, ಆತನ ಮೂಲಕ ಹಾಯ್ದು ಹೋಗಿ, ಅದನ್ನು ಫೋಟೋ ತೆಗೆದಾಗ ಮರುದಿನ ಡೆವಲಪ್ ಮಾಡಲಾದ ಛಾಯಾಚಿತ್ರಗಳಲ್ಲಿ ಬರಿಯ ಕಣ್ಣಿಗೆ ಕಂಡದ್ದು ಮಾಯವಾಗಿ, ಬದಲಿಗೆ ಗೋಡೆಗೆ ವಿವಿಧ ಭಂಗಿಗಳಲ್ಲಿ ಅಂಟಿ ನಿಂತಂತಿದ್ದ ಅನೇಖ! ನನ್ನ ಕಣ್ಣುಗಳಿಗೆ ಬೇರೆ ಬೇರೆ ಪವರ್ ಇರೋ ಲೆನ್ಸ್ ಅಂಟಿಸಿಬಿಟ್ಟು, ಬೇಕಾದಾಗ ಬೇಡವಾದ ಝೂಮ್ ಇನ್, ಝೂಮ್ ಔಟ್ ಆಪರೇಟ್ ಆದಂತಾಯ್ತು ಆ ದಿನ ರಾತ್ರಿ, ಎಂದು ಸ್ವಯಂ ಲೇವಡಿಯ ದನಿಯಲ್ಲಿ ರಾತ್ರಿಯ ಘಟನೆಯ ಬಗ್ಗೆ ಯಾರಾದರೂ ವಿಚಾರಿಸುವ ಮುನ್ನವೇ, ವೀರಾನೇ ಹೇಳಿಬಿಡುತ್ತಿದ್ದ, ತನಗೆ ಎಂಬರಾಸ್‌ಮೆಂಟ್ ಆಗದಿರಲೆಂದು. ಡ್ರಗ್ಸ್, ಗಾಂಜಾ, ಚರಸ್ ಇತ್ಯಾದಿಗಳಿರಲಿ ಬೀಡಿ, ಸಿಗರೇಟುಗಳನ್ನೂ ಸಹ ಆತ ಸೇದುತ್ತಿರಲಿಲ್ಲ. ಆದ್ದರಿಂದ ಆತ ನಿಜವೆಂದು ಭಾವಿಸಿ ಹೇಳಿದ್ದನ್ನು ಸುಳ್ಳೆಂದು ಮತ್ಯಾರೂ ಸಾಬೀತು ಮಾಡಲಾಗಿರಲಿಲ್ಲ  
 
ಈ ಘಟನೆ ಒಂದು ಇನ್ನೂರೈವತ್ತು ವರ್ಷಗಳ ಹಿಂದೆ ನಡೆದಿದ್ದಲ್ಲಿ ನೀನು ಆಸ್ಪತ್ರೆ ಅಡ್ಮಿಟ್ ಆಗುವ ಪ್ರಮೇಯವೇ ಬರುತ್ತಿರಲಿಲ್ಲ ಎಂದಿದ್ದ ನಲ್ಲಸಿವನ್.
ಯಾಕೆ? ಆಗೆಲ್ಲಾ ಆಸ್ಪತ್ರೆಗಳು ಇರ್ಲಿಲ್ವೆ? ಎಂದು ಕಿಚಾಯಿಸಿದ್ದಳು ಸೋಕುಮಾರಿ.
ಅಲ್ಲ. ಆಗೆಲ್ಲ ಕ್ಯಾಮರಾನೇ ಇನ್ನೂ ಅನ್ವೇಷಣೆಗೊಂಡಿರಲಿಲ್ಲವಲ್ಲ. ನಾಯಿ ಕಣ್ಣು, ಹದ್ದಿನ ಕಣ್ಣುಗಳಿದ್ದಂತೆ ಕ್ಯಾಮರಾಕಣ್ಣು ಕೂಡ ಅಷ್ಟೇ ಅಪಶಕುನದ್ದು. ಅದಕ್ಕೆ ಯಾರಾದರೂ ಸತ್ತಾಗ ಅಥವ ಹುಟ್ಟಿದ ಮಗುವಿನ ಫೋಟೋ ತೆಗೆಯೋಲ್ಲ ಎಂದು ವಿವರಣೆ ನೀಡಿದ್ದ ನಲ್ಲಸಿವನ್.
ಇನ್ನೊಂದೆರೆಡ್ ವರ್ಷ ಸುಮ್ಮನಿರು, ಅವೆಲ್ಲಾ ಮಾಯವಾಗಿ, ಎಲ್ಲಾರೂ ಎಲ್ಲಾರ್ನೂ ಯಾವಾಗಲೂ ನೋಡ್ತಿರ್ತಾರೆ. ಜನಕ್ಕೆ ಪ್ರೈವೆಸಿ ಅನ್ನೋದೇ ಇರದೆ, ಕೊನೆಗೆ ಬಾಥ್ರೂಮಿನಲ್ಲೂ ಕ್ಯಾಮರ ಇರಿಸಿಬಿಟ್ಟಿರುತ್ತಾರೆ. 
ಹೌದು, ಅಲ್ಲಿ ದೇಹಬಾಧೆ ತೀರಿಸಿಕೊಳ್ಳುವವರ ಮೂತಿಗೆ ಕ್ಯಾಮರ ಹಿಡಿದು, ಸ್ಮೈಲ್ ಪ್ಲೀಸ್ ಅನ್ನುತ್ತಾರೆ, ಅಲ್ಲವೆ ಎಂದಿದ್ದಳು ಸೋಕುಮಾರಿ. 
ಅಂತಲ್ಲಿ ಹುಡುಗ್ರು ಇದ್ದ ಪಕ್ಷದಲ್ಲಿ ಮಾತ್ರ ನಿಂತುಕೊಂಡೇ ಫೋಟೋ ತೆಗೆಯಬೇಕಾಗುತ್ತೆ ಎಂದ ವೀರಾನ ಮಾತನ್ನು ಅರ್ಥಮಾಡಿಕೊಳ್ಳಲು ಸುಮಾರು ಕಾಲ ತಲೆಕೆಡಿಸಿಕೊಂಡ ಸೋಕುಮಾರಿ, ಅದು ಅರ್ಥವಾದ ಕೂಡಲೆ ಆತನನ್ನು ಓಡಿಸಿಕೊಂಡು ಹೋಗಿದ್ದಳು, ಯಾತ್ರಲ್ಲಿ ಹೊಡೀಬೇಕು ನಿನಗೆ ಎಂದು ಆ ಯಾತರಲ್ಲದ ಬ್ರಷನ್ನು ಕೈಯಲ್ಲಿ ಹಿಡಿದು ಆತನನ್ನು ಚುಚ್ಚಿಬಿಡುವಂತೆ ಅಭಿನಯಿಸುತ್ತ!    
(೩೭)
ಮುಂದೊಂದು ದಿನ ಪ್ರಶ್ನಾಮೂರ್ತಿ ಆ ದುರದೃಷ್ಣಕರ ಸಂಜೆಯಂದು ಮಮಾನ ಪ್ರೇರಣೆಯಿಂದ ಪಕ್ಕದ ಕೋಣೆಯ ಮಾವಿನಹಣ್ಣುಗಳನ್ನು ಕದಿಯುವ ಪ್ಲಾನ್ ಅನ್ನು ರಿಹರ್ಸಲ್ ಮಾಡಲು ಹೋಗಿ, ಗಂಟೆಗಟ್ಟಲೆ ನರಸಿಂಹಾವತಾರಿಯಾಗಿ ಅತ್ತ ಶಿಲ್ಪಕಲಾ ವಿಭಾಗಕ್ಕೂ ಇತ್ತ ಚಿತ್ರಕಲಾ ವಿಭಾಗಕ್ಕೂ ಸೇರದಂತೆ ನಡುವಿನ ಗೋಡೆಯ ಎಂಟಡಿ ಎತ್ತರದ ಕಿಂಡಿಯಲ್ಲಿ ಸಿಕ್ಕಿಕೊಳ್ಳುವುದಕ್ಕೂ ಮುಂಚೆ ನಡೆದಿದ್ದ ಘಟನೆಯೇ ವೀರಾ ಅನೇಖನ ಛಾಯಾಚಿತ್ರ ತೆಗೆದ ಪ್ರಸಂಗ. ಜಾಪಾಡು ಮಾತ್ರೆ ಹಾಕಿದ್ದ ಫ್ಲಾಸ್ಕಿನ ತುಂಬ ಇದ್ದ ಚಹಾವನ್ನು ಸ್ವತಃ ತಾನೇ ಕುಡಿದು ಫಜೀತಿಗೆ ಸಿಕ್ಕಿಕೊಂಡದ್ದೂ ಆ ಪ್ರಸಂಗದ ಭಾಗವಾಗಿತ್ತು. ಅದಾದ ನಂತರ ಅನೇಖನಿಗೆ ಒಂದಂಶ ಸ್ಪಷ್ಟವಾಗಿತ್ತು: ತನ್ನಿಂದಾಗಿ ತನ್ನ ಸುತ್ತಲೂ ಏನೋ ವಿಶೇಷ ನಡೆಯುತ್ತಿದೆ ಮತ್ತು ಅದೇನೆಂದು ತನಗೇ ಅರ್ಥೈಸಲಾಗುತ್ತಿಲ್ಲ ಎಂಬ ಅರಿವು ಬಂದುಬಿಟ್ಟಿತ್ತು ಅನೇಖನಿಗೆ. ವೀರಾ ಫೋಟೋ ತೆಗೆದದ್ದೊಂದೆಡೆಯಾದರೆ, ಚಿತ್ರದಲ್ಲಿ ಮೂಡಿದ್ದೊಂದು ಆಗಿದ್ದಿದ್ದು ವೀರಾನೊಬ್ಬನಿಗೆ ಮಾತ್ರ (ಅನೇಖನನ್ನು ಹೊರತುಪಡಿಸಿ) ಗಮನಕ್ಕೆ ಬಂದಿತ್ತು. ಉಳಿದಂತೆ ತನ್ನ ಸುತ್ತಲಿನ ವಿಕ್ಷಿಪ್ತತೆಯೆಲ್ಲ ಅನೇಖನೊಬ್ಬನಿಗೆ ಮಾತ್ರ ಅರಿವಿಗೆ ಬರುತ್ತಿತ್ತು. 
 
ಒಮ್ಮೊಮ್ಮೆ ಮಧ್ಯಾಹ್ನದ ಹೊತ್ತು ಮರದ ಕೆಳಗೆ ಆತ ಖುಷಿಯಾ ಕುಳಿತು ಎದುರಿನ ಹನುಮಂತನ ದೇವಾಲಯದ ಹಿಂದಿನ ನಿಸರ್ಗವನ್ನು ಸುಮಾರು ಹೊತ್ತು ಚಿತ್ರಿಸುತ್ತಿದ್ದರೆ, ಆತನ ನೆರಳು ಮಾತ್ರ ಒಂದೇ ಕಡೆ ಇರುತ್ತುತ್ತು, ಸುತ್ತಲಿನ ನೆರಳು ಸಂಜೆಯಾದಂತೆ ಬದಲಾಗುತ್ತಿದ್ದರೂ, ಉದ್ದವಾಗುತ್ತಿದ್ದರೂ ಸಹ. ಎದುರಿನ ಪಾಟಿನಲ್ಲಿರಿಸಲಾಗಿದ್ದ ಎಲೆಗಳನ್ನು ಸಂಗ್ರಹ ರೂಪದಲ್ಲಿ ಸ್ಕೆಚ್ ಆಗಿ ಬಿಡಿಸುವಾಗ, ಯಾವುದಾದರೂ ಎಲೆಗಳನ್ನು ಬರೆಯದೇ ಬಿಟ್ಟಿದ್ದಲ್ಲಿ, ಬಿಟ್ಟುಹೋದ ಆ ನಿಜವಾದ ಎಲೆ ಒಣಗಿ ಪಾಟಿನಿಂದ ಹೊರಕ್ಕೆ, ಆ ಪಾಟಿಗೂ ತನಗೂ ಸಂಬಂಧವೇ ಇಲ್ಲವೆಂಬಂತೆ ಉದುರಿ ಬೀಳುತ್ತಿತ್ತು. ಕೆಲವು ಮಹತ್ತರ ಪ್ರದರ್ಶನಗಳು ಪರಿಷತ್ತಿನ ಗ್ಯಾಲರಿಗಳಲ್ಲಿ ನಡೆವಾಗ ಮೇಷ್ಟ್ರು ಕೆಲವು ವಿದ್ಯಾರ್ಥಿಗಳೊಂದಿಗೆ ಈತನನ್ನೂ ಗ್ಯಾಲರಿ ಕಾಯಲು ಬಿಟ್ಟಾಗ, ಬೋರಾಗಿ ಈಗ ಒಂದು ಕಪ್ ಟೀ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎನ್ನಿಸಿದಲ್ಲಿ ಅದಾವ ಮಾಯದಲ್ಲೋ ಅಣ್ತಮ್ಮ ಕೆಳಗಿನ ಆಫೀಸಿನ ಪ್ಯಾಂಟ್ರಿಯಿಂದ ಚಹಾ ತಂದಿರುತ್ತಿದ್ದ. ಛೇ, ಮೇಷ್ಟ್ರು ವಿಮರ್ಶಕ ಎಸ್.ಎನ್.ಚಂದ್ರಶೇಖರ್ ಅವರಿಗೆ ಗೌರವಾರ್ಥವಾಗಿ ಟೀ ಜೊತೆ ಚಾಲುಕ್ಯ ಹೋಟೆಲ್ಲಿಂದ ಮಸಾಲೆ ದೋಸೆ ತರಿಸಿದ್ದು ನೋಡಿದೆನಲ್ಲ ಎಂದೇನಾದರೂ ಆಗ ಅನೇಖ ಅಂದುಕೊಂಡ ನಂತರದ ಒಂದೇ ನಿಮಿಷದಲ್ಲಿ, ರಾಮಾಯಣ್ಣ ಪ್ಲೇಟಿನಲ್ಲಿ ದೋಸೆ ತಂದಿರಿಸುತ್ತಿದ್ದ, ದೋಸೆ ಬಿಟ್ಟು ಬರೀ ಟೀ ಮಾತ್ರ ತಂದೀಯಲ್ಲೋ ಮಂಗ್ಯ ಎಂದಾಗ ಆತ ಅಣ್ತಮ್ಮನನ್ನು ಬಯ್ಯುತ್ತಿದ್ದ. 
(೩೮)
ಅನೇಖನಿಗೆ ತನಗೇನಾಗುತ್ತಿದೆ ಎಂಬುದರ ಅರಿವು ಇದ್ದರೂ ಏಕೆ ಆಗುತ್ತಿದೆ ಎಂಬುದು ಮಾತ್ರ ತಿಳಿಯುತ್ತಿರಲಿಲ್ಲ. ತಲೆನೋವು ಬಂದಾಗ ಆತ ಮಾಡುತ್ತಿದ್ದುದು ಒಂದು ಸರಳ ಕೆಲಸ: ಆ ಪರಿಷತ್ತಿನ ಬಂಡೆಗಳ ಹಿಂದೆ, ಮರದ ಕೆಳಗೆ ಹೋಗಿ, ದೀರ್ಘಕಾಲ ಆರಾಮ ನೀಡಬಲ್ಲ ನೇರ ಭಂಗಿಯಲ್ಲಿ ಕುಳಿತು ತನ್ನ ನೋವನ್ನೇ ಗಮನಿಸುತ್ತ, ಅನುಸರಿಸುತ್ತ, ನೋವಿಲ್ಲದಾಗಿನ ಘಟನೆಗಳನ್ನು ಸ್ಮರಿಸಿ, ಈ ನೋವಿನ ಕಾಲಕ್ಕೆ (ಅ) ಅದೇ ಘಟನೆಗಳು ಹೇಗೆನಿಸುತ್ತವೆ ಮತ್ತು (ಆ) ಈ ನೋವು ಬಿಟ್ಟು ಹೋದನಂತರ, (ಇ) ಬಿಟ್ಟು ಹೋದ ಕಾರಣಕ್ಕೇ ಅದೇ ಘಟನೆಗಳು ಹೇಗೆ ಅನಿಸುತ್ತದೆ ಎಂದೆಲ್ಲಾ ಯೋಚಿಸುತ್ತ, ಹಾಗೆಲ್ಲಾ ಯೋಚಿಸುವಾಗಲೂ ಸಹ ತನ್ನ ದೇಹದ ಅಂಗಾಂಗಗಳಲ್ಲಿ ಆಗುತ್ತಿರುವ ಪ್ರತಿಯೊಂದು ಇಂದ್ರಿಯಾನುಭವವನ್ನೂ ತೀವ್ರನಿಗಾ ಘಟಕದಲ್ಲಿರಿಸಿದಂತೆ ಮನಸ್ಸಿನಲ್ಲೇ ಟಿಪ್ಪಣಿ ಮಾಡಿಕೊಳ್ಳುತ್ತಿದ್ದ. ಈ ತುರಿಕೆಯಾತೀತ ಅಭ್ಯಾಸವನ್ನು ಚಟವನ್ನಾಗಿಸಿಕೊಂಡುಬಿಟ್ಟಿದ್ದ. ಆದ್ದರಿಂದ ನೋವಿಗೇ ಕನ್‌ಫ್ಯೂಸ್ ಆಗಿಬಿಡುತ್ತಿತ್ತು. ಅನೇಖನು ತಲೆನೋವೆಂಬ ಇಂದ್ರಿಯಾನುಭವವನ್ನು ಗಮನಿಸುತ್ತ, ಆಗಿದ್ದು ಆಗಲಿ ಎಂಬಂತೆ ಅದರ ಬಗ್ಗೆ ಕೇವಲ ಚಿಂತಿಸುತ್ತ, ಚಿಂತೆ ಮಾಡದೆ, ಹಾಗೆ ಮಾಡುವಾಗಲೂ (ಅಥವ ಮಾಡದಿರುವಾಗಲೂ) ಆ ಅನುಭವವನ್ನು ತನ್ನ ದೇಹಬಾಧೆಯಿಂದ ದೂರಮಾಡದೆ ಗಮನಿಸುತ್ತಲೇ ಇರುವುದನ್ನು ಕಂಡು ಸ್ವತಃ ತಲೆನೋವಿಗೇ ತಲೆನೋವು ಬರುತ್ತಿತ್ತು. ಅದೂ ಸಹ ತನ್ನನ್ನು ತಾನೇ ಅನುಭವಿಸುವ ಅನೇಖನ ತಂತ್ರವನ್ನು ಅನುಕರಿಸಲು ತೊಡಗುತ್ತಿತ್ತು. ಅಥಾರ್ತ್ ತಲೆನೋವು ಅನೇಖನನ್ನು ಬಿಟ್ಟು ಓಡುತ್ತಿತ್ತು, ಮಂತ್ರಕ್ಕೆ ಹೆದರಿದ ಪ್ರೇತ ಆವಾಹನೆಯಂತೆ. 
 
ಅದರ ನಂತರವೆಲ್ಲಾ ಅನೇಖನಿಗೆ ಖುಷಿಯೋ ಖುಷಿ. ನೋವೆಂಬುದು ದೇಹವನ್ನು ಅದೆಷ್ಟು ಬೇಗ ಬಿಟ್ಟುಹೋಗಬಲ್ಲದು ಎಂಬ ಅಚ್ಚರಿ ಮತ್ತು ಎಂತಹ ನೋವಿಗೂ ಸ್ಪಂದಿಸದಿದ್ದಲ್ಲಿ ಅದು ತನ್ನತನವನ್ನು ಕಳೆದುಕೊಳ್ಳುತ್ತದೆಂಬ ಅರಿವಿನ ಖುಷಿ ಸೇರಿಕೊಂಡು ಅನೇಖ ಮಂದಸ್ಮಿತನಾಗಿರುತ್ತಿದ್ದ ದಿನಗಟ್ಟಲೆ. ಅನುಭವಿಗಳು ಮಾತ್ರ ಅನೇಖ ಡ್ರಗ್ಸ್ ತೆಗೆದುಕೊಳ್ಳುವುದರಿಂದಲೇ ದೈನಂದಿನ ಆಗುಹೋಗುಗಳಿಗೆಲ್ಲ ನಿರ್ಭಾವುಕವಾಗಿ  ಮಂದಸ್ಮಿತನಾಗುತ್ತನೆಂಬ ಗ್ಯಾರಂಟಿ ನಂಬಿಕೆ ಇರಿಸಿಕೊಂಡುಬಿಟ್ಟಿದ್ದರು. ಅನುಭವಿಗಳು ಎಂದರೆ ಡ್ರಗ್ಸ್ ತೆಗೆದುಕೊಳ್ಳುವ ಅನುಭವ ಇದ್ದವರು ಎಂದರ್ಥ!
 
ಎಲ್ಲಾ ಚಟಗಳನ್ನೂ ಮೀರಿ ನಿಲ್ಲಲು ಇಂದ್ರಿಯಾನುಭವಕ್ಕೆ ಪ್ರತಿಕ್ರಿಯಿಸದಿರುವುದೇ ಸೂಕ್ತ ಉತ್ತರ ಎಂದು ಅನೇSನಿಗೆ ಗುರುಗಳು, ಪುಸ್ತಕಗಳು ಹೇಳಿದ್ದವು. ಎಲ್ಲರ ಲೇವಡಿಗೆ ಗುರಿಯಾಗಬಾರದೆಂದು, ಕದ್ದುಮುಚ್ಚಿ ಆತ ಈ ಎರಡನ್ನೂ ಸಂಪರ್ಕಿಸುತ್ತಿದ್ದ. ಅದು ಈತನ ಮತ್ತೊಂದು ಚಟವಾಗಿತ್ತು. ಪ್ರತಿಕ್ರಿಯಿಸದೇ ಇದ್ದಲ್ಲಿ ಇಂದ್ರಿಯಾನುಭವವೆಂಬುದಾದರೂ ಹೇಗೆ ಸಾಧ್ಯ ಎಂಬ ಪ್ರಶ್ನೆ, ಅನುಭವಕ್ಕೆ ವಿರುದ್ಧವಾದುದು ಎಂದು ಮೇಲ್ನೋಟಕ್ಕೆ ಅನ್ನಿಸಿದರೂ ಸಹ, ಅದೂ ಅನುಭವವೇ ಎಂದು ಆತ ತನ್ನದೇ ಮತ್ತೊಂದು ಥಿಯರಿಯೊಂದನ್ನು ಹುಟ್ಟಿಹಾಕಿಬಿಟ್ಟಿದ್ದ. 
 
ಆದ್ದರಿಂದ ಅನೇಖ ಅನೇಕರಿಗೆ ಅರ್ಥವಾಗುತ್ತಿರಲಿಲ್ಲ, ಇತರರು ಈತನಿಗೆ ಅರ್ಥವಾಗದಿರುವಂತೆ. ಆದರೆ ಎಲ್ಲ ಕಲಾವಿದ್ಯಾರ್ಥಿಗಳಿಗೆ ಮಾತ್ರ ಒಂದು ವಿಷಯದಲ್ಲಿ ಒಮ್ಮತವಿತ್ತು. ಅದೇನೆಂದರೆ ಅವರವರ ತಿಕ್ಕಲುತನಗಳಿಂದಾಗಿ ಅವರೆಲ್ಲಾ ಕಲಾಶಾಲೆ ಸೇರಿದ್ದಾರೋ, ಅಥವ ಸೇರಿದ ನಂತರ ಆ ತಿಕ್ಕಲುತನ ಹುಟ್ಟಿಕೊಂಡಿತೋ ಎಂಬ ಗೊಂದಲವನ್ನೇ ಅವರೆಲ್ಲರೂ ತಮ್ಮೆಲ್ಲರಲ್ಲೂ ಇದೆ ಎಂಬುದನ್ನು ಒಪ್ಪುವ ಒಪ್ಪಂದವದಾಗಿತ್ತು. ತಿಕ್ಕಲುತನವಿಲ್ಲದೆ ಯಾರಿಗೂ ಕಲಾಕೃತಿ ರಚಿಸಲು ಪರಿಷತ್ತಿನಲ್ಲಿ ಸಾಧ್ಯವಿರಲಿಲ್ಲ. ಪರಿಷತ್ತಿನಾಚೆಯ ಕಲಾವಲಯದಲ್ಲೂ ಇದೇ ಆಗುವುದು ಎಂದು ಬೇರೆ ವಿವರಿಸುವ ಅಗತ್ಯವೂ ಇಲ್ಲ. 
(೩೯)
ವೀರಾ ಕ್ಯಾಮರಾದ ಮೂಲಕ ಚಕಚಕನೆ ಅನೇಖನ ಮುಖದ ಮೇಲೆ ಫ್ಲಾಸ್ ಹರಿಸಿದಾಗ ಅನೇಖನಿಗೆ ಮತ್ತೇನೋ ಆದಂತಾಯಿತು. ಏನು ಎಂದು ವರ್ಣಿಸಲು ಆತನ ಪದಸಂಪತ್ತಿಗೆ ಸಾಮರ್ಥ್ಯವಿರಲಿಲ್ಲ. ಚಿತ್ರವೊಂದನ್ನು ಅಕ್ಷರಗಳಲ್ಲಿ ವರ್ಣಿಸಲು ಪ್ರಯತ್ನಿಸಿದಂತೆ ಇದು. ಪದಗಳಿಲ್ಲದೆ ದೃಶ್ಯವಿಲ್ಲವೆಂಬುದು ನಿಜವಾದರೂ ಈ ಅನುಭವವನ್ನು ಹೇಗೆ ವರ್ಣಿಸುವುದು. ನಾರ್ಮಲ್ ಮನುಷ್ಯಳೊಬ್ಬಳು ದಿನಕ್ಕೆ ಹತ್ತುಸಾವಿರ ಯೋಚನೆಗಳನ್ನು ಮಾಡುತ್ತಾಳಂತೆ. ಆದರೆ ದಿನದ ಕೊನೆಗೆ ಆಕೆಗೆ ನೆನಪಿರುವುದು ಅತಿ ಹೆಚ್ಚೆಂದರೆ ನೂರು ಯೋಚನೆಗಳು ಮಾತ್ರವೇ ಎಂದು ತನ್ನ ಮುಖದ ಮೇಲೆ ಬಿದ್ದ ಫ್ಲಾಷಿನ ಬಗ್ಗೆ ಎನೋ ಫ್ಲಾಷ್ ಆದವನಂತೆ ಮುಂದೊಂದು ದಿನ ಈ ಘಟನೆಯ ಬಗ್ಗೆ ವಿವರಿಸಲಾಗದುದರ ಬಗ್ಗೆ ವಿವರಿಸಿದ್ದ ಅನೇಖ, ಅದಾರಿಗೋ.
           
ಇದೆಲ್ಲ ನಡೆದದ್ದು ಪ್ರಶ್ನಾಮೂರ್ತಿ ತ್ರಿಶಂಕುವಾಗುವ ಸ್ವಲ್ಪದಿನಗಳ ಮುಂಚೆ. ಮಾರನೇ ದಿನವೇ ಸಮೂಹ ಶಿಲ್ಪದ ಬಗ್ಗೆ ವಿಚಾರ ಸಂಕಿರಣ ನಡೆಸಲು ಆಹ್ವಾನ ರೂಪದಲ್ಲಿ ಕವಿಯಿತ್ರಿಯೊಬ್ಬರಿಗೆ ಪತ್ರ ಬರೆದದ್ದು, ಇನ್‌ಲ್ಯಾಂಡ್ ಲೆಟರಿನಲ್ಲಿ. ಅದರ ಮಾರನೇ ದಿನವೇ ಪ್ರತ್ಯುತ್ತರ ಬಂದಿತ್ತು ಆತನಿಗೆ, ಅನಾಮಿಕ ಕವಿಯಿತ್ರಿಯಿಂದಲ್ಲ, ಆತನ ಸಹಪಾಠಿಯಾದ ಸೋಕುಮಾರಿ ಉರುಫ್ ಕಲಾ.ಕೆ ಉರುಫ್ ಕಲಾಕೃತಿಯಿಂದ. ಅದರಲ್ಲಿ ತಾರೀಕನ್ನು ಮಾತ್ರ ೨೦೧೧ ಎಂದು ನಮೂದಿಸಲಾಗಿತ್ತು. ಇದೊಂದು ಪ್ರಾಕ್ಟಿಕಲ್ ಜೋಕ್ ಎಂದು ಅನೇಖ ನಕ್ಕು, ಮತ್ತೊಂದು ಪತ್ರ ಬರೆದು ಪರಿಷತ್ತಿನ ಕಟ್ಟಡದೆದುರಿನ ಮರಕ್ಕೆ ತೂಗುಹಾಕಲಾಗಿದ್ದ ಕೆಂಪುಡಬ್ಬಿಯ ಒಳಕ್ಕೆ ಹಾಕಿದ್ದ. ಅಂದಿನಿಂದ ಸುಮಾರು ಒಂದು ವಾರ ಸೋಕುವಿನಿಂದ ಪತ್ರ ಬರುತ್ತಿದ್ದು, ಸ್ವಲ್ಪ ದಿನದ ನಂತರ ಮಮಾ, ಬಿಡಾಗಳೂ ಪತ್ರಗಳನ್ನು ಬರೆದಿದ್ದರು. ಸಂಕೋಚ ಪ್ರವೃತ್ತಿಯವನಾದ ಅನೇಖ ಒಮ್ಮೆ ಬಿಡಾ, ಮಮಾ ಮತ್ತು ಸೋಕುಮಾರಿಯರನ್ನು ಕ್ಯಾಂಟೀನಿನ ಬಳಿ ಭೇಟಿ ಮಾಡಿ ಎಲ್ಲ ಪತ್ರಗಳನ್ನೂ ತೋರಿಸಿದ್ದ. ಆಯಾ ವ್ಯಕ್ತಿಗಳ ಶೈಲಿಯಲ್ಲೇ ಬರವಣಿಗೆಯಿದ್ದರೂ ಸಹ ಅವರೆಲ್ಲರೂ ಅದರ ಒಡೆತನವನ್ನು ನಿರಾಕರಿಸಿದ್ದರು.
ಏನ್ ಮಗಾ. ನಮ್ ಹ್ಯಾಂಡ್‌ರೈಟಿಂಗ್‌ನ ಏನ್ ಚೆನ್ನಾಗಿ ಅನುಕರಣೆ ಮಾಡಿ ಬರೆದಿದ್ದೀಯ. ಕಲಾವಿಮರ್ಶಕನಾಗೋ ಹುಚ್ಚು ಜೋರಾಗಿದೆ ನಿನಗೆ. ಚಿಂತೆ ಮಾಡಬೇಡ, ಯಾವುದಾದರೂ ನ್ಯೂಸ್ ಪೇಪರಿಗೆ ಬರೆಯಲು ಅವಕಾಶ ಕೊಡಿಸ್ತೇನೆ ಎಂದು ನವರಸಗಳ ಭಾವಗಳನ್ನೆಲ್ಲಾ ಅರೆದು ಪೇಸ್ಟ್ ಮಾಡಿದಂತೆ ಗಂಭೀರ ಭಾವದಿಂದ ನುಡಿದಿದ್ದ ಬಿಡಾ.  
ಲೋ, ಏನ್ ಕನಾ. ನನ್ನಂಗೆ ಬರೀತಿಯಲ್ಲೋ. ಅಣ್ಣಾವ್ರ ಶಿಷ್ಯರ ಹಣೇಬರಾನೇ ಇಂಗೆ ನೋಡು. ಸಿನೆಮ ಸ್ಕ್ರಿಪ್ಟ್‌ಗಿಪ್ಟ್ ಏನಾರ ಬರೀತಿಯಾ, ಅವಕಾಶ ಸಿಕ್ರೆ? ಒಂದ್ ಕೆಲ್ಸಾ ಮಾಡು. ಸೈನ್ಸ್ ಫಿಕ್ಷನ್ ಚೆನ್ನಾಗಿ ಬರೀತಿಯ. ಪತ್ರದ ತಾರೀಕು ನೋಡ್ ಬಿಡಾ, ೨೦೧೧ ಅಂದ್ರೆ ಇನ್ನ ಇಪ್ಪತ್ತಮೂರು ವರ್ಷ ಆದ್ಮೇಲೆ. ನಾವೆಲ್ಲಾ ಮಿಡ್ ಫಾರ್ಟೀಸ್ನಲ್ಲಿರ್ತೀವಿ. ಅಂದಹಾಗೆ ಗಂಡಸರ್ಗೂ ಮೆನೂಪಾಸ್ ಅನ್ನೋದಾಗುತ್ತಂತೆ ಮಿಡ್-ಫಾರ್ಟೀಸಲ್ಲಿ. ಅಂಗೇ ಏನೋ ಆಗಿರ್ಬೇಕು ನೋಡ್ ಕನಾ. ಏನೇ ಹೇಳು ಮಗಾ, ನಿನ್ನ ಬರವಣಿಗೆಯಲ್ಲಿ ಅನುಕರಣೆ ಕೆಪ್ಯಾಟಿಟಿ ಜೋರಿದೆ ಬಿಡು. ಅಂದ ಹಾಗೆ ಚೀನಾ ಎಂದು ನಾಟಕೀಯವಾಗಿ ಮಮಾ ತನ್ನ ಬರವಣಿಗೆ ಶೈಲಿಯಿದ್ದ ಪತ್ರದ ಒಡೆತನವನ್ನು ತಳ್ಳಿಹಾಕಿಬಿಟ್ಟಿದ್ದ. 
ಅನೇಖ ನಿರಾಶನಾಗುವುದಕ್ಕಿಂತಲೂ ಮೂರ್ಖನಾದ ಭಾವ ಹೊತ್ತೇ, ಅಂತಿಮವಾಗಿ ಸೋಕುಮಾರಿಗೆ ಆಕೆ ಬರೆದಿದ್ದ ೨೦೧೧ರ ಪತ್ರಗಳನ್ನು ತೋರಿಸಿ ಪ್ರಶ್ನಿಸಿದ್ದ. ಆತ ಆಕೆಯನ್ನು ಔಪಚಾರಿಕತೆಯ ಪರಿಧಿಯ ಹೊರಗಿನಿಂದ ಆ ಮೂರು ವರ್ಷಗಳಲ್ಲಿ ಮಾತನಾಡಿಸಿದ್ದೇ ಇಲ್ಲ. ಆದ್ದರಿಂದ ಆಕೆ ಆ ಪತ್ರವನ್ನು ಓದಿ ಪ್ರತಿಕ್ರಿಯಿಸಿದ್ದು ಹೀಗೆ,  
ಹೌದು. ನನ್ನ ತರಾನೇ ಇದೆ ಬರವಣಿಗೆ. ನಾನ್ಯಾಕ್ರೀ ಇದನ್ನ ಬರೀಲಿ. ಕ್ಲಾಸಲ್ಲೇ ಇರುತ್ತೀರ, ನೇರವಾಗಿ ನಿಮ್ಮೊಂದಿಗೆ ಮಾತಾಡಬಹುದಲ್ಲ?!
ಅಲ್ಲ. ನನ್ನ ಜೊತೆ ನೀವು ಯಾವತ್ತೂ ಮಾತೇ ಆಡಿಲ್ಲವಲ್ಲ.
ಓಹ್. ನನ್ನನ್ನು ಮಾತನಾಡಿಸೋಕ್ಕೆ ಇದೊಂದು ಟೆಕ್ನಿಕ್ಕ? ನನ್ನ ತರಾನೇ ಬರ್ದಿದ್ದೀರ. ನಿಮ್ಮ ತರ ನಾನು ಬರೆಯೋದು ಹೇಗೆ ಅಂತ ಹೇಳಿಕೊಡ್ತೀರ? ಎಂದು ಆಕೆ ಪಕ್ಕದ್ದ, ಪರಿಷತ್ತಿನ ಸಮೀಪವಿದ್ದ ಬಾಯ್ಸ್ ಕಲಾಶಾಲೆಯಲ್ಲಿ ಆಗಷ್ಟೆ ಉಪಾಧ್ಯಾಯಿನಿಯಾಗಿದ್ದ ಚಾರ್ವಾಕಿಯ ಬೆನ್ನು ತಟ್ಟಿದಳು. ಇಬ್ಬರು ಮುಸಿಮುಸಿ ನಗತೊಡಗಿದರು. ಚಾರ್ವಾಕಿ ಸೋಕುವಿಗಿಂತ ವಯಸ್ಸಿನಲ್ಲಿ ಕೇವಲ ಮೂರ್ನಾಲ್ಕು ವರ್ಷವಷ್ಟೇ ದೊಡ್ಡವಳಿದ್ದಳು. ಆಗ ಅವಳಿಗೆ ಇಪ್ಪತ್ತಾರು ವರ್ಷ ವಯಸ್ಸು. ಆಕೆ ಅನೇಖನನ್ನು ಉದ್ದೇಶಿಸಿ ಹೇಳಿದ್ದಳು, ಸೋಕುಮಾರಿಗೆ ಪ್ರೊಪೋಸ್ ಮಾಡೋದಾದ್ರೆ ನೇರವಾಗಿ ಕೇಳಿಬಿಡು ಅನೇಖ. ಆಕೆಯೂ ನಿನ್ನ ಬಗ್ಗೆ ಇಂಪ್ರೆಸ್ ಆಗಿದ್ದಾಳೆ. ನಾನು ಬೇಕಾದ್ರೆ ನಿನಗೆ ಸಪೋರ್ಟ್ ಮಾಡ್ತೇನೆ ಎಂದು ಸೋಕುವಿನ ಎದುರಿಗೇ ನುಡಿದಳು. ಅನೇಖ ಗಾಭರಿಯಾದ, ಸೋಕುಮಾರಿ ಕಿವುಡಿಯಂತೆ ಏನೋ ತಲೆಗೆ ಹತ್ತದಂತೆ ದೂರಕ್ಕೆ ತನ್ನ ದೃಷ್ಟಿಯನ್ನು ಎಸೆದಿದ್ದಳು. ಅಜ್ಜಿಗೆ ಪತ್ರದ ಚಿಂತೆಯಾದರೆ, ಮೊಮ್ಮೊಗಳಿಗೆ ೨೦೧೧ರ ಚಿಂತೆಯಂತೆ ಎಂದ, ಮಂದಹಾಸ ಬೆರೆತ ಸಂಕೋಚದಲ್ಲಿ.
(೪೦)
      ಅದಾದ ನಂತರವೂ ಸಹ ಅನೇಖನಿಗೆ ದಿನನಿತ್ಯ ಪತ್ರಗಳು, ಇನ್‌ಲ್ಯಾಂಡ್ ಲೆಟರ್‌ಗಳು ಬರತೊಡಗಿದವು. ಯಾವುದೋ ವ್ರತವನ್ನು ಕೈಗೊಂಡವನಂತೆ ಅನೇಖನೂ ಪ್ರತ್ಯುತ್ತರ ಬರೆಯತೊಡಗಿದ್ದ--ತನ್ನ ತಾಳ್ಮೆಯೇ ಆತನಿಗೊಂದು ಸವಾಲು ಹಾಗೂ ಚಟವಾಗಿ ಹೋಗಿತ್ತು. ಮಮಾ, ಬಿಡಾ, ಸೋಕುಮಾರಿ ಮತ್ತು ಚಾರ್ವಾಕಿಯರು ಸಿಕ್ಕಾಗೆಲ್ಲ ಏನೂ ಆಗಿಯೆ ಇಲ್ಲವೆಂಬಂತೆ ಮಂದಹಾಸ ಬೀರುತ್ತಿದ್ದರು, ಮಾತನಾಡುತ್ತಿದ್ದರು, ಮತ್ತೆ ಪತ್ರ ಬಂತೆ ನಮ್ಮಿಂದ? ಎಂದೂ ಬಿಡಿಬಿಡಿಯಾಗಿ ಮತ್ತು ಒಟ್ಟಾಗಿ ಲೇವಡಿ ಮಾಡುತ್ತಿದ್ದರು. ಹೌದು ಮತ್ತು ಇಲ್ಲ ಎಂಬ ಎರಡೂ ಅರ್ಥ ಕೊಡುವ ರೀತಿಯಲ್ಲಿ ಅನೇಖ ತಲೆಯಾಡಿಸಿ ಮೌನದ ಚಿಪ್ಪಿನೊಳಕ್ಕೆ ಸೇರಿಕೊಂಡುಬಿಡುತ್ತಿದ್ದ. ಆದರೆ ಅದೊಂದು ದಿನ ಸೋಕು ಪತ್ರದಲ್ಲಿ, ಹಿಂದೆಲ್ಲಾ ತಾನು ಬರೆದ ಪತ್ರಗಳ ತಾರೀಕನ್ನು ತಿಳಿಸಬೇಕಾಗಿ ಬೇಡಿಕೆ ಬಂದಿತ್ತು. ಇದು ತಾಳ್ಮೆಯ ಪರಮಾವಧಿ ಎಂದೆನಿಸಿದರೂ ತಾಳ್ಮೆಗೆ ಅತಿಸಾರ ಮತ್ತು ಆಮಶಂಕೆಗಳಿಲ್ಲ ಎಂಬ ಗಾದೆಯೊಂದನ್ನು ಹುಟ್ಟಿಹಾಕಿಕೊಂಡು ಅನೇಖ ಅದಕ್ಕೂ ಉತ್ತರಿಸಿದ್ದ. ಆದರೆ ಒಮ್ಮೆ ಮಾತ್ರ ಆ ಪತ್ರಗಳೊಂದರಲ್ಲಿ ಅತ್ಯಂತ ವಿಕ್ಷಿಪ್ತವಾದ ಪತ್ರವೊಂದು ಬಂದಿತು. ಸಿವಾ, ಈ ಕಡೆಯಿಂದ ನೀನೇ ಮಾತಾಡ್ತಿರೋದು. ಅಥವ ಅಲ್ಲಿರುವ ನಾನುವಿಗೆ ಇಲ್ಲಿರುವ ನೀನುವಿನ ನಮಸ್ಕಾರಗಳು ಎಂಬ ಒಕ್ಕಣೆಯಿದ್ದ ಪತ್ರವೂ ೨೦೧೧ನೆ ಇಸವಿಯನ್ನು ನಮೂದಿಸಿತ್ತು ಎಂದು ಹೇಳಬೇಕಿಲ್ಲವಷ್ಟೆ.  ಅನೇಖನದ್ದೇ ಕೈಬರಹದಲ್ಲಿತ್ತು ಆ ಪತ್ರ. ಅದಕ್ಕೆ ಪ್ರತಿಕ್ರಿಯೆಯಾಗಿ ಅನೇಖ ಹೀಗೆ ಬರೆದ: ನಾನು ಬರೆಯುತ್ತಿರುವ ಈ ನೋಟನ್ನು ನಾನೇ ಆದ ನೀನು ಓದುವುದು ಒಂದು ನಾಲಾಯಕ್ ಕೆಲಸವೇ ಸರಿ. ನಾನು ಬರೆದುದನ್ನು ನಾನೇ ಹೇಗೆ ಓದಲು ಸಾಧ್ಯ? ಓದುವುದೆಂದರೆ, ಓದುತ್ತಿರುವುದನ್ನು ಈ ಮೊದಲೇ, ಭೂತದಲ್ಲೇ ಯಾರೋ ಬರೆದಿರಬೇಕು ಮತ್ತು ಬರೆಯುವುದೆಂದರೆ, ಮುಂದೊಮ್ಮೆ, ಯಾವಾಗಲೂ ಭವಿಷ್ಯದಲ್ಲಿಯೇ ಓದುವವರು ದೊರಕುತ್ತಾರೆಂಬ ವಿಶ್ವಾಸಪೂರ್ಣ ನಿರೀಕೆ. ಮಾರನೇ ದಿನ ಅನೇಖನಿಗೆ ಪತ್ರವೊಂದು ಬಂದಿತು. ಪರಿಚಿತ ಕೈಬರಹ ಎಂದು ತೆಗೆದು ಅದನ್ನು ಓದಿದ. ನೆನ್ನೆ ಆತ ಬರೆದಿದ್ದ ಪತ್ರ ಆತನಿಗೇ ಹಿಂದಿರುಗಿತ್ತು. ಮಾರನೇ ದಿನದ ಪತ್ರದಲ್ಲಿ ಸೋಕುಮಾರಿಗೆ ಪತ್ರದಲ್ಲಿ ಈ ಸುದ್ಧಿ ತಲುಪಿಸಿದ್ದ. ಆಕೆ ಕುತೂಹಲದಿಂದ ನಿನಗೆ ನೀನೇ ಬರೆದ ಪತ್ರದಲ್ಲಿ ನೀನು ಏನು ಬರೆದಿದ್ದೆ? ಎಂದೂ ಕೇಳಿದ್ದಳು, ಅದಕ್ಕಾತ ಮರುಟಿಪ್ಪಣಿಯಲ್ಲಿ ಇರುವ ವಿಷಯವನ್ನು ಇದ್ದಹಾಗೇ ಉತ್ತರಿಸಿದ್ದ. 
 
     ವೀರಾ ತನ್ನ ಮುಖಕ್ಕೆ ಕ್ಯಾಮರಾದ ಫ್ಲಾಷ್ ಹರಿಸಿದಾಗ ವರ್ಣಿಸಲಸದಳವಾದ ಅನುಭವವೊಂದು ಅನೇಖನಿಗಾದಂತೆಯೆ ಸಿವಾ, ಈ ಕಡೆಯಿಂದ ನೀನೇ ಮಾತಾಡ್ತಿರೋದು. ಅಥವ ಅಲ್ಲಿರುವ ನಾನುವಿಗೆ ಇಲ್ಲಿರುವ ನೀನುವಿನ ನಮಸ್ಕಾರಗಳು ಎಂಬ ವಾಕ್ಯವಿದ್ದ ಪತ್ರದ ಒಕ್ಕಣೆಯೂ ಉದ್ದೀಪಿಸಿತ್ತು. ಇವೆರಡು ಘಟನೆಗಳ ನಂತರ ಮತ್ತೂ ಒಂದು ವಿಚಿತ್ರ ನಡೆಯಿತು. ೨೦೧೧ರ ಮಮಾ, ೨೦೧೧ರ ಬಿಡಾ ಹಾಗೂ ೨೦೧೧ರ ಸೋಕುಮಾರಿ ಎಂಬ ವಿಳಾಸ ನಮೂದಿಸಿ ಬರೆದ ಎಲ್ಲ ಪತ್ರಗಳಿಗೂ ಉತ್ತರ ದೊರಕುತ್ತಿತ್ತು. ಮತ್ತು ಅನೇಖನ ಸಹವರ್ತಿಗಳಾದ ನಲ್ಲಸಿವನ್, ಗಾಜ್‌ರೋಪಿ, ವೀರಾ, ಸಾವಕಾಶಿ, ಪಾಜು ರಟೇಲ್-ಇವರೆಲ್ಲಾ ಬರೆದ ಪತ್ರಗಳಿಗೂ ವಿಚಿತ್ರ, ವಿಕ್ಷಿಪ್ತ ಉತ್ತರಗಳಿದ್ದ ಪತ್ರಗಳು ದೊರಕತೊಡಗಿದವು.// 
 
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):