ನೆನಪಿನ ಚಿತ್ರಕಲಾ ಶಾಲೆ: ಭಾಗ ೧೫-- ’ಬಾಕ್ಸ್‌ಪರ್ಡ್ ಡಿಕ್ಸ್-ನರಿ’

0

 

 
(೪೧)
ಅನೇಖನ ಉದಾಹರಣೆಯನ್ನು ಹಿಡಿದು ಎಲ್ಲರೂ ಎಲ್ಲರಿಗೂ ಪತ್ರ ಬರೆಯತೊಡಗಿದರು, ಮೋಜಿಗಾಗಿ. ಉತ್ತರವನ್ನು ಮಾರನೇ ದಿನವೇ ಸ್ವೀಕರಿಸುತ್ತಿದ್ದರು, ಗಾಭರಿಯಾಗಿ. ತಮ್ಮತಮ್ಮೊಳಗೇ ಈ ತರಲೆ ನಡೆಯುತ್ತಿದ್ದು, ಇದೊಂತರಾ ದೃಶ್ಯಕಲಾ ವಿದ್ಯಾರ್ಥಿಗಳ ಪತ್ರಶಿಕ್ಷಣ ಆರಂಭಗೊಂಡಿತ್ತು. ಉದಾಹರಣೆಗೆ ನಲ್ಲಸಿವನ್, ಗಾಜ್‌ರೋಪಿಗೆ, ಗಾಜ್‌ರೋಪಿ ಪಾಜು ರಟೇಲನಿಗೆ, ರಟೇಲ ಮಮಾನಿಗೆ, ಮಮಾ ಸೋಕುಮಾರಿಗೆ ಪತ್ರಗಳನ್ನು ಬರೆಯುತ್ತಿದ್ದರು. ಸಹಪಾಠಿಗಳಾಗಿದ್ದರೂ, ತಮ್ಮ ಗೆಳೆಯರ ಪತ್ರಗಳಿಗೆ ಪ್ರತ್ಯುತ್ತರ ಬರೆದವರು ತಾವೇ ಎಂದು ಒಪ್ಪಲು ಯಾರೂ ತಯಾರಿರಲಿಲ್ಲ. ಅಂದರೆ ಎಲ್ಲರ ಕೈಬರಹಗಳನ್ನು ಅನುಕರಿಸುವ ಅಸಾಧ್ಯ ಪ್ರತಿಭೆಯುಳ್ಳ ಯಾರೋ ಒಬ್ಬರು ಇದನ್ನು ಬರೆಯುತ್ತಿದ್ದಾರೆ ಎಂಬ ಅನುಮಾನ ಮೊದಲು ಹುಟ್ಟಿಕೊಂಡಿತು. ಹಾಗೆ ಹುಟ್ಟಿದ ದಿನವೇ ಅದು ಸುಳ್ಳಾಯಿತು. ತಮ್ಮ ತಮ್ಮ ಪತ್ರಗಳನ್ನು ಬರೆದದ್ದು ತಾವೇ ಎಂದೂ, ಆದರೆ ಅದಕ್ಕೆ ಪ್ರತ್ಯುತ್ತರ ರೂಪದಲ್ಲಿ ಬರೆಯಲಾದ ಪತ್ರಗಳು ತಮ್ಮ ಕೈಬರಹವನ್ನು ಹೋಲುವಂತಿದ್ದರೂ, ಅದು ತಾವು ಬರೆದದ್ದಲ್ಲ ಎಂದು ಎಲ್ಲರೂ ಎಲ್ಲರ ಮೇಲೂ ಆಣೆ ಇಟ್ಟು ಪ್ರಮಾಣ ಮಾಡಿದರು. ತಾವು ಮತ್ತೊಬ್ಬರಿಗೆ ಬರೆದ ತಮ್ಮದೇ ಅಸಲಿ ಕೈಬರಹಕ್ಕಿಂತಲೂ ತಮ್ಮದೇ ಬರವಣಿಗೆಯ ಶೈಲಿಯಲ್ಲಿ ಮತ್ತೊಬ್ಬರ ಪತ್ರಗಳಿಗೆ ಪ್ರತಿಕ್ರಿಯಿಸುತ್ತ ಬರೆಯುತ್ತಿರುವ ಬರವಣಿಗೆ ಹೆಚ್ಚು ಪ್ರೌಢವಾಗಿರುತ್ತಿತ್ತು. ಇದೊಂತರಾ ಕ್ಯಾಚ್-೨೨ ಪರಿಸ್ಥಿತಿಯಂತಾಗಿ ಹೋಗಿತ್ತು. ಅನೇಖನಿಗೆ ಮಾತ್ರ ಏನೋ ಅನುಮಾನ. ಮಮಾ, ಬಿಡಾರಿಗೂ ಅಷ್ಟೇ-ಅನೇಖನಿಗೆ ಏನೋ ಅನುಮಾನ ಬರುತ್ತಿದೆ ಎಂಬುದರ ಬಗ್ಗೆ ಏನೂ ಅನುಮಾನವಿರುತ್ತಿರಲಿಲ್ಲ 
 
ಮತ್ತೂ ವಿಶೇಷವೆಂದರೆ ತಾವು ಸ್ವೀಕರಿಸಿದ ಪತ್ರದಲ್ಲಿನ ಒಕ್ಕಣಿ ಮಾರನೇ ದಿನವೇ ಮಾಯವಾಗಿಬಿಟ್ಟಿರುತ್ತಿತ್ತು. (ಸೋಕುಮಾರಿ ಉವಾಚ, ೨೦೧೧: "ಮುಂದೊಂದು ದಿನ ನಾನು ಇದರ ಬಗ್ಗೆ ಅರಿತುಕೊಂಡಾಗ, ಇದಕ್ಕೆ ಒಂದು ಸರಳ ಕಾರಣ ಹೊಳೆಯಿತು. ಕೆಲವೇ ನಿಮಿಷಗಳಲ್ಲಿ, ೨೦೧೧ರಲ್ಲಿ ಟೈಪು ಮಾಡಲಾದ ಮೆಸೇಜುಗಳು ೧೯೮೮ಕ್ಕೆ ಹೋಗಲು, ಅತ್ತಲಿಂದ ಇನ್‌ಲ್ಯಾಂಡ್ ಪತ್ರಗಳಲ್ಲಿ ಪ್ರತ್ಯುತ್ತರಗಳನ್ನು ತರಲು ದಿನಗಳೇ ಹಿಡಿಯುತ್ತಿತ್ತಲ್ಲ, ೧೯೮೮ರ ಮಾಪನದಲ್ಲಿ. ಆದರೆ ಅದು ೨೦೧೧ರಲ್ಲಿ ಕೆಲವೇ ಸೆಕೆಂಡುಗಳಿಂದ ಕೆಲವು ನಿಮಿಷಗಳು ಮಾತ್ರ ಬೇಕಾಗಿರುತ್ತಿತ್ತು. ೨೦೧೧ರಲ್ಲಿ ಫೇಸ್‌ಬುಕ್ ಲಾಗ್ ಆಫ್ ಆದ ತಕ್ಷಣ, ಅಲ್ಲಿಂದ ೧೯೮೮ಕ್ಕೆ ಕಳಿಸಲಾಗಿದ್ದ ಪತ್ರದ ಅಕ್ಷರಗಳು ೧೯೮೮ರಲ್ಲಿ ಅಳಿಸಿಹೋಗಿರುತ್ತಿದ್ದವು. ೧೯೮೮ರ ಕಥನ ಮಾಡುತ್ತಿರುವ ಲೇಖಕನಿಗೂ ಇದು ತಿಳಿಯದು"). ’ಎಲ್ಲಾರೂ ಯಾವುದೋ ತಗಡು ಇಂಕ್ ಬಳಸುತ್ತಿರಬೇಕು, ಅಷ್ಟೇ’ ಎಂದು ಸಮಜಾಯಿಷಿ ನೀಡಿದ್ದ ವಿದ್ಯಾರ್ಥಿಯೊಬ್ಬ! 
(೪೨)
ಅದರಲ್ಲೂ ಎಲ್ಲರಿಗೂ ಪಾಜು ರಟೇಲನು ಬರೆವ ಪತ್ರಗಳನ್ನು ಓದಲು ಕಾತುರರಾಗಿರುತ್ತಿದ್ದರು. ಆತ ಬರೆವ ಕನ್ನಡದ ಪ್ರತಿವಾಕ್ಯದಲ್ಲೂ ಎರಡು ಹಾಗೂ ಇಂಗ್ಲೀಷ್ ವಾಕ್ಯದಲ್ಲಿ ಮೂರು ಕನಿಷ್ಠ ತಪ್ಪುಗಳಿರುತ್ತಿದ್ದವು, ಆದ್ದರಿಂದಲೇ ಮನೋರಂಜನಾತ್ಮಕವಾಗಿರುತ್ತಿತ್ತು. ಗೊತ್ತಿದ್ದೂ ಅಧಿಕಾರದ, ಆದಿಪತ್ಯದ ಸಲುವಾಗಿ ತಪ್ಪುಮಾಡುವ ಮಾಧ್ಯಮಗಳಿರುವಲ್ಲೆಲ್ಲಾ ಮನೋರಂಜನೆಯೆಂಬುದು ಗ್ಯಾರಂಟಿ. ಅದರ ಸಾಕಾರ ರೂಪವೆ ಪಾಜು. ಆದ್ದರಿಂದಲೇ ಇಂದು ಸುದ್ಧಿಮಾಧ್ಯಮವೆಂಬುದು ಮಾಯವಾಗಿ ಬದಲಿಗೆ ಇನ್‌ಫೋಟೈನ್‌ಮೆಂಟ್ ಎಂಬುದು ಹುಟ್ಟಿಕೊಂಡಿರುವುದು. ಕಾಜು ತನ್ನ ಭಾಷಾ ಎಡವಟ್ಟುಗಳು ಇತರರಿಗೆ ಮನರಂಜನೆಯ ತಾಣವಾಗಿಬಿಟ್ಟಿದೆ ಎಂಬ ಅರಿವಿನಿಂದಲೋ ಏನೋ, ಅದನ್ನು ಇನ್ನೂ ತೀವ್ರಗೊಳಿಸಿದ್ದ. ಭಾಷೆಯನ್ನು ತೀವ್ರವಾಗಿ ಕಲಿಯಲಾಗದ ಸೋಮಾರಿತನವನ್ನು ತೀವ್ರಗೊಳಿಸಿದ್ದ!
 
 "ಆತನ ಬರವಣಿಗೆಯೆಲ್ಲಾ ತಪ್ಪೂಂತ ಹೇಗೇಳ್ತೀರ? ಅವೇನಿದ್ರೂ ’ಕಾಗುಣಿತ ತಪ್ಪು’ಗಳಷ್ಟೇ" ಎಂದು ಮಮಾ ಆತನ ಪರವಾಗಿ ನಿಂತಿದ್ದರಿಂದ, ಇಂದಿಗೂ ಕಾಜು ಬಾಯಿತೆರೆವ ಸ್ಥಿತಿಯಲ್ಲಿದ್ದಾನೆ. ಕಾಗುಣಿತ ತಪ್ಪುಗಳಾಚೆಗೂ ಪದಗಳಿಗೆ ಜೀವವಿದೆ ಎಂಬ ಬ್ರಹ್ಮಾಂಡ ಸತ್ಯವನ್ನು ನಮಗೆಲ್ಲಾ ಕಲಿಸಿದ್ದ ಮಮಾ. ಆದ್ದರಿಂದಲೇ ಮುಂದೆ ಆತ ಇಂಗ್ಲೀಷ್ ಕಲಿವ ಕಾಲ ಬಂದಾಗ ಮೊದಲು ಅದರ ’ಆಕ್ಸೆಂಟ್’ ಕಲಿತ ನಂತರ ಪದಗಳನ್ನು ಕಲಿಯತೊಡಗಿದ್ದ. ಕಾಜು ಮಾತನಾಡುವಾಗ, ಬಾಯಿಯಿಂದ ಹೊರಡುವ ಪದಗಳು ಮತ್ತು ಆತನ ಮಿದುಳಿನಲ್ಲಿ ಆಗುತ್ತಿದ್ದ ಚಟುವಟಿಕೆಗಳು ರೈಲು ಹಳಿಗಳಂತೆ ಸಮಾನಾಂತರದಲ್ಲಿ ಸಾಗುತ್ತಿದ್ದವು, ಎಂದೂ ಭೇಟಿಯಾಗುವ ಸಾಧ್ಯತೆಯೇ ಇಲ್ಲದಂತೆ. "ಸಬ್ಮಿಟೇಷನ್ ಕೊಟ್ಯಾ ಸಿವ?" ಎಂದಾತ ಕೇಳಿದರೆ "ಸಬ್ಮೀಷನ್ ಆಯಿತೆ" ಎಂದರ್ಥ. ಅವನೊಮ್ಮೆ "ಕಟ್ಟಿಂಗ್ಯಾಮ್ ರೋಡಿಗೆ ಹೋಗ್ಬೇಕು" ಎಂದು ಆಟೋ ಹತ್ತಿದಾಗ ಊರೆಲ್ಲಾ ಸುತ್ತಾಡಿಸಿದ್ದ ಆಟೋದವ, ಅದು ಕನ್ನಿಂಗ್‌ಹ್ಯಾಮ್ ರಸ್ತೆ ಎಂದು ತಿಳಿಯದೆ. ಸುತ್ತಾಡಿಸಿದ್ದಕ್ಕಾಗಿ ಕಾಜು ಆಟೋ ಡ್ರೈವರನ್ನ ಯಕ್ಕಾಮುಕ್ಕಾ ಉಗಿದಾಗಲೂ ಆಟೋಚಾಲಕ ಸಿಟ್ಟಾಗಿರಲಿಲ್ಲವಂತೆ. "ಮೈ ಸನ್ಗಳ, ಹವಾಯಿ ಐಲ್ಯಾಂಡಿನ ಪ್ರಖ್ಯಾತ ಪ್ರಾಡಕ್ಟಲ್ಲಿ ನಿಮ್ಮನ್ನು ಲೆದರ್ ರಿಮೂವ್ ಮಾಡಬೇಕು’ ಅನ್ನೋ ಪಾಜುವಿನ  ಹೇಳಿಕೆಯ ವಾಕ್ಯದಲ್ಲಿ ’ನನ್ಮಕ್ಳ ಎಕ್ಡಾ ತಗೊಂಡು ಚಮ್ಡಾ ನಿಕಾಲ್ ಮಾಡ್ಬೇಕು ನಿಮ್ಗಳ್ನೆಲ್ಲಾ’ ಅನ್ನೋ ಪಂಚ್ ಎಲ್ಲಿರಬೇಕು ಹೇಳು?" ಎಂದು ಮಮಾ, ಕಾಜುವಿನಿಂದ ಬೈಸಿಕೊಂಡರೂ ಶಾಂತವಾಗಿದ್ದ ಆಟೋಚಾಲಕನ ನಡವಳಿಕೆಗೆ ಕಾರಣ ಹುಡುಕಿಬಿಟ್ಟಿದ್ದ. 
 
’ಪ’ ಮತ್ತು ’ಫ’ ನಡುವಣ ಉಚ್ಛಾರಣೆಗಳನ್ನು ಯಾವಾಗಲೂ ತಿರುವು ಮರುವು ಮಾಡುತ್ತಿದ್ದ ಕಾಜುವಿನ ಪದಕೋಶವನ್ನು ’ಫದ’ದೋಷವೆಂತಲೂ, ಅಂತಹ ’ಫದ’ಗಳ ಸಂಗ್ರಹಕ್ಕೆ ’ಬಾಕ್ಸ್‌ಪರ್ಡ್ ಡಿಕ್ಸ್‌-ನರಿ’ ಎಂತಲೂ ಎಲ್ಲರೂ ಶೀರ್ಷಿಕೆ ನೀಡಿಟ್ಟಿದ್ದರು. ಈ ಶೀರ್ಷಿಕೆಯೊಳಗೆ ಗಂಡುನಿರ್ಮಿತ ವಸ್ತುವೊಂದು ಇದೆ ಎನ್ನಿಸಿದರೆ ಅದು ಆಕಸ್ಮಿಕವಷ್ಟೇ. ’ಕಾಗಿಲೆ’ (ಕಾಗೆ+ಕೋಗಿಲೆ) ಮುಂತಾದ ಹೊಸ ಪಕ್ಷಿ ಸಮುದಾಯವನ್ನೇ ಹುಟ್ಟಿಹಾಕಿಬಿಟ್ಟಿದ್ದನಾತ. ’ಸಮ್ತಿಂಗ್ ಈಸ್ ನತಿಂಗ್ ಅನ್ನೋ ಹಾಗೆ’ ಎಂದು ನಡುವಣ ’ಬೆಟರ್ ದ್ಯಾನ್’ ಪದಗಳನ್ನು ಗುಳುಂ ಮಾಡಿಬಿಡುತ್ತಿದ್ದ. ಪದಗಳನ್ನು ವಕ್ರಗೊಳಿಸುವ ಪಾಜುವಿನ ಪ್ರತಿಭೆಗೆ ಏಕತಾನತೆಯ ಬಾಧೆ ಇರುತ್ತಿರಲಿಲ್ಲ.     
 
’ಕೊಶ್ನೆಗೆ ಉತ್ಸರ್ ಬರೀಬೇಕಲ್ಲ ಸಿವಾ ಎಸ್ಗಾಮಲ್ಲಿ, ನಾಳೆ ರಾಜ್ಯೋಸ್ತವ ಬೇರೆ’ ಎನ್ನುತ್ತಿದ್ದ ಈ ಬಾಕ್ಸ್‌ಪರ್ಡ್ ಒಡೆಯನಿಗೆ ಅನೇಖ ’ಉಸ್ತವ’ ಸರಿಯಾದ ಪದ ’ಉತ್ಸವ’ ತಪ್ಪು ಎಂದು ಮೂರು ವರ್ಷದಿಂದಲೂ ಗಂಭೀರವಾಗಿ ಹೇಳಿಕೊಡುತ್ತಿದ್ದ, ಸ್ಲೋಪಾಯ್ಸನ್ನಿನಂತೆ. ಒಮ್ಮೆ ಶಿಲ್ಪಕಲಾ ಗುಡಿಸಲಲ್ಲಿ ಕಾಜು ಏನೋ ಕೆಲಸ ಮಾಡುವಾಗ, ಸುತ್ತಲೂ ಎಲ್ಲರೂ ಇದ್ದಾಗ, ಕಬಾಬು ನೂರು ರೂಪಾಯಿ ನೋಟನ್ನು ಹಿಡಿದು, ಏಯ್ ಕಾಜು, ನನಗೆ ನೂರು ರೂಪಾಯಿ ಸಿಕ್ಕಿದೆ. ನೀನು ಒಂದೇ ಒಂದು ಸಲ ಸ್ವಲ್ಪವೂ ತಪ್ಪಿಲ್ಲದೆ ’ಉತ್ಸವ’ ಪದವನ್ನು ಕರಾರುವಾಕ್ಕಾಗಿ ಅಂದುಬಿಡು, ಈ ನೂರು ನಿನಗೇ ಎಂದಾಗ ಎಲ್ಲರೂ ಸ್ಟನ್ ಆಗಿನಿಂತುಬಿಟ್ಟಿದ್ದರು.
 
     ನೂರು ರೂಪಾಯಿಗಳಲ್ಲ್ಲಿ ಹತ್ತು ದಿನದ ಖರ್ಚು ತೂಗಿಸಬಲ್ಲ ಕಾಲವಾಗಿತ್ತದು. ಕಾಜು ನಿಂತಲ್ಲೇ ಸ್ಥಿರವಾದ, ದೀರ್ಘ ಉಸಿರು ಹಿಡಿದು ಬಿಟ್ಟು ಮತ್ತೆ ಮತ್ತೆ ಬಿಟ್ಟ. ತೀರ ’ಪೋಕಸ್’ ಮಾಡುವವನಂತೆ ಏಕಾಗ್ರಚಿತ್ತನಾಗಿ, ಕಬಾಬುವನ್ನೇ ದಿಟ್ಟಿಸತೊಡಗಿದ. ಕಾಬ್, "ಓಯ್ತು ನಿನ್ನ ಪಂಥ. ಮೊದ್ಲು ಕಾಸು ಮಡಗಿ ಮಾತಾಡು ಸಿವ" ಎಂದ ಮಮಾ, ಪಂದ್ಯಕ್ಕೆ ಮುಂಚೆಯೇ ಫಲಿತಾಂಶವನ್ನು ಹೊರಗೆಡವುವವನಂತೆ. ಕಾಜು ಮೂರು ನಿಮಿಷದ ನಂತರ ಒಮ್ಮೆಲೆ ನುಡಿದದ್ದು ಹೀಗೆ, "’ಉಸ್ತವ!!’, ಕೊಡೂ ಸಿವಾ. ಸರಿಯಾಗಿ ಹೇಳಿದೆನಲ್ಲ ಉತ್ಸವದ ಹೆಸರನ್ನ!" ಎಂದು ಕಬಾಬು ಕಡೆ ಜೋಶಿನಲ್ಲಿ ಬರತೊಡಗಿದ್ದ. ಎಲ್ಲರೂ ಹೊಟ್ಟೆಹಿಡಿದುಕೊಂಡು ’ಪಕಪಕ’ ನಗತೊಡಗಿದರೂ ಏನು ಎಡವಟ್ಟಾಯಿತು ಎಂದು ಆತನ ಅರಿವಿಗೆ ಬರಲಿಕ್ಕೆ ದೀರ್ಘಕಾಲವೇ ಹಿಡಿಯಿತು. ಇಂತಹ ಪ್ರಸಂಗಗಳಿಂದಾಗಿಯೇ ’ಕಾಜು ರಟೇಲ್’ ಎಂಬ ಹೆಸರಿಗೇ ಬೇರೆ ಏನೋ ಮಿಸ್ಸಿಂಗ್ ಲಿಂಕ್ ಇರಬೇಕೆಂದೂ, ಆತನೇ ತನ್ನ ಶೈಲಿಗನುಗುಣವಾಗಿ ಅದನ್ನು ಮಾರ್ಪಡಿಸಿಕೊಂಡುಬಿಟ್ಟಿದ್ದಾನೆಂತಲೂ ಎಲ್ಲರೂ ಭಾವಿಸತೊಡಗಿದರು. 
 (೪೩)
ಯಾವಾಗಲೂ ಶಾಂತಭಾವದವನಾದ ಕಾಜು ರಟೇಲ ಒಮ್ಮೆ ಬಿಡಾನ ಬಳಿ ಬಂದು ಹೇಳಿದ್ದು ಹೀಗೆ, "ಏನ್ ಕಾಲ ಬದ್ಲಾಗೋಯ್ತು ಸಿವಾ. ಹುಡ್ಗಾ ಉಡ್ಗಿ ಫಿಲ್ಲರ್ ಹಿಂದೆ ಫಕ್ಕಾಫಕ್ಕಾ ಕುಂತು ಏನೇನೋ ಮಾಡಂಗಾಗೋಯ್ತಲ್ಲ" ಎಂದುಬಿಟ್ಟಿದ್ದ. ಇಂದಿಗೂ ಅದು ಪರಿಷತ್ತಿನಲ್ಲಿ, ಮತ್ಯಾರ ಒಡೆತನದ ಹೆಸರಿನಲ್ಲಿ ಚಾಲ್ತಿಯಲ್ಲಿರುವ ಧ್ಯೇಯವಾಕ್ಯದಂತಾಗಿಬಿಟ್ತಿರುವುದಕ್ಕೆ ಅಲ್ಲಿನ ಫಿಲ್ಲರ್ ಫಿಲ್ಲರ್‌ಗಳೂ ಸಾಕ್ಷಿಗಳಾಗಿವೆ. 
 
     ಕಾಜುವನ್ನು ಕುರಿತಾಗಿ ಮಮಾ ಹೇಳಿದ ಘಟನೆಯೊಂದು ಬಾರಿ ಮನೋರಂಜನೆಯ ಸುದ್ಧಿಯಾಗಿಬಿಟ್ಟಿತ್ತು, ಸುತ್ತೂ ಹತ್ತಾರು ಕಲಾಶಾಲೆಗಳಲ್ಲಿ. ಘಟನೆ ಹೀಗಿತ್ತು. ದೂರದ ಊರಲ್ಲಿರುವ ಸಹಪಾಠಿಯೊಬ್ಬಳು ಪಾಜುವಿನ ಮನೆಗೆ ಟೆಲಿಗ್ರಾಮ್ ಕಳಿಸಿ, ತನ್ನ ಪರಿಷತ್ತಿನ ಕಲಾ ಪರೀಕ್ಷೆಯ ರಿಸಲ್ಟ್ ಏನಾಯಿತೆಂದು ಕೇಳಿದ್ದಳಂತೆ. ಪಾಜು ಕೊಟ್ಟ ಪ್ರತಿ ಟೆಲಿಗ್ರಾಮಿನ ಟಿಪ್ಪಣಿ ನೋಡಿ ಆಕೆ ಆತ್ಮಹತ್ಯೆಗೆ ಪ್ರಯತ್ನಿಸಿದಳಂತೆ. ನಂತರ ಕೋರ್ಟ್ ಕಟಕಟೆಯಲ್ಲಿ ಆಕೆಯ ಕಡೆಯವರು ಪಾಜು ಮೇಲೆ ಕೇಸ್ ಹಾಕಿದರಂತೆ.
 
"ಮೈ ಲಾರ್ಡ್, ಈತ ಉದ್ದೇಶಪೂರ್ವಕವಾಗಿ ನನ್ನ ಅಹವಾಲುಗಾರ್ತಿಗೆ ’ಫೇಲ್ ಆಗಿದ್ದೀಯ’ ಎಂದು ಸುಳ್ಳು ಟೆಲಿಗ್ರಾಂ ಕೊಟ್ಟು ಆಕೆಯು ಆತ್ಮಹತ್ಯೆಗೆ ಯತ್ನಿಸಲು ಪ್ರೇರಣೆ ನೀಡಿದ್ದಾನೆ"  ಎಂದು ವಾದಿಸಿದರಂತೆ ಲಾಯರ್.
"ಸುಳ್ಳು ಮೈ ಗಾರ್ಡ್. ಆಕೆಯ ಸರಿಯಾದ ಫಲಿತಾಂಶವನ್ನು ನಮೂದಿಸಿಯೇ ನಾನು ತಂತಿ ಕಳಿಸಿದ್ದು".
"ನೀವು ಬಳಸಿದ ಪದಗಳ ವಸ್ತುನಿಷ್ಠ ವರದಿ ಕೊಡಿ"
"ಸ್ವಲ್ಪ ಸಿಂಫಲ್ ಆಗಿ ಹೇಳಿ ಯುವನ್ ಆನಾರ್, ನನಗೆ ಅರ್ಥವಾಗಲಿಲ್ಲ."
"ಯೋವ್, ಟೆಲಿಗ್ರಾಮಲ್ಲಿ ಏನ್ ಬರ್ದೆ ಅಂತ ಸರಿಯಾಗಿ ಹೇಳಪ್ಪಾ. ಒಂದು ಪದಾನೂ ಹೆಚ್ಚೂಕಮ್ಮಿ ಇರಬಾರದು."
"ನೀನು ’ಪಿ’ ಅಲ್ಲ ’ಎಫ್’ ಅಂತ ತಂತಿ ಕಳಿಸಿದ್ದೆ ಆಕೆಗೆ."
"ಏನಮ್ಮಾ ನೀನೇನು ಹೇಳ್ತೀಯ ಇದಕ್ಕೆ?"
"ನಾನು ಪಿ ಅಂದ್ರೆ ಪಾಸ್ ಅಲ್ಲ, ’ಎಫ್’ ಅಂದ್ರೆ ಫೇಲ್ ಅಂತ ಸರಿಯಾಗಿ ಅರ್ಥಮಾಡಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದೆ ನಾನು."
"ನೀನು ’ಪಿ’ ಅಂದ್ರೆ ’ಪೇಲ್’ ಅಲ್ಲ, ’ಎಫ್’ ಅಂದ್ರೆ ’ಫಾಸ್’ ಅಂತ ಸರಿಯಾಗಿ ಅರ್ಥ ಬರುವಂತೆ ಸುದ್ದಿಕಳಿಸಿದ್ದೆ ನಾನು," ಎಂದ ಕಾಜುವನ್ನು ಕೋರ್ಟಿನವರು ಬಿಟ್ಟು ಕಳಿಸಿದರೆ, ಹುಡುಗಿ ಕಡೆಯವರು ನಾಲ್ಕು ಬಿಟ್ಟು ಕಳಿಸಿದ್ದರಂತೆ, "ಮಗನೇ, ಭಾಷೆ ಸರಿಯಾಗಿ ಕಲಿಯದೆ ಒಂದು ಹುಡುಗಿ ಜೀವ ತೆಗೆದುಬಿಡುತ್ತಿದ್ದೆಯಲ್ಲೋ," ಎಂದು.
ಅದಕ್ಕೂ ಸೋಲದ ಪಾಜು ಹೇಳಿದ್ದನಂತೆ, "ಯಾಕೆ, ಸರಿಹೋಯ್ತು. ಹುಡುಗೀನ ಸರಿಯಾಗಿ ಬೆಳೆಸದೆ ಒಂದು ಒಂದಿಡೀ ಭಾಷೆಯನ್ನೇ ಹಾಳುಮಾಡಿಬಿಡುತ್ತಿದ್ದೀರಲ್ರಿ ನೀವುಗಳು," ಎಂದು.
 
     ಇದೆಲ್ಲ ಸೃಷ್ಟಿಸಿ ಹೇಳಿದ ಮಮಾ ಕೊನೆಗೆ ಕೊಡುತ್ತಿದ್ದ ಪಂಚ್‌ಲೈನ್ ಹೀಗಿರುತ್ತಿತ್ತು, "ಕೋರ್ಟ್ ಆತನಿಗೆ ಶಿಕ್ಷೆ ವಿಧಿಸಿದ್ದಲ್ಲಿ, ಒಂದು ಇಡಿಯ ’ಬಾಕ್ಸ್‌ಪರ್ಡ್’ ಡಿಕ್ಷನರಿ ಕೊಡಬಹುದಾದ ಅಹ್ಲಾದವನ್ನೇ ಕೊಂದಂತಾಗಿಬಿಡುತ್ತಿತ್ತಲ್ಲ, ಛೇ," ಎಂದು.
"ಫಂಡಿತ ಫಾಮರರಿಬ್ಬರೂ ತಮ್ಮ ಫರ್ಪಾರ್ಮೆನ್ಸ್ ಅಭಿವೃದ್ಧಿಫಡಿಸಿಕೊಳ್ಳಲು ನನ್ನ ಬಾಕ್ಸ್‌ಪರ್ಡ್ ಡಿಕ್ಷನರಿ ಬಹಳ ಸಹಕಾರಿಯಲ್ವ" ಎಂದು ಪಾಜು ತನ್ನ ಮೀಸೆಯನ್ನು ತನ್ನದೇ
ತುಟಿಗಳಿಗೆ ಇನ್ನೂ ಮುತ್ತುಕೊಡುವಂತೆ ಒತ್ತಿಹಿಡಿವ ಅಭ್ಯಾಸವನ್ನು ಸುಲಭಕ್ಕೆ ಬಿಟ್ಟಿಕೊಡದೆಲೇ ಹೇಳಿ ಆಗಾಗ ನಗುತ್ತಿರುತ್ತಾನೆ./ /
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):