ನೆನಪಿನ ಚಿತ್ರಕಲಾ ಶಾಲೆ: ಭಾಗ ೧೬--’ಕಾಲದ ಕೊಳವೆಯಲ್ಲಿ ಹಿಂದಿರುಗಿದ ಕಥೆ’

5

 

(೪೪)
ಪರಿಷತ್ತಿನ ಅಥವ ಪಾಜು ಕರೆಯುತ್ತಿದ್ದಂತೆ ’ಫರಿಷತ್ತಿನ’ ಸ್ಥಿತಿಗತಿ ೧೯೮೮ರಲ್ಲಿ ಹೀಗಿರಲಾಗಿ, ನಾವೆಲ್ಲರೂ ಮೂರನೇ ವರ್ಷದಲ್ಲಿ ಚಿತ್ರಕಲೆಯನ್ನು ಕಲಿಯುತ್ತಿದ್ದೆವು. ಅದರ ಮುಂದಿನ ವರ್ಷ ’ಫೈಂಟಿಂಗ್’ ಟೀಚರೊಬ್ಬರೊಂದಿಗೆ ಜಗಳವಾಡಿಕೊಂಡದ್ದರಿಂದ ಮಮಾ ಎಂಬ ಕರ್ಣನ ಪಾಲಿಗೆ ಶಿಲ್ಪಕಲಾ ವಿಭಾಗದ ದಾರಾಬೇಸ್ ಎಂಬ ವಂಗ ದೇಶದ ಉಪಾಧ್ಯಾಯರು ತಮ್ಮ ಸುಪರ್ದಿಗೆ ಆತನನ್ನು ತೆಗೆದುಕೊಂಡದ್ದರಿಂದ ಮಮಾ ಎರಡನೇ ವರ್ಷದಲ್ಲೇ ಉಳಿದುಕೊಂಡ, ಬದಲಾದ ಸ್ಪೆಷಲೈಸೇಷನ್ ವಿಷಯದೊಂದಿಗೆ (ಚಿತ್ರಕಲೆಯಿಂದ ಶಿಲ್ಪಕಲೆಗೆ). ಪ್ರಸ್ತುತ ನಿಗೂಢ, ತಮಾಷೆ ಪತ್ರವ್ಯವಹಾರದ ಸುದ್ಧಿ ಅದುಹೇಗೋ ಬಾಯ್ಸ್ ಕಲಾಶಾಲೆ (ಬ್ಲ್ಯಾಕ್ ಅಂಡ್ ವೈಟ್ ಕಲಾಶಾಲೆ)ಯವರಿಗೆಲ್ಲಾ ತಿಳಿದು ಹೋಗಿತ್ತು. ಅದೊಂದು ಪರಿಷತ್ತಿಗೆ ವ್ಯತಿರಿಕ್ತವಾದ ಬೋಧನೆಯನ್ನೊಳಗೊಂಡ, ಸಮೀಪದ ಶಾಲೆ. 
ಕನ್ನಡ ಸಿನೆಮಗಳಲ್ಲಿ ನಾಯಕ ದ್ವಿಪಾತ್ರ ಮಾಡುವಾಗ, ಅವರುಗಳಲ್ಲೊಬ್ಬ ವಿಲನ್ ಆಗಿರುತ್ತಾನಲ್ಲ ಹಾಗೆ ಪರಿಷತ್ತಿಗೆ ’ಬಾಯ್ಸ್ ಕಲಾಶಾಲೆ’. ನಂಬಲು ಸಾಧ್ಯವಾಗದಷ್ಟು ’ಕಪ್ಪು-ಬಿಳುಪಿನ ಸಂಬಂಧ’ವಿತ್ತು ಈ ಎರಡೂ ಶಾಲೆಗಳ ನಡುವೆ: ಪರಿಷತ್ತಿನಲ್ಲಿ ’ಯೇತಿ’ ಎಂಬುದು ಬಾಯ್ಸ್ ಶಾಲೆಯಲ್ಲಿ ’ಪ್ರೇತಿ’ ಎಂದಾಗುತ್ತಿತ್ತು. ಇಲ್ಲಿನಂತಹವರೇ, ಇಲ್ಲಿನಂತಹದ್ದೇ, ಕಡೆಯದಾಗಿ ಇಲ್ಲಿನದ್ದೇ ಅಲ್ಲೂ ಇರುತ್ತಿತ್ತು-ವಿರುದ್ಧಾರ್ಥಕವಾಗಿ. ಉದಾಹರಣೆಗೆ ಪರಿಷತ್ತಿಗೆ ಒಬ್ಬರೇ ಮೇಷ್ಟ್ರು ಎಂಬಂತಿದ್ದರೆ ಬಾಯ್ಸ್ ಶಾಲೆಯಲ್ಲಿ ಮೇಷ್ಟ್ರೇ ಇರುತ್ತಿರಲಿಲ್ಲವೆಂದಲ್ಲ, ಒಬ್ಬರೇ ಎಲ್ಲವನ್ನೂ ನಡೆಸಬಲ್ಲ ಗುಣವಿದ್ದವರ‍್ಯಾರೂ ಇರುತ್ತಿರಲಿಲ್ಲ. ಇಲ್ಲಿ ತೀರ ಕಡಿಮೆ ಹೆಣ್ಣು ಉಪಾಧ್ಯಾಯರುಗಳಿದ್ದರೆ, ಅಲ್ಲಿ ಗಂಡು ಟೀಚರ್‌ಗಳೇ ಅಪರೂಪ. ಮತ್ತು ಇಲ್ಲಿ ಇದ್ದದ್ದನ್ನು ಇದ್ದಂತೆ ಸ್ವೀಕರಿಸುವ ಗುಣವಿದ್ದರೆ ಅಲ್ಲಿ ಇಲ್ಲದ ಗುಣವನ್ನೂ, ಗುಣರಹಿತತೆಯನ್ನೂ ಸಾಧನೆ ಎಂಬಂತೆ ಬಿಂಬಿಸಲಾಗುತ್ತಿತ್ತು. "ನಿಮ್ಮಲ್ಲಿ ಒಬ್ರೆ ಮೇಷ್ಟ್ರು ಎಲ್ಲವನ್ನೂ ಮಾಡಿದ್ರು, ಪರಿಷತ್ತು ಶುರುಮಾಡಿದ್ದೇ ಅವ್ರು ಅಂತ ಕೊಚ್ಕೊತೀರ. ನಾವು ನೋಡಿ: ಎಲ್ಲರಿಗೂ ಸಮಪಾಲು, ಎಲ್ಲರೂ ಸಮಾನರು, ಯಾರೂ ಹಿಟ್ಲರ್‌ಗಳಲ್ಲ. ಇದನ್ನೇ ಕಲಾಶಿಕ್ಷಣದ ಮುಖೇನ ಸಮತಾವಾದ, ಮಾರ್ಕ್ಸ್‌ವಾದ ಎನ್ನುವುದು," ಇತ್ಯಾದಿಯಾಗಿ ಪರಿಷತ್ತಿನವರಿಗೆ ತರಲೆ ಎನ್ನಿಸುವ ಆದರೆ ಬಾಯ್ಸ್ ಶಾಲೆಯವರಿಗೆ ಗಂಭೀರ ವಾಗ್ವಾದವೆನಿಸುವ ಚರ್ಚೆ ಇರುತ್ತಿತ್ತು. 
ಡಿಸ್ಕೋ ಚಾಮರಂದ್ರ ಎಂಬ ಪ್ರಖಾಂಡ ಸೌಂದರ್ಯಶಾಸ್ತ್ರದ ಪಂಡಿತರು, ಅಥವ ಆ ಶಾಸ್ತ್ರದ ಪ್ರಖಾಂಡ ಪಂಡಿತರು ಪರಿಷತ್ತಿನಲ್ಲಿ ಒಂದು ಉಪನ್ಯಾಸ ನೀಡಿದರೆ, ಅವರನ್ನು ಉಘೇ ಉಘೇ ಎಂದು ಹೊಗಳಿ, ಹೂವು-ಹಣ್ಣು-ಹಂಪಲು-ಶಾಲು-ಅವುಗಳಿಗೆ ಬುಟ್ಟಿ-ಅದರಲ್ಲಿ ಹಾಕಲಿಕ್ಕಾಗಿ ಜೊತೆಗೊಂದಿಷ್ಟು ಹಣ-ಎಲ್ಲವನ್ನೂ ಅವರಿಗೆ ಕೊಡುಗೆಯಾಗಿ ನೀಡುತ್ತಿದ್ದರು ಪರಿಷತ್ತಿನಲ್ಲಿ. ಅದೇ ಡಿಸ್ಕೋ ಸಾರ್ ಒಮ್ಮೆ ಬಾಯ್ಸ್ ಕಲಾಶಾಲೆಯಲ್ಲಿ ಪ್ರವಚನ ನೀಡಿದಾಗ ತರ್ಕಬದ್ದವಾದ, ವೈಚಾರಿಕ ಪ್ರಶ್ನೆಗಳನ್ನು ಕೇಳಿ ಅವರನ್ನು ಅನವಶ್ಯಕ ಗೊಂದಲಕ್ಕೀಡು ಮಾಡಿಬಿಟ್ಟಿದ್ದರು ಅಲ್ಲಿನ ವಿದ್ಯಾರ್ಥಿಗಳು. ತರ್ಕ, ವೈಚಾರಿಕತೆಯ ಮೂಲಕ ಮೌಡ್ಯ, ಅಜ್ಞಾನ, ಊಳಿಗಮಾನ್ಯತೆಯನ್ನು ಅಡ್ಡಹಾಕುವುದು ಒಂದು ತೆರನಾದ ಹಿಂಸೆಯೇ ಅಲ್ಲವೆ? 
ಒಂದು ಉದಾಹರಣೆಯನ್ನು ಗಮನಿಸಿ: ಡಿಸ್ಕೋ ಚಾಮರಂದ್ರರು ಬಾಯ್ಸಲ್ಲಿ ಮಾತನಾಡುತ್ತ ೧೯೮೭ರ ಸುಮಾರಿಗೆ ಹೇಳಿದ್ದರು, "ಬೇಕಾದರೆ ಸ್ಟಾಂಪ್ ಪೇಪರ್ ಮೇಲೆ ಬರೆದುಕೊಡ್ತೇನೆ, ಇನ್ನು ಇಪ್ಪತ್ತು ವರ್ಷಗಳಲ್ಲಿ ಆಧುನಿಕ ಚಿತ್ರಕಲೆ ಸತ್ತುಹೋಗುತ್ತದೆ!" ಎಂದು. ಅದಕ್ಕೆ ಅಲ್ಲಿನ ’ವಿಕ್ಷಿಪತ’ನೆಂಬ ಚಾಲಾಕಿ ವಿದ್ಯಾರ್ಥಿ ಎದ್ದು ನಿಂತು ಅವರನ್ನೇ ಪ್ರಶ್ನಿಸಿಬಿಟ್ಟಿದ್ದ. "ಅಲ್ಲ ಸಾ, ನೀವು ಹೇಳೋದು ನೂರು ಪರ್ಸೆಂಟ್ ನಿಜ. ೨೦೧೦ರಷ್ಟು ಹೊತ್ತಿಗೆ ಮಾಡರ್ನ್ ಆರ್ಟ್ ಈ ವಿಶ್ವದಲ್ಲೇ ಎಲ್ಲಿಯೂ ಅಸ್ತಿತ್ವದಲ್ಲಿರುವುದಿಲ್ಲ. ಈಗಾಗಲೇ ಅದು ಸತ್ತು ಹೋಗಿರುವುದರಿಂದ ಆಗ ಅದು ಇರುವುದಿಲ್ಲ. ಅದು ಸತ್ತು ಮುವತ್ತು ವರ್ಷವಾದ ಮೇಲೆ ಈಗ ಯಾಕೆ ಈ ಔಟ್‌ಡೇಟೆಡ್ ಸುದ್ದಿ ಹೇಳುತ್ತಿದ್ದೀರ?" ಎಂದು ನಗಾಡಿದ್ದ.
     ಡಿಸ್ಕೋ ಪಂಡಿತರ ಜೊತೆ ಬಂದಿದ್ದ ಮೇಷ್ಟ್ರಿಗೆ ಕಸಿವಿಸಿ. ಡಿಸ್ಕೋ ಆಡತೊಡಗಿದರು-ಮಾತುಗಳನ್ನು, ಯಾರಿಗೂ ಕೇಳಿಸದಿರುವಾಗ.ಪಿಸುದನಿಯ ಗೊಣಗಾಟದಲ್ಲೇ ಮಾತು ಮುಗಿಸಿದ್ದರು. ಬಾಯ್ಸ್ ಶಾಲೆಯ ತರಲೆ ಬಾಯ್ಸ್‌ಗಳ ತರಲೆ ಅಷ್ಟಿತ್ತು. "ಅಂತ್ಯದಲ್ಲಿ ಇಬ್ಬರೂ ಆಧುನಿಕ ಕಲೆ ಎಂಬುದು ಇನ್ನಿಪ್ಪತ್ತು ವರ್ಷದ ನಂತರ ಇರುವುದಿಲ್ಲ ಎಂದು ಒಪ್ಪಿದ್ದಾಯ್ತಲ್ಲ? ವಿಕ್ಷಿಪತ, ಏನು ನಿನ್ನ ತರಲೆ, ಒಂದೇ ತೀರ್ಮಾನಕ್ಕೆ ಇಬ್ಬರೂ ಬರುವಾಗಲೂ, ಒಂದೇ ಗಮ್ಯ ತಲುಪಿರುವಾಗಲೂ ಏನೋ ತರಲೆ ಮಾರ್ಗವನ್ನು ಅನುಸರಿಸಿ ನೀನು ಎಂತಹ ಪ್ರೊಪೆಸರ್ ಡಿಸ್ಕೋ ಚಾಮರಂದ್ರರನ್ನು ಅವಮಾನಿಸುತ್ತೀಯಲ್ಲ!?" ಎಂದು ಮೇಷ್ಟ್ರು ಗದರಿಕೊಂಡದ್ದರಿಂದ ಯಾರ‍್ಯಾರದ್ದೋ ಅಜ್ಞಾನದ ಬುಡ್ಡೆಗಳು ಒಡೆದು ಹೋಗುವ ಬದಲು, ಕೊನೆಯಲ್ಲಿ ಎಲ್ಲರ ಮುಗ್ದತೆಯ ತಿಳಿಸಾಗರವು ಮತ್ತೆ ಪ್ರಶಾಂತವಾಯಿತು.
(೪೫)
ಬಾಯ್ಸ್ ಶಾಲೆಯ ವಿದ್ಯಾರ್ಥಿಗಳೆಲ್ಲರೂ ಪರಿಷತ್ತಿನ ಕ್ಯಾಂಟೀನಿನ ನೀರಿಲ್ಲದ ಮೋರಿಗೆ ಕಾಲುಹಾಕಿ ಕುಳಿತೇ ವಾದವಾಗ್ವಾದ ಮಾಡುತ್ತಿದ್ದರು. ಏಕೆಂದರೆ ಪರಿಷತ್ತಿನವರು ಮೇಷ್ಟ್ರು ಕಷ್ಟಪಟ್ಟು ಅವರಿವರನ್ನು ಕಾಡಿ, ಬೇಡಿ ದಾನದತ್ತಿಯನ್ನು ತಂದು ಕಟ್ಟಿಸಿದ್ದ ಶ್ರೀಮಂತ ಕಲ್ಲುಕಟ್ಟಡಗಳಲ್ಲಿ ಅಭ್ಯಾಸಮಾಡುತ್ತಿದ್ದರೆ, ಬಾಯ್ಸ್ ಕಲಾಶಾಲೆಯ ಗುರುಶಿಷ್ಯರೆಲ್ಲರೂ ರೂಪಕದ, ಉಪಮೆಯ ಕಟ್ಟಡದಲ್ಲಿ ಬದುಕುತ್ತಿದ್ದರು. ಆದ್ದರಿಂದಲೇ ಅವರುಗಳಿಗೆಲ್ಲಾ ಚಹಾ ಕುಡಿಯಬೇಕೆಂದರೆ ಪರಿಷತ್ತಿನ ಕ್ಯಾಂಟೀನೇ ಗತಿಯಾಗಿತ್ತು. ಆ ರೂಪಕದ, ಉಪಮೆಯ ವಸ್ತುಗಳಿಂದಲಾದರೂ ಗಟ್ಟಿಯಾದ ಕಟ್ಟಡವನ್ನು ನಿರ್ಮಿಸಿದ್ದಿದ್ದೂ ಸಹ ಅಸ್ತಿತ್ವದಲ್ಲಿಲ್ಲದವರಾಗಿದ್ದ ಮೇಷ್ಟ್ರ ಪ್ರತಿರೂಪದಂತಿದ್ದವರ ಪ್ರಯತ್ನದಿಂದ. ಅಥವ ’ಪರಿಷತ್ತಿನ ಮೇಷ್ಟ್ರ ಅನುಪಸ್ಥಿತಿಯ ನೆಗೆಟಿವ್’ ಹೇಗಿರುತ್ತಿತ್ತೋ ಹಾಗಿದ್ದರು ಬಾಯ್ಸ್ ಕಲಾಶಾಲೆಯ ಮುಖ್ಯಸ್ಥರು. ಈ ಮಧ್ಯೆ ಪರಿಷತ್ತು, ಬಾಯ್ಸ್ ಕಲಾಶಾಲೆಗಳ ನಡುವಣ ಸ್ಥಿತಿಯಲ್ಲಿದ್ದದ್ದು ಕೆನ್ ಮಹಾವಿದ್ಯಾಶಾಲೆ. 
ಪರಿಷತ್ತಿನ ವಿದ್ಯಾರ್ಥಿಗಳ ಮುಗ್ಧತೆಗೆ ಅಪಚಾರ ಬರದಂತೆ ವಿದ್ಯಾಬೋಧನೆ ಮಾಡುತ್ತಿದ್ದುದ್ದರಿಂದ ಬಾಯ್ಸ್ ಕಲಾಶಾಲೆಯು "ಎಕ್ಕುಟ್ಟೋದ, ಹಾದಿತಪ್ಪಿದ, ನೀತಿನಿಯಮಗಳಿಲ್ಲದ ಕಲಾಶಾಲೆಯಾಗಿತ್ತು," ಪರಿಷತ್ತಿನ ಕೆಲವು ಉಪಾಧ್ಯಾಯರುಗಳ ಅಭಿಪ್ರಾಯದಲ್ಲಿ. ಅಂತಹ ಬಾಯ್ಸ್ ಶಾಲೆಯ ಗುಣಲಕ್ಷಣಗಳಿಗೆ ಮೈನ್ ಫಿಗರ್‌ನ ಹೆಸರು ವಿಕ್ಷಿಪತ, ಒಬ್ಬ ವಿದ್ಯಾರ್ಥಿ. ಅಂದರೆ ’ವಿನಾಯಕ ಕ್ಷಿರಸಾಗರ ಪಂಡಿತ ತತಾಚಾರ್’ ಎಂಬುದು ಆತನ ಫುಲ್ ಹೆಸರು. ’ವಿನಾಯಕ’ ಎಂಬುದು ಆತ ಕ್ವಾಟರ್ರು. ’ವಿನಾಯಕ ಕ್ಷಿರಸಾಗರ’ ಆತನ ಸಿಕ್ಸ್ಟಿ. ’ವಿ.ಕ್ಷಿ.ಪಂಡಿತ’ ಎಂಬುದು ಆತನಿಗೆ ನೈಂಟಿ ಹೆಸರುಗಳಾಗಿತ್ತು. ಯಾರು ಹೇಗೆ ಕರೆದರೂ ಆತ ಕರೆಸಿಕೊಳ್ಳುತ್ತಿದ್ದ. ಆದರೆ ತನ್ನ ಹೆಸರನ್ನು ಪರೀಕ್ಷೆಗಳಲ್ಲಿ ಬರೆವಾಗಿ ಒಮ್ಮೆ ವಿನಾಯಕನೆಂತಲೂ, ಮತ್ತೊಮ್ಮೆ ಸಾಗರನೆಂತಲೂ ಬರೆದು ಆತನ ಮಾರ್ಕ್ಸ್‌ಕಾರ್ಡ್‌ಗಳ ಎಂಟ್ರಿಗಳಲ್ಲಿ ಬಾರಿ ಏರುಪೆರುಗಳಾಗಿಬಿಟ್ಟಿತ್ತು. ಭಕ್ತನಿಂದ ದೈವದವರೆಗೂ ಹೆಸರುಗಳನ್ನು ಕೊಲಾಜ್ ಮಾಡಿ ಇಟ್ಟುಕೊಂಡಿದ್ದರಿಂದಷ್ಟೇ ಆತನನ್ನು ’ಕೊಲಾಜ್ ವಿಕ್ಷಿಪತ’ ಅಥವ ’ಕೋವಿ’ ಎಂದೂ ಕರೆಯುತ್ತಿದ್ದರು. ಆತನ ಅಂಕಗಳು ಅಂಕಪಟ್ಟಿಗಳಲ್ಲಿ ಏರುಪೇರಾದಾಗಲೆಲ್ಲ ವಿಕ್ಷಿಪತ ಆಫೀಸಿನ ಕ್ಲರ್ಕ್ಸ್ ದುಂಡೂರಾಯನೊಂದಿಗೆ ವಾದ ಮಾಡುತ್ತಿದ್ದ. ಅದರ ಒಂದು ಸ್ಯಾಂಪಲ್:
"ಒಂದು ಕಡೆ ೬೦ ಮತ್ತೊಂದು ಕಡೆ ಅದೇ ಅಂಕವನ್ನು ಹಿಂದುಮುಂದಾಗಿ ೦೬ ಅಂತ ಎಂಟ್ರಿ ಮಾಡಿದ್ದೀರಲ್ಲ, ಬುದ್ದಿ ಇಲ್ಲವೇನ್ರಿ ನಿಮಗೆ?" ಎಂದು ಗದರಿಕೊಳ್ಳುತ್ತಿದ್ದ ವಿಕ್ಷಿಪತ.
"ಒಂದು ಸಲ ವಿನಾಯಕ ಮತ್ತೊಮ್ಮೆ ಕ್ಷಿರಸಾಗರ ಅಂತ ಬರ್ದಿದ್ದೀರಲ್ಲ, ನಿಮಗೆ ನಾಲ್ಕು ಬುದ್ದೀನ? ನಿಮ್ಮ ಪುಣ್ಯ, ೦೬ ಮತ್ತು ೬೦ ಅಂಕಗಳೆರಡೂ ನಿಮ್ಮ ಹೆಸರಿಗೇ ಸೇರಿದ್ದು ಅಂತಾದ್ರೂ ಆಯ್ತಲ್ಲ. ಹೋಗಯ್ಯಾ, ಬಂದ್ಬಿಟ್ಟ, ನನಗೇ ಬುದ್ದಿ ಹೇಳೋಕೆ," ಎಂದಿದ್ದ ಸಣಕಲ ದುಂಡೂರಾವ್. 
(೪೬)
ಅನೇಖ ಮತ್ತು ವಿಕ್ಷಿಪ್‌ತ ಒಂದೇ ನಾಣ್ಯದ ಎರಡು ಮುಖಗಳಂತಿದ್ದರು. ಬಾಯ್ಸ್ ಶಾಲೆ ಮತ್ತು ಪರಿಷತ್ತು ಇದ್ದ ಹಾಗಿದು. "ಪರಿಷತ್ತು ಮಾಡರ್ನ್ ಶಾಲೆಯಾದಲ್ಲಿ ಬಾಯ್ಸ್ ಶಾಲೆಯು ಸಮಕಾಲೀನ ಕಲೆಯನ್ನು ಕುರಿತದ್ದು," ಎಂದಾತ ಯಾವಾಗಲು ವಾದ ಮಾಡುತ್ತಿದ್ದ, ’ಸಾಂಪ್ರದಾಯಿಕ ಕಲೆಯೂ ಸಮಕಾಲೀನವೇ’ ಎಂದು ತಿದ್ದುವವರ ಮುಂದೆ. 
 
ಒಟ್ಟಾಗಿ ಆ ೧೯೮೮ರ ವರ್ಷ ಒಂದು ವಿಕ್ಷಿಪ್ತ ಕಾಲವೇ ಆಗಿತ್ತು.
 
ಅನೇಖನ ತಲೆನೋವು, ಅದರ ಪರಿಹಾರದ ರೂಪದಲ್ಲಿ ಆತನಿಗೆ ದಕ್ಕುತ್ತಿದ್ದ ಮಂದಹಾಸ, ಪರಿಷತ್ತಿನ ವಿದ್ಯಾರ್ಥಿಗಳಲ್ಲನೇಕರು ಪತ್ರಮುಖೇನ ತಮ್ಮ ಸಹಪಾಠಿಗಳೊಂದಿಗೆ ವ್ಯವಹರಿಸುತ್ತಿದ್ದುದು (ಅಥವ ಹಾಗೆಂದು ಭಾವಿಸಿದ್ದುದು, ಏಕೆಂದರೆ ಪತ್ರಗಳಿಗೆ ಪ್ರತ್ಯುತ್ತರವು ಯಾರ ಹೆಸರು ಮತ್ತು ಬರವಣಿಗೆಯ ಶೈಲಿಯಲ್ಲಿತ್ತೋ ಅಂತಹವರು ಅದನ್ನು ಬರೆದವರು ತಾವೇ ಎಂದು ಒಪ್ಪಿಕೊಂಡ ಒಂದೇ ಒಂದು ಉದಾಹರಣೆಯೂ ಇರಲಿಲ್ಲವಲ್ಲ!), ಜೊತೆಗೆ ಪ್ರತ್ಯುತ್ತರ ಬರೆದವರೆಲ್ಲರೂ ಏನೋ ಮೋಡಿಗೆ ಒಳಗಾದಂತೆ ಅನೇಕ ನಿಗೂಢ ಪದಗಳನ್ನು ತಮ್ಮ ಬರವಣಿಗೆಯಲ್ಲಿ ಖಾತೆಗೆ ಅಳವಡಿಸಿರುವುದನ್ನು ಕಂಡು ಖುಷಿಗೊಳ್ಳುತ್ತಿದ್ದರು. ಉದಾಹರಣೆಗೆ,"ಬಾಬ್ರಿ ಇಶ್ಯೂ ಮತ್ತು ಸೆಪ್ಟೆಂಬರ್ ಇಲೆವನ್ ನಂತರ ಪೆರಿಸ್ಟ್ರೋಯಿಕ ಸಾಧ್ಯವೇ ಆಗುತ್ತಿರಲಿಲ್ಲ ಎಂಬ ಮೆಸೇಜನ್ನು ನನ್ನ ನೋಟ್‌ಬುಕ್ಕಿನ ಮೂಲಕ ಜೀಮೈಲಿನಲ್ಲಿ ಲಾಗಿನ್ ಆಗಿ ಫೇಸ್‌ಬುಕ್ಕಿನ ಮತ್ತು ಟ್ವಿಟ್ಟರ್ ಮೂಲಕ ಕಳಿಸಿದಂತೆ ಎಂಬ ವಾಕ್ಯವನ್ನು ಕೇಳಿ ಪೇಜರ್ ಮತ್ತು ಫ್ಲಾಪಿಗಳು ಶಾಕ್ ಆದವು," ಎಂಬ ವಾಕ್ಯವನ್ನು ೧೯೮೮ರಲ್ಲಿ, ಭಾರತದಲ್ಲಿ ಕಂಪ್ಯೂಟರ್ ಮತ್ತು ಮೊಬೈಲ್ ಫೋನ್ ಎಂದರೇನೆಂದೂ ತಿಳಿಯದಿದ್ದಾಗ ಬಿಡಾನ ಹೆಸರಿನಲ್ಲಿ ಬಂದ ಪ್ರತಿಕ್ರಿಯಾ ರೂಪದ ಪತ್ರವು ನಲ್ಲಸಿವನ್ನಿಗೆ ತಲುಪಿದಾಗ, ಆತ ಅದನ್ನು ಎಲ್ಲರಿಗೂ (ಬಿಡಾನನ್ನೂ ಸೇರಿಸಿದಂತೆ) ತೋರಿಸಿದಾಗ, ಆ ವಾಕ್ಯದಲ್ಲಿ ಅರ್ಥವಾಗದ ಪದಗಳನ್ನು ಎಲ್ಲರೂ ಎಣಿಸತೊಡಗಿದರು--ಮಾರನೇ ದಿನ ಅವೆಲ್ಲವೂ ಮಾಯವಾಗುತ್ತವೆ ಎಂಬ ಏಕತ್ರವಾದ ನಂಬಿಕೆಯಿಂದ. 
ಅದನ್ನು ಕೂಲಂಕುಷವಾಗಿ ಅಂದೇ ಪರೀಕ್ಷಿಸಿದ ವಿಕ್ಷಿಪತ ಮತ್ತು ಅನೇಖರು ("ಒಳ್ಳೆ ಅವಳಿಜವಳಿಗಳಂತೆ ಕಾಣುತ್ತಾರೆ ನನ್ಮಕ್ಳು, ಕಣ್ಮುಚ್ಚಿ ನೋಡಿದರೆ," ಎನ್ನುತ್ತಿದ್ದ ಮಮಾ, ಅವರಿಬ್ಬರನ್ನೂ ಒಟ್ಟಿಗೆ ಕಂಡಾಗ) ಹೇಳಿದ ತೀರ್ಮಾನ ಹೀಗಿತ್ತು: ಬಿಡಾನು ಬರೆದ ಈ ವಾಕ್ಯದಲ್ಲಿ ಇಪ್ಪತ್ತು ಪದಗಳು ಅರ್ಥವಾಗುತ್ತವೆ. ಹತ್ತು ಪದಗಳು (ಬಾಬ್ರಿ ಇಶ್ಯೂ, ಸೆಪ್ಟೆಂಬರ್ ಇಲೆವನ್, ಪೆರಿಸ್ಟ್ರೋಯಿಕ, ನೋಟ್‌ಬುಕ್ಕಿನ, ಜೀವಲಿನಲ್ಲಿ, ಲಾಗಿನ್, ಫೇಸ್‌ಬುಕ್ಕಿನ, ಟ್ವಿಟ್ಟರ್, ಪೇಜರ್ ಮತ್ತು ಫ್ಲಾಪಿಗಳು) ಅರ್ಥವಾಗದ ಪದಗಳ ಸುತ್ತಲೂ ಇರುವುದರಿಂದಾಗಿ, ಆ ಪರಿಚಿತ ಬಹುಸಂಖ್ಯಾ ಪದಗಳೂ ಅರ್ಥಹೀನವಾಗಿವೆ ಎಂದು.  
(೪೭) 
   "ಭವಿಷ್ಯದಿಂದ ಅಂದರೆ ೨೦೧೧ರಿಂದ ಈ ಸಂದೇಶ ಬಂದಿದೆ ಎಂದೇ ಭಾವಿಸುವ. ಆದರದು ಹೇಗೆ ಸಾಧ್ಯ, ನಾವು ಬದುಕುತ್ತಿರುವುದು ಇಪ್ಪತ್ತನೇ ಶತಮಾನದ ಅಂತ್ಯದಲ್ಲಿ?" ಎಂದಿದ್ದ ಬಿಡಾ, ತನ್ನ ಹೆಸರಿನಿಂದಲೇ ಬರೆಯಲಾಗಿದ್ದ ಪತ್ರವನ್ನು ಹಿಂದುಮುಂದು ತಿರುಗಿಸುತ್ತ. ಶಿಲ್ಪಕಲಾ ಸ್ಟುಡಿಯೋದಲ್ಲಿ ಕುಳಿತಿದ್ದ ಆತ ಇತರರೊಂದಿಗೆ, ನೇತಾಡುತ್ತಿದ್ದ ಪ್ರಶ್ನಾಮೂರ್ತಿಯನ್ನು ಸಂಪೂರ್ಣವಾಗಿ ಮರೆತೇ ಬಿಟ್ಟಿದ್ದರು. 
     "ಲೆಟರಿನಲ್ಲಿ ಅಕ್ಷರಗಳನ್ನು ಬರೆದು ಭವಿಷ್ಯ ಕಾಲಕ್ಕೆ ಕಳಿಸೋದಾದರೆ, ನನ್ನ ಬಾಡಿನೂ ಯಾಕ್ರಮ್ಮಾ ಅಂಗೆ ಒಂದ್ಸಲ ಪೋಸ್ಟ್ ಮಾಡಿಬಿಡಬಾರದು, ಅಟ್‌ಲೀಸ್ಟ್ ಈ ಎರಡು ಕೋಣೆಗಳ ನಡುವಣ ಗೋಡೆಯ ನಡುವಿನ ನರಕದಿಂದಲಾದರೂ ತಪ್ಪಿಸಿಕೊಳ್ಳುವೆ," ಎಂದು ನೇತಾಡುತ್ತಲೇ ಮೆಲಾಂಕಲಿಕ್ ದನಿಯಲ್ಲಿ ಕೇಳಿದ್ದ ಪ್ರಶ್ನಾಮೂರ್ತಿ.
"ಮಗ್ನೆ, ಈಗ ನಿನ್ನ ಭವಿಷ್ಯವೇ ತೇಲಾಡುತ್ತಿದೆ, ನಿನ್ನ ಬಾಡಿಗಾಗಿರಬಹುದಾದ ಮಲ್ಟಿಪಲ್ ಫ್ರಾಕ್ಚರ್‌ಅನ್ನು ಊಹಿಸಬಹುದಾದರೆ. ಮಾತಾಡ್ದೀರ ಸುಮ್ ಕುತ್ಕೋ, ಅಲ್ಲ ನಿಂತ್ಕೋ, ಅಲ್ಲ ನೇತಾಡು, ಇನ್ನೇನು ಏಣಿ ಬಂದೇಬಿಡುತ್ತದೆ," ಎಂದು ಗದರಿಕೊಂಡಿದ್ದ ವಿರಾ. 
"ಪ್ರಶ್ನೆ, ನೀನು ಈಗ್ಲೂ ಭವಿಷ್ಯ ಕಾಲದಲ್ಲೇ ನೇತಾಡ್ತಾ ಇರೋದು ಕನಾ. ಅದಕ್ಕೆ ನಾವ್ಯಾರೂ ತಲೆಕೆಡಿಸಿಕೊಳ್ಳದೆ ನಿರಾಳವಾಗಿರೋದು, ಯಾವುದೋ ಭವಿಷ್ಯದ ನಕ್ಷತ್ರವನ್ನು ನೋಡಿದಂತೆ ನಿನ್ನ ನೋಡಿಕೊಂಡು," ಎಂದುಬಿಟ್ಟ ಮಮಾ. 
     ಪ್ರಶ್ನೆಗೆ ಉತ್ತರ ಸಿಗದ ಅನೇಕ ಪ್ರಶ್ನೆಗಳು ಹುಟ್ಟಿಕೊಳ್ಳತೊಡಗಿದವು. ಆತ ಮೊದಲೇ ಸುಸ್ತಾಗಿದ್ದವನು ಈಗ ದುಃಖಿತನೂ ಆಗತೊಡಗಿ, ಗೋಡೆಯ ಮೇಲೆ ತೂಗುಹಾಕಲಾಗಿರುವ ಬಟ್ಟೆಯಂತೆ ಕಂಡುಬರಬಹುದಾದ ಹಂತವನ್ನು ತಲುಪಿಬಿಟ್ಟಿದ್ದ. 
"ನೀನೂ ನಿನ್ನ ಭವಿಷ್ಯದ ಪ್ರಶ್ನಾಮೂರ್ತಿಗೆ ಪತ್ರವೇನೂ ಬರೆದಿಲ್ಲವೇನೋ ಪ್ರಶ್ನೆ?" ಎಂದು ಮುಗ್ಧನಾಗಿ ಕೇಳಿದ್ದ ಕಾಜು ರಟೇಲ್, ಸ್ವಲ್ಪ ಹೊತ್ತಿನ ನಂತರ.
"ಬರ್ದಿದ್ದೆ, ನೆನ್ನೆ."
"ಇದೇ ಮೊದಲ ಸಲ ಬರೆದದ್ದಾ?"
"ಹೌದು, ಏನೀವಾಗ?"
"ಏನ್ ಬರ್ದಿದ್ಯೋ?"
"ಏನೂ ಇಲ್ಲ."
"ಕೇಳ್ರಪ್ಪಾ ಏನೂ ಬರೆಯದ ಖಾಲಿ ಹಾಳೆಯೊಂದನ್ನು ಪ್ರಶ್ನಾರೂಪೀ ದೇಹದವರು ತಮ್ಮ ಭವಿಷ್ಯದ ಕಾಯಕ್ಕೆ ಕೊಡುಗೆಯಾಗಿ ಕಳಿಸಿದ್ದಾರೆ," ಎಂದು ವೀರಾ ಕೇಕೆ ಹಾಕಿ ನಗತೊಡಗಿದ್ದ.
"ಇರ್ಲಿ ಪ್ರಶ್ನೆ, ಏಮ್ ರಾಸಿಂಡಾವು ಚೆಪ್ರಾ," ಎಂದು ಬಿಡಾ, ಮಮಾ, ನಲ್ಲಸಿವ, ಕಾಜ್‌ರೋಪಿ, ಸೋಕುಮಾರಿ ಎಲ್ಲರೂ ಆತ ಇದ್ದ ಅವಸ್ಥೆಯಲ್ಲೇ ಗೋಳಾಡಿಸತೊಡಗಿದರು. 
"ಭವಿಷ್ಯದ ನಿನ್ನ ಮಗಳಿಗೆ ಪ್ರೇಮ ಪತ್ರ ಬರ್ದಿದ್ಯೇನೋ?"
"ಅಥವ ಮಗನಿಗಾ?" ಎಂದು ಎಲ್ಲ ಸಾಧ್ಯವಾದ ರೀತಿಯಲ್ಲೂ ಪ್ರಶ್ನೆಯನ್ನು ಮಾತಿನಲ್ಲೇ ಚುಚ್ಚತೊಡಗಿದರು.
ನರಕಸದೃಶ್ಯವಾದ ಹಿಂಸೆಯನ್ನು ತಡೆಯುವ ಮಿತಿಯನ್ನು ಮೀರಿದಾಗ ಪ್ರಶ್ನಾಮೂರ್ತಿ ಅಳತೊಡಗಿದ. ಮತ್ತೆ ಯಾರೋ ಸ್ಟೂಲ್ ಮೇಲೆ ಹತ್ತಿ ಆತನ ಒಣ ಗಂಟಲಿಗೆ ಬಿಸಿ ಬಿಸಿ ಟೀ ಸುರಿದರು--ಸೇವೆ ಮತ್ತು ಹಿಂಸೆಯನ್ನು ಒಟ್ಟಿಗೆ ಸ್ವೀಕರಿಸುವ ಕ್ರಮಕ್ಕೆ ಪ್ರಶ್ನೆ ಹೊಂದಿಕೊಂಡುಬಿಟ್ಟಿದ್ದ. ಮತ್ಯಾರೋ ಶಿಲ್ಪಕಲಾ ವಿಭಾಗದ ಒದ್ದೇಬಟ್ಟೆಯಲ್ಲಿ ಆತನ ಬೆವರು ಹರಿಸಿ, "ಅಯ್ಯಯ್ಯೋ, ಪ್ರಶ್ನೆಯ ಬೆವರಿನ ನದಿಯಲ್ಲಿ ನಾನು ಮುಳುಗಿಹೋದೆ, ಈಜು ಬರೋಲ್ಲ, ಕಾಪಾಡ್ರೋ," ಅಂತೆಲ್ಲಾ ನೀನಾಸಮ್ ನಟರೂ ನಾಚುವಂತೆ ಅಭಿನಯಿಸತೊಡಗಿದ. ಮತ್ತೆ ಕಬಾಬು ಪ್ರಶ್ನೆಯ ಕಿವಿಗೆ ಹ್ಯಾಂಡ್ಸ್-ಫ್ರೀ ತಗುಲಿಹಾಕಿ, ಬೆಲ್ಲದಡಬ್ಬದಂತಹ ರೇಡಿಯೋವನ್ನು ಈ ಸಲ ಹುಷಾರಾಗಿ ಕುರ್ಚಿಯ ಮೇಲೆ, ನೇತಾಡದಂತೆ ನೆಲೆನಿಲ್ಲಿಸಿ, ದೂರ ಸರಿದು ನಿಂತು ಮುಸಿಮುಸಿ ನಗತೊಡಗಿದ. ಆದರೂ ಪ್ರಶ್ನೆ ಕೆಂಗಣ್ಣಿನಲ್ಲಿ ಕಬಾಬುವನ್ನು ದುರುಗುಟ್ಟಿದಾಗ ಈತನಿಗೆ ತನ್ನ ತಪ್ಪಿನ ಅರಿವಾಗಿತ್ತು. ಓಡಿಹೋಗಿ ರೇಡಿಯೋವನ್ನು ಆನ್ ಮತ್ತು ಟ್ಯೂನ್ ಮಾಡಿಬಂದ. ಪ್ರಶ್ನೆಯ ಮುಖದ ದುಗುಡ ಇನ್ನೂ ಇಳಿದಿರಲಿಲ್ಲ, ಏಕೆಂದರೆ ಯಾರನ್ನೂ ತನ್ನ ರೇಡಿಯೋ ಮುಟ್ಟಲು ಬಿಡದ ಕಬಾಬು, ಶಾಸ್ತ್ರೀಯ ಸಂಗೀತದ ಕಾರ್ಯಕ್ರಮವನ್ನು ಆನ್ ಮಾಡಿ ಬಂದಿದ್ದ! ಶಾಸ್ತ್ರೀಯ ಸಂಗೀತ ಕೇಳಿದರೆ ಸಾಕು ಪ್ರಶ್ನೆಯ ಮೈಗಳ ಮೇಲೆ ಮುಳ್ಳುಗಳು ಏಳುತ್ತಿದ್ದವು. ಶಾಸ್ತ್ರೀಯ ಸಂಗೀತ ಕೇಳುವಾಗಲೆಲ್ಲ ಪ್ರಶ್ನೆ ಎದುರಿಗಿದ್ದರೆ ಆತನನ್ನು ’ಮುಳ್ಳರ್ ಮ್ಯಾನ್’ ಎಂದೇ ಎಲ್ಲರೂ ಕರೆಯುತ್ತಿದ್ದುದು. 
(೪೮)
ಅಷ್ಟರಲ್ಲಿ ಅನೇಖ ತಲೆಹಿಡಿದುಕೊಂಡು, ನೋವು ತಡೆಯಲಾರದೆ ವಿಲವಿಲ ಒದ್ದಾಡಿ, ಶಿಲ್ಪಕಲಾ ವಿಭಾಗದ ಬಾಗಿಲಿನ ಕಡೆಯಿಂದ ಎದ್ದು ರಾತ್ರಿಯ ಕಾರ್ಗತ್ತಲಲ್ಲಿ ಪರಿಷತ್ತಿನ ಬೃಹತ್ ಕಾಂಪೌಂಡಿನ ಮೂಲೆಗೆ ಓಡಿಹೋದನಷ್ಟೇ. ಇತ್ತ ಪ್ರಶ್ನಾಮೂರ್ತಿ ಅನಿವಾರ್ಯವಾಗಿ ’ತ್ರಿಶಂಕು-ಸ್ಥಿತಿ’ಯಲ್ಲಿ ನೇತಾಡಲು ಆರಂಭಿಸಿ ತಲುಪಿ ಅದಾಗಲೇ ಐದಾರು ಗಂಟೆಗಳಾಗಿದ್ದವು. ಎಲ್ಲರೂ ಹೊರಗಿನಿಂದ ಊಟ ತಂದು ತಿಂದು, ಪ್ರಶ್ನೆಗೆ ಇದ್ದಲ್ಲೇ ಇದ್ದಹಾಗೇ, ಚೇರಿನ ಮೇಲೆ ಹತ್ತಿ ತಿನ್ನಿಸಿದ್ದರು. "ಶಿಲ್ಪವಿಭಾಗದಲ್ಲಿ ತಿಂದದ್ದು ನೋ ಮ್ಯಾನ್ಸ್ ಲ್ಯಾಂಡಿನಲ್ಲಿ ಜೀರ್ಣವಾಗಿ (ಮುಂದೊಂದು ದಿನ ಈ ಹೆಸರಿನ ’ಲಗಾನ್’ ಸಿನೆಮಕ್ಕೆ ಬಲಿಷ್ಠ ಶತೃವಾಗಿ ಪರಿಣಮಿಸಿತ್ತು, ಆಸ್ಕರ್ ಪ್ರಶಸ್ತಿ ಪಡೆವಲ್ಲಿ) ಚಿತ್ರಕಲಾ ವಿಭಾಗದಲ್ಲಿ ವಿಸರ್ಜಿತವಾಗುತ್ತಿದೆಯಲ್ಲೋ ಪ್ರಶ್ನೆ," ಎಂದು ತರಲೆ ತರಲೆಯಾಗಿ ಕಿಚಾಯಿಸಿದ್ದ ವೀರಾ.
     ಆತ ಚಿತ್ರಕಲಾ ವಿಭಾಗದಿಂದ ಕೂಗಿ ಹೇಳಿದ್ದರಿಂದ, ಪ್ರಶ್ನೆಯ ಕಿವಿಯಿದ್ದ ತಲೆಯು ಶಿಲ್ಪವಿಭಾಗದಲ್ಲಿದ್ದರಿಂದ, ಆತನೊಬ್ಬನಿಗೆ ಸರಿಯಾಗಿ ಕೇಳಲಿಲ್ಲ. "ಭೂಮಿಯಲ್ಲಿ ಗಟ್ಟಿಯಾಗಿ ನೆಲೆನಿಂತವರು ಮಾತ್ರ ನನ್ನ ಮಾತುಗಳನ್ನು ಕೇಳಿ, ಅರ್ಥೈಸಬಲ್ಲರು," ಎಂಬ ಅಪರೂಪದ ಬುದ್ಧಿವಂತ ಡಯಲಾಗು ಉದುರಿಸಿದ್ದ ವೀರಾ.
ಮತ್ತೆ ಮತ್ತೆ ಎಲ್ಲರೂ ಪ್ರಶ್ನೆಯನ್ನು ಪ್ರಶ್ನಿಸುತ್ತಿದ್ದುದು ಒಂದೇ ವಿಷಯದ ಬಗ್ಗೆ. ಸ್ವತಃ ತನಗೆ ಅಥವ ಭವಿಷ್ಯ ಕಾಲಕ್ಕೆ ಮೊದಲ ಬಾರಿ ಪತ್ರ ಬರೆದಿರುವ ಪ್ರಶ್ನೆ ಏನು ಮತ್ತು ಯಾರಿಗೆ ಬರೆದಿದ್ದಾನೆ ಎಂಬುದು. ಪರಿಸ್ಥಿತಿಯ ಗಾಂಭೀರ್ಯ ಯಾರನ್ನೂ ತಟ್ಟಿರಲಿಲ್ಲ, ಅಲ್ಲಿದ್ದವರೆಲ್ಲಾ ನಮ್ಮ ಅಳತೆಯನ್ನು ಮೀರಲಾರದ ದೇವರ ಮಕ್ಕಳೇ ಆಗಿದ್ದರಿಂದ.
     "ಯಾರೋ ತೀರ ಪ್ರತಿಭಾವಂತನಾಗಿದ್ದವ(ಳು), ಹಾಸ್ಯಪ್ರಜ್ಞೆಯುಳ್ಳಾತ(ಕೆ), ಕೊಲ್ಲಲು ಬೇಕಿದ್ದಷ್ಟು ಕಾಲಾವಕಾಶ ಇದ್ದವ(ಳು), ಅನುಕರಣಾ ಶಕ್ತಿ ಇದ್ದು, ಈ ಪತ್ರಗಳನ್ನು ಬರೆಯುತ್ತಿರಬೇಕು ಇಲ್ಲವೇ ಕಾಲ-ಅವಕಾಶ(ಸ್ಪೇಸ್)ಗಳ ನೆಟ್‌ವರ್ಕಿನಲ್ಲೇ ಏನೋ ಶಾರ್ಟ್ ಸರ್ಕ್ಯುಟ್ ಆಗಿರಬೇಕು. ವ್ಯಕ್ತಿಯಲ್ಲಿ ವ್ಯವಸ್ಥೆಯಲ್ಲಿ ಶಾರ್ಟ್ ಸರ್ಕ್ಯುಟ್ ಆದಾಗಲೇ ಅದನ್ನು ಪ್ರತಿಭೆ ಎಂದು ನಾವು ಗುರ್ತಿಸುವುದು ಅಲ್ಲವೆ!
ಅಷ್ಟರಲ್ಲಿ ಅನೇಖ ಓಡಿಬಂದ, ಶಿಲ್ಪಕಲಾ ವಿಭಾಗಕ್ಕೆ. ಆತನ ತಲೆನೋವು ಮಾಯವಾಗಿ, ಮಂದಸ್ಮಿತನಾಗಿದ್ದ. ’ಮಂದಬುದ್ಧಿಯುಳ್ಳ ಸ್ಮಿತಾ ಎಂಬಾಕೆಯನ್ನು ಮಂದಸ್ಮಿತ ಎಂದು ಕರೆಯಬಹುದಲ್ಲವೆ’ ಎಂಬ ಪಿಜೆಯನ್ನು ತೇಲಿಬಿಟ್ಟಳು ಸ್ಟೈಲಜ. ಆಕೆಯ ನಿಜ ಹೆಸರು, ನೀವು ಗೆಸ್ ಮಾಡಿದಂತೆ, ಶೈಲಜಾ. ಅಲ್ಲೇ ಪರಿಷತ್ತಿನ ಎದುರಿಗೇ ಇದ್ದ ಪಿಜಿಯಲ್ಲಿ ಇಳಿದುಕೊಂಡಿದ್ದ ಆಕೆ, ರಾತ್ರಿ ಊಟದ ನಂತರ ಪ್ರಶ್ನಾಮೂರ್ತಿಯ ತ್ರಿಶಂಕು ಅವಸ್ಥೆಯ ಥ್ರಿಲ್ ಅನುಭವಿಸಲು ಒಂದು ರೌಂಡ್ ಬಂದಿದ್ದಳು, ಶಿಲ್ಪಕಲಾ ವಿಭಾಗಕ್ಕೆ. 
ಅನೇಖ ಸ್ಟೂಲಿನ ಮೇಲಿದ್ದ ಎಣ್ಣೆಡಬ್ಬದಾಕಾರದ ಕಬಾಬುವಿನ ರೇಡಿಯೋವನ್ನು ಮೆಲ್ಲನೆ ಇಳಿಸಿ ನೆಲದ ಮೇಲಿಟ್ಟು, ಅದರ ಮೇಲೆ ನಿಂತು ಪ್ರಶ್ನೆಯ ಮುಖದ ಹತ್ತಿರ ಒಂದು ಲಕೋಟೆಯನ್ನು ಹಿಡಿದ. 
"ಪ್ರಶ್ನೆ, ನಿನ್ನ ಮೊದಲ ಪತ್ರಕ್ಕೆ ಒಂದು ದೊಡ್ಡ ಪಾರ್ಸಲ್ಲೆ ವಾಪಸ್ ಬಂದಿದೆ," ಎಂದ.
ಕಪ್ಪುಮುಖದ ಪ್ರಶ್ನೆಯ ದೊಡ್ಡ ಬಿಳಿ ಕಂಗಳು ಅರಳಿದವು. ಆದ್ದರಿಂದಲೇ ಲಾಂಗ್‌ಶಾಟಿನಲ್ಲಿ ಆತ ’ಅವತಾರ್’ ಸಿನೆಮದ ನೀಲಿ ಅವತಾರದ ವ್ಯಕ್ತಿಯಂತೆ ಕಾಣುತ್ತಿದ್ದ.
"ಇಲ್ಲಿಗೇ ಕೊಡು ಗುರು ಓದ್ತೀನಿ," ಎಂದು ಕಿಂಡಿಯ ಹೊರಗಿದ್ದ ಕೈಗಳಿಂದ ಲಕೋಟೆಯನ್ನು ಕಿತ್ತುಕೊಂಡ. ಅನೇಖ ನಿಂತಲ್ಲೇ ಸಹಕರಿಸಿ, ಲಕೋಟೆ ಒಡೆದು ನಾಲ್ಕಾರು ಪುಟಗಳ ಕೈಬರಹವಿದ್ದ ಬರವಣಿಗೆಯನ್ನು ಮತ್ತೆ ಪ್ರಶ್ನೆಯ ಕೈಗಳಿಗೆ ದಾಟಿಸಿದ. ಎಲ್ಲ ನೋವು, ಶ್ರಮ, ಕಾಯುವಿಕೆ ಮುಂತಾದುವನ್ನೆಲ್ಲ ಮರೆತಂತಾಗಿದ್ದ ಪ್ರಶ್ನೆ, ನೆಲದ ಮೇಲಿದ್ದಿದ್ದರೆ, ಈಗ ಎಂಟಡಿ ಮೇಲಿನ ಕಿಂಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದನಲ್ಲ, ಅಲ್ಲಿಯವರೆಗೂ ಎಗರಿಬಿಡುವಷ್ಟು ಖುಷಿಗೊಂಡಿದ್ದ. ಹಾಳೆಗಳ ಗುಚ್ಛಗಳ ಕೆಲವು ವಾಕ್ಯಗಳನ್ನು ಓದುತ್ತೋದುತ್ತಲೇ ಪ್ರಶ್ನೆಯ ದೇಹ ಅಥವ ಅತನನ್ನು ಸುತ್ತುವರೆದಿದ್ದ ಕಿಂಡಿ, ಅಥವ ಕಿಂಡಿಯು ಉಂಟಾಗಲು ಅವಕಾಶ ನೀಡಿದ್ದ ಗೋಡೆ-ಎಲ್ಲವೂ ಒಮ್ಮೆಲೆ ಖುಷಿಯಲ್ಲಿ ತರತರ ನಡುಗತೊಡಗಿದವು. 
     "ವಾವ್, ನೋಡ್ರೋ ಮಕ್ಳಾ. ನೀವು ಬರೀತಿದ್ದ ಒಂದೊಂದು ಸಾಲಿನ ಪತ್ರಕ್ಕೆ ಒಂದೊಂದು ಸಾಲಿನ ಉತ್ರ ಬರ್ತಿತ್ತಲ್ಲ, ನನ್ನ ಪತ್ರಕ್ಕೆ ಒಂದು ಕಥೆಯೇ ಕಳಿಸಿದ್ದಾರೆ, ನೋಡ್ರೋ," ಎಂದುಚ್ಚರಿಸಿದ್ದ ಪ್ರಶ್ನೆ. 
"ಯಾವುದರ ಬಗ್ಗೆ ಕಥೆ ಗುರುವೆ?" ಎಂದು ಎಲ್ಲರೂ ನಾಟಕೀಯವಾಗಿ ಆತನಿಗೆ ಗಮನ ನೀಡುವಂತೆ ಎದ್ದು ನಿಂತರು. 
"ಅದೇ ಲಂಡನ್ ಕಥೆ!"
"ಕನಡಾ ಓದೋಕೆ ಬರುತ್ತಾ ಅಲ್ಲಿನವರಿಗೆ?" ಕೇಳಿದ ಮೋಗನ.
"ಯಾರೋ ಕಳ್ಸಿರೋರು?"
"ಫ್ಯ್ಹೂಚರ್‌ನೋರು".
"ಯಾರಿಗೂ ಒಂದು ಪ್ಯಾರಾಗಿಂತಲೂ ಹೆಚ್ಚುಬರೆಯದ ಆ ಫ್ಯೂಚರ‍್ನೋರು ನಿನಗೆ ಮಾತ್ರ ಅದು ಹೇಗೆ ಒಂದಿಡೀ ಕಥೆ ಕಳಿಸಿದಾರಪ್ಪ?!"
"ಅಲ್ಲೇ ಇರೋದು ಮಜಾ ಗುರುವೆ. ನೀವೆಲ್ಲಾ ಒಂದೊಂದು ಸಾಲಿನ ಬೋರಿಂಗ್ ವಾಕ್ಯಗಳನ್ನ ಕಳಿಸಿರ‍್ತೀರ. ನಾನು ಒಂದು ಒಳ್ಳೆ ಡ್ರಾಯಿಂಗನ್ನೇ ಕಳಿಸಿದ್ದೆ." 
ಏನು ಡ್ರಾಯಿಂಗ್ ಗುರುವೆ? ಮತ್ತು ಯಾರಿಗೆ ಕಳಿಸಿದ್ದೆ, ಭವಿಷ್ಯದ-ನನಗ ಅಥವ ಭವಿಷ್ಯವಿಲ್ಲದವರಿಗ?" ಕೇಳಿದ ಮಮಾ.
     "ಅವಳದ್ದೇ ಮೆಮೊರಿ ಡ್ರಾಯಿಂಗ್ ಮಾಡಿ, ಸೋಕುಮಾರಿಗೆ ಕಳಿಸಿದ್ದೆ, ಎಂಗೇ!" ಎಂದ ಪ್ರಶ್ನೆಯು ಆ ಕಥೆಯ ಹಾಳೆಗಳನ್ನು ಕಂಡು ಎಷ್ಟು ಎಗ್ಸೈಟ್ ಆಗಿದ್ದನೆಂದರೆ, ಆತನ ಆನಂತರದ ನಡವಳಿಕೆ ನೋಡಿ ಶಿಲ್ಪಕಲಾ ವಿಭಾಗದಲ್ಲಿದ್ದವರೆಲ್ಲಾ ಇನ್ನೂ ಹೆಚ್ಚು ಎಗ್ಸೈಟ್‌ಮೆಂಟನ್ನು ಅನುಭವಿಸತೊಡಗಿದರು. ಏಕೆಂದರೆ ತನಗಾದ ಆತಂಕ, ಖುಷಿ, ಕುತೂಹಲ, ಥ್ರಿಲ್-ಇವೆಲ್ಲವೂ ಅದ್ಯಾವುದೋ ಅಗೋಚರ ಸೂತ್ರೀಕರಣಕ್ಕೆ ಒಳಗಾದಂತಾಗಿ, ಪ್ರಶ್ನೆಯ ದೇಹ ಉಬ್ಬಿ, ಹಿಗ್ಗಿ, ಆಮೇಲೆ ತನ್ನ ತಪ್ಪನ್ನು ಅರಿತುಕೊಂಡಂತೆ ಕುಗ್ಗಿ, ಕರಗಿ ಆತನ ಕಾಯವು ಜಾರತೊಡಗಿತು. ಪ್ರಶ್ನೆಯ ರುಂಡ, ಮುಂಡ ಮತ್ತು ಕುಂಡವೆಲ್ಲವೂ ಒಂದೇ ಹಗ್ಗದಂತೆ, ಮರಿ ಹೆಬ್ಬಾವಿನಂತೆ, ಎಲ್ಲರೂ ನೋಡನೋಡುತ್ತಲೇ ಜಾರಿ ಚಿತ್ರಕಲಾವಿಭಾಗದಲ್ಲಿ ಮಾಯವಾಯಿತು. ಕ್ಷಣಾರ್ಧದಲ್ಲಿ ಪಕ್ಕದ ಕೋಣೆಯಿಂದ ದಢಾರನೆ ಬಿದ್ದ ಸದ್ದಿನಿಂದಾಗಿ ಎಲ್ಲರೂ ಅತ್ತ ಓಡಿದರು. 
                                                  (೪೯)
ನಿಧಾನಗತಿಯಲ್ಲಿ, ಮೂವಿ ಕ್ಯಾಮರ ಪ್ಯಾನ್ ಆದಂತೆ ಶಿಲ್ಪಕಲೆಯಿಂದ ಚಿತ್ರಕಲಾ ವಿಭಾಗಕ್ಕೆ ಎಲ್ಲರೂ ಒಡಿದಾಗ, ಅವರಲ್ಲಿ ಕೊನೆಯವನಾದ ಮೋಗನ ಆ ಕೋಣೆಗೆ ಪ್ರವೇಶಿಸಿದಾಗ ಕಂಡ ದೃಶ್ಯವು ’ಗುರುಶಿಷ್ಯರು’ ಸಿನೆಮದ ಶಿಷ್ಯರ ನಡವಳಿಕೆಯಂತೆಯೇ ಇತ್ತು. ಕೇವಲ ಅನೇಖನನ್ನು ಹೊರತುಪಡಿಸಿ ಮಿಕ್ಕೆಲ್ಲರೂ ನಾನು ತಾನೆಂದು ಪ್ರಶ್ನಾಮುರ್ತಿಯ ಕೈಯಲ್ಲಿದ್ದ ಹಾಳೆಗಳ ಗುಚ್ಛವನ್ನು ಓದಲು ಎಳೆದಾಡುತ್ತಿದ್ದರು. ಅನೇಖ ಮಾತ್ರ ಪ್ರಶ್ನೆಯನ್ನು ನಿಧಾನವಾಗಿ ಮೇಲಕ್ಕೆಬ್ಬಿಸಿದ್ದ. ಆತ ಬಿದ್ದ ರಭಸಕ್ಕೆ ಅಲ್ಲಿ ಒಣಗಿ ಹಾಕಲಾಗಿದ್ದ ಸುಮಾರು ಹತ್ತುಮಾವಿನ ಕಾಯಿಗಳು ನುಜ್ಜುಗುಜ್ಜಾಗಿ, ಉಪ್ಪಿನಕಾಯಿ ಮಾಡಲು ಅವುಗಳನ್ನು ಜಜ್ಜುವ ಅವಶ್ಯಕತೆಯೇ ಇಲ್ಲದಂತೆ ಮಾಡಿದ್ದವು. ಅನೇಖ ಪ್ರಶ್ನೆಯ ಬೆನ್ನನ್ನು ಪರೀಕ್ಷಿಸುತ್ತಿದ್ದ, ಪ್ರಶ್ನೆ ’ಪ್ರಶ್ನಾಕಾರಿ’ಯಾಗಿದ್ದ.
ಮಮಾ "ಓಹ್ ಲಂಡನ್, ವಾಹ್ ಲಂಡನ್" (ಆಗಸ್ಟ್ ೧೪, ೨೦೦೫, ಮಧ್ಯಾಹ್ನ ೧:೪೯ ಎಂದು ನಮೂದಿಸಲಾಗಿದ್ದ, (www.sampada.net/article/174 august  14th, 2005, 1;49pm ಎಂಬ ಆಂಗ್ಲ ಪದಗುಚ್ಚವಿದ್ದ) ಲೇಖನವನ್ನು ಓದತೊಡಗಿದ, ಪ್ರಶ್ನಾಮೂರ್ತಿಯ ಕೈಯಲ್ಲಿದ್ದ ಹಾಳೆಗಳೊಳಗಿನಿಂದ. ಅಲ್ಲಿಯವರೆಗೂ ಯಾರೂ ಕಂಡಿರದಿದ್ದ, ಸೋವಿಯಟ್ ರಷ್ಯದಲ್ಲಿದ್ದ ರಾದುಗ ಪ್ರಕಾಶಕರು ಅಚ್ಚುಹಾಕಿಸಿದ್ದ ಕನ್ನಡ ಅಕ್ಷರಗಳಿಗಿಂತಲೂ ಭಿನ್ನವಾಗಿದ್ದ ಅಪರೂಪದ ದುಂಡನೆಯ ಅಕ್ಷರ ಶೈಲಿಯಲ್ಲಿದ್ದವು ಅಕ್ಷರಗಳು. ಎಲ್ಲರಿಗೂ ಆ ಲೇಖನಕ್ಕಿಂತಲೂ ಅಲ್ಲಿ ನಮೂದಿಸಿದ್ದ ತಾರೀಕು ತಲೆಕೆಡಿಸಿತ್ತು--ಹದಿನೇಳು ವರ್ಷಗಳ ನಂತರ ಬರೆಯಲಾಗಿದ್ದ ಲೇಖನವಾಗಿತ್ತದು!--ಬಹುಪಾಲು ವಿದ್ಯಾರ್ಥಿಗಳ ನಂಬಿಕೆಯ ಪ್ರಕಾರ.
"ಕೊಡ್ರಮ್ಮಾ, ನಂದು ಲೇಖನ ಅದು," ಎಂದು ಪ್ರಶ್ನೆ ಆ ಹಾಳೆಗಳನ್ನು ಕಸಿದುಕೊಳ್ಳಲು ಗುಂಪಿನೆಡೆ ನುಗ್ಗಿಬಂದ.
"ನೀನೇ ಬರ್ದಿದ್ದಾ ಗುರುವೆ?" ಎಂದು ಕೇಳಿದ ಬಿಡಾ.
"ಅಲ್ಲ. ನನ್ನ ಹೆಸರಿಗೆ ಬಂದಿರೋ ಕಥೆ," ಅದು ಎಂದು ಮುನಿಸಿಕೊಂಡ ಪ್ರಶ್ನೆ.
"ಹೌದಾಪ್ಪ ಹೌದು. ಎಲ್ಲ ಕೇಳ್ರಿ, ಹದಿನೇಳು ವರ್ಷ ಮುಂದಕ್ಕೆ ಹೋಗಿ ಇವ್ನು ಈಗ ಹುಡುಗಿಯಾಗಿರುವ, ಭವಿಷ್ಯವೆಂಬಲ್ಲಿ ೪೬ ವಯಸ್ಸಿನ ಆಂಟಿಯ ಚಿತ್ರ ಬರೆದು, ಅಲ್ಲಿಂದ ಈಗಿನ ಈ ಪತ್ರವನ್ನು ಉತ್ತರರೂಪದ ಕೊಡುಗೆಯಾಗಿ ಸ್ವೀಕರಿಸುತ್ತಿರುವ ಪಶ್ನೆ ಎಂಬ ನರಮನುಷ್ಯನಿಗೆ ಜೈ", ಎಂದಿದ್ದ ಬಿಡಾ ಮತ್ತು ಮಮಾ, ಒಕ್ಕೋರಲಿನಿಂದ. ಎಲ್ಲರೂ ನಗತೊಡಗಿದರು, ತಮಗೇನೂ ಅರ್ಥವಾಗುತ್ತಿಲ್ಲ ಎಂಬ ಅಸಹಾಯಕತೆಯ ಕಾರಣಕ್ಕೆ!  
ಯಾರೂ ಆ ಕ್ಷಣಕ್ಕೆ ಗಮನಿಸದೇ ಹೋದ ಒಂದೇ ಇಂಗ್ಲೀಷ್ ಪದವು (www.sampada.net/article/174 august  14th, 2005, 1;49pm) ಅವರನ್ನು ಭವಿಷ್ಯದಲ್ಲಿ ಸಾಕಷ್ಟು ಕಾಡಿಸಲಿತ್ತು!!//
 
 
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):