ನೆನಪಿನ ಚಿತ್ರಕಲಾ ಶಾಲೆ: ಭಾಗ ೧೭--ಬರಹದ ಗುರುತ್ವ ಶೋಧಿಸುವ ಕಾಲ

0

 

 (೪೯) 
ಸುಮಾರು ಗಂಟೆಗಳ ಕಾಲ ತ್ರಿಶಂಕು ಸ್ಥಿತಿಯಲ್ಲಿದ್ದ ಪ್ರಶ್ನೆ, ಮೊದಲ ಬಾರಿಗೆ ತನ್ನ ಪತ್ರಕ್ಕೆ ಬಂದ ಪ್ರತಿಕ್ರಿಯೆಯನ್ನು ಓದುತ್ತಲೇ ಅಥವ ಓದುವ ಸಲುವಾಗಿ ತನ್ನ ಸಮಸ್ತ ರುಂಡ, ಮುಂಡ, ಕುಂಡವನ್ನು ಒಟ್ಟಾಗಿ ಅದು ಹೇಗೇಗೋ ಆಡಿಸಿದ್ದರಿಂದಲೇ ಆತನ ದೇಹವು ಹಿಂಜಿದಂತಾಗಿ, ’ಶಿಲ್ಪಕಲಾ ವಿಭಾಗದೆಡೆ ಡೈ ಹೊಡೆಯುವುದಾ? ಅಥವ ಚಿತ್ರಕಲಾ ವಿಭಾಗಕ್ಕೆ ಜಾರುವುದಾ?’ ಎಂದು ಅಪ್ರಜ್ಞಾಪೂರ್ವಕವಾಗಿ ಚಿಂತಿಸುತ್ತಿರುವಾಗಲೇ, ಗುರುತ್ವಾಕರ್ಷಣೆಯೇ ಅದನ್ನು ಆತನಿಗಾಗಿ ನಿರ್ಧರಿಸಿಬಿಟ್ಟಿತು. ’ಆಳಕ್ಕಿಳಿಯಬೇಕೆಂಬುದು ಹೃದಯಾಳದಿಂದಲೇ ಬರಬೇಕು’ ಎಂಬಂತೆ ಆತನಿಗೆ ಪತ್ರೋತ್ತರವಾದ್ದರಿಂದ, ಪ್ರೇಮೋದ್ಭವವಾದಷ್ತು ತಡೆಯಲಸದಳವಾದ ಖುಷಿಯಾಗಿ, ದೇಹ ಸಡಿಲಗೊಂಡಿತ್ತು. ಆತ ತನ್ನ ಪಾದವಿದ್ದ ಕಡೆ ಕುಸಿದದ್ದರಿಂದ ರುಂಡಕ್ಕಿಂತಲೂ ಮಿಕ್ಕೆರಡು ’ಡ’ಗಳೇ ಹೆಚ್ಚು ತೂಕದವೆಂದು ನಿರೂಪಿತವಾಯಿತು. ಅಂದರೆ ’ರುಂಡದ ಒಳಗಿನ ಭಾಗವು ಸಾಕಷ್ಟು ಖಾಲಿಯಾಗಿತ್ತು’ ಎಂದೂ ಅರ್ಥ ಕೊಡಬಹುದು ಎಂಬುದನ್ನು ನಿಧಾನವಾಗಿ ಎಲ್ಲರೂ ಗಮನಿಸಲು ಕಾರಣ ಸ್ವತಃ ಅವರ ರುಂಡಗಳೊಳಗೂ ಅಂತಹುದೇ ಶೂನ್ಯಾವಸ್ಥೆ ಇದ್ದೀರಲೂ ಸಾಕು ಎಂದು ರುಂಡತುಂಬಿಬಂದವರೆಲ್ಲಾ ತರ್ಕಿಸಬಹುದು.
 
ಕೆಳಕ್ಕೆ ಬಿದ್ದಾಗ ಪ್ರಶ್ನೆಯು ಡಜನ್‌ಗಟ್ಟಲೆ ಮಾವಿನಹಣ್ಣುಗಳ ಮೇಲೆ ಬಿದ್ದಿದ್ದನಷ್ಟೇ. ಅಣ್ತಮ್ಮ ಲಬೊಲಬೋ ಎಂದು ಬಾಯಿಬಡಿದುಕೊಂಡ. ಆ ಕ್ರಿಯೆಯನ್ನು ನಿರೀಕ್ಷಿಸಿದ್ದ ಮಮಾ ಒಂದು ’ಹಣ್ಣುಹಣ್ಣಾದ’, ನಂತರ ಪ್ರಶ್ನೆಯ ಪೃಷ್ಠದಿಂದ ’ನುಜ್ಜುಮಾಡಲ್ಪಟ್ಟಿದ’ ಹಣ್ಣಿನ ಹೋಳೊಂದನ್ನು ಆತನ ಬಾಯಿಗೆ ತುರುಕಿದ. ಏಕೆಂದರೆ ಅಣ್ತಮ್ಮ ಬೊಂಬಡಾ ಬಜಾಯಿಸುವ ಹೊತ್ತಿಗೆ ಉಳಿದಿದ್ದದ್ದು ಅದೊಂದೇ ಹೋಳು, ಉಳಿದವರೆಲ್ಲರೂ ಆತನ ಮೇಲಿನ ಕರುಣೆಯಿಂದಾಗಿ ಬಹಳ ಶ್ರಮಪಟ್ಟು ಹಣ್ಣುಗಾಯಿಯಾಗಿದ್ದ ಹಣ್ಣುಗಳನ್ನೆಲ್ಲಾ ಪೂರ್ತಿಯಾಗಿ ತಿಂದುತೇಗದೆ, ಬುದ್ಧನಂತೆ ಎಲ್ಲಾ ರೀತಿಯ ಜಿಹ್ವಾಚಾಪಲ್ಯವನ್ನು ತಡೆದುಕೊಂಡು ಆತನಿಗಾಗಿ ಒಂದೇ ಒಂದು ಹೋಳನ್ನು ಉಳಿಸಿದ್ದರೆಂಬ ವಿಷಯ ಬರೀ ಓಳಲ್ಲ. "ಲೇ ಅಣ್ತಮ್ಮ, ನಾಳೆ ಮೇಷ್ಟ್ರು ಕೇಳಿದ್ರೆ, ನಾವೆಲ್ಲಾ ನುಜ್ಜುಗೊಜ್ಜು ಹಣ್ಣುಗಳನ್ನು ತಿಂದುಬಿಟ್ಟೆವೆಂದು ಹೇಳ್ತೀಯೇನೋ?" ಎಂದು ಕೇಳಿದ ಮಮಾ. 
"ಹೌದು ಮತ್ತೆ. ಇನ್ನೇನು ಮಾಡದು, ಸುಳ್ಳು ಹೇಳಕ್ಕಾಗತ್ತ ನೀನೇ ಹೇಳು, ಮೇಷ್ಟ್ರು ಮಾವು ಕತ್ತರಿಸಿದಂತೆ ಕಡಿದುಹಾಕಿಬಿಡ್ತಾರೆ ನನ್ನ!" ಎಂದುತ್ತರಿಸಿದ ಅಣ್ತಮ್ಮ.
"ನಿನ್ನ ಮಕ್ಳಾಣೆಗೂ ಅಂಗೇ ಹೇಳ್ತಿಯೇನೋ, ಸುಳ್ಳು ಹೇಳೋದೇ ಇಲ್ವೇನೋ?"
"ಹೌದು ಮತ್ತೆ. ಬೇಕಾದ್ರೆ ಈಗ್ಲೇ ಆಣೆ ಇಟ್ಟುಬಿಡ್ತೀನಿ."
"ನೋಡು ಮತ್ತೆ, ಒಂದು ಸಲ ಆಣೆಯಿಟ್ಟ ಮೇಲೆ ಅದನ್ನು ಹಿಂದಕ್ಕೆ ಪಡೆಯಲಾಗದು."
"ಹೌದು ಮತ್ತೆ, ನಾನು ಹೇಳದೇಯ!"
"ಪೂರ್ತಿ ಸತ್ಯಾನ?"
"ಹೌದು ಪೂರ್ತಿ ಸತ್ಯಾನ!"
"ಸರಿ ಬಿಡು ಹೇಳ್ಕೋ ಹೋಗಪ್ಪಾ. ಪಾಪಿ, ನಿನ್ನ ಮಕ್ಳಿಗೇನಾದ್ರೂ ಪರ್ವಾಗಿಲ್ವಾ, ಆಣೆಭಾಷೆ ಇಡ್ತೀಯಲ್ಲ? ನಿನಗೂ ಅದರಲ್ಲಿ ಒಂದು ಸಣ್ಣ ಪಾಲು ಇಲ್ಲ ಅಂತ ’ಹೋಳು’ ಮಾತ್ರ ಬಿಡಬೇಡ ಎಂದಿದ್ದ ಮಮಾ."
ಆತನ ಮಾತಿನ ಮರ್ಮ ಅರಿತ ಅಣ್ತಮ್ಮಾ ಇಪ್ಪತ್ತು ಮೂರು ವರ್ಷದ ನಂತರವೂ, ಯಾರ ಮುಂದೆಯೂ ಆ ಒಂದೆರೆಡು ಡಜನ್ ಮಾವಿನ ಹಣ್ಣುಗಳು ಮಾಯವಾಗಿದ್ದರ ಕುರಿತಾಗಿ ಬಾಯಿ ಬಿಟ್ಟಿಲ್ಲ, ರಿಟೈರ್ ಆಗಿ ನಾಲ್ಕಾರು ವರ್ಷಗಳಾಗಿದ್ದರೂ ಸಹ, ಸ್ವತಃ ಹಣ್ಣೊಂದರ ಸಣ್ಣ ಹೋಳನ್ನು ಬಲವಂತವಾಗಿ ತಿನ್ನಿಸಲ್ಪಟ್ಟಿದ್ದರಿಂದ.
 
"ಪ್ರಶ್ನೆ ಬಿದ್ದ ರೀತಿಯು ಶ್ರೀಕೃಷ್ಣ ಪರಮಾತ್ಮನ ತಲೆ ಬಳಿ ದುರ್ಯೋಧನ, ಕಾಲಬಳಿ ಅರ್ಜುನ ಕುಳಿತ ಕಥೆ ನೆನಪಾಗುವುದಿಲ್ಲವೆ?" ಎಂದ ಅನೇಖ, ಮುಂದುವರೆಸಿ, "ಶಿಲ್ಪಕಲಾ ವಿಭಾಗದೊಳಕ್ಕೆ ಬಿದ್ದಿದ್ದಲ್ಲಿ ಕೃಷ್ಣ ದುರ್ಯೋಧನನಿಗೆ ವರಕೊಟ್ಟಂತಾಗುತ್ತಿತ್ತು, ಆದ್ದರಿಂದ," ಎಂದ. ಯಾರೂ ಆತನ ಮಾತನ್ನು ಕಿವಿಗೆ ಮತ್ತು ಮತ್ತೆಲ್ಲಿಗೂ ಹಾಕಿಕೊಳ್ಳಲಿಲ್ಲ. ಒಮ್ಮೆಲೆ ಆರೇಳು ಗಂಟೆಯ ದುರಂತವೊಂದು ರುಚಿಕರವಾಗಿ ಅಂತ್ಯಕಂಡದ್ದರಿಂದ ನಿರಾಳರಾಗಿದ್ದರು. ಹಾಗಾಗದವರು ನಿಟ್ಟುಸಿರಿಟ್ಟರು. 
 
"ಅಂದ ಹಾಗೆ, ಪ್ರಶ್ನೆ ಎಲ್ಲಿ. ಆತ ತನ್ನ ಪೃಷ್ಠದಿಂದ ಸಂಪಾದಿಸಿದ್ದನ್ನು ರುಂಡಕ್ಕೆ ಉಣಬಡಿಸಿದನೋ ಹೇಗೆ?" ಎಂದು ನಾಟಕೀಯವಾಗಿ ಕೇಳಿದ ಮಮಾ. ಆಗ ಗಮನಿಸಿದರು ಎಲ್ಲರೂ, ಗಮನಿಸಲಿಕ್ಕೆ ಪ್ರಶ್ನೆ ಅಲ್ಲಿಲ್ಲವೆಂಬ ವಿಷಯವನ್ನು. "ಪಾಪ, ಆರೇಳು ಗಂಟೆ ತಡೆಹಿಡಿದಿದ್ದನಲ್ಲ ಗುರುತ್ವವನ್ನು ಮತ್ತು ಮತ್ತೊಂದನ್ನು, ಆ ಎರಡನೆಯದನ್ನು ವಿಸರ್ಜಿಸಲು ಹೋಗಿರಬೇಕು ಬಿಡು," ಎಂದ ಬಿಡಾ. ಓದುಗರು ಒಂದು ವಿಷಯವನ್ನು ಈಗಾಗಲೇ ಗಮನಿಸಿರಬೇಕು-ಒಮ್ಮೆ ’ಬಿಡಾ’ ಎಂದೂ ಮತ್ತೊಮ್ಮೆ ’ಬೀಡಾ’ ಎಂದೂ ಆತನ ಹೆಸರನ್ನಿಲ್ಲಿ ಸಂಬೋಧಿಸಿರುವ ವಿಷಯವನ್ನು. ಆತ ಹೆಚ್ಚು ತಿಂದ ದಿನ ಆತನನ್ನು ’ಬೀಡಾ’ ಎಂದೂ, ಡಯಟಿಂಗ್ ಮಾಡಿದ ದಿನ ’ಬಿಡಾ’ ಎಂದು ಕರೆಯುವುದರಲ್ಲಿ ಭೋಜನದ ಗಾತ್ರ ಮತ್ತು ಅಳತೆಗಳ ಸಾತತ್ಯತೆಯ ಒಂದು ಕ್ರಿಯಾತ್ಮಕ ಹೋಲಿಕೆಯನ್ನು ಗಮನಿಸಿರಬೇಕು ಓದುಗ(ಳು). ಇಲ್ಲದಿದ್ದರೆ ಅದನ್ನು ಈಗಲಾದರೂ ಗಮನಿಸಿಬಿಡುವುದು ಒಳಿತೇ.
(೫೦)
ಇದ್ದಕ್ಕಿದ್ದಂತೆ ಗದ್ದಲವೆದ್ದಿತು. "ಪ್ರಶ್ನೆ ಎಲ್ಲಿಯೂ ಕಾಣುತ್ತಿಲ್ಲ ಈ ಮಧ್ಯರಾತ್ರೀಲಿ" ಎಂದು ಯಾವುದೋ ಘಟನೆಯ ದ್ವಿತಿಯಾರ್ಧವನ್ನು ಅರಹುವಂತೆ ಗಾಭರಿಗೊಂಡು ಓಡಿಬಂದ ಡಬ್ರಿ. ಆತ ಅಲ್ಲಿದ್ದವರೆಲ್ಲರಿಗಿಂತಲೂ ವಯಸ್ಸಿನಲ್ಲಿ ಚಿಕ್ಕವನಾಗಿದ್ದರೂ ನಮ್ಮ ಸಹಪಾಠಿಯೇ ಆಗಿದ್ದ. ಅಣ್ಣಾವ್ರ ಸಿನೆಮಕ್ಕೆ ಮೊದಲ ದಿನದ ಮೊದಲ ಶೋವಿನ ಟಿಕೆಟ್ಟುಗಳನ್ನು ತನ್ನದೇ ಹಣದಿಂದ ಆಸಕ್ತರಾದವರೆಲ್ಲರಿಗೂ ಗೀತಾಂಜಲಿ ಥಿಯೇಟರಿನಿಂದ ಮುಂಗಡವಾಗಿ ತಂದುಕೊಡುತ್ತಿದ್ದವನು ಅವನೇ. ಏಕೆಂದರೆ ಆತನ ಮನೆ ಥಿಯೇಟರಿನ ಸಮೀಪದ ಗುಟ್ಟಹಳ್ಳಿ ಪೈಪ್‌ಲೈನಿನಲ್ಲಿತ್ತು, ಮನವೂ ಸಹ. ಆದ್ದರಿಂದ ಆತನನ್ನು ನಾವೆಲ್ಲಾ ಸೀರಿಯಸ್ಸಾಗಿ ತೆಗೆದುಕೊಂಡ ದಿನಗಳೆಂದರೆ ಅಣ್ಣಾವ್ರ ಹೊಸ ಪಿಕ್ಚರ್ ಸಧ್ಯದಲ್ಲೇ ತೆರೆಕಾಣಲಿದೆ ಎಂದರ್ಥ!
 
ಕೋಟು-ಚೆಡ್ಡಿ ಹಾಕಿಕೊಂಡು ಚಿಕ್ಕ ಸೈಜಿನ ಸೈಕಲ್ಲಿನಲ್ಲಿ ಆತನ ಸವಾರಿ ಬರುವಾಗಲೇ ಆತನ ಹಣೆಯ ಕೂಡುಹುಬ್ಬಿಗೆ ಕಾಸಗಲ ಕುಂಕುಮ ಇರಿಸಿಕೊಂಡಿರುವುದನ್ನು ಕಂಡವರಿಗೆಲ್ಲ ಊರುಮಾರಿ ದೇವರ ಮೆರವಣಿಗೆಯ ದಿವ್ಯ ಮುಖವನ್ನು--ಸ್ವತಃ ಆತನೇ ಬರೆಯುತ್ತಿದ್ದ ಸ್ಕೆಚ್‌ನಂತೆ--ದರ್ಶಿಸಿದಂತೆ ತೋರುತ್ತಿತ್ತು. "ಅಣ್ಣಾ ಬದ್ರಿ ಸೇಲ್ ಆಗಿಹೋದ ನೋಡ್ರೋ! ಎಂದು ಈ ಎಲ್ಲಾ ರಂಪಪ್ರಶ್ನಾಯನವನ್ನು ಗಮನಿಸುತ್ತಿದ್ದ ಸ್ಟೈಲಾ ಮತ್ತು ಮಾಲ್ತಿ ನಗಾಡತೊಡಗಿದ್ದರು. ಕಲಾಕೃತಿಯೊಂದಕ್ಕೆ ಡಬ್ರಿ ಹಣೆಗೆ ಇಟ್ಟಂತಹದ್ದೇ ಕೆಂಪು ಕುಂಕುಮವನ್ನು ಅಂಟಿಸಿದರೆ, ಅದು ಸೇಲ್ ಆಗಿದೆ ಎಂದೇ ಅರ್ಥ! 
 
ಪ್ರಸ್ತುತದಲ್ಲಿ, ಪ್ರಶ್ನಾಮೂರ್ತಿಯ ಭೂಸ್ಪರ್ಶದ ಖುಷಿಯಲ್ಲಿ ನಿರಾಳವಾಗಿದ್ದವರಿಗೆ ಡಬ್ರಿ ನೀಡಿದ ಸುದ್ದಿ, "ಪ್ರಶ್ನೆ ಎಲ್ಲಿಯೂ ಕಾಣುತ್ತಿಲ್ಲ ಇಷ್ಟು ರಾತ್ರಿಯಲ್ಲಿ!" ಎಂಬುದಾಗಿತ್ತು. ಚೆರಿಗೆ ಹಿಡಿದುಕೊಂಡು ಬೆಳಗಿನ ಹೊತ್ತು ಮಂದಿ ಹೋಗುವಲ್ಲಿಗೆ ಪ್ರಶ್ನೆ ಈಗ ಹೋಗಿದ್ದ, ಪರಿಷತ್ತಿನ ಹಿಂದಿನ ಮರಗಿಡಗಳ ಸಂದಿಗೆ, ಲಗುಬಗೆಯಿಂದ. ಪರಿಷತ್ತಿನ ಕಾಲೇಜಿನ ಕಟ್ಟಡ ನಿರ್ಮಾಣ ಇನ್ನೂ ಪೂರ್ತಿಯಾಗಿಲ್ಲದಿದ್ದರಿಂದ ಅಲ್ಲೆಲ್ಲ ಯಾವುದೂ ಬಾಥ್ರೂಮು ಇರಲಿಲ್ಲ. ಇದ್ದಿದ್ದರೂ, ಸರಿಸುಮಾರು ಕಗ್ಗತ್ತಲ ಮಧ್ಯರಾತ್ರಿ ಅದಾಗಿದ್ದುದ್ದರಿಂದ, ಅಲ್ಲೇನಾದರೂ ಪ್ರಶ್ನೆ ಅವಸರದಲ್ಲಿ ಹೋಗಿಬಿಟ್ಟಿದ್ದಿದ್ದರೆ ಒಂದು ಎರಡುವನ್ನು ಕತ್ತಲೆಯ ಭಯದ ನೆಪದಲ್ಲಿಅಲ್ಲಿಯೇ ಮಾಡಿಕೊಂಡುಬಿಟ್ಟಿರುತ್ತಿದ್ದ!
 
"ನೇಚರ್ ಕಾಲು ಮತ್ತು ಮೊಬೈಲ್ ಕಾಲುಗಳಲ್ಲಿರುವ ಸಾಮ್ಯತೆ ಇದೇ-ಎರಡನ್ನೂ ಹೆಚ್ಚು ಹೊತ್ತು ಹಿಡಿದಿರಿಸಲಾಗದು. ಭೂಮಿಯನ್ನೇ ಹೊತ್ತ ಮತ್ತೊಬ್ಬರ ಕಥೆ ಹೇಗೋ ಏನೋ ತಿಳಿಯದು, ಆದರೆ ಗ್ರೀಕ್ ದೇಶದಲ್ಲಿ ಹಾಗೆ ಪೃಥ್ವಿಯನ್ನು ಹೊತ್ತಿದ್ದ ಹರ್ಕ್ಯುಲೆಸನಿಗೂ ಈ ಇದನ್ನು ಹೆಚ್ಚು ಹೊತ್ತು ಹಿಡಿದಿರಿಸಲಾಗದಲ್ಲ," ಎಂದು ನಿಂತಲ್ಲೇ ದೇಹದ ವಿಸರ್ಜನಾ ಕ್ರಿಯೆಯ ಬಗ್ಗೆ ಒಳನೋಟ ನೀಡತೊಡಗಿದ ಸಾಕ್ರೆಟಿಸನಂತಹ ನಲ್ಲಸಿವ. "ಒಳ್ಳೆಯ ಒಳನೋಟ ಮತ್ತು ದಿವ್ಯದರ್ಶನ ಎಂದು ಪ್ರತಿಕ್ರಿಯಿಸಿದ್ದ," ಕನ್ನಡವನ್ನು ಕಲಿವ ಅತಿ ಅವಸರದಲ್ಲಿ ಗ್ರಾಂಥಿಕವಾಗೇ ಮಾತನಾಡುತ್ತಿದ್ದ ಮಲ್ಲುಮೋಗನ.  
ಹೋಗುವ ಅವಸರದಲ್ಲಿ ಪ್ರಶ್ನೆ ಗ್ರಾಫಿಕ್ ವಿಭಾಗದಲ್ಲಿದ್ದ ಜಗ್ಗನ್ನು, ಅದರೊಳಗಿದ್ದ ಜಲವನ್ನು ಯಥಾವತ್ತಾಗಿ ಹೊತ್ತೋಯ್ದಿದ್ದ. ಆದರದು ನೀರಾಗಿರಲಿಲ್ಲ. ನೈಟ್ರಿಕ್ ಆಸಿಡ್ಡನ್ನು ಹತ್ತಂಶ ನೀರಿನೊಂದಿಗೆ ಬೆರೆಸಿ ಜಗ್ಗಿನಲ್ಲಿರಿಸಿ ಎಚ್ಚಿಂಗ್ ಪ್ಲೇಟನ್ನು ಅದರಲ್ಲಿ ಹಾಕುವ ಕ್ರಿಯೆಯಲ್ಲಿ ನಿರತನಾಗಿದ್ದ ಡಬ್ರಿ. "ಕೇವಲ ಒಂದೇ ನಿಮಿಷದಲ್ಲಿ, ನೈಟ್ರಿಕ್ ಆಸಿಡ್ಡನ್ನು ಟ್ರೇಗೆ ಹಾಕುವ ಮುನ್ನ ಅದನ್ನು ಜಗ್ಗಿನಲ್ಲಿರಿಸಿ, ನಾನು ಒಳಗೋಗಿ ಪ್ಲೇಟ್ ಎತ್ತಿಕೊಂಡು ಬರುವಷ್ಟರಲ್ಲಿ ಜಗ್ಗಿನಲ್ಲಿದ್ದ ನೈಟ್ರಿಕ್ ಆಸಿಡ್ ಹೊತ್ತುಕೊಂಡು ನಿಸರ್ಗ ಕರೆಗೆ ಹೋಗಿಬಿಟ್ಟಿದ್ದಾನೆ ಪ್ರಶ್ನೆ. ಅವನ ಹೊಟ್ಟೆ(ಯ ಸ್ವಲ್ಪ ಕೆಳಗಿನದೆಲ್ಲ) ಉರಿಯ," ಎಂದು ತೀರ್ವ ಅಸಮಾಧಾನಿಯಾಗಿ ಬಯ್ದಾಡಿದ ಡಬ್ರಿ. ಪ್ರಶ್ನೆಯನ್ನು ಹುಡುಕಲು ಎಲ್ಲರೂ, ಅಂದರೆ ಅಲ್ಲಿದ್ದವರೆಲ್ಲರೂ ಓಡಿದ್ದರು. ಈಗ ಅಳಿದುಳಿದವರೆಲ್ಲರೂ ಓಡಿದ್ದರು.
(೫೧)
"ಪ್ರಶ್ನೆ ಎಲ್ಲಿರುವೆ, ಉತ್ತರ ನೀಡೋ" ಎಂದೆಲ್ಲಾ ಕೂಗುತ್ತ ಗಿಡಮರಬಳ್ಳಿಗಳನ್ನೆಲ್ಲ ಬಗೆದು ಬಗೆದು ಹುಡುಕಿತ್ತಿದ್ದವರಿಗೆಲ್ಲಾ ಪ್ರಶ್ನೆ ಯಕ್ಷಪ್ರಶ್ನೆಯಾಗಿಬಿಟ್ಟಿದ್ದ. ಅಲ್ಲೆಲ್ಲೋ ಗಿಡದ ಮರೆಯಲ್ಲಿ ಕುಳಿತಿದ್ದ ಪ್ರಶ್ನೆಯು ಮರ್ಯಾದೆಗಂಜಿ, ನಾಚಿಕೆಯನ್ನು ಹಿಂಜಿ, ತನ್ನ ಹುಡುಕಿಬಂದವರು ಕಣ್ಣಿಗೆ ಗೋಚರವಾದಾಗಲೆಲ್ಲ ಹಿಂದಿಂದೆ ಸರಿಯತೊಡಗಿದ್ದ. "ಬೇಡ, ಬೇಡ, ಬಳಸಬೇಡ, ಉಪಯೋಗಿಸಬೇಡ, ಪ್ರಯೋಗಿಸಬೇಡ, ಪರಿವರ್ತಿಸಬೇಡ, ಸುಟ್ಟುಹಾಕಿಬಿಡುತ್ತದೆ," ಎಂಬ ತತ್ಸಮ-ತದ್ಭವ ಪದಗಳನ್ನೆಲ್ಲಾ ಅವರುಗಳು ಬಳಸಿದಂತೆಲ್ಲಾ ಆತ ಹಿಂದೆ ಸರಿಯತೊಡಗಿದ. ಆದರೆ ಹುಳುಹುಪ್ಪಟಿ ಇರಬಹುದೆಂಬ ಅಂಜಿಕೆಯಿಂದ ಮುಂದೆಮುಂದೆಯೂ ಬರತೊಡಗಿದ್ದ. ಅಂದರೆ ಕುಕ್ಕುರುಗಾಲಿನಲ್ಲಿ ಕುಳಿತಿದ್ದ ತನ್ನ ದೇಹವನ್ನು ಒಟ್ಟಾರೆ ಹಿಂದುಮುಂದು ಹೋಗುವ, ಕೂಡಿಕಳೆವ ಆ ಚಲನೆಯ ಲೆಕ್ಕಾಚಾರದಲ್ಲಿ, ಪ್ರಶ್ನೆ ಕುಂತ ಪೊಸಿಷನ್ನಿನಲ್ಲೇ ಕುಳಿತಿದ್ದ, ಆತನ ಹಿಂದೆಮುಂದೆಲ್ಲಾ ಆತನ ಹೆಜ್ಜೆಗುರ್ತುಗಳಿದ್ದವಷ್ಟೇ. ಕೊನೆಗೂ ಯಾರೋ ಅವನನ್ನು ಆ ಕಗ್ಗತ್ತಲಲ್ಲೂ ಕಂಡುಹಿಡಿದುಬಿಟ್ಟರು, ಆತ ಅಷ್ಟು ಕಪ್ಪಗಿದ್ದುದ್ದರಿಂದ. "ಕಪ್ಪುವರ್ಣದೊಳಗೂ ವ್ಯತ್ಯಯ, ವ್ಯತ್ಯಾಸಗಳುಂಟೇ ಹೊರತು ಕಪ್ಪು ಬಣ್ಣರಹಿತವಲ್ಲ ಎಂಬ ಇಂಪ್ರೆಷನಿಸ್ಟ್ ಕಲಾವಿದರನ್ನು ಕುರಿತಾದ ಕಲಾ ಇತಿಹಾಸದ ಪಾಠದ ಅರಿವು ಇಂದು ಪ್ರಶ್ನೆಯನ್ನು ಹುಡುಕುವಲ್ಲಿ ನಿನ್ನಲ್ಲಿ ಬೆಳಕು ಚೆಲ್ಲಿದೆ ಬಿಡು ಗುರುವೆ," ಎಂದು ಶಹಬ್ಬಾಸ್‍ಗಿರಿ ಕೊಟ್ತಿದ್ದ ಅನೇಖ, ಪ್ರಶ್ನೆಯನ್ನು ಪತ್ತೆಮಾಡಿದಾತನಿಗೆ. ಕಲಾಇತಿಹಾಸವನ್ನು ಓಂನಾಮದಂತೆ ಹೇಳಿಕೊಡುತ್ತಿದ್ದ ತರಗತಿಗಳಿಗೆ ಹೋಗದೆ, ಎಲ್ಲರೂ ಸಹಪಾಠಿ ಅನೇಖನ ಬಳಿ ಬಂದು ಕಲಿಯುತ್ತಿದ್ದರು. ಆದ್ದರಿಂದ ಅನೇಖನ ಶಹಬ್ಬಾಸ್‍ಗಿರಿಯಲ್ಲಿ ಪ್ರಸ್ತುತ್ತ ಸ್ವಯಂಕುಚಮರ್ಧನದ ಭಾವವೂ ಅಡಗಿತ್ತು--ಎಂಬುದನ್ನು ಬಹುಮಂದಿ ಅರಿಯದೇ ಹೋದರು. 
 
ಪ್ರಶ್ನೆ ಕುಕ್ಕುರುಗಾಲಿನಲ್ಲಿ ಕುಳಿತು ನೈಟ್ರಿಕ್ ಆಸಿಡ್ಡಿನಿಂದ ಸಂಪದ್ಭರಿತವಾಗಿದ್ದ ಜಗ್ಗನ್ನು ಸಮತಟ್ಟು ನೆಲದ ಮೇಲಿಡಲು ಅತ್ತಿತ್ತ ಸರಿಸಾಡತೊಡಗಿದ್ದಾಗ ಒಂದಷ್ಟು ಜಲ ಅದರಿಂದ ತುಳುಕಿ ಅಲ್ಲಿದ್ದ ಹುಲ್ಲು ಹಾಗೂ ಒಣಕಾಗದದ ಮೇಲೆ ಬಿದ್ದಿತ್ತು. ಅದು ಕೂಡಲೇ ಇಮರಿ ಹೋಗುವ ಸೊಬಗನ್ನು ಸವಿಯುತ್ತ, ’ಎಲಾ, ಸ್ವಲ್ಪ ಕಾಲ ನಾನು ಭೂಮಿ ಮೇಲೆ ಇಲ್ಲಾ ಅಂದ್ರೇನೇ ಇಷ್ಟೆಲ್ಲ ಅನಾಹುತವಾಗಿಬಿಡುತ್ತಲ್ಲ, ಇನ್ನು ಪೂರ್ಣವಾಗಿ ಮೇಲೆ ಹೋಗಿಬಿಟ್ಟರೆ ಭೂಮಿಯ ಗತಿಯೇನು?!’ ಎಂಬ ಭಾವದಲ್ಲಿ, ತನ್ನ ಉದರಕ್ಕೆ ಆಗಿದ್ದ ಅವಸರವನ್ನು ಮರೆತು ಇಮರಿ ಸುಟ್ಟುಹೋಗುತ್ತಿದ್ದ ಕಾಗದ ಮತ್ತು ಹುಲ್ಲನ್ನೇ ಗಮನಿಸುತ್ತ ಧ್ಯಾನಸ್ಥನಾಗಿದ್ದ. 'ತಪಸ್ಸಿನ ಶಕ್ತಿಯಿಂದ ಶಾಕೋತ್ಪತ್ತಿ ಸಾಧ್ಯ' ಎಂಬ ಋಷಿಮುನಿಗಳ ಅನುಭವದ ಕಥೆಗಳಿಗೆ ಪ್ರಶ್ನೆಯ ಮನದಲ್ಲಿ ಹೊಸ ಆಯಾಮವೇ ದೊರಕಿದಂತಾಗಿಬಿಟ್ಟಿತ್ತು. ಎಲ್ಲರೂ ಬಂದು, ಎಲ್ಲರೂ ಒಂದೊಂದು ಕೈಹಾಕಿ ಪ್ರಶ್ನೆಯನ್ನು ಮೇಲೆತ್ತಬೇಕೆಂಬ ತುರಾತುರಿಯಲ್ಲಿರುವಾಗಲೇ ಡಬ್ರಿ ಬಂದ. "ಅವ್ನನ್ನ ಮತ್ತೆ ಮೇಲೆತ್ತಬೇಡಿ, ಒಂದು ಸಲ ಮೇಲೆ ಹೋಗಿಯೇ ಧರೆಗಿಳಿಯಲು ಕಾಲುದಿನ ಬೇಕಾಯಿತು. ಇನ್ನು ಒಂದು ದಿನಕ್ಕೆ ಇಷ್ಟು ಸಾಕು," ಎಂದ ಡಬ್ರಿ, ಮತ್ತೊಂದು ಜಗ್ಗಿನಲ್ಲಿ ಗಂಗಾಜಲದಂತಹ, ನೈಟ್ರಿಕ್ ಆಸಿಡ್ಡಿನಿಂದ ಕಲುಷಿತವಾಗಿಲ್ಲದಿದ್ದ ಶುದ್ಧ ನೀರನ್ನು ಆತನ ಮುಂದಿರಿಸಿದ. ನೈಟ್ರಿಕ್ ಆಸಿಡ್ ತುಂಬಿದ್ದ ಜಗ್ಗನ್ನು ಡಬ್ರಿ ಎತ್ತಿ ಹಿಡಿದ ನಾಲ್ಕಾರು ಕ್ಷಣಗಳಲ್ಲಿ ಸುತ್ತಲೂ ನೋಡಲಾಗಿ, ಅಲ್ಲಿದ್ದವರು ಆತ ಮತ್ತು ಪ್ರಶ್ನೆ ಇಬ್ಬರೇ ಆಗಿಬಿಟ್ಟಿದ್ದರು. ಎಲ್ಲರೂ ಆಸಿಡ್ ಪೂರಿತ ಜಗ್ಗನ್ನು ನಡುಗುವ ಕೈಗಳಿಂದ ಹಿಡಿದ ಡಬ್ರಿಯ ಸ್ಥಿರತೆಯ ಬಗ್ಗೆ ಯಾವುದೇ ಅನುಮಾನವಿಲ್ಲದವರಂತಾಗಿ, ಅಲ್ಲಿಂದ ಓಟಕಿತ್ತಿದ್ದರು!
 
"ಎಂಜಾಯ್ ಯುವರ್‌ಸೆಲ್ಫ್" ಎಂದು ಎಲ್ಲರೂ ಓಡುತ್ತಲೇ ಪ್ರಶ್ನೆಗೆ ವಿಷ್ ಮಾಡುತ್ತಿದ್ದರೆ, ಪ್ರಶ್ನೆ ಅವರೆಲ್ಲರನ್ನೂ ಫಾಲೋ ಮಾಡಿಕೊಂಡು, ಹಿಂದೆಯೇ ಬರತೊಡಗಿದ್ದ. 
"ಯಾಕೋ, ಯಾವ ಕೆಲಸವನ್ನು ಉದರದೊಳಗೆ ಅಡಗಿಸಿಕೊಂಡು ಬಂದಿದ್ದೀಯ ಅದನ್ನು ಮುಗಿಸೋಲ್ಲವೆ?" ಎಂದ ಮೋಗನ.
"ಇಲ್ಲಮ್ಮಾ, ನನ್ನ ಹೊಟ್ಟೆಯೊಳಗಿರುವುದಕ್ಕೆ, ಈ ಮುಂಚೆ ನನ್ನ ದೇಹಕ್ಕೆ ಆಗಿತ್ತಲ್ಲ ಅದೇ ಆಗಿಬಿಟ್ಟಿದೆ--ಫ್ರೀಜ್ ಆಗಿ, ಧರೆಗಿಳಿಯಲು ಇನ್ನೂ ಕೆಲವು ಗಂಟೆಗಳೇ ಬೇಕಾಗುತ್ತೆ ಅದಕ್ಕೂ" ಎಂದು ಚಾಲಾಕಿ ಉತ್ತರ ನೀಡಿದ್ದ ಪ್ರಶ್ನೆಯು ಏನನ್ನೋ ನೆನೆಸಿಕೊಂಡು ಒಮ್ಮೆ ದೇಹದಾದ್ಯಂತ ಅದುರಿದ್ದನ್ನು ಮಮಾ ಕಣ್ಣಂಚಿನಲ್ಲೇ ಗಮನಿಸಿ ಒಮ್ಮೆ ಕಿಸುನಕ್ಕ. "ಯಾಕೋ ಮಮಾ, ಏನೋ ನಗ್ತಿದ್ದೀಯ?" ಎಂದು ಕೇಳಿದ ಪ್ರಶ್ನೆ. ಅದಕ್ಕೆ ಮಮಾ, "ಅಲ್ಲಾ, ಸುಮ್ನೆ ಇಮ್ಯಾಜಿನ್ ಮಾಡಿಕೋತಿದ್ದೆ, ದೇವ್ರು ಎಂತಾ ಅಧ್ಬುತ ಕಲಾವಿದ ಅಂತ. ನೀನೇನಾದ್ರೂ ಆಸಿಡ್‌ನ ಬಳಸೋ ಅವಕಾಶ ದಕ್ಕಿಸಿಕೊಂಡಿದ್ದಿದ್ರೆ, ಆಸ್ಪತ್ರೆಯಿಂದ ವಾಪಸ್ ಬಂದ ಮೇಲೆ ಮೇಲ್ನೋಟಕ್ಕೆ ಏನೂ ವ್ಯತ್ಯಾಸ ಕಾಣ್ತಿರಲಿಲ್ಲ ಬಿಡು ನಿನ್ನಲ್ಲಿ. ಏನೋ, ಸೈಡಿಂದ ನೋಡಿದಾಗ  ನಿನ್ನ ಸಿಲ್ಹೌಟಿನ ಹಿಂದಿನ ಭಾಗ ಸ್ವಲ್ಪ ಫ್ಲಾಟ್ ಆಗಿರುತ್ತಿತ್ತು, ಅಷ್ಟೇ. ಅದಕ್ಕೇ ಹೇಳೋದು, ಯಾವ್ಯಾವ ಅವಯವಗಳನ್ನ ಎಲ್ಲೆಲ್ಲಿ ಎಂಗೆಂಗೆ, ಯಾವ ಗಾತ್ರದಲ್ಲಿ ಇರಿಸಬೇಕೋ ಅವುಗಳನ್ನೆಲ್ಲಾ ಅಲ್ಲಲ್ಲೇ ಅಂಗಂಗೇ ಮಡಗಿರ್ತಾನೆ ದೇವ್ರು. ಇದನ್ನ ತಿಳೀದಿರೋರೆಲ್ಲಾ ದೇಹದ ಬೊಜ್ಜನ್ನು ಅಲ್ಲಿ ಸ್ವಲ್ಪ ಇಲ್ಲಿ ಸ್ವಲ್ಪ ಅಂತ ಕುಯ್ಯಿಸಿಕೊಳ್ಳುವುದನ್ನು ನೋಡಿದರೆ, ನಿಜವಾಗಿಯೂ ಕುಯ್ಯಲ್ಪಡುವುದು ಅವರ ಜೇಬನ್ನಷ್ಟೇ" ಎಂದು ಮಾರ್ಮಿಕವಾಗಿ ಹೇಳಿದ್ದನ್ನು ಪ್ರಶ್ನೆ ಅರ್ಥಮಾಡಿಕೊಳ್ಳಲಿಲ್ಲ. 
(೫೨)
ಸಮಗ್ರ ಲೇಖನವೊಂದನ್ನು ಒಳಗೊಂಡಿದ್ದ (www.sampada.net/article/174) ನಾಲ್ಕಾರು ಹಾಳೆಗಳನ್ನು ಪರಿಷತ್ತಿನಲ್ಲಿ ಒಬ್ಬರೂ ಬಿಡದಂತೆ ಎಲ್ಲರೂ ಓದಿದರು. ಪರಿಷತ್ತಿನ, ಬಾಯ್ಸ್ (ಬ್ಲಾಕ್ ಅಂಡ್ ವೈಟ್) ಕಲಾಶಾಲೆಯ ವಿದ್ಯಾರ್ಥಿಗಳು, ಕೆಲವು ಉಪಾಧ್ಯಾಯರುಗಳೆಲ್ಲ ಓದಿದರು. ಯಾರಿಗೂ ಅದೇನೂ ವಿಶೇಷ ಲೇಖನ ಎನ್ನಿಸಲಿಲ್ಲ, ಒಂದು ಪ್ರವಾಸಕಥನವೆನ್ನಿಸಿತು, ಮತ್ತು ಒಂದು ಸಾಧಾರಣ ಪ್ರವಾಸಕಥನವೆನ್ನಿಸಿತ್ತು. ಎಲ್ಲಾ ಕಲಾವಿದರೂ, ಕಲಾವಿದ್ಯಾರ್ಥಿಗಳೂ ಅಪರೂಪಕ್ಕೆ ಓದುವುದೂ, ಓದಿದ್ದಕ್ಕೆ ಪ್ರತಿಕ್ರಿಯಿಸದಿರುವುದು ತಮ್ಮ ಆಜನ್ಮ ಹಕ್ಕು ಎಂಬ ನಂಬಿಕೆಯನ್ನು ಬೆಳೆಸಿಕೊಂಡುಬಿಟ್ಟಿದ್ದರು. ಆ ಲೇಖನ ಸಾಧಾರಣವೆನ್ನಿಸಲು ಅದೊಂದೇ ಕಾರಣವಲ್ಲ. ಆದರೆ ಸೂಕ್ಷ್ಮವಾಗಿ ಗಮನಿಸಿದ ಎಲ್ಲರನ್ನೂ ಕಾಡಿದ ಒಂದೇ ವಿಷಯವೆಂದರೆ ೧೯೮೮ರಲ್ಲಿ ಓದಲಾಗುತ್ತಿರುವ ಆ ಲೇಖನವನ್ನು ’೨೦೦೫ರ ಆಗಸ್ಟ್ ೧೪ರಂದು’ ನಮೂದಿಸಲಾಗಿದ್ದ ಅಂಶ. ಆದ್ದರಿಂದ ಇಂಗ್ಲೀಷರ ಲಂಡನ್ ನಗರವನ್ನು ಕುರಿತಂತೆ ಕನ್ನಡದಲ್ಲಿ ಬರೆದವನೊಬ್ಬನ ಅನುಭವವು ಯಾರಿಗೂ ಗಮನಸೆಳೆಯುವಂತಿರಲಿಲ್ಲ.
 
     ೧೯೮೮ರ ಲಂಡನ್ನನ್ನು ನೋಡಿದವರು ಅಲ್ಲಿ ಯಾರೂ ಇರಲೂ ಇಲ್ಲ. ಬದಲಿಗೆ ’ಚೋಮ’ ಎಂಬ ಬಾಯ್ಸ್ ಶಾಲೆಯ ಕಲಾಇತಿಹಾಸದ ಉಪಾಧ್ಯಾಯನೊಬ್ಬ (ಆತನ ಮೊದಲ ಹಂತದ ಅನ್ವರ್ಥ ನಾಮವು ಚೋಡು ಮತ್ತು ಮನಿ ಎಂದೇನೋ ಇತ್ತು. ಆತ ಕಲೆಯ ಸತ್ಯಾಂಶಗಳನ್ನು ಅಧ್ಯಯನ ಮಾಡಿ ವಿವರಿಸುವ ಬದಲಿ ಚೋಡು ಬಿಡುತ್ತಿದ್ದರಿಂದ, ಮತ್ತು ಹಣವಿಲ್ಲದೆ--ಗುರುಗಳಿಗೆ ಸಹಜಗುಣವಾದ ದಯಾಬುದ್ಧಿಯ ಲವಲೇಷವೂ ಇಲ್ಲದಂತೆ--ಕೆಲಸವನ್ನೂ ಮಾಡುತ್ತಿರಲಿಲ್ಲವಾದ್ದರಿಂದ ಆತನನ್ನು ಚೋಡು ಮತ್ತು ಮನಿ ಅಥವ ಚೋಡ್ಮನಿ ಅಥವ ’ಚೋಮ’ ಎಂದೇ ಕರೆಯಲಾಗುತ್ತಿತ್ತು. ಬ್ಯಾಂಕಿಗೋಗಿ ಹಣ ಡ್ರಾ ಮಾಡಿಕೊಂಡು ಬರುವಂತೆ ಆತನ ಹೆಂಡತಿ ಹೇಳಿದಾಗ, ಅದಕ್ಕೂ ಹಣ ಕೇಳಿದ ಭೂಪನೀತ ಎಂಬ ವದಂತಿಯು ಸತ್ಯಕ್ಕೆ ಹತ್ತಿರವಾದುದು ಎಂಬ ವದಂತಿಯೂ ಸಾಕಷ್ಟು ಜನಜನಿತವಾಗಿತ್ತು ಬಾಯ್ಸ್ ಕಲಾಶಾಲೆಯ ಗರ್ಲ್ಸ್‌ಗಳ ನಡುವೆಯೂ ಸಹ). ಆತ ಯಾವಾಗಲೋ ಒಮ್ಮೆ ಹತ್ತು ದಿನಗಳ ಕಾಲ ಲಂಡನ್ನಿಗೆ ಹೋಗಿಬಂದು (ಆ ಹತ್ತು ದಿನದಲ್ಲಿ ಲಂಡನ್ನಿಗೆ ಚೀಪ್ ಫ್ಲೈಟಿನಲ್ಲಿ ಹೋಗಿಬರಲೇ ಮೂರು ದಿನ ವ್ಯಯವಾಗಿತ್ತಂತೆ) "ವೆನ್ ಐ ವಾಸ್ ಇನ್ ಲಂಡನ್" ಎಂದು ಮತ್ತು ಹತ್ತು ವರ್ಷ ಕಾಲ ಪ್ರತಿಯೊಂದು ಕಲಾಇತಿಹಾಸದ ತರಗತಿಗಳಲ್ಲಿಯೂ ಹೇಳುವುದನ್ನು ನಿಲ್ಲಿಸಿರಲಿಲ್ಲ. ಅದಕ್ಕೆ ವೀರಾ "ಐ ಆ‍ಮ್ ಆಲ್ವೇಸ್ ಇನ್ ಲಂಡನ್. ಐ ಗೋ ಟು ಲಂಡನ್ ಎವರಿ ಮಾರ್ನಿಂಗ್" ಎಂದು ಲೇವಡಿ ಮಾಡುತ್ತಿದ್ದುದನ್ನು ಪರಿಷತ್ತು ಮತ್ತು ಬಾಯ್ಸ್ ಶಾಲೆಯ ನಡುವಣ ದಾಯಾದಿ ಕಲಹದ ಮುನ್ನೋಟವೆಂದು ಪರಿಗಣಿಸಬಹುದಾಗಿದೆ.
 
     ಬದಲಿಗೆ ಎಲ್ಲರೊಳಗಿನ ಕೆಲವರು ಈ ನಿಗೂಢಕ್ಕೊಂದು ಪರಿಹಾರ ಹುಡುಕದಿದ್ದರೆ ಬೇರೇನೂ ಮಾಡಲು ಮನಸ್ಸು ಬರದು ಎಂದು ನಿರ್ಧರಿಸಿದರು. ಹಾಗೆ ನಿರ್ಧರಿಸಿದವರು ಈ ನಿರ್ಧಾರವನ್ನು ತೆಗೆದುಕೊಂಡು, ನಿರ್ಲಿಪ್ತ ಸ್ಥಿತಿಯಲ್ಲಿರುವುದರ ಸೊಬಗನ್ನೇ ಅನುಭವಿಸುತ್ತ ಕಾಲ ಸವೆಸತೊಡಗಿದರು. ಬಿಡಾ, ಅನೇಖ, ಮಮಾ, ಪಾಜು, ಡಬ್ರಿ, ಸೋಕು ಮುಂತಾದ ಕೆಲವೇ ಕೆಲವರು ಈ ನಿಗೂಢವನ್ನು ಪರಿಹರಿಸಬೇಕೆಂದರೆ, ಇಬ್ಬರನ್ನು ಎರಡು ರೀತಿಯಲ್ಲಿ ಸಂಪರ್ಕಿಸಬೇಕು ಎಂದುಕೊಂಡರು: ಸೋಕುಮಾರಿ ಉರುಫ್ ಕಲಾ.ಕೆಯನ್ನು ಪತ್ರಮುಖೇನ ಸಂಪರ್ಕಿಸುವುದು ಮತ್ತು ಬಾಯ್ಸ್ ಕಲಾಶಾಲೆಯ ಇತಿಹಾಸಗಾರ್ತಿ ಚಾರ್ವಾಕಿಯನ್ನು ಮುಖತಃ ಭೇಟಿಮಾಡಿ ವಿವರಿಸುವುದು. ಎಲ್ಲರೂ ನಾಣ್ಯವನ್ನು ಚಿಮ್ಮಿಸಿ ಸೋಕುಮಾರಿಯನ್ನು ಆಯ್ಕೆ ಮಾಡಿದ್ದಕ್ಕೆ ಕಾರಣ ಚಾರ್ವಾಕಿ ಯಾವಾಗ, ಯಾವ ಮೂಡಿನಲ್ಲಿರುತ್ತಾರೆ ಎಂಬುದರ ಅಂದಾಜು ಇನ್ನೂ ಯಾರಿಗೂ ದೊರೆತಿರಲಿಲ್ಲ. ಸಾಧಾರಣ ಮನುಷ್ಯರಿಗಿರಬೇಕಾದ ಯಾವ ಲಕ್ಷಣವೂ ಆಕೆಯಲ್ಲಿಲ ಎಂಬುದು ಆಕೆಯ ವ್ಯಕ್ತಿತ್ವವನ್ನು ಕುರಿತಾದ ಸ್ತ್ರೀವಿಶೇಷಜ್ಞ ಮಮಾನ ಅಭಿಪ್ರಾಯ.//
 
 
 
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):