ನೆನಪಿನ ಚಿತ್ರಕಲಾ ಶಾಲೆ: ಭಾಗ ೧೮ - ಪರಸ್ಪರ ವ್ಯತ್ಯಾಸವಿಲ್ಲದ ಇಪ್ಪತ್ತೊಂದು ಮತ್ತು ನಲವತ್ತಾರು!

0

 

 
 
 
(೫೩)
ಪ್ರಶ್ನಾಮೂರ್ತಿಯ ತ್ರಿಶಂಕು ಸ್ಥಿತಿಗೂ ಸೋಕುಮಾರಿಯಿಂದ ಬಂದ ಪತ್ರಕ್ಕೂ ನಡುವಣ ಸಂಬಂಧವೆಂದರೆ, ಎರಡೂ ಅಸಂಗತಗಳಾಗಿದ್ದದ್ದು. ಹೊಟ್ಟೆಗೆ ಕೈ ಹಾಕಿದರೆ, ಬೆನ್ನು ಮೂಳೆ ಸಿಗುವಂತಿದ್ದ ಪ್ರಶ್ನೆಯು ಗೋಡೆಯ ಅಷ್ಟಗಲ ಕಿಂಡಿಯೊಂದರಲ್ಲಿ ಸಿಲುಕಿಕೊಳ್ಳುವುದೆಂದರೇನು, ನಾಲ್ಕಾರು ಗಂಟೆಕಾಲ ಆತ ಅಲ್ಲಿಯೇ ಸಿಲುಕಿಕೊಂಡಿದ್ದರೂ ಏಣಿ ತರಲು ಹೋದವರ‍್ಯಾರೂ ಸಕಾಲಕ್ಕೆ ಹಿಂದಿರುಗದಿರುವುದೆಂದರೇನು, ಕಾಲಪಯಣದಲ್ಲಿ ಹತ್ತಾರು ವರ್ಷಗಳ ನಂತರ ರಚಿತವಾದ ಲಂಡನ್ ನಗರವನ್ನು ಕುರಿತು ಬಂದಿರಬಹುದಾದ ಲೇಖನವು ಭೂತಕಾಲಕ್ಕೆ ಹಿಂದಿರುಗಿ ಬರುವುದೆಂದರೇನು, ಎಲ್ಲಕ್ಕೂ ಹೆಚ್ಚಾಗಿ ದೈನಂದಿನ ಆಗುಹೋಗುಗಳಂತೆ ಈ ಅಚ್ಚರಿಗಳನ್ನೂ ಬಹುಪಾಲು ಪರಿಷತ್ತಿನ ವಿದ್ಯಾರ್ಥಿಗಳು ತಮ್ಮ ಎಂದಿನ ಆಸಡ್ಡೆ ಎಂಬ ಅಸ್ತ್ರದಿಂದ ಸಫಲವಾಗಿ ಬದಿಗೆ ಸರಿಸಿಬಿಡುವುದೆಂದರೇನು! ಗಂಟೆಗಟ್ಟಲೆ ನೇತಾಡುತ್ತಿದ್ದ ಪ್ರಶ್ನೆಯು ಭೂಮಿಗಿಳಿಯಲು ಕಾರಣವಾದ ಲಂಡನ್ ಪ್ರವಾಸಕಥನವು ಸ್ವತಃ ಒಂದು ಸಮಸ್ಯಾತ್ಮಕ ಪ್ರಶ್ನೆಯಾಗಿಬಿಡುವುದೆಂದರೇನು! 
 
ಆದರೆ ಈ ಎರಡೂ ಘಟನೆಗಳು ಆಗಿಹೋದ ನಂತರ (ಪ್ರಶ್ನೆಯ ತ್ರಿಶಂಕಾವಸ್ಥೆ ಮತ್ತು ಕಾಲದಲ್ಲಿ ಹಿಂದಿರುತ್ತಿರುವ ಪತ್ರೋತ್ತರ) ಉಂಟಾದ ಒಂದು ಮುಖ್ಯ ವ್ಯತ್ಯಾಸವೆಂದರೆ, ಮೊದಲು ಒಬ್ಬೊಬ್ಬರೇ ಒಬ್ಬೊಬ್ಬರಿಗೇ ಪತ್ರ ಬರೆಯುತ್ತಿದ್ದವರು ಎಲ್ಲರೂ ಸೇರಿ ಒಂದೇ ಪತ್ರ ಬರೆಯತೊಡಗಿದ್ದರು, ಮತ್ತು ಎಲ್ಲರೂ ಸೇರಿ ಸೋಕುಮಾರಿಗೇ ಎಲ್ಲ ಪತ್ರಗಳನ್ನು ಉದ್ದೇಶಿಸಿರುತ್ತಿದ್ದರು. ಆದರೂ, ಶೇಕಡಾ ನೂರು ಭಾಗ ಈ ಉತ್ತರಗಳು ಭವಿಷ್ಯದಿಂದ ಬಂದಿರುವ ಸಾಧ್ಯತೆಯನ್ನು ಯಾರೂ ನಂಬಲು ಸಿದ್ಧರಿರಲಿಲ್ಲ, ನಿರಾಕರಿಸಲೂ ಸಾಕ್ಷಿಯುಳ್ಳವರಾಗಿರಲಿಲ್ಲ. ನಂಬದಿದ್ದರೂ ಮುಂದುವರೆಸುವ ಕ್ರಿಯೆಯನ್ನೇ ಚಟವೆನ್ನುತ್ತೇವೆ. ಹಲವು ದಿನಗಳ ಕಾಲ ಸೋಕುಮಾರಿಯೊಂದಿಗೆ ಪತ್ರೋತ್ತರದ ಚಟ ಹತ್ತಿಸಿಕೊಂಡಿದ್ದರೆಲ್ಲರೂ ವಿಚಾರಿಸುತ್ತಿದ್ದುದೆಲ್ಲವೂ ಒಂದೇ ವಿಷಯವನ್ನು ಕುರಿತೇ ಆಗಿತ್ತು. ಆ ಎಲ್ಲ ವಿಚಾರಣೆಯೂ ಲಂಡನ್ ನಗರವನ್ನು ಕುರಿತ ಲೇಖನದ ಬಗ್ಗೆ, ಅದು ಭವಿಷ್ಯದಿಂದ ಬಂದಿರುವ ಬಗ್ಗೆ, ಮತ್ತು ಮುಂದೆ ಬರಬಹುದಾದ ಅವುಗಳ ಇತರೆ ಕಂತುಗಳ ಬಗ್ಗೆಯೇ ಆಗಿದ್ದವು. ಅಂತಹ ಪತ್ರವಿನಿಮಯದ ಮಾತುಕತೆಯ ಸಾರಸಂಗ್ರಹದ ಆಯ್ದ ಭಾಗ ಇಲ್ಲಿದೆ:
(೫೪)
    "ಸೋಕುಮಾರಿ ಉರುಫ್ ಕೃತಿ ಕೆ ಉರುಫ್ ಕಲಾಕೃತಿಯವರೆ, ನೀವು ಕಳಿಸಿರುವ ಲೇಖನ ಸಿಕ್ಕಿತು. ಅದನ್ನು ಯಾರೋ ಕಷ್ಟಪಟ್ಟು ಬರೆದಿದ್ದರೂ, ಅದನ್ನು ’ಮೆಚ್ಚುಗೆಗೆ’ ಒಳಪಡಿಸುವ ಬದಲು ಅದನ್ನು ’ಅನುಮಾನ’ದ ಸುಳಿಗೆ ಸಿಲುಕಿಸಿದ್ದೀರಲ್ಲ? ಈಗ ನಮ್ಮಗಳಲ್ಲಿರುವ ಮೂರು ಅನುಮಾನಗಳಂತೂ ಅನುಮಾನಾತೀತವಾದುವು. ಒಂದು: ಈ ಲೇಖನವನ್ನು ನೀವೇ ಬರೆದಂತೆನಿಸುತ್ತದೆ, ಎಕೆಂದರೆ ನಿಮ್ಮ ಬರವಣಿಗೆಯ ತರಹ ಇದೆ ಎಂದೇನೂ ಅಲ್ಲ, ನಿಮ್ಮ ಬಗ್ಗೆ ನಮಗೆ ಏನೂ ತಿಳಿದೇ ಇಲ್ಲ. ಆದರೆ ಹೀಗೆ ಬರೆಯುವವರು ಮತ್ಯಾರೂ ನಮ್ಮ ಸುತ್ತಮುತ್ತಲೂ ನಮಗೆ ಗೊತ್ತಿಲ್ಲದಿರುವುದರಿಂದ, ಅದನ್ನು ನೀವೇ ಬರೆದಿರಬಹುದು. ಎರಡು: ಈ ಲೇಖನವು ಭವಿಷ್ಯದಿಂದ ಬಂದಿರುವ ಸಾಧ್ಯತೆ ಇದೆಯೆಂದು ನಮಗಂತೂ ಅನ್ನಿಸುವುದಿಲ್ಲ. ಮೂರು: ನೀವೇ ಯಾವುದೋ ಲೈಬ್ರರಿಯ ಯಾವುದೋ ಪುಸ್ತಕದಿಂದ ಅಥವ ಇಂಗ್ಲೀಷಿನಿಂದ ಅನುವಾದಿಸಿಬಿಟ್ಟಿರಬೇಕು, ಏಕೆಂದರೆ ನಿಮಗೆ ಇಂಗ್ಲೀಷು-ಕನ್ನಡ ಬಿಟ್ಟು ಬೇರೆ ಭಾಷೆ ಬರದಲ್ಲ. ದಯವಿಟ್ಟು ಪ್ರತಿಕ್ರಿಯಿಸಿ, ನಮ್ಮ ಅನುಮಾನವನ್ನು ಹಾಗೇ ಬೇಯಲು ಬಿಟ್ಟರೆ ಎಲ್ಲಾ ಗಂಡುಹುಡುಗರ ನೋವಿನ ಶಾಪವು ತಪ್ಪದೇ ನಿಮ್ಮ ಬುದ್ಧಿವಂತ ಮಿದುಳನ್ನು ಸಾವಿರ ಹೋಳುಗಳನ್ನಾಗಿಸುವುದು ಗ್ಯಾರಂಟಿ."
"ಪ್ರಿಯ ಗಂಡುಫ್ರೆಂಡುಗಳೇ. ನೀವುಗಳು ಪತ್ರವೆಂದು ಭಾವಿಸಿ ಬರೆದಿರುವ ಫೇಸ್‌ಬುಕ್ ಚಾಟ್ ಮೆಸೇಜು ನನಗೆ ತಲುಪಿದೆ. ಫೇಸ್‌ಬುಕ್ಕಿನಲ್ಲಿ ನೀವೆಲ್ಲಾ ವಿಕ್ಷಿಪ್ತ ಹೆಸರಿನಲ್ಲಿ ನನಗೆ ಕಿಂಡಲ್ ಮಾಡಲಿಕ್ಕಾಗಿ ಈ ಸಂದೇಶ ಬರೆದಿರುವಿರಿ ಎಂಬುದರಲ್ಲಿ ಅನುಮಾನವಿಲ್ಲ. ನೀವೆಲ್ಲಾ ಎಂದರೆ ಬಿಡಾ ಉರುಫ್ ಬೀಡಾ, ಮಮಾ, ಪ್ರಶ್ನೆ ಮುಂತಾದವರು. ಉಳಿದಂತೆ ಡಬ್ರಿ, ಕಾಜ್‌ರೋಪಿ, ನಲ್ಲಸಿವ, ಮಲ್ಲುಮೋಗನ ಮುಂತಾದವರುಗಳ ಸುದ್ಧಿ ಕೇಳಿಯೇ ಹತ್ತಾರು ವರ್ಷಗಳು ಕಳೆದುಹೋಗಿವೆ, ಅವರುಗಳ ವಿಷಯವನ್ನು ಕಡೆಯದಾಗಿ ಕೇಳಿದ್ದು ೧೯೯೦ರ ದಶಕದ ಮದ್ಯಭಾಗದಲ್ಲಿ. ಸುಮ್ಮನೆ
www.sampada.net/article/174 ನೋಡಿದ್ದರೆ ಸಾಕಾಗುತ್ತಿತ್ತು. ನೀವುಗಳೆಲ್ಲಾ ಭೂತಕಾಲದಿಂದ, ಪರಿಷತ್ತಿನ ಆವರಣದಲ್ಲಿರುವ ಆ ಪೋಸ್ಟ್ ಡಬ್ಬದಿಂದ ಈಗಲೂ ೧೯೮೮ರ ಕಾಲದಿಂದ ಬರೆಯುತ್ತಿದ್ದೀರೆಂದು ನಂಬಲು ಹೂವು ನನ್ನ ಕಿವಿ-ತಲೆಗಳ ನಡುವೆ ನೆಲೆಸಿಲ್ಲ. ಏಕೆಂದರೆ ಕೂದಲನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳುವ ಸ್ವಾತಂತ್ರವಿರುವ ಕಾಲದಲ್ಲಿ ನಾವು (ಅಥವ ನಾವೆಲ್ಲಾ) ಬದುಕುತ್ತಿದ್ದೇವೆ. ಆದರೂ ಒಂದು ಸಣ್ಣ ಅನುಮಾನವು ಮಾನವ ಸಹಜವಾದ್ದರಿಂದ, ಬೆನಿಫಿಟ್-ಆಫ್-ಡೌಟ್ ಅನ್ನುತ್ತಾರಲ್ಲ, ಆ ಕಾರಣದಿಂದ ಉತ್ತರಿಸುವೆ, ಕೇಳಿ. ನೀವುಗಳು ಕಾಗದದ ಸಹಾಯವಿಲ್ಲದೆ ಬರೆಯಬಲ್ಲ ಸಾಧನವನ್ನು ಕಂಪ್ಯೂಟರ್ ಎನ್ನುತ್ತೇವೆ. ೧೯೮೮ರಲ್ಲಿ ಇದು ಗೊತ್ತಿರುವ ವಿಷಯವೇ. ಆದರೆ ಗೊತ್ತಿಲ್ಲದಿರುವ ವಿಷಯವೆಂದರೆ, ಅಂಚೆಯಣ್ಣ ಹಾಗೂ ದೀರ್ಘ ಕಾಲಾವಕಾಶದ ಸಹಾಯವಿಲ್ಲದೆ, ಟೆಲಿಫೋನಿನಲ್ಲಿ ಮಾತನಾಡಿದಷ್ಟೇ ರಭಸದಲ್ಲಿ ಜಗತ್ತಿನ ಯಾವ ಮೂಲೆಯಿಂದಲೂ ಮತ್ತೊಂದು ಮೂಲೆಗೆ ಬರೆಯಬಹುದಾಗಿರುವ ಕಾಲವಿದು, ಈ ೨೦೧೧
"ಹ, ಹ, ಹ! ಹಾಗಿದ್ದರೆ ನಾವು ಕೈತೂರಿಸಿ ನಿಮ್ಮನ್ನು ಮುಟ್ಟಬಹುದೆ?"
"ಬಹುದು, ಹೃದಯವನ್ನು ಮಾತ್ರ."
"ನಿಮಗೆ ವಯಸ್ಸೆಷ್ಟು?"
"ನಿಮ್ಮಷ್ಟೇ, ನಲವತ್ತಾರು"
"ಆಂಟಿ, ನಮಗೆ ಇನ್ನೂ ಇಪ್ಪತ್ತಮೂರು"
"ಓಹ್, ಮರೆತೆ, ೧೯೮೮ರ ಗ್ಯಾಂಗಲ್ಲವೆ ನಿಮ್ಮದು. ನನಗೂ ಅಲ್ಲಿ ಈಗ ಇಪ್ಪತ್ತಮೂರು ವರ್ಷವೇ, ಕೇಳಿನೋಡಿ ಅಲ್ಲಿರುವ ಸೋಕುಮಾರಿಯನ್ನ."
"ಅಂದರೆ ಅಲ್ಲಿರುವ ನಮಗೆಲ್ಲಾ ಈಗ ನಲವತ್ತಾರಾಗಿಬಿಟ್ಟಿದೆಯ?"
"ಯಾಕೆ ಅನುಮಾನವೆ?"
"ಆಂಟಿ, ನಿಮ್ಮ ಬಿಸ್ಕತ್ತು ನಮಗಿಷ್ಟವೇ. ನೀವು ನಿಜವಾಗಿಯೂ ೨೦೧೧ರಲ್ಲಿರುವುದಾದರೆ ೧೯೮೯ರಿಂದ ೨೦೧೧ರವರೆಗೂ ಜಗತ್ತಿನಲ್ಲಿ ಏನೇನಾಗಿದೆ ಸ್ವಲ್ಪ ವಿವರಿಸುತ್ತೀರ.
ಒಂದೇ ನಿಮಿಷದಲ್ಲಿ ಹೇಳಿಬಿಡಬಲ್ಲೆ. ನೀವೇನಾದರೂ ನೀವುಗಳೇ ಹೇಳುವಂತೆ ೧೯೮೮ರಲ್ಲಿ ಈಗಲೂ ಇರುವುದಾದಲ್ಲಿ ನಾನು ಏನೇ ಹೇಳಿದರೂ ಅದನ್ನು ನಂಬಲು ನಿಮ್ಮಗಳಿಗೆ ಆಧಾರ ಸಿಗುವುದಿಲ್ಲ. ಏನಿದ್ದರೂ ನಾನು ಹೇಳಿದ್ದನ್ನೆಲ್ಲಾ ನೀವುಗಳು ನಂಬಬೇಕಾಗುತ್ತದಷ್ಟೇ. ತರ್ಕ ನಂಬಿಕೆಯಾಗುವ ಅವಕಾಶವೆಂದರೆ ಕಾಲವು ಹಿಂದಕ್ಕೆ ಸರಿಯುವ ಸಮಯವೆಂದೇ ಅರ್ಥ."
"ಆಂಟಿ ಚೆನ್ನಾಗಿ ಫಿಲಾಸಫಿ ಹೊಡಿತೀರಲ್ಲ!"
"ಫಿಲಾಸಫಿಯಲ್ಲ ದ್ರಾಬೆಗಳ, ಕೊಟೇಷನ್ಸ್ ಅನ್ನೋ ಪದ ಕೇಳಿಲ್ವ ನೀವೆಲ್ಲಾ?"
"ಬೈ ದ ಬೈ, ೮೮ರಿಂದ ೨೦೧೧ರವರೆಗೂ ನಡೆದ ಕೆಲವು ಮುಖ್ಯ ಘಟನೆಗಳನ್ನು ಹೇಳಿ, ಪ್ಲೀಸ್."
"ಹೇಳಿ ಏನು ಪ್ರಯೋಜನ? ನೀವು ೧೯೮೮ರವರೇ ಆದರೆ ಶಾಕ್ ಆಗುತ್ತೀರ. ಪ್ರತಿ ವ್ಯಕ್ತಿಯೂ ತನ್ನ ಜೀವನದಲ್ಲಿ ತನ್ನದೇ ಸಾವೆಂಬ ಶಾಕ್‌ನಿಂದ ಇತರರನ್ನು ಗಲಿಬಿಲಿಗೊಳಿಸುತ್ತಾನೆ. ಕಾಲಪಯಣ ಸುಳ್ಳಾಗಿದ್ದಲ್ಲಿ, ಬೆಂಗಳೂರಿನಲ್ಲಿ ಈ ಕಾಲಮಾನದಲ್ಲಿ ಇದ್ದುಕೊಂಡೇ ನೀವೆಲ್ಲಾ ಫೇಸ್‌ಬುಕ್ ಮೂಲಕ ನನ್ನನ್ನು ಲೇವಡಿ ಮಾಡುತ್ತಿರುವಂತೆನಿಸುತ್ತದೆ."
"ಒಂದು ಕ್ಷಣ ಇದೆಲ್ಲ-ಕಾಲಪಯಣ--ನಿಜ ಅಂದುಕೊಳ್ಳೋಣ. ಪ್ಲೀಸ್ ೮೮ ಹಾಗೂ ೨೦೧೧ರ ನಡುವಣ ಘಟನೆಗಳನ್ನು ವಿವರಿಸಿ, ಪ್ಲೀಸ್, ಪ್ಲೀಸ್, ಪ್ಲೀಸ್"
ಸೋಕುಮಾರಿ ನಗತೊಡಗಿದಳು. ಪ್ಲೀಸ್ ಪ್ಲೀಸ್ ಎಂದು ಬಂದ ಅವರುಗಳ ಮೆಸೇಜಿನಲ್ಲಿ ಸಪ್ಪೆ ಮುಖ ಹಾಕಿಕೊಂಡಿರುವ ಸಣ್ಣಪುಟ್ಟ ಹಳದಿ ಮುಖಗಳು ಪ್ರತ್ಯಕ್ಷವಾಗತೊಡಗಿದವು, ಚಾಟ್ ಹಾಗೂ ಮೊಬೈಲ್ ಮೆಸೇಜುಗಳಲ್ಲಿ ಇರುವ ಪ್ರೋಗ್ರಾಮಿನಂತೆ.
"ಓಕೆ, ಓಕೆ. ಕೇಳಿ ಏನು ಗೊತ್ತಾಗಬೇಕಿದೆ ನಿಮ್ಮಗಳಿಗೆ?"
"ಬೆಂಗಳೂರು ಹೇಗಿದೆ?"
"ಒಳ್ಳೆ ಪ್ರಶ್ನೆ. ಬ್ಯಾಂಗಳೂರನ್ನು ಬೆಂಗಳೂರು ಎಂದು ಬದಲಾಯಿಸಲಾಗಿದೆ
ಅಯ್ಯೊ, ಮೊದಲಿಂದಲೂ ಬೆಂಗಳೂರು ಅಂತಲೇ ಇತ್ತಲ್ಲವೆ?"
"ಗೂಬೆಗಳ, ಅದು ಕನ್ನಡದ ಆಡುಭಾಷೆಯ ಪ್ರಪಂಚದಲ್ಲಿ. ಈಗ ಇಂಗ್ಲೀಷನ್ನು ಒಂಚೂರು ಬೆಂಡ್ ಎತ್ತಿ ಆಂಗ್ಲ ಸುದ್ಧಿ ಮಾಧ್ಯಮಗಳು ಕನ್ನಡವನ್ನು ಅಳವಡಿಸಿಕೊಳ್ಳುವಂತಾಗಿದೆ.
ಇನ್ನೂ ಕನ್ನಡ ಇದೆಯಾ?"
ಸ್ವಲ್ಪ ಹೊತ್ತು ಮೌನ. ಕೂಡಲೆ ಇಂಗ್ಲೀಷಿನಲ್ಲಿ ಪತ್ರಗಳು ಬರತೊಡಗಿದವು ಸೋಕುಮಾರಿಯಿಂದ.
"ಮಾತು ತಿರುಗಿಸಬೇಡಿ. ಕಾರ್ಡುಗಳನ್ನು ಬರೆದುಬರೆದು ಸಾಕಾಯಿತು. ಘಟನೆಗಳನ್ನು ಹೇಳಿ ಪ್ಲೀಸ್."
ಸೋಕುಮಾರಿ ಉತ್ತರಿಸಿದಳು, "ನೆನಪಿದೆಯೆ, ನಾವೆಲ್ಲ ಕಲಾ ಇತಿಹಾಸ ಓದಲು ಶಿವರಾಮ ಕಾರಂತರ ’ಕಲಾಪ್ರಪಂಚ’ವೆಂಬ ಆನೆಗಾತ್ರದ ಪುಸ್ತಕವೊಂದನ್ನು ಹಿಂಡಿಹಿಪ್ಪೆ ಮಾಡಿದ್ದು, ಒಂದೇ ಒಂದು ಎಚ್.ಡಬ್ಲ್ಯು.ಜಾನ್ಸನ್ನನ ’ಹಿಸ್ಟರಿ ಆಫ್ ಆರ್ಟ್’ ಪುಸ್ತಕವನ್ನು ಮೆರವಣಿಗೆ ತೆಗೆದುಕೊಂಡು ಹೋಗುತ್ತಿದ್ದುದು?"
"ಹೌದು"
"ಈಗ ಕಂಪ್ಯೂಟರಿನಲ್ಲಿ ಬಟನ್ ಒತ್ತಿದರೆ ಸಾಕು, ಬಂಡಿಗಟ್ಟಲೆ ಪುಸ್ತಕಗಳು ಸಿಗುತ್ತವೆ ಕಲೆಯ ಬಗ್ಗೆ."
"ಕನ್ನಡದಲ್ಲೂ ಸಿಗುತ್ತವಾ?"
"ಅಸಾಧ್ಯವಾದುದನ್ನೆಲ್ಲಾ ನಿರೀಕ್ಷಿಸಬಾರದು. ಸಿಗುವುದಿಲ್ಲ ಎಂದೇನಿಲ್ಲ, ಅಸಲು ಇಂಗ್ಲೀಷ್ ಗ್ರಂಥಗಳ ಕ್ಷೀಣ ಛಾಯೆಗಳಂತೆನಿಸುತ್ತವಷ್ಟೇ."
"ಅಣ್ಣಾವ್ರ ಸಿನೆಮಾ ಇನ್ನೂ ಬರ್ತಾ ಇದ್ದಾವಾ? ಈಗ ಅವ್ರಿಗೆ ಎಂಬತ್ತೆರೆಡು ವರ್ಷವಿರಬೇಕಲ್ಲ?"
"ಹೌದು ಬರ್ತಿದ್ದಾವೆ. ಆದ್ರೆ ಮೊದಲು ಅಣ್ಣಾವ್ರು ನಂತರ ತಮ್ಮಾವ್ರು ತೀರಿಕೊಂಡು ವರ್ಷಗಳಾಗಿ ಹೋದವು. ಮೂರು ಎಕ್ಸ್‌ಟ್ರಾ ಜ್ಞಾನಪೀಠಗಳು ಬಂದಿದ್ದಾವೆ ಕನ್ನಡ ಸಾಹಿತ್ಯಕ್ಕೆ. ಬೆಂಗಳೂರಿನಲ್ಲಿ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ಆರಂಭಗೊಂಡಿದೆ, ರೋರಿಕ್ ಗ್ಯಾಲರಿ ಪರಿಷತ್ತಿನಲ್ಲೇ ಆರಂಭಗೊಂಡಿದೆ, ಬಿಪಿಓ ಮತ್ತು ಐಟಿಗಳು ಶುರುವಾಗಿವೆ."
"ಬಿಪಿಓ ಮತ್ತು ಐಟಿಗಳು ಅಂದ್ರೇನು?"
"ಅದೇ ಅಮೇರಿಕನ್ನರು ಎಚ್ಚರವಾಗಿರುವಾಗ ಎಚ್ಚರವಾಗಿದ್ದು, ಅವರು ಮಲಗಿದಾಗ ಮಲಗಿ, ನಡುವೆ ಅವರು ದೇಹಬಾದೆಗಳನ್ನು, ಚಟಗಳನ್ನು ತೀರಿಸಿಕೊಂಡಾಗೆಲ್ಲ ಹಾಗೇ ಮಾಡುವ ಕೆಲಸಗಾರರಿರುವ ಭಾರತೀಯ ತಾಣಗಳೇ ಬಿಪಿಓ. ಮೊದಲು ನಿಮಗೆ ಸುಳ್ಳು ಹೇಳುವುದನ್ನು ಕಲಿಸುತ್ತಾರೆ."
"?"
"ಬೀಡಾ ಎಂದಿದ್ದರೆ ಬೀಥೋವನ್ ಆಗುತ್ತಾನೆ, ಮಮಾ ಎಂದಿದ್ದರೆ ಮಾರ್ಟಿನ್ ಎಂದಾಗುತ್ತಾನೆ, ಬಿಪಿಓ ಕೋಣೆಗಳೊಳಗೆ ಹೋಗಿಬಿಟ್ಟರೆ ಭಾರತೀಯ ಆಕ್ಸೆಂಟ್ ಬಿಟ್ಟು ಪಾಶ್ಚಾತ್ಯ ಆಕ್ಸಂಟಿನಲ್ಲಿ ಮಾತನಾಡುವುದು ತಾನೇ ತಾನಾಗಿ ಬಂದುಬಿಡುತ್ತದೆ."
"ಓ, ಮ್ಯಾಜಿಕ್ ಕಟ್ಟಡಗಳವು. ನಮ್ಮ ಪಾಜು ರಟೇಲ್ ಎಂಬ ಬಾಕ್ಸ್‌ಫರ್ಡ್ ಡಿಕ್ಸ್-ನರಿಯನ್ನು ಅಲ್ಲಿಗೆ, ನಿಮ್ಮ ಕಾಲಕ್ಕೆ ಕಳಿಸುತ್ತೇವೆ, ಇರಿ ಸ್ವಲ್ಪ."
"ಏನೂ ಪ್ರಯೋಜನವಿಲ್ಲ, ಆತ ಕೋಟ್ಯಾಧೀಶ್ವರನಾಗಿ ಅಂತಹ ಬಿಪಿಓಗಳನ್ನು ಸ್ವತಃ ಆರಂಭಿಸುವ ಹಂತದಲ್ಲಿದ್ದಾನೆ."
"ಓಹೋ ಫಟೇಲರು ಅಲ್ಲಿವರೆಗೂ ಮುಂದುವರೆದಿದ್ದಾರಾ? ಕಲೆಗಿಲೆ ಎನಾದರೂ ಸೃಷ್ಟಿಸುತ್ತಿದ್ದಾರಾ?"
"ಗೊತ್ತಿಲ್ಲ. ವೃತ್ತಿಪರ ಕಲಾವಿಮರ್ಶಕಿಯಾದ ನನಗೇ ಆತನ ಕಲಾಕಾರ್ಯ ಚಟುವಟಿಕೆಗಳು ಗೊತ್ತಿಲ್ಲವೆಂದರೆ ನೀವೇ ಅರ್ಥಮಾಡಿಕೊಳ್ಳಿ."
"ಆರ್ಟ್ ಫೀಲ್ಡಿನಲ್ಲಿ ಯಾರು ಯಾರು ಉಳಿದುಕೊಂಡಿದ್ದಾರೆ?"
"ಬೀಡಾ, ಮಮಾ, ಅನೇಖ,... ... ಇತ್ಯಾದಿ ಇತ್ಯಾದಿಯರು."
"ತರಲೆ ವೀರಾ ಇನ್ನೂ ಅಷ್ಟೇ ತರಲೆ ಮಾಡ್ತಿದ್ದಾನಾ?"
"ನೀವುಗಳು ವಿಚಾರಿಸುತ್ತಿರುವ ವೀರಾ ಅಥವ ವೀರರಾಜ ಇಪ್ಪತ್ತೊಂದನೇ ಶತಮಾನವನ್ನು ನೋಡಲೇ ಇಲ್ಲ ಪಾಪಿ. ಆಕಸ್ಮಿಕವೋ ಆತ್ಮಹತ್ಯೆಯೋ ಎಂದೂ ತಿಳಿಸದೇ ಪರಲೋಕವಾಸಿಯಾಗಿ ಹತ್ತನ್ನೊಂದು ವರ್ಷಗಳೇ ಕಳೆದುಹೋಗಿವೆ" ಇತ್ಯಾದಿ ಮಾತುಕಥೆಯು ಸುಮಾರು ದಿನಗಳ ಕಾಲ ನಡೆಯಿತು. 
 
ನಾಮುಂದು ತಾಮುಂದು ಎಂದು ಎಲ್ಲರೂ ಒಂದೊಂದು ವಿಷಯ ಕೇಳುತ್ತಿದ್ದರು, ಅನೇಖ ಅದನ್ನು ಪತ್ರದಲ್ಲಿ ಬರೆಬರೆದು ಪೋಸ್ಟ್ ಡಬ್ಬಿಗೆ ಹಾಕುತ್ತಿದ್ದ. ಹಾಗೆ ಅವನೊಮ್ಮೆ ಅಂಚೆಡಬ್ಬಿಗೆ ಪತ್ರವನ್ನು ಹಾಕಿ, ಕ್ಯಾಂಟೀನಿನ ಕಡೆ ನಡೆದುಹೋಗುತ್ತಿದ್ದಾಗ ಪರಿಷತ್ತಿನ ಗ್ಯಾಲರಿಗಳ ಪ್ರದರ್ಶನ ನೋಡಲು ಬಂದವನೊಬ್ಬ ಕಣ್ಣುಬಾಯಿ ಬಿಟ್ಟುಕೊಂಡು ಆತನನ್ನೊಮ್ಮೆ, ಅಂಚೆಡಬ್ಬಿನ್ನೊಮ್ಮೆ ನೋಡತೊಡಗಿದ. 
 
      ಉತ್ತರ ಬಂದಾಗ ವಿಕ್ಷಿಪ್ತ ಎಂಬ ಹೆಸರಿಗೆ, ಪರಿಷತ್ತಿನ ವಿಳಾಸಕ್ಕೆ ಬರುತ್ತಿತ್ತು. ವಿಕ್ಷಿಪತ ಎಂಬಾತ ಪರಿಷತ್ತಿನ ರಸ್ತೆಯ ಆಚೆಗಿದ್ದ ಬಾಯ್ಸ್ ಕಲಾಶಾಲೆಯಲ್ಲಿ ಅಭ್ಯಾಸಮಾಡುತ್ತಿದ್ದ. ಎಷ್ಟೋ ಸಲ ಅನೇಖನು ಎಲ್ಲರ ಪರವಾಗಿ ಬರೆಯುತ್ತಿದ್ದ ಪತ್ರಕ್ಕೆ ವಿಕ್ಷಿಪ್ತನ ಹೆಸರಿಗೆ ಉತ್ತರ ಬರುತ್ತಿತ್ತು, ಆದರೆ ಈ ಇಬ್ಬರೂ ಗಳಸ್ಯಕಂಠಸ್ಯ ಗೆಳೆಯರಿಗೆ ಅಂತಹ ಒಂದೂ ಪತ್ರ ತಲುಪಲೇ ಇಲ್ಲ. ಅವರಿವರು ಕಿತ್ತು, ಓದಿ, ಕೊನೆಗೆ ಪತ್ರ ಎಲ್ಲಿ ಹೋಯಿತು ಎಂಬುದೇ ಯಾರಿಗೂ ತಿಳಿಯದಂತಾಗಿತ್ತು. ಸ್ವಲ್ಪ ದಿನಗಳ ನಂತರ ಆ ಕಾಗದಗಳು ಸಿಕ್ಕಾಗ ಅದರಲ್ಲಿನ ಅಕ್ಷರಗಳೆಲ್ಲವೂ ಅಳಿಸಿಹೋಗಿರುತ್ತಿದ್ದವು.
 
ಆ ಕಾಗದಗಳನ್ನು ಓದಿದವರೂ ಸಹ ತಾವು ಯಾವ ಪ್ರಶ್ನೆ ಕೇಳಿದ್ದೆವು, ಅದಕ್ಕೆ ಬಂದ ಉತ್ತರಗಳು ಏನು ಹೇಳುತ್ತಿದ್ದವು ಎಂಬುದೆಲ್ಲವನ್ನೂ ದಿನವೆರೆಡು ದಿನಗಳಲ್ಲಿ ಮರೆತುಹೋಗುತ್ತಿದ್ದರು. ಹಾಗಲ್ಲ ಹೀಗೆ, ಹೀಗಲ್ಲ ಹೇಗೇಗೋ ಎಂದೆಲ್ಲಾ ವಾಗ್ವಾದಗಳು ಹುಟ್ಟಿಕೊಂಡವು. ೨೦೧೧ರಷ್ಟ್ರಲ್ಲಿ ಕೈಲಾಸವಾಸಿಯಾದವನು ಬೀಡಾನಲ್ಲ, ಮಮಾ ಎಂದು ಕೆಲವರು, ಮೋಗನನಲ್ಲ, ಸ್ವತಃ ಸ್ಟೈಲಜಾ ಎಂದೂ ಕೆಲವರು ಮಾರಣಾಂತಿಕ ವಾದವಿವಾದಕ್ಕಿಳಿದುಬಿಟ್ಟಿದ್ದರು. ಯಾರು ಹಾಗೆಂದವರು ಎಂದು ನಿರುಕಿಸಲಾಗಿ, ಮಮಾ ತೀರಿಕೊಂಡಿದ್ದಾನೆ ಎಂದು ಸ್ವತಃ ಮಮಾ, ಸ್ಟೈಲಜಾ ತೀರಿಕೊಂಡಿದ್ದಾಳೆ ಎಂದಾತ ಸ್ವತಃ ಸ್ಟೈಲಜಾಳಿಗೇ ಹೇಳಿದ್ದರು! 
(೫೫)
ಮತ್ತೊಂದಷ್ಟು ದಿನದ ನಂತರ ಮತ್ತೊಂದು ಕಾಗದ ಬಂದಿತು ಸೋಕುಮಾರಿಯಿಂದ. ಯಾರೂ ಬರೆಯದೆಲೇ ಬಂದ ಮೊದಲ ಪತ್ರವದು. ಅದರಲ್ಲಿ ಲಂಡನ್ ಪ್ರವಾಸಕಥನದ ಎರಡನೇ ಕಂತು ಇತ್ತು. ಜೊತೆಯಲ್ಲಿ ಆಕೆಯಿಂದ ಒಂದು ಒಕ್ಕಣೆ: "www.sampada.net/article/214, ಲಂಡನ್ ಪ್ರವಾಸ ಭಾಗ ೨: ಇಷ್ಟು ಚಳಿ, ಜಿಟಿ ಮಳೆ ಮತ್ತು ದೃಶ್ಯ ಕಲೆ" ಓದಿ, ನೀವುಗಳು ನಿಜದಲ್ಲಿ ೨೦೧೧ರಲ್ಲಿದ್ದ ಪಕ್ಷದಲ್ಲಿ. ನಿಜವಾಗಿಯೂ ನೀವುಗಳು ೧೯೮೮ರಲ್ಲಿರುವವರಾದರೆ, ಈ ಲೇಖನದ ಹಾರ್ಡ್‌ಕಾಪಿಯನ್ನು ಈ ಒಕ್ಕಣೆಯೊಂದಿಗೆ ಕಳಿಸಿಕೊಡುತ್ತಿದ್ದೇನೆ. ಹ್ಯಾಪಿ ರೀಡಿಂಗ್ ಎಂದಿತ್ತು!
 
ಇದೊಂದು ರೀತಿಯ ಪಂಥಾಹ್ವಾನದಂತಿತ್ತು. ಹೆಣ್ಣೊಬ್ಬಳ ಆದೇಶವನ್ನು ಪಾಲಿಸಬೇಕಲ್ಲ ಅನ್ನುವ ಕಾರಣಕ್ಕೆ ತುಂಬಾ ಜನ ಅದನ್ನು ಓದಲಿಲ್ಲ. ಏಕೆಂದರೆ ಆಗ ಪರಿಷತ್ತಿನಲ್ಲಿದ್ದವರೆಲ್ಲಾ ಹೆಚ್ಚೂಕಡಿಮೆ ಬೀಚಿಯವರ ಹೆಂಕಾಗಂನಂತಹವರುಗಳೇ ಆಗಿದ್ದರು (ಹೆಣ್ಣು ಕಾಣದ ಗಂಡು). ಪ್ರಶ್ನೆಯು ಧರೆಗಿಳಿದಂತೆ, ಈ ಭವಿಷ್ಯದ ಲೇಖನಗಳ ಪ್ರಶ್ನೆಗಳೂ ಧರೆಗಿಳಿಯತೊಡಗಿದವು, ಪರಿಷತ್ತಿನಲ್ಲಿ, ಯಾವುದೋ ಅನ್ಯಗ್ರಹ ಜೀವಿಗಳು ಇಲ್ಲಿ ಲ್ಯಾಂಡ್ ಆದಂತೆ ಎಂದಿದ್ದ ಮಮಾ, ಅದೂ ಆದ್ರೂ ಆಗಿಬಿಡಬಹುದೇನೋಪ್ಪ ಎಂದು ಎಲ್ಲರೂ ಮೂಗಿನಮೇಲೆ ಬೆರಳಿಡುವಂತೆ ಸಣ್ಣ ಅನುಮಾನವೊಂದನ್ನು ಹುಟ್ಟುಹಾಕಿ ತಾನು ಮಾತ್ರ ನಿರಾಳನಾಗಿಬಿಟ್ಟ. ಪೆಪರ್ ಓದೋಲ್ವ ಮುಂಡೇವ, ಫ್ರೂಟೀಲಿ ಹುಳುಗಳಿದ್ದವಂತೆ, ಎಂಬ ಕೇವಲ ಐದು ಪದಗಳ ವಾಕ್ಯವನ್ನು ಬಳಸಿ, ಮಮಾ, ಹುಡುಗಿಯರು ಮುಖ ಸಿಂಡರಿಸಿಕೊಂಡು ಕ್ಯಾಂಟೀನಿನ ಕಟ್ಟೆಯ ಮೇಲೆ ಬಿಟ್ಟು ಹೋದ ಅರ್ಧ-ಮುಕ್ಕಾಲು ಫ್ರೂಟಿಗಳನ್ನು ಧಾರಾಳವಾಗಿ ಕುಡಿತು ತೇಗುತ್ತಿದ್ದ. ಆತನ ಮಧ್ಯಾಹ್ನಗಳ ಹಸಿವೆ ನೀಗುತ್ತಿದ್ದು ಹೀಗೆ. ಈ ಹೆಂಕಾಗಂಗಳ ಗುಂಪಿನ ಜಗತ್ತಿನಲ್ಲಿ ಹೆಣ್ಣು-ಗಂಡುಗಳ ತಮ್ಮ ತುಟಿಗಳಿಂದ ಮಿಲನವನ್ನನುಭವಿಸುತ್ತಿದ್ದರು. ಮೊದಲು ಹುಡುಗಿಯರು ಫ್ರೂಟಿಗಳಿಗೆ ತುಟಿಗಳನ್ನು ಸೋಕಿಸಿದ್ದರೆ, ಮಮಾ ಆ ನಂತರ ಅದಕ್ಕೆ ಸೋಕಿಸುತ್ತಿದ್ದ ತನ್ನ ತುಟಿಗಳನ್ನು. ನಾನು ನನ್ನ ತುಟಿಗಳನ್ನು ಸೋಕಿಸಿದ್ದು ಫ್ರೂಟಿ ಡಬ್ಬಕ್ಕಲ್ಲ ಎಂದು ಮಾರ್ಮಿಕವಾಗಿ ಹೇಳಿಕೊಂಡು, ಖಾಲಿ ಫ್ರೂಟಿ ಡಬ್ಬವನ್ನು ಎಲ್ಲರಿಗೂ ತೋರಿಸಿಕೊಂಡು ಮೆರವಣಿಗೆ ಬರುತ್ತಿದ್ದ ಮಮಾ. 
 
ಸ್ವಲ್ಪ ಯೋಚಿಸಿ ನೋಡಿ. ಖಾಲಿ ಹಾಳೆಯ ಮೇಲೆ ಸ್ಕೆಚ್ ಮಾಡಿದಾಗ ಏನಾಗುತ್ತದೆ? ಎಂದು ಕಲಾ ಮತ್ತು ಕಾಸಂವಾದವನ್ನು ಮುಂದಿನ ಅಥವ ಹಿಂದಿನ ದಿನಗಳಲ್ಲಿ ಮುಂದುವರೆಸಿದ್ದಳು ಸೋಕುಮಾರಿ ಉರುಫ್ ೨೦೧೧ರ ಸೋಕುಮಾರಿ.   
ಬರೆದವ ಹಳಗನ್ನಡದ ಸಾಹಿತಿಯ ಕಲ್ಪನೆಯ ಪ್ರಕಾರ ಭಿಕಾರಿಯಾಗುತ್ತಾನೆ, ಆ ಸ್ಕೆಚ್ಚು ಮುಂದೊಂದು ದಿನ ಬೋಂಡ ಕಟ್ಟಲು ಉಪಯೋಗಕ್ಕೆ ಬರುತ್ತದೆ ಎಂದುತ್ತರಿಸಿದ್ದರು ಪರಿಷತ್ತು ಹಾಗೂ ಬಾಯ್ಸ್ ಕಲಾಶಾಲೆಯ ಬಾಯ್ಸುಗಳು. ಮೊದಲೇ ಹೇಳಿದ್ದೆ ಚಿತ್ರಕಲೆಯನ್ನು ಕುರಿತಾದ ಕಾಲೇಜುಗಳನ್ನು ಕಲಾಶಾಲೆಗಳು ಎಂದೇ ಕರೆಯುತ್ತಾರೆಂದು. ಅಲ್ಲಿ ಅಕ್ಷರದಾರಿದ್ರ್ಯ ಇರುವುದರಿಂದ, ಅಲ್ಲಿನ ಹುಡುಗರು(ಮತ್ತು ಹುಡುಗಿಯರು)ಗಳನ್ನು ಶಾಲಾಮಟ್ಟದವೇ ಎಂದು ಅರ್ಥಿಸಿದರೂ ವ್ಯತ್ಯಾಸವೇನಾಗುವುದಿಲ್ಲ. ಅಥವ ಓದನ್ನು ಬೇಜಾರು, ಭಯ ಮತ್ತು ಹಿಂಸೆಯೊಂದಿಗೆ ಸಮೀಕರಿಸಿದವರು ಮಾತ್ರ ಕಲಾಶಾಲೆಗಳನ್ನು ಸೇರುತ್ತಿದ್ದ ಕಾಲವದು, ಈಗಿನಂತೆ. ಆದ್ದರಿಂದಲೇ ಈಗಿನ ಕಾಲಕ್ಕೂ ಆಗಿನ ಕಾಲಕ್ಕೂ ವ್ಯತ್ಯಾಸವಿಲ್ಲದಂತೆ, ಕಾಲನ ಪರದೆ ತೂತುಕೊರೆದು ಈ ಪತ್ರವ್ಯವಹಾರಗಳು ಉಂಟಾಗುತ್ತಿತ್ತೆಂದು ಕಾಣುತ್ತದೆ.  
 
ಪಾಪಿಗಳ, ಕಾಗದದ ಮೇಲೆ ಸ್ಕೆಚ್ ಮಾಡಿದಾಗ, ಖಾಲಿ ಹಾಳೆ ಅಥವ ಹಾಳೆಯ ಖಾಲಿತನ ಮಾಜಿಯಾಗುತ್ತದೆ. ಪೆನ್ಸಿಲ್ ಅಥವ ಬ್ರಶ್ ವಸಾಹತುಶಾಹಿಯಾಗಿ, ಕಾಗದವು ವಸಾಹತೀಕರಣಕ್ಕೊಳಗಾಗುತ್ತದೆ. ಮತ್ತು ಅದು ನಿರಂತರ ಬಂಧಿಯಾಗುತ್ತದೆ ಅಕ್ಷರಶಃ ಮತ್ತು ರೂಪಕ-ಈ ಎರಡೂ ನಿಟ್ಟಿನಿಂದ. ಆ ಕಾಗದವನ್ನು ಮುಂದೆ ನೋಡುವವರು, ಖಾಲಿ ಇರುವ ಹಾಳೆಯನ್ನು ಅಥವ ಹಾಳೆಯ ಖಾಲಿತನವನ್ನು ಯಾವಾಗಲೂ ಚಿತ್ರಿತ ರೇಖೆ, ವರ್ಣಗಳ ಅಡಿಯಾಳಾಗಿಯೇ ಪರಿಗಣಿಸುತ್ತಾರೆ-ಕೇವಲ ನೋಡುವಾಗ ಮತ್ತು ಅದನ್ನು ವ್ಯಾಖ್ಯೆಗೆ ಒಳಪಡಿಸುವಾಗಲೂ ಸಹ. ಅಂದರೆ ವಸಾಹತುಶಾಹಿ (ಕಲಾವಿದ) ತನ್ನ ಸೃಷ್ಟಿಯ ಮೂಲಕ ವೀಕ್ಷಕನನ್ನೂ ಸಹ ತನ್ನಂತೆ ವಸಾಹತುಶಾಹಿ ಗ್ರಾಹಕನನ್ನಾಗಿಸಿಬಿಡುತ್ತಾನೆ. ಇಂದಿಗೂ (೨೦೧೧) ಕನ್ನಡದ ಮುಖ್ಯವಾಹಿನಿಯ ಸಾಹಿತ್ಯ ವಲಯದವರು ಮಾತ್ರ ಈ ಸ್ವಯಂ-ವಸಾಹತುಶಾಹಿ ಮನೋಭಾವದ ಉದ್ದೀಪನದಿಂದ ತಮ್ಮನ್ನು ರಕ್ಷಿಸಿಕೊಂಡಿದ್ದಾರೆ. ಅಂದರೆ ಚಿತ್ರಕಲೆಯನ್ನು ಈವತ್ತಿಗೂ ಅವರು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ, ಮುಂತಾಗಿ ಸೋಕುಮಾರಿ-೧೧ ಬರೆದದ್ದನ್ನು ಓದಿ ಪರಿಷತ್ತು ಬಾಯ್ಸ್ ಎಲ್ಲರೂ ಸೋಕುಮಾರಿ-೮೮ಳನ್ನು ಅಟ್ಟಾಡಿಸಿಕೊಂಡು ಹೋದರು. ಈಕೆಯಂತಿಲ್ಲದಿದ್ದ ಈ ಈಕೆಯೇ ಆಗಿರಬಹುದಾಗಿದ್ದ ಆಕೆ, ಈ ಅಸಂಗತೆಯನ್ನು ಯಾವ ಕಾರಣಕ್ಕೂ ತಾರ್ಕಿಕ ನೆಲೆಯಲ್ಲಿ ತಂದುನಿಲ್ಲಿಸಲಾಗದ ಅಸಹಾಯಕಿ ಆಗಿದ್ದುದ್ದರಿಂದ, ಅವರೆಲ್ಲಾ ಓಡಿಸಿಕೊಂಡು ಬಂದಾಗಲೆಲ್ಲ ತಾನು ಓಡುತ್ತಿದ್ದಳು, ಕ್ಯಾಂಟೀನಿನವರೆಗೆ!//
 
 
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):