ನೆನಪಿನ ಚಿತ್ರಕಲಾ ಶಾಲೆ: ಭಾಗ ೧೯- ವಿಕ್ಷಿಪ್ತ ಆಯಾಮದೊಂದಿಗಿನ ಆಕಸ್ಮಿಕ ಸಂಪರ್ಕ

1

 

(೫೬)
ಸೋಕುಮಾರಿ ಉರುಫ್ ಕೃತಿ.ಕೆ, ೨೦೧೧: 
 
ಸುಮಾರು ದಿನಗಳಿಂದ ಇದೊಂದು ಚಟದಂತಾಗಿಬಿಟ್ಟಿದೆ, ಈ ಫೇಸ್‌ಬುಕ್ ಚಾಟಿಂಗ್. ಈ ಅನೇಖ, ಮಮಾ, ಬಿಡಾ ಮುಂತಾದವರು ಕೇಳುವ ಪ್ರಶ್ನೆಗಳಿಗೆಲ್ಲಾ ಉತ್ತರಿಸುವುದು. ಆದರೆ ಅಚ್ಚರಿಯ ವಿಷಯವೆಂದರೆ ಎದುರಿಗೆ ಸಿಕ್ಕಾಗ ವಯಸ್ಸಿಗೆ ತಕ್ಕ, ಒಮ್ಮೊಮ್ಮೆ ಅದನ್ನು ಮೀರಿದ ಪ್ರೌಢಿಮೆಯನ್ನು ತಮ್ಮ ಮದ್ಯವಯಸ್ಸಿನ ತೋರಿಕೆಗಾದರೂ ಮೆರೆವ ಈ ಹುಡುಗರು ಚಾಟ್ ಮಾಡುವಾಗ ಮಾತ್ರ ಅದೆಷ್ಟು ಬಾಲಿಶವಾದ ಪ್ರಶ್ನೆಗಳನ್ನು ಅಭಿಪ್ರಾಯಗಳನ್ನೂ ಹಂಚಿಕೊಳ್ಳುತ್ತಾರಲ್ಲ? ’ನಾನವನಲ್ಲ’ ಎಂದುಬಿಡುವಷ್ಟು ಉಡಾಫೆ ಇರುತ್ತದೆ ಅವರುಗಳ ಚಾಟ್ ಮಾತುಕತೆಗಳಲ್ಲಿ. ಸಮಸ್ಯೆ ಏನೆಂದರೆ ಈ ವ್ಯಕ್ತಿತ್ವಗಳ ಸೀಳು ಅವರುಗಳಿಗೆ ಬಂದದ್ದಾದರೂ ಹೇಗೆ? ಅಥವ ಮೆನುಪಾಸ್ ಎಂಬುವುದು ’ಮೆನ್ಸ್’ಗಳಿಗೂ ಅನ್ವಯವಾಗುವುದರಲ್ಲಿ ಅನುಮಾನವಿಲ್ಲ, ’ಮದ್ಯ’ ಮತ್ತು ’ಮಧ್ಯ’ವಯಸ್ಕರು ತಮ್ಮ ಟೀನೇಜ್ ವ್ಯಕ್ತಿತ್ವವನ್ನು ಪುನರಾವರ್ತಿಸುವ ಮಾನವ ನಡವಳಿಕೆಯಲ್ಲಿ ಅಚ್ಚರಿಪಡುವಂತಹುದ್ದೇನೂ ಇಲ್ಲ, ಆತ/ಆಕೆ ಮೂಲತಃ ’ಕೇವಲ ಒಂದು ಪ್ರಾಣಿಯಷ್ಟೇ’ ಎಂದು ಹೇಳಿಲ್ಲವೆ ಡೆಸ್ಮಂಡ್ ಮೋರಿಸ್?  
 
ಈ ಹುಡುಗರ ಚಾಟಿನಲ್ಲಿ ಕೇಳುವ-ಹೇಳುವ ಟೀನೇಜ್-ತೆರನಾದ ಪ್ರಶ್ನೆಗಳನ್ನು ಈ ಮಮಾ, ಅನೇಖ, ಬಿಡಾ ಅಂತಹ ಚುರುಕುಬುದ್ಧಿಯವರುಗಳು ಮಾತ್ರ ಕೇಳಬಹುದಾದ ಸಾಧ್ಯತೆ ಇದೆ. ಆದರೆ ಈ ಒನಾಮಿ ಕುಟ್ಟಿ ಅಡ್ಯಾರ್, ಶೃತಿ ಮೆಹ್ತರಂತಹ* ((*ಇವರಿಬ್ಬರೂ ಯಾರು ಎತ್ತ ಎಂದು ಇಂದಿಗೂ (ಆಸ್ ಪರ್ ಟುಡೆ ಅನ್ನುತ್ತೇವಲ್ಲ, ಆ ಅರ್ಥದಲ್ಲಿ, ನೋಡಿ:www.facebook.com£À°è Onami Kutty Adyar ªÀÄvÀÄÛ Shruthi Mehtaಪತ್ತೆಯಾಗಿಲ್ಲ. ಕರ್ನಾಟಕದ ದೃಶ್ಯಕಲೆಯಲ್ಲಿ ಚುರುಕಾಗಿರುವ, ಆಗಾಗ ಮೌನವಾಗುವ ’ಧ್ವನಿ’ಗಳಷ್ಟೇ ಇವರಿಬ್ಬರು. ಪ್ರತಿಯೊಬ್ಬರಿಗೂ, ಇವರು ಅವರಿರಬೇಕು ಎಂಬ ಅನುಮಾನ. ಅನುಮಾನ ಪಡುವವರಲ್ಲಿ ಸ್ವತಃ ಒನಾಮಿ ಮತ್ತು ಶೃತಿ ಕಾವ್ಯನಾಮ ಧರಿಸಿದ ಕಲಾವಿದರೂ, ವಿಮರ್ಶಕರೂ ಇದ್ದಾರೆ ಎಂಬುದೂ ಒಂದು ಅನುಮಾನವೇ. ಈ ಅನುಮಾನಗಳಲ್ಲೇ ಬಲಿಷ್ಠವಾದ ನಂಬಿಕೆ ಎಂದರೆ, ಕೇವಲ ಈ ಇಬ್ಬರೂ ತಲಾ ಕೇವಲ ಒಬ್ಬ ವ್ಯಕ್ತಿಯಲ್ಲ, ಇಬ್ಬರು ಮೂವರು ಗೆಳೆಯರು/ಗೆಳತಿಯರು ಸೇರಿ ಈ ಹೆಸರನ್ನಿಟ್ಟುಕೊಂಡು, ಕೆಲವು ದಿನಗಳ ಮಾತುಕತೆಗಳ ವ್ಯವಹಾರವನ್ನು ನಡೆಸಿದ ನಂತರ, ಆ ಹೆಸರುಗಳ ಒಡೆತನವನ್ನು (ಆಥರ್‌ಶಿಪ್) ಮತ್ತೊಬ್ಬರಿಗೆ ಫೇಸ್‌ಬುಕ್ಕಾಂತರಗೊಳಿಸುತ್ತಾರೆ (’ಹಸ್ತಾಂತರಗೊಳಿಸುತ್ತಾರೆ’ ಎಂಬಂತೆ) ಎಂಬ ನಂಬಿಕೆ. ಮುಖ್ಯವಾಗಿ ಸಮಕಾಲೀನ ಕಲೆಯ ಬಗ್ಗೆ ಮಾತ್ರ ಪ್ರತಿಕ್ರಿಯಿಸುವ ಈ ಇಬ್ಬರೂ ಕಂಪ್ಯೂಟರ್-ವರ್ಚುಯಲ್-ಸಿಮ್ಯುಲೇಷನ್-ಅಥವ ಡಿಜಿಟಲ್-ಪುತ್ರಿಯರು. ಆಸಕ್ತರು ಅವರ ಅಕೌಂಟಿನ ವಿವರಗಳನ್ನು, ಮಾತುಕತೆಗಳನ್ನು ಮೇಲ್ಕಾಣಿಸಲಾದ ವಿಳಾಸಗಳಲ್ಲಿ ನೋಡಬಹುದು)) ವ್ಯಕ್ತಿತ್ವಗಳು ಈ ಹುಡುಗರೂ ತಮ್ಮ ಮೇಲೆ ಆರೋಪಿಸಿಕೊಂಡಿದ್ದಾರೆಯೇ? ಅಥವ ಈ ಹುಡುಗರೇ ಆ ಹುಡುಗಿಯರೆ?
 
ಫೇಸ್‌ಬುಕ್ಕಿನ ಪರದೆಯಲ್ಲಿ ಹಿಂದೆ ಸರಿದು ನಿಂತು ಮಾಡುವ ಫೇಸ್‌ಬುಕ್ಕಿನ ವಾಚಾಳಿತನವೇಕೆ ಈ ಇಬ್ಬರಿಗೆ? ಒಮ್ಮೆಲೆ ಅವರುಗಳಿಗೆ ತಮಗನ್ನಿಸಿದ್ದನ್ನೂ ಹೇಳಿಬಿಡಬೇಕು, ಅದೇ ಕಾಲಕ್ಕೆ ತಮ್ಮ ಐಡೆಂಟಿಟಿ ಮಾತ್ರ ಹಾಗೇ ನಿಗೂಢವಾಗಿರಬೇಕು-ಅನ್ನಿಸಿರಬೇಕು. ನಾವೆಲ್ಲಾ, ಆಗೆಲ್ಲಾ ಕಲಾಶಾಲೆಗಳಲ್ಲಿ ನಗ್ನಚಿತ್ರಗಳನ್ನು ಬರೆಯುವಾಗ ಸಂಕೋಚದಿಂದ ಆ ಅಂಗವನ್ನೇ ಬರೆಯುತ್ತಿರಲಿಲ್ಲವಲ್ಲ! ನಂತರ ನೋಡಿದರೆ, ಬೋಲ್ಡ್ ಎನ್ನಿಸಿಕೊಂಡ ಹುಡುಗರ ಚಿತ್ರಗಳಿಂದಲೂ ಅವು ಮಾಯ! ಪಾಪ, ಆ ಚಿತ್ರಗಳು ಮೂಡಿಬಂದಾಕ್ಷಣ, ಆ ಚಿತ್ರಗಳಿಗೆ ತಮ್ಮದೇ ಆದ ಜೀವ ಮತ್ತು ಬದುಕು ಎಂಬುದೊಂದಿದ್ದರೆ, ತಮ್ಮ ಅಂಗವಿಕಲತೆಯ ಬಗ್ಗೆ ವ್ಯಾಕುಲರಾಗಿಬಿಡುತ್ತಿದ್ದರು. ಉಳಿದ ಬೋಲ್ಡ್ ಕಲಾಶಾಲೆಗಳಲ್ಲಿ (ಪರಿಷತ್ತಿನ ಸಮೀಪವಿದ್ದ ಬಾಯ್ಸ್ ಕಲಾಶಾಲೆಯ ವಿದ್ಯಾರ್ಥಿಗಳ ರಚನೆಗಳಂತೆ) ಹುಟ್ಟಿಬಂದ ನಗ್ನಚಿತ್ರಗಳಲ್ಲಿ ಆ ಆಂಗಗಳು ಬೇಕೆಂದೇ ಎರಡು ಪಟ್ಟು ಉದ್ದುದ್ದವಿರುತ್ತಿದ್ದವು, ಪ್ರಜಾವಾಣಿಯ ಇಲ್ಲಸ್ಟ್ರೇಟರ್ ಚಂದ್ರನಾಥ್ ಆಚಾರ್ಯರ ಚಿತ್ರಗಳ ಪ್ರಭಾವವಿರಬೇಕು. ಕನ್ನಡದ ನವ್ಯ ರಹಗಾರರ ದೈಹಿಕ-ವಾಂಛೆ-ಕೇಂದ್ರಿತವಾದ ಬರಹಕ್ಕೆ ಮೂರ್ತರೂಪ ಕೊಡುವ ಪ್ರಯತ್ನದಲ್ಲಿ ಚಂದ್ರನಾಥರ ಚಿತ್ರಗಳು ಅವತಾರವೆತ್ತಿದ್ದವು.
 
ಕಣ್ಣಿನ ನಿರೀಕ್ಷೆಯೇ ಬೇರೆ, ಬೇರೆಯವರ ಕಣ್ಣಿಗೆ ಆಹಾರವಾಗುವಾಗ ನಾವು ಸಿದ್ಧಪಡಿಸುವ ಪರಿಕರಗಳೇ ಬೇರೆ ಏಕಾಗುತ್ತದೆ? ಅನೇಖ ಒಮ್ಮೆ ಹೇಳಿದ್ದು ನೆನಪು, ಇಗಾನ್ ಶೀಲೆ ಎಂಬ ಕಲಾವಿದನ ಅದ್ಭುತ ರೇಖಾಚಿತ್ರಗಳ ಪುಸ್ತಕವನ್ನು ಬಾಯ್ಸ್ ಕಲಾಶಾಲೆಯ ಲೈಬ್ರರಿಯಿಂದ ಕಡತೆಗೆದುಕೊಳ್ಳಲು ಹೋದಾಗ, ಅಲ್ಲಿನ ಗ್ರಂಥಪಾಲಕಿ ಮೆಗಾಲಕುಮಿ ಅದನ್ನು ತಡೆದಿದ್ದರು, ’ಇಂತ ಪೋಲಿ ಚಿತ್ರಗಳ ಪುಸ್ತಕಗಳು ಯಾಕೆ, ಬೇರೆ ತೆಗೆದುಕೊಳ್ಳಿ’ ಎಂದು ’ಟೂರಿಸಂ ಇಂಡಿಯಾ’ದ ಪುಸ್ತಕ ನೀಡಿದ್ದರು ಎಂದು. ಮತ್ತೊಮ್ಮೆ ಪ್ರಶ್ನಾಮೂರ್ತಿಯು ಮಹಾನ್ ಕಲಾವಿದರ ಸರಣಿಯ ಪುಸ್ತಕವೊಂದನ್ನು (ಮಾನೆ ಎಂಬ ಕಲಾವಿದನ ’ಒಲಂಪಿಯ’ ಚಿತ್ರವಿರುವ ಪುಸ್ತಕ) ಪರೀಕ್ಷೆಗೆ ಅಧ್ಯಯನ ಮಾಡಲು ತನ್ನ ಕೋಣೆಯ ಟೇಬಲ್ಲಿನ ಮೇಲಿರಿಸಿ, ಸ್ನಾನಕ್ಕೆ ಹೋದಾಗ ಇದ್ದ ಚಿಕ್ಕಮ್ಮನ ಮುಖಭಾವವು ದೇಹಶುದ್ಧಿಯ ನಂತರ ನೋಡಿದಾಗ ಬದಲಾಗಿತ್ತಂತೆ. ಆಕೆ ಅಷ್ಟರಲ್ಲಿ ತನ್ನಕ್ಕ ಅಥವ ಪ್ರಶ್ನೆಯ ಅಮ್ಮನಿಗೆ ಆ ಪುಸ್ತಕದ ಆ ಚಿತ್ರ ತೋರಿಸಿ ಗುಸುಗುಸು ಮಾತನಾಡಿ, ವಾಪಸ್ ಟೇಬಲ್ ಮೇಲೆ ಅದನ್ನು ಇರಿಸಿಬಿಟ್ಟುದ್ದು ಆತನ ಗಮನಕ್ಕೆ ಬಂದಿತ್ತಂತೆ. ಅದೇ ಕೊನೆ, ಅಂದಿನಿಂದ ಪ್ರಶ್ನೆಯು ತನ್ನ ಸೀನಿಯರ್ ’ದಿಗುಮಾ’ನ (’ದೀರ್ಘ ಕಾಲ ಗುಮಾನಿಯುಳ್ಳವ’) ಮೇಲುಕೋಣೆಯ--ಹುಡುಗರೆಲ್ಲಾ ಸೇರುತ್ತಿದ್ದ ಕೋಣೆಯದು-ರೂಮಿನಲ್ಲಿ ಮಾತ್ರ ಕಲಾಇತಿಹಾಸ ಓದಿಕೊಳ್ಳುತ್ತಿದ್ದನಂತೆ!   
                                                              ***
ಮಂದಿ ತಮ್ಮ ಬಗ್ಗೆ ಇತರರು ಏನೆಂದು ಭಾವಿಸುತ್ತಾರೋ ಹಾಗೇ ಬದುಕಲು ಪ್ರಯತ್ನಿಸುವುದೇ ಇಂದಿನ ಶೈಲಿಯಾಗಿಬಿಟ್ಟಿದೆ, ಎಂದಿನಂತೆ, ಮುಂಚೆ ಇದ್ದಂತೆ ಮತ್ತು ಮುಂದೆಯೂ ಇರುವಂತೆ. ಇದಕ್ಕೊಂದು ಅಪವಾದವೆಂದು ಯಾರನ್ನೂ ಬೊಟ್ಟುಮಾಡಿ, ತೋರಿಸಿ ಅಂತಹವರನ್ನು ಅನವಶ್ಯಕವಾಗಿ ದೊಡ್ಡವನನ್ನಾಗಿ/ಳನ್ನಾಗಿ ತೋರಿಸುವ ಅಭಿಪ್ಸೆ ನನಗಿಲ್ಲ. ನನ್ನ ಪ್ರಕಾರ ಮನುಷ್ಯರೆಂದರೆ ಮೆಮೊರಿ ಹೆಚ್ಚಿಲ್ಲದ ಲ್ಯಾಪ್‌ಟಾಪಿನಂತೆ-ಎಷ್ಟು ಹೆಚ್ಚಿನ ಜೀಬಿ ಸ್ಮೃತಿಯನ್ನು  (ಮೆಮೊರಿಕಾರ್ಡ್) ಅದಕ್ಕೆ ಜೋಡಿಸುತ್ತೀರೋ ಅಷ್ಟೂ ಅದರ ಸಂಕೀರ್ಣ ಯೋಜನೆಗಳು ತೆರೆದುಕೊಳ್ಳುತ್ತವೆ. ಮೇಧಾವಿಗೂ ದಡ್ಡನಿಗೂ ಇರುವ ವ್ಯತ್ಯಾಸ ಬುದ್ಧಿವಂತಿಕೆಯದ್ದಲ್ಲ, ಸೋಂಬೇರಿತನದ್ದು ಅನ್ನಿಸುತ್ತದೆ. ಅಷ್ಟಾವಧಾನದ ನಿಜವಾದ ಸಾಮರ್ಥ್ಯ ಇರುವುದು ದೈನಂದಿನ ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳುವುದರಲ್ಲಿ. ಇದೇ ಅಷ್ಟಾವಧಾನ, ಒಳ್ಳೆಯತನ, ಜನಪ್ರಿಯತೆ-ಇವೆಲ್ಲವೂ ನೈಜಚಿತ್ರರಚನೆಯಂತೆ ಒಂದು ರೂಢಿಸಿಕೊಳ್ಳಬಹುದಾದ ’ಸ್ಕಿಲ್’ ಆಗಿಬಿಟ್ಟಿದೆಯಾ ಎಂಬ ಅನುಮಾನ ನನಗೆ. ಅಂತಹವಕ್ಕೆಲ್ಲಾ ತಾಣವಲ್ಲದ ಕಾಲವಿದು. ಒಳ್ಳೆಯ ಚಿತ್ರರಚಿಸುವವನು ಇಂದು ಕಲಾವಿದನಾಗಲಾರ, ಅದರ ಮೂಲಕ ಅಥವ ಅದಿಲ್ಲದೆಯೂ ಕಲಾಚಳುವಳಿಯೊಂದನ್ನು ಹುಟ್ಟಿಹಾಕುವಂತಹವನೇ ನಿಜವಾದ ಕಲಾವಿದ ಎಂದು ದಿನಗಳೆದಂತೆ ನನಗೆ ಹೆಚ್ಚುಹೆಚ್ಚು ಅನ್ನಿಸತೊಡಗಿದೆ. ಕೆನ್ ಕಲಾಶಾಲೆಯ ಆರ್.ಎಂ.ಹಡಪದ್‌ರಿಗಿಂತ ಜನಪ್ರಿಯ ಕಲಾವಿದರಿದ್ದಾರೆ, ಸಂಗ್ರಹಾಲಯಗಳನ್ನು ಸೇರಿಬಿಟ್ಟವರೂ ಇದ್ದಾರೆ. ಆದರೆ ಈ ಹಡಪದ್ ೧೯೩೭-೨೦೦೩) ಅಂತಹವರು ಸಾಕ್ರೆಟಿಸ್ ಇದ್ದಂತೆ--ನಿಮ್ಮ ದೃಶ್ಯತತ್ವಗಳ ನಂಬಿಕೆಯ ಅಡಿಪಾಯವನ್ನೇ ಅಲುಗಾಡಿಸುವುದಲ್ಲದೆ, ತಮ್ಮ ನಂಬಿಕೆಯನ್ನೂ ಪ್ರಶ್ನೆಗೊಡ್ಡಿಕೊಳ್ಳಲು ಹೆದರದ ವ್ಯಕ್ತಿತ್ವ ಅವರದ್ದು. ಪ್ರಜಾಪ್ರಭುತ್ವದೊಳಗಿನ ಅನಾರ್ಕಿ ಅವರು. ಹೆಸರು, ಹಣ, ಸ್ಥಿರತೆಗೆ ಆತುಬೀಳುವವರಿಗೆ ಹಡಪದರಂತೆ ಬಟಾಬಯಲಾಗುವ ಧೀಮಂತಿಕೆ ಇರಲಾರದು. ಮಮಾ, ಬಿಡಾ, ಅನೇಖ ಮುಂತಾದವರೊಂದಿಗಿನ ಚಾಟ್ ಮೆಸೇಜಿಗೂ ಈ ನನ್ನ ಸ್ಮೃತಿಗಳಿಗೂ ಏನೋ ಸಂಬಂಧವಿದೆ ಎಂಬ ವಿಷಯವನ್ನು ಶೋಧಿಸಬೇಕೆಂದು ನೋಟ್ ಮಾಡಿಕೊಂಡೆ.  
 
ಈ ೧೯೮೮ರ ಪತ್ರಗಳು ಎಂದು ಭಾವಿಸಿ ಬರೆಯಲಾಗುತ್ತಿರುವ ೨೦೧೧ರ ಮೆಸೇಜುಗಳ ಮುಖಾಂತರ ಹೊರಗೆಡವಲಾಗುತ್ತಿರುವ ಈ ಬರಹಗಾರರ ವ್ಯಕ್ತಿತ್ವಗಳ ಸಂಕೀರ್ಣತೆಯು ಅನಾವರಣಗೊಳ್ಳುವ ರೀತಿಯೇ ನನಗೆ ಅಪ್ಯಾಯಮಾನ.  ಇದಕ್ಕೊಂದು ಉದಾಹರಣೆ ನೋಡಿ: ಇತ್ತೀಚೆಗೆ ಮಮಾ ಹೇಳಿದ ಒಂದು ಸತ್ಯ ಘಟನೆ. ತನ್ನ ಗೆಳೆಯನಿಗಾದದ್ದು ಎಂದಾತ ಹೇಳಿಕೊಳ್ಳುವುದರಲ್ಲಿ ಇಂತಹದ್ದೆ ಸ್ವಯಂ-ವ್ಯಕ್ತಿತ್ವವನ್ನು ಅಡಗಿಸಿಟ್ಟುಕೊಳ್ಳುವ ಹುನ್ನಾರವಿದ್ದರೂ ಇರಬಹುದು. ಯಾವುದೋ ಉತ್ತರ-ಯುರೋಪಿಯನ್ ದೇಶದಲ್ಲಿ (ಆಸ್ಟ್ರಿಯ ಇರಬೇಕು) ಮಮಾ ಆರ್ಟಿಸ್ಟ್-ಇನ್-ರೆಸಿಡೆನ್ಸಿಗೆ ಹೋಗಿದ್ದನಂತೆ, ವರ್ಷಕ್ಕೆ ಎಂಟುತಿಂಗಳು ಆತ ಪರದೇಶಿಯಾಗೇ ಇರುತ್ತಾನಲ್ಲ ಇತ್ತೀಚಿನ ದಿನಗಳಲ್ಲಿ. ಅಲ್ಲಿ ಒಬ್ಬ ಮಹಾನ್ ಪೋಲಿ ಗೆಳೆಯ (ಮಮಾನಿಗಿಂತಲೂನ? ಎಂದು ನನಗೆ ನಾನೇ ಹೇಳಿಕೊಂಡಿದ್ದೆ, ಆತ ಆ ಗೆಳೆಯನನ್ನು ಹೀಗೆ ವರ್ಣಿಸುವಾಗ ಮತ್ತು ವರ್ಣಿಸುವ ಶೈಲಿಯಿಂದಲೇ). ಇಬ್ಬರೂ ಮತ್ತೊಂದಷ್ಟು ಜನರೊಟ್ಟಿಗೆ ಪಿಕ್‌ನಿಕ್ ಹೋಗಿದ್ದರಂತೆ. ಉಳಿದವರನ್ನು ಹಿಂದೆ ಒಂದೆಡೆ ನೆಲೆಸಲು ಅವಕಾಶ ನೀಡಿ, ಇವರಿಬ್ಬರೇ ಕಾಡಿನಲ್ಲಿ ಒಂದಷ್ಟು ದೂರ ನಡೆದುಹೋಗಿ, ಬೃಹತ್ ಕಲ್ಲಂಗಡಿಯೊಂದನ್ನು ಕುಯ್ದು ತಿನ್ನುವ ಸಮಯಕ್ಕೆ ಆ ಪೋಲಿ ಗೆಳೆಯನಿಗೆ ದೇಹಸಹಜವಾದ ವಾಂಛೆಯು ಉಂಟಾಗಿ, ಆ ಹಣ್ಣಿನಲ್ಲೇ ರಂದ್ರವೊಂದನ್ನು ಕೊರೆದು, ’ಹಣ್ಣು ಹೆಣ್ಣಾಗಿರಬಾರದಿತ್ತೆ’ ಎಂದು ಹಲುಬುತ್ತ ರಂದ್ರ ಕೊರೆವ ಗಂಡಸಿನ ಕಾರ್ಯ ಪೂರೈಸಿದ್ದನಂತೆ, ಮರೆಯಲ್ಲಿ. ಹಾಗೆ ಮಾಡುವಾಗ, ಈ ಕಲ್ಲಂಗಡಿಯೇ ನಮ್ಮ ಸಾಂಡ್ರಾ ಎಂದು ಉದ್ಘರಿಸಿದ್ದನಂತೆ. ಮಮಾ ಮರೆಯಲ್ಲೇ ಏನೂ ಅರ್ಥವಾಗದವನಂತೆ ಹೌದೌದು ಎಂದಿದ್ದನಂತೆ.
 
ಹಿಂದಿರುಗಿದ ಮೇಲೆ, ಆತ ಪರಿಚಿತೆ ಸಾಂಡ್ರಾಳಿಗೆ ಹೇಳಿದನಂತೆ, ಸಾಂಡ್ರಾ, ನಾನು ಮತ್ತು ಮಮಾ ಅಷ್ಟು ದೂರ ವಾಕ್ ಹೋಗಿದ್ದೆವು. ವಾಹ್ ಎಂತಹ ನೈಸರ್ಗಿಕ ಸೊಬಗು ಮತ್ತು ಜೊತೆಗೆ ರುಚಿಕರವಾದ ಕಲ್ಲಂಗಡಿ ಹಣ್ಣು. ಆ ಸೊಬಗಿನ ಅನುಭವವನ್ನು ಸವಿಯುವ ಸಮಯಕ್ಕೆ ಮೊದಲು ನಾವು ಆತ್ಮೀಯವಾಗಿ ನೆನಪಿಸಿಕೊಂಡದ್ದು ನಿನ್ನನ್ನೇ. ಕೇಳು ಬೇಕಾದರೆ ಮಮಾನನ್ನು ಎಂದನಂತೆ. ಮಮಾ ಸುಮ್ಮನೆ ತಲೆಯಾಡಿಸಿದನಂತೆ. ಹೊಗಳಿಕೆಯಿಂದ ಬಲೂನಿನಂತೆ ಊದಿಬಿಟ್ಟ ಸಾಂಡ್ರ ಹೇಳಿದ್ದು, ಸೋ ನೈಸ್ ಆಫ್ ಯು. ಅಂತಹ ಘಳಿಗೆಯಲ್ಲಿ ನನ್ನನ್ನು ನೆನಸಿಕೊಂಡಿದ್ದೀಯಲ್ಲ, ನನ್ನನ್ನೂ ಕರೆದೊಯ್ಯಬಹುದಿತ್ತಲ್ಲ! ಎಂದು ಆ ಗೆಳೆಯ ತನ್ನನ್ನು ನೆನಸಿಕೊಂಡದ್ದನ್ನು ಊರಿಗೆಲ್ಲಾ ಹೇಳಿಕೊಂದು ಬಂದಳಂತೆ. ಆ ಗೆಳೆಯನೊಂದಿಗೆ ಸಾತತ್ಯತೆ ಹೊಂದಿದ್ದವರು, ಆತನನ್ನು ಸರಿಯಾಗಿ ಅರ್ಥೈಸಿದ್ದವರೆಲ್ಲ ಮುಸಿಮುಸಿ ನಕ್ಕದ್ದು ಮಾತ್ರ ಸಾಂಡ್ರಾಳಿಗೆ ಒಗಟೇ ಆಗಿಬಿಟ್ಟಿತ್ತಂತೆ. ನಲವತ್ತು ದಾಟಿದವರ ಮಾತಿಗೂ ಅವರ ಮನಸ್ಸಿನ ವ್ಯಾಪಾರಕ್ಕೂ ನಡುವೆ ಏಕತ್ರ ಸಂಬಂಧವನ್ನು ಕಲ್ಪಿಸುವವರಿಗೆ ನಲವತ್ತರ ಪ್ರೌಢಿಮಿ ಬಂದಿಲ್ಲವೆಂದೇ ಅರ್ಥ, ನನ್ನ ಪ್ರಕಾರ. 
                                                     ***
ಇದಕ್ಕೆ ಹೋಲಿಸಿದರೆ ನನ್ನೊಂದಿಗೆ ಚಾಟ್ ಮಾಡುವ ೧೯೮೮ರ ಮಮಾನೇ-ಎದುರಿಗೆ ಸಿಗುವ ಕ್ಯಾಸನೋವ ಮಮಾನಂತಲ್ಲದೆ--ಮುಗ್ಧನೆನಿಸುತ್ತಾನೆ. ಆತನೇ ಆ ಗುಂಪಿಗೆಲ್ಲಾ ಚುರುಕು-ಫಟಿಂಗನೆಂದರೆ ಉಳಿದವರುಗಳು ಎಷ್ಟು ಗಾಂಧಿಗಳಿರಬಹುದೆಂಬುದನ್ನು ಊಹಿಸಿಕೊಳ್ಳಬೇಕಷ್ಟೇ. ಬೇಕೆಂದರೂ ಅವರುಗಳ ಚಾಟ್ ಮೆಸೇಜುಗಳಲ್ಲಿ ’ಬುದ್ಧಿವಂತಿಕೆಯಿಂದ ಹುಟ್ಟುಹಾಕಲಾಗಿರುವ ಮುಗ್ಧತೆ’ ನನಗೆ ಕಾಣುವುದಿಲ್ಲ. ಹತ್ತೊಂಬತ್ತು ವರ್ಷದಿಂದಲೂ ತೆವಲು ಹತ್ತಿಸಿಕೊಂಡಂತೆ ಕಲೆಯ ಬಗ್ಗೆ ಬರೆಯುತ್ತಿರುವಾಕೆ ನಾನು, ನನಗೆ ಅಷ್ಟೂ ಗೊತ್ತಾಗದೇ ಈ ಅಕ್ಷರಗಳ ಹಿಂದಿನ ಭಾವಗಳು!  ಈ ೨೦೧೧ ಮತ್ತು ೧೯೮೮ರ ನಡುವಣ ಈ ಸಂವಹನದ ಕಾಲದ ತಿರುಚುವಿಕೆಯನ್ನು ನಂಬಲೂ ಸಹ ನಾನು ಸಿದ್ಧಳಿಲ್ಲ. ಈ ಟೀನೇಜ್ ಗೆಳೆಯರ, ’೧೯೮೮ರ ಗುಟ್ಟು’ ಎಂಬ ವಿಷಯದ ಮರ್ಮವನ್ನು ಬೇಧಿಸುವುದೇ ನನ್ನ ಇತ್ತೀಚಿನ ಹೊಸ ಅಸೈನ್‌ಮೆಂಟ್--ನನಗೆ ನಾನೇ ಆರೋಪಿಸಿಕೊಂಡಂತಹದ್ದು--ಆಗಿಬಿಟ್ಟಿದೆ.
 
ಸೆಪ್ಟೆಂಬರ್ ೧೯೮೮ರಿಂದ ಅಕ್ಟೋಬರ್‌ವರೆಗೂ ಪ್ರತಿದಿನ ಮೆಸೇಜುಗಳು ಬರುತ್ತಿದ್ದವು ೧೯೮೮ರಿಂದ. ಮೆಸೇಜು ಬರುತ್ತಿದ್ದುದು ಯಾವುದೋ ಜಾಗದಿಂದಲ್ಲ, ಮತ್ಯಾವುದೋ ’ಕಾಲ’ದಿಂದ! ಭಿನ್ನ ಭೌಗೋಳಿಕ ಪ್ರದೇಶದಿಂದ ಬರುವ ಸಂದೇಶಗಳನ್ನು ಸ್ವೀಕರಿಸಿದಷ್ಟು ನಿರಾತಂಕಿತರಾಗಿ ಭಿನ್ನ ಕಾಲದಿಂದ ಬರುವ ಸಂದೇಶವನ್ನು ಸ್ವೀಕರಿಸುವ ಮನೋಧರ್ಮ ಮನುಕುಲಕ್ಕಿನ್ನೂ ದಕ್ಕಿಲ್ಲವೆಂಬುದೇ ಒಂದು ಅಚ್ಚರಿ. ಈ ಅರ್ಥದಲ್ಲಿ ಜಗತ್ತಿನ ಇತಿಹಾಸವು ಕಾಲದ್ದಲ್ಲ, ಕೇವಲ ಅವಕಾಶದ್ದು (ಸ್ಥಳದ್ದು) ಎನ್ನಿಸಿಬಿಡುತ್ತದೆ.
 
  ಒಳ್ಳೆ ಎಳೆಹುಡುಗರು ಕೇಳುವಂತಹ ಪ್ರಶ್ನೆಗಳು, ಸಂಕೋಚದ, ಕುತೂಹಲದ, ಲೇವಡಿ ಮಾಡುವ, ಹೆಣ್ಣಿನ ಬಗಿಗಿನ ಆಸಕ್ತಿಯ ಪ್ರಶ್ನೆಗಳೇ ಪ್ರಶ್ನೆಗಳು. ಇದನ್ನು ’ಕೊಶ್ನೋತ್ಸರ್’ ಎಂದಿದ್ದ ಬಾಕ್ಸ್‌ಫರ್ಡ್ ಒಡೆಯ ಪಾಜು ರಟೇಲ್, ಮೆಸೇಜೊಂದರಲ್ಲಿ. ’ನೀನು ಆಂಟಿಯಾಗಿಬಿಟ್ಟಿದ್ದೀಯ?’ ’ಇಂದಿನ ನಿಮ್ಮ ಒಳಉಡುಪು ಯಾವ ವರ್ಣದ್ದಿದೆ ಎಂದು ಕೇಳಿದರೆ ಅದನ್ನು ಒಂದು ತೆರನಾದ ವಾಯರಿಸಂ ಎಂದು ಭಾವಿಸಿ ಬಯ್ದು/ಬಯ್ದುಕೊಳ್ಳುತ್ತೀರೋ ಅಥವ ದೃಶ್ಯವಿಮರ್ಶಕಿಯಾದ್ದರಿಂದ ನಿಮಗೇ ನಿರ್ಧಿಷ್ಟವಾದ ಪ್ರಶ್ನೆ ಎಂದು ಮೆಚ್ಚುತ್ತೀರೋ?’ ’ನೀವಿನ್ನೂ ಮದುವೆಯೇ ಆಗಿಲ್ಲವೆಂದಿರಲ್ಲ, ಮಮಾನಂತೆ, ಬಿಡಾನಂತೆ, ಅನೇಖನಂತೆ, ಒಬ್ಬಂಟಿಯಾಗಿರುವುದೆಂದರೆ ಸಂಸಾರವೆಂಬ ಸಾಂಸ್ಥೀಕರಣದ ನಿರಾಕರಣೆಯೋ ಅಥವ ಅದರ ತಿರುವು ಮರವೋ?’--ಇತ್ಯಾದಿಯಾದ ಹೊಸ ಅರ್ಥದ ಪ್ರಶ್ನೆಗಳನ್ನು ಕೇಳಿ ದಣಿದರು ಅವರುಗಳೆಲ್ಲಾ. ಮಮಾ, ಬಿಡಾ, ಅನೇಖ ಈ ಮೂವರೂ ಇನ್ನೂ ಮದುವೆಯಾಗಿಲ್ಲವೆಂದು ಮೆಸೇಜೊಂದರಲ್ಲಿ ಅವರುಗಳಿಗೆ (ಯಾರವರು?) ಈ ಮುಂಚೆಯೆ ತಿಳಿಹೇಳಿದ್ದೆ. ನನಗೋ, ಉತ್ತರಿಸುವುದು ಒಂದರೆ ಕ್ಷಣದ ಕೆಲಸ. ನನ್ನ ಒಂದು ಮೆಸೇಜಿಗೆ ಪತ್ರರೂಪದಲ್ಲಿ ಬರೆದು, ಅಂಚೆಡಬ್ಬಕ್ಕೆ ಹಾಕುವುದು ಅವರುಗಳಿಗೆ ದಿನಗಟ್ಟಲೆ ವ್ಯವಹಾರ ಎಂದು ಬೇರೆ ಹೇಳುತ್ತಾರೆ. ನಾನದನ್ನು ನಂಬದಿದ್ದರೂ ಹಾಗೊಂದು ವೇಳೆ ಈ ’ಕಾಲದ ತಿರುವು ಮರುವು ಸ್ಥಳಾಂತರವೆಂಬುದು’ ಸಾಧ್ಯವಾಗಿದ್ದಿರಬಹುದೆ?’ ಎಂದೂ ನನ್ನ ಕಲ್ಪನಾ ಮನಸ್ಸಿಗೆ ಅನ್ನಿಸಿಬಿಟ್ಟಿತು. ಗಂಭೀರ ಚಿಂತನೆಯ ನಡುವಣ ಸುಧಾರಿಸಿಕೊಳ್ಳುವ, ಅಥವ ಸೀರಿಯಲ್‌ಗಳ ನಡುವಣ ಜಾಹಿರಾತಿನಂತೆ, ನನಗೆ ಏನನ್ನಾದರೂ ಕಲ್ಪಿಸಿಕೊಳ್ಳುವುದು ನಾನು ವಿಶ್ರಮಿಸುವ ಒಂದು ವಿಚಿತ್ರ ರೀತಿ. ಅವರನ್ನು ನಾನು, ನನ್ನನ್ನು ಅವರುಗಳು ಪರಸ್ಪರ ಮೆಚ್ಚಿಕೊಂಡಿದ್ದರೂ ಇಬ್ಬರಲ್ಲೂ ಒಂದು ಹೋಲಿಕೆಯ ಅಂಶವಿತ್ತು. ಅವರುಗಳು ಮತ್ತು ನಾನು-ಒಬ್ಬರು ಇರುವ ಕಾಲವನ್ನು ಮತ್ತೊಬ್ಬರು ಒಪ್ಪಲು ತಯಾರಿರಲಿಲ್ಲ, ನಿರಾಕರಿಸಲೂ ಸಿದ್ಧರಿರಲಿಲ್ಲ. ನಾವಿರುವ ಕಾಲವನ್ನು ಅನುಮಾನಿಸುವುದೆಂದರೆ ನಮ್ಮ ಅಸ್ತಿತ್ವವನ್ನೇ ಅಣಕಿಸಿದಂತಲ್ಲವೆ? ಈ ನಿಗೂಢದ ನಿಗೂಢತೆಯೇ ನನಗೆ ಅಪ್ಯಾಯಮಾನವಾಗತೊಡಗಿದ್ದು. 
                                                                   ***
ಈ ಹುಡುಗರೊಂದಿಗೆ ಚಾಟ್ ಮಾಡುತ್ತ, ಮಾಡುತ್ತ ಒಂದು ವಿಷಯವನ್ನು ಹೇಳಲು ಮರೆತೆ. ಅವರೊಂದಿಗೆ ಚಾಟ್ ಮಾಡುತ್ತ, ಬೇರೊಂದಷ್ಟು ವೆಬ್ ಹಾಳೆಗಳನ್ನು ಬ್ರೌಸ್ ಮಾಡುವಾಗ ಸಂಪದ.ನೆಟ್‌ಅನ್ನೂ ಎಂದಿನಂತೆ ಸ್ಕ್ರಾಲ್ ಮಾಡುತ್ತಿದ್ದೆ. ಲಂಡನ್ ಪ್ರವಾಸ ಎಂಬ ಸರಣಿ ಬರವಣಿಗೆಯು ಕಣ್ಣಿಗೆ ಬಿತ್ತು. ಕಲಾವಿದರ ಮತ್ತು ಕಲೆಯ ಬಗ್ಗೆ ಓದಬಲ್ಲಂತೆ ಇದೆ ಅನ್ನಿಸಿದ್ದರಿಂದ, ಅಥವ ಕಲಾವಲಯದವನೊಬ್ಬ ಬರೆದದ್ದು ಅದು ಅನ್ನಿಸಿದ್ದರಿಂದ-ಇಲ್ಲಿಯವರೆಗೂ ಚಿತ್ರಕಲೆಯ ಬಗ್ಗೆ ಕನ್ನಡದಲ್ಲಿ ಬಂದಿರುವ ಗಂಭೀರ ಲೇಖನಗಳು ನಿದ್ರೆ ಮಾಡುಸುವಂತಲ್ಲದೆ, ಈ ಪ್ರವಾಸಕಥನವು ಕೇವಲ ತೂಕಡಿಕೆ ಬರಿಸುತ್ತದಾದ್ದರಿಂದ--ಅದನ್ನು ಸುಮ್ಮನೆ ಲಿಂಕ್ ಮಾಡಿ ಫೇಸ್‌ಬುಕ್ಕಿನ ಮೂಲಕ ಇನ್ನೂ ೧೯೮೮ರಲ್ಲೆ ಉಳಿದಿದ್ದೇವೆ ಎಂದು ಭಾವಿಸುವ ಆ ತುಡುಗು ಹುಡುಗರಿಗೆ ಕಳಿಸಿದ್ದೆ. ಎರಡನೇ ಕಂತನ್ನೂ ಕಳಿಸಿದೆ. ಅವರುಗಳಿಂದ ಏನೂ ಕಲಾತ್ಮಕವಾದ ಪ್ರತಿಕ್ರಿಯೆ ಬರಲಿಲ್ಲ. ಮೂರನೆಯದನ್ನೂ ಈಗ ಕಳಿಸುತ್ತಿದ್ದೇನೆ. ಬಹುಶಃ ಈಗಲಾದರೂ ಅನೇಖನಿಂದಾದರೂ (ಆಗ ಆತ ವಿಕ್ಷಿಪ್ತ ಎನ್ನಿಸಿತ್ತು, ಬಾಯ್ಸ್ ಕಲಾಶಾಲೆಯ ’ವಿಕ್ಷಿಪತ’ ಮತ್ತು ಪರಿಷತ್ತಿನ ’ನಲ್ಲಸಿವ’ ಎಂಬಿಬ್ಬರು ಸೀನಿಯರ್‌ಗಳು ಆತನಿಗೆ ಗುರುಗಳಾಗಿದ್ದರಾದ್ದರಿಂದ) ಪ್ರತಿಕ್ರಿಯೆ ಬಂದೀತು. ಬೌದ್ಧಿಕ ಜಗತ್ತಿನ ಆಳದಲ್ಲಿ ಬದುಕದವರೊಂದಿಗೆ ನನಗೆ ಮಾತುಕತೆಯಾಡಲು ಬಲು ಕಷ್ಟ. 
 
ಈ ಇಡಿಯ ’ಪತ್ರೋತ್ತರ’ವೆಂದು ಅವರುಗಳು ಭಾವಿಸುವ ಫೇಸ್‌ಬುಕ್ ಚಾಟ್ ನನಗೆ ಒಂದು ತಾತ್ವಿಕ, ಬೌದ್ಧಿಕ ಜಿಜ್ಞಾಸೆಯ ಸವಾಲಾದ್ದರಿಂದಲೇ ಅವರುಗಳು ಕೇಳುವ ಸೆಕ್ಸಿಸ್ಟ್ ಪ್ರಶ್ನೆಗಳಿಗೆಲ್ಲಾ ತಾಳ್ಮೆಯಿಂದ ಉತ್ತರಿಸಿ, ಪ್ರತಿಕ್ರಿಯಿಸುವುದು ನನಗೆ ಇಷ್ಟವೇ. ಇಲ್ಲಿ ಒಂದು ವಿಷಯವನ್ನು ಸ್ಪಷ್ಟಪಡಿಸಿಬಿಡುತ್ತೇನೆ. ಹುಡುಗರು ಪೋಲಿ ಡೈಲಾಗುಗಳನ್ನು ಹೊಡೆಯುವುದನ್ನು, ಪೋಲಿ ಜೋಕ್‌ಗಳನ್ನು ಹೇಳುವುದನ್ನು ಅಪ್ರಜ್ಞವಾಗಿಯಾದರೂ ಹೆಂಗಸರನ್ನು ಸಂಕೋಚಕ್ಕೊಳಪಡಿಸುವ, ಎಂಬರಾಸ್ ಮಾಡುವ ಒಂದು ಸಾಧನವನ್ನಾಗಿಸಿಕೊಂಡಿರುತ್ತಾರೆ. ನಾನು ೧೯೮೮ರಲ್ಲಿ ಮಹಾನ್ ಸಂಕೋಚದವಳಾಗಿದ್ದೆ ಎಂಬುದೇನೋ ಸರಿ. ಆ ಆಗಿನ ನಾನೇ ಈಗಲೂ ಅಸ್ತಿತ್ವದಲ್ಲಿರುವುದು ಎಂದು ೧೯೮೮ರ ಆ ಚಾಟ್-ಗೆಳೆಯರು ಭಾವಿಸಿದಂತೆ ಚಾಟ್ ಮಾತುಕತೆಯಾಡತೊಡಗಿದ್ದರು, ಮೊದಲಿಗೆ. ಈ ಮತ್ತು ಇಂತಹ ಲಿಂಗನಿರ್ದಿಷ್ಟ ಸಂಕೋಚಗಳನ್ನು ಪ್ರತಿರೋಧಿಸುವ ಅನೇಕ ಉಪಾಯಗಳನ್ನು ಈ ಎರಡು ದಶಕಗಳಲ್ಲಿ ಸಶಕ್ತವಾಗಿಯೇ ರೂಢಿಸಿಕೊಂಡಿದ್ದೇನೆ. ಒಮ್ಮೊಮ್ಮೆ ಹೆಣ್ಣೆಂಬ ದೃಷ್ಟಿಕೋನದಿಂದಲೇ ಮರ್ಯಾದೆಯ ಮಿತಿಮೀರುವ ಮಾತುಗಳನ್ನಾಡುವ ಗಂಡಸರ ಆಟ ನನ್ನಲ್ಲಿ ನಡೆಯಲಾರದಷ್ಟೇ ಅಲ್ಲ, ಅಂತಹವರು ಇನ್ನು ಮುಂದೆ ನನ್ನ ಕಣ್ತಪ್ಪಿಸಿ ಓಡಾಡುವಷ್ಟು ಗಡುಸಾಗಿ ಪ್ರತ್ಯುತ್ತರಗಳನ್ನು ನಾನು ನೀಡಿದ್ದಿದೆ. ಸ್ವಯಂ-ಸೆನ್ಸಾರ್ ಪ್ರಜ್ಞೆಯಿಂದಾಗಿ ನಾನು ಹುಡುಗರೇ ಸಂಕೋಚಿಸುವಂತಹುದ್ದನ್ನು ಏನೇನೆಲ್ಲಾ ಹೇಳಿದ್ದೇನೆ ಎಂಬುದನ್ನು ಹೇಳಲಾರ. ಹಾಗೊಂದು ವೇಳೆ ನಾನು ನಿಮಗೆ ಹೇಳಿ, ನೀವು ಇತರರಿಗೆ ತಿಳಿಸಿ, ಅದ್ಯಾರೋ ಸಾಹಿತ್ಯ ವಿಮರ್ಶಕನಿಗೆ/ಳಿಗೆ ಅದು ತಲುಪಿ, ಆತ/ಆಕೆ ಕ್ಲೇಷವನ್ನೇ ಮೈವೆತ್ತ ಮೂರ್ತಿಯೋ, ಪ್ರತಿಭಾವಂತ ಕುವರಿಯೋ ಆಗಿದ್ದ ಪಕ್ಷದಲ್ಲಿ, ಅವರುಗಳು ಈ ನನ್ನ ಬೀಡುಬೀಸಾದ ವಾಚಾಳಿತನವನ್ನು ಬಳಸಿ(ಕೊಂಡು) ಸಡನ್-ಸ್ತ್ರೀವಾದವೊಂದನ್ನು ಹುಟ್ಟುಹಾಕಿ, ತನ್ಮೂಲಕ ಉಂಟುಮಾಡಬಹುದಾದ ಸಾಂಸ್ಕೃತಿಕ ಗೊಂದಲಗಳನ್ನು ನಾನಂತೂ ಕ್ಷಮಿಸಲಾರೆ.
 
ಅವರೊಂದಿಗಿನ ಮಾತುಕತೆಯಲ್ಲಿ ನನಗುಂಟಾದ ಲಾಭವೆಂದರೆ, ಅವಕಾಶದ (ಸ್ಪೇಸ್) ದೃಷ್ಟಿಯಿಂದ ಮಾತ್ರ ದೃಶ್ಯಭಾಷೆಯ ಸಂವಾದಕ್ಕೆ ತೊಡಗಿರುವ ಕರ್ನಾಟಕದ ಕಲಾವಲಯಕ್ಕಿಂತ ಭಿನ್ನ ಇವರ ಮಾತುಗಳು ಎಂಬ ಅರಿವು. ಅವಕಾಶದೊಂದಿಗೆ ಕಾಲವನ್ನೂ ದೃಶ್ಯಗ್ರಹಿಕೆಯ ಆಕಸ್ಮಿಕವಾಗಿಯಾದರೂ ಪರಿಕರವನ್ನಾಗಿಸಿರುವ ಇವರ ದೃಷ್ಟಿಕೋನವೇ ನನಗೆ ಇಷ್ಟವಾಗಿರುವುದು. ಕಾಲದೊಂದಿಗೆ ಕಣ್ಣು ಮಾಸುವ, ಮಾಗುವ ಕಾಲವಿದು!
                                                               ***
ಈ ಮಾತುಕತೆಯ ಪ್ರಭಾವದಿಂದ ನಾನು ಕೆಲವೊಂದು ಪ್ರಮೇಯಗಳನ್ನು ಸೃಷ್ಟಿಸಿಕೊಂಡಿರುವೆ: ಆ ಹುಡುಗರು ೧೯೮೮ರಲ್ಲೇ ಉಳಿದಿದ್ದಾದರೆ ಈಗಲೂ ಇರುವ ಮಮಾ, ಬಿಡಾ, ಅನೇಖ ಮುಂತಾದವರು ಯಾರು? ಈಗಿರುವವರು ಮನುಷ್ಯಕುಲದ ತರ್ಕದಂತೆ ನಿಜವಾದವರಾದರೆ ಈಗಲೂ ಅಲ್ಲಿರುವ ಆ ಅವರು ಯಾರು? ಸಹಜ ಬುದ್ಧಿಗೆ ಎಟುಕುವ ಸತ್ಯವಿದು: ಒಬ್ಬನೇ ವ್ಯಕ್ತಿ ಒಂದೇ ಕಾಲದಲ್ಲಿ ಎರಡು ಕಡೆಗಳಲ್ಲಿ ಇರಲಾರ. ಅದೇ ನದಿಗೆ ಎರಡು ಬಾರಿ ಕಾಲಿಡಲಾರೆ ಎಂದು ಸಾಕ್ರೆಟಿಸ್ ಹೇಳಿಲ್ಲವೆ? ೧೯೮೮ಕ್ಕೂ ೨೦೧೧ಕ್ಕೂ ನಡುವೆ ಮನುಷ್ಯ ಪ್ರಜ್ಞೆಗೆ ಒಂದು ನಿರ್ದಿಷ್ಟ ಸ್ಥಿತ್ಯಂತರವಾಗಿದೆ. ಅದೇನೆಂದರೆ ವಸ್ತು ರೂಪಾಂತರವಾಗುತ್ತದೆಯೇ ಹೊರತು ನಾಶವಾಗುವುದಿಲ್ಲ. ಇದು ವಿಶ್ವ ನಿಯಮ. ’ಇಲ್ಲಿಯವರೆಗಿನ ವಿಶ್ವ ನಿಯಮ’ ಎಂದು ನಾನದನ್ನು ತಿದ್ದಲಿಚ್ಛಿಸುತ್ತೇನೆ. ಇದು ಆಗಿನ, ಸುಮಾರು ೧೯೮೦ರ ದಶಕದ ಮಾತು. 
 
ಆಗ ಸ್ಟೀಫಲ್ ಹಾಕಿನ್ಸ್ ಎಂಬ ಖಗೋಳ ತತ್ವಶಾಸ್ತ್ರಜ್ಞನ ವಾದವೇನಾಗಿತ್ತೆಂದರೆ ಕಪ್ಪು ಕುಳಿಗಳು (ಬ್ಲಾಕ್ ಹೋಲ್ಸ್) ಮಾತ್ರ ಇದಕ್ಕೆ ಅಪವಾದ. ಗುರುತ್ವ ತೀವ್ರವಾಗಿರುವ ಅದರೊಳಕ್ಕೆ ಏನನ್ನಾದರೂ ಎಸೆದುಬಿಟ್ಟರೆ, ಆಗ ಅದರ ದ್ರವ್ಯನಾಶವಾಗುತ್ತದೆಯೇ ಹೊರತು ದ್ರವ್ಯ ರೂಪಾಂತರವಾಗುವುದಿಲ್ಲ ಎಂಬರ್ಥದ ಮಾತನಾಡಿದ್ದ. ಆಗ ಫ್ರೆಂಚ್ ಪ್ರಜೆಯೊಬ್ಬ ಅದನ್ನು ತಪ್ಪೆಂದು ಎರಡು ದಶಕಗಳ ಕಾಲ ವಾದಿಸಿ, ಸ್ವತಃ ಹಾಕಿನ್ಸ್ ತನ್ನ ತಪ್ಪನ್ನು ೨೦೦೪ರ ಸುಮಾರಿಗೆ ತಿದ್ದಿಕೊಳ್ಳುವಂತೆ ಮಾಡಿದ್ದ ಎಂದು ಎಲ್ಲೋ ಓದಿದ ನೆನಪು. ಮೂರು ಆಯಾಮದ ನಮ್ಮ ಜಗತ್ತಿನ ಎಲ್ಲರೂ, ಎಲ್ಲ ಆಗುಹೋಗುಗಳೂ ವಿಶ್ವದ ಅಂಚಿನಲ್ಲಿ ಎರಡು ಆಯಾಮಗಳಲ್ಲಿ ದಾಖಲಾಗುತ್ತಾ ಹೋಗುತ್ತದಂತೆ. ಒಳ್ಳೆ ರೆಕಾರ್ಡಿಂಗ್ ಸಿಸ್ಟಮ್. 
 
ಇದನ್ನೂ ಉತ್ಪ್ರೇಕ್ಷಿಸಿ ಹೇಳುವುದಾದರೆ (ನನ್ನ ಕಲಾಇತಿಹಾಸದ ದೃಷ್ಟಿಕೋನದಿಂದ ಉಂಟಾದ ಒಳನೋಟವೆಂಬ ಎಡವಟ್ಟು ಇದಾಗಿರಬಹುದು) ಮುಂದೊಂದು ದಿನ ಈ ’ವಿಶ್ವದ (ಯೂನಿವರ್ಸ್) ಅಂಚು’ ಎಂಬ ವೈರುಧ್ಯ (ಪ್ಯಾರಡಾಕ್ಸ್)ವನ್ನು ಮನುಷ್ಯ ಮುಟ್ಟಬಹುದಾದಲ್ಲಿ, ಅಲ್ಲಿ ನಾನು ಎರಡು ಆಯಾಮದ ಕಾಮಿಕ್ ಸ್ಟ್ರಿಪ್ಪಿನಂತೆ ಅಸ್ತಿತ್ವ ಹೊಂದಿದ್ದರೂ ಸರಿ, ಇನ್ನೂ ಈಗಲೂ ನಡೆಯುತ್ತಿರುವ ಕುಟುಂಬ ವ್ಯವಸ್ಥೆ ಹುಟ್ಟುವ ಮುನ್ನದ ಆದಿಮಾನವನ ಮೃಗೀಯ ಮಾನವತಾವಾದವನ್ನು ಗಮನಿಸಲಿಚ್ಛಿಸುತ್ತೇನೆ. ಈಗ ಚಾಲ್ತಿಯಲ್ಲಿರುವ ದೇವಕೋಟಿಗಳೆಲ್ಲ ಹುಟ್ಟುವ ಮುನ್ನವೇ, ಸ್ವತಃ ದೇವರುಗಳೆಂದು ಭಾವಿಸಿರುವ ಇಜಿಪ್ಶಿಯನ್ ಫೆರೋಗಳಿಗೆ ಅವರುಗಳ ಪಕ್ಕದಲ್ಲೇ ಇರಬಹುದಾದ ಮೂರ್ನಾಲ್ಕು ಸಾವಿರ ವರ್ಷಗಳ ನಂತರದ ಅವರದ್ದೇ ಶೇಖರಿಸಿಡಲಾದ ಸಂಗ್ರಹಾಲದ ದೇಹಗಳ ಎರಡು ಆಯಾಮದ ’ಮಮ್ಮಿ’ಫೈಡ್ ದೇಹಗಳನ್ನು ತೋರಿಸಲಿಚ್ಚಿಸುತ್ತೇನೆ. ಇಂದಿನ ಜಗತ್ತಿನ ಬೌದ್ಧಿಕ, ತಾತ್ವಿಕ ಹಾಗೂ ದೈನಂದಿನ ಶೈಲಿಯನ್ನು ಹೆಚ್ಚೂಕಡಿಮೆ ನಿರ್ಧರಿಸಿದ ಆ ನೂರೈವತ್ತು ವರ್ಷಗಳ ನಡುವೆ ಆಗಿಹೋದ ಗ್ರೀಕರ ಸಾಕ್ರೆಟಿಸ್-ಪ್ಲೇಟೋ-ಅರಿಸ್ಟಾಟಲ್ಲರಿಗೆ ನಾನು ತಿಳಿಯಬಯಸುವುದೇನೆಂದರೆ, ಅವರುಗಳು ಕಾಲವಾದ ಕೇವಲ ನಾಲ್ಕಾರು ಶತಮಾನಗಳ ನಂತರ ರೋಮನ್ನರು ಮನುಷ್ಯರಿಗೂ ಮೃಗಗಳಿಗೂ ವ್ಯತ್ಯಾಸವನ್ನು ಕಲೋಸಿಯಮ್‌ಗಳಲ್ಲಿ ಅಳಿಸಿಹಾಕುವುದನ್ನು ತೋರಿಸಲಿಚ್ಛಿಸುತ್ತೇನೆ. ಒಟ್ಟಾರೆ ಕಾರಂತರ ಮೂಕಜ್ಜಿಯ ರೋಲ್ ಮಾಡಲಿಚ್ಛಿಸುತ್ತೇನೆ-ಎಂದೆಲ್ಲಾ ಭಾವುಕಳಾಗಿ ಚಿಂತಿಸತೊಡಗಿದೆ. 
                                                                   ***
ಸಾಧಾರಣವಾಗಿ ನಾನು ಚಿಂತಿಸುವುದೇ ಹೀಗೆ-ಕೆಲವರಿಗೆ ಲಂಗುಲಗಾಮಿಲ್ಲದವಳಂತೆ, ಕೆಲವರಿಗೆ ಚಿಂತಿಸುವ ಚೌಕಟ್ಟನ್ನೇ ಹಿಗ್ಗಿಸಿದವಳಂತೆ, ಮತ್ತೂ ಕೆಲವರಿಗೆ ಶಿಷ್ಠ-ಪರಿಶಿಷ್ಟ-ಜನಪ್ರಿಯಗಳ ನಡುವಿನ ಚಿಂತನಾ ವ್ಯತ್ಯಾಸಗಳನ್ನು ಅಳಿಸಿಹಾಕಿದವಳಂತೆ ಕಂಡುಬಂದಿದೆ ನನ್ನ ಎರಡು ದಶಕಗಳ ಬರವಣಿಗೆ. ಆದರೆ ನಿಜವಾದ ಪ್ರತಿಭೆ ಎಂಬುದರ ಗುಟ್ಟು ಹೇಳಿಬಿಡುತ್ತೇನೆ. ಪರಿಶ್ರಮದ ನಿರಂತರತೆಯೇ ಪ್ರತಿಭೆ!  ೮೦ರ ದಶಕದ ಸ್ಟೀಫನ್ ಹಾಕಿನ್ಸ್‌ಗೂ ೨೦೧೧ರ ಹಾಕಿನ್ಸಿಗೂ ನಡುವಣ ವಿಶ್ವದ ಪರಿಕಲ್ಪನೆಯಲ್ಲಿ ಈ ನನ್ನ ಫೇಸ್‌ಬುಕ್ ಚಾಟಿನ ಗುಟ್ಟು ಅಡಗಿರಬಹುದು! ವಿಶ್ವವೆಂಬುದು (ಯೂನಿವರ್ಸ್) ಇಂದು ಬಹುವಿಶ್ವವಾಗಿದೆ (ಮಲ್ಟಿವರ್ಸ್). 
 
ಒಂದು ’ಅನಂತ ವಿಶ್ವದ ಅಂಚು’ ಎಂಬ ವೈರುಧ್ಯಮಯ ಕಲ್ಪನೆಗೆ ದೊರಕಿರುವ ಉತ್ತರವೂ ಇಂದು ಹಳತಾಗಿದೆ. ಅದಕ್ಕೊಂದು ತಾತ್ವಿಕ ಸಮರ್ಥನೆಯೂ ಅಷ್ಟೆ ಹಳೆಯದ್ದು, ಇಮ್ಯಾನ್ಯುಯಲ್ ಕಾಂಟ್ ಎಂಬಾತ ಹಾಕಿನ್ಸ್‌ನಿಗಿಂತಲೂ ಸಾಕಷ್ಟು ಮುಂಚೆಯೆ ನೀಡಿದ್ದಂತಹದ್ದು. ಖಗೋಳದ ಅಗ್ನಿಗೆ ತತ್ವಶಾಸ್ತ್ರದ ಜಲಾವೃಷ್ಟಿ. ನಮ್ಮ ವಿಶ್ವವು ಪಂಚೇಂದ್ರೀಯ ಗ್ರಹಿಕೆಯ ಮೂಲಕ ಮಾತ್ರ ಮನುಷ್ಯಮಾತ್ರರಾದವರಿಗೆ ದಕ್ಕುವುದರಿಂದ, ಇಂದ್ರಿಯದಾಚೆಗಿನ ಅನುಭವಗಳನ್ನು ನಾವುಗಳು ಸ್ವಲ್ಪ ಮಟ್ಟಿಗೆ ತಾಂತ್ರಿಕ ಸಲಕರಣೆಗಳಿಂದ ಉದ್ದೀಪಿಸಿ, ವಿಶ್ವದ ಸ್ವಲ್ಪ ಹೆಚ್ಚಿನ ಅನುಭವಗಳನ್ನು ಪಡೆಯಬಹುದಾದರೂ, ಎಲ್ಲಿಯವರೆಗೂ ಇಂದ್ರೀಯಗಳಿರುತ್ತವೋ ಅಲ್ಲಿಯವರೆಗೂ ’ವಿಶ್ವದ ಅನಂತತೆಯ ಪ್ಯಾರಡಾಕ್ಸ್’ ನಮ್ಮನ್ನು ಕಾಡದೆ ಬಿಡುವುದಿಲ್ಲ. ಉದಾಹರಣೆಗೆ ನಮ್ಮ ಕಣ್ಣಿಗೆ ಕಾಣುವ ಕಾಮನಬಿಲ್ಲಿನಲ್ಲಿ ಅಡಗಿಕೊಂಡಿರುವ, ಕಾಣದ ಅಲ್ಟ್ರಾವಯಲೆಟ್ ವರ್ಣವು ಅಸ್ತಿತ್ವದಲ್ಲಿದೆ, ಬರಿಯ ಕಣ್ಣಿಗೆ ಮಾತ್ರ ಗೋಚರಿಸದೆ ಒಂದು ವಿಧವಾದ ಕನ್ನಡಕದ ಮೂಲಕ ಮಾತ್ರ ಅದು ಗೋಚರವಾಗುತ್ತದೆ. ದೇವರೂ ಹಾಗೆಯೇ ಇರಬಹುದು. ಆದ್ದರಿಂದ ವಿಜ್ಞಾನಿಗಳಿಗೆ ಅಲ್ಟ್ರಾವಯಲೆಟ್ ವರ್ಣವೇ ದೇವರು! 
 
ಕೇವಲ ಪಂಚೇಂದ್ರೀಯಗಳ ಮೂಲಕ ಮಾತ್ರ ವಿಶ್ವವನ್ನು ಗ್ರಹಿಸುವ ಓದುಗರಿಗೆ ಜಗತ್ತು-ಇದ್ದಂತೆ-ಇಂದ್ರೀಯಾತೀತವಾಗಿ ಗ್ರಹಿಸಲು ಎಂದಿಗೂ ಸಾಧ್ಯವಿಲ್ಲವೆಂದು ಪಂಚೇಂದ್ರೀಯಗಳಿರುವ ಕಲಾ.ಕೆ ಎಂಬ ನಾನು ಹೇಳುವುದನ್ನು, ಇಂದ್ರಿಯಗಳನ್ನು ಮೈಕೈಯೆಲ್ಲಾ ಮೆತ್ತಿಕೊಂಡಿರುವುದರಿಂದ ಸಧ್ಯಕ್ಕೆ ನಂಬುವ ಅವಶ್ಯಕತೆ ಇಲ್ಲ. ಲೋಟದೊಳಗಿನ ಇರುವೆಗೆ ಹೊರಗಿನಿಂದ ಲೋಟವು ಹೇಗೆ ಕಾಣುತ್ತದೆಂಬುದನ್ನು ಕಲ್ಪಿಸಿಕೊಳ್ಳಲಿರುವ ಕಷ್ಟವೇ ನಮಗೆ ವಿಶ್ವದ ಅನಂತತೆಯ ಅಂಚು ಮತ್ತು ಬಹು-ವಿಶ್ವಗಳ ಕಲ್ಪನೆಯಲ್ಲಿರುವ ಕಷ್ಟ. ಇಡಿಯ ವಿಶ್ವವನ್ನು ಇಂದ್ರಿಯಾತೀತರಾಗಿ ಒಂದೊಮ್ಮೆ (ಮುಂದೊಮ್ಮೆ ಎನ್ನುವಂತಿಲ್ಲವಲ್ಲ) ಭವಿಷ್ಯದಲ್ಲೋ ಭೂತದಲ್ಲೋ (ನೆನಪಿಡಿ: ನಮ್ಮ ಭೂತ, ವರ್ತಮಾನ ಮತ್ತು ಭವಿಷ್ಯತ್‌ಗಳೆಲ್ಲವೂ ಎರಡು ಆಯಾಮದ ದಾಖಲೆಯಾಗಿ ವಿಶ್ವದ ಅಂಚಿನಲ್ಲಿ ನಿರಂತರವಾಗಿ ಒಂದೇ ಕಾಲದಲ್ಲಿ ಅಥವ ಕಾಲಾತೀತವಾಗಿ ರೆಕಾರ್ಡ್ ಆಗಿರು(ಗುತ್ತಿರು)ವುದನ್ನ!) ಸಮಗ್ರವಾಗಿ ಮನುಷ್ಯನಿಗೆ ಗ್ರಹಿಸಲು ಸಾಧ್ಯವಾಗಿಬಿಡುತ್ತದೆಂದುಕೊಳ್ಳಿ. ಆಗ ಇತರೆ ಆಯಾಮಗಳಿರುವ ವಿಶ್ವಗಳನ್ನು ಗ್ರಹಿಸುವ ಕ್ರಮ ಯಾವುದು? ಆಗ ಮಾನವನ ಪಂಚೇಂದ್ರೀಯಗಳ ಗತಿ ಏನಾಗಿರುತ್ತದೆ ಮತ್ತು ಆಕಾರಗಳು ಹೇಗಾಗಿರುತ್ತವೆ?
 
ಈ ನಿಟ್ಟಿನಿಂದ ಖಗೋಳಶಾಸ್ತ್ರಕ್ಕೂ, ಫ್ಯಾಂಟಸಿಗೂ, ನಿಜಕ್ಕೂ ನಡುವೆ ವ್ಯತ್ಯಾಸ ಹೆಚ್ಚು ಇರಲಾರದು. ಒಂದೋ ಮನೋಚಿಂತನೆಯನ್ನು ಮೊದಲನೆಯದ್ದು ಸಾಕ್ಷೀಕರಿಸಿ ಹೇಳಲುಬಯಸುತ್ತದೆ, ಫ್ಯಾಂಟಸಿಯು ಖಗೋಳಶಾಸ್ತ್ರದೊಳಗಿನ ಸಾಕ್ಷಿಯನ್ನು ಬರಿದುಮಾಡುತ್ತದೆ. ಈ ಹುಡುಗರ ೨೦೧೧ರಲ್ಲಿ ಆಗುತ್ತಿರುವ ಫೇಸ್‌ಬುಕ್ ಚಾಟ್, ೧೯೮೮ರಲ್ಲಿನ ಅವರ ಪತ್ರವ್ಯವಹಾರವು ಒಮ್ಮೆಲೆ ಆಗುತ್ತಿದೆ ಎಂದು ನಿಧಾನಕ್ಕೆ, ಈ ನನ್ನ ವಿಜ್ಞಾನವನ್ನು ಕುರಿತಾದ ಸಾಮಾನ್ಯಜ್ಞಾನದಿಂದ ಅರಿವಿಗೆ ಬರತೊಡಗಿತು. ’ಬೇರೆಯೇ ಒಂದು ಆಯಾಮದ ವ್ಯಕ್ತಿ--ಜಗತ್ತುಗಳೊಂದಿಗೆ ನಾನು ವ್ಯವಹರಿಸುತ್ತಿದ್ದೇನೆ’ ಎಂಬ ತರ್ಕವು ಇತ್ತೀಚೆಗೆ ನಡೆಯುತ್ತಿರುವ ಎಲ್ಲ ಪತ್ರವ್ಯವಹಾರದ ಅತಾರ್ಕಿಕತೆಯ ಘಟನೆಗಳಿಂದ ತರ್ಕಬದ್ಧವಾಗಿ ನನ್ನ ಗ್ರಹಿಕೆಗೆ ಬರತೊಡಗಿದೆ. ಪ್ರಸ್ತುತದಲ್ಲಿ ನನ್ನೊಂದಿಗೆ ವ್ಯವಹರಿಸುತ್ತಿರುವ ಪರಿಷತ್ತು ಮತ್ತು ಬಯ್ಸ್ ಶಾಲೆಯ ವಿದ್ಯಾರ್ಥಿಗಳು ಈ ’ನಾನು ಹುಟ್ಟಿದ ಭೂಮಿಯ ಮೇಲೆ’ ಎಂದೂ ಇರಲಿಲ್ಲ, ಈಗಲೂ ಇಲ್ಲ ಮತ್ತು ಮುಂದೆಯೂ ಇರುವುದಿಲ್ಲ ಎಂದು ಖಾತ್ರಿಯಾಯಿತು. ಎಲ್ಲವೂ ಒಂದು ಹದಕ್ಕೆ, ಹಿಡಿತಕ್ಕೆ ಬಂದಂತಾಗಿ ಸ್ವಲ್ಪ ರಿಲ್ಯಾಕ್ಸ್ ಆಗಿ ಸಿಗರೇಟೊಂದನ್ನು ಹಚ್ಚಿ ನನ್ನ ಕೋಣೆಯಲ್ಲಿ ಕಣ್ಣಾಡಿಸಿದಾಗ ಗಮನಿಸಿದ್ದೇನೆಂದರೆ ಇದು ಇಂದಿನ ನನ್ನ ಕೋಟಾ ಆದ ಇಪ್ಪತ್ತರ ಕಿಂಗ್ ಪ್ಯಾಕಿನ ಕೊನೆಯ ಸಿಗರೇಟು ಎಂಬ ವಿಷಯ! ಈ ವಿಕ್ಷಿಪ್ತ ಮಾತುಕತೆಯ ವ್ಯವಹಾರವು ಅದೆಷ್ಟು ಮುಂದೆ ಹೋಗಬಹುದು ಎಂದು ನೋಡೇ ಬಿಡುವ ಎಂದು ’ಲಂಡನ್ ಪ್ರವಾಸಕಥನ’ದ ಮೂರನೇ ಭಾಗದ ಲಿಂಕನ್ನು ಮಮಾ, ಬಿಡಾ ಮತ್ತು ಅನೇಖ ಮುಂತಾದವರ ಫೇಸ್‌ಬುಕ್ ಅಕೌಂಟಿಗೆ ಹಾಕಿ ’ಎಂಟರ್’ ಬಟನ್ ಅದುಮಿದೆ. (ಓದಿ: www.sampada.net//article/7299)//
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):