ನೆನಪಿನ ಚಿತ್ರಕಲಾ ಶಾಲೆ: ಭಾಗ ೨೦ - ಆಪರೇಷನ್ ಆಮ್!

0

 

(೫೭)
೧೯೮೮ರ ಡಿಸೆಂಬರ್, ಚಿತ್ರಕಲಾ ಪರಿಷತ್ತು:
 
ತೆಂಗಿನಮರದಲಿ ಇಟ್ಟಿಗೆ ಹಣ್ಣು, ಪ್ರಶ್ನಾಮೂರ್ತಿಯ ತ್ರಿಶಂಕು ಅವಸ್ಥೆ, ತದನಂತರ ಅದೇ ದಿನ ರಾತ್ರಿಯ ಆತನ ಆಸಿಡ್-ಸಾಲಿಡ್-ಬಹಿರ್ದೆಸೆ ಪ್ರಸಂಗ, ಅದಕ್ಕೂ ಮುಂಚಿನ ವೀರಾ ಅನೇಖನ ಫೋಟೋ ತೆಗೆದ ಸರ್ರಿಯಲ್ ಪ್ರಸಂಗ, ಅನೇಖನ ನಿಗೂಢ ಕಾಲನಿರ್ಧಿಷ್ಟವಾದ ಮಂದಹಾಸ (ಇದು ’ಆರ್ಕಾಯಿಕ್ ನಗು’ವನ್ನು ಹೋಲುತ್ತದೆ. ಶಾಸ್ತ್ರೀಯ ಗ್ರೀಕರ ಆರಂಭಿಕ ಹಂತದ ಶಿಲ್ಪಗಳಲ್ಲಿದ್ದ ತೆಳು ನಗುವನ್ನು ಕಲಾ ಇತಿಹಾಸಕಾರರು ’ಆರ್ಕಾಯಿಕ್ ನಗು’ ಎಂದು ಸಾಮಾನ್ಯವಾಗಿ ಗುರ್ತಿಸುತ್ತಾರೆ), ೨೦೧೧ರ ಸೋಕುಮಾರಿಯೊಂದಿಗಿನ ಕಾಲಾಂತರದ ಪತ್ರೋತ್ತರ-ಇವುಗಳೆಲ್ಲ ಒಟ್ಟಿಗೆ, ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ  ಉಂಟಾದ್ದರಿಂದ ಅದನ್ನು ’ಸಿಕೆಪಿಸ್ತಾನದ ಡಿಸೆಂಬರ್ ಕ್ರಾಂತಿ’ ಎಂದೂ ಗುರ್ತಿಸಲಾಗುತ್ತದೆ (ಚಿತ್ರಕಲಾ ಪರಿಷತ್ತನ್ನು ಸಿ.ಕೆ.ಪಿ ಎಂದೇ ಎಲ್ಲರೂ ಗುರ್ತಿಸುವುದು, ಕೆ.ಸಿ.ಪಿ ಎಂಬುದು ಅದರ ಆಡಳಿತ ಭಾಷೆಯ ನಾಮಧೇಯ). ಅಥವ ಕೆಲವರು ಮಾತ್ರ ಹಾಗೆ ಕರೆಯುತ್ತಿದ್ದರು. ಉಳಿದವರಿಗೆ ಎಲ್ಲ ಕಾಲದ ಎಲ್ಲ ದಿನಗಳಂತೆ ಅವೂ ಸಾಮಾನ್ಯ ದಿನಗಳೇ. ಮತ್ತೆ ಕೆಲವರಿಗೆ ಕೇವಲ ಬದುಕಿರುವುದೇ ದೊಡ್ಡ ಕ್ರಾಂತಿಯಾಗಿದ್ದರಿಂದ ’೮೮ರ ಡಿಸೆಂಬರ್‌ನದ್ದೇನು ವಿಶೇಷ?’ ಎಂಬ ಅನುಮಾನ. 

   
ಆ ತ್ರಿಶಂಕಾವಸ್ಥೆಯ ದಿನದ  ನಂತರ ಪ್ರಶ್ನೆಯನ್ನು ನೋಡಿದವರೆಲ್ಲಾ ಮುಸಿಮುಸಿ ನಗುತ್ತಿದ್ದರು. "ನಿನ್ನ ಮುಖ ನೋಡಿದರೆ ಅದರ ವಿರುದ್ಧಾರ್ಥದ ಅಂಗ ನೆನಪಾಗುತ್ತದೆ, ಅದಕ್ಕೇ ಎಲ್ಲರೂ ನಿನ್ನ ನೋಡಿ ನಗೋದು," ಎಂದು ಆ ನಗುವಿಗೆ ಸರಳವಾಗಿದ್ದ ಕಾರಣವನ್ನು ಅವನಿಗೆ ವಿವರಿಸಿದ್ದ ವೀರಾ. ಆದರೆ ಚಿತ್ರಕಲಾ ವಿಭಾಗದಲ್ಲಿದ್ದ ಮಾವಿನ ಹಣ್ಣುಗಳು ಸುಮ್ಮನಾಗಬೇಕಲ್ಲಾ. ಒಣಗಿಹಾಕಲಾಗಿದ್ದ ತಮ್ಮ ಸುತ್ತಲೂ ದಿನವಹಿ ಕುಂತು, ನಿಂತು ಚಿತ್ರಬಿಡಿಸುತ್ತಿದ್ದ ಆ ತರಗತಿಯ ಒಂಬತ್ತು ಮಂದಿ ಕಲಾವಿದ್ಯಾರ್ಥಿಗಳು ಆ ಹಣ್ಣುಗಳ ದೃಷ್ಟಿಯಲ್ಲಿ ಹೆಣ್ಣೂ ಅಲ್ಲದ ಗಂಡೂ ಅಲ್ಲದ ನಪುಂಸಕರಂತೆ ಕಾಣತೊಡಗಿದ್ದರು. ರಸಪೂರಿ ಮಾವಿನಹಣ್ಣಿನಂತಿರುವ, ರಸತುಂಬಿತುಳುಕಿತ್ತಿದ್ದ, ಹಣ್ಣಾಗಿ ಮಾಗಿ ವಿರಹದಿಂದ ಬಳಲುತ್ತಿರುವ ಮಾವಿನಹಣ್ಣುಗಳಾದ ತಮಗೆ ಎಂಥಾ ರಸಹೀನರ ಸಂಗವಾಯಿತೆಂದು ಪ್ರಕೃತಿಯ ಒಂದು ಅಂಗವೇ (ಮಾವು) ಕಣ್ಣೀರಿಡತೊಡಗಿತು. ಇತ್ತ ಚಿತ್ರಕಲಾ ವಿದ್ಯಾರ್ಥಿಗಳಾದರೋ, ದಿನವಹೀ ಹಣ್ಣುಹಣ್ಣಾದ ಮಾವಿನ ವಾಸನೆಯನ್ನು ಕುಡಿಯುವುದಷ್ಟೇ ಅವರು ಮಾವಿನೊಂದಿಗೆ ಇರಿಸಿಕೊಳ್ಳಬಹುದಾಗಿದ್ದ ಅತ್ಯುತ್ಕೃಷ್ಟ ಸಂಬಂಧವಾಗಿತ್ತು. "ಹೋಗ್ಲಿ ಅತ್ಲಾಗೆ, ಬೇರೆಲ್ಲಾದ್ರೂ ಹಣ್ಣುಗಳನ್ನು ತೆಗೆದುಕೊಂಡು ಹೋಗಯ್ಯಾ. ಒಳ್ಳೆ ನ್ಯೂಡ್ ಸ್ಟಡಿ ಮಾಡಿದಂತಾಯ್ತಿದು, ಚರ್ಮಾನ, ಮಾಂಸಾನ ಕೇವಲ ಬ್ರಷಿನ ಮೂಲಕವೇ ಮುಟ್ಟುವಂತಹ ಗೋಳು ಎಂತದಯ್ಯಾ ಇದು," ಎಂದು ಹೊಟ್ಟೆಬಾಕ ಮತ್ತು ಚರ್ಮ-ಮಾಂಸ-ಬಾಕ ವಿದ್ಯಾರ್ಥಿಗಳೆಲ್ಲರೂ ಅಣ್ತಮ್ಮನನ್ನು ತರಾಟೆಗೆ ತೆಗೆದುಕೊಂಡರು. 
 
ದಿನಗಳು ಕಳೆದರೂ ಹಣ್ಣುಗಳು ನೆಲದ ಮೇಲೇ ಇದ್ದವು. ಆಗಾಗ ಮೇಷ್ಟ್ರು ಅತಿಥಿಗಳಿಗೆ ಒಂದಷ್ಟು ಹಣ್ಣುಗಳನ್ನು ಅಲ್ಲಿಂದ ತೆಗೆಸಿಕೊಳ್ಳುತ್ತಿದ್ದರು. ನೂರಾರು ಮಾವುಗಳಿದ್ದೆಡೆ, ದಿನಕ್ಕೆ ಐದಾರು ಹಣ್ಣುಗಳನ್ನು ಖಾಲಿಮಾಡುವುದು, ಬೊಗಸೆಯಲ್ಲಿ ಬಾವಿಯನ್ನು ತುಂಬಿಸಿದಂತಾಗಿತ್ತು. ಬಾಯ್ಸ್ ಕಲಾಶಾಲೆಯ ಹಣೆಯಬರಹದಂತಿತ್ತಿದು: ಹತ್ತಿರದಲ್ಲಿದ್ದ ಪರಿಷತ್ತಿನ ತುಂಬ ಸುಮಾರು ಕೋಟಿ ರೂಗಳ ಬೆಲೆ ಬಾಳುವ ಅಸಲು ಕೃತಿಗಳು ನಿರಂತರವಾಗಿ ಪ್ರದರ್ಶಿತವಾಗುತ್ತಿದ್ದರೂ ಸಹ, ಬಾಯ್ಸ್ ಶಾಲೆಯ ವಿದ್ಯಾರ್ಥಿಗಳಿಗೆ ನೆಟ್ಟಗೆ ಒಬ್ಬ ಸಮಕಾಲೀನ ಕಲಾವಿದನ, ಒಂದೈದು ಆಧುನಿಕ ಕಲಾವಿದರ, ಒಂದತ್ತು ಶಾಸ್ತ್ರೀಯ ದೃಶ್ಯಕಲಾವಿದರ, ಒಬ್ಬಿಬ್ಬರು ಕಲಾಇತಿಹಾಸಕಾರರ ಹೆಸರುಗಳೂ ಗೊತ್ತಿರಲಿಲ್ಲ! ಒಟ್ಟಾಗಿ ಇಷ್ಟು ಗೊತ್ತಿಲ್ಲದಿದ್ದರೂ ಹೋಗಲಿ, ಬಿಡಿಬಿಡಿಯಾಗಿಯೂ ಈ ಪಟ್ಟಿಗಳು ಅವರಿಗೆ ಗೊತ್ತಿರಲಿಲ್ಲ. 
 
(೫೮)
 
ಮಮಾ, ಅನೇಖ, ವಿರಾ, ಮಲ್ಲುಮೋಗನ ಮುಂತಾದವರೆಲ್ಲರೂ ಅಂದೇ ’ಮಾಸ್ಟರ್‌ಪ್ಲಾನ್’ ಮಾಡಿ ಅದನ್ನು ’ಸ್ಟೂಡೆಂಟ್ ಪ್ಲಾನ್’ ಎಂದು ಕರೆದರು. ಹೊಸದಾಗಿ ಕಟ್ಟಲಾಗಿದ್ದ, ಹೊಸ ಬಾಗಿಲುಗಳನ್ನು ಇರಿಸಲಾಗಿದ್ದ ಚಿತ್ರಕಲಾ ವಿಭಾಗದೊಳಗಿನ ಹಣ್ಣುಗಳ ಎದೆಯ ಭಾರ ಇಳಿಸುವ ಪುಣ್ಯ ಕಾರ್ಯವದು. ಸಂಜೆ ನಾಲ್ಕಕ್ಕೆ ಎಲ್ಲರನ್ನೂ ಹೊರಗೋಡಿಸಿ, ಬಾಗಿಲಿಗೆ ಬೀಗ ಜಡಿಯುತ್ತಿದ್ದ ಅಣ್ತ್ಮಮ್ಮ, ನಂತರ ತನ್ನ ಅಂದಿನ ಕಾರ್ಯ ಮುಗಿಯಿತು ಎಂದು ಪರಿಷತ್ತಿನ ಕಾಂಪೌಂಡಿನಲ್ಲೇ ಇದ್ದ ತನ್ನ ಗುಡಿಸಲಿಗೆ ಹೊರಟುಹೋದ. ಆತನ ಕಣ್ಣು ಸದಾ ಈ ಕೋಣೆಯ ಕಡೆಗೇ ಇದ್ದರೂ ಸಹ, ಆತನ ಶರೀರವಾದರೂ ಸ್ವಲ್ಪ ದೂರ ಹೋದಂತಾಗಿದ್ದು ವಿದ್ಯಾರ್ಥಿಗಳ ಸ್ಟೂಡೆಂಟ್ ಪ್ಲಾನನ್ನು ಅನುಷ್ಠಾನಗೊಳಿಸಲು ಸ್ವಲ್ಪ ನೈತಿಕ ಸ್ಥೈರ್ಯ ದೊರಕಿದಂತಾಗಿತ್ತು. ಬ್ರೀಥಿಂಗ್ ಸ್ಪೇಸ್ ಅಥವ ಉಸಿರಾಡಲೊಂದಷ್ಟು ಅವಕಾಶ ಸಿಕ್ಕಿತು. ಹಾಗಾದ್ದರಿಂದಲೇ ಮಾವಿನ ವಾಸನೆಯ ಸೆಳೆತ ಹೆಚ್ಚೂ ಆಯಿತು! ಸಂಜೆಯಾಯಿತೆಂದು ಹೊರಗೆ ಕಳಿಸಲ್ಪಟ್ಟ ವಿದ್ಯಾರ್ಥಿಗಳಲ್ಲಿ ಕೆಲವರು, ಆಸಕ್ತರು ಅಥವ ಹಾಗೆಂದು ನಟಿಸಲು ತಯಾರಿದ್ದವರು ಡ್ರಾಯಿಂಗ್ ಬೋರ್ಡನ್ನು ಹೊರಗಿರಿಸಿಕೊಂಡು ಹೊರಗೆ ಕುಳಿತೇ ಚಿತ್ರಬಿಡಿಸುತ್ತಿದ್ದರು ಕತ್ತಲಾಗುವವರೆಗೂ. ಅಣ್ತಮ್ಮನ ಗಮನ ಸೆಳೆಯಲು ಮತ್ತು ತಪ್ಪಿಸಲು ಈ ಉಪಾಯ. ತಾವು ಸಂಜೆಯ ನಂತರವೂ, ಕ್ಲಾಸಿನ ಹೊರಗೂ ಚಿತ್ರಬರೆವ ಕಡೆ ಆತನ ಗಮನವನ್ನೂ, ತಾವು ಕದಿಯಲಿರುವ ಮಾವಿನ ಕಡೆಯಿಂದ ಅವನ ಗಮನ ತಪ್ಪಿಸುವುದೂ ಈ ಉಪಾಯವಾಗಿತ್ತು.
 
ಈಗಲೂ ಅಸ್ತಿತ್ವದಲ್ಲಿರುವ ಚಿತ್ರಕಲಾ ವಿಭಾಗದ ಆ ಕೋಣೆಯು ನೆಲಮಾಳಿಗೆಯಲ್ಲಿದೆ. ಮೆಟ್ಟಿಲಿಳಿದು ಹೋಗಬೇಕು. ಅದರ ಪೂರ್ವಕ್ಕೆ ಶಿಲ್ಪಕಲಾವಿಭಾಗ, ಪಶ್ಚಿಮಕ್ಕೆ ಗ್ರಾಫಿಕ್ ವಿಭಾಗಗಳು ಈಗಲೂ ಇವೆ. ಆದರೆ ಅವುಗಳ ತಲೆಯ ಮೇಲೆ ಆಗ ಏನೂ ಇರಲಿಲ್ಲ, ಇಂದು ಎರಡಂತಸ್ತಿನ ಬೃಹತ್ ಪೈಂಟಿಂಗ್, ಕಲಾಇತಿಹಾಸ ಮತ್ತು ಅನ್ವಯ ಕಲೆಗಳ ವಿಭಾಗಗಳಿವೆ. ಅಕ್ಷರಶಃ ಕೆರೆಕೊಳ್ಳವೊಂದರೊಳಗೆ ಮನೆಮಾಡಿದಂತೆ ಇರುತ್ತಿದ್ದ ಆಗಿನ ಆ ಕೋಣೆಯ ಹೊರಗೆ, ಸಂಜೆ ನಾಲ್ಕರ ನಂತರ ಒಂದಿಬ್ಬರು ಮಾತ್ರ ಚಿತ್ರ ಬಿಡಿಸುತ್ತಿದ್ದರು. ಒಬ್ಬ ದಿಣ್ಣೆಯ ಆ ಕಡೆಗೆ ಮತ್ತೊಬ್ಬ ಈ ಕಡೆಗೆ ಹಾಡು ಹಾಡುತ್ತಾ ನಿಂತಿದ್ದರು. ಅದೆಷ್ಟು ಕೆಟ್ಟದಾಗಿಯಾದರೂ ಸಹ ಹಾಡುತ್ತಿರಬೇಕಾಗಿತ್ತು ಅವರುಗಳು. ಯಾರಾದರೂ ಏನಾದರೂ ಬರುವ ಚಿಹ್ನೆ ಕಾಣಿಸಿದ ತಕ್ಷಣ ಅವರುಗಳು ಹಾಡು ನಿಲ್ಲಿಸಿ ಸಿಳ್ಳೆ ಹಾಕಬೇಕಿತ್ತು. ಆ ನಡುವೆ ಕೆಳಗೆ ’ಆಪರೇಷನ್ ಆಮ್’ (’ಶಸ್ತ್ರಚಿಕಿತ್ಸೆ ಮಾವು’ ಎಂದು ಪಾಜು ರಟೇಲನ ಬಾಕ್ಸ್-ಫರ್ಡ್ ಡಿಕ್ಸ್-ನರಿ ಅದನ್ನು ಕನ್ನಡದಲ್ಲಿ ದಾಖಲಿಸಿತ್ತು) ಆರಂಭಗೊಂಡಿತ್ತು.
 
     ಚಿತ್ರ ಬಿಡಿಸುತ್ತಿದ್ದವರು ಬ್ಯಾಗಿನೊಳಗಿಂದ ಸ್ಕ್ರೂ ಡ್ರೈವರ್ ತೆಗೆದು, ಹೊಸ ಬಾಗಿಲಿಗೆ ಹಾಕಲಾಗಿದ್ದ ಹೊಸ ಬೀಗದ ಸುತ್ತಲಿನ ಸ್ಕ್ರೂ ಲೂಸ್ ಮಾಡುತ್ತಿದ್ದರು. ಬೀಗ ತೆಗೆದುಕೊಂಡಾಕ್ಷಣ ರುಕ್‌ಸಾಕನ್ನು ತೆಗೆದುಕೊಂಡು ಹೆಚ್ಚು ಮಾವು ತಿನ್ನಬೇಕೆನ್ನುವ ಆಸೆಯುಳ್ಳವ ರೂಮಿನ ಒಳಹೊಕ್ಕು, ಹಣ್ಣುಗಳನ್ನು ಬ್ಯಾಗಿನ ತುಂಬ ತುಂಬಿಸಿಕೊಂಡು ಹೊರಗೆ ಬರಬೇಕಿತ್ತು. ನಂತರ ಇಬ್ಬರು ಚಕಚಕನೆ ಮತ್ತೆ ಸ್ಕ್ರೂಗಳನ್ನು ಯಥಾಸ್ಥಿತಿಗೆ ಮರಳುವಂತೆ ಮಾಡಿಬಿಡುತ್ತಿದ್ದರು. "ಅಣ್ಣಾ ಬಂದಾ, ನಮ್ ಹಣ್ಣಾ ಬಂದಾ, ತಮ್ ಹಣ್ಣಾ ಬಂದಾ," ಎಂದು ಕಾವಲು ನಿಂತಿದ್ದ ಪಾಜು ರಟೇಲ್ ಜೋರು ದನಿಯಲ್ಲಿ ಒಮ್ಮೆಲೆ ಹಾಡತೊಡಗಿದ ಗೂರಲು ದನಿಗೆ ಬೆಚ್ಚಿಯೇ ಅಣ್ತಮ್ಮ ಓಡಿಬಿಡಬೇಕಿತ್ತು. ಆದರೆ ಹಾಗಾಗಲಿಲ್ಲ. ಆದರೆ ಪಾಜು ರಟೇಲ್ ಯಾರಾದರೂ ಬಂದಲ್ಲಿ ಹಾಡುವುದನ್ನು ನಿಲ್ಲಿಸಿ ಸಿಳ್ಳೆ ಹೊಡೆಯಬೇಕು ಎಂಬುದನ್ನು ಮರೆತಿದ್ದಾನೆ ಎಂದು ಮಾತ್ರ ಹಣ್ಣನ್ನು ಬ್ಯಾಗಿನಲ್ಲಿ ತುಂಬಿ ಹೊರಗಿಟ್ಟು, ಬೀಗದ ಸುತ್ತಲಿನ ಸ್ಕ್ರೂವನ್ನು ಅದಾಗಲೇ ಫಿಕ್ಸ್ ಮಾಡುತ್ತಿದ್ದವರು ತಿಳಿದುಕೊಂಡು ಬಿಟ್ಟಿದ್ದರು. ಅಣ್ತಮ್ಮ ಕೆಳಗಿಳಿದು ಬಂದು, "ಏನು ಮಾವಿನ ಹಣ್ಣಿನ ವಾಸನೆ ಹೊರಗೆಲ್ಲಾ ಇಷ್ಟು ಜೋರಾಗಿ ಬರ‍್ತಾ ಐತಲ್ಲ," ಎಂದು ಎಲ್ಲೆಡೆ ಮೂಗಿನಲ್ಲೇ ಕಣ್ಣಾಡಿಸಿದ. ಸಿನೆಮಗಳಲ್ಲಾಗುವಂತೆ ಆತ ಕೆಳಗಿಳಿವ ಮೊದಲ ಮೆಟ್ಟಿಲ ಮೇಲೆ ಹೆಜ್ಜೆ ಇಡಲಿಕ್ಕೂ, ಕೊನೆಯ ಸ್ಕೄವನ್ನು ಗಟ್ಟಿಗೊಳಿಸಿ ನೆಲದ ಮೇಲೆ ಒಬ್ಬ ವಿದ್ಯಾರ್ಥಿ ಕುಕ್ಕುರುಬಡಿಯಲಿಕ್ಕೂ ಸರಿಹೋಯಿತು. 
 
"ಅದ್ಕೇ ಹೇಳೋದು, ಹಣ್ಣು ಬೇಗ ಕಳಿಸಯ್ಯಾ ನೆಂಟ್ರ ಮನೆಗೆ, ಹಣ್ಣುಗಳು ಒಳಗಿದ್ರೂ ಅದ್ರ ಸುವಾಸನೆ ಮಾತ್ರ ಬಾಗಿಲು ಒಡಕೊಂಡು ಹೊರಗೆಲ್ಲಾ ಹರೀತಾ ಐತೆ. ಮಾವನ್ನು ಕೂಡಿಹಾಕಬಹುದು, ಅದರ ವಾಸನೆಗೆ ಬಾಗಿಲು, ಬೀಗ ಎಲ್ಲಾ ಯಾವ ಲೆಕ್ಕಾ ಕಣಯ್ಯಾ ಅಣ್ತಮ್ಮ?!" ಎಂದ ಮಮಾ. "ನೀನೇಳದೂ ಸರೀನೇಯ." ಎಂದು ಅಣ್ತಮ್ಮ ಹೊರಟುಹೋದ. ಒಂದು ವಾರದ ನಂತರವೂ ಅಣ್ತಮ್ಮ ಹೊರಟುಹೋದ ಮಧುಗಿರಿಗೆ, ತನ್ನ ಎಪ್ಪತ್ತರ ಅಪ್ಪನನ್ನು, "ಮೇಷ್ಟ್ರು ಕರ್ಕಂಬಾ ಅಂದ್ರು ಬಾ, ಮಾವಿನಹಣ್ಣುಗಳ್ನ ನಾನು ಕದ್ನಂತೆ," ಅಂತ ಹೇಳೋಕೆ.
 
      ದಿನಕ್ಕೆ ಹದಿನೈದಿಪ್ಪತ್ತು ಹಣ್ಣುಗಳಂತೆ, ಸ್ಕ್ರೂಡ್ರೈವರ್ ಬಳಸಿ ನನ್ನ ಸಹಪಾಠಿಗಳು ’ಆಪರೇಷನ್ ಆಮ್’ ಅನ್ನು ಅತ್ಯಂತ ಸಫಲವಾಗಿ ಒಂದು ವಾರಕಾಲದಲ್ಲಿ ಪೂರೈಸಿದ್ದರು. ಹೊಸ ಬಾಗಿಲು ಸಂಜೆಯಿಂದ ಬೆಳಗಿನವರೆಗೂ ಬೀಗ ಜಡಿದಂತೆಯೇ ಇರುತ್ತಿತ್ತು, ಬೆಳಿಗ್ಗೆಯಿಂದ ಸಂಜೆ ತರಗತಿಗಳು ಮುಗಿವವರೆಗೂ ಅಣ್ತಮ್ಮನ ಕಂಗಳ ಸರ್ವೇಲೆನ್ಸ್ ಕ್ಯಾಮರ ಆನ್ ಆಗೇ ಇರುತ್ತಿತ್ತು. ಹಣ್ಣುಗಳು ಮಾತ್ರ--ಗೂರಲು ರೋಗಿಗಲೂ ತೂಕ ಕಳೆದುಕೊಂಡಂತೆ--ಕಡಿಮೆಯಾಗುತ್ತಲೇ ಇತ್ತು.
 
      "ದೇವ್ರಾಣೆಗೂ ಮೊದಲು ಬೀಗ ತೆಗೀತಿದ್ದೋನೂ ನಾನೇಯ, ಕೊನೆಗೆ ಎಲ್ರೂ ಹೊರಗೋದ್ಮೇಲೆ ಬೀಗ ಜಡೀತಿದ್ದೋನೂ ನಾನೇಯ. ಹಣ್ಣುಗಳು ಏನಾದುವೋ ನಾನರಿಯೆ," ಎಂದು ಅಣ್ತಮ್ಮ ಮೇಷ್ಟ್ರ ಎದಿರು ಆಣೆಪ್ರಮಾಣ ಮಾಡುವ ಮೂಲಕ ತನ್ನ ಅಪರಾಧವನ್ನು ಲವಲೇಶದ ಅನುಮಾನವೂ ಇಲ್ಲದಂತೆ ನಿರೂಪಿಸಿಬಿಟ್ಟಿದ್ದ. ಆನ್ ದ ರೆಕಾರ್ಡ್, ಚಿತ್ರಕಲಾ ವಿಭಾಗದಲ್ಲಿದ್ದ ಸುಮಾರು ನೂರು ಮಾವಿನಹಣ್ಣುಗಳನ್ನು ಅಣ್ತಮ್ಮನೇ ಒಪ್ಪಿಕೊಂಡಂತೆ, ಆತನೇ ಎಲ್ಲೋ ಗಾಯಬ್ ಮಾಡಿಬಿಟ್ಟಿದ್ದ. ಅದು ಸುಳ್ಳು ಎನ್ನಲು ವಾಟೆಯಷ್ಟೂ ಸಾಕ್ಷಿ ಆತನಲ್ಲಿರಲಿಲ್ಲ. 
 
"ಭಲೇ ಇದ್ದೀರಪ್ಪಾ ನೀವ್ಗೊಳು, ಎಂತಾ ಇಕ್ಕಟ್ಟಿಗೆ ಸಿಕ್ಸಿಬಿಟ್ರಿ ನೋಡಿ ನನ್ನನ್ನ," ಅಂದಿದ್ದ ಅಣ್ತಮ್ಮ ನನ್ನ ಸಹಪಾಠಿಗಳಿಗೆಲ್ಲಾ, ಆತ ಡಿಸ್‌ಮಿಸ್ ಆಗಿ, ಊರಿಗೋಗಿ ಎಪ್ಪತ್ತರ ತನ್ನಪ್ಪನನ್ನು ಕರೆತಂದು, ಅವರೆದುರಿಗೆ ಮೇಷ್ಟ್ರತ್ರ ಉಗಿಸಿಕೊಂಡು, ಅದೇ ಮೇಷ್ಟ್ರು ಅಣ್ತಮ್ಮನಪ್ಪನಿಗೆ ಭಕ್ಷೀಸು ನೀಡಿ ಊರಿಗೆ ವಾಪಸ್ ಹೋದ ಮೇಲೆ ಒಮ್ಮೆ. "ನಾನೇನು ಹಸಿಮಾವು ತಿನ್ನಲು ಬಿಮ್ಮನ್ಸೇನಾ? ನಂಗೆ ಮದ್ವೇನೇ ಆಗಿಲ್ವಲ್ಲ ಅಣ್ತಮ್ಮಾ, ನಾವೆಲ್ಲಾ ಏನಿದ್ರೂ ಮಾಗಿದ ಹಣ್ಣುಗಳನ್ನೇ ತಿನ್ನುವುದು," ಎಂದಿದ್ದಳು ದರೋಡೆಯಲ್ಲಿ ಪಾಲುದಾರಳಾಗಿದ್ದ, ಪರಿಷತ್ತಿನ ಎದುರಿನ ಪಿಜಿಯಲ್ಲಿ ಇರುತ್ತಿದ್ದು, ಸಂಜೆಯ ಪರಿಷತ್ತಿನ ಭಾನಗಡಿಗಳಿಗೆಲ್ಲಾ ಸಾಕ್ಷಿಪ್ರಜ್ಞೆಯಂತಿರುತ್ತಿದ್ದ ನಮ್ಮ ಜೂನಿಯರ್ ವಿದ್ಯಾರ್ಥಿನಿ ಸ್ಟೈಲಜ. ಅಣ್ತಮ್ಮನಿಗೆ ಅರ್ಥವಾಗದಿದ್ದರೂ ಮಿಕ್ಕವರೆಲ್ಲಾ ನಕ್ಕಿದ್ದರು. 
"ಲೇಯ್ ಅಣ್ತಮ್ಮ, ಗಾದೆಮಾತೊಂದಿದೆ ಗೊತ್ತಾ ನಿಂಗೆ?" ಎಂದು ಕೇಳಿದ್ದ ಒಮ್ಮೆ ಮಮಾ.
"ನಂಗೇನ್ ಗೊತ್ತಾಗ್ತದಪ್ಪಾ. ಓದ್ತಿರೋರು ನೀವು. ನೀನೇ ಯೋಳು," ಎಂದಿದ್ದ ಅಣ್ತಮ್ಮ.
"ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ ಅಂತ. ಅಂಗಾಯ್ತು ಮಾವಿನ್ ಹಣ್ಗಳ ಕತೆ."
"ಯಾರ್ ಯೋಳಿದ್ದು ಈ ಗಾದೆಯ?"
"ಪಿ.ಬಿ.ಶ್ರೀನಿವಾಸ್ ಗಂಟ್ಲಲ್ಲಿ ಅಣ್ಣಾವ್ರು, ’ಪರೋಪಕಾರಿ’ ಸಿನೆಮದಲ್ಲಿ!"
 
(೫೯)
 
ಕದ್ದವರು ನಾಲ್ಕಾರು ಮಂದಿಯಾದರೂ ಸಹ ಎಲ್ಲರಿಗೂ ಹಂಚಿ ತಿಂದಿದ್ದರು, ನಾಳೆ ದಿನ ಸಿಕ್ಕಿಹಾಕಿಕೊಂಡರೆ ಒಳ್ಳೆಯವರು-ಕೆಟ್ಟವರು ಎಂಬ ಬೇಧಭಾವದಿಂದಾಗಿ ಯಾರೂ ತಪ್ಪಿಸಿಕೊಳ್ಳಬಾರದಲ್ಲ, ಅದಕ್ಕೆ! ಆ ಆ-ಹಾರದ ದಿಗ್ವಿಜಯಕ್ಕೆ ಶಿಖರಪ್ರಾಯವಾಗಿ ಅಂಚೆಯಣ್ಣ ’ಲಂಡನ್ ಪ್ರವಾಸಕಥನ’ದ ನಾಲ್ಕನೇ ಕಂತನ್ನು ಅಂಚೆಯಲ್ಲಿ ತಂದುಕೊಟ್ಟು ಹೋದ. ಅದನ್ನು ತೆಗೆದುಕೊಂಡವರ‍್ಯಾರು, ಓದಿದವರಾರು, ಕಡೆಗೆ ಅದು ಯಾರ ಕೈಗೆ ಸೇರಿತು ಎಂಬುದೆಲ್ಲಾ ’ಮಾವಿನಹಣ್ಣುಗಳು ಎಲ್ಲಿ ಹೋದವು’ ಎಂಬ ಅಣ್ತಮ್ಮನ ಗೊಂದಲದಂತೆಯೇ ಕೊನೆಗೊಂಡಿತು. "ನಮ್ಮಗಳ ಮೇಲಿನ ಸಿಟ್ಟಿಗೆ ಅಣ್ತಮ್ಮನೇ ಅದನ್ನು ಎಲ್ಲೋ ಅಡಗಿಸಿರಬೇಕು" ಎಂದು ಎಲ್ಲರೂ ಮಾತನಾಡಿಕೊಂಡು, ತಾವು ಅದನ್ನು ಓದಬೇಕಾದ ಹಿಂಸೆಯಿಂದ ತಪ್ಪಿಸಿದ ಅಣ್ತಮ್ಮನಿಗೆ ಮನಸ್ಸಿನಲ್ಲೇ ವಂದನೆಯನ್ನರ್ಪಿಸುತ್ತಾ. "ಅಣ್ತಮ್ಮನಿಗೆ ನಮ್ಮ ಮೇಲೆ ಎಷ್ಟು ಸಿಟ್ಟಿದೆಯೆಂದರೆ, ಹೆಬ್ಬೆಟ್ಟಿನವನಾಗಿಯೂ ಅದನ್ನು ಆತ ತಾನೊಬ್ಬನೇ ಓದಬೇಕು ಎಂದು ಎತ್ತಿಟ್ಟುಕೊಂಡುಬಿಟ್ಟಿದ್ದಾನೆ, ಮಗಾ," ಎಂದು ಅಸಂಗತವಾಗಿ, ಅರ್ಥವಾಗುವ ಆದರೆ ಅರ್ಥ ಬರಿದು ಮಾಡಲಾಗಿರುವ ವಾಕ್ಯವನ್ನು ಉದುರಿಸಿದ ಮಮಾ. ಮುಂದೆ ಇದೇ ಮಮಾ ಅಂತಹ ’ಅಸಂಗತಿಸಂ’ ಒಂದರ ಹರಿಕಾರನಾಗಿಹೋದ. ಮೊದಲು ಶೈಲಿ ಆಮೇಲೆ ಪದಗಳನ್ನು ಕಲಿತು ಇಂಗ್ಲಿಷನ್ನು ತನ್ನದಾಗಿಸಿಕೊಂಡ ಸಾಹಸಿ. ಬಿ ಈ ಎನ್ ಚಿ - ಬೆಂಚ್; ಪಿ ಯು ಎನ್ ಚಿ - ಪಂಚ್; ಎಂ ಯು ಎನ್ ಚಿ ಯು - ಮಂಚು ಎಂದೆಲ್ಲಾ ಆತ, ಕಾರಂತರ ’ಪಾದ್ರಿ ಫಾದರ್ ಆದ್ರೆ ಮಾದ್ರಿ ಮದರ್ ಏಕಾಗಬಾರದು?’ ಎಂಬುದಕ್ಕೆ ಸಂವಾದಿಯಾಗಿ ಪದಗಳನ್ನು ಮೊದಲ ಆ ನಂತರ ಅವುಗಳಿಗೆ ಅರ್ಥಗಳನ್ನು ಹುಟ್ಟಿಹಾಕುತ್ತಿದ್ದ.  
 
ಮುಂದೆ, ಇಡಿಯ ಮಾವಿನ ಸೀಸನ್ನಿನಾದ್ಯಂತ ಯಾರೂ ಅಪ್ಪಿತಪ್ಪಿಯೂ ಮನೆಯಿಂದಲೂ ಸಹ ಊಟಕ್ಕೆ ಮಾವಿನ ಹಣ್ಣಿನ ಓಳುಗಳನ್ನು ತರುತ್ತಿರಲಿಲ್ಲವೇಕೆಂದರೆ, ’ಇದೇ ಆವತ್ತು ಕಳ್ತನ ಆಗಿತ್ತಲ್ಲ ಆ ಮಾವು’ ಎಂದು ಅಣ್ತಮ್ಮ ಯಾವ ಕ್ಷಣದಲ್ಲಾದರೂ ಓಳು ಬಿಟ್ಟು ಎಲ್ಲರನ್ನೂ ಮೇಷ್ಟ್ರ ಮುಂದೆ ನಿಲ್ಲಿಸಿಬಿಡುವ ಭಯವಿತ್ತು. ಯಾರು ಓದದಿದ್ದರೂ ’ಲಂಡನ್ ಪ್ರವಾಸ’ದ ಭಾಗ ೪ ಅಂತೂ ೧೯೮೮ ಅನ್ನು ತಲುಪಿತ್ತು, ಎಲ್ಲಿಂದ ಎಂಬುದರ ಬಗ್ಗೆ ಗೊಂದಲವಿದ್ದರೂ ಸಹ!
 
(೫೯)

ಪರಿಷತ್ತಿನ ಚಿತ್ರಕಲಾ ತರಗತಿಗಳು ನಡೆವ ರೀತಿ ವಿಕ್ಷಿಪ್ತವಾದುದಾಗಿತ್ತು. ಬಾಯ್ಸ್ ಶಾಲೆಯಲ್ಲಿಯೂ ಹಾಗೆಯೇ. ಬೆಳಿಗ್ಗೆ ಒಂಬತ್ತರಿಂದ ಸಂಜೆ ನಾಲ್ಕರವರೆಗೂ ಔಪಚಾರಿಕ ತರಗತಿಗಳು. ತದನಂತರ ಹತ್ತಾರು ಮಂದಿ ವಿದ್ಯಾರ್ಥಿಗಳು ಕೂಡಲೆ ಮನೆಗೆ ಹೋಗಿ, ಊಟ ಮತ್ತು ಮನೆಗೆಲಸ ಮುಗಿಸಿ ರಾತ್ರಿ ಒಂಬತ್ತಕ್ಕೆ ಪರಿಷತ್ತಿನ ಗ್ರಾಫಿಕ್ ವಿಭಾಗದಲ್ಲಿ ಜಮಾ ಆಗುತ್ತಿದ್ದರು. ಬೆಳಿಗ್ಗೆ ಮೂರರವರೆಗೂ ಗ್ರಾಫಿಕ್ ಎಚ್ಚಿಂಗ್ ಮಾಡುತ್ತಲೋ, ಪ್ರಿಂಟ್ ತೆಗೆಯುತ್ತಲೋ, ಅನೇಖನ ಪರಿಹರಿಸಲಾಗದ ನಿಗೂಢ ಮಾಯವಾಗುವಿಕೆಯನ್ನು ನಿರೀಕ್ಷಿಸುತ್ತಲೋ ಇದ್ದು, ಬೆಳಿಗ್ಗೆ ಏಳು ಗಂಟೆಯವರೆಗೂ ನಿದ್ರೆ ಮಾಡಿ, ಎದ್ದು, ಕ್ಯಾಂಟೀನಿನ ಬಳಿಯ ನಲ್ಲಿಯಲ್ಲಿ ಮುಖ ತೊಳೆದು ಮಿಕ್ಕೆಲ್ಲದರ ಶುಚಿಗಾಗಿ ತಮ್ಮತಮ್ಮ ಮನೆಗಳಿಗೆ ಹೋಗಿ ಒಂಬತ್ತತ್ತು ಗಂಟೆಗೆ ಪುನಃ ಹಾಜರಾಗುತ್ತಿದ್ದರು ಪರಿಷತ್ತಿನಲ್ಲಿ. ’ಹೆಂಕಾಗಂ’ಗಳೇ ತುಂಬಿರುತ್ತಿದ್ದ ರಾತ್ರಿಗಳ ಕಲಾಕಾರ್ಯಾಗಾರಗಳು ಪಕ್ಕಾ ಸ್ತ್ರೀವಿರೋಧಿ ಅನೌಪಚಾರಿಕ ಸಂಘವಾಗಿತ್ತು. 
 
ಆಗಾಗ ’ಲಂಡನ್ ಪ್ರವಾಸಕಥನ’ವನ್ನು ನೆನಪಿಸಿಕೊಂಡು ಪರಸ್ಪರರ ನೆನಪುಗಳನ್ನು ಹೋಲಿಕೆ ಮಾಡುತ್ತಿದ್ದರು. ’ಲಂಡನ್ ಪ್ರವಾಸ’ದ ನಾಲ್ಕನೆಯ ಭಾಗವನ್ನು ’ಮಾವುಕಳುವಾಗಿ-ಅಣ್ತಮ್ಮತನ್ನಅತಿಎಚ್ಚರಿಕೆಯಮೌಢ್ಯದಿಂದ-ತಪ್ಪಿತಸ್ಥನೆಂದೊಪ್ಪಿದ್ದ’ ಸಂದರ್ಭದಲ್ಲಿ ಅಣ್ತಮ್ಮನೇ ಹರಿದು ಹಾಕಿರಬಹುದು ಎಂದು ಎಲ್ಲರೂ ಭಾವಿಸಿದ್ದರು. "ಅನಕ್ಷರಸ್ಥರು ಓದುವ ಕ್ರಮವು ಓದಲಿರುವ ಪಠ್ಯವನ್ನು ಹರಿವ ಕ್ರಿಯೆಯಲ್ಲಿದೆ," ಎಂದು ಇಂಗ್ಲೀಷಿನಲ್ಲಿ ಉವಾಚಿಸಿದ್ದ ಬಿಡಾ, ಅದನ್ನು ಕನ್ನಡಕ್ಕೆ ತರ್ಜುಮೆ ಮಾಡಲಾಗದೆ ತಾನೂ ಕನ್ನಡನಕ್ಷರಸ್ಥ ಎಂದು ಸಾಬೀತು ಪಡಿಸಿದ್ದ. ಅದೇ ದಿನ ಸಾಯಂಕಾಲ ಅಣ್ತಮ್ಮನ ಮೂರನೆಯ ಅಥವ ನಾಲ್ಕನೆಯ ಮಗಳು ಬೋಂಡಾ ತಿನ್ನುತ್ತಿದ್ದಾಗ, ಅದನ್ನು ಕಟ್ಟಲಾಗಿದ್ದ ಪೊಟ್ಟಣದ ಕಾಗದದಲ್ಲಿ ಸುಂದರ ದುಂಡನೆಯ ಅಕ್ಷರಗಳಲ್ಲಿ ಲಂಡನ್ನಿನ ನಾಲ್ಕನೆಯ ಭಾಗವು ಸಿಕ್ಕಿತ್ತು, ಅನೇಖನಿಗೆ. ಆತ ಚಕಚಕನೆ ಓದಿ, ಎಲ್ಲರಿಗೂ ಓದಿ ಹೇಳಿ, ಕೆಲವರಿಗೆ (ಅಂದರೆ ’ಬಹುತೇಕರಿಗೆ’ ಎಂದರ್ಥ) ಅಲ್ಲಿನ ಖನ್ನಡ ಪದಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಹೇಳಿದ್ದ. ಕ್ಷೋಭೆಗೊಂಡಾಗ, ತಲೆನೋವು ಬರಿಸಿಕೊಂಡಾಗ ಅನೇಖ ’ಕ’ವನ್ನು ’ಖ’ಗೊಳಿಸುವ ಮರೆತುಹೋದ ಅಂಶವನ್ನು ನೆನಪಿಸುವುದು ಇಲ್ಲಿ ಅತಿ ಮು’ಕ್ಯ’!  ನಾಲ್ಕನೆಯ ಅಧ್ಯಾಯವನ್ನೊಳಗೊಂಡಿದ್ದ ಪ್ರವಾಸಕಥನವು ಮಾರನೇ ದಿನ ಕೇವಲ ಸ್ವಚ್ಛ ಬಿಳಿಯ ಕಾಗದವಾಗಿಬಿಟ್ಟಿತ್ತು, ಮೊದಲು ಮೂರು ಅಧ್ಯಾಯಗಳಂತೆ. ವ್ಯತ್ಯಾಸವಿಷ್ಟೇ, ಬೋಂಡದ ಎಣ್ಣೆಯ ಕಲೆಯು ಮಾತ್ರ ಹಾಗೇ ಉಳಿದಿತ್ತು, ಆದರೆ ಎಣ್ಣೆ ಮತ್ತು ಕಾಗದದ ನಡುವೆ ಸಿಲುಕಿಕೊಂಡಿದ್ದ ಅಕ್ಷರಗಳು ಮಾತ್ರ ಮಾಯವಾಗಿದ್ದವು! ಎಂದಿನಂತೆ ಅಕ್ಷರಗಳು ಮಾಯವಾದುದರ ಬಗ್ಗೆ ಅಚ್ಚರಿಪಟ್ಟವರೆಲ್ಲರೂ, ಎಣ್ಣೆಯ ಕಲೆ ಹಾಗೇ ಉಳಿದದ್ದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಅಕ್ಷರಶಃ ಯಾರೂ ಕಾಗದದ ಮೇಲಿನ ಎಣ್ಣೆಯ(ವಿಷಯವ)ನ್ನು ತಲೆಗೆ ಹಚ್ಚಿಕೊಳ್ಳಲಿಲ್ಲ.    
 
ಓದುಗರಿಗೆ ನೆನಪಿರಬೇಕು, ೧೯೮೮ರ ಪರಿಷತ್ತಿನಿಂದ ಬರೆಯಲಾದ ಪತ್ರಗಳಿಗೆ ಬಂದ ಉತ್ತರಗಳು ಇಪ್ಪತ್ತನಾಲ್ಕು ಗಂಟೆಯೊಳಗೆ ಮಾಯವಾಗುತ್ತಿದ್ದವು ಅಥವ ಇಮರಿಹೋಗುತ್ತಿದ್ದವು. ಯಾವ ಗೊತ್ತಿರುವ ಟೈಪಿಂಗ್ ಮಷೀನಿನ ಅಕ್ಷರಗಳನ್ನೂ ಹೋಲದಂತಹ ಆ ಅಕ್ಷರಗಳು ಬಂದ ದಿನ ಆಕರ್ಷಕವಾಗಿಯೂ, ಸ್ಪಷ್ಟವಾಗಿಯೂ ಇದ್ದು, ಸಂಜೆಯಾದಂತೆಲ್ಲ ಕ್ರಮೇಣ ಝೂಮ್ ಔಟ್ ಆದಂತೆ ಕಾಗದದೊಳಕ್ಕೆ ಇಮರಿಹೋಗುತ್ತಿದ್ದವು. ನಾಳೆ ಬೆಳಿಗ್ಗೆಯಷ್ಟೊತ್ತಿಗೆ ಲಂಡನ್ ಪ್ರವಾಸವು ಟೈಪ್ ಆಗಿದ್ದ ಪತ್ರಗಳೆಲ್ಲ ಹೊಸದಾಗಿ ಅಂಗಡಿಯಿಂದ ತರಲಾದ ಬಾಂಡ್ ಪೇಪರುಗಳಂತೆ ನಳನಳಿಸುತ್ತಿದ್ದವು. ಮೊದಲ ದಿನ ಓದಿದವರಿಗೆ ಮಾತ್ರ ಅಸ್ತಿತ್ವದಲ್ಲಿತ್ತು ಲಂಡನ್ ಪ್ರವಾಸಕಥನ. ಅವರುಗಳು ನೆನಪಿಟ್ಟುಕೊಂಡಷ್ಟೇ, ಕೊಂಡದ್ದೇ ಆ ಕಥನದ ಒಟ್ಟಾರೆ ರೂಪುರೇಷೆಯೂ ಆಗಿತ್ತು. ಅನೇಖ ಮತ್ತು ಮಮಾರು ಆ ನಾಲ್ಕು ಕಂತುಗಳ ಪ್ರವಾಸವನ್ನು ಓದಿದಾಗ ಗಮನಿಸಿದ್ದ ಒಂದಂಶವೆಂದರೆ, ಮೊದಲೆರೆಡು ಅಧ್ಯಾಯಗಳು ೨೦೦೫ರಲ್ಲಿ ಬರೆಯಲಾಗಿದ್ದು, ಮಿಕ್ಕೆರೆಡು ಅಧ್ಯಾಯಗಳು ೨೦೦೮ರಲ್ಲಿ ಮೂಡಿಬಂದಿದ್ದವು! "ಇದು ಪರ್ವಾಗಿಲ್ಲ. ಲಂಡನ್ನಿಗೆ ಹತ್ತುದಿನ ಹೋಗಿ ಬಂದು ಹತ್ತು ವರ್ಷ ಪಾಠ ಮಾಡುವಂತೆ ಕಾಣುತ್ತಾರಲ್ಲ ನಮ್ಮ ಬಾಯ್ಸ್ ಕಲಾಶಾಲೆಯ ಕಲಾಇತಿಹಾಸದ ಪ್ರಾಧ್ಯಾಪಕಿ ಡಡಕ್ಟರ್ ಚೋಮ," ಎಂದು ತಮಾಷೆ ಮಾಡಿದ್ದರು ಬಿಡಾ ಮತ್ತು ಮಮಾ. ಡಾಕ್ಟರೇಟ್ ಪಡೆದ ನಂತರ ಪೋಸ್ಟ್-ಡಾಕ್ಟೋರಲ್ ಅಧ್ಯಯನ ಕೈಗೊಂಡಿದ್ದ ಮೇಡಂ ಚೋಮ, "ನಾನು ಎರಡನೇ ಡಾಕ್ಟರೇಟ್ ಪಡೆಯುತ್ತಿದ್ದೇನೆ," ಎಂದಿದ್ದರು. ’ಎರಡು ಡಾಕ್ಟರ್ ಸೇರಿ ’ಡಡಾಕ್ಟರ್’ ಆಗಿಬಿಟ್ಟಿತ್ತು!
 
ಬೆಳಿಗ್ಗೆಯ ಹೊತ್ತು ಚಿತ್ರರಚನೆಯ ಅಭ್ಯಾಸದಲ್ಲಿ, ದೃಶ್ಯಗಳನ್ನು ಕುರಿತಾದ ಚಿಂತನೆಗೆ ಹೆಚ್ಚು ಅವಕಾಶವಿರುತ್ತಿರಲಿಲ್ಲ. ರಾತ್ರಿಯ ಸುಸ್ತಿನಲ್ಲಿ ಬರೀ ಚಿತ್ರಗಳ ಚಿಂತನೆಯೇ! ಮೇಷ್ಟ್ರು ರಾತ್ರಿಯ ಹೊತ್ತಿನಲ್ಲಿ ಹುಡುಗರನ್ನು ಕಲೆಯ ಕೆಲಸ ಮಾಡಲು ಅನುಮತಿ ನೀಡಿದ್ದರಷ್ಟೇ. "ಅದೆಲ್ಲಾ ಸ್ಟಂಟು ಗುರೂ. ನಿಮ್ಮ ಮೇಷ್ಟ್ರಿಗೆ ಕೋಟಿಗಟ್ಟಲೆ ಬೆಲೆಬಾಳತೊಡಗಿರುವ ಪರಿಷತ್ತಿನ ಕಟ್ಟಡವನ್ನು ಹತ್ತಾರು ಕಟ್ಟಾಳುಗಳು ರಾತ್ರಿಯೆಲ್ಲಾ ಕಾವಲಿರಲಿ ಎಂಬ ಹುನ್ನಾರ ಅಡಗಿದೆ ಈ ಅನುಮತಿಯ ಹಿಂದೆ," ಎಂದಿದ್ದ ವಿಕ್ಷಿಪತ. ಮಹಾನ್ ಒರಟನಾದ ಈತ ಬಾಯ್ಸ್ ಕಲಾಶಾಲೆಯವನಾದರೂ ಯಾವಾಗಲೂ ಪರಿಷತ್ತಿನಲ್ಲೇ ಇರುತ್ತಿದ್ದ. ಒಂದು ದಿನ ರಾತ್ರಿಯ ಹೊತ್ತು ಎಲ್ಲರೂ ಕುಳಿತು ಲಂಡನ್ ಪ್ರವಾಸಕಥನದ ನಾಲ್ಕನೆಯ ಅಧ್ಯಯನವನ್ನು ಮೆಲುಕುಹಾಕತೊಡಗಿದ್ದರು. ಆ ಮೆಲುಕಿನ ಸಮ್ಮಿಶ್ರಣದಲ್ಲಿ ಕಡಲೆಬೀಜ, ಪಾನಿಪುರಿ, ಕೂರ್ಗಿ ಪೋರ್ಕ್ ಎಲ್ಲವೂ ಹಿತಮಿತವಾಗಿ ಬೆರೆತುಹೋಗಿದ್ದವು. ಹಿತಮಿತ ಏಕೆಂದರೆ ಮಮಾನ ’ಗಳಸ್ಯ’ ಗೆಳೆಯ ಅರು ಚಂಗಪ್ಪ ಎಲ್ಲರಿಗೂ ಸಾಲದೆಂದು ಗೊತ್ತಿದ್ದರೂ ಮೂರ್ನಾಲ್ಕು ಕೇಜಿಯ ದೊಡ್ಡ ಜಾರಿಯಲ್ಲಿ ಪೋರ್ಕ್ ಉಪ್ಪಿನಕಾಯಿಯನ್ನು ತಂದುಕೊಟ್ಟಿದ್ದ, "ತಿನ್ರೋ, ಹಂದಿ ನನ್ ಮಕ್ಳ ಬಿಟ್ಟಿ ಕೂಳು ಸಿಕ್ಕಿದ್ರೆ ಸಾಕು, ಹಂದಿಗಳ್ ತರ ತಿಂತೀರಲ್ಲ," ಎಂದು ದೋಸ್ತಿಯಲ್ಲಿ ಬೈಯುತ್ತ! ನಾಲ್ಕನೆಯ ಭಾಗದ ಲಂಡನ್ ಪ್ರವಾಸಕಥನದ ಮೆಲುಕು ಮುಂದುವರೆದಿತ್ತು. (ಓದಿ: www.sampada.net/article/7503)//
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.