ನೆನಪಿನ ಚಿತ್ರಕಲಾ ಶಾಲೆ: ಭಾಗ ೭ ನಿಗೂಢ ಬಿ.ಬಿ.ಎಂ ಕ್ಷಣ

5

 (೧೮)
 
ರಾತ್ರಿ ಏಳೂವರೆಯ ಸಮಯ. ಪ್ರಶ್ನಾಮೂರ್ತಿಯ ಬಗ್ಗೆ ಚಿಂತಿಸುತ್ತ, ’ನೇತಾಡುತ್ತಿರುವ’ ಪ್ರಶ್ನಾಮೂರ್ತಿಯನ್ನು ಕುರಿತು ’ತೂಗಾಡುತ್ತಿದ’ ಪ್ರಶ್ನೆಗೆ ಉತ್ತರ ಹುಡುಕುತ್ತ, ನಿದ್ರಿಸುತ್ತಿದ್ದಂತಿದ್ದ ಅಥವ ಶವದಂತೆ, ವಿಕ್ರಮನ ಭುಜದ ಮೇಲಿನ ಬೇತಾಳನಂತಿದ್ದ ಪ್ರಶ್ನೆಯ ಸ್ಕೆಚ್ ಬಿಡಿಸುತ್ತ, ಆತನ ಮೆಕೆಟ್ ಅನ್ನು (ಮಣ್ಣಿನ ಕರಡು) ರಚಿಸುತ್ತ ಇದ್ದ ಸುಮಾರು ಹತ್ತದಿನೈದು ಮಂದಿ ಒಮ್ಮೆಲೆ ಮೌನವಾಗಿಬಿಟ್ಟರು. ಆಗಾಗ, ಎಲ್ಲೆಲ್ಲಿಯೂ, ಯಾವಾಗಲೂ ಆಗುವ ಕ್ರಿಯೆ ಇದು. ಒಮ್ಮೆಲೆ ಎಲ್ಲವೂ ಮೌನವಾಗಿಬಿಡುತ್ತದೆ. ಮಾತಾಡುತ್ತಿರುವವರೆಲ್ಲರೂ ಎನೋ ಆಲೌಕಿಕ ಒಪ್ಪಂದಕ್ಕೆ ಬಂದಂತೆ ಸುಮ್ಮನಾಗಿಬಿಡುತ್ತಾರೆ. ಆಮೇಲೆ, ಕೆಲವೇ ಕ್ಷಣಗಳಲ್ಲಿ ಆ ಮೌನದೊಳಗಿನ ಆಲೌಕಿಕ ಭಾವವನ್ನು ಆದಷ್ಟೂ ಬೇಗ ಅಳಿಸಿಹಾಕಿಬಿಡಬೇಕೆಂದು, ಜೋರಾಗಿ ನಗತೊಡಗುತ್ತಾರೆ, ಸ್ಥಬ್ದತೆಯ ದಿವ್ಯಾನುಭವಕ್ಕೆ ಸದ್ದಿನ ಗದ್ದಲವೆಬ್ಬಿಸುತ್ತ.


 
ಬಿಡಾ ಅಣ್ತಮ್ಮನ ಮನೆಯ(ವರ) ಕಷ್ಟಸುಖಗಳನ್ನು ವಿಚಾರಿಸುತ್ತ ಯಜಮಾನಪ್ಪನಂತೆ ಕುಳಿತಿದ್ದ ಸಮಯವದು, ಮಮಾ ಯಾರೋ ಒಬ್ಬರ ವ್ಯಕ್ತಿತ್ವವನ್ನು ತನ್ನ ಮೇಲೆ ಆಹ್ವಾನಿಸಿಕೊಂಡಂತೆ ನಟಿಸುತ್ತ ವಾರೆಗಣ್ಣಿನಲ್ಲೇ ಪ್ರಶ್ನೆಯನ್ನು ಅಪರಾಧೀ ಭಾವದಿಂದ ಗಮನಿಸುತ್ತಿರುವ ಶೈಲಿಯನ್ನು ಯಾರೂ ಗಮನಿಸದಿರುವುದರಿಂದ ತನ್ನದೇ ಶೈಲಿಯಲ್ಲಿ ಮೆಲಾಂಕಲಿಕ್ ಮೂಡಿಗೆ ಹೋದ ಕ್ಷಣವದು, ಮಲ್ಲುಮೋಗನ ಪ್ರಶ್ನೆಯ ಮೂರ್ತಿಯನ್ನು ಕ್ಲೇಯಲ್ಲಿ ಇನ್ನೇನು ದಾಖಲೆಯ ಸಮಯದಲ್ಲೇ ಮುಗಿಸಿಬಿಟ್ಟೆನೆಂದುಕೊಳ್ಳುತ್ತಿದ್ದ ಕಾಲವದು, ಅಣ್ತಮ್ಮನಿಗೆ ಹುಡುಗರ ಸದರವು ತನ್ನೆಲ್ಲಾ ಇತಿಮಿತಿಪರಿಮಿತಿಗಡಿಚೌಕಟ್ಟುಅಂತ್ಯಗಳನ್ನೂ ದಾಟಿದ್ದಾಯಿತು ಎಂದೆನಿಸುತ್ತಿದ್ದ ಅರಿವಿನ ಹೊತ್ತದಾಗಿತ್ತದು. ಎಲ್ಲರೂ ಏನನ್ನೋ ನೆನಪಿಸಿಕೊಂಡವರಂತೆ ಅನೇಖನನ್ನು ನೋಡುತ್ತಿದ್ದರು, ಇಲ್ಲವೆ ಗಮನಿಸುತ್ತಿದ್ದರು-ಯಾವುದೋ ನಿಗೂಢವನ್ನು ಅಪೇಕ್ಷಿಸುವಂತೆ ಅಥವಾ ನಿರೀಕ್ಷಿಸುತ್ತಿರುವಂತೆ.
 
ಸಂಜೆ ನಾಲ್ಕಕ್ಕೆ ಎಲ್ಲ ವಿದ್ಯಾರ್ಥಿಗಳೂ ಮನೆಗೆ ಹೋಗಿ, ಅವರಲ್ಲಿ ಕೆಲವರು ಊಟ ಮುಗಿಸಿ ವಾಪಸ್ ಪರಿಷತ್ತಿನ ಗ್ರಾಫಿಕ್ ವಿಭಾಗದಲ್ಲಿ ರಾತ್ರಿಯೆಲ್ಲಾ ಪ್ರಿಂಟ್ ತೆಗೆವ ಕೆಲಸಕ್ಕೆ ಬರುವುದು ವಾಡಿಕೆಯಾಗಿಬಿಟ್ಟಿತ್ತು. ಹೊರರಾಜ್ಯದ ಕಲಾಗುರುಗಳು ಕೆಲವರು ಈಗಿನ ಕ್ಯಾಂಟೀನ್ ಹಾಗೂ ಈಗಿನ ಗಂಡಸರ ಟಾಯ್ಲೆಟ್ ನಡುವಣ ಕೋಣೆಯಲ್ಲಿ ಆಗ ವಾಸಿಸುತ್ತಿದ್ದುದ್ದರಿಂದ ಯಾವುದೇ ವಾಸನೆಗಳಿಂದ ಆಗವರುಗಳಿಗೆ ಬಾಧೆಯಿರಲಿಲ್ಲ. ಹಾಗಾಗಬೇಕಿದ್ದಲ್ಲಿ ಕಾಲವು ಏಕಮುಖಿಯಾಗಿ ಚಲಿಸುವುದನ್ನು ನಿಲ್ಲಿಸಬೇಕಿತ್ತು, ಅಥವ ಹಾಗೆಂದು ಭಾವಿಸುವವರು ಹಾಗಲ್ಲವೆಂದು ಭಾವಿಸಬೇಕಿತ್ತು. ಈಗ ಆ ಕೋಣೆಯನ್ನು ತೋರಿಸಿ, ’ನೋಡಿ ನಮ್ಮ ಗುರುಗಳಿದ್ದ ಕೋಣೆಯಿದು’ ಎಂದರೆ, ಮೊದಲು ಗಮನಕ್ಕೆ ಬೀಳುವುದು ಆ ಕೋಣೆಯಲ್ಲ, ಬದಲಿಗೆ ಅತ್ತ ಬದಿಯ ಗಂಡಸರ ಶೌಚಾಲಯದ ವಾಸನೆ ಇತ್ತ ಬದಿಯ ಕ್ಯಾಂಟೀನ್ ತಿಂಡಿಯ ಗಮ್ಮತ್ತು-ಅದೂ ಒಮ್ಮೆಲೆ. ದೃಶ್ಯಗಳನ್ನು ನೆನೆಸಿಕೊಂಡಷ್ಟು ಸುಲಭವಾಗಿ ವಾಸನೆಗಳನ್ನು ಮನಸ್ಸಿನ ಮೂಗಿಗೆ ತಂದುಕೊಳ್ಳುವುದು ಅಷ್ಟು ಸುಲಭದ ಮಾತಲ್ಲವಾದ್ದರಿಂದ, ಬದುಕಿನ ವಾಸನೆಗಳ ಸಹವಾಸವನ್ನು ನಿಮ್ಮಗಳಿಗೇ ಬಿಟ್ಟಿಬಿಡುತ್ತೇನೆ, ಎಂದಿದ್ದಳು ’ಚಾರ್ವಾಕಿ’ ಮುಂದೊಮ್ಮೆ, ಮತ್ಯಾವದೋ ವಿಷಯದ ವಾಸನೆಯನ್ನು ಕುರಿತು. ಅದನ್ನು ಪ್ರಸ್ತುತ ಸಂದರ್ಭಕ್ಕೂ ಆರೋಪಿಸಿಕೊಳ್ಳಬಹುದೆಂಬ ವಾಸನೆ ಹಿಡಿದು, ಅಕೆ ’ಆಗೀಗ’ ಹೇಳಿದ್ದನ್ನು ಈಗ ನಿಮಗೆ ತಿಳಿಸುತ್ತಿರುವೆ ಅಷ್ಟೇ.
  ಆಗೆಲ್ಲ ಪರಿಷತ್ತಿನ ಪಶ್ಚಿಮಕ್ಕಿದ್ದ ಈ ’ಗುರುಗಳ ರೂಮಿನ’ ಸುತ್ತಲಿನ ದಟ್ಟಕಾಡಿನಂತಿದ್ದ ಮರಗಿಡಬಳ್ಳಿಯಿಂದಾಗಿ ೧೯೮೦ರ ದಶಕದಲ್ಲಿ ’ಗಂಡಸರ ಟಾಯ್ಲೆಟ್’ ಎಂಬ ಪರಿಕಲ್ಪನೆಯೇ ಹೊಸದಾಗಿತ್ತು. ನಾಲ್ಕು ಗೋಡೆಗಳ ನಡುವೆ ಟಾಯ್ಲೆಟ್ ಇದ್ದಿದ್ದ ಪಕ್ಷದಲ್ಲಿ, ಅಥವ ಸರಿ ಇದ್ದ ಪಕ್ಷದಲ್ಲಿ ಸುತ್ತಲಿನ ದಟ್ಟ ಲಾಂಟನ, ಕಾಂಗ್ರೆಸ್ ಗಿಡ ಮುಂತಾದುವೆಲ್ಲ ಸಂಪದ್ಭರಿತವಾಗಿ ಬೆಳೆದದ್ದಾದರೂ ಹೇಗೆ? ಸ್ವಲ್ಪ ಸಾಮಾನ್ಯಜ್ಞಾನವನ್ನು ’ವಿಸರ್ಜಿಸಿ’ ನೋಡಿ. ’ಗೋಡೆಗಳಿದ್ರೆ ವಿಸರ್ಜನೆ ಸುಲಭವಲ್ಲ, ಸಾಕಷ್ಟು ಫ್ರೀಡಮ್ ಇರೋಲ್ಲ. ಅದಕ್ಕಾದ್ರೂ ಬಯಲಿನ ಸ್ವಾತಂತ್ರ್ಯ ಬೇಡವೆ?’ ಎಂದಿದ್ದ ಗೆಳೆಯ ಗೋಪ್ರಾಜ, ಶುದ್ಧತೆ, ವಿಸರ್ಜನೆ ಮತ್ತು ಫಲವತ್ತಿಕೆಗಳು ಒಟ್ಟಾಗಿ ಪರಿಷತ್ತಿನ ಆವರಣದ ಪಶ್ಚಿಮ ಮೂಲೆಯಲ್ಲಿ ಸಮೃದ್ಧವಾದುದಕ್ಕೆ ಒಂದು ಸಾಲಿನ ವಿವರವನ್ನು ನೀಡುವಂತೆ.
 
ರಾತ್ರಿಯೆಲ್ಲಾ ರೇಡಿಯೋ ಹಾಕಿಕೊಂಡು, ಇಲ್ಲವೇ ಸಾವಿರದೊಂದನೇ ಸಲ ಅದೇ ತೇಝಾಬ್ ಟೇಪನ್ನು, ಅದು ಕೇಳಲು ಇದ್ದ ಒಂದೇ ಒಂದು ಟೇಪ್ ರೆಕಾರ್ಡರಿನ ಒಡೆಯ ’ಕಬಾಬ’ನ ಕರುಣೆಯಿಂದಾಗಿ ಊರ್ಜಿತಗೊಂಡಾಗ, ಸಂಗೀತದೊಂದಿಗೆ ಗ್ರಾಫಿಕ್ ಪ್ರಿಂಟ್ ತೆಗೆವ ಸೊಗಸೇ ಸೊಗಸು. ಆಗಾಗ ಟೀ ಮಾಡಿಕೊಳ್ಳುತ್ತಿದ್ದೆವು, ಎರೆಡು ಟೀಗಳನ್ನು ಕುಡಿವ ನಡುವಿನ ಸಮಯಗಳಲ್ಲಿ. ಅರ್ಥವಾಗದ ರೇಡಿಯೋ ಛಾನೆಲ್ಲುಗಳನ್ನೆಲ್ಲಾ ಕೇಳಿಸಿಕೊಳ್ಳುತ್ತಿದ್ದೆವೆ, ಆಕಾಶವಾಣಿಯವರು ರಾತ್ರಿ ೧೧.೫೯.೫೯ಕ್ಕೆಲ್ಲಾ ತಮ್ಮ ಶಬ್ಧದಂಗಡಿ ಮುಚ್ಚಿಕೊಂಡು ಹೋಗಿಬಿಟ್ಟಿರುವುದರಿಂದ. ಇದರಿಂದಾದ ಲಾಭವೆಂದರೆ, ಜರ್ಮನ್, ಫ್ರೆಂಚ್, ಸ್ಪಾನಿಷ್ ಭಾಷೆಗಳನ್ನೇನೂ ಕಲಿಯಲಿಲ್ಲ, ಆದರೆ ಅವುಗಳನ್ನು ಕೇಳಿ ಬಿದ್ದು ಬಿದ್ದು ನಗುತ್ತಿದ್ದ ನಾವ್ಗಳು ಕ್ರಮೇಣ ಕೇವಲ ಸ್ಮೈಲ್ ಕೊಡುವ ಹಂತಕ್ಕೆ ನಮ್ಮ ಶಾಬ್ದಿಕ ಅನುಭವವನ್ನು ಬೆಳೆಸಿಕೊಂಡೆವು. ಹಾಗೇ ಒಂದು ದಿನ ರಾತ್ರಿಯಲ್ಲಿ, ಇಂದಿಗೂ ಗುರ್ತಿಸಲಾಗದ ಭಾಷೆಯೊಂದರ ರೇಡಿಯೋ ಪ್ರಸಾರದಲ್ಲಿ ಜಿಯಾ ಉಲ್ ಹಕ್ ಆಕಾಶದಿಂದ ಬಿದ್ದು ಸತ್ತದ್ದನ್ನು (ಆಗಸ್ಟ್ ೧೭, ೧೯೮೮) ಅರ್ಥಮಾಡಿಕೊಂಡು, ಹಾಗೆ ಮಾಡಿಕೊಂಡೆವು ಎಂಬ ಕಾರಣಕ್ಕೆ ಥ್ರಿಲ್‌ಗೊಂಡಿದ್ದೆವು. ಇನ್ನೂ ಏರೋಪ್ಲೇನನ್ನು ಹತ್ತದಿದ್ದರಿಂದ, ಅದರ ಕ್ರಾಷ್ ಹೇಗಿರಬಹುದೆಂಬ ದುರಂತದ ಅಂದಾಜು ನಮಗಿನ್ನೂ ಆಗಿರಲಿಲ್ಲವಲ್ಲ.
 
ಅಂತಲ್ಲಿ, ರಾತ್ರಿ ಹೊತ್ತಿನ ಸ್ವಾದಗಳಲ್ಲಿ, ಪರಿಷತ್ತಿನ ವಿದ್ಯಾರ್ಥಿಗಳಿಗೇ ಅನನ್ಯವಾಗಿದ್ದದ್ದು ಅನೇಖನ ಅನೇಕಾನೇಕ ಪ್ರಸಂಗ(ಗಳು). ಅನೇಖ ಅಪ್ಪಿತಪ್ಪಿ ಕಲಾಶಾಲೆ ಸೇರಿದ್ದಾತ. ’ಅಪ್ಪಿತಪ್ಪಿ ಭೂಮಿಗೆ ಬಂದವ ನಾನು’ ಎಂಬುದು ಆತನ ಬಲವಾದ ನಂಬಿಕೆಯಾಗಿದ್ದರೂ ಸಹ, ’ಅನ್ಯಗ್ರಹಜೀವಿಗಳಿಗೂ (ಹಾಲಿವುಡ್ಡಿನ) ಆತನಿಗೂ ಆಗ ಇದ್ದ ಒಂದೇ ಸಾಮ್ಯತೆ ಎಂದರೆ ದೃಗ್ಗೋಚರ ಹೋಲಿಕೆಯದ್ದು’ ಎಂದು ವೀರಾ ತಮಾಷೆ ಬೇರೆ ಮಾಡುತ್ತಿದ್ದ. ಆದರೆ ವಿಷಯ ಗಂಭೀರವಾಗಿತ್ತು ಆತನಿಗೆ, ಮಿಕ್ಕವರಿಗೆ ಕುತೂಹಲಕರವಾಗಿತ್ತು.
 
(೧೯)
 
ಪ್ರಸ್ತುತ ಪ್ರಶ್ನೆಯು ನಿರಂತರವಾಗಿ ಎಂಬಂತೆ ಎಂಟಡಿ ಮೇಲಿನ, ಎರಡು ಸ್ಟುಡಿಯೋಗಳ ನಡುವಣ ಕಿಂಡಿಯಲ್ಲಿ ನಂಬಲಸದಳವಾದ ರೀತಿಯಲ್ಲಿ ತನ್ನ ಝೀರೋ ಫಿಗರನ್ನೇ ಸಿಲುಕಿಸಿಕೊಂಡು ಎರಡು ಗಂಟೆ ಕಾಲವಾಗಿಬಿಟ್ಟಿತ್ತು. ಮಾವಿನ ಹಣ್ಣಿನ ಆಸೆಯ ಫಲವದು. ಹಾಗಿದ್ದರೂ, ಆತನಿಗಿಂತಲೂ ಎಲ್ಲರ ಆಸಕ್ತಿಯು ಅನೇಖನ ಕಡೆಗೆ ತಿರುಗಲು ಕಾರಣವಿತ್ತು. ಕೆಲವು ರಾತ್ರಿಗಳಂದು ಅನೇಖ ತಲೆಯನೋವು ಎಂದು ತಲೆಹಿಡಿದು ಕುಳಿತುಬಿಡುತ್ತಿದ್ದ. ’ಜಗ್ಗೇಶ್ ಮೈಕೈಯೆಲ್ಲಾ ಹೆಡ್ಡೇಕು ಎಂದಂತಿದು, ಇಲ್ಲದ ತಲೆ ಹಿಡಿದು ಕುಳಿತುಕೊಳ್ಳುತ್ತಾನೆ ಅನೇಖ’ ಎನ್ನುತ್ತಿದ್ದ ವೀರಾ. ತಲೆನೋವು ಎಂಬ ನೋವಿಗೆ ಆತ ಮಿಡಿಯುತ್ತಿರಲಿಲ್ಲ, ಅದು ಎಲ್ಲಾ ಬಿಟ್ಟು ಈಗ ಬಂದಿತಲ್ಲಾ ಎಂದು ತಲೆಕೆಡಿಸಿಕೊಳ್ಳುವವನಂತೆ ತಲೆಹಿಡಿದು ಕುಳಿತುಬಿಡುತ್ತಿದ್ದ. ಆಗ ಸುತ್ತಮುತ್ತಲೂ ವೀರಾ ಇದ್ದ ಪಕ್ಷದಲ್ಲಿ, ಅಲ್ಲಿ ’ಗುರುಗಳ ರೂಮಿನಲ್ಲಿ’ ಟೀ ಮಾಡಲು ಇರಿಸಿದ್ದದ್ದೆಲ್ಲವನ್ನೂ ಬೆರೆಸಿ, ಕಷಾಯವೆಂಬ ವಿಷವನ್ನು ಒಮ್ಮೆ ಅನೇಖನಿಗೆ ಕುಡಿಸಿಬಿಡುತ್ತಿದ್ದ. ’ಮಗನೆ, ತಲೆಗೆ ಮಾತ್ರ ನಿರ್ದಿಷ್ಟವಾಗಿರುವ ಈ ನೋವು ಇಡೀ ದೇಹವನ್ನೇ ವ್ಯಾಪಿಸಿಬಿಡಲಿ ಅಂತ ಅಲ್ಲವೆ ನಿನ್ನ ಈ ಉಪಾಯ’ ಎಂದಿದ್ದ ಅನೇಖ, ನಗುತ್ತ, ನಂತರ ದಿನಗಳಲ್ಲಿ.
 
ಅನೇಖನ ತಲೆನೋವು ಎಲ್ಲರಿಗೂ ಗೋಚರಿಸುವಂತಹ ಹೋಳಿಹುಣ್ಣಿಮೆಯಾಗಿತ್ತು, ಹಾಗೆ ಬಿದ್ದು ಒದ್ದಾಡಿಬಿಡುತ್ತಿದ್ದ ನೆಲದ ಮೇಲೆ. ಆತ ಒದ್ದಾಡುವುದನ್ನು ನೋಡಲಿಚ್ಛಿಸದವರೂ ಸಹ, ಅದರ ನಂತರದ ಒಂದು ಗಂಟೆಕಾಲದಲ್ಲಿ ಆತ ಏನು ಮಾಡುತ್ತಾನೆ ಎಂಬುದನ್ನು ನೋಡಲು ಮಾತ್ರ ಆಗಿನ ಕಾಲಕ್ಕೇ ನೂರು ರೂಪಾಯಿ ಕೊಡಲು ತಯಾರಾಗಿಬಿಟ್ಟಿರುತ್ತಿದ್ದರು. ಅದೂ ಅಣ್ಣಾವ್ರ ಸಿನೆಮಾದ ಮೊದಲ ದಿನದ ಮೊದಲ ಶೋವಿನ ಗಾಂಧೀ ಕ್ಲಾಸಿನ ಬ್ಲಾಕ್ ಟಿಕೆಟ್ ಬೆಲೆಯೇ ಗೀತಾಂಜಲಿ ಟಾಕೀಸಿನಲ್ಲಿ ಐವತ್ತು ರೂಪಾಯಿ ಇದ್ದ ದಿನಗಳವು. ಆದರೆ ಆತನ ತಲೆಯನೋವಿನ ಮರುಘಳಿಗೆಯನ್ನು ಕಂಡವರ‍್ಯಾರೂ ಇರಲಿಲ್ಲ, ಇದ್ದಲ್ಲಿ ಅದನ್ನು ಕುರಿತು ಅವರು ಯಾರೂ ಬಾಯಿ ಬಿಡುತ್ತಿರಲಿಲ್ಲ.
 
ಆತನಿಗೆ ತಲೆನೋವು ಬರುತ್ತಿದ್ದುದು ಯಾವಾಗಲೂ ಕತ್ತಲಾಗಿ ಎಷ್ಟೋ ಹೊತ್ತು ಆದ ಮೇಲೆಯೇ. ಅನೇಖ ನೋವಾದಾಗಲೆಲ್ಲಾ ತಲೆಯ ಮೇಲೆ ಕೈಹೊತ್ತು ಕುಳಿತ ಅರಘಳಿಗೆಯ ನಂತರ, ಹೊಟ್ಟೆ ಹಿಡಿದು, ಪರಿಷತ್ತಿನ ಪ್ರವೇಶದ್ವಾರದ ಬಲಕ್ಕಿದ್ದ (ಈಗಲೂ ಇರುವ) ದೊಡ್ಡಾಲದ ಮರದ ಮೂಲೆಗೆ, ಶಂಕರನಾಗ್ ’ನಾಗಮಂಡಲ’ ಹಾಗೂ ಬಿ.ಬಸವಲಿಂಗಯ್ಯನವರು ’ಕುಸುಮಬಾಲೆ’ಯನ್ನಾಡಿಸಿದ ಬಂಡೆಯ ಆ ಕಡೆಗೆ ಓಡಿಬಿಡುತ್ತಿದ್ದ. ಅದು ಕಾರ್ಗತ್ತಲ ಅರ್ಧ ಎಕರೆ. ಪ್ರವೇಶದ ನಂತರ ಬಲಕ್ಕಿರುವ ಹನುಮಂತನ ದೇವಾಲಯದ ಹಿಂದಿನ ಬಂಡೆಯನ್ನು ದಾಟಿ, ಅದರ ಹಿಂದಿನ ಅರ್ಧ ಎಕರೆ ಈಗಲೂ ನಿಗೂಢಕರವೇ ಹೌದು. ಹೊರಗಿನ ಬೀದಿಯ ನಿಯಾನ್ ಬೆಳಕನ್ನೂ ತಡೆದು ನುಂಗಿಹಾಕುವ ಆಲದ ಮರವು ಅಲ್ಲಿನ ರಾತ್ರಿಯ ನಿಗೂಢತೆಗೆ ನಾಟಕೀಯತೆಯ ಹೊದಿಕೆ ಹೊದ್ದಿಸುತ್ತದೆ ಬೇರೆ. ಅದರ ಆಚೆಗಿನದ್ದೇ ಕುಮಾರ ಕೃಪ ಗೆಸ್ಟ್ ಹೌಸ್. ಅದರ ಪಕ್ಕದ್ದು ಲಲಿತ್ ಅಶೋಕ್ ಹೋಟೆಲ್ಲು.
 
ಆ ಒಂದು ಗಂಟೆ ಕಾಲ ಅನೇಖ ಏನು ಮಾಡುತ್ತಿದ್ದ, ಯಾರನ್ನಾದರೂ ಭೇಟಿ ಮಾಡುತ್ತಿದ್ದನ ಎಂಬುದು ಯಾರಿಗೂ ಗೊತ್ತಿರಲಿಲ್ಲ. ದೊಣ್ಣೆ ಹಿಡಿದ ವಾಚ್‌ಮನ್ ಸಹ ಅಲ್ಲಿ ಹೋಗಲು ಹೆದರುತ್ತಿದ್ದ. ಹುಣ್ಣಿಮೆ ಅಮಾವಾಸ್ಯೆಗಳು ಮತ್ತು ಮೆಷ್ಟ್ರು ಹೇಳುತ್ತಿದ್ದ ದಿನಗಳಂದು ವಾಚ್‌ಮನ್ ದೊಡ್ಡಯ್ಯ ಆ ಕಡೆ ಅಕ್ಷರಶಃ ತಲೆಹಾಕಿ ಮಲಗುತ್ತಿರಲಿಲ್ಲ. ಬೇರೆ ದಿಕ್ಕಿಗೇ ಆತನ ತಲೆ. ಕುಡಿದು ದಿಕ್ಕು ಗೊತ್ತಾಗದ ಅಂತಹ ಸಂದರ್ಭಗಳಲ್ಲಿ ಬೆಳಗಿನ ಜಾವದವರೆಗೂ ತಲೆ ನೆಲಕ್ಕೆ ಹಾಕುತ್ತಿರಲಿಲ್ಲ, ಗೋಡೆಗೊರಗಿಯೇ ನಿದ್ರಿಸುತ್ತಿದ್ದ. ಎಲ್ಲರಿಗೂ ಆಗೆಲ್ಲಾ ಆ ಕಗ್ಗತ್ತಲ ಮೂಲೆಯ ಕುತೂಹಲವಾದರೆ, ದೊಡ್ಡಯ್ಯನಿಗೆ ಅದರೊಂದಿಗೆ ’ಮಲಗೋದಕ್ಕೆ ಸಂಬಳ ಕೊಡಲ್ಲ ಕಾಣಯ್ಯ ನಾವುಗಳು’ ಎಂದು ಅಚಾನಕ್ಕಾಗಿ ಮಧ್ಯರಾತ್ರಿಯ ಹೊತ್ತೂ ಪ್ರತ್ಯಕ್ಷವಾಗಿಬಿಡುತ್ತಿದ್ದ ಮೇಷ್ಟ್ರ ಗಾಡಿಯ, ಮತ್ತು ಅದರೊಳಗಿರುತ್ತಿದ್ದ ಮೇಷ್ಟ್ರ ಡಬ್ಬಲ್ ಭಯ. ಎಲ್ಲರಿಗೂ ಅಲ್ಲಿ ಎನು ನಡೆಯುತ್ತದೆ ಅನೇಖ ಮಧ್ಯರಾತ್ರಿಯ ಹೊತ್ತಿನಲ್ಲಿ, ತಲೆನೋವು ಬಂದಾಗೆಲ್ಲಾ ಎಂಬ ಕುತೂಹಲಕ್ಕಿಂತಲೂ ಅಲ್ಲಿ ನಡೆಯುವ ಕ್ರಿಯೆಯು ಭಯವುಂಟು ಮಾಡುತ್ತದೋ, ಆಶ್ಚರ್ಯವೋ, ಭೀಕರವೋ, ಶಾಪಗ್ರಸ್ತವೋ ಎಂಬ ಪರಿಣಾಮದ ಬಗ್ಗೆ ಕುರೂಹಲಿಗಳಾಗಿದ್ದರೇ ಹೊರತು ಪರಿಹಾರದ ಬಗ್ಗೆಯಲ್ಲ.
 
ನಮ್ಮಲ್ಲಿ ಹೆಚ್ದ್ಚು ಓದಿಕೊಂಡಿದ್ದ ಅನೇಖ ಆ ಜಾಗವನ್ನು ಬಿ.ಬಿ.ಎಂ ಕ್ಷಣ ಎಂದು ಕರೆಯುತ್ತಿದ್ದ. ’ಬದುಕಿನ ಭೀತಿಗೆ ಮದ್ದು ದೊರಕುವ ಕ್ಷಣ’ (ಬಿಬಿಎಂ) ಎಂಬುದು ಆತನ ವಿವರಣೆಯು ಆ ಜಾಗದ ಬಗೆಗಿದ್ದ ನಿಗೂಢತೆಯನ್ನು ಇನ್ನೂ ಹೆಚ್ಚಿಸುತ್ತಿತ್ತು. ಬೆಳಿಗ್ಗೆ ಹೊತ್ತು ಅಲ್ಲಿ ರಾತ್ರಿಯ ನಿಗೂಢತೆಗೆ ಏನೂ ಸಾಕ್ಷ್ಯಗಳು ದೊರಕುತ್ತಿರಲಿಲ್ಲ. ಫಿಲ್ಮ್ ರೋಲ್ ಕೈಯಲ್ಲಿ ತೆರೆದು, ಸಿನೆಮದ ಮಾಂತ್ರಿಕತೆಗೆ ಸಾಕ್ಷ್ಯ ಹುಡುಕಾಡಿದಂತಾಗುತ್ತಿತ್ತದು, ಮೊನಾಲಿಸಳ ಭಾವಚಿತ್ರದ ಪುಸ್ತಕ ಹಿಡಿದು ಆಕೆಯ ಜನಪ್ರಿಯತೆಗೆ ಕಾರಣವೇನೆಂದು ತಡಕಾಡಿದಂತಾಗುತ್ತಿತ್ತದು. ಯಾರೋ ವಿವರಿಸಬೇಕು, ನಾವು ಅರ್ಥೈಸಿಕೊಳ್ಳಬೇಕು ಎಂಬಂತಿತ್ತು ಆಗೆಲ್ಲ ನಮ್ಮಗಳ ಶೋಧನಾಗುಣ. ಅಸಲಿ ಶೋಧನೆಯ ಅವಕಾಶವು ಅನೇಖರಂತಹವರಿಗೆ ಮಾತ್ರ ಆಜನ್ಮಹಕ್ಕು ಎಂಬಂತಾಗಿ ಹೋಗಿತ್ತು.
 
ತಲೆನೋವು ಬಂದ ಒಂದು ಘಳಿಗೆಯ ನಂತರ ಅನೇಖ ರಾಜಾರೋಷವಾಗಿ ಆ ಕಗ್ಗತ್ತಲಿನಿಂದ ಹೊರಬರುತ್ತಿದ್ದ. ಆತನ ಮುಖದಲ್ಲೊಂದು ಹೊಳಪು ಇರುತ್ತಿತ್ತು. ’ಬ್ಯೂಟಿ ಪಾರ್ಲರಿನಿಂದ ಹಿಂದಿರುಗಿದಂತೆ ಇರುತ್ತೆ ಆವ್ನ ಮುಖ’ ಎಂದು ವೀರಾ ಕಿಚಾಯಿಸುತ್ತಿದ್ದ ಆ ಮೊಗವನ್ನು ಎಂದರೆ, ಅವನಂತಹ ಸಿನಿಕನೇ ಆ ಮುಖದ ಹೊಳಪನ್ನು ಒಪ್ಪಿದ್ದ ಎಂದಂತಾಯಿತು. ಬಂದನಂತರ ಯಾರು ಏನು ಹೇಳಿದರೂ ಅನೇಖ ಮಾಡಿಬಿಡುತ್ತಿದ್ದ. ತಾನು ಜೀವಂತವಾಗಿರುವುದೇ ಎಂತಹ ಭಾಗ್ಯ ಎಂಬ ಮಾತು, ಭಾವವು ಆತನಲ್ಲಿ ಮನೆಮಾಡಿರುತ್ತಿತ್ತು. ಅನೇಖನನ್ನು ಒರಟನನ್ನಾಗಿಸಬೇಕೆಂಬ ಗೆಳೆಯರ ಒರಟು ಪ್ರಯತ್ನಗಳೆಲ್ಲವೂ ಒಡ್ಡೊಡ್ಡಾಗಿ ಪರಿಗಣಿತವಾಗಿಬಿಡುತ್ತಿದ್ದವು ಅಂತಹ ಸಂದರ್ಭಗಳಲ್ಲಿ. ಕಸ ಗುಡಿಸು ಎನ್ನಿ, ಕಾಲಿಗೆ ನಮಸ್ಕಾರ ಮಾಡು ಎನ್ನಿ, ನನ್ನ ಗ್ರಾಫಿಕ್ ಕೃತಿಯ ಹತ್ತು ಪ್ರಿಂಟ್ ತೆಗೆ ಎನ್ನಿ, ಶಿಷ್ಟಾಚಾರದ ಹೊರಗಣದ್ದನ್ನೂ ಮಾಡಲು ಇಲ್ಲವೆನ್ನುತ್ತಿರಲಿಲ್ಲ ಆತ. ಆತನಲ್ಲಿ, ತಲೆನೋವು ಬಂದ ಹದಿನೈದು ದಿನಗಳ ಕಾಲ ನೋವಿನ ಪೋಸ್ಟ್-ಪ್ರೊಡಕ್ಷನ್ನಿನ ಕಾಲದ ’ಬಿ.ಬಿ.ಎಂ ಕ್ಷಣ’ದ ದೆಸೆಯಿಂದುಂಟಾದ ಧನ್ಯತಾಭಾವವು ಅಂತಹದ್ದಾಗಿರುತ್ತಿತ್ತು.
 
ಒಮ್ಮೆಯಂತೂ ಪ್ರಶ್ನಾಮೂರ್ತಿಯಂತಹ ಪ್ರಶ್ನಾಮೂರ್ತಿಗೇ ಸರಿರಾತ್ರಿಯಲ್ಲಿ, ’ಬಿ.ಬಿ.ಎಂ ಕ್ಷಣ’ದ ನಂತರ, ಆತ ಕೇಳಿದನೆಂಬ ಕಾರಣಕ್ಕೆ ಅನೇಖ ನೀಟಾಗಿ ಕ್ಷೌರ ಮಾಡಿಬಿಟ್ಟಿದ್ದ, ಮುಖವನ್ನು. ’ನಾನಿರುವ ಮೂಡಿನಲ್ಲಿ ಇನ್ನೂ ಆಳಕ್ಕಿಳಿಯಬಲ್ಲೆ, ಬೇಕಾದರೆ’ ಎಂದು ಅಪರೂಪಕ್ಕೆಂಬಂತೆ ಅನೇಖ ತಮಾಷೆ ಬೇರೆ ಮಾಡಿದ್ದ. ಬೇಡಪ್ಪಾ, ಶೋರೂಮಿನಲ್ಲೇ ಇಷ್ಟು ರಕ್ತಪಾತ. ಇನ್ನು ಗೋಡೌನಿನಲ್ಲಿ ಕೆಂಪುಕಾವೇರಿ ನದಿಯೇ ಹರಿಸಿಬಿಡ್ತೀಯ ಎಂಬ ಪೋಲಿಂiiದ್ದಾದರೂ ಅದ್ಭುತವಾದ ಡಯಲಾಗನ್ನು ಹರಿಸಿಬಿಟ್ಟಿದ್ದ ಪ್ರಶ್ನೆ. ಮುಂದೊಂದು ದಿನ, ಆಸ್ಟ್ರೇಲಿಯನ್ನರು ಒಂದು ದಿನದ ಕ್ರಿಕೆಟ್ಟಿನಲ್ಲಿ ಮಧ್ಯಾಹ್ನ ನಾನೂರು ರನ್ ದಾಟಿದ ವಿಶ್ವದಾಖಲೆ ಮಾಡಿದ್ದನ್ನು ಅದೇ ದಿನ ರಾತ್ರಿ ಸೌತ್ ಆಫ್ರಿಕನ್ನರು ಮುರಿದದ್ದನ್ನು, ಆ ಅನೇಖ-ಪ್ರಶ್ನೆಯರಿಬ್ಬರ ಡಯಲಾಗ್‌ಗಳು ಹೋಲುತ್ತವೆನಿಸುತ್ತವೆ, ಈಗ. ಪ್ರಶ್ನೆಯ ಅಸಲಿ ಜೋಕನ್ನು ಮೊದಲು ಆತನಿಗೆ ಹೇಳಿಕೊಟ್ಟಿದ್ದವನು ನಾನು ಎಂದು ಆಮೇಲೆ ಮಮಾ ತಿಳಿಸಿದರೂ ಸಹ, ಪಾಪ ಆತನ ಜೀವನದ ಅಪರೂಪದ ಅಸಲಿ ಸೆನ್ಸ್ ಆಫ್ ಹ್ಯೂಮರನ್ನು ಈಗಾಗಲೇ ಆಚರಿಸಿಯಾಗಿರುವುದರಿಂದ, ಸುತ್ತಲಿನವರ ಇತಿಹಾಸ ಪುಟಗಳಿಗೆ ಸೇರಿಹೋಗಲಿರುವ ಆ ಜೋಕಿನ, ಪ್ರಶ್ನೆಯ ’ಸಾಲ ಮಾಡಿಯಾದರೂ ತುಪ್ಪ ತಿನ್ನುವ’ ಗುಣವಿದ್ದ ಈ ಜೋಕಿನ ಕಾಪಿರೈಟನ್ನು ಕೆದಕಬಾರದೆಂದು ನಾನು ಮತ್ತು ಮಮಾ ನಿರ್ಧರಿಸಿದ್ದರಿಂದ, ಪ್ರಶ್ನೆಯ ಆ ಜೋಕು-ಆಹಾ, ಏನದ್ಭುತ! ಪ್ರಶ್ನೆಯ ಆ ಜೋಕು, ’ತಿಂಗಳಿಗೊಂದು ಹುಣ್ಣಿಮೆಯಾದರೆ ಒಂದು ಬದುಕಿನ ಕಾಲಕ್ಕೆ ಒಮ್ಮೆ ಮಾತ್ರ ಹ್ಯಾಲಿಸ್ ಕಾಮೆಟ್ ಕಾಣುವುದು’ ಎಂದದೇನೋ, ಪ್ರಾಯಶಃ ಆತನಿಗೇ ಅರ್ಥವಾಗದ್ದನ್ನು ಹೇಳಿ ಎಲ್ಲರ ಕುತೂಹಲವನ್ನು ಎಂದಿನಂತೆ ಮುರುಟಿಹಾಕಿದ್ದ ಅನೇಖ.
 
ತಿಂಗಳಿಗೊಂದೆರೆಡು ಬಾರಿಯಾದರೂ ಅನೇಖನಿಗೆ ತಲೆನೋವು ಬರುವುದು, ರಾತ್ರಿಯ ಹೊತ್ತೇ ಬರುವುದು, ನಿಗೂಢ ಕತ್ತಲೆಯ ಆ ಪರಿಷತ್ತಿನ ಪೂರ್ವದ ಮೂಲೆಗೆ ಅನೇಕ ಓಡುವುದು, ಗಂಟೆಯೊಂದರ ನಂತರ ದಿವ್ಯ ತೇಜಸ್ವಿಯಾಗಿ ಆತ ಹೊರಬರುವುದು, ತದನಂತರ ನಮಗೆಲ್ಲಾ ವಾರಗಟ್ಟಲೆ ಬಿಟ್ಟಿ ಸೇವಕ ದೊರಕುತ್ತಿದ್ದದ್ದು - ಇದು ಒಂದು ನಿರ್ದಿಷ್ಟ ಟೈಮ್ ಟೇಬಲ್ ಆಗಿಹೋಗಿತ್ತು.// 
 
 

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):