ನೆನಪಿನ ಚಿತ್ರಕಲಾ ಶಾಲೆ: ಭಾಗ ೯- ನಿಗೂಢತೆಯ ಪುನರ್-ಪರಿಷ್ಕರಣೆ

0

 

(೨೩)
 
ಪ್ರಶ್ನೆ ಮಾತ್ರ ಯಾವುದನ್ನೂ ನಂಬದ, ಅಥವ ಎಲ್ಲರ, ಎಲ್ಲ ತತ್ವ-ಧರ್ಮ-ಆಚರಣೆಗಳನ್ನು ಮರೆತ  ಚಾರ್ವಾಕನಂತೆ ನಿರ್ವಿಕಾರಿಯಾಗಿ ಕೈವಲ್ಯ ತಲುಪುವ ಹಂತ ತಲುಪಿಬಿಟ್ಟಿದ್ದ, ನೇತಾಡುತ್ತಿದ್ದ ಸ್ಥಿತಿಯಲ್ಲಿಯೇ. ಮುಂದೊಂದು ದಿನ ಇದಕ್ಕೆ ಏಣಿ ಫಿಲಾಸಫಿ ಎಂದು ನಾಮಕರಣ ಮಾಡಿದೆವು, ಪ್ರಶ್ನೆಯನ್ನು ನೆಲಕ್ಕಿಳಿಸಲು ಅವಶ್ಯಕವಿದ್ದ ಏಣಿಯೆರಡು ಇಲ್ಲದ ಕಾರಣದಿಂದಾಗಿ ಈ ತ್ರಿಶಂಕು ಸ್ಥಿತಿ ಹುಟ್ಟಿಕೊಂಡದ್ದರಿಂದ. ಕ್ರಮೇಣ ರಾತ್ರಿ ೯.೦೦ರ ಸಮಯಕ್ಕೆ ಪ್ರಶ್ನಾಮೂರ್ತಿಯ ನೇತಾಡುತ್ತಿದ್ದ ಸಮಸ್ಯೆಗೊಂದು ತೆರೆಬಿದ್ದಂತಾಯ್ತು--ಎಂಬ ಭ್ರಮೆ ಉಂಟಾಯಿತು. ಯಾವಾಗಲೂ ಗುಡ್ ಸಮರಿಟನ್ ಎಂದೇ ಖ್ಯಾತನಾಗಿ, ಈಗಲೂ ಹಾಗೆಯೇ ಎನಿಸುವ ಪಾಜು ರಟೇಲ್, ಸ್ಟಿಲ್ ಲೈಫ್ ಮತ್ತು ಲೈಫ್ ಸ್ಟಡಿ ಮಾಡುವ ಸಲುವಾಗಿ, ಹಿನ್ನೆಲೆಯಲ್ಲಿ ಬಳಸುವ ಬೆಡ್‌ಶೀಟಿನಂತಹ ಬಟ್ಟೆಯನ್ನು ಒದ್ದೆಮಾಡಿ, ಕುರ್ಚಿಯ ಮೇಲೆ ನಿಂತು, ಎಗರಿ ಎಗರಿ ಪ್ರಶ್ನೆಯ ಆಶ್ಚರ್ಯಸೂಚಕ ಮುಖದ ಹಿಂದಿನ ಭಾಗಕ್ಕೆ ಹೊದ್ದಿಸಿಬಿಟ್ಟಿದ್ದ, ದೇಹ ತಣ್ಣಗಿರಲೆಂದು-ತನ್ನದಲ್ಲ, ಆತನದ್ದು. ಆ ಎಗರಿ, ಎಗರಿ, ಎಗರಾಡುವ ಕ್ರಿಯೆಯಲ್ಲಿ ಸ್ವತಃ ಪಾಜು ರಟೇಲನ ದೇಹವೆ ಬಿಝಿಯಾಗಿ, ತತ್ವರಿಣಾಮವಾಗಿ ಬಿಸಿಯಾಗಿಬಿಟ್ಟಿತ್ತು. ಪ್ರಶ್ನೆಯ ಸ್ಥಿತಿ ಇನ್ನೂ ಬಿಗಡಾಯಿಸಿತು. ಚಿಂದಿಬಟ್ಟೆಯು ಹೇಗೋ ನಾಯಿಯೊಂದರ ಕುತ್ತಿಗೆ ಸುತ್ತಲೂ ಸಿಕ್ಕಿಹಾಕಿಕೊಂಡು, ಅದು ಬಿಡಿಸಿಕೊಳ್ಳಲಾರದೆ ಒದ್ದಾಡುವಂತೆ ಕಾಣತೊಡಗಿತ್ತು ಪ್ರಶ್ನೆಯ ಆಕಾರ. 
 
ಶಿಲ್ಪಕಲಾ ವಿಭಾಗದಲ್ಲಿ ಅನೇಖ ಇದ್ದಕ್ಕಿದ್ದಂತೆ, ಅಂದರೆ ಸುದೀರ್ಘ ಕಾಲ, ತಲೆ ಹಿಡಿದುಕೊಂಡು ಕುಳಿತುಬಿಟ್ಟಿದ್ದ, ಹೊತ್ತಲ್ಲದ ಹೊತ್ತಲ್ಲಿ... ಎಂಬ ಗಾಧೆಯಂತೆ. ನೆಲದಿಂದ ಎಂಟಡಿ ಮೇಲೆ ಪ್ರಶ್ನೆಯು ತನ್ನ ತಲೆಯನ್ನು ಕಿಂಡಿಯಿಂದ ಹೊರತೆಗೆಯಲಾಗದೆ ಒದ್ದಾಡುತ್ತಿದ್ದರೆ, ಕೆಳಗೆ ಅನೇಖ ತನ್ನ ತಲೆಯನ್ನೇ ಮುಂಡದಿಂದ ಹೊರತೆಗೆವ ಪ್ರಯತ್ನ ಮಾಡುತ್ತಿರುವಂತಿತ್ತು. ಅಷ್ಟರಲ್ಲಿ ಆತನ ತಲೆನೋವು ಅಲ್ಪಾವಧಿಯ ತಲೆನೋವೆಂದೂ, ದೀರ್ಘಾವಧಿಯ ಪರೋಪಕಾರ ವರವೆಂದು ತಿಳಿದಿದ್ದವರೆಲ್ಲ ಆತನಿಗೆ ಸ್ವಯಃಲಾಭದ ಅನುಕಂಪ ತೋರಿಸಿದರು. ಏಕೆಂದರೆ ಅನೇಖ ತಲೆಶೂಲೆಬೇನೆನೋವುಗಳನ್ನೆಲ್ಲ ಈಗ ಒಂದೆರೆಡು ಗಂಟೆಗಳಲ್ಲಿ, ಹಾವು ಪೊರೆ ಬಿಟ್ಟಂತೆ ಕಳಚಿಕೊಂಡಾದ ನಂತರ ಮತ್ತೆ ಹದಿನೈದು ದಿನ ಎಲ್ಲರ, ಎಲ್ಲ ಕೆಲಸಗಳನ್ನೂ (ಅಂದರೆ ಬಹುಪಾಲು ಕೆಲಸ ಎಂದರ್ಥ) ಮಾಡಿಕೊಡಲಾಗದಿದ್ದರೂ, ಮಾಡಿಕೊಡುವ ಮನೋಭಾವ ಇರಿಸಿಕೊಂಡವನಾಗಿಬಿಟ್ಟಿರುತ್ತಿದ್ದ. ನಿನ್ನ ಗರ್ಲ್‌ಫ್ರೆಂಡ್ ಎಂದು ಸ್ವತಃ ನೀನೇ ಭಾವಿಸಿಕೊಂಡುಬಿಟ್ಟಿರುವ ಹುಡುಗಿಗೆ ಬೇಕಾದರೆ ನಿನ್ನ ಪರವಾಗಿ ನಾನೇ ಐ ಲವ್ ಯು ಎಂದು ಈಗಲೇ ಹೇಳುವ ಸಹಾಯವನ್ನೂ ಸಹ ಈ ನನ್ನ ಬಿ.ಬಿ.ಎಂ ಕ್ಷಣದಲ್ಲಿ ಮಾಡಿಬಿಡಬಲ್ಲೆ, ಮಾಡಲೆ? ಎಂದು ಅನೇಖ, ಅಂತಹ ಸಂದರ್ಭಗಳಲ್ಲಿ ಯಾರಿಗೋ ಲೇವಡಿ ಮಾಡುತ್ತಿದ್ದುದನ್ನು ಉದ್ದೇಶಿತರನ್ನೂ ಒಳಗೊಂಡಂತೆ ಯಾರೂ ಸೀರಿಯಸ್ಸಾಗಿ ತೆಗೆದುಕೊಳ್ಳದಿದ್ದುದಕ್ಕೆ ಕಾರಣ, ಆತ ಅಫೇರು, ಲವ್ವು ಮುಂತಾದುವುಗಳ ಮೂಲಕ ತನ್ನ ವೈಯಕ್ತಿಕತೆಯನ್ನು ಕಳೆದುಕೊಳ್ಳುವವನಲ್ಲವೆಂಬುದು ಎಲ್ಲರಿಗೂ ಗೊತ್ತಿದ್ದರಿಂದ. 
 
ರೊಧಾನ (ಫ್ರೆಂಚ್ ಇಂಪ್ರೆಷನಿಸ್ಟ್ ಶಿಲ್ಪಿ, ಇಟಲಿಯ ಮಿಕೆಲೆಂಜೆಲೋವಿನ ನಂತರ, ಮೂರು ಶತಮಾನಗಳ ಕಾಲದ ಯುರೋಪಿನ ಶಿಲ್ಪ-ಕ್ರಿಯಾಹೀನತೆಯ ನಂತರ ಆಗಿಹೋದ ಸೃಜನಶೀಲ ಶಿಲ್ಪಿ) ಥಿಂಕರ್ ಶಿಲ್ಪದಷ್ಟೇ ಆಕರ್ಷಕವಾಗಿದೆ ನಿನ್ನ ತಲೆನೋವನ್ನು ನೀನು ಕೈಯಲ್ಲಿ ಹಿಡಿದಿರುವ ಭಂಗಿ, ಮಿಸ್ಟರ್ ಅನೇಖ. ಹಾಗೇ ಇರು ಸ್ವಲ್ಪ ಎಂದು ಶ್ಯಾಗಿ, ಮಲ್ಲುಮೋಗನ, ಮಮಾ ಮುಂತಾದ ಶಿಲ್ಪಕಲಾ ವಿಭಾಗದ ಗೆಳೆಯರು ಅನೇಖನ ತಲೆನೋವನ್ನು ಅಕ್ಷರಶಃ ಫ್ರೀಜ್ ಮಾಡುವ ಸಾಹಸ ಮಾಡಿದರು, ಸ್ಕೆಚ್ ಮಾಡುವ ಸಲುವಾಗಿ. ಅನೇಖ ಮೆಲ್ಲನೆ ಎದ್ದು, ವೇಗವಾಗಿ ಧಡಧಡನೆ ಓಡತೊಡಗಿದ ಪರಿಷತ್ತಿನ ಆ ಕಗ್ಗತ್ತಲ ಮೂಲೆಗೆ. ಅನೇಖನ ನಿಗೂಢ ಬಿ.ಬಿ.ಎಂ. ಕ್ಷಣವನ್ನು (ಬದುಕಿನ ಭೀತಿಗೆ ಮದ್ದು) ನಿರೀಕ್ಷಿಸುತ್ತ ಎಲ್ಲರೂ ಕಾತರದಿಂದ ಕುಂತಿದ್ದರು. 
 
(೨೪)
ಆ ಪ್ರಶ್ನಾರಾತ್ರಿಯಂದು ಅನೇಖ ಚಿತ್ರಕಲಾ ಪರಿಷತ್ತಿನ ಪೂರ್ವ-ದಕ್ಷಿಣಕ್ಕಿದ್ದ ಬೃಹತ್ ಮರದ ಬಳಿಗೆ ಓಡಿದ್ದ. ಈ ಸಲ ಹೇಗಾದರೂ ಸರಿ ಆತ ಅಲ್ಲಿ ಏನು ಮಾಡುತ್ತಾನೆ ಎಂದು ಪತ್ತೆಹಚ್ಚಲೇಬೇಕು ಎಂದು ಎಲ್ಲರೂ ನಿರ್ಧರಿಸಿದ್ದಂತಿತ್ತು. ಎಲ್ಲರೂ ಅಂದಾಗ ನನ್ನ ಕಾಲದವರಲ್ಲಿ ನೆನಪಿಗೆ ಬರುತ್ತಿದ್ದ ಕಲಾವಿದ್ಯಾರ್ಥಿಗಳೆಲ್ಲರೂ ಅಲ್ಲಿ, ಅಂದು, ಪ್ರಶ್ನೆಯ ಪರಿಸ್ಥಿತಿಯ ಉತ್ತರವನ್ನು ಉತ್ತರಿಸುವ ಸಲುವಾಗಿ ಒಂಬತ್ತು ಗಂಟೆ ರಾತ್ರಿಯಾದರೂ ಅಲ್ಲೇ ಇದ್ದವರು. ಏಕೆಂದರೆ ಇಪ್ಪತ್ತು ಮುವತ್ತು ಜನರಿರುತ್ತಿದ್ದ ಅಂದಿನ ಪ್ರತಿ ಬ್ಯಾಚಿನಲ್ಲಿ ಇಬ್ಬರು ಮೂವರು ಮಾತ್ರ ಕಲಾವಿದರಾಗಿ ಹೊರಹೊಮ್ಮುತ್ತಿದ್ದುದು ವಾಡಿಕೆ. ಉಳಿದವರೆಲ್ಲ ಕೇವಲ ಚಿತ್ರಕಾರರಾಗಿ ಉಳಿದುಬಿಡುತ್ತಿದ್ದರು. ಮುಂದೆ ಕಲಾವಿದರಾಗಿ ಉಳಿದುಕೊಂಡವರೆಲ್ಲ ಅಲ್ಲಿದ್ದದ್ದು, ಅಥವ ಅಲ್ಲಿ ಅಂದು ಇದ್ದವರೆಲ್ಲರೂ ಕಲಾವಿದರಾಗಿ ಹೋದದ್ದು ಯೋಗಾಯೋಗವೇ ಇರಬೇಕು. ಮುಂದೊಂದು ದಿನ, ಈ ಯೋಗಾಯೋಗವೆಂಬುದು ಒಂದು ತೆರನಾದ ತರ್ಕವೋ ಅಥವ ತಾರ್ಕಿಕ ನಿರ್ಧಾರವೆಂಬುದೇ ಒಂದು ಯೋಗಾಯೋಗವೋ? ಎಂದು ಪ್ರಶ್ನಿಸುವ ಮೂಲಕ, ನಮ್ಮ ಸಹಪಾಠಿ ಸೋಕುವಿನ (ಸೋಕಿಸಿಕೊಳ್ಳದ ಸೋಡ ಕುವರಿ) ಭವಿಷ್ಯದ ನಿಗೂಢ, ಕಾಲಾತೀತ ಗೆಳತಿ ಚಾರ್ವಾಕಿಯು ಆ ಪ್ರಶ್ನಾರಾತ್ರಿಯಂದಿನ ಅನೇಖನ ತಲೆನೋವು ಮತ್ತು ತಲೆಯನ್ನು ಹಿಡಿದು ಆಲದಮರದಡಿಗೆ ರಾತ್ರಿ ಒಂಬತ್ತಕ್ಕೆ ಓಡಿದ್ದಕ್ಕೆ ವಿಶೇಷವಾದ ಹೊಸ ಅರ್ಥಕ್ಕೆ ನಾಂದಿ ಹಾಡಿದ್ದಳು.
 
ಮುಂಚೆಯೂ ಸುಮಾರು ಸಲ ಅನೇಖನ ರಾತ್ರಿಯ ಹೊತ್ತಿಗೇ ನಿರ್ದಿಷ್ಟವಾಗಿದ್ದ, ಟೈಮ್-ಸ್ಪೆಸಿಫಿಕ್ ತಲೆನೋವಿನ ಆ ಒಂದೆರೆಡು ಗಂಟೆಗಳ ಕಾಲಾವಧಿಯಲ್ಲಿ ನಿಜವಾಗಿಯೂ ಏನು ನಡೆಯುತ್ತದೆ, ಅನೇಖನ ಆ ನಂತರದ ಎರಡುವಾರಗಳ ಕಾಲದ ದಿವ್ಯ ಖುಷಿಗೆ ಕಾರಣ ಏನು ಎಂಬುದನ್ನು ಪತ್ತೆಹಚ್ಚುವ ಎಲ್ಲಾ ಪ್ರಯತ್ನಗಳೂ ಹಾಸ್ಯಮಯವಾದ ಗೋಳುಗಳಾಗಿ ಮಾರ್ಪಟ್ಟಿದ್ದವು. ಒಮ್ಮೆ ಅಂದರೆ ಒಂದು ದಿನ ರಾತ್ರಿ, ಸ್ಕೆಚಿಂಗ್ ನಿಪುಣ ರಮಾನಾಥೆಸ್ಸೆಮ್ಮೆಸ್ ನಾನು ಪತ್ತೆ ಮಾಡುತ್ತೇನೆ, ಅನೇಖನಿಗೆ ತಲೆನೋವುಶೂಲೆಬೇನೆ ಬಂದಾಗ ಆ ಕಗ್ಗತ್ತಲಲ್ಲಿ ಏನು ಮಾಡುತ್ತಾನೆ ಎಂಬುದನ್ನು ಎಂದು ಸ್ಕೆಚ್ ಪ್ಯಾಡ್ ಮತ್ತು ನುಣುಪಾಗಿ ಜೀವಲಾಗಿದ್ದ, ೧ಬಿಯಿಂದ ಹಿಡಿದು ೧೦ಬಿವರೆಗಿನ ಗ್ರೇಡಿನ ಎಂಟತ್ತು ಪೆನ್ಸಿಲ್‌ಗಳನ್ನು ಹಿಡಿದು ಬಂಡೆಯ ಕಡೆ ಓಡಿದ್ದ, ತಲೆನೋವನ್ನು ಹಿಡಿದೇ ಓಡಿದ್ದ ಅನೇಖನ ಹಿಂದೆಯೇ. ಅನೇಖ ಗಂಟೆಯೊಂದರ ನಂತರ ವಾಪಸ್ ನಗುನಗುತ್ತಾ, ದಿವ್ಯಪ್ರಭೆಯಂತಹುದನ್ನೇನೋ ಸೂಸುತ್ತ ಪರಿಷತ್ತಿನ ಆಲದ ಮರದ ಗೂಢ ಕತ್ತಲಿನಿಂದ ಬೆಳಕಿಗೆ ಬಂದ ನಂತರ, ಎಷ್ಟೋ ಹೊತ್ತಿನ ನಂತರ, ಅನೇಖನಿಗೆ ಗೊತ್ತಾಗದಂತೆ ಗೆಳೆಯರ ಬಳಿ ಬಂದು ಅಲ್ಲಿ ಏನು ನಡೆಯಿತೆಂಬುದನ್ನು ತಾನು ಸ್ಕೆಚ್ ಮಾಡಿದ್ದೇನೆ ಎಂದು ಎಲ್ಲರಿಗೂ ತೋರಿಸಿದ್ದ ರಮಾನಾಥೆಸ್ಸೆಮ್ಮೆಸ್. 
 
ಆತ ರಚಿಸಿದ್ದ ಚಿತ್ರದಲ್ಲಿ ಅನೇಖನನ್ನು ಹೋಲುವ ಸಿಲ್ಹೌಟ್ ಆಕಾರವೊಂದು ಆಲದಮರವೊಂದರ ಬುಡಕ್ಕೆ ನಿಂತು ಮೂತ್ರವಿಸರ್ಜನೆ ಮಾಡುತ್ತಿತ್ತು. ಗೌರಿಶಿಖರವನ್ನು ನಿರೀಕ್ಷಿಸಿದ್ದವರಿಗೆ ಕೊಚ್ಚೆಗುಂಡಿಯ ಅನುಭವವಾದಂತಾಯ್ತು. ಎಲ್ಲರೂ ಗೊಳ್ ಎಂಬುದನ್ನೂ ಒಳಗೊಂಡಂತೆ ಬೇರೆ ಬೇರೆ ಸದ್ದುಗಳನ್ನು ಮಾಡುತ್ತ ಗಹಗಹಿಸಿ ನಗತೊಡಗಿದಾಗ ರಮಾನಾಥೆಸ್ಸೆಮ್ಮೆಸ್ ಪೆಚ್ಚಾದ. ಖಂಡಿತ ನಾನು ಅಲ್ಲಿ ನೋಡಿದ್ದು ಅದನ್ನಲ್ಲ ಎಂದು ಏನೋ ನಿಗೂಢವೊಂದನ್ನು ಹೇಳುವ ಪ್ರಯತ್ನದ ಎಲ್ಲ ಕಷ್ಟಗಳನ್ನೂ ಆತ ಸ್ವತಃ ಅನುಭವಿಸಿದನೇ ಹೊರತು, ಅನೇಖನನ್ನು ಆತ ನೋಡಿದಾಗ ಆತ ಏನು ಮಾಡುತ್ತಿದ್ದ ಎಂಬುದನ್ನು ಹೇಳಲು ಅಸಾಧ್ಯನಾಗಿದ್ದ. ಏನಯ್ಯಾ, ಅನೇಖ ಪೂರಾ ಒಂದು ಗಂಟೆ ಕಾಲ ಒಂದ ಮಾಡುತ್ತಿದ್ದನೆ? ಈತನೇನು ಇಡೀ ನದಿಯನ್ನು ಕುಡಿದುಬಿಟ್ಟ ಜನ್ನು ಋಷಿಯ ವಿರುದ್ಧಾರ್ಥವೆ! ಎಂದು ಕೇಳಿಬಿಟ್ಟ ವಾಚ್‌ಮನ್ ಕುಂಠ ದೊಡ್ಡಯ್ಯ. 
 
ಮತ್ತೊಂದು ದಿನ ರಾತ್ರಿ ಅನೇಖನ ನಿಗೂಢವನ್ನು ಹಿಂಬಾಲಿಸಿ ಹೋದ ನಲ್ಲಸಿವನ್ ಅಥವ ನಸೀಬ್, ಹಾವು ಮೆಟ್ಟಿದವನಂತೆ ಏದುಸಿರು ಬಿಡುತ್ತ ಓಡಿಬಂದಿದ್ದ. ಏನಾಯಿತು? ಎಂದು ಕೇಳಿದ್ದಕ್ಕೆ ಹಾವು ಮೆಟ್ಟಿದೆ ಎಂದು ಹೇಳಿದ್ದನ್ನು ಕೇಳಿ, ಎಲಾ, ರೂಪಕದ ಉಪಮೆಗಳೂ ಸಹ ನೈಜವಾಗುವ ಕಲಿಗಾಲ ಹುಟ್ಟಿಕೊಂಡಿತಲ್ಲ ಎಂದು ಉದ್ಘರಿಸಿದ್ದರು, ಪರಿಷತ್ತಿನ ಗ್ಯಾಲರಿಯೊಂದರ ಪ್ರದರ್ಶನವೊಂದಕ್ಕೆ ಬಂದು, ಈ ಪ್ರಹಸನವನ್ನು ಕೇಳಿ, ಕಂಡ ಸಾಹಿತಿಯೊಬ್ಬರು. 
 
ಮತ್ತೂ ಒಮ್ಮೆ ಅನೇಖನ ಬಿ.ಬಿ.ಎಂ ಕ್ಷಣದ ಪತ್ತೆಗೆ ಹೊರmವನು ಮಮಾ. ಈ ಛತ್ರಿ, ಪ್ರಚಂಡ, ಚಾಲಾಕಿ ಹೇಗಾದರೂ ಮಾಡಿ ಅನೇಖನ ನಿಗೂಢವನ್ನು ಬೇಧಿಸಿಯೇ ತೀರುತ್ತಾನೆ ಎಂದೇ ಎಲ್ಲರೂ ಭಾವಿಸಿ, ನಿಗೂಢಕ್ಕೆ ಅಂತಿಮ ತೆರೆ ಎಳೆಯಲು ಕಾತುರರಾಗಿದ್ದರು. ಕೇವಲ ಹತ್ತು ನಿಮಿಷದಲ್ಲೇ ಓಡಿಬಂದ ಮಮಾ ಹೇಳಿದ, ಅಲ್ಲಿ ಅನೇಖ ಬ್ಯೂಟಿಫುಲ್ ಫೀಮೇಲ್ ಫಿಗರ್ ಆಗಿ ಚೇಂಜ್ ಆಗ್ಬಿಟ್ಟಿದ್ದಾನೆ ಕಣ್ರೋ. ಮಗಾ, ಎಂಗಾಗಿದಾಳೆ ಗೊತ್ತಾ, ಅದೂ ನ್ಯೂಡ್ ಫಿಗರ್ ಆಗಿಬಿಟ್ಟಿದ್ದಾಳೆ ಎಂಬುದನ್ನು ಯಾರೂ ನಂಬಲಿಲ್ಲ. ಯಾಕೆ, ನನ್ ಮಕ್ಳಾ, ನಾನು ಸುಳ್ಳೇಳ್ತೀನ್ರೇನೋ? ಎಂದು ತಿರುಗಿಬಿದ್ದ ಆತ. ಮಮಾ, ಅಲ್ಲಿ ಆತ ಫೀಮೇಲ್ ನ್ಯೂಡ್ ಫಿಗರ್ ಆಗಿದ್ದದ್ದೇ ನಿಜವಿದ್ದ ಪಕ್ಷದಲ್ಲಿ ನಿನ್ನಿಂದ ಮೋಹಿನಿ ಪರಿಣಯವಾಗಬೇಕಿತ್ತಲ್ಲ. ನೀನು ಹೇಗೆ ಹಿಂದಿರುಗಿ ಬರಲು ಸಾಧ್ಯವಿತ್ತು ಹೇಳು, ಅದೂ ಇಷ್ಟು ಬೇಗ? ಎಂದು ಎಲ್ಲರೂ ಮತ್ತೂ ಒಂದೆರೆಡು ರೌಂಡ್ ಮುಗಿಸಿದ್ದರು--ನಗುವನ್ನ. ಹೌದು ಎಂದರೆ ಅರಸಿಕನೆಂದೂ ಇಲ್ಲ ಎಂದರೆ ಪಲಾಯನವಾದಿಯೆಂದು ವರ್ಗೀಕರಣಗೊಂಡುಬಿಡುತ್ತೇನೆ ಎಂಬ ಇಬ್ಬಂದಿತನದಲ್ಲಿ ಸಿಲುಕಿಬಿಟ್ಟಿದ್ದ ಮಮಾ. 
(೨೫)
ಅಂತಿಮ ಪ್ರಯತ್ನವೆಂಬಂತೆ ವೀರಾ, ೧೮೮೫ರಿಂದ ೧೯೯೯ರವರೆಗಿನ ಪರಿಷತ್ತಿನ ಅನೌಪಚಾರಿಕ ಮುಖ್ಯ ಛಾಯಾಗ್ರಾಹಕನಾಗಿಬಿಟ್ಟಿದ್ದ ವೀರಾ, ತಾನು ಈ ನಿಗೂಢವನ್ನು ಪರಿಹರಿಸಿಯೇ ತೀರುತ್ತೇನೆ ಎಂದು ಹಠತೊಟ್ಟ.
 
ಪ್ರತಿದಿನ ಸಂಜೆಯ ಹೊತ್ತಿಗೇ ಆತ ಝೂಮ್ ಲೆನ್ಸ್‌ಗಳನ್ನು ಸಿದ್ಧಪಡಿಸಿಕೊಂಡು, ಒಂದೆರೆಡು ವಿಶೇಷ ಕ್ಯಾಮರಾಗಳನ್ನು ಬ್ಯಾಗುಗಳಲ್ಲಿ ಇರಿಸಿಕೊಂಡು, ಆಗಷ್ಟೇ ತಯಾರಾಗುತ್ತಿದ್ದ ಹಿಂಭಾಗದ ಕಾಲೇಜು ಕಟ್ಟಡವನ್ನು ಹತ್ತಿ, ಮುಂಭಾಗದ ಪರಿಷತ್ತಿನ ಕಟ್ಟಡಕ್ಕೆ ವರ್ಗಾಯಿಸಿಕೊಂಡು, ದಕ್ಷಿಣ ದಿಕ್ಕಿನ ಗೇಟಿನ ಕಡೆಯಿಂದ ಸ್ವಲ್ಪ ಪೂರ್ವಕ್ಕೆ ತಿರುಗಿಸಿ, ಸ್ಟಾಂಡ್ ರೆಡಿ ಮಾಡಿ, ಫ್ಲಾಸ್ಕಿನಲ್ಲಿ ಟೀ ಇರಿಸಿ, ಕೆಳಗಿಳಿದು ಬರುತ್ತಿದ್ದ. ರಾತ್ರಿಯಾದಂತೆ, ಗ್ರಾಫಿಕ್ ವಿಭಾಗದಲ್ಲಿ ಎಲ್ಲರೂ ಎಚ್ಚಿಂಗ್ ಪ್ಲೇಟ್ ತಯಾರಿಸುತ್ತಲೋ, ಅದರ ಮೇಲೆ ಬರೆಯುತ್ತಲೋ, ಪ್ರಿಂಟ್ ತೆಗೆಯುತ್ತಲೋ, ಅದಕ್ಕೆಲ್ಲಾ ಸೋಂಬೇರಿತನವಾಗಿ, ಹಾಗೆ ಮಾಡುತ್ತಿರುವವರನ್ನು ತಮ್ಮ ಮಾತುಗಳ ಮೂಲಕ ರಂಜಿಸುತ್ತಲೋ ಇದ್ದವರ ನಡುವೆ ವೀರಾ ಅನೇಖನನ್ನೇ ಗಮನಿಸುತ್ತಿದ್ದ. ಅನೇಖನ ತಲೆನೋವುಶೂಲೆಬಾಧೆಗೆ ಒಂದು ನಿರ್ಧಿಷ್ಟ ಪ್ಯಾಟರ್ನ್ ಇತ್ತು. ಅಮಾವಾಸ್ಯೆ ಹುಣ್ಣಿಮೆಗಳ ಆಸುಪಾಸಿನಲ್ಲಿ ಆತನಿಗೆ ಹಾಗಾಗುತ್ತಿತ್ತು. ಅಥವ ಆತನಿಗೆ ಹಾಗಾದಾಗಲೆಲ್ಲ ಅಂದು ಅಮಾವಾಸ್ಯೆ ಅಥವ ಹುಣ್ಣಿಮೆಯಾಗಿರುತ್ತಿತ್ತು ಎಂದು ವೀರಾ ಭಾವಿಸಿಬಿಟ್ಟು, ಇತರರಿಗೂ ಆ ಭಾವನೆಯನ್ನು ಹಂಚಿಬಿಟ್ಟಿದ್ದ, ದಿನಕಾಲಗಳ ಎಣಿಕೆಯಿಡುವ ಅಭ್ಯಾಸವಿಲ್ಲದ ದೃಶ್ಯಕಲಾ ವಿದ್ಯಾರ್ಥಿಗಳ ನಡುವೆ. 
 
ಒಂದೆರೆಡು ರಾತ್ರಿಗಳಂದು ಅನೇಖ ಏನೋ ನೊಟ್ಸ್ ಮಾಡುತ್ತಲೋ, ಯಾವುದಾದರೂ ಕಲಾಇತಿಹಾಸದ ಟೆಸ್ಟ್ ಹತ್ತಿರವಿದ್ದಲ್ಲಿ ಓದಲು ಬೋರಾದವರಿಗೆ ಮತ್ತು ಬಾರದವರಿಗೆಲ್ಲ-ಅಂತಹವರು ಪರಿಷತ್ತಿನಲ್ಲಿ ಕೈತುಂಬ ಸಿಗುತ್ತಿದ್ದರು--ರಿವೈಸ್ ಮಾಡುತ್ತಲೋ, ಅಥವ ಯಾರದ್ದೋ ಕಾರ್ಟೂನ್‌ಗಳನ್ನು ರಚಿಸುತ್ತಲೋ, ನೈಜಚಿತ್ರ ರಚಿಸುವ ಪ್ರಯತ್ನದಲ್ಲೇ ಅದು ಎಡವಟ್ಟಾಗಿ ಕಾರ್ಟೂನಾಗಿಯೋ, ಒಟ್ಟಾರೆಯಾಗಿ ವೀರಾ ತನ್ನನ್ನು ತೀವ್ರ ನಿಗಾವಹಿಸಿ ಗಮನಿಸುತ್ತಿದ್ದಾನೆಂಬುದನ್ನೇ ಗಮನಿಸಿಕೊಳ್ಳುತ್ತಿದ್ದ. ಆ ಒಂದೆರೆಡು ರಾತ್ರಿಗಳಂದು ಏನೂ ಆಗದಿದ್ದರೂ ಸಹ, ಮಾರನೇ ದಿನ ಬೆಳಿಗ್ಗೆ ವೀರಾ ಕ್ಯಾಮರಾ ಮತ್ತು ಫ್ಲಾಸ್ಕ್ ವಾಪಸ್ ತರಲು ಪರಿಷತ್ತಿನ ಕಟ್ಟಡ ಹತ್ತಿ ಹೋದಾಗ, ಫ್ಲಾಸ್ಕಿನ ತೂಕ ಕಡಿಮೆಯಾಗಿರುತ್ತಿತ್ತು! ಯಾರೋ ಹಿಂದಿನ ರಾತ್ರಿಗಳಂದು ಹತ್ತು ಕಪ್ ಚಹಾವಿರುವ ಫ್ಲಾಸ್ಕನ್ನು ಕುಡಿದು ಖಾಲಿ ಮಾಡಿಬಿಟ್ಟಿರುತ್ತಿದ್ದರು. ಪಟಿಂಗ ವೀರಾ ಮೂರನೇ ದಿನ ಎರಡು ಫ್ಲಾಸ್ಕ್‌ಗಳಲ್ಲಿ ಟೀ ಸುರಿದುಕೊಂಡು ಅಲ್ಲಿರಿಸಿ, ಅವುಗಳಲ್ಲಿ ಒಂದನ್ನು ಮಾತ್ರ ತನ್ನ ಕುತ್ತಿಗೆಗೇ ಕ್ರಾಸ್ ಬೆಲ್ಟಿನಲ್ಲಿ ತೂಗಾಡಿಸಿಕೊಂಡು ಕೆಳಗಿಳಿದು ಬಂದಿದ್ದ. ಮತ್ತೊಂದು ಫ್ಲಾಸ್ಕಿನಲ್ಲಿ ಜಾಪಾಡ್ ಮಾತ್ರೆ ಹಾಕಿದ್ದ ಟೀ ಇರಿಸಿದ್ದ. ಅಂದು ರಾತ್ರಿಯೂ ಅನೇಖನಿಗೆ ತಲೆಶೂಲೆ ಬರಲಿಲ್ಲವಾದ್ದರಿಂದ ವೀರಾ, ಗ್ರಾಫಿಕ್ ವಿಭಾಗದಲ್ಲೇ, ಎಲ್ಲರ ನಡುವೆ ಅನೇಖನನ್ನು ಗಮನಿಸುತ್ತಿರುವುದನ್ನು ಅನೇಖ ಗಮನಿಸುತ್ತಿರುವುದನ್ನು ಪುನರ್-ಗಮನಿಸುತ್ತ, ಕಂಜೂಸಿನಂತೆ ಬೆಳಗಿನ ಜಾವ ಮೂರು ಗಂಟೆಯವರೆಗೂ ಹೆಚ್ಚೂ ಕಡಿಮೆ ಒಬ್ಬನೇ ಫ್ಲಾಸ್ಕನಲ್ಲಿದ್ದ ಟೀಯನ್ನು ಖಾಲಿಮಾಡಿದ್ದ. 
 
ಬೆಳಿಗ್ಗೆ ಕ್ಯಾಮರ, ಸ್ಟಾಂಡ್ ಮತ್ತು ಆ ಮತ್ತೊಂದು ಫ್ಲಾಸ್ಕನ್ನು ಪರಿಷತ್ತಿನ ಮೇಲಿನಿಂದ ತರಲು ಹೋದಾಗ, ಅಲ್ಲಿನ ಫ್ಲಾಸ್ಕ್ ಖಾಲಿಯಾಗಿತ್ತು! ಅಂದರೆ ಈಗ ಎರಡೂ ಫ್ಲಾಸ್ಕ್ ಖಾಲಿಯಾಗಿತ್ತು, ಒಂದರಲ್ಲಿದ್ದ ಜಾಪಾಡ್ ಭೇದಿಮಾತ್ರೆಯೊಂದಿಗೆ. ಸ್ನಾನಶೌಚಾದಿಗಳಿಗಾಗಿ ಅಂದು ಬೆಳಿಗ್ಗೆ ಮನೆಗೂ ಹೋಗದೆ, ವೀರಾ ಇದ್ದ ಒಂದೇ ಬಾಥ್‌ರೂಮಿನ ಬಳಿ ಕಾವಲು ಕುಳಿತುಬಿಟ್ಟಿದ್ದ. ಒಂದಿಡೀ ಫ್ಲಾಸ್ಕಿನ ತುಂಬ, ಜಾಪಾಡ್ ಮಾತ್ರೆ ದಂಡಿಯಾಗಿದ್ದ ಸುಮಾರು ಹತ್ತು ಚಾಯ್ ಕಪ್ಪನ್ನು ಕುಡಿದವರು ಇಲ್ಲಿ ಬರಲೇಬೇಕು ಎಂಬ ನಿರೀಕ್ಷೆಯೊಂದಿಗೆ. ಸುಲಭವಲ್ಲದ ಶೌಚಾಲಯಕ್ಕೆ ಚಾಯ್ ಕುಡಿದಿರುವವರಲ್ಲಿ ಬರುವವರ ಸಂಖ್ಯೆಯನ್ನು ಎಣಿಕೆ ಹಾಕುತ್ತ, ವೀರಾ ಹಾಗೇ ಕಾಯುತ್ತ, ಸ್ವತಃ ತಾನೇ ಒಮ್ಮೆ ಬಾಥ್ರೂಮಿಗೆ, ಬಹಿರ್ದೆಸೆಗೆ ಹೋಗಿ ಬಂದ. ಒಮ್ಮೆ ಹೋದದ್ದು, ಯಾಕೋ ಕಸಿವಿಸಿಯೆನ್ನಿಸಿ, ಎರಡು, ಮೂರು, ನಾಲ್ಕು ಬಾರಿಯಾಗಿ, ಹನ್ನೆರಡನೇ ಬಾರಿ ಆಗುವಷ್ಟರಲ್ಲಿ, ವೀರಾನಿಗೆ ತನ್ನ ತಪ್ಪಿನ ಅರಿವಾಗಿತ್ತು. ಮುಂಚಿನ ದಿನ ಸಂಜೆ ಸ್ಟ್ಯಾಂಡಿಗೆ ಕ್ಯಾಮರವನ್ನು ಕೂರಿಸುವಾಗ ಫ್ಲಾಸ್ಕ್ ಅದಲುಬದಲಾಗಿತ್ತು. ಅಥವ ಹಾಗೆಂದೇ ಎಂದೇ ಎಲ್ಲರೂ ಭಾವಿಸಿಬಿಟ್ಟಿದ್ದರು, ಹಲವಾರು ದಿನಗಳವರೆಗೂ. 
 
(೨೬)
ಆದರೆ ವೀರಾ ಛಲವಾದಿ. ಅಚಲ ಎಂಬ ಹುಡುಗಿಯನ್ನು ಇಷ್ಟಪಡುತ್ತಿದ್ದರಿಂದ ಆತನನ್ನು ಛಲವಾದಿ ಅಥವ ಚಪಲವಾದಿ ಎನ್ನುತ್ತಾರೆ ಎಂದು ಛಾಯಾಗ್ರಾಹಕನಾಗಿ ಆತನ ಖ್ಯಾತಿಯನ್ನು ಸಹಿಸದ ಗ್ಯಾಲರಿ ಇನ್‌ಚಾರ್ಜ್ ಶದಾಸಿವ್ ವಾದವಾಗಿತ್ತು. ಇಬ್ಬರ ನಡುವೆ ಯಾವುದೋ ಕಾರಣಕ್ಕೆ ವೈಮನಸ್ಯ ಉಂಟಾಗಿದ್ದು, ಯಾವ ದೇಶವಿದೇಶಗಳ ಅತಿಥಿಗಳೇ ಪರಿಷತ್ತಿಗೆ ಭೇಟಿ ನೀಡಿದರೂ ಸಹ, ಮೇಷ್ಟ್ರ ಮತ್ತು ಅತಿಥಿಗಳ ಮಧ್ಯದಲ್ಲಿ ವಯೋವೃದ್ಧ ಶದಾಸಿವ್ ನಿಂತಿದ್ದರೂ ಸಹ, ಅಂತಿಮವಾಗಿ ಪ್ರಿಂಟಾಗಿ ಬಂದಿರುತ್ತಿದ್ದ ಫೋಟೋಗಳಲ್ಲಿ ಶದಾಸಿವ್ ಮಾಯವಾಗಿರುತ್ತಿದ್ದರು! ಅದೂ ಡಿಜಿಟಲ್ ಎಂಬ ಕಲ್ಪನೆಯೂ ಇಲ್ಲದಿದ್ದ ೧೯೮೦ರ ದಶಕದಲ್ಲಿ ಹೇಗೆ ಡಾರ್ಕ್‌ರೂಮಿನಲ್ಲಿ ವೀರಾ ಈ ಮ್ಯಾಜಿಕ್ ಮಾಡುತ್ತಿದ್ದ ಎಂಬುದೇ ಎಲ್ಲರಿಗೂ ಆಶ್ಚರ್ಯವಾಗುತ್ತಿತ್ತು. ಅಂದೇ ರಾತ್ರಿ ಅನೇಖ ತಲೆಬೇನೆಶೂಲೆನೋವು ಬರಿಸಿಕೊಂಡು ಆ ದೊಡ್ಡಾಲದ ಮರದ ಬುಡಕ್ಕೆ ಓಡಿದ್ದ. ಆದರೆ ಆಗ, ಆ ಘಳಿಗೆಯಲ್ಲಿ, ವೀರಾ ವಿಪರೀತ ಹೊಟ್ಟೆಬೇನೆಯಿಂದ ಶಿವಾನಂದ ಸರ್ಕಲ್ಲಿನ ಸಮೀಪವಿರುವ ಮಲ್ಲಿಗೆ ನರ್ಸಿಂಗ್ ಹೋಮಿನಲ್ಲಿ ಅಡ್ಮಿಟ್ಟಾಗಿದ್ದ. 
 
ಮುಂದೊಂದು ದಿನ ರಾತ್ರಿ, ಇದೇ ತೆರನಾದ ಸಿದ್ಧತೆ ಮಾಡಿಕೊಂಡಿದ್ದ ಚಲಬಿಡದ ತ್ರಿವಿಕ್ರಮ ವೀರಾ. ಆದ್ದರಿಂದಲೇ ಈಗ ನೇತಾಡುತ್ತಿದ್ದ ಪ್ರಶ್ನೆಯನ್ನು ಬೇತಾಳನಂತೆ, ಚಿತ್ರಕಲಾ ಸ್ಟುಡಿಯೋದ ಗೋಡೆಯ ಮೇಲೆ ಬಿಡಿಸಿದ್ದವನೂ ವೀರಾನೇ. ಯಾವುದೋ ಕಾಡುಪ್ರಾಣಿಯನ್ನು ಬಂದೂಕದಿಂದ ಅಥವ ಕ್ಯಾಮರಾದ ಮೂಲಕ ಶೂಟ್ ಮಾಡಲು ಬೇಕಾದಷ್ಟಾಯಿತಲ್ಲ ನಿನ್ನ ತಯಾರಿ ಎಂದು ಎಲ್ಲರೂ ಕಿಚಾಯಿಸಿದರೂ ಸಹ ಆತ ತಯಾರಿ ಎಲ್ಲ ಮಾಡಿಟ್ಟು, ಗ್ರಾಫಿಕ್ ರೂಮಿನಲ್ಲಿ ಎಲ್ಲರೊಂದಿಗೆ ಪಿಸುಗುಡುತ್ತ, ಅನೇಖನನ್ನೇ ಗಮನಿಸುತ್ತ. ವಿಡಿಯೋವನ್ನು ಫಾಸ್ಟ್ ಫಾರ್ವರ್ಡ್ ಮಾಡುವಂತೆ, ಅನೇಖ ತಲೆ ಹಿಡಿದುಕೊಂಡ, ಮರದೆಡೆ ಆ ಕಗ್ಗತ್ತಲಲ್ಲೇ ಅಸಾಧ್ಯ ನೋವಿನೊಂದಿಗೆ ಓಡಿದ್ದ. ಎಲ್ಲರೂ ವೀರಾನನ್ನು ಸಿಳ್ಳೆ ಚಪ್ಪಾಳೆಗಳೊಂದಿಗೆ ಪ್ರೋತ್ಸಾಹಿಸಿ ಕಳಿಸಿಕೊಟ್ಟಿದ್ದರು, ಆತನೇನು ಮಾಡುತ್ತಿದ್ದಾನೆ ಪತ್ತೆಮಾಡಲೆಂದು, ssಸ್ವತಃ ಗ್ರಾಫಿಕ್ ವಿಭಾಗದಿಂದ ಒಂದು ಹೆಜ್ಜೆಯೂ ಹೊರಗಿಡದೆ. ಅವರುಗಳೆಲ್ಲರ ಭಯಭೀತಿಯನ್ನು ಮೀರಿನಿಲ್ಲುವಂತಿತ್ತು ಅವರ ಸೋಂಬೇರಿತನ. ಹಿಂದಿನ ಬಿಲ್ಡಿಂಗನ್ನು ಏರಿ, ಮುಂದಿನ ಬಿಲ್ಡಿಂಗಿನ ಮೇಲ್ಛಾವಣೆಯ ತುದಿಗೆ ಓಡಿ, ಮೊದಲೇ ಏರ್ಪಡಿಸಿದ್ದ ಕ್ಯಾಮರ, ಫ್ಲಾಸ್ಕ್ ಮುಂತಾದುವುಗಳಿಂದ ಅನೇಖನ ಅನೇಖಾನೇಖ ಅವತಾರಗಳನ್ನು ಇಂದು ಬಹಿರಂಗಪಡಿಸಿಯೇ ತೀರುವ ಘಳಿಗೆ ಇನ್ನೇನು ಬಂದಿತೆಂದು ವೀರಾ ಏರುತ್ಸಾಹದಿಂದ ತೀರ ವೇಗವಾಗಿ ಓಡಿದ್ದ ಬಿಲ್ಡಿಂಗಿನ ಮೇಲಕ್ಕೆ. ಇಲ್ಲ, ಆತ ಎಲ್ಲಿಯೂ ಎಡವಿ ಬೀಳಲಿಲ್ಲ. ಆದರೆ ಹತ್ತು ನಿಮಿಷದ ನಂತರ ಹಿಂದಿರುಗಿದ ವೀರಾ ಗ್ರಾಫಿಕ್ ವಿಭಾಗದೊಳಕ್ಕೆ ಮೊದಲ ಹೆಜ್ಜೆ ಇರಿಸಿ ಕಬ್ಬಿಣದ ಸ್ಟೂಲನ್ನು ಹಿಡಿದು ನಿಂತಾಗ ಯಾರೂ ಆತನನ್ನು ಸರಿಯಾಗಿ ಗಮನಿಸಲಿಲ್ಲ. ಕುರ್ಚಿ ಗಡಗಡನೆ ನಡುಗತೊಡಗಿದಾಗಲೇ ಅದಕ್ಕೆ ಕಾರಣವಾದ ಮೂಲದೆಡೆ ಎಲ್ಲರ ಗಮನ ಹರಿದಿತ್ತು. ವೀರಾನೂ ಗಡಗಡನೆ ನಡುಗತೊಡಗಿದ್ದ. 
 
ವೀರಾನನ್ನು ಆಕಸ್ಮಿಕವಾಗಿ ಅಂದಿನ ದಿನವೇ ತೆಗೆಯಲಾಗಿದ್ದ ದಟ್ಟ ಚಿತ್ರsಸರಣಿಯೊಂದರ ಗ್ರಾಫಿಕ್ ಪ್ರಿಂಟುಗಳ ಮೇಲೇ ಮಲಗಿಸಲಾಯಿತು, ಕೈಕಾಲುಗಳನ್ನು ಉಜ್ಜಿಉಜ್ಜಿ ಆತನನ್ನು ಬೆಚ್ಚಗಾಗಿಸಲಾಯಿತು, ಆತನ ಶೈಲಿಯಲ್ಲೇ ಮಹಾಮಸಾಲ ಚಹಾ ಮಾಡಿ ಆತನಿಗೇ ಕುಡಿಸಲಾಯಿತು. ಒಂದೆರೆಡು ಗಂಟೆಗಳ ಕಾಲದ ನಂತರ ಸುಧಾರಿಸಿಕೊಂಡು ಎದ್ದ ವೀರಾ ಹೇಳಿದ ವಿವರ ಹೀಗಿತ್ತು.
 
ಮಹಡಿ ಮೇಲೆ ಹೋದಾಗ ಕ್ಯಾಮರಾ ಸ್ಟಾಂಡಿನ ಮೇಲೆಯೇ ಇತ್ತಲ್ಲಿ. ಫ್ಲಾಸ್ಕು ತೂಕವೂ ಇತ್ತು. ಮೇಲಿನಿಂದ ನೋಡಿದಾಗ, ಪರಿಷತ್ತಿನ ಕಾಂಪೌಂಡು ಮೂಲೆಯ ಮರದ ಕಡೆ ಬರಿಗಣ್ಣಿಗೇ ಅನೇಖ ಮರದ ಕೊಂಬೆಯೊಂದರ ಮೇಲೆ, ದೂರದಲ್ಲಿ ಕಂಡ. ಕ್ಯಾಮರವನ್ನು ಝೂಮ್ ಮಾಡಿ ನೋಡಿದೆ, ಮರದ ಕೊಂಬೆಯ ಮೇಲೆ, ಅನೇಖ ಶಿರ್ಷಾಸನ ಹಾಕಿ ನಿರಾಳವಾಗಿದ್ದ, ನೆಲದ ಮೇಲೆ ಎರಡೂ ಕಾಲು ಹಾಕಿ ನಿರಾಳವಾಗಿ ನಿಂತಷ್ಟೇ ಸಲೀಸಾಗಿ.
ಅದರಲ್ಲಿ ನಡುಗುವಂತಹದ್ದೇನಿತ್ತು ವೀರಾ? ಎಂದು ಕೇಳಿದ್ದ ನಲ್ಲಸಿವನ್.
ಸುಮ್ನೆ ಕೇಳು. ಹಿಂದೆ ಏನೋ ಸದ್ದಾದಂತಾಗಿ, ತಿರುಗಿ ನೋಡಿ, ಮತ್ತೆ ಕ್ಯಾಮರಾದೊಳಕ್ಕೆ ಕಣ್ಣು ತೂರಿಸಿನೋಡಿದೆ. ಚಕ್ಕನೆ ಎನೋ ಹೊಳೆಯಿತು. ಕ್ಷಣವೊಂದರ ಹಿಂದೆ, ಹಿಂದಿರುಗಿ ನೋಡಿದ್ದ ದೃಶ್ಯವು ಕ್ಯಾಮರಾದೊಳಗಿಂದ ವಿರುದ್ಧ ದಿಕ್ಕಿನಲ್ಲಿಯೂ ಗೋಚರಿಸುತ್ತಿತ್ತು. ಕೆಲವೇ ಸೆಕೆಂಡುಗಳ ಮುಂಚೆ ಕ್ಯಾಮರಾದೊಳಗಿಂದ ಕಂಡಿದ್ದ ದೃಶ್ಯ, ನನ್ನ ಬೆನ್ನ ಹಿಂದೆ, ನಾಲ್ಕು ಅಡಿಗಳ ಹಿಂದೆ ಅದಾಗಲೇ ಇದ್ದಂತಿತ್ತು.
ತಿರುವು ಮರುವು ಮಾತನಾಡುವುದನ್ನೇ ಗಾಭರಿ ಎನ್ನುವುದು. ಸರಿಯಾಗಿ ಹೇಳು ಏನು ನಡೆಯಿತು?
ಈಗ ತಿರುವು ಮರುವು ಮಾತನಾಡುತ್ತಿಲ್ಲ ನಾನು. ಆಗ ಆಗಿದ್ದು ತಿರುವು ಮರವು ಎಂದು ಈಗ ಸೀದಾಸಾದ ಹೇಳುತ್ತಿರುವೆ ಎಂದು ವೀರಾ ಸಿಡುಕಿ, ಮುಂದುವರೆಸಿದ್ದ, ಅರೆಕ್ಷಣ ಹಿಂದಿರುಗಿ ನೋಡಿ, ಮನಸ್ಸಿನಲ್ಲಿ ಸರಿಯಾಗಿ ರಿಜಿಸ್ಟರ್ ಆಗದಿದ್ದದ್ದೇನೆಂದರೆ, ಆ ಮೇಲ್ಛಾವಣಿಯ ನೆಲದ ಮೇಲೆ ಯಾರೋ ಹಾಕಿದ್ದ ರಂಗವಲ್ಲಿ ಕ್ಯಾಮರದ ಮೂಲಕ, ಆ ದೂರದ ಮರದ ಕೊಂಬೆಯ ಮೇಲೆ ತೇಲಾಡುತ್ತಿತ್ತು! ಮತ್ತು ಅಕ್ಷರಶಃ ನನ್ನ ಬೆನ್ನಿನ ಹಿಂದೆ, ಅನೇಖ ಕೆಲವೇ ಹೆಜ್ಜೆಗಳ ಹಿಂದೆ, ನನ್ನ ಬೆನ್ನಿಗೆ ನಿಂತು ನನ್ನನ್ನೇ ದಿಟ್ಟಿಸುತ್ತಿದ್ದ, ದೂರದ ಮರದ ಬಳಿ ಇರುಬೇಕಾಗಿದ್ದವ.
ಮಾತನಾಡಿಸಲು ಪ್ರಯತ್ನಿಸಬೇಕಿತ್ತು?!
ಉಹ್ಞೂಂ, ನಾಲ್ಕಾರು ಸಲ ಮಾತನಾಡಿದೆ. ಹೆದರುವುದೇನೂ ಇರಲಿಲ್ಲವಲ್ಲ, ಆತ ನಮ್ಮ ಅನೇಖ.
ಮತ್ತೆ?
ಮಟ ಮಟ ಮಧ್ಯಾಹ್ನದಲ್ಲೇ, ಗೊತ್ತಿರುವವನೊಬ್ಬನನ್ನು ಹತ್ತಾರು ಸಲ ಮಾತನಾಡಿಸಿದರೂ, ಆತ ಮಾತನಾಡದಿದ್ದರೆ, ಕೂರೇಸಿ ವಂಶದೌನು ಅಂತ ಗಂಟು ಕಟ್ಟಿಕೊಂಡು ಬಂದುಬಿಡುತ್ತೇವೆ.
ಈಗಲೂ ಹಾಗೇ ಮಾಡಿಬಿಡಬೇಕಿತ್ತು.
ಅದನ್ನೇ ನಾನು ಮಾಡಿದ್ದು.
ಮತ್ತೆ ನಿನ್ನನ್ನು ಹೆದರಿಸಿದ್ದು ಏನು?
ನಾನು ಹೆದರಲಿಲ್ಲ. ಸರಿಯಾಗಿ ಕೇಳಿ. ಅನೇಖನನ್ನು ಕತ್ತಲಲ್ಲಿ ಮಾತನಾಡಿಸಿ ಸಾಕಾಗಿ, ಮಾತನಾಡಿಸಬಾರದು ಎಂದು ನಿರ್ಧರಿಸಿ, ಗಂಟುಮೂಟೆ ಕಟ್ಟುವಂತೆ, ಕ್ಯಾಮರ, ಸ್ಟಾಂಡ್, ಫ್ಲಾಸ್ಕುಗಳು-ಎಲ್ಲವನ್ನೂ ಹೊತ್ತುಕೊಂಡು ಹಿಂದಕ್ಕೆ ಬರತೊಡಗಿz.
ಹಿಂದೆ ಹಿಂದೆ ಬರತೊಡಗಿದೆಯ? ಕೇಳಿದ್ದ ಪ್ರಶ್ನಾಮೂರ್ತಿ.
ಅಲ್ಲಲೇ, ಹಿಂದಿರುಗಿ ನಡೆದು ಬರತೊಡಗಿದೆ, ಮೆಟ್ಟಿಲುಗಳ ಮಧ್ಯೆ
ಗಾಢ ರಾತ್ರಿ, ಅಮಾವಾಸ್ಯೆ ಬೇರೆ, ಎದುರಿಗೆ ಅನೇಖನಂತೆ ಕಾಣುತ್ತಿದ್ದ ಆಕಾರ ಎಂದು ಪಾಜು ರಟೇಲ್ ಕೀಟಲೆ ಮಾಡಿದ, ಅಪರೂಪಕ್ಕೆಂಬಂತೆ.
ಇಲ್ಲೋ. ಆತ ಅಲ್ಲೆ ನಿಂತಿದ್ದ. ನಾನು ಆತನನ್ನು ಹಾದು ಬರಬೇಕಿತ್ತು. ಆತನನ್ನು ದಾಟಿಬಂದ ಕ್ಷಣದಲ್ಲಿ, ಅಥವ ದಾಟಿದ ಕ್ಷಣದಲ್ಲಿ ಒಂದು ವಿಚಿತ್ರ ನಡೆಯಿತು, ಎಂದು ವೀರಾ, ವೀರಾವೇಷದ ಮುಖವಾಡ ತೊಡಲು ಪ್ರಯತ್ನಿsssಸುತ್ತಿದ್ದ.
 
ಸುಧಾರಿಸಿಕೊಂಡ ನಂತರ ಆತ ಹೇಳಿದ್ದು ಇಷ್ಟು. ಆತ ಅನೇಖನನ್ನು ಆ ಕಾರ್ಗತ್ತಲಿನಲ್ಲಿ ದಾಟಿ ಬಂದ ಕ್ಷಣದಲ್ಲಿ, ಹಿಂದಿರುಗಿ ನೋಡಲಾಗಿ, ಆನೇಖನ ಪಕ್ಕ ಬರುವ ಬದಲು ಆತನ ಪಕ್ಕೆಯನ್ನು ಹಾಯ್ದು ಬಂದಿದ್ದ, ಆತ ಪಾರದರ್ಶಕವೋ ಎಂಬಂತೆ. ಮತ್ತೆ ಮತ್ತೆ ಅನೇಖನ ಅಥವ ಆತನ ಆಕಾರದ ಮೂಲಕ ಹಾಯ್ದು ಹೋದ ವೀರಾ. ಮೆಟ್ಟಿಲಿಳಿದು, ಕೊನೆ ಕ್ಷಣದವರೆಗೂ ಆತ ನೋಡುತ್ತಲೇ ಇದ್ದ. ಅನೇಖನ ಆಕಾರ ಹಾಗೇ ಇತ್ತು. ಛಾಯಾಚಿತ್ರಕಾರನಾದ ವೀರಾ, ಪ್ರೇತಾತ್ಮಗಳ ಆತ್ಮಗಳನ್ನು ಸೆರೆಹಿಡಿವಂತೆ ಅನೇಖನ ಆಕಾರವನ್ನು ಚಕಚಕನೆ ಕ್ಲಿಕ್ಕಿಸಿ ಗ್ರಾಫಿಕ್ ಸ್ಟುಡಿಯೋಕ್ಕೆ ವೀರಾವೇಶದಿಂದಲೇ ಬಂದು, ಕುರ್ಚಿಯನ್ನು ಹಿಡಿದು ನಿಂತಾಗಲೇ ಆತನ ಅರಿವಿಗೆ ಬಂದಿದ್ದು, ಕುರ್ಚಿ ನಡುಗುತ್ತಿದೆ ಎಂದು ಮತ್ತು ಅದರ ಮೂಲ ತಾನು ಎಂಬುದು.
 
ಮಾರನೇ ದಿನ ಅನೇಖನ ಆಕಾರದ ಫೋಟೋಗಳ ಪ್ರಿಂಟ್ ಹಾಕಿಸಿದ್ದ ವೀರಾ. ಆ ಛಾಯಾಚಿತ್ರಗಳಲ್ಲಿ, ಕತ್ತಲೆಯ ಮೇಲ್ಛಾವಣಿಯಲ್ಲಿ ಅನೇಖನ ರೇಖಾಚಿತ್ರವೊಂದು-ಕಪ್ಪು ಗೋಡೆಯ ಮೇಲೆ ಬಿಳಿ ಸೀಮೆಸುಣ್ಣದಿಂದ ಬರೆದಂತೆ-ಗೋಡೆಯ ಮೇಲೆ ಬರೆಯಲಾಗಿತ್ತು. ರೀಲ್ ಫೋಟೋಗಳಾದ್ದರಿಂದ ವೀರಾ ಐದಾರು ಚಿತ್ರಗಳನ್ನು ತೆಗೆದಿದ್ದ. ಒಂದರಲ್ಲಿ ಅನೇಖನ ಬೆನ್ನಿನ ಭಾಗ ಕಾಣುತ್ತಿದ್ದರೆ, ಮತ್ತೊಂದರಲ್ಲಿ ಆತ ಪಕ್ಕಕ್ಕೆ ತಿರುಗಿದ ರೇಖಾಚಿತ್ರವಿದ್ದರೆ, ಕೊನೆಯದ್ದರಲ್ಲಿ ಅನೇಖ ಕ್ಯಾಮರಾದ ಕಡೆ ನೋಡುತ್ತ ಅಣಕಿಸುತ್ತಿದ್ದ ದೃಶ್ಯವಿತ್ತು.
 
 ಅನೇಖನನ್ನು ವಿಚಾರಿಸಲಾಗಿ ಆತ ಎಂದಿನ ಮಂದಹಾಸ ಬೀರಿದ್ದ. ನಿಜ ಹೇಳು, ನೆನ್ನೆ ರಾತ್ರಿಯ, ವೀರಾ ಹೇಳಿದ ಆ ಘಟನೆಗಳಲ್ಲಿ ನಿನ್ನ ಪಾತ್ರವೇನು? ಎಂದು ಎಲ್ಲರೂ ಎಲ್ಲ ರೀತಿಯಲ್ಲಿಯೂ ಕೇಳಿದ್ದರು. ಅನೇಖ ಮಂದಹಾಸ ಬೀರುತ್ತ ಉತ್ತರಿಸಿದ್ದ, ನೀವೆಲ್ಲಾ ಹೇಗೆ ಹೇಳಿದರೆ ಹಾಗೇ. ನಾನು ಏನೆಂದು ಉತ್ತರಿಸಬೇಕು ಎಂದು ನೀವು ಪ್ರತಿಯೊಬ್ಬರೂ ಹೇಗೆ ಹೇಳಿಕೊಡುತ್ತೀರೋ ಹಾಗೇ ನುಡಿಯುವೆ. ಇದು ಬಿ.ಬಿ.ಎಂ. ಕ್ಷಣ, ಎಂದು ನಾಟಕೀಯವಾಗಿ ನಿಗೂಢತೆಯನ್ನು ಪುನರ್-ಪರಿಷ್ಕರಿಸಿದ್ದ.///
 
 
 
 
 
 
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):