ನೇತ್ರಾವತಿಯನ್ನು ದಾಟುವಾಗ‌

ನೇತ್ರಾವತಿಯನ್ನು ದಾಟುವಾಗ‌

ಕವನ

ಅಸ್ತಂಗಮ ಭಾಸ್ಕರನಿಗೆ 

ಮುಗಿಲೊಡ್ಡಿದೆ ಛತ್ರಿ

ನದಿ ನೀರಲಿ ಪಡಿಮೂಡಿದೆ

ನೀಲಿಯ ಗಿರಿಧಾತ್ರಿ         ||1||

ಇದು ನೆಳಲೊ,ಇದು ಮುಗಿಲೊ

ಹಿನ್ನೀರಲಿ ಚಿತ್ರ

ನಿಜ ಯಾವುದೊ,ಹುಸಿ ಯಾವುದೊ

ಮುನ್ನೀರು ವಿಚಿತ್ರ         ||2||

ಹೊಳೆ ನೀರಿನ ಅಲೆಅಲೆಯಲಿ

ಮಂದಾನಿಲ ನ್ಱುತ್ಯ

ಹುರುಪಳಿಯದೆ ನುಡಿಯುತ್ತಿದೆ

ಈ  ಕ್ಷಣವೇ  ಸತ್ಯ       ||3||

ಸಾಗುತ್ತಿದೆ ನಮ್ಮಯ ಪಥ‌ 

ಈ ಪರಿಸರ ದಾಟಿ

ಬಗೆಗಣ್ಣಿಗೆ ಗೋಚರಿಸುವ‌

ಬಣ್ಣಕದೇನ್  ಸಾಟಿ?    ||4||

ಕಣ್ಣನು ಮುಚ್ಚಲು ಮಿಂಚಿತು

ಕ್ಷಣ‌ ಕಾಲದಿ ಮಾಯ‌ 

ಹಿಡಿಬೊಗಸೆಗೆ ಸಿಕ್ಕಷ್ಟೇ

ಹರ್ಷಕೆ ತಳಪಾಯ‌    ||5||