ನೈಟ್ ಡ್ಯೂಟಿಯ ಮಹಿಮೆ.

3

ನಾಲ್ಕೈದು ವರ್ಷಗಳಿಂದ ಜೊತೆಯಾಗಿ ಕಲಿತ ಸ್ನೇಹ ಹಾಗೂ ಶಾಂತಿ ಉದ್ಯೋಗವನ್ನು ಅರಸಿಕೊಂಡು ಒಂದೇ ಊರಿಗೆ ಬಂದಿದ್ದರು. ಅಪರಿಚಿತ ಊರಿನಲ್ಲಿ ಒಂದೇ ಕಡೆ ಕೆಲಸ ದೊರಕಿದ್ದರೆ ಚೆನ್ನಾಗಿತ್ತು ಎಂದು ಆಗಾಗ ಮಾತನಾಡಿಕೊಳ್ಳುತ್ತಿದ್ದ ಅವರು ಕೊನೆಗೂ ಬೇರೆ ಬೇರೆ ಕಡೆಯೇ ಕೆಲಸ ಮಾಡುವಂತಾಯಿತು. ಆದರೇನು? ಉಳಿದುಕೊಳ್ಳುವ ವಸತಿಯನ್ನು ಇಬ್ಬರ ಆಫೀಸಿಗೂ ಸಮಾನ ದೂರವಾಗುವಂತೆ ಒಂದೇ ಕಡೆ ನೋಡಿಕೊಂಡರು. ಒಂದೆರಡು ತಿಂಗಳು ನಿರಾತಂಕವಾಗಿ ಅವರ ಉದ್ಯೋಗ ಜೀವನ ಸಾಗುತ್ತಿತ್ತು. ಹೀಗೆ ಒಂದು ದಿನ ಎಂದಿನಂತೆ ಆಫೀಸಿನಿಂದ ರೂಂ ಗೆ ಬಂದ ಶಾಂತಿ ತುಂಬಾ ಖುಷಿಯಲ್ಲಿದ್ದಳು. ತಮ್ಮ ಈ ಪರಿಯ ಸಂತೋಷಕ್ಕೆ ಕಾರಣವನ್ನು ಹೇಳುವಿರಾ ತಾಯಿ ಎಂದು ಸ್ನೇಹ ರಾಗವಾಗಿ ಕೇಳಿದಾಗ, ಗುಡ್ ನ್ಯೂಸ್ ಕಣೆ.. ನಾಳೆಯಿಂದ ನೈಟ್ ಡ್ಯೂಟಿ. ಹಗಲೆಲ್ಲಾ ಕೆಲಸಗಳನ್ನು ಮುಗಿಸ್ಕೊಂಡು ಆರಾಮಾಗಿ ನಿದ್ದೆ ಹೊಡೆದು ರಾತ್ರಿ ಹನ್ನೊಂದರ ವೇಳೆಗೆ ಹೋದರಾಯಿತು ಎಂದಳು. ದಿನದ ಇಪ್ಪತ್ತನಾಲ್ಕು ಗಂಟೆಯೂ ಬಿಡುವಿಲ್ಲದೆ ಪೈಪೋಟಿಯಲ್ಲಿ ಸುದ್ಧಿಯನ್ನು ಪ್ರಸಾರಿಸುತ್ತಿರುವ ಮಾಧ್ಯಮದ ಕೆಲಸ ಎಂದರೆ ಕೇಳಬೇಕೆ? ಹೀಗೆ ಎರಡು ವಾರಗಳಿಗೊಮ್ಮೆ ಕೆಲಸದ ಸಮಯದ ಬದಲಾವಣೆಯಾಗುತ್ತಲೇ ಇರುತ್ತದೆ. ಆದರೆ ಶಾಂತಿಗದು ಮೊದಲನೆ ಅನುಭವ. ರಾತ್ರಿ ನಿದ್ದೆ ಕೆಟ್ಟು ಅಭ್ಯಾಸವಿಲ್ಲದ ಆಕೆಯನ್ನು ನೋಡಿ ಸ್ನೇಹ ಮನದೊಳಗೆ ಚಿಂತಿಸುತ್ತಿದ್ದರೆ ಅದ್ಯಾವುದರ ಚಿಂತೆಯೇ ಇಲ್ಲದೆ ಶಾಂತಿ ಆನಂದದಿಂದಿದ್ದಳು.
ಮರುದಿನ ಸ್ನೇಹ ಆಫೀಸಿಗೆ ಹೋಗುವಾಗ, ಚೆನ್ನಾಗಿ ನಿದ್ದೆ ಮಾಡೆ ಶಾಂತಿ ಆಮೇಲೆ ರಾತ್ರಿಯೆಲ್ಲಾ ಎದ್ದಿರಬೇಕಾಗುತ್ತೆ.. ಎಂದು ಕಿವಿ ಮಾತು ಹೇಳಿ ತನ್ನ ಕೆಲಸಕ್ಕೆ ಹೋದಳು. ಸಂಜೆ ಬಂದು ನೋಡಿದಾಗ ಶಾಂತಿ ಯಾವುದೋ ಚಾನಲ್ ಹಾಕಿ ಕುಳಿತಿದ್ದಳು. ನಂತರ ಸುಮಾರು ಹನ್ನೊಂದು ಗಂಟೆಯ ಹೊತ್ತಿಗೆ ಆಫೀಸ್‌ನ ಕ್ಯಾಬ್ ನಲ್ಲಿ ಡ್ಯೂಟಿಗೆ ಹೋದಳು. ಮರುದಿನ ಮುಂಜಾನೆ ಎಂಟು ಗಂಟೆಯವರೆಗೆ ಆಕೆಯ ಕರ್ತವ್ಯದ ಸಮಯ.

ಸ್ನೇಹ ದಿನಾ ಮುಂಜಾನೆ 7 ಗಂಟೆಗೆ ಆಫೀಸಿಗೆ ಹೊರಡುತ್ತಿದ್ದರಿಂದ, ಗೆಳತಿಗೆ ಫೋನಾಯಿಸಿ ವಿಚಾರಿಸೋಣವೆಂದುಕೊಂಡು ಕರೆ ಮಾಡಿದಳು, ಧ್ವನಿ ಎಂದಿನಂತಿರಲಿಲ್ಲ. ನಿದ್ದೆಗಣ್ಣಲ್ಲಿ ಮಾತನಾಡಿದಂತಿತ್ತು. ಆಕೆಯ ಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದ ಸ್ನೇಹ ಹುಷಾರಾಗಿ ಬಂದು ಫ್ರೆಶ್ ಆಗಿ ತಿಂಡಿ ತಿಂದು ಮಲಗಮ್ಮ ಎಂದಳು ಗೆಳತಿಯ ಮೇಲಿನ ಕಾಳಜಿಯಿಂದ. ಮನೆ ಬಿಟ್ಟು ದೂರದ ಊರಿಗೆ ಹೋದಾಗ ತನ್ನವರು ಎಂದು ಇರುವುದು ಸ್ನೇಹಿತರಲ್ಲವೆ. ಮನೆಯಲ್ಲಿದ್ದಾಗ ಕುಟುಂಬ, ಹೊರಗಡೆ ಇದ್ದಾಗ ಯಾವುದೇ ವಿಚಾರದಲ್ಲಾದರೂ ಮೊದಲ ಪ್ರಾಶಸ್ತ್ಯ ಸ್ನೇಹಿತರಿಗೆ. ಸ್ನೇಹಳಿಗೆ  ಮಧ್ಯಾಹ್ನದ ಊಟದ ಹೊತ್ತಿಗೆ ಮಾತಾಡಲು ಬಿಡುವು ದೊರಕುವುದರಿಂದ ಬಂದು ನಿದ್ದೆ ಮಾಡಿದ್ದರೆ ಊಟಕ್ಕೂ ಎದ್ದಿದ್ದಾಳೊ ಇಲ್ಲವೋ ಎಂದುಕೊಂಡು ಶಾಂತಿಗೆ ಮತ್ತೆ ಫೋನಾಯಿಸಿದಳು. ರೂಮಲ್ಲಿ ಒಬ್ಬಳೇ ಮಲಗಿರುವುದರಿಂದ ಆಕೆಯನ್ನು ಎಬ್ಬಿಸುವವರೂ ಯಾರೂ ಇರಲಿಲ್ಲವೆನ್ನಿ. ನಿದ್ದೆಯಲ್ಲೇ ಕಾಲ್ ರಿಸೀವ್ ಮಾಡಿದ ಶಾಂತಿ ಯಾಕೇ, ಏನಾಯ್ತೆ? ಇಷ್ಟು ಬೇಗ ಕಾಲ್ ಮಾಡಿದ್ದೀಯಾ..ಎಲ್ಲೋದೆ ನೀನು? ಬೆಳಗ್ಗೆ ಬೇಗ ಏಳ್ಬೇಕು ಕಣೆ. ಡ್ಯೂಟಿ ಇದೆ. ಲೇಟಾದ್ರೆ ನಮ್ ಬಿಪಿ(bulletin producer) ಬೈತಾರೆ. ಇನ್ನೂ ಏನೇನೋ ಹೇಳುತ್ತಿದ್ದಳು, ಅವಳ ಮಾತನ್ನು ಅರ್ಧದಲ್ಲೇ ಮುರಿದ ಸ್ನೇಹ ಅಮ್ಮಾ ನೀನೀಗಾಗಲೇ ನೈಟ್ ಡ್ಯೂಟಿ ಮುಗಿಸಿ ಬಂದು ಮಲಗಿದ್ದೀಯಾ..ಈವಾಗ ಮಧ್ಯಾಹ್ನ ದ ಊಟದ ಹೊತ್ತು, ಹೋಗಿ ಊಟ ಮಾಡ್ಕೊಂಡು ಆಮೇಲೆ ಮಲ್ಕೋ..ಸಂಜೆ ಬಂದು ಎಬ್ಬಿಸ್ತೀನಿ ಎಂದು ಫೋನಿಟ್ಟಳು.

ಮುಂಚಿನ ದಿನ ನೈಟ್ ಡ್ಯೂಟಿಯೆಂದು ಕುಣಿಯುತ್ತಿದ್ದ ಶಾಂತಿ ಇಂದು ಗೆಳತಿಯ ಒತ್ತಾಯದಿಂದ ಹೋಗಿದ್ದಳು. ಎರಡನೇ ದಿನದ ಡ್ಯೂಟಿ ಮುಗಿಸಿಬರುವ ಹೊತ್ತಿಗೆ ಇನ್ನೊಂದು ಅವಾಂತರ ಮಾಡಿಕೊಂಡು ಬಂದಿದ್ದಳು. ಬಸ್ಸಿನಿಂದ ಇಳಿಯುವಾಗ ನಿಂತ ಬಸ್ ಕೂಡಲೇ ಚಲಿಸಿದ್ದರಿಂದ ಬ್ಯಾಲೆನ್ಸ ತಪ್ಪಿ ಕೆಳಗಡೆ ಬಿದ್ದು ಸಣ್ಣ ಪುಟ್ಟ ಗಾಯ ಮಾಡಿಕೊಂಡು ಬಂದಿದ್ದಳು. ಬಸ್ ಚಲಿಸಿದ್ದರಿಂದಾಗಿ ಬಿದ್ದಳೋ ಅಥವಾ ಇವಳೇ ನಿದ್ದೆಯ ಮಂಪರಿನಲ್ಲಿದ್ದಳೋ ಎಂದು  ಆಕೆಯ ನೈಟ್ ಡ್ಯೂಟಿಯ ಮಹಿಮೆಯನ್ನು ಯೋಈಚಿಸುತ್ತಿದ್ದ ಸ್ನೇಹ ಯಾವತ್ತು ಇವಳ ನೈಟ್ ಡ್ಯೂಟಿ ಮುಗಿದು ಡೇ ಡ್ಯೂಟಿ ಆರಂಭವಾಗುತ್ತೋ ಎಂದು ಕೊಂಡಳು..
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):