ಪಕ್ಷ(ಪಾತ)ಅತೀತ ಮಾಧ್ಯಮ ಎಲ್ಲಿದೆ?

0

 

  ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಹಗರಣಗಳ ಅಸ್ಥಿಪಂಜರಗಳು ಕಪಾಟುಗಳೊಳಗಿನಿಂದ ಒಂದೊಂದಾಗಿ ಹೊರಬೀಳುತ್ತಿರುವುದು ನಮ್ಮ ಮಾಧ್ಯಮಗಳಿಗೆ ಸುಗ್ಗಿಯಾಗಿ ಪರಿಣಮಿಸಿದೆ. ಈ ಸುಗ್ಗಿಯ ಫಸಲನ್ನು ಕೊಯ್ದುಕೊಳ್ಳುವ ಕೆಲಸವನ್ನು ಮುದ್ರಣ ಹಾಗೂ ವಿದ್ಯುನ್ಮಾನ ಈ ಎರಡೂ ಮಾಧ್ಯಮಗಳೂ ಬಲು ಉಮೇದಿನಿಂದ ನಡೆಸಿವೆ. ಸಂತೋಷವೇ. ಆದರೆ, ಮಾಧ್ಯಮಗಳಿಗಿರಬೇಕಾದ ಪ್ರಾಮಾಣಿಕತೆ ಮತ್ತು ನಿಷ್ಪಕ್ಷಪಾತ ಮನೋಭಾವ ಇವು ಈ ಉಮೇದಿನ ಹಿಂದೆ ಇವೆಯೇ ಎಂದು ಗಮನಿಸಿದಾಗ ನಿರಾಶೆಯಾಗುತ್ತದೆ.
  ಒಂದೊಂದು ಪತ್ರಿಕೆಯೂ/ಟಿವಿ ವಾಹಿನಿಯೂ ಒಂದೊಂದು ಒಲವು - ಒಂದೊಂದು ಮುನಿಸು ಇಟ್ಟುಕೊಂಡು ಆ ಒಲವು ಮತ್ತು ಮುನಿಸಿಗನುಗುಣವಾಗಿ ಸುದ್ದಿಗಳನ್ನು ರೂಪುಗೊಳಿಸಿ ಇಂದು ನಮ್ಮೆದುರಿಡುತ್ತಿವೆ. ಯಾವ ಪತ್ರಿಕೆಯಲ್ಲೂ/ಟಿವಿ ವಾಹಿನಿಯಲ್ಲೂ ನಮಗೆ ನಿಷ್ಪಕ್ಷಪಾತದಿಂದ ಕೂಡಿದ ಮತ್ತು (ರಾಜಕೀಯ) ಪಕ್ಷಾತೀತವಾದ ಸ್ವಚ್ಛ-ಸಂಪೂರ್ಣ ಸುದ್ದಿ ಸಿಗುತ್ತಿಲ್ಲ.
  ಒಂದು ದಿನಪತ್ರಿಕೆಗೆ ಕಾಂಗ್ರೆಸ್ ಸರ್ಕಾರ ಮಾಡಿದ್ದೆಲ್ಲಾ ಸರಿಯೆಂಬಂತೆ ಕಂಡರೆ ಇನ್ನೊಂದಕ್ಕೆ ಕಾಂಗ್ರೆಸ್ಸಿನ ಎಲ್ಲ ನಡೆಯೂ ತಪ್ಪೆಂದು ಭಾಸವಾಗುತ್ತಿದೆ! ಒಂದು ಪತ್ರಿಕೆಗೆ ಬಿಜೆಪಿಯು ಪರಮ ಆದರ್ಶ ಪಕ್ಷವಾಗಿ ಕಂಡುಬಂದರೆ ಇನ್ನೊಂದಕ್ಕದು ಪರಮ ದುಷ್ಟ ಪಕ್ಷವಾಗಿ ಕಂಡುಬರುತ್ತಿದೆ! ಮತ್ತೊಂದೆರಡು ಪತ್ರಿಕೆಗಳು ತಾವು ನಿಷ್ಪಕ್ಷಪಾತಿಗಳೆಂದು ತೋರಿಸಿಕೊಳ್ಳಲೆತ್ನಿಸುತ್ತಿವೆಯಾದರೂ ಅವುಗಳ ವರದಿಗಾರಿಕೆಯಲ್ಲಿ ಮತ್ತು ಸುದ್ದಿಯ ಆಯ್ಕೆಯಲ್ಲಿ ಅವುಗಳ ಎಡ/ಬಲ ಒಲವು ಸ್ಪಷ್ಟಗೋಚರವಾಗುತ್ತಿದೆ! ಇವೆಲ್ಲದರ ಪರಿಣಾಮ, ಓದುಗರಾದ ನಮಗೆ ನಿಜಸುದ್ದಿಯ ಅರಿವೇ ಸಂಪೂರ್ಣವಾಗಿ ಆಗುತ್ತಿಲ್ಲ.
  ವಿವಿಧ ಸುದ್ದಿಗಳಿಗೆ ಪ್ರಾಮುಖ್ಯ ನೀಡುವ ವಿಷಯದಲ್ಲಿಯೂ ಪತ್ರಿಕೆಗಳ ದೃಷ್ಟಿಗಳು ಭಿನ್ನ-ವಿಭಿನ್ನ. ರಾಜ್ಯ ಬಿಜೆಪಿ ಸರ್ಕಾರದ ಗೊಟಾಳೆಗಳಿಗೆ ಒಂದೆರಡು ಪತ್ರಿಕೆಗಳು ಇನ್ನಿಲ್ಲದ ಮಹತ್ತ್ವ ನೀಡಿದರೆ ಇನ್ನೊಂದೆರಡು ಪತ್ರಿಕೆಗಳು ಆ ಗೊಟಾಳೆಗಳನ್ನು ಬಹುತೇಕ ಸಂಪೂರ್ಣ ಅಲಕ್ಷಿಸುತ್ತಿವೆ. ಮತ್ತೊಂದೆರಡು ಪತ್ರಿಕೆಗಳು ತಮ್ಮಿಚ್ಛೆಗನುಗುಣವಾಗಿ ಎಷ್ಟು ಬೇಕೋ ಅಷ್ಟನ್ನೇ, ಯಾವ ಶೈಲಿಯಲ್ಲಿ ಬೇಕೋ ಆ ಶೈಲಿಯಲ್ಲಿ ಓದುಗರೆದುರಿಡುತ್ತಿವೆ. ಕೇಂದ್ರ (ಯುಪಿಎ) ಸರ್ಕಾರದ ಟೂಜಿ ಹಗರಣದ ವರದಿಗಾರಿಕೆಗೂ ಈ ಮಾತು ಅನ್ವಯ.
  ಪತ್ರಿಕೆಗಳ ಕಥೆ ಹೀಗಾದರೆ ಟಿವಿ ವಾಹಿನಿಗಳ ಕಥೆ ಇನ್ನೂ ಅತ್ತತ್ತ. ಇಂಗ್ಲಿಷಿನ ಮೆಜಾರಿಟಿ ವಾಹಿನಿಗಳು ಬಲಪಂಥೀಯ ಸರ್ಕಾರ ಮತ್ತು ಸಂಸ್ಥೆಗಳನ್ನು ದೇಶದ್ರೋಹಿಗಳಂತೆ ಬಿಂಬಿಸುವುದರಲ್ಲಿ ಮತ್ತು ಭಾರತವನ್ನು ಕೊಳಕು-ಕುತ್ಸಿತ-ದರಿದ್ರ ದೇಶವನ್ನಾಗಿ ಚಿತ್ರಿಸುವುದರಲ್ಲಿ ಅದೇನೋ ಸಂತೋಷ ಕಾಣುತ್ತಿವೆ! ನಿಜವಾಗಿ ಭಾರತವು ಕೊಳಕು-ಕುತ್ಸಿತ-ದರಿದ್ರ ದೇಶವೇ? ಹಸಿವು-ಅಸಮಾನತೆಗಳು ಭಾರತದಲ್ಲಿವೆ, ನಿಜ. ಆದರೆ ಅವು ಭಾರತದಲ್ಲಿ ಮಾತ್ರ ಇವೆಯೇ? ಬೇರೆಡೆ ಇಲ್ಲವೇ? ಅಥವಾ, ಭಾರತದಲ್ಲಿ ಅವು ಇತರೆಲ್ಲ ದೇಶಗಳಿಗಿಂತ ಹೆಚ್ಚು ಇವೆಯೇ? ಇತರ ಬಹುಪಾಲು ದೇಶಗಳಿಗಿಂತ ಭಾರತದಲ್ಲಿ ಪ್ರಖರವಾಗಿ ವಿಜೃಂಭಿಸುತ್ತಿರುವ ಸ್ನೇಹ-ಸಹನೆ-ಶಾಂತಿ-ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ, ಸಾಂಸಾರಿಕ ಮತ್ತು ಸಾಮಾಜಿಕ ಮೌಲ್ಯ ಇವು ಈ ಇಂಗ್ಲಿಷ್ ವಾಹಿನಿಗಳ ಗಮನಕ್ಕೇಕೆ ಬರುತ್ತಿಲ್ಲ?
  ಕನ್ನಡದಲ್ಲಂತೂ, ಒಂದು ವಾಹಿನಿಯು ಜೆಡಿಎಸ್ ಪಕ್ಷದ ಮುಖವಾಣಿಯಾದರೆ ಇನ್ನೊಂದು ವಾಹಿನಿಯು ಕಾಂಗ್ರೆಸ್ ಪಕ್ಷದ ವಕ್ತಾರನಾಗಿ ಹಾಗೂ ಮತ್ತೊಂದು ವಾಹಿನಿಯು ಬಿಜೆಪಿಯ ಸಿಂಪತೈಸರ್ ಆಗಿ ಕಾರ್ಯನಿರ್ವಹಿಸುತ್ತಿವೆ! ತಮಿಳೂ ಸೇರಿದಂತೆ ಇತರ ಭಾಷೆಗಳ ವಾಹಿನಿಗಳೂ ಈ ಪಕ್ಷಪಾತದಿಂದ ಹೊರತೇನಲ್ಲ.
  ಕಳೆದ ನಲವತ್ತೈದು ವರ್ಷಗಳಿಂದ ನಾನು ಬರವಣಿಗೆಯ ಜೊತೆಜೊತೆಗೇ ಸಾಮಾಜಿಕ ರಂಗದಲ್ಲೂ ಕ್ರಿಯಾಶೀಲನಾಗಿರುವುದರಿಂದಾಗಿ ಮತ್ತು ನನ್ನಿಂದ ಪ್ರೋತ್ಸಾಹಿತರಾದ ಅನೇಕರು ರಾಜಕೀಯ ರಂಗದಲ್ಲಿ ಉನ್ನತ ಸ್ಥಾನಗಳಿಗೇರಿರುವುದರಿಂದಾಗಿ ನನಗೆ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿನ ಅನೇಕ ಆಗುಹೋಗುಗಳ/ಸುದ್ದಿಗಳ ನಿಜಮಾಹಿತಿಗಳು ಲಭ್ಯವಾಗುತ್ತವೆ. ಇದರಿಂದಾಗಿ ನನಗೆ ಸುದ್ದಿ ಮಾಧ್ಯಮಗಳ ಪಕ್ಷಪಾತವು ಇತರ ಓದುಗರಿಗಿಂತ ಹೆಚ್ಚು ನಿಖರವಾಗಿ ಅರಿವಿಗೆ ಬರುತ್ತದೆ. (ಆದರೆ, ನಿಜಮಾಹಿತಿಯನ್ನು ಪ್ರಚುರಪಡಿಸಲು ನನಗೆ, ಮೂಲಾಧಾರವು ನೀಡಬೇಕಾದ ರಕ್ಷಣೆಯ ಕೊರತೆ ಅಡ್ಡಬರುತ್ತದೆ.)
  ಒಟ್ಟಿನಲ್ಲಿ ಹೇಳುವುದಾದರೆ, ನಮ್ಮ ಮಾಧ್ಯಮಗಳ ಪಕ್ಷಪಾತದ ನಡೆಯಿಂದಾಗಿ, ಪ್ರಜೆಗಳಾದ ನಾವು ’ಸಂಪೂರ್ಣ ನಿಜಸುದ್ದಿ’ಗಳಿಂದ ವಂಚಿತರಾಗುತ್ತಲೇ ಇದ್ದೇವೆ. ಇದೊಂದು ದುರಂತವೇ ಸರಿ.  

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ಯಾವುದೇ ಮಾಧ್ಯಮದಿಂದ ತಕ್ಷಣಕ್ಕೆ ನಾವು ತಿಳಿಯಬಯಸುವುದು ‘ಏನಾಯಿತು’ ಎಂಬ ಮಾಹಿತಿಯನ್ನು. ಅದದ್ದು ಆದಂತೆಯೇ ನಮಗೆ ‘ಗೊತ್ತಾಗಬೇಕು’. ಇದು ವರದಿ; ಪ್ರಾಥಮಿಕ ಮಾಹಿತಿ. ಇದನ್ನೇ ‘ಸುದ್ದಿ’ ಎನ್ನುವುದು. ಇದು ‘ಹೇಗಾಯಿತು’ ಎನ್ನುವುದು ಘಟನೆಯ ಅಥವಾ ಬೆಳವಣಿಗೆಯ ವಿವರ. ಇದು ಎರಡನೆಯ ಹಂತ. ಈ ಎರಡರಲ್ಲೂ ಇರಬೇಕಾದ್ದು ವಸ್ತುನಿಷ್ಠ ವಿವರಣೆ. ಇಂಥದು ‘ಏಕಾಯಿತು’ ಎನ್ನುವುದು ಮುಂದಿನ Tertiary ಹಂತ. ಇಂಥದೊಂದು ಆಗಿದ್ದರಿಂದ ಏನಾಗುತ್ತದೆ. ಆಗದಿರಬೇಕಾದರೆ ಏನಾಗಬೇಕಾಗಿತ್ತು ಇತ್ಯಾದಿಗಳು ಪರಿಣಿತ ವಿಶ್ಲೇಷಣೆ. ಈ ಹಂತದಲ್ಲಿ ಪಕ್ಷಪಾತ, ಪೂರ್ವಗ್ರಹ, ಒಳ ಉದ್ದೇಶ, ಒಬ್ಬರ ಬಟ್ಟೆ ಬಿಚ್ಚಿ ಬತ್ತಲು ಮಾಡುವ, ಆ ಉಡುಗೆಯನ್ನು ಶಾಲುಜೋಡಿಯಾಗಿ ಇನ್ನೊಬ್ಬರಿಗೆ ಹೊದೆಸುವ ಹುನ್ನಾರಗಳಿಗೆಲ್ಲಾ ಅವಕಾಶವಿರುತ್ತದೆ. ಮೊದಲ ಎರಡು ಹಂತ News ಎನಿಸಿದರೆ ಮೂರನೆಯದು Views ಈಗಾಗುತ್ತರುವ ಎಡವಟ್ಟೆಂದರೆ, ಮಾಧ್ಯಮಗಳು (ವಿಶೇಷವಾಗಿ ವಾಹಿನಿಗಳು) ಪೈಪೋಟಿಯ ಆತುರಕ್ಕಾಗಿಯೋ, ಮಾಧ್ಯಮದ ತತ್ತ್ವಜ್ಞಾನ ಕೊರತೆಯ ಅಡ್ಡಕಸಬಿತನದಿಂದಲೋ ಅಥವಾ ಸೂಪರ್ ಬಾಸ್‌ಗಳ ಆದೇಶದ ಮೇರೆಗೋ ನೇರವಾಗಿ ಮೂರನೆ ಹಂತಕ್ಕೇ ಹೊರಟುಹೋಗುತ್ತವೆ. ಭೀಕರ ಅಪಘಾತವೊಂದರಲ್ಲಿ ಎಷ್ಟು ಜನ ಸತ್ತಿರಬಹುದು, ಬದುಕಿ ಉಳಿದವರ ಪಾಡೇನಾಗುತ್ತಿದೆ. ಯಾವ ಯಾವ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ ಇತ್ಯಾದಿ ಅಗತ್ಯ ಮಾಹಿತಿಗಿಂತಲೂ ಹೆಚ್ಚಾಗಿ ಅಪಘಾತಕ್ಕೆ ಚಾಲಕನ ನಿರ್ಲವಕ್ಷ್ಯ ಕಾರಣವೇ? ರಸ್ತೆ ರಿಪೇರಿಗಾಗಿ ಎಷ್ಟು ಬಾರಿ ಮನವಿ ಸಲ್ಲಿಸಲಾಗಿತ್ತು, ಮಂತ್ರಿಗಳು ಏನೇನು ಭರವಸೆ ನೀಡಿದ್ದರು, ಇದಕ್ಕೆ ಸ್ಥಳೀಯ ಮತ್ತು ಪಕ್ಷ ರಾಜಕಾರಣ ಹೇಗೆ ಅಡ್ಡಿಯಾಯಿತು ಎಂಬ ಬಗ್ಗೆ ಪುಂಖಾನುಪುಂಖ ಚರ್ಚೆಯೇ ಆದ್ಯತೆಯ ಮೇಲೆ ನಡೆಯುತ್ತದೆ! ಮಾಧ್ಯಮಗಳ ನಿರ್ವಹಣೆಯಲ್ಲಿ ಕೊಳಕು ರಾಜಕೀಯ ಪ್ರಭಾವವಷ್ಟೇ ಅಲ್ಲದೆ ಕಸಬುದಾರಿಕೆಯ ಕೊರತೆಯೂ ಅಷ್ಟೇ ಅಪಾಯಕಾರಿಯಾಗಿ ಮೇಲ್ನೊಟಕ್ಕೇ ಗೋಚರಿಸುತ್ತಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಚೆನ್ನಾಗಿ ಹೇಳಿದಿರಿ ದಿವಾಕರ್ ಅವರೇ! ನೀವು ಕೊಟ್ಟ ಅಪಘಾತದ ವಿವರಣೆ ಚೆನ್ನಾಗಿದೆ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸುದ್ದಿಯ ಮಗ್ಗುಲುಗಳನ್ನು, ಅದರ ಸುತ್ತ ನಡೆಯುವ ಚೋದ್ಯಗಳನ್ನು ಮತ್ತು ಆ ಚೋದ್ಯಕ್ಕೆ ಕಾರಣಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದೀರಿ ದಿವಾಕರ ಅವರೇ. ಅತ್ಯಂತ ಮೌಲಿಕ ಪ್ರತಿಕ್ರಿಯೆ ನಿಮ್ಮದು. ನಿಮಗೆ ಧನ್ಯವಾದ. ಮಿತ್ರ ನೀರ್ಕಜೆ ಅವರಿಗೂ ಧನ್ಯವಾದ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಋಣಾತ್ಮಕ ವಿಷಯಗಳಿಗೆ ಪ್ರಾಮುಖ್ಯತೆ ಇರುವವರೆಗೂ ಇದೇ ಸ್ಥಿತಿ ಇರುತ್ತದೆ. ನಿಜಕ್ಕೂ ನೀವಂದಂತೆ ಇದು ದುರಂತವೇ ಸರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪೂರಕ ಪ್ರತಿಕ್ರಿಯೆಗಾಗಿ ಧನ್ಯವಾದ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಯಡಿಯೂರಪ್ಪನವರು ಹೇಳಿದಂತೆ (ಅವರು ಆ ಮಾತನ್ನು ಹೇಳಬಾರದಿತ್ತು) ಹಿಂದಿನ ಎಲ್ಲಾ ಮಂತ್ರಿಗಳು, ಮುಖ್ಯಮಂತ್ರಿಗಳು ವಾಮಮಾರ್ಗದಲ್ಲಿಯೇ ತಮ್ಮ ಧನ, ಕನಕ ಸಂಪತ್ತನ್ನು ಬೆಳೆಸಿಕೊಂಡಿರುವುದು ನಿಜ. ಚುನಾವಣೆಯಲ್ಲಿ ಗೆದ್ದಾಗ ಬರಿಗೈಯಾಗಿದ್ದ ರಾಜಕಾರಣಿಗಳು ನಂತರ ತಲೆಮಾರುಗಳು ತಿಂದರೂ ಮುಗಿಯದಷ್ಟು ಆಸ್ತಿಪಾಸ್ತಿ ಸಂಪಾದಿಸುತ್ತಾರೆಂಬುದು ಬಹಿರಂಗ ರಹಸ್ಯ. ಈ ಮಾತಿಗೆ ಅಪವಾದ ಇದ್ದರೆ... ಬೆರಳೆಣೆಕೆಯಷ್ಟು ಮಾತ್ರ. ಆದರೆ, ಹಿಂದಿನ ಸರಕಾರದ ಅವ್ಯವಹಾರಗಳ ಬಗ್ಗೆ ಹೆಚ್ಚು ಸುದ್ದಿ ಹೊರಬರುತ್ತಿರಲಿಲ್ಲವೆನ್ನುವುದು ನಿಜ. (ಬಂದರೂ ನಮ್ಮಂತಹ ಜನಸಾಮಾನ್ಯರು ಅದೆಲ್ಲಾ ನಮ್ಮ ಹಣವಲ್ಲ ಎಂಬ ಉದಾಸೀನದಿಂದಲೇ ಸುಮ್ಮನಿರುವವರು) ಆದರೆ ಯಡಿಯೂರಪ್ಪನವರ ಬಗ್ಗೆ ಮಾತ್ರ ದಿನಕ್ಕೊಂದು ಹೊಸ ಹಗರಣಗಳು ಬಹಿರಂಗಗೊಳ್ಳುತ್ತಿರುವ ಕಾರಣ ಮಾತ್ರ ಅರ್ಥವಾಗುತ್ತಿಲ್ಲ. ತಾವು ಆ ಬಗ್ಗೆಯೂ ಸ್ವಲ್ಪ ವಿಶ್ಲೇಷಿಸಿದ್ದರೆ ಚೆನ್ನಾಗಿತ್ತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಉತ್ತಮ ಸಲಹೆ ನೀಡಿದ್ದೀರಿ ಚಿತ್ರಾ ಅವರೇ, ಧನ್ಯವಾದ. ನೀವು ಎತ್ತಿರುವ ವಿಷಯ ಕುರಿತ ಜ್ವಾಲಾಮುಖಿಯೇ ನನ್ನೊಳಗಿದೆ. ಎಂದು ಸ್ಫೋಟಗೊಳ್ಳುವುದೋ ಗೊತ್ತಿಲ್ಲ. ಇಂದಿನ ’ಉದಯವಾಣಿ’ ದಿನಪತ್ರಿಕೆಯ ನನ್ನ ಅಂಕಣ ’ನುಡಿ ಛಡಿ’ಯಲ್ಲಿ ಈ ವಿಷಯ ಕುರಿತು ಒಂದು ಕಡೆ ಪುಟ್ಟ ಉಲ್ಲೇಖ ಇರುವುದನ್ನು ಗಮನಿಸಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶ್ರೀಯುತ ಆನಂದಶಾಸ್ತ್ರಿ ಯವರಿಗೆ ನನ್ನ ಸಹೄದಯದ ನಮಸ್ಕಾರಗಳು. ನಮ್ಮ ಮನದಾಳದಲ್ಲೂ ಇದೆ ಮಾತುಗಳಿವೆ. ಆದರೆ ಇದಕ್ಕೆ ನಮ್ಮದು ಕೇವಲ ಚರ್ಚೆ ಮಾಡಿ ಮರೆತು ಬಿಡುವ ಅತಿ ಸಣ್ಣ ಪ್ರತಿಕ್ರಿಯೆ ಆಗಿಬಿಟ್ಟಿದೆ. ಹಿಂದೆ ಅಸತ್ಯ ಅದರ್ಮದ ಮನಸ್ಸುಗಳು ಸ್ವಲ್ಪಮಾತ್ರ ಇದ್ದು ಈಗ ಎಲ್ಲೆಲ್ಲಿಯೂ ಅದೆ ರಾರಾಜಿಸುತ್ತಿವೆ ಆದರೆ ಅದರ ವಿರುದ್ದ ಹಿಂದೆ ಇದ್ದ ವಿರೋದ, ತಡೆಗೋಡೆ ಈಗ ಕಾಣೆಯಾಗುತ್ತಿದೆ. ಜನ ಸಮೂಹದ ಈ ಮನ ಸ್ಥಿತಿಗೆ ಕಾರಣಗಳೇನು, ನಮ್ಮ ನಾಯಕರುಗಳಲ್ಲಿ ನೈತಿಕ ಮಟ್ಟ ಏಕೆ ಕುಸಿದಿದೆ? ಅದರ ಪುನ:ಚೇತನಕ್ಕೆ ಅವಕಾಶವೆ ಇಲ್ಲವೆ? ಭಹುಷ: ಕಾಲ ದರ್ಮ ಹಿಂದಕ್ಕೆಹೋಗಲು ಸಾದ್ಯವೆ ಇಲ್ಲವೇನೊ............? ನಿಮ್ಮ ಅನುಭವದಲ್ಲಿ ಅನಿಸಿಕೆ ಏನು?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸಾಮಾಜಿಕ ಕಳಕಳಿಭರಿತ ಪ್ರತಿಕ್ರಿಯೆಗಾಗಿ ಧನ್ಯವಾದ ರಾಮಮೋಹನ ಅವರೇ. ಇಂದಿನ ಎಳೆಯರಲ್ಲಿ ನೈತಿಕತೆಯನ್ನು ಬಿತ್ತುವುದು ಮತ್ತು ಸ್ವದೇಶ-ಸ್ವಸಂಸ್ಕೃತಿಯ ಅರಿವು-ಅಭಿಮಾನ ಹುಟ್ಟಿಸುವುದು ಈ ಕೆಲಸವನ್ನು ಹಿರಿಯರಾದ ನಾವು ತಪಸ್ಸಿನೋಪಾದಿ ಮಾಡುತ್ತ ಸಾಗಿದರೆ ಭವಿಷ್ಯದ ಪೀಳಿಗೆಗಳು ಉತ್ತಮಿಕೆ ಹೊಂದಿ ಆದರ್ಶ ನಾಡನ್ನು ಕಟ್ಟಿಯಾರೆಂಬ ಆಶಾಭಾವ ನನ್ನದಾಗಿದೆ. ಈ ನಿಟ್ಟಿನಲ್ಲಿ ನನ್ನ ಮಟ್ಟದಲ್ಲಿ ನಾನು ದಶಕಗಳಿಂದ ಕಾರ್ಯಪ್ರವೃತ್ತನಾಗಿದ್ದೇನೆ. ನಿಮ್ಮ ಸಾಮಾಜಿಕ ಕಾಳಜಿ ಪ್ರಶಂಸಾರ್ಹ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಯಥಾ ರಾಜಾ, ತಥಾ ಪ್ರಜಾ. ನಾವು ಹೇಗೋ ಹಾಗೆಯೇ ಮಾಧ್ಯಮಗಳೂ, ಶಾಸ್ತ್ರಿಗಳೇ. “ಆದರೆ ಯಡಿಯೂರಪ್ಪನವರ ಬಗ್ಗೆ ಮಾತ್ರ ದಿನಕ್ಕೊಂದು ಹೊಸ ಹಗರಣಗಳು ಬಹಿರಂಗಗೊಳ್ಳುತ್ತಿರುವ ಕಾರಣ ಮಾತ್ರ ಅರ್ಥವಾಗುತ್ತಿಲ್ಲ. ತಾವು ಆ ಬಗ್ಗೆಯೂ ಸ್ವಲ್ಪ ವಿಶ್ಲೇಷಿಸಿದ್ದರೆ ಚೆನ್ನಾಗಿತ್ತು” – ಈ ಅಭಿಪ್ರಾಯದಲ್ಲೇ ಕಾಣುತ್ತಿಲ್ಲವೇ ನಮ್ಮ ನಿಲುವು ಏನು ಎಂಬುದು? ಸೈನಿಕರ ಶವಪೆಟ್ಟಿಗೆಯ ಹಣ ಕದ್ದ ರಕ್ಷಣಾ ಮಂತ್ರಿ, ಮೇವಿನ ಹಣ ಕಬಳಿಸಿದ ಲಾಲೂ, ಯೋಧರ ವಸತಿಯನ್ನು ಆಕ್ರಮಿಸಿಕೊಂಡ ಮಹಾರಾಷ್ಟ್ರದ ಖಾದಿಗಳು, ಇವರಿಗೆಲ್ಲಾ ಬೆಂಬಲಿಗರು ಇರೋತನಕ ಮಸೆಯುತ್ತಲೇ ಇರಬೇಕು ನಮ್ಮ ಹಲ್ಲುಗಳನ್ನು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಬರೋಬ್ಬರಿ ಹೇಳಿದ್ದೀರಿ ಅಬ್ದುಲ್ ಅವರೇ. ಯಡಿಯೂರಪ್ಪನ ಅವಸ್ಥೆ ಬಗ್ಗೆ ಹೇಳುವುದಾದರೆ, ’ಎಲ್ಲರೂ ಕಳ್ಳರೇ, ಆದರೆ, ಬಗ್ಗಿದವನ ಬೆನ್ನಮೇಲೆ ಗುದ್ದು ಎಂಬಂತೆ, ನಿಪುಣ ಕಳ್ಳರು ಹೊಸ (ಹಸಿ) ಕಳ್ಳನನ್ನು ಬಗ್ಗಿಸಿ ಗುದ್ದು ಕೊಡುತ್ತಿದ್ದಾರೆ ಅಷ್ಟೆ.’
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನನ್ನ ಈ ಲೇಖನ ಓದಿ ವಿದ್ವಾಂಸ ಕೆ.ಸಿ. ಕಲ್ಕೂರ ಅವರು ನೀಡಿರುವ ಪ್ರತಿಕ್ರಿಯೆಯ ಆಯ್ದ ಭಾಗವನ್ನು ಅದರ ಸೊಗಸಿನಿಂದಾಗಿ ಈ ಕೆಳಗೆ ದಾಖಲಿಸಿದ್ದೇನೆ. ಶ್ರೀಕೃಷ್ಣದೇವರಾಯರ ಪಟ್ಟಾಭಿಷೇಕ ಮಹೋತ್ಸವದ ಸಂದರ್ಭದಲ್ಲಿ ನಡೆದ ಒಂದು ಸಭೆಯಲ್ಲಿ ನಾನು (ಕಲ್ಕೂರ) ಮಾತನಾಡುತ್ತ, "ಕೇವಲ ೨೦ ವರ್ಷಗಳಲ್ಲಿ, ಆಧುನಿಕ ಸೌಕರ್ಯಗಳಾವುವೂ ಇಲ್ಲದ ಕಾಲದಲ್ಲಿ, ರಾಯರು ಇಷ್ಟು ಕಾರ್ಯಸಾಧನೆ ಮಾಡಲು ಹೇಗೆ ಸಾಧ್ಯವಾಯಿತು ಎಂಬುದು ನಮ್ಮ ಆಲೋಚನೆಗೆ ಮೀರಿ ಉಳಿದಿದೆ. ನಿರಂತರ ಯುದ್ಧ, ಸಾಹಿತ್ಯ ರಚನೆ ಮತ್ತು ಪ್ರೋತ್ಸಾಹ, ದೇವಾಲಯಗಳ ನಿರ್ಮಾಣ, ಅಸಾಮಾನ್ಯ ಅಭಿವೃದ್ಧಿ ಕಾರ್ಯಕ್ರಮ, ನೀರಾವರಿ ಒದಗಿಸುವಿಕೆ, ಹರಿಜನ ಗಿರಿಜನರ ಬಗ್ಗೆ ವಿಶೇಷ ದೃಷ್ಟಿ, ’ಮೂರು ರಾಯರ ಗಂಡ, ಸಾಹಿತಿ ಸಮರಾಂಗಣ ಚಕ್ರವರ್ತಿ’, ಇತ್ಯಾದಿ ಅಪೂರ್ವ ಬಿರುದುಗಳಿಗೆ ಪಾತ್ರರಾದರು. ೮/೧೩ ಸಾರಿ ತಿರುಪತಿಗೆ ಮತ್ತು ಕನಿಷ್ಟ ಪಕ್ಷ ಒಂದು ಸಾರಿಯಾದರೂ ದಕ್ಷಿಣ ಭಾರತದಲ್ಲಿರುವ ಪ್ರತಿಯೊಂದು ಯಾತ್ರಾಸ್ಥಳಕ್ಕೂ ಭೆಟ್ಟಿ ಕೊಟ್ಟರು", ಎಂದು ನುಡಿದೆ. ಅದಕ್ಕೆ ಒಬ್ಬ ಅಭಿಯಂತರರು ಹೀಗೆ ಸಮಾಧಾನ ಹೇಳಿದರು. "ಸ್ವಾಮೀ, ಆ ಕಾಲದಲ್ಲಿ ನಾವಿಲ್ಲ (ಇಂಜನಿಯರುಗಳು), ಗುತ್ತಿಗೆದಾರರು ಇಲ್ಲ. ಎಲ್ಲರಿಗಿಂತ ಹೆಚ್ಚಾಗಿ ಮಾಧ್ಯಮದವರಿರಲಿಲ್ಲ. ರಾಯರು ಆದೇಶಿಸಿದರು. ಕೆಲಸವಾಯ್ತು. ಜನರು ತೃಪ್ತರಾದರು. ರಾಯರು ಸಂತುಷ್ಟರಾದರು."
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.