ಬದುಕೊಂದು ಕರುಣಾಮಯಿ…

0

ಈಜಹೊರಟಿದ್ದೆ ಅಲೆಗಳ ವಿರುದ್ಧ
ಈಜಲೇ ಬಾರದಿದ್ದ ನಾನು…
ನಾನೇಕೋ ಕೊಚ್ಚಿಹೋಗಲಿಲ್ಲ
ಈಜುಗಾರರೆಲ್ಲ ಕೊಚ್ಚಿಹೋದರೂ…

ಮುಳುಗಿಸದೇ ಈಜುವ ಧೈರ್ಯಕೊಟ್ಟ
ಬದುಕೊಂದು ಕರುಣಾಮಯಿ…

ಜಿಗಿಯ ಹೊರಟಿದ್ದೆ ಆಗಸದಿಂದ
ರೆಕ್ಕೆಗಳೇ ಇರದಿದ್ದ ನಾನು…
ನಾನೇಕೋ ಇನ್ನೂ ಹಾರುತ್ತಲಿದ್ದೆ
ಬಾನಕ್ಕಿಗಳ ರೆಕ್ಕೆ ಮುರಿದುಹೋದರೂ..

ನನ್ನ ಬೀಳಿಸದೇ ಹಾರಲು ಬಿಟ್ಟ
ಬದುಕೊಂದು ಕರುಣಾಮಯಿ…

ಎಲ್ಲರನ್ನೂ ಪ್ರೀತಿಸಹೊರಟಿದ್ದೆ
ಪ್ರೀತಿಯ ಅರಿವಿರದಿದ್ದ ನಾನು…
ನಾನೇಕೋ ಇನ್ನೂ ಪ್ರೀತಿಸುತ್ತಿದ್ದೆ
ಎಲ್ಲರೂ ನನ್ನವರೇ ಅಲ್ಲದಿದ್ದರೂ…

ಜಗತ್ತನ್ನೇ ಪ್ರೀತಿಸಲು ಕಲಿಸಿಬಿಟ್ಟ
ಬದುಕೊಂದು ಕರುಣಾಮಯಿ…

ಚಿತ್ರವೊಂದನ್ನು ರಚಿಸಹೊರಟಿದ್ದೆ
ಬಣ್ಣಗಳಿಂದ ಬಹುದೂರವಿದ್ದ ನಾನು…
ನಾನೇಕೋ ಇನ್ನೂ ಚಿತ್ರಿಸುತ್ತಲಿದ್ದೆ
ಕಲಾವಿದರ ಕುಂಚ ಬರಿದಾದರೂ…

ನನ್ನ ಬದುಕಿಗೆ ತನ್ನ ಬಣ್ಣಕೊಟ್ಟ
ಬದುಕೊಂದು ಕರುಣಾಮಯಿ…

************

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.