ಬಿಸಿಲೇರಿ ಸೀಳಾದ ವ್ಯಕ್ತಿ(ತ್ವ): ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ: ಭಾಗ ೧೦

ಬಿಸಿಲೇರಿ ಸೀಳಾದ ವ್ಯಕ್ತಿ(ತ್ವ): ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ: ಭಾಗ ೧೦

ಬರಹ

(೩೪)


ಕಲಾಭವನ ಮೂಲಭೂತವಾಗಿ ಭೂತದ ಭವನ. ಅಂದರೆ ಹಿಂದೆ ಇದ್ದ ಮಹಾಮಹಿಮ ಕಲಾಗುರುಗಳ ವ್ಯಕ್ತಿತ್ವಗಳ ನೆನಪಿನ ಸಲುವಾಗಿಯೇ ಇನ್ನೂ ಅಲ್ಲೇ ಇದ್ದವರಿದ್ದರು. ಪ್ರತಿಯೊಬ್ಬರೂ ಹಿಂದೆ ಆದುದರ ಬಗ್ಗೆಯೇ ಹೆಚ್ಚು ಮಾತಾಡುತ್ತಿದ್ದರು. "ಬರೋಡ ಸೂಡೋ-ಪ್ರೊಫೆಷನಲ್ ಕಲಾಶಾಲೆಯಾದರೆ, ಶಾಂತಿನಿಕೇತನವು ಅಮೆಚ್ಯುರಿಶ್ ಶಾಲೆ" ಎಂದು ಅಪರೂಪಕ್ಕೆ ಕಟುವಾಗಿ ಮಾತನಾಡುತ್ತಿದ್ದವರು ಕಲಾಇತಿಹಾಸಕಾರ ದೀಪಕ್ ಭಟ್ಟಾಚಾರ್ಯ. ಗುಲ್ಬರ್ಗದ ವಿ.ಜಿ.ಅಂದಾನಿಯವರ ಶಾಲೆಯಲ್ಲಿ ಕೆಲವು


ಕಾಲ ದುಡಿದ ನಂತರ, ಇಲ್ಲಿ ಪರ್ಮನೆಂಟ್ ಕೆಲಸಕ್ಕೆ ಸೇರಿದ್ದರು, ಕಲಾಭವನದ ಹಳೆಯ ವಿದ್ಯಾರ್ಥಿಯಾದ ಇವರು.


ಒಂದೆರೆಡು ವರ್ಷಗಳ ಹಿಂದೆ, ಒಂದು ದಿನ ಪಾಠ ಹೇಳುತ್ತಲೇ ತೀರ್ವ ಹೃದಯಾಘಾತದಿಂದ ಕುಸಿದುಬಿದ್ದ ದೀಪಕ್ ತೀರಿಕೊಂಡಾಗ ಅವರಿಗೆ ಕೇವಲ ನಲವತ್ತೇಳು ವರ್ಷ. ’ಭೂತದ’ ಬಗ್ಗೆ ಅಲ್ಲಿನವರಿಗೆ ಎಂಥಹ ಅಬ್ಸೆಷನ್ ಎಂದರೆ, ಕಲಾಇತಿಹಾಸದ ಬರವಣಿಗೆಗೆ ಹೆಸರಾಗಿದ್ದ ಈ ಜಾಗದಲ್ಲಿ ಅವರ ಬಗ್ಗೆ ಒಂದೇ ಒಂದು ಸಾಲ ಬರೆದವರಿಲ್ಲ. ಬ್ರಿಟಿಷರ ಕಂಪನಿ ಕಾಲದ ಭಾರತೀಯ ಕಲೆಯ ಬಗ್ಗೆ ಸಂಶೋಧನ ಮಾಡಿದ್ದ ಡಾ.ದೀಪಕ್ ಫುಲ್‍ಬ್ರೈಟ್ ಶಿಷ್ಯವೇತನ ಪಡೆದು ಅಮೇರಿಕದಲ್ಲಿ ಎರಡು ವರ್ಷ ಅಭ್ಯಾಸ ಮಾಡಿದ್ದವರು. www.artconcerns.com ನಲ್ಲಿ ಒಂದು ಸಣ್ಣ  ಶ್ರದ್ಧಾಂಜಲಿ ಬರೆದಿದ್ದೆ ಅವರ ಬಗ್ಗೆ. ಈಗ ೨೦೧೦ರಲ್ಲಿ ಬಾಹ್ಯಾ ಪರೀಕ್ಷಕನಾಗಿ ಹೋದಾಗ ಅಲ್ಲಿನ ಕಲಾಇತಿಹಾಸದ ವಿದ್ಯಾರ್ಥಿಗಳಿಗೆ ನನ್ನನ್ನು ಪರಿಚಯಿಸಿಕೊಂಡೆ. "ಗೊತ್ತು. ನೀವು ದೀಪಕ್ ದಾ ಬಗ್ಗೆ ಬರೆದವರಲ್ಲವೆ!" ಎಂದರವರೆಲ್ಲರೂ. "ಟಾಯ್ಲೆಟ್ ಎಲ್ಲಿದೆ" ಎಂದು ಪುಸ್ತಕ ಪ್ರಕಾಶನದಲ್ಲಿ ಸಾಮಾನ್ಯ ಕೆಲಸ ಮಾಡುವ ನಾಯಕಿ ಬರಹಗಾರ ಸಲ್ಮಾನ್ ರಷ್ದಿಯನ್ನು ಕೇಳಿದಂತಾಯ್ತಿದು "ಬ್ರಿಜತ್ ಜೋನ್ಸ್ ಡಯರಿ" ಸಿನೆಮದಲ್ಲಿ! ನನ್ನ ಬೇರೆಲ್ಲ ಬರವಣಿಗೆಗಳ ನಡುವೆ ಈ ಯಃಕಶ್ಚಿತ್ ಶ್ರದ್ಧಾಂಜಲಿಯ ಬರಹವೇ ಎದ್ದುಕಂಡಿತೆ ಇವರಿಗೆ ಎಂದುಕೊಂಡೆ. ಮೊದಲೇ ಹೇಳಿದಂತೆ ’ಭೂತ’ವೇ ಇವರಿಗೆ ಮುಖ್ಯ. ನಾನೂ ಅಲ್ಲಿಯೇ ಓದಿದ್ದುಃ ಆದ್ದರಿಂದ ಎರೆಡು ದಶಕಗಳ ಭೂತಕಾಲದ ನೆನಪನ್ನು ಈಗ ಕೆದಕಿಕೊಂಡು ಕುಳಿತಿದ್ದೇನೆ!


                                                                 (೩೫)


ಭೂತದೊಂದಿಗೆ ಕಲಾಭವನವನ್ನು ಆವರಿಸಿರುವ ಮತ್ತೊಂದು ಭೂತವೆಂದರೆ ಹಿಂಸೆ. ಅಲ್ಲಿ ಏಕಾಗ್ರತೆ ಕಲಿಯಲು ಬರುವ ವಿದ್ಯಾರ್ಥಿಗಳು ಸ್ವಲ್ಪ ದಾರಿತಪ್ಪಿದರೂ ’ಕಾನ್‍ಸನ್‍ಟ್ರೇಷನ್ ಕ್ಯಾಂಪ್’ಗಳಲ್ಲಿ ಇದ್ದಂತಾಡುತ್ತಾರೆ. ಕುಡಿತಕ್ಕೆ ಕಾಸು ಸಿಗದವರು ಅನಾಸಿನ್ ಸತ್ವವಿರುವ ಮಾತ್ರೆಯನ್ನು ಪೆಪ್ಸಿಯೊಂದಿಗೆ ಬೆರೆಸಿ ಕುಡಿಯುತ್ತಾರೆ, ವಿಕ್ಸ್ ಔಷದದ ಪ್ಯಾಕೆಟ್‍ಗಳನ್ನು ಅಗ್ಗವಾಗಿ ದೊರಕುವುದರಿಂದ ಮತ್ತು ಆಲ್ಕೊಹಾಲ್ ಸತ್ವವಿರುವುದರಿಂದ ಟೈಟ್ ಆಗಲಿಕ್ಕೆ ಬಳಸುತ್ತಾರೆ. 


ಇನ್ನೂ ಚಿತ್ರಕಲಾಪರಿಷತ್ತಿನಲ್ಲಿ ನಾಲ್ಕನೆಯ ವರ್ಷ ಡಿಗ್ರಿ ಓದುತ್ತಿದ್ದಾಗ (೧೯೮೯), ಶಾಂತಿನಿಕೇತನ ಟೂರ್ ಹೋಗಿದ್ದೆವು, ನಾವೊಂದೈದಾರೇಳೆಂಟು ಮಂದಿ. ನೀರ ಕುಡಿಯಲು ಹೋಗಿ, ಬಿಸಿಲೇರಿ, ಮತ್ತೇರಿಸಿಕೊಂಡ ನನ್ನ ಸಹಪಾಠಿಯೊಬ್ಬ ಫುಲ್ ಡ್ರಾಮಾ ಶುರುಮಾಡಿದಃ ಗೊಳೋ ಎಂದು ಅಳತೊಡಗಿದ, ಆತನ ಆತ್ಮೀಯ ಗೆಳೆಯ ಆತನನ್ನು" ಕ್ಯಾರೆ ತುಮ್ಹಾರೆ?" ಎಂದು ಎಂದೋ ವಿಚಾರಿಸಲಿಲ್ಲ ಎಂಬುದು ನೆನಪಾಗಿ. ಸಂತಾಲಿ ಹಳ್ಳಿಯ ಪಕ್ಕದಲ್ಲೇ ಇದ್ದ ಕೊಪಾಯ್ ನದಿಯಲ್ಲಿ ಆಳವಿಲ್ಲದೆಡೆ ಬಿದ್ದು ಒದ್ದಾಡಿದ. ಕನ್ನಡಿಗನಾದ ಈ ಗೆಳೆಯನ ನಾದ ಅತಿಯಾಯಿತೆನಿಸಿತು. "ಶರಪಂಜರ"ದ ಕಲ್ಪನ ಒದ್ದಾಡುವ ದೃಶ್ಯ ನೆನಪಾಯಿತು. ಸಿನೆಮ ಹುಚ್ಚನಾದ ಅವನಿಗೆ ನನಗಿಂತ ಮೊದಲೇ, ಆ ಒದ್ದು-ಬಿದ್ದಾಟದಲ್ಲೂ ಕಲ್ಪನ ನೆನಪಾದಳೆಂದು ಆಮೇಲೊಂದು ದಿನ ಇದೇ ಗೆಳೆಯ ಹೇಳಿ ನಗಾಡಿದ್ದಪ್ರಸ್ತುತ ಬಿಸಿಲೇರಿ ಕುಡಿವ ಬದಲು ನೀರವನ್ನು ಬಿಸಿಲೇರಿದ ನಂತರ ಕುಡಿದ ಗೆಳೆಯನನ್ನು ಪ್ರತ್ಯೇಕಿಸಿ,ನಾನು ಮತ್ತು ಗೆಳೆಯನೊಬ್ಬ ಬೇರೆ ಕಾಡುದಾರಿಯಲ್ಲಿ ನಡೆಸಿಕೊಂಡು ಬರತೊಡಗಿದೆವು. ಬಿಸಿಲೇರಿ-ಗೆಳೆಯ ಏಳೇಳು ಜನುಮಗಳಿಂದಲೂ ಶೇಖರಿಸಿಟ್ಟುಕೊಂಡಿದ್ದಂತಹ ದುಃಖ, ಅಳುವನ್ನು ಕಣ್ಣಿಂದಲ್ಲದೆ ಮೂಗಿನಿಂದಲೂ ಹೊರಚೆಲ್ಲುತ್ತಿದ್ದ.


ಗುಡಿಸಲೊಂದರೊಳಗಿನ ಟೀ ಅಂಗಡಿಯಲ್ಲಿ ಬಂದು ಕುಳಿತೆವು. ಟೀ ಲಂಚವನ್ನು ಬಿಸಿಲೇರಿಗೆ ಸೂಚಿಸುತ್ತ. ಕಡಿಮೆಯಾದರೂ ದುಃಖ ಗುದ್ದಿಕೊಂಡೇ ಬರುತ್ತಿತ್ತು. ಅರ್ಥಾತ್ (ಅಥವ ಅಥಾರ್ತ್) ಆತ ಅಳು ನಿಲ್ಲಿಸಿದ್ದರೂ, ಅಳು ಆತನನ್ನು ನಿಲ್ಲಿಸಲಾಗಿರಲಿಲ್ಲ!


ಟೀ ಕುಡಿಯುತ್ತಲೇ ಅಳುತ್ತಿದ್ದ ಬಿಸಿಲೇರಿ. ಹಾಗೆ ಮಾಡಿದಾಗಿನ ಉಸಿರಾಟದಿಂದ ಚಹಾದ ಕಪ್ಪಿನೊಳಗಿಂದ ಸುಳಿಯೊಂದು ಹುಟ್ಟಿಕೊಳ್ಳುತ್ತಿತ್ತು. ಚಹಾ ಸಹಾ ಆಹಾ ಎನ್ನುತ್ತಿತ್ತು. ಇಡಿಯ ಚಹಾದ ಗುಡಿಸಲು ಸಾಯದವರ ಕಾಲ್ಪನಿಕ ಸಾವಿದೆ ಶೋಕ ಸೂಚಿಸುವ ಸ್ಮಾಶಾನವಾಗಿ ಮಾರ್ಪಟ್ಟಿತು. ರಸ್ತೆಕಾಮಗಾರಿ ಹೊರಗೆ ನಡೆಯುತ್ತಿತ್ತು. ಕೂಲಿ ಕೆಲಸದವರೆಲ್ಲ ನಮ್ಮನ್ನೇ ಪಿಳಿಪಿಳಿ ನೋಡುತ್ತಿದ್ದರು. ನಾವು ಗಾಜಿನಲೋಟದೊಳಗಿನ ಟೀ ನೋಡುತ್ತಿದ್ದರೆ, ನಮ್ಮ ಮನಸ್ಸು ಕೂಲಿಗಾರರ ಮುಖಗಳನ್ನು ಕಲ್ಪಿಸಿಕೊಳ್ಳುತ್ತಿದ್ದರೆ, ಮಿದುಳುಗಳು ಮಾತ್ರ ತಮ್ಮ ಮನಸ್ಸುಗಳಲ್ಲೇ ಬಿದ್ದುಬಿದ್ದು ನಗುತ್ತ, ನಕ್ಕು ನಕ್ಕು ಬೀಳುತ್ತಿದ್ದವು. ಬ್ರೆಕ್ಟನ ಅಸಂಗತ ನಾಟಕ ತತ್ವಕ್ಕೆ ಆಗ ನಾವಿದ್ದ ಸಂದರ್ಭಕ್ಕಿಂತಲೂ ಉತ್ತಮ ಉದಾಹರಣೆ ನನಗೆ ದೊರಕಿಲ್ಲ. ಬಿಸಿಲೇರಿಯ ಬಿಕ್ಕಳಿಕೆ, ದುಃಖದ ಅಲೆಗಳು ಮಾತ್ರ ಯಾರ ಗಾಜಿನ ಲೋಟವನ್ನು ಯಾವ ರೀತಿ ಸಿಡಿಸುತ್ತದೋ ಎಂಬ ಅಮೂರ್ತ ಭಯವೂ ವಿಚಿತ್ರವಾಗಿ ಕಾಣುತ್ತಿತ್ತು."ಏನೊ ಬಿಸ್ಲೇರಿ. ಯಾಕೆ ಅಳ್ತಿದ್ದೀಯ ಹೇಳೋ?" (ಎಂಬತ್ತಾರನೆ ಬಾರ ಕೇಳಿದ ಪ್ರಶ್ನೆ!).


"ಉತ್ತರವಿಲ್ಲ". ಸುಮ್ಮನೆ ಕೂತೆವು, ಬಿಸ್ಲೇರಿ ದುಃಖಕ್ಕೆ.


(೩೬)


ಹಣ್ಣು ಹಣ್ಣು ಮುದುಕ ಕೂಲಿಯೊಬ್ಬ ಒಳಕ್ಕೆ ಬಂದ. ಕೈಯಲ್ಲಿ ಬಾಂಡ್ಲಿ, ತಲೆಯೂ ಸಹ ಹಾಗೇ. ಬಾಯಲ್ಲಿ ಅಪ್ಪಿತಪ್ಪಿ ಒಂದು ಹಲ್ಲು ಉಳಿದಿದ್ದು, ತನ್ನ ಇರುವಿಕೆಯನ್ನು ಜಗಜ್ಜಾಹೀರುಗೊಳಿಸುತ್ತಿತ್ತು. ಆಸ್ಕರ್ ವೈಲ್ಡನ "ಮಾಡೆಲ್ ಮಿಲಿಯನೇರ್" ಕಥೆಯ ಪಾಪದ ಮುದುಕನಿಗಿಂತಲೂ ಎರಡು ಪಟ್ಟು ದುಃಖ ಮಡುಗುಟ್ಟಿಸುವಂತಿತ್ತು, ಒಂದು ರೂಪಾಯಿ ಮಣ್ಣೀನ ಟಾಗೂರು ಮಾರುತ್ತಿದ್ದ ಮುದುಕನಿಗಿಂತ ನಾಲ್ಕು ಪಟ್ಟು ದುಃಖ ಸೋರುತ್ತಿತ್ತು ಈ ಡಬಲ್ ಹಣ್ಣಾದ ಮುದುಕನ ದೇಹದ ಭಂಗಿಯಲ್ಲಿ.


ದುಃಖದ ಮುಖದವ ದುಃಖದ ಬಿಸಿಲೇರಿಯ ನರಳುವಿಕೆಯನ್ನು ಕೇಳಿಸಿಕೊಂಡ, ಆತನಿಗೆ ಮುಕ್ಕಾಲು ಕಿವುಡಿದ್ದರೂ ಸಹ.


      ಮುದುಕ ತನ್ನ ಕಣ್ಣಿನ ನೇರಕ್ಕೆ ಕೈ ಅಡ್ಡ ಇರಿಸಿಕೊಂಡು ಬಿಸ್ಲೇರಿಯನ್ನು ನೋಡಿದ. ಹತ್ತಿರ ಬಂದ. ಬಿಸ್ಲೇರಿಯ ನಾಟಕೀಯ ದುಃಖ ಮತ್ತೆ ಉಮ್ಮಳಿಸಿತು. ಮುದುಕ ಬಿಸ್ಲೇರಿಯ ಮುಖಕ್ಕೆ ತನ್ನ ಮುಖವನ್ನು ಎರಡು ಇಂಚಿನಷ್ಟು ತಂದು ಏನನ್ನೋ ಪರಿಶೀಲಿಸಿ ನೋಡಿದ. ಬಿಸ್ಲೇರಿ ಅಳು ನಿಲ್ಲಿಸಲಿಲ್ಲ, ಆದರೆ ಆತನ ಬಿಕ್ಕಳಿಕೆಯ ತರಂಗದಲ್ಲಿ ಸ್ವಲ್ಪ ಅನುಮಾನದ ಶೇಪು ಕಾಣಿಸಿಕೊಂಡಿತು.


     ಬಿಸ್ಲೇರಿಯ ಅಥ್ಲೆಟಿಕ್ ಭುಜ ಹಿಡಿದ ಮಿಸ್ಟರ್ ಬೀನ್ ಭುಜದ ಮುದುಕ ಗೊಗ್ಗರು ಧನಿಯಲ್ಲಿ ಹೇಳಿದ್ದು ಒಂದೆ ವಾಕ್ಯಃ "ಮರ್ದ್ ನಹೀ ರೋತಾ ಹೈ" (ಗಂಡಾದವನು ಅಳುವುದಿಲ್ಲ!!!).


     ಅಲ್ಲಿಂದ ಕಲಾಭವನಕ್ಕೆ ಹತ್ತೇ ನಿಮಿಷದಲ್ಲಿ ನಾಗಾಲೋಟದಲ್ಲಿ ತಲುಪಿದ್ದೆವು, ಬಿಸ್ಲೇರಿಯನ್ನು ಫಾಲೋ ಮಾಡುತ್ತ. ಆ ಬೀನ್-ಬಾಡಿಯ ಮುದುಕನ ಒಂದೇ ಡೈಲಾಗಿಗೆ ಸವಾಲಾಗುವಂತೆ ಬಿಸ್ಲೇರಿಯ ಬಾಯಿಂದ ಒಂದೇ ಒಂದು ದುಃಖದ ಉಮ್ಮಳಿಗೆ ಇಂದಿಗೂ, ಇಪ್ಪತ್ತೊಂದು ವರ್ಷದ ನಂತರವೂ ನಾನು ಕಂಡಿಲ್ಲ!


     ಕಲಾಭವನದಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮಂದಿ ಸೀಳು-ವ್ಯಕ್ತಿತ್ವಗಳು. ಅದನ್ನು ಸ್ಕಿಝೊಫ್ರೇನಿಯ ಎನ್ನುತ್ತಾರೆ. ಹತ್ತೊಂಬತ್ತನೇ ಶತಮಾನದಲ್ಲಿ ಖಾಯಿಲೆ ಎಂದದನ್ನು ಗುರ್ತಿಸಲಾಗುತ್ತಿತ್ತು. ಈಗಲೂ ಹಾಗೆ ಭಾವಿಸುವವರಿದ್ದರೆ ಅಂತಹವರು ಯಾವ ಶತಮಾನಕ್ಕೆ ಸೇರಿದವರೆಂದು ಬಿಡಿಸಿ ಹೇಳಬೇಕಿಲ್ಲವಷ್ಟೇ. ಇಪ್ಪತ್ತನೇ ಶತಮಾನದಲ್ಲಿ ಒಂದು ವ್ಯಕ್ತಿತ್ವಕ್ಕಿಂತಲೂ ಹೆಚ್ಚನ್ನು ಒಂದೇ ದೇಹದಲ್ಲಿರಿಸಿಕೊಂಡ ವ್ಯಕ್ತಿ ಕಲಾವಿದನಾಗಲು ಅತ್ಯಂತ ಪ್ರಶಸ್ತ. ಚಿತ್ರಬರೆಯುವ ಪ್ರತಿಭೆ ಚಿಕ್ಕವಯಸ್ಸಿನಿಂದ ಇರುವುದು ಸುಳ್ಳು. ಹಾಗಿದ್ದವರಿಗೆ ಈ ಸ್ಕಿಝೋಫ್ರೇನಿಯ ಎಂಬ ವಿಶೇಷ ಪ್ರತಿಭೆ ಇದೆ ಎಂದರ್ಥ. ಫ್ರಿಝಾಫ್ ಕಾಪ್ರಾನ "ಟರ್ನಿ‌ಂಗ್ ಪಾಯಿಂಟ್"ನ ಒಂದು ಲೇಖನದಲ್ಲಿ ಇಂತಹ ಒಳನೋಟವಿದೆ. ಕಲಾಭವನದಲ್ಲಿ ಇದಕ್ಕೆ ಪೂರಕವಾದ ವಿಫುಲ ಉದಾಹರನೆಗಳು ದೊರಕುತ್ತವೆ.//