ಭಗವಾನ್ ಶ್ರೀಕೃಷ್ಣನೇ ಅವತಾರವೆತ್ತಿ ಬರಬೇಕೇನೋ!

0

 

  ರಾಜ್ಯದ ಇಂದಿನ ರಾಜಕೀಯ ದುಃಸ್ಥಿತಿಯನ್ನು ಕಂಡಾಗ ನನಗೆ ಭಗವದ್ಗೀತೆಯ ಹದಿನಾರನೆಯ ಅಧ್ಯಾಯದ ಕೆಲವು ಶ್ಲೋಕಗಳು ನೆನಪಾಗುತ್ತವೆ. ’ದೈವಾಸುರಸಂಪದ್ವಿಭಾಗಯೋಗ’ ಪ್ರಸ್ತುತಿಯಾದ ಆ ಅಧ್ಯಾಯದಲ್ಲಿ ಅಸುರಗುಣಸಂಜಾತರನ್ನು ಬಣ್ಣಿಸುವ ಹಲವು ಶ್ಲೋಕಗಳಿದ್ದು ಆ ಪೈಕಿ ಕೆಲವು ಶ್ಲೋಕಗಳನ್ನು ನನ್ನ ಭಾವಾನುವಾದ ಸಹಿತ ಇಲ್ಲಿ ನೀಡಿದ್ದೇನೆ. ನಮ್ಮ ಇಂದಿನ ಬಹುಪಾಲು ರಾಜಕಾರಣಿಗಳಿಗೆ ಈ ಬಣ್ಣನೆ ಸರಿಯಾಗಿ ಒಪ್ಪುತ್ತದೆ. ಓದಿನೋಡಿ.

ದಂಭೋ ದರ್ಪೋಭಿಮಾನಶ್ಚ
ಕ್ರೋಧಃ ಪಾರುಷ್ಯಮೇವ ಚ/
ಅಜ್ಞಾನಂ ಚಾಭಿಜಾತಸ್ಯ
ಪಾರ್ಥ, ಸಂಪದಮಾಸುರೀಮ್//

ಕಾಪಟ್ಯ ದರ್ಪ ಮೇಣ್ ದುರಭಿಮಾನವದು
ಕ್ರೋಧ ಗರ್ವವು ಮತ್ತು ಅಜ್ಞಾನವದುವೆ
ಅಸುರಗುಣಸಂಜಾತ ಜನರಲ್ಲಿ ಇರುವ
ಹೆಗ್ಗುರುತುಗಳು ಹೇ, ಪಾರ್ಥ, ತಿಳಿ ನೀನು

ಪ್ರವೃತ್ತಿಂ ಚ ನಿವೃತ್ತಿಂ ಚ
ಜನಾ ನ ವಿದುರಾಸುರಾಃ/
ನ ಶೌಚಂ ನಾಪಿ ಚಾಚಾರೋ
ನಸತ್ಯಂ ತೇಷು ವಿದ್ಯತೇ//

ಸತ್ಕಾರ್ಯವನ್ನು ದುಷ್ಕೃತಿತ್ಯಾಗವನ್ನು
ಅಸುರಗುಣಿಗಳು ಇವರು ಅರಿಯರೆಂದೆಂದೂ
ಶುದ್ಧಿ ಸನ್ನಡೆ ಮತ್ತು ಸತ್ಯಸಂಧತೆಯು
ಇರದು ಈ ರಾಕ್ಷಸಪ್ರಾಯರಲಿ ಎಂದೂ

ಕಾಮಮಾಶ್ರಿತ್ಯ ದುಷ್ಪೂರಂ
ದಂಭಮಾನಮದಾನ್ವಿತಾಃ/
ಮೋಹಾದ್ಗೃಹೀತ್ವಾಸದ್ಗ್ರಾಹಾನ್
ಪ್ರವರ್ತಂತೇಶುಚಿವ್ರತಾಃ//

ತೃಪ್ತಿಯಾಗದ ಕಾಮನೆಗಳನ್ನು ಹೊಂದಿ
ಮೌಢ್ಯದಿಂ ತಪ್ಪು ಸಿದ್ಧಾಂತಗಳ ಅಪ್ಪಿ
ಮಲಿನಗುಣಿಗಳು ಇವರು ತೋರುವರು ಇಲ್ಲಿ
ಅಸುರಗುಣಗಳನು ಈ ಬಾಳಪಥದಲ್ಲಿ

ಚಿಂತಾಪರಿಮೇಯಾಂ ಚ
ಪ್ರಲಯಾಂತಾಮುಪಾಶ್ರಿತಾಃ/
ಕಾಮೋಪಭೋಗಪರಮಾಃ
ಏತಾವದಿತಿ ನಿಶ್ಚಿತಾಃ//

ಮರಣಪರ್ಯಂತ ಇರುವಂತಹ ಅಸಂಖ್ಯ
ವ್ಯಸನಗಳ ಆಶ್ರಯವ ಪಡೆದವರು ಇವರು
ಕಾಮೋಪಭೋಗವೇ ಪರಮಸುಖವೆಂದು
ದೃಢವಾಗಿ ನಂಬಿದಂಥವರು ಈ ಜನರು

ಆಶಾಪಾಶಶತೈರ್ಬದ್ಧಾಃ
ಕಾಮಕ್ರೋಧಪರಾಯಣಾಃ/
ಈಹಂತೇ ಕಾಮಭೋಗಾರ್ಥಮ್
ಅನ್ಯಾಯೇನಾರ್ಥಸಂಚಯಾನ್//

ನೂರಾರು ಆಸೆಗಳ ಪಾಶಕೊಳಪಟ್ಟು
ಕಾಮಕ್ರೋಧಗಳೆಡೆಗೆ ಮನವ ಹರಿಬಿಟ್ಟು
ವಿಷಯಭೋಗಕ್ಕಾಗಿ ಅನ್ಯಾಯದಿಂದ
ಧನವ ಗಳಿಸಲು ಸದಾ ಹೆಣಗುವರು ಇವರು

ಇದಮದ್ಯ ಮಯಾ ಲಬ್ಧಮ್
ಇಮಂ ಪ್ರಾಪ್ಸ್ಯೇ ಮನೋರಥಮ್/
ಇದಮಸ್ತೀದಮಪಿ ಮೇ
ಭವಿಷ್ಯತಿ ಪುನರ್ಧನಮ್//

ಇಷ್ಟು ಸಂಪತ್ತನ್ನು ಹೊಂದಿದೆನು ಇಂದು
ಈ ಬಯಕೆಗಳನು ಈಡೇರಿಪೆನು ಈಗ
ಇಷ್ಟು ಇದೆ ಸಂಪತ್ತು ಬರುವುದಿನ್ನಷ್ಟು
ಎಂದು ತಮ್ಮೊಳು ತಾವೆ ಗುಣಿಸುವರು ಇವರು

  ನಮ್ಮ ಇಂದಿನ ಬಹುಪಾಲು ರಾಜಕಾರಣಿಗಳು (ಎಲ್ಲರೂ ಅಲ್ಲ) ಇಂತಹ ಅಸುರಗುಣಿಗಳೇ ತಾನೆ? ಇವರನ್ನು ಸರಿಪಡಿಸುವ ಅಥವಾ ಸಂಹರಿಸುವ ಬಗೆ ಹೇಗೆ?
  ’....ವಿನಾಶಾಯ ಚ ದುಷ್ಕೃತಾಮ್....ಸಂಭವಾಮಿ ಯುಗೇ ಯುಗೇ’ ಎಂದು ಘೋಷಿಸಿರುವ ಭಗವಾನ್ ಶ್ರೀಕೃಷ್ಣನೇ ಅವತಾರವೆತ್ತಿ ಬರಬೇಕೇನೋ!

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ನನ್ನ ಈ ಲೇಖನವನ್ನೋದಿ ನನ್ನ ಹಿರಿಯ ಬಂಧು ಕೆ.ಸಿ. ಕಲ್ಕೂರ ಅವರು, ಮಹಾಭಾರತದಲ್ಲಿ ವ್ಯಾಸಮಹರ್ಷಿಗಳು ಹೇಳಿರುವ ಶ್ಲೋಕವೊಂದರೆಡೆಗೆ ನನ್ನ ಗಮನವನ್ನು (ಮಿಂಚಂಚೆಯ ಮೂಲಕ) ಸೆಳೆದಿದ್ದಾರೆ. ಆ ಶ್ಲೋಕಭಾಗವನ್ನು ಮತ್ತು ಅದರ ಭಾವವನ್ನು ನನ್ನ ಅಭಿಪ್ರಾಯಸಹಿತ ಈ ಕೆಳಗೆ ನೀಡಿದ್ದೇನೆ: ’ಧರ್ಮಾತ್ ಅರ್ಥಶ್ಚ ಕಾಮಶ್ಚ ಸ ಧರ್ಮಃ ಕಿಂ ನ ಸೇವ್ಯತೇ’ ಎಂದಿದ್ದಾರೆ ವ್ಯಾಸಮಹರ್ಷಿಗಳು. ’ಧರ್ಮಾಚರಣೆಯಿಂದ (ನ್ಯಾಯಬದ್ಧ ನಡೆಯಿಂದ) ಸಂಪತ್ಸುಖ ಮತ್ತು ಕಾಮನೆಯ ಪೂರೈಕೆ ಸಾಧ್ಯ. ಹೀಗಿದ್ದೂ ಜನರೇಕೆ ಧರ್ಮಾನುಸಾರ ನಡೆದುಕೊಳ್ಳುವುದಿಲ್ಲ?’ ಎಂಬುದು ವ್ಯಾಸರಿಗೆದುರಾಗಿರುವ ಪ್ರಶ್ನೆ. ಆ ಪ್ರಶ್ನೆ ಇಂದಿಗೂ ಪ್ರಶ್ನೆಯಾಗಿಯೇ ಉಳಿದಿರುವುದು ದುರಂತವೇ ಸರಿ. ಧರ್ಮಾಚರಣೆಯ (ನ್ಯಾಯಬದ್ಧ ನಡೆಯ) ಫಲದಮೇಲೆ ವಿಶ್ವಾಸ ಉಂಟಾಗದಷ್ಟು ತೀವ್ರವಾದ ಭೋಗಾತುರ ಪ್ರವೃತ್ತಿಯು ಜನರನ್ನು ಹೀಗೆ ಅಧರ್ಮಕ್ಕೆಳೆಯುತ್ತದೇನೋ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸ್ವರ್ಗ ನರಕಗಳೆಂಬ ಎರಡು ಭಿನ್ನ ಲೋಕಗಳೇಕೆ ಇರುವುದೆಂಬುದಕೆ ಉತ್ತರವನರಿತರೆ, ಈ ಪ್ರಶ್ನೆಗೂ ಲಭಿಸೀತು ಉತ್ತರವು! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ತರ್ಕಬದ್ಧ ನುಡಿ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ದೇವರೇ ನಮ್ಮನ್ನು ಕಾಪಾಡಬೇಕೆನ್ನುವುದು ಹೇಡಿಗಳ ಮಾತು. ಮನುಷ್ಯ ಪ್ರಯತ್ನವಿದ್ದರೆ ಮಾತ್ರ ದೈವಕೃಪೆ ಸಿಗುತ್ತದೆ. ಇದುವೇ ವೇದದ ಸಾರ. ಆನಂತರ ಬಂದ ಪುರಾಣಗಳು, ಗೀತೆ ಇತ್ಯಾದಿ (ಅಥವಾ ಇಂದು ಲಭ್ಯವಿರುವ ಅವುಗಳ ಆವೃತ್ತಿಗಳು) ಗಳು ಮನುಷ್ಯ ಪ್ರಯತ್ನದ ಮಹತ್ವವನ್ನು ಕಡೆಗಾಣಿಸಿ ಕೇವಲ ದೈವದ ಸಹಾಯವನ್ನು ವಿಜೃಂಭಿಸುತ್ತವೆ. ಇವುಗಳನ್ನು ಪ್ರಶ್ನಿಸುವ ಮನೋಭಾವ ಇದ್ದರೆ, ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವ ಛಾತಿ ಇದ್ದರೆ ಸಮಸ್ಯೆಗಳಿಗೆ ಪರಿಹಾರ ದೊರಕಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಮನುಷ್ಯ ಪ್ರಯತ್ನವಿದ್ದರೆ ಮಾತ್ರ ದೈವಕೃಪೆ ಸಿಗುತ್ತದೆ ಎಂಬ ನಿಮ್ಮ ಮಾತು ಒಪ್ಪುವಂತಹದು. ಭಗವಾನ್ ಶ್ರೀಕೃಷ್ಣನೇ ಅವತಾರವೆತ್ತಿ ಬರಬೇಕೇನೋ ಎಂದು ನಾನು ಬರೆದಿರುವುದು ವಿಡಂಬನಾತ್ಮಕವಾಗಿ ಎಂಬುದು ನಿಮಗೆ ಅರ್ಥವಾಗಿದೆಯೆಂದುಕೊಳ್ಳುತ್ತೇನೆ. ವಿಡಂಬನೆಯ ಕುರುಹಾಗಿ ಆಶ್ಚರ್ಯಸೂಚಕ ಚಿಹ್ನೆ ಬಳಸಿದ್ದೇನಷ್ಟೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವಿಡಂಬನೆಯನ್ನು ಸಾವಿರ ಬಾರಿ ಮಾಡಿದರೆ ಅದು ಕ್ಲೀಷೆಯಾಗುತ್ತದೆ. ಈ ವಿಷಯದಲ್ಲೂ ಹಾಗಾಗಬಾರದು ಅಂತ ನನ್ನ ಕಳಕಳಿ ಅಷ್ಟೆ (ನಿಮ್ಮನ್ನುದ್ದೇಶಿಸಿ ನಾನು ಹೇಳುತ್ತಿರುವುದಲ್ಲ, ಭಗವಂತನೇ ಬರಬೇಕಷ್ಟೆ ಎಂಬುದು ಸಾಮಾನ್ಯವಾಗಿ ಚಾಲ್ತಿಯಲ್ಲಿರುವ ಮಾತು).
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಮಹೇಶ್, "ಏನೋ ದೇವರಿಗೇ ಗೊತ್ತು" ಮತ್ತು "ಇದು ಸರಿ ಹೋಗಬೇಕಾದರೆ ಆ ದೇವರೇ ಬರಬೇಕೇನೋ..." ಅನ್ನುವ ಮಾತುಗಳು ಮನುಷ್ಯನ ದೃಷ್ಟಿಯಲ್ಲಿ, ಬೇರಾರಿಂದಲೂ ಅಸಾಧ್ಯವಾದ ಮತ್ತು ಕೇವಲ ದೇವರಿಗೆ ಮಾತ್ರ ಸಾಧ್ಯ ಇದು, ಅನ್ನುವ ಅರ್ಥದಲ್ಲಿ, ಮನುಜ, ಅಸಹಾಯಕನಾಗಿ ಕೈ ಸೋತು, ಆಡುವಾಗ, ಬಳಕೆಯಾಗುವ ರೂಢಿಯ ಮಾತುಗಳು. ಅವುಗಳ ಅರ್ಥ, ಮನುಜ ಪ್ರಯತ್ನ ಮಾಡುತ್ತಿಲ್ಲ ಅಥವಾ ಪ್ರಯತ್ನ ಮಾಡದೇ ಎಲ್ಲದಕೂ ದೇವರ ಮೇಲೇ ಅವಲಂಬಿತನಾಗಿದಾನೆ, ಎನ್ನುವುದಂತೂ ಅಲ್ಲ, ಎಂದು ನನ್ನ ಅನಿಸಿಕೆ. - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನೀವು ನಾವೆಲ್ಲ ನಿಜಾರ್ಥ ಗೊತ್ತಿದ್ದರೂ ನೀವು ಹೇಳಿದ ಎರಡನೇ ರೀತಿಯ ಅರ್ಥವನ್ನು ಹಲವು ಬಾರಿ ಚರ್ಚೆಗಳಲ್ಲಿ, ಲೇಖನಗಳಲ್ಲಿ ಉಪಯೋಗಿಸುವುದನ್ನು ನಾನು ಗಮನಿಸಿದ್ದೇನೆ. ಇದು ರೂಢಿಯಲ್ಲಿರುವ ಮಾತನ್ನು ಧಿಕ್ಕರಿಸುವ ಮನಸ್ಸಿಲ್ಲದ ಕಾರಣದಿಂದಲೂ ಇರಬಹುದು. ಅಥವಾ "ನಿಜಾರ್ಥ ನನಗೆ ಗೊತ್ತು, ಹಾಗಂತ ಇನ್ನೊಬ್ಬನ ಅರ್ಥೈಸುವಿಕೆಯನ್ನು ನಿರಾಕರಿಸುವುದೇತಕ್ಕೆ" ಎಂಬ ಉದಾಸೀನತೆಯಿಂದಲೂ ಇರಬಹುದು. ಈ ರೀತಿ ಆಗಬಾರದಲ್ಲವೇ? ರೂಢಿಯಲ್ಲಿರುವ ನಂಬಿಕೆಗಳನ್ನೂ ಪ್ರಶ್ನಿಸಿಕೊಂಡಾಗ ಇನ್ನಷ್ಟು ಗೂಢಾರ್ಥ ಹೊಳೆದೀತು. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನೀರ್ಕಜೆಯವರೇ- >>ಆನಂತರ ಬಂದ ಪುರಾಣಗಳು, ಗೀತೆ ಇತ್ಯಾದಿ (ಅಥವಾ ಇಂದು ಲಭ್ಯವಿರುವ ಅವುಗಳ ಆವೃತ್ತಿಗಳು) ಗಳು ಮನುಷ್ಯ ಪ್ರಯತ್ನದ ಮಹತ್ವವನ್ನು ಕಡೆಗಾಣಿಸಿ ಕೇವಲ ದೈವದ ಸಹಾಯವನ್ನು ವಿಜೃಂಭಿಸುತ್ತವೆ. >> ಗೀತೆ ಮನುಷ್ಯಪ್ರಯತ್ನದ ಮಹತ್ತ್ವವನ್ನು ಕಡೆಗಾಣಿಸಿಲ್ಲ. ಗೀತೆಯ ಈ ಮಾತು ನೋಡಿ- ಅಧಿಷ್ಠಾನಂ............ ದೈವಂಚೈವಾತ್ರ ಪಂಚಮಮ್||೧೮-೧೪|| ಕರ್ಮದಪಂಚಾಂಗ ನಿರೂಪಣೆಯಲ್ಲಿ ದೈವಕ್ಕೆ ಐದನೇ ಒಂದು ಭಾಗದಷ್ಟು ಮಾತ್ರ ಮಹತ್ತ್ವ. ಇನ್ನು ಪರಂಪರೆಯಲ್ಲಿ ಪೌರುಷಪ್ರಶಂಸಾತ್ಮಕವಾದ ಮಾತುಗಳೂ ಇವೆ. (ದೈವಂ ನಿಹತ್ಯ ಕುರು ಪೌರುಷಮಾತ್ಮಶಕ್ತ್ಯಾ..... ) ದೈವ ಸಹಾಯದ ವಿಜೃಂಭಣೆ ಬಹಳ ಕಡೆ ಇರುವುದೂ ನಿಜ, ಆದರೆ ಅದು ಸಕಾರಾತ್ಮಕವಾಗಿ ಆತ್ಮವಿಶ್ವಾಸವನ್ನು ಹೆಚ್ಚಿಸಿ ನಮ್ಮನ್ನು ಕಾರ್ಯೋನ್ಮುಖರಾಗುವಂತೆ ಪ್ರೇರಿಸುತ್ತಿದೆ. ಅರ್ಜುನ ಯುದ್ಧಕ್ಕೆ ಸಿದ್ಧನಾದಂತೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹ್ಮ್.. ಗೀತೆಯಲ್ಲಿ ಹೇಳಿಲ್ಲದಿರಬಹುದು. ಕರ್ಮ (ಕಾರ್ಯ) ದ ಮಹತ್ವವನ್ನು ಗೀತೆ ಒತ್ತಿ ಹೇಳಿದ್ದೂ ಹೌದು. ಜನರಲ್ಲಿ ಮಾತ್ರ ಇವುಗಳ ಬದಲಾಗಿ "ಎಲ್ಲಾ ದೇವರು ನೋಡಿಕೊಳ್ಳುತ್ತಾನೆ" ಎಂಬ ನಂಬಿಕೆ ಇರುವುದು ನಿಜ. ಇದು ಗ್ರಂಥಗಳಲ್ಲೇ ಇರುವ ದೋಷ ಎಂದು ಹೇಳಲು ನಾನು ಹೊರಟಿದ್ದಲ್ಲ. ನಮ್ಮ ಆದ್ಯತೆಗಳು ಯಾವುದರ ಮೇಲಿರಬೇಕೆಂಬುದನ್ನು ಅರಿತುಕೊಳ್ಳಬೇಕಷ್ಟೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಗೀತೆಯ ವಿಶೇಷತೆಯೆಂದರೆ ಅದು ಯಾರು ಯಾವ ದೃಷ್ಟಿಯಲ್ಲಿ ಓದುತ್ತಾರೋ ಅವರಿಗೆ ಅದು ಆ ರೀತಿಯಲ್ಲೇ ಕಾಣಿಸುತ್ತದೆ. ನಾನು ಓದುತ್ತಿರುವ ಗ್ರಂಧ ಇಸ್ಕಾನಿದ್ದು. ಕರ್ಮ ಯೋಗಕ್ಕೂ ಅವರು ಭಕ್ತಿಯೋಗವೆಂದೇ ಹೇಳುತ್ತಾರೆ. ಅವರ ಪ್ರಕಾರ ನಿಜವಾದ ಕರ್ಮವೆಂದರೆ ಕೃಷ್ಣನ ಭಕ್ತಿಯಲ್ಲಿ ಲೀನವಾಗುವುದು. ಆದರೆ ನನ್ನ ನಿರೂಪಣೆ ಅದಕ್ಕೆ ಹಾಗಲ್ಲ, ನನಗೆ ಕರ್ಮವೆಂದರೆ ನಮ್ಮಿಂದ ಉಂಟಾಗುವ ಕ್ರಿಯೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

<< ಕರ್ಮ ಯೋಗಕ್ಕೂ ಅವರು ಭಕ್ತಿಯೋಗವೆಂದೇ ಹೇಳುತ್ತಾರೆ >> ಹೌದೇ, ಗೊತ್ತಿರಲಿಲ್ಲ. ನನ್ಹತ್ರನೂ ಇದೆ ಇಸ್ಕಾನ್ ಭಗವದ್ಗೀತೆ. ಪೂರ್ತಿಯಾಗಿ ಓದಿಲ್ಲ. ಓದಬೇಕು ಇನ್ನೂ. ಇಸ್ಕಾನ್ ಕೂಡ ಹಲವು ರೂಢಿಗತ ನಂಬಿಕೆಗಳನ್ನು ಪ್ರಶ್ನಿಸುತ್ತದೆ. ಅವರ ಸಾಹಿತ್ಯಗಳನ್ನು ಓದಲು ನನಗೆ ಇಷ್ಟ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಇಲ್ಲಿ ಆರೋಗ್ಯಪೂರ್ಣ ಚರ್ಚೆ ನಡೆದಿರುವುದು ಸ್ವಾಗತಾರ್ಹ ಸಂಗತಿ. ಎಲ್ಲ ಮಿತ್ರರಲ್ಲೂ ಜಿಜ್ಞಾಸು ಮನೋಭಾವ ಇರುವುದು ಪ್ರಶಂಸಾರ್ಹ. ಮಂಥನದಿಂದಷ್ಟೇ ಅಮೃತ ಲಭ್ಯ ತಾನೆ. ನಾನಿಲ್ಲಿ ನನ್ನ ಅರಿವನ್ನು ಪಕ್ವವಾಗಿಸಿಕೊಳ್ಳಲೆತ್ನಿಸುತ್ತಿದ್ದೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕಶ್ಯಪ ಮದುವೆ ಆದಾಗಲೇ ಸಮಸ್ಯೆ ಶುರುವಾಗಿದ್ದು. ಅದಿತಿಯಲ್ಲಿ ಅಸುರರು, ಧನುವಿನಿಂದ ದಾನವರು, ಕರ್ದ್ರು ವಿನಿಂದ ಹಾವು ಚೇಳು ಹುಟ್ಟಿದಾಗಲೇ ಕಶ್ಯಪ ಬೇರೆ ಬೇರೆ ಲೋಕ ಸೃಸ್ತಿಮಾಡಿ ಹೆಂಡತಿ ಮಕ್ಕಳ ಜಗಳ ಬಗೆಹರಿಸಿದ್ದು. ದೇವತೆಯರಿಗೆ ಸ್ವರ್ಗ, ಬೇರೆಯವರಿಗೆ ನರಕ, ದಾನವರಿಗೆ ಪಾತಾಳ. ಇನ್ನು ರಸಾತಳದಲ್ಲಿಯು ಅವನ ಮಕ್ಕಳೇ. ಇನ್ನು ಮಹಾವಿಷ್ಣು ಗೆ ಈ ಕಾಶ್ಯಪರ ಉಪಟಳ ಬಗೆ ಹರಿಸೋ ಲಾಂಗ್ ಟರ್ಮ್ ಪ್ರಾಜೆಕ್ಟು:-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಮ೦ಥನ ಮಾಡಿದಾಗಲೇ ಅಮೃತ-ವಿಷ ಎರಡೂ ದೊರೆತದ್ದಲ್ಲವೇ ಆನ೦ದರಾಮದೇವಾ? ಒಳಿತು ಕೆಡುಕುಗಳೆರಡೂ ಈ ಭೂಮಿಯ ಉದಯದೊ೦ದಿಗೇ ಉಧ್ಬವವಾದ೦ಥವು! ಒ೦ದನ್ನು ಬಿಟ್ಟು ಇನ್ನೊ೦ದಿಲ್ಲ! ಗಾ೦ಧಿ ಇದ್ದಲ್ಲಿ ನೆಹರೂ ಇದ್ದ೦ತೆ!. ಶ್ರೀಕೃಷ್ಣನಾದ ರೂ ಕಾರ್ತ್ಯವೀರನ ಮು೦ದೆ ಒಮ್ಮೆ ತಡಬಡಾಯಿಸಲಿಲ್ವೇ! ಕ೦ಸನನ್ನು ಕೊಲ್ಲಲೂ ತನ್ನೆಲ್ಲ ಪಟ್ಟುಗಳನ್ನೂ ಪ್ರಯೋಗಿಸಬೇಕಾಯ್ತು! ಇಷ್ಟಾದರೂ ಕೊನೆಗೆ ಗೆಲ್ಲುವುದು ಧರ್ಮವೇ! ನ್ಯಾಯವೇ! ಅದರಲ್ಲೇನೂ ಸ೦ದೇಹವಿಲ್ಲ. “ಇನ್ನು ದೇವರೇ ಗತಿ“! ಎನ್ನುವುದಕ್ಕೂ “ಅವನೇ ಗತಿ ಕೊನೆಗೆ“ ಎನ್ನುವುದಕ್ಕೂ ವ್ಯತ್ಯಾಸವಿದೆ. ಅವನನ್ನು ನ೦ಬಿಕೊ೦ಡೇ ನಾವೂ ಪ್ರಯತ್ನ ಮಾಡೋಣ... ಏನ೦ತೀರಿ? ಕಾಲಾಯ ತಸ್ಮೈ ನಮ: ಅಲ್ಲವೇ! ಇನ್ನೊ೦ದು ವಿಷಯ: ಹಾಗೇ ನಾವು ಕರೆದಾಗ ಹಾಗೂ ಬಾ ಎ೦ದು ಹೇಳಿದಾಗ ಬರಲು ಅವನೇನು ನಮ್ಮ ಮನೆಯೆ ದಾಸನೇನು! ಎಲ್ಲವನ್ನೂ ಮಾಡಿ, ಆನ೦ತರ ಅವನನ್ನು ನೋಡಯ್ಯಾ, ಏನಾಗಿದೆ ಎ೦ದು ಹೇಳಯ್ಯಾ, ಎ೦ದು ಸೂಪರ್ ವಿಷನ್ ಗೆ ಮಾತ್ರ ಕರೆಯಬೇಕು. ಆಗ ನಾವು ಪರೀಕ್ಷೆ ಬರೆದ೦ತೆ, ಅವನು ಮಾರ್ಕ್ಸ್ ಕೊಡ್ತಾನೆ! ಅಲ್ಲವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

+೧
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಮಿತ್ರತ್ರಯರಿಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.