ಭಾಗ - ೨: ಅಯ್ಯಪ್ಪ ಸ್ವಾಮಿಯ ದೀಕ್ಷೆ ಅಥವಾ ಮಾಲಾ ಧಾರಣೆ ಮತ್ತು ಯಾತ್ರೆ

3.5

ಇರುಮುಡಿ ಹೊತ್ತ ಭಕ್ತರು

ಚಿತ್ರಕೃಪೆ: ವಿಕಿಪೀಡಿಯ

            ಯಾವುದೇ ಒಂದು ವ್ರತ ಅಥವಾ ದೀಕ್ಷೆಯ ಉದ್ದೇಶ ಈಡೇರಬೇಕೆಂದರೆ ಒಂದು ಮಂಡಲ ಕಾಲ ಅಂದರೆ ೪೧ ದಿವಸಗಳು ಆ ವ್ರತದ ನಿಯಮವನ್ನು ಅಕುಂಠಿತವಾಗಿ (ಅಡೆತಡೆಯಿಲ್ಲದೆ) ಆಚರಿಸಬೇಕೆಂದು ಶಾಸ್ತ್ರ ನಿಯಮಿವಿದೆ. ಹೀಗೆ ಒಂದು ಮಂಡಲ ಕಾಲ ಅಯ್ಯಪ್ಪನ ದೀಕ್ಷೆಯಲ್ಲಿರುವುದನ್ನು ಮಾಲೆ ಧರಿಸುವುದು ಎನ್ನುತ್ತಾರೆ. ಮಾಲೆಯನ್ನು ಗುರುಮುಖೇನ ಧಾರಣೆ ಮಾಡಬೇಕೆಂಬ ನಿಯಮವಿದೆ. ಅಯ್ಯಪ್ಪನ ದೀಕ್ಷೆಯಲ್ಲಿ ಸಾಮಾನ್ಯವಾಗಿ ಐದು ವರ್ಷಗಳ ಕಾಲ ದೀಕ್ಷೆ ಕೈಗೊಂಡು ಆರನೆಯ ವರ್ಷಕ್ಕೆ ಅಡಿಯಿಟ್ಟವರನ್ನು ಗುರುಸ್ವಾಮಿಯೆನ್ನುತ್ತಾರೆ; ಅವರ ಮೂಲಕ ಮಾಲ ಧಾರಣೆ ಮಾಡಬಹುದು. ಮೊದಲನೆ ವರುಷ ಹೊಸದಾಗಿ ದೀಕ್ಷೆ ಕೈಗೊಳ್ಳುವವರನ್ನು ಕನ್ಯೆ ಸ್ವಾಮಿ (ಬ್ರಹ್ಮಚಾರಿ ಎನ್ನುವುದಕ್ಕೆ ಪರ್ಯಾಯ ರೂಪ ಅಥವಾ ಇಂಗ್ಲೀಷಿನ virgin) ಎಂದು ಕರೆಯುತ್ತಾರೆ. ಎರಡನೆಯ ವರ್ಷದ ದೀಕ್ಷೆ ಕೈಗೊಂಡವರು ಕತ್ತಿ ಸ್ವಾಮಿ, ಹಾಗೆಯೇ ಮೂರನೆಯ, ನಾಲ್ಕನೆಯ ಮತ್ತು ಐದನೆಯ ವರುಷ ದೀಕ್ಷೆ ಕೈಗೊಳ್ಳುವವರನ್ನು ಅನುಕ್ರಮವಾಗಿ ಘಂಟಾ ಸ್ವಾಮಿ, ಗದಾ ಸ್ವಾಮಿ, ಪೆರಿಯ ಅಥವಾ ಪೇರು ಸ್ವಾಮಿ ಎಂದು ಕರೆಯುತ್ತಾರೆ. ಆರನೆಯ ವರ್ಷದಿಂದ ಅವರನ್ನು ಗುರುಸ್ವಾಮಿ ಎಂದು ಕರೆಯುತ್ತಾರೆ.    

              ಅಯ್ಯಪ್ಪನ ದೀಕ್ಷೆಯಲ್ಲಿ ಹಲವಾರು ವ್ರತ ನಿಯಮಗಳಿವೆ ಅವುಗಳನ್ನು ಈ ರೀತಿಯಾಗಿ ಹೇಳಬಹುದು:
೧) ಗುರುಸ್ವಾಮಿಯಾದವರಿಂದ ವ್ರತ ದೀಕ್ಷೆಯನ್ನು ಪಡೆದು ಕೊರಳಲ್ಲಿ ರುದ್ರಾಕ್ಷಿ ಮತ್ತು ತುಳಸಿ ಮಾಲೆಯನ್ನು ಧರಿಸಬೇಕು (ಶಿವ ಮತ್ತು ವಿಷ್ಣುವಿನ ಸಂಕೇತವಾಗಿ) ೨)ದಿನಾಲು ಬೆಳಿಗ್ಗೆ ಮತ್ತು ಸಾಯಂಕಾಲ ಸ್ನಾನ ಮಾಡಿ ಅಯ್ಯಪ್ಪನಿಗೆ ಪ್ರಾತಃ ಸಂಧ್ಯೆ ಮತ್ತು ಸಾಯಂ ಸಂಧ್ಯಾ ಸಮಯಗಳಲ್ಲಿ ಪೂಜೆ ಮತ್ತು ನೈವೇದ್ಯಾದಿಗಳನ್ನು ಅರ್ಪಿಸಬೇಕು. ೩) ಕರಿಯ ವಸ್ತ್ರಗಳನ್ನು ಧರಿಸಬೇಕು. ೪) ಉಗುರು ಮತ್ತು ಕೇಶ ಮುಂಡನಗಳನ್ನು ಮಾಡಿಕೊಳ್ಳುವಂತಿಲ್ಲ. ೫) ಮಂಡಲ ಕಾಲವೆಂದು ಕರೆಯಲ್ಪಡುವ ೪೧ ದಿವಸಗಳ ಕಾಲ ಕೇವಲ ಒಂದು ಹೊತ್ತು ಊಟ/ಆಹಾರ ಸ್ವೀಕರಿಸ ಬೇಕು ೬) ಬ್ರಹ್ಮಚರ್ಯವನ್ನು ಈ ಮಂಡಲ ಕಾಲದಲ್ಲಿ ಪಾಠಿಸಬೇಕು ೭) ಮನೆಯಿಂದ ದೂರ ಗುಡಿಗಳಲ್ಲಿ ಅಥವಾ ಉದ್ಯಾನಗಳಲ್ಲಿ ಹೆಂಗಸರ ಸಂಪರ್ಕವಿಲ್ಲದ ಕಡೆ ವಾಸ ಮಾಡಬೇಕು. ೮) ಸ್ವತಃ ಅಥವಾ ಅಯ್ಯಪ್ಪನ ದೀಕ್ಷೆ ಕೈಗೊಂಡಿರುವವರು ತಯಾರಿಸಿದ ಆಹಾರವನ್ನು ಮಾತ್ರ ಸೇವಿಸ ಬೇಕು. ೯) ಹಾಸಿಗೆ ಮೇಲೆ ಮಲಗದೆ ನೆಲ ಅಥವಾ ಚಾಪೆಯ ಮೇಲೆ ಮಲಗಬೇಕು. ೧೦) ತನ್ನನ್ನು ಹಾಗು ಇತರರನ್ನು ಕೂಡ "ಅಯ್ಯಪ್ಪ" ಎಂದು ಸಂಭೋದಿಸಬೇಕು. ಸ್ವತಃ ತನ್ನ ಹೆಂಡತಿ ಹಾಗು ಇತರ ಹೆಂಗಸರನ್ನು ಈ ದೀಕ್ಷಾ ಕಾಲದಲ್ಲಿ "ಮಾತಾ" ಎಂದೇ ಸಂಭೋದಿಸಬೇಕು. ೧೧) ಚಪ್ಪಲಿಯನ್ನು ಧರಿಸ ಕೂಡದು ಮತ್ತು ಯಾವುದೇ ರೀತಿಯ ವಾಹನಗಳನ್ನು ಉಪಯೋಗಿಸದೆ ಕಾಲು ನಡಿಗೆಯಲ್ಲಿ ಪ್ರಯಾಣ ಮಾಡಬೇಕು. ೧೨) ಅಯ್ಯಪ್ಪ ಮಾಲೆಯನ್ನು ಧರಿಸಿದವರೆಲ್ಲರಿಗೂ ವಯೋಬೇಧ ಮತ್ತು ಕುಲಭೇದವಿಲ್ಲದೆ ಅವರು ಭೇಟಿಯಾದಾಗ ಕಾಲು ಮುಟ್ಟಿ  ನಮಸ್ಕರಿಸಬೇಕು. ೧೩) ದೀಕ್ಷಾ ಕಾಲದಲ್ಲಿ ಕನಿಷ್ಠ ಐದು ಜನ ಮಾಲೆ ಧರಿಸಿದ ಸ್ವಾಮಿಗಳಿಗೆ ಭೋಜನದ ವ್ಯವಸ್ಥೆ ಮಾಡಬೇಕು ಮತ್ತು ಯಾರೇ ಅಯ್ಯಪ್ಪನ ಮಾಲೆ ಧರಿಸಿದವರು ಊಟ ಮತ್ತು ಪೂಜೆಗೆ ಕರೆದರೆ ಹೋಗಬೇಕು. ಇಲ್ಲಿ ಊಟವಾದ ನಂತರ ಹಿರಿಯ ಸ್ವಾಮಿಗಳ ಎಲೆಗಳನ್ನು ಕನ್ಯಾಸ್ವಾಮಿಗಳು ಎತ್ತುವ ರೂಢಿ ಇದೆ. ಕೆಲವೊಮ್ಮೆ ಅನ್ನದಾನ ಏರ್ಪಡಿಸಿದವರೆ ಅದನ್ನು ಬೇರೆಯವರಿಗೆ ಅವಕಾಶ ಕೊಡದೆ ತಾವೇ ಆ ಪುಣ್ಯವನ್ನು ಗಳಿಸಲು ಹಾತೊರೆಯುವುದುಂಟು.  ೧೪) ಋತುಮತಿಯಾಗದ ಚಿಕ್ಕ ಹುಡುಗಿಯರು ಮತ್ತು ಮುಟ್ಟು ನಿಂತ ಹಿರಿಯ ಹೆಂಗಸರು ಮಾತ್ರ ಮಾಲೆ ಧರಿಸಲು ಅರ್ಹರು. ಇದನ್ನೇ ಪುರುಷಾಂಶ ಅಧಿಕವಾಗಿರುವವರು ತೊಡಬಹುದಾದ ದೀಕ್ಷೆಯೆಂದೂ ಕರೆಯುತ್ತಾರೆ. ಪುರುಷಾಂಶ ಅಧಿಕವಾಗಿರುವವರು ಎನ್ನುವುದಕ್ಕೆ ಬೇರೆ ಆಧ್ಯಾತ್ಮಿಕ ವಿವರಣೆಯೂ ಇದೆ ಅದು ನನಗೆ ಸರಿಯಾಗಿ ತಿಳಿಯದು. ೧೫) ದೀಕ್ಷಾ ಸಮಯದಲ್ಲಿ ಮಾದಕ ವಸ್ತುಗಳ ಸೇವನೆ ಮತ್ತು ಚಿತ್ತಚಾಂಚಲ್ಯ ಅಥವಾ ಮನೋವಿಕಾರಗೊಳಿಸುವ ವಿಚಾರ ಮತ್ತು ವಸ್ತುಗಳಿಂದ ದೂರವಿರಬೇಕು.

          ಒಂದು ಮಂಡಲ ಕಾಲ ವ್ರತ ನಿಯಮಗಳನ್ನು ಆಚರಿಸಿದ ಮೇಲೆ ಅಯ್ಯಪ್ಪನ ದರ್ಶನಕ್ಕೆಂದು ಅಯ್ಯಪ್ಪ ಸ್ವಾಮಿಯ ಭಕ್ತರು ಶಬರಿಮಲೆ ಯಾತ್ರೆಯನ್ನು ಕೈಗೊಳ್ಳುತ್ತಾರೆ. ಇದಕ್ಕೂ ಕೆಲವು ವಿಶಿಷ್ಠ ಪದ್ದತಿಗಳಿವೆ. ಅವೆಂದರೆ, ಐದು ಕಾಯಿಗಳನ್ನು ಸಂಪೂರ್ಣ ನಾರಿನಿಂದ ಬೇರ್ಪಡಿಸಿ ಅವನ್ನು ನುಣ್ಣಗೆ ತಿಕ್ಕಬೇಕು. ಕಾಯಿಯ ಮೇಲಿನ ನಾರಿನ/ಜುಬ್ಬರದ ಅಂಶ ಸಂಪೂರ್ಣ ಇಲ್ಲವಾಗಿ ಅದು ಗುಂಡುಕಲ್ಲಿನಂತೆ ಹೊಳೆಯುವವರೆಗೆ ಇದನ್ನು ಮುಂದುವರೆಸಬೇಕು. ತದನಂತರ ಈ ಕಾಯಿಗಳಿಗೆ ಅರಿಶಿಣದ ಲೇಪನ ಮಾಡಬೇಕು. ಮೊದಲೇ ತಿಳಿಸಿದಂತೆ ಈ ರೀತಿಯ ಐದು ಕಾಯಿಗಳನ್ನು ದೀಕ್ಷೆ ಕೈಗೊಂಡವರು ತಯಾರಿಸಿಕೊಳ್ಳುತ್ತಾರೆ. ತದನಂತರ ಅಯ್ಯಪ್ಪನ ಪೂಜೆಗೆ ಬೇಕಾಗುವ ಗಂಧ, ವಿಭೂತಿ, ಕರ್ಪೂರ, ಊದುಬತ್ತಿ, ಮೊದಲಾವುಗಳನ್ನು ಕೂಡ ತಂದಿಟ್ಟುಕೊಳ್ಳಬೇಕು. ಇದಾದನಂತರ ಐದು ಸೇರು ಅಕ್ಕಿಯನ್ನು ತಂದಿಟ್ಟುಕೊಳ್ಳಬೇಕು. ಈ ವಸ್ತುಗಳೊಂದಿಗೆ ಯಾತ್ರೆಗೆ ಬೇಕಾಗುವ ಪ್ರತ್ಯೇಕವಾದ ಇರುಮುಡಿ ಚೀಲವನ್ನು ಕೂಡ ಅವಶ್ಯವಾಗಿ ತೆಗೆದುಕೊಳ್ಳಬೇಕು. ಇವೆಲ್ಲಾ ಹೊಂದಿಕೆಯಾದ ಮೇಲೆ ನಿಗದಿತ ದಿವಸ ಗುರುಸ್ವಾಮಿಯ ಆರ್ಧ್ವರ್ಯದಲ್ಲಿ ಇರುಮುಡಿ ಕಟ್ಟಿಕೊಂಡು ಯಾತ್ರೆಗೆ ಹೊರಡುವ ಕಾರ್ಯ ಪ್ರಾರಂಭವಾಗುತ್ತದೆ. ಗುರುಸ್ವಾಮಿಯು ಐದು ಕಾಯಿಗಳಲ್ಲಿ ಒಂದು ಕಾಯಿಯ ಕಣ್ಣಿನ ಮೂಲಕ ಅದರಲ್ಲಿರುವ ಎಳನೀರನ್ನೆಲ್ಲಾ ಹೊರತೆಗೆದು ಅದರಲ್ಲಿ ತುಪ್ಪವನ್ನು ತುಂಬುತ್ತಾರೆ ಮತ್ತು ಅದನ್ನು ಬಟ್ಟೆಯ ಚೂರಿನಿಂದ ಮುಚ್ಚಿ ಪ್ರತ್ಯೇಕವಾಗಿ ತಯಾರಿಸಿದ ಮೈದಾಹಿಟ್ಟಿನಂತಹ ಅಂಟು ಪದಾರ್ಥದಿಂದ ಮುಚ್ಚಿ ತುಪ್ಪ ಸೋರದಂತೆ ಭದ್ರಗೊಳಿಸುತ್ತಾರೆ. ಇದನ್ನೇ ಮುದ್ರೆ ತೆಂಗಿನಕಾಯಿ ಎನ್ನುತ್ತಾರೆ. ಈ ಮುದ್ರೆ ತೆಂಗಿನಕಾಯಿಯನ್ನು ಮೊದಲು ಇರುಮುಡಿಯ ಚೀಲದಲ್ಲಿರಿಸಿದ ನಂತರ ಪೂಜಾ ಸಾಮಗ್ರಿಗಳನ್ನು ಇದರಲ್ಲಿ ಇರಿಸುತ್ತಾರೆ. ಅದರೊಂದಿಗೆ ಕೆಲವು ರವಿಕೆಯ ಬಟ್ಟೆಗಳನ್ನು ಆ ಚೀಲದಲ್ಲಿ ಇಡುತ್ತಾರೆ. ಇವನ್ನು ಮಾಲಿಕಾಪುರಮ್ಮನ ಬಳಿಯಲ್ಲಿಟ್ಟು ಪೂಜೆ ಮಾಡಿಸಿ ತದನಂತರ ಮದುವೆಯಾಗದವರು ಧರಿಸಿದರೆ ಅವರಿಗೆ ಮದುವೆಯ ಯೋಗ ಕೂಡಿ ಬರುತ್ತದೆ ಎನ್ನುವ ನಂಬಿಕೆಯಿದೆ. (ಇನ್ನೊಂದು ಚೀಲದಲ್ಲಿ ಉಳಿದ ನಾಲ್ಕು ಕಾಯಿಗಳನ್ನು ಇಟ್ಟುಕೊಳ್ಳಬೇಕು.) 

             ತದನಂತರ ಅಯ್ಯಪ್ಪನ ದೀಕ್ಷೆ ಕೈಗೊಂಡ ಭಕ್ತರ ಕುಟುಂಬ ವರ್ಗದವರೆಲ್ಲರೂ ಒಂದೊಂದು ಬೊಗಸೆ ಅಕ್ಕಿಯನ್ನು ಆ ಇರುಮುಡಿ ಚೀಲದಲ್ಲಿ ಹಾಕುತ್ತಾರೆ. ಪ್ರಪ್ರಥಮವಾಗಿ ತಾಯಿಗೆ ಅಕ್ಕಿಯನ್ನು ಹಾಕುವ ಹಕ್ಕು ಇರುತ್ತದೆ ಆಮೇಲೆ ಅವನ ತಂದೆ, ಹೆಂಡತಿ ಮಕ್ಕಳು, ಬಂಧು ಬಳಗ ಮತ್ತು ಸ್ನೇಹಿತರು ಇದರಲ್ಲಿ ಭಾಗವಹಿಸಬಹುದು. ಕೆಲವರು ಅಕ್ಕಿಯ ಜೊತೆ ದುಡ್ಡನ್ನೂ ಹಾಕುವ ಪರಿಪಾಠವನ್ನಿಟ್ಟುಕೊಂಡಿದ್ದಾರೆ. ಇದಾದ ನಂತರ ಐದು ಸೇರಿನಲ್ಲಿ ಉಳಿದ ಅಕ್ಕಿಯನ್ನು  ಗುರುಸ್ವಾಮಿ ಇರುಮುಡಿ ಚೀಲದಲ್ಲಿ ಹಾಕಿ ಗಂಟು ಕಟ್ಟುತ್ತಾರೆ. ಹೀಗೆ ಸಿದ್ಧವಾದ ಇರುಮುಡಿಯ ಗಂಟನ್ನು ಅಯ್ಯಪ್ಪ ಭಕ್ತನ ಮೇಲೆ ಅಯ್ಯಪ್ಪನ ಶರಣಾವಳಿಗಳನ್ನು ಹೇಳುತ್ತಾ ತಲೆಯ ಮೇಲಿರಿಸುತ್ತಾರೆ. ಅದಕ್ಕೂ ಮುಂಚೆ ಸ್ವಾಮಿಯಾದವನಿಗೆ ಹೂ ಮಾಲೆಯನ್ನು ಹಾಕುತ್ತಾರೆ. ಹೀಗೆ ಇರುಮುಡಿ ಧರಿಸಿದ ಸ್ವಾಮಿ ದೇವಸ್ಥಾನದ ಪ್ರದಕ್ಷಿಣೆ ಬರುವ ಪರಿಪಾಠವಿದೆ. ಈ ರೀತಿ ಇರುಮುಡಿಯನ್ನು ಹೊತ್ತ ಸ್ವಾಮಿ ಅಯ್ಯಪ್ಪನ ಪ್ರತಿರೂಪವೆಂದು ತಿಳಿದು ಅವನ ತಂದೆ-ತಾಯಿಯರೂ ಕೂಡ ಅವನ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುವ ಪದ್ದತಿಯೂ ಇದೆ. ಒಮ್ಮೆ ಇರುಮುಡಿ ಧರಿಸಿದ ಮೇಲೆ ಅದನ್ನು ಎಲ್ಲೆಂದರಲ್ಲಿ ಕೆಳಗೆ ಇಡುವಂತಿಲ್ಲ ಅದನ್ನು ಕೆಳಗಿಡಬೇಕೆಂದರೆ ಗುರುಸ್ವಾಮಿಯ ಸಹಾಯ ಪಡೆದು ನಿರ್ದಿಷ್ಠ ಜಾಗದಲ್ಲಿ ಇಳಿಸಬೇಕು ಸ್ವತಃ ತಾವೇ ಅದನ್ನು ಕೆಳಗಿಳಿಸುವಂತಿಲ್ಲ. ತಾನೇ ಗುರುಸ್ವಾಮಿಯಾಗಿದ್ದರೆ ಅಂದರೆ ಕನಿಷ್ಠ ಆರು ವರ್ಷ ಮಾಲೆ ಧರಿಸಿದ ಹಿರಿಯ ಸ್ವಾಮಿಯಾಗಿದ್ದರೆ ಅವನಿಗೆ ಸ್ವತಃ ಇರುಮುಡಿ ಇಳಿಸಿ ಹೊತ್ತು ಕೊಳ್ಳುವ ಅಧಿಕಾರವಿದೆ.

            ಈ ಇರುಮುಡಿಯನ್ನು ಏಕೆ ಕಟ್ಟಬೇಕೆಂದು ನಾವು ಪ್ರಶ್ನಿಸಿದಾಗ ಅದರ ಪೌರಾಣಿಕ ಹಿನ್ನಲೆಯನ್ನು ಹೀಗೆ ಹೇಳುತ್ತಾರೆ. ಅಯ್ಯಪ್ಪ ಸ್ವಾಮಿ ಹಿಂದೆ ಹುಲಿ ಭೇಟೆಗೆ ಹೋದಾಗ ಒಂದೇ ಬಟ್ಟೆಯಲ್ಲಿ ಒಂದು ಗಂಟಿನಲ್ಲಿ ಪೂಜೆಗೆ ಬೇಕಾಗುವ ಸಾಮಗ್ರಿಯನ್ನು ಮತ್ತೊಂದು ಗಂಟಿನಲ್ಲಿ ದಿನ ಬಳಕೆಯ ವಸ್ತುಗಳನ್ನು ಕಟ್ಟಿಕೊಂಡು ಹೋಗುತ್ತಿದ್ದನಂತೆ ಆದ್ದರಿಂದ ಅದರ ನೆನಪಿಗಾಗಿ ಈ ರೀತಿ ಇರುಮುಡಿ ಹೊತ್ತು ಸ್ವಾಮಿಯನ್ನು ನೆನಪಿಸಿಕೊಳ್ಳಬೇಕು ಎನ್ನುತ್ತಾರೆ. ಇದು ಪೌರಾಣಿಕ ಹಿನ್ನಲೆಯಾದರೆ ಅದನ್ನೇ ಸಾಮಾಜಿಕ ದೃಷ್ಟಿಕೋನದಿಂದ ನೋಡಿದಾಗ ಬೇರೆಯೇ ವಿಚಾರ ಹೊಳೆಯುತ್ತದೆ. ಇರುಮುಡಿಯಲ್ಲಿ ತಾಯಿ ಮತ್ತು ಬಂಧು ಬಳಗದವರು ಅಕ್ಕಿಯನ್ನು ಹಾಕುವುದರ ಉದ್ದೇಶ ತಮ್ಮ ಹೆಸರು ಹೇಳಿ ಅವನು ಎಲ್ಲಿಯಾದರೂ ಊಟ ಮಾಡಲಿ ಎಂಬುದೇ ಆಗಿತ್ತು. ಏಕೆಂದರೆ ಆಗಿನ ಕಾಲದಲ್ಲಿ ಯಾತ್ರೆಗೆ ಹೋದವರ ಸಮಾಚಾರ ತಿಳಿಯುತ್ತಿದ್ದದ್ದು ಅವರು ತಿರುಗಿ ಬಂದ ನಂತರವೇ ಮತ್ತು ದಾರಿಯಲ್ಲಿ ಕಾಡು ಪ್ರಾಣಿಗಳ ದೆಸೆಯಿಂದ ಸಾಯುವ ಪ್ರಸಂಗಗಳೂ ಅನೇಕವಿದ್ದವು. ಹೀಗಾಗಿ ಅವನಿಗೆ ಅಂತಿಮ ಋಣದ ರೂಪವಾಗಿ ಇದನ್ನು ಸಲ್ಲಿಸುತ್ತಿದ್ದರು ಎನಿಸುತ್ತದೆ.

      ಹೀಗೆ ಇರುಮುಡಿ ಹೊತ್ತ ಸ್ವಾಮಿಗಳು ಶರಣು ಘೋಷಗಳನ್ನು ಕೂಗುತ್ತಾ ಅಯ್ಯಪ್ಪನ ಯಾತ್ರೆ ಹೊರಡುತ್ತಾರೆ. ಅವರು ಪ್ರಪ್ರಥಮವಾಗಿ ಬಂದು ಮುಟ್ಟುವುದು ಎರುಮೇಲಿ ಎನ್ನುವ ಪ್ರದೇಶವನ್ನು. ಇಲ್ಲಿ ಮೊದಲು ವಾವರ ಸ್ವಾಮಿಯ ದರ್ಶನ ಮಾಡಿಕೊಂಡು ಒಂದು ಕಾಯಿಯನ್ನು ಒಡೆಯುತ್ತಾರೆ. ಈ ಹಂತದಲ್ಲಿ ಕಾಡು ಜನರ ವೇಷವನ್ನು ಹಾಕಿಕೊಂಡು "ಪೇಟತುಳ್ಳಿ" ಎನ್ನುವ ನೃತ್ಯ ಮಾಡಿಕೊಳ್ಳುತ್ತಾ ಸಾಗುತ್ತಾರೆ. ಈ ಸಮಯದಲ್ಲಿ ಕನ್ಯಾ ಸ್ವಾಮಿಯು ಒಂದು ಶರ (ಬಾಣ) ವನ್ನು ತೆಗೆದುಕೊಂಡು ಹೊರಟರೆ, ಉಳಿದವರು ಅವರ ಹೆಸರಿಗೆ ತಕ್ಕಂತೆ ಕತ್ತಿ, ಗದೆ, ಘಂಟೆಯನ್ನು ಧರಿಸಿ ವಾವರ ಸ್ವಾಮಿಯ ದರ್ಶನ ಮಾಡುತ್ತಾರೆ. ತದನಂತರ ನದಿಯಲ್ಲಿ ಸ್ನಾನ ಮಾಡಿ ಧರ್ಮಶಾಸ್ತನೆಂದು ಕರೆಯಲ್ಪಡುವ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿ ಮುಂದಿನ ಯಾತ್ರೆ ಕೈಗೊಳ್ಳುತ್ತಾರೆ. ಈ ಎರುಮೇಲಿಯನ್ನು ದಾಟಿ ಅವರು ಸೇರಿಕೊಳ್ಳುವ ಜಾಗವೇ ಕಾಳೇಕಟ್ಟಿ ಆಶ್ರಮ. ಇಲ್ಲಿ ಶಿವ-ಶಕ್ತಿಯರ ದರ್ಶನ ಮಾಡಿಕೊಂಡು ಅವರು ಅಳುದಾ ನದಿಯನ್ನು ದಾಟುತ್ತಾರೆ. ನದಿಯಲ್ಲಿ ಎರಡು ಕಲ್ಲುಗಳನ್ನು ಎತ್ತಿಕೊಂಡು ಅಳುದಾ ಕೊಂಡ/ಬೆಟ್ಟವನ್ನು ಏರುತ್ತಾರೆ. ಅಲ್ಲಿ ಮಹಿಷಿಯು ಸಮಾಧಿಯಾದ ಜಾಗದಲ್ಲಿ ತಾವು ನದಿಯಲ್ಲಿ ತಂದ ಕಲ್ಲುಗಳನ್ನಿರಿಸಿ ಹಿಂತಿರುಗಿ ನೋಡದೆ ಹಿಂದಿರುಗುತ್ತಾರೆ. ಮಹಿಷಿ ಸಮಾಧಿಯಾದ ಈ ಜಾಗವನ್ನು ಕಲಿಡಂಕುಂಡ್ರೆ ಎನ್ನುತ್ತಾರೆ. ತಮಿಳಿನಲ್ಲಿಯೂ ಕಲ್ಲು ಶಬ್ದ ಇರುವುದರಿಂದ ಕಲ್ಲನ್ನಿಡುವ ಸ್ಥಳಕ್ಕೆ ಈ ಹೆಸರು ಬಂದಿದೆ ಎಂದುಕೊಳ್ಳುತ್ತೇನೆ. ಅಳುದಾ ಬೆಟ್ಟ ದಾಟಿದ ನಂತರ ಇಂಜಿಪ್ಪಾರ್ ಕೋಟೆ ಎಂಬ ಜಾಗವನ್ನು ಸೇರಿಕೊಂಡು ಅದನ್ನು ದಾಟಿದ ನಂತರ ಕರಿಮಲೆಯ ಬುಡಕ್ಕೆ ಬರುತ್ತಾರೆ.  ಕರಿಮಲೆ ಪ್ರದೇಶದಲ್ಲಿ ಆನೆಗಳು ಹೆಚ್ಚು ತಿರುಗುವುದರಿಂದ ಆ ಹೆಸರು ಬಂದಿರಬಹುದೆಂದು ಕೆಲವರು ಅಭಿಪ್ರಾಯ ಪಟ್ಟರೆ ಇನ್ನೂ ಕೆಲವರು ಅಲ್ಲಿರುವ ಕಪ್ಪು ಮಣ್ಣಿನಿಂದ ಆ ಪ್ರದೇಶಕ್ಕೆ ಆ ಹೆಸರು ಬಂದಿದೆ ಎನ್ನುತ್ತಾರೆ. ಕರಿಮಲೆ ಬೆಟ್ಟವನ್ನು ಹತ್ತುವುದು ಒಂದು ಸವಾಲೇ ಸರಿ; ಈ ಬೆಟ್ಟವನ್ನು ಹತ್ತುವಾಗ ಅಯ್ಯಪ್ಪನ ದರ್ಶನವಾಗುತ್ತದೆಂದು ಭಕ್ತರು ತಮ್ಮೊಳಗೆ ಹೇಳಿಕೊಳ್ಳುವ ತಮಾಷೆಯ ಮಾತು. ಈ ಬೆಟ್ಟವನ್ನು ಹತ್ತುವುದಕ್ಕಿಂತ ಅದನ್ನು ಇಳಿಯುವುದು ಅಯ್ಯಪ್ಪನ ಭಕ್ತರಿಗೆ ಒದಗುವ ಮತ್ತೊಂದು ಪರೀಕ್ಷೆ. ಇದನ್ನು ದಾಟಿದ ನಂತರ "ಚೆರಿಯಾನ ವಟ್ಟಮ್" ಮತ್ತು "ಪೆರಿಯಾನ ವಟ್ಟಮ್" ಎನ್ನುವ ಸ್ಥಳಗಳಿಗೆ ಸೇರುತ್ತೇವೆ. ಚೆರಿಯಾನ ವಟ್ಟಮ್ ಎನ್ನುವುದು ಬಹುಶಃ ಪ್ರಯಾಣ ಘಟ್ಟದ ಅಪಭ್ರಂಶವಿರ ಬಹುದು. ಏಕೆಂದರೆ ಪ್ರಯಾಣವು ಒಂದು ಹಂತವನ್ನು ತಲುಪುವುದು ಇಲ್ಲಿಯೇ. ಈ ಜಾಗದಲ್ಲಿಯೇ ಅಯ್ಯಪ್ಪ ಸ್ವಾಮಿಯ ತಿರುವಾಭರಣಗಳನ್ನು ಅವನ ಸ್ವಂತ ಊರಾದ "ಪಂದಳಮ್"ನಿಂದ ಭೋವಿಗಳು ಹೊತ್ತು ತಂದು ಈ ಮೂಲಕ ಶಬರಿಮಲೆಗೆ ಸಾಗುತ್ತಾರೆ. ನಾವು ಸಂಕ್ರಾಂತಿಯ ದಿವಸ ಇಲ್ಲಿದ್ದರೆ ಆ ಪೆಟ್ಟಿಗೆಯನ್ನು ಮುಟ್ಟುವ ಸೌಭಾಗ್ಯ ನಮಗೆ ದೊರೆಯುತ್ತದೆ.

            ಮುಂದಿನದೆ "ಪೆರಿಯಾನ ವಟ್ಟಮ್" ಇಲ್ಲಿ ದೊಡ್ಡ ಅನ್ನ ಸಂತರ್ಪಣೆಯ ಕಾರ್ಯಕ್ರಮ ನಡೆಯುತ್ತದೆ; ಆದ್ದರಿಂದ ಪೆರಿಯಾನ್ನ ಘಟ್ಟಮ್ ಎನ್ನುವುದರ ಅಪಭ್ರಂಶವೆಂದುಕೊಳ್ಳುತ್ತೇನೆ. ಇದು ಪಂಪಾ ನದಿಯ ದಂಡೆಯ ಮೇಲಿದೆ. ಮಾಮೂಲಿಯಾಗಿ ಇಲ್ಲಿ ರಾತ್ರಿ ಹೊತ್ತು ತಂಗಿ ಅಡಿಗೆ ಮಾಡಿಕೊಂಡು ಮರುದಿನ ಬೆಳಿಗ್ಗೆ ಪಂಪಾ ನದಿಯಲ್ಲಿ ಸ್ನಾನ ಮಾಡಿಕೊಂಡು ಅಯ್ಯಪ್ಪನ ಸನ್ನಿಧಾನವನ್ನು ಸೇರುವ ನೀಲಿಮಲೈಯನ್ನು ಏರುವ ಪರಿಪಾಠವಿದೆ. ಕನ್ಯಾಸ್ವಾಮಿಯಾದವನು ಈ ಪಂಪಾ ನದಿಯ ದಂಡೆಯಲ್ಲಿ ೧೦೮ ಒಲೆಗಳಿಂದ ಬೂಧಿಯನ್ನು ಸಂಗ್ರಹಿಸಿ ನದಿಯಲ್ಲಿ ಬಿಡಬೇಕೆಂಬ ನಿಯಮವಿದೆ. ಈ ಪಂಪಾ ನದಿಯನ್ನು ದಾಟಿದ ನಂತರ ನಾವು ಸೇರಿಕೊಳ್ಳುವುದು ಕನ್ನಮೂಲ ಗಣಪತಿಯ ಸನ್ನಿಧಾನಕ್ಕೆ . ಇಲ್ಲಿ ಮತ್ತೊಂದು ತೆಂಗಿನ ಕಾಯಿಯನ್ನು ಒಡೆದು ತಮ್ಮ ಯಾತ್ರೆ ನಿರ್ವಿಘ್ನವಾಗಿ ಸಾಗಲೆಂದು ಗಣಪತಿಯನ್ನು ಪ್ರಾರ್ಥಿಸುವ ಪದ್ದತಿಯಿದೆ. ಇಲ್ಲಿಯೇ ಸುಬ್ರಹ್ಮಣ್ಯ ಮತ್ತು ಆಂಜನೇಯ ಸ್ವಾಮಿಯ ಗುಡಿಗಳಿರುವುದು. ಈ ಕನ್ನ ಮೂಲ ಗಣಪತಿ ಇರುವ ಬೆಟ್ಟವೆ ನೀಲಿಮಲ, ಇದು ಕೂಡ ಬಹಳ ಕಠಿಣತೆಯಿಂದ ಕೂಡಿದೆ. ಅಡವಿಯಲ್ಲಿ ಸಾಗಿ ಬಂದವರು ಬಸ್ಸಿನಲ್ಲಿ ಸಾಗಿ ಬಂದವರು ಜೊತೆಯಾಗುವುದು ಇಲ್ಲಿಯೇ ಈ ಪಂಪಾ ನದಿಯ ಬುಡದಲ್ಲಿಯೇ. ಈ ಬೆಟ್ಟವನ್ನು ಹತ್ತಿ ಹೋಗಲು ಯಾವುದೇ ವಾಹನಗಳ ಸೌಕರ್ಯವಿಲ್ಲ. ಅಶಕ್ತರು ಬೇಕಾದರೆ ಮೇನೆ/ಡೋಲಿಯಲ್ಲಿ ಕುಳಿತು ಹೋಗಬಹುದು. ಇದು ಸುಮಾರು ಏಳು ಕಿಲೋಮೀಟರ್ ಇರುತ್ತದೆ. ಈ ಬೆಟ್ಟವನ್ನು ಏರಿದ ಮೇಲೆ ನಮಗೆ ಸಿಗುವುದು ಶಬರಿ ಪೀಠಮ್. ಇದಾದ ನಂತರ ನಾವು ಸೇರುವುದು ಶರಂಗುತ್ತಿ. ಇಲ್ಲಿ ಕನ್ಯೆ ಸ್ವಾಮಿಗಳು ತಾವು ಎರುಮೇಲಿಯಿಂದ ಹೊತ್ತು ತಂದ ಶರಗಳನ್ನು ಇಲ್ಲಿ ಸಿಕ್ಕಿಸುತ್ತಾರೆ. ಇದಾದ ನಂತರ ಭಕ್ತರು ಹದಿನೆಂಟು ಮೆಟ್ಟಿಲುಗಳುಳ್ಳ ಅಯ್ಯಪ್ಪನ ಗುಡಿಗೆ ನೇರವಾಗಿ ಸೇರುವ ಸ್ಥಳಕ್ಕೆ ಬಂದು ಮುಟ್ಟುವರು. ಈ ಹದಿನೆಂಟು ಮೆಟ್ಟಿಲುಗಳನ್ನು ಪಡಿಯೆಂದೂ ಕರೆಯುತ್ತಾರೆ; ಇವು ಬಹಳ ಚಿಕ್ಕದಾಗಿ ಮತ್ತು ಕಡಿದಾಗಿಯೂ ಇರುತ್ತವೆ. ಅಯ್ಯಪ್ಪನ ಮಾಲೆ ಧರಿಸಿದ ಭಕ್ತರು ಮಾತ್ರ ಈ ಮೆಟ್ಟಿಲುಗಳ ಮೂಲಕ ಅಯ್ಯಪ್ಪನ ದರ್ಶನಕ್ಕೆ ಹೋಗುವ ಅರ್ಹತೆಯನ್ನು ಗಳಿಸಿಕೊಳ್ಳುತ್ತಾರೆ. ಉಳಿದವರು ದೇವಸ್ಥಾನದ ಪಕ್ಕದಲ್ಲಿರುವು ಇನ್ನೊಂದು ಪಾವಟಿಗೆಗಳ ಮೂಲಕ ಸಾಗಬೇಕು. ಈ ಹದಿನೆಂಟು ಮೆಟ್ಟಿಲುಗಳು ಮತ್ತು ಅಯ್ಯಪ್ಪನ ಗುಡಿ (ಸನ್ನಿಧಾನ) ಇರುವ ಸ್ಥಳವೇ ಶಬರಿಮಲೆ.

            ಹೀಗೆ ಒಮ್ಮೆ ಇರುಮುಡಿ ಹೊತ್ತುಕೊಂಡು ಅಯ್ಯಪ್ಪನ ದರ್ಶನ ಕೈಗೊಂಡ ನಂತರ ಮಾಲಿಕಾಪುರಮ್ಮನ ದರ್ಶನ ಮಾಡಬೇಕು. ಈ ಸ್ಥಳದಲ್ಲಿ ಇರುಮುಡಿಯನ್ನು ಬಿಚ್ಚಿ ತೆಂಗಿನಕಾಯಿಯಿಂದ ತುಪ್ಪವನ್ನು ತೆಗೆದು ಬೇರೆ ಪಾತ್ರೆಯಲ್ಲಿ ಹಾಕುತ್ತಾರೆ ಮತ್ತು ಅಕ್ಕಿಯನ್ನು ಹಾಗು ಪುಜಾ ಸಾಮಗ್ರಿ ಮತ್ತು ರವಿಕೆ ಬಟ್ಟೆಯನ್ನು ಹೊರತೆಗೆಯುತ್ತಾರೆ. ತುಪ್ಪ ಬೇರ್ಪಡಿಸಿದ ಕಾಯಿಯನ್ನು ಅಯ್ಯಪ್ಪನ ದೇವಸ್ಥಾನದ ಮುಂದೆ ಮೆಟ್ಟಿಲ ಬಳಿ ಇರುವ ಕಡುತ್ತ ಸ್ವಾಮಿ ಮತ್ತು ಕರುತ್ತ ಸ್ವಾಮಿಗಳ ಗುಡಿಯ ಹತ್ತಿರ ಇರುವ ಅಗ್ನಿಕುಂಡದಲ್ಲಿ ಹಾಕಬೇಕು. ಪ್ರತ್ಯೇಕವಾಗಿ ತಂದ ಮೂರನೆಯ ಕಾಯಿಯನ್ನು  ಮಾಲಿಕಾಪುರಮ್ಮನ ಗುಡಿಯ ಸುತ್ತಲೂ ಉರುಳಿಸಿಕೊಂಡು ಹೋಗುತ್ತಾ ಕಡೆಯಲ್ಲಿ ಅದನ್ನು ಒಡೆಯುವ ಪದ್ದತಿಯಿದೆ. ಇಲ್ಲಿ ರವಿಕೆ ಬಟ್ಟೆಗಳನ್ನು ಅಮ್ಮನವರ ಹತ್ತಿರ ಇಟ್ಟು ಪೂಜೆ ಮಾಡಿಸುತ್ತಾರೆ. ತುಪ್ಪವನ್ನು ಅಯ್ಯಪ್ಪನ ಅಭಿಷೇಕಕ್ಕೆಂದು ಪ್ರತ್ಯೇಕ ಕ್ಯೂನಲ್ಲಿ ಒಯ್ದು ಮಾಡಿಸಿಕೊಂಡು ಬರಬೇಕು. ನಾವು ತಂದ ಅಕ್ಕಿಯನ್ನು ದೇವಸ್ಥಾನದವರು ಅದಕ್ಕಾಗಿಯೇ ಇಟ್ಟಿರುವ ಹುಂಡಿಯಲ್ಲಿ ಹಾಕಬೇಕು. ಇದಾದ ನಂತರ ಪುನಃ ಅಯ್ಯಪ್ಪನ ದರ್ಶನ ಮಾಡಿಕೊಂಡು ಜ್ಯೋತಿ ದರ್ಶನಕ್ಕಾಗಿ ಕಾಯುತ್ತಾರೆ. ಅಯ್ಯಪ್ಪನ ಗುಡಿಯ ದ್ವಾರದಲ್ಲಿರುವ "ತತ್ಮಮಸಿ" ಎಂಬ ಘೋಷವಾಕ್ಯವನ್ನು ಈ ಸಮಯದಲ್ಲಿ ಎಲ್ಲರೂ ಗಮನಿಸ ಬೇಕು. ಈ ವಾಕ್ಯವನ್ನು ಸ್ವಾಮಿ ಚಿನ್ಮಯಾನಂದರು ಸೂಚಿಸಿರುವರಂತೆ; ಇದರ ಬಗ್ಗೆ ಮುಂದೆ ನೋಡೋಣ.

        ಅಯ್ಯಪ್ಪನ ಜ್ಯೋತಿಯು ನಿಮಗೆ ಅಯ್ಯಪ್ಪನ ಗುಡಿಗೆ ಎದುರಾಗಿ ಇರುವ "ಜ್ಯೋತಿ ಮಲೆ" ಅಥವಾ "ಕಾಂತಿ ಮಲೆ" ಯಲ್ಲಿ ಕಾಣಿಸುತ್ತದೆ. ಇದು ನಿಖರವಾಗಿ ಜನವರಿ ೧೪ ಅಥವಾ ೧೫ ಮಕರ ಸಂಕ್ರಾಂತಿಯ ದಿನ ಸೂರ್ಯಾಸ್ತವಾದ ಮೇಲೆ ಕಾಣಿಸುತ್ತದೆ. ಇದಕ್ಕೂ ಮುಂಚೆ ತಿರುವಾಭರಣಗಳಿಂದ ಅಯ್ಯಪ್ಪ ಸ್ವಾಮಿಯನ್ನು ಅಲಂಕರಿಸುತ್ತಾರೆ. ಈ ಆಭರಣ ಪೆಟ್ಟಿಗೆಗಳನ್ನು ಭೋವಿಗಳು ಸನ್ನಿಧಾನಕ್ಕೆ ಹೊತ್ತು ತರಬೇಕಾದರೆ ಅದನ್ನು ಕಾಯಲು ಒಂದು ಗರುಡ ಪಕ್ಷಿ ಆಕಾಶದಲ್ಲಿ ಹಾರಾಡುತ್ತಾ ಬರುತ್ತದೆ. ಪೆಟ್ಟಿಗೆಗಳು ಗುಡಿಗೆ ಸೇರುವ ಹೊತ್ತಿಗೆ ಗುಡಿಯನ್ನು ಮೂರು ಸುತ್ತು ಸುತ್ತಿ ಆ ಗರುಡ ಪಕ್ಷಿ ಮಾಯವಾಗುತ್ತದೆ. ಇದು ಸ್ವಯಂ ವಿಷ್ಣುವಿನ ವಾಹನವಾದ ಗರುಡವೇ ಅಯ್ಯಪ್ಪ ಸ್ವಾಮಿಯ ಆಭರಣಗಳನ್ನು ಕಾಯುತ್ತದೆ ಎನ್ನುವುದು ಭಕ್ತರ ನಂಬಿಕೆ. ಅಯ್ಯಪ್ಪನ ಜ್ಯೋತಿ ನಮಗೆ ಕಾಣಿಸುವ ಪ್ರದೇಶ/ಬೆಟ್ಟದ ಮೇಲೆ ಆಕಾಶದಲ್ಲಿ ದಿವ್ಯ ನಕ್ಷತ್ರವೊಂದು ಕಾಣಿಸಿಕೊಂಡು ಜ್ಯೋತಿ ಕಂಡು ಬರುವ ಜಾಗವನ್ನು ಸಾಂಕೇತಿಕವಾಗಿ ತೋರಿಸುತ್ತದೆ. ಆ ನಕ್ಷತ್ರ ಕಾಣಿಸಿಕೊಂಡ ಕೆಲವು ಕ್ಷಣಗಳಲ್ಲಿ ನಮಗೆ ದಿವ್ಯ ಜ್ಯೋತಿಯ ದರ್ಶನವಾಗುತ್ತದೆ. ಸಾಮಾನ್ಯವಾಗಿ ಜ್ಯೋತಿ ಮೂರು ಸಲ ಕಾಣಿಸುಕೊಳ್ಳುತ್ತದೆ. ಈ ರೀತಿ ಜ್ಯೋತಿ ದರ್ಶನವಾದ ನಂತರ ದೀಕ್ಷೆಯ ಮಹತ್ವದ ಘಟ್ಟವು ಮುಗಿಯುತ್ತದೆ. ಜ್ಯೋತಿ ದರ್ಶನದ ನಂತರ ಸರ್ವಾಭರಣದಿಂದಾಲಂಕೃತನಾದ ಅಯ್ಯಪ್ಪನ ದರ್ಶನವನ್ನು ಪುನಃ ಮಾಡುವ ಪದ್ದತಿಯಿದೆ. ಹೀಗೆ ದರ್ಶನ ಮುಗಿದ ನಂತರ ಪ್ರತ್ಯೇಕವಾಗಿ ತಂದ ನಾಲ್ಕನೆಯ ಕಾಯಿಯನ್ನು ಗುಡಿಯ ಮೆಟ್ಟಿಲುಗಳ ಬಳಿ ಒಡೆದು ಮುಂದಿನ ಸಾರಿ ಬರುವವರೆಗೂ ತಮ್ಮನ್ನು ಕಾಪಾಡುವಂತೆ ಅಯ್ಯಪ್ಪ ಸ್ವಾಮಿಯಲ್ಲಿ ಬೇಡಿಕೊಂಡು ಒಡೆಯುವ ಪದ್ದತಿಯಿದೆ. ಹೀಗೆ ದರ್ಶನವಾದ ನಂತರ ಭಕ್ತರು ತಮ್ಮ ತಮ್ಮ ಮನೆಗಳಿಗೆ ಹಿಂತಿರುಗಿ ಪುನಃ ಗುರುಮುಖೇನ ಮಾಲೆಯನ್ನು ವಿಸರ್ಜಿಸುವ ಮೂಲಕ ತಮ್ಮ ದೀಕ್ಷೆಯನ್ನು ಪೂರ್ಣಗೊಳಿಸುತ್ತಾರೆ.

                                                                                                                                        ಮುಂದುವರೆಯುವುದು.....

-------------------------------------------------------------------------------------------------------------------------------------------------

ವಿ.ಸೂ.: ಈ ಲೇಖನ ಮಾಲೆಯನ್ನು ಒಂದೇ ಕಂತಿನಲ್ಲಿ ಕೊಡೋಣವೆಂದಿದ್ದೆ; ಆದರೆ ಲೇಖನ ಬಹಳ ದೀರ್ಘವೆನಿಸಿದ್ದರಿಂದ ಅದನ್ನು ಐದು ಭಾಗಗಳಾಗಿ ವಿಭಜಿಸಿ ಪ್ರತ್ಯೇಕ ಶೀರ್ಷಿಕೆಗಳನ್ನು ಕೊಟ್ಟಿದ್ದೇನೆ. ಅವುಗಳು ಈ ರೀತಿ ಇವೆ:
    
ಶಬರಿಮಲೆ ಯಾತ್ರೆ ಅಥವಾ ಅಯ್ಯಪ್ಪ ಸ್ವಾಮಿಯ ವ್ರತದ ಹಿನ್ನಲೆ: ಒಂದು ಚಿಂತನೆ  (ಭಾಗ - ೧) http://sampada.net/%E0%B2%B6%E0%B2%AC%E0%B2%B0%E0%B2%BF%E0%B2%AE%E0%B2%B...
ಭಾಗ - ೨: ಅಯ್ಯಪ್ಪ ಸ್ವಾಮಿಯ ದೀಕ್ಷೆ ಅಥವಾ ಮಾಲಾ ಧಾರಣೆ ಮತ್ತು ಯಾತ್ರೆ
ಭಾಗ - ೩: ಅಯ್ಯಪ್ಪ ಸ್ವಾಮಿಯ ದೀಕ್ಷೆಯ ಚಾರಿತ್ರಿಕ ಹಿನ್ನಲೆ http://sampada.net/%E0%B2%AD%E0%B2%BE%E0%B2%97-%E0%B3%A9-%E0%B2%85%E0%B2...

ಭಾಗ - ೪: ಅಯ್ಯಪ್ಪ ಮತ್ತು ಅಯ್ಯಪ್ಪ ದೀಕ್ಷೆಯ ವಿಶೇಷಗಳು http://sampada.net/%E0%B2%AD%E0%B2%BE%E0%B2%97-%E0%B3%AA-%E0%B2%85%E0%B2...

ಭಾಗ - ೫: ಅಯ್ಯಪ್ಪ ದೀಕ್ಷೆಯ ನಿಜವಾದ ಅರ್ಥ http://sampada.net/%E0%B2%AD%E0%B2%BE%E0%B2%97-%E0%B3%AB-%E0%B2%85%E0%B2...

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):