ಭೂತದ ಕೋಳಿ (ಕಥಾ ಸಂಕಲನ)

“ಭೂತದ ಕೋಳಿ” ಕಥಾ ಸಂಕಲನದ ಲೇಖಕರಾದ ರಾಘವೇಂದ್ರ ಬಿ. ರಾವ್ ಅವರು “ಅನು ಬೆಳ್ಳೆ” ಎಂದೇ ಪರಿಚಿತರು. ಕಾರ್ಕಳ ತಾಲೂಕಿನ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರು. ಇವರ ಸಣ್ಣ ಕತೆಗಳು ಉದಯವಾಣಿ, ಪ್ರಜಾವಾಣಿ, ಕನ್ನಡ ಪ್ರಭ, ಸುಧಾ, ತರಂಗ, ಮಯೂರ, ತುಷಾರ ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಹನ್ನೆರಡು ಸಣ್ಣ ಕಥೆಗಳಿರುವ ಈ ಸಂಕಲನ “ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ” ಪಡೆದಿದೆ. ಅನು ಬೆಳ್ಳೆ ಅವರಿಗೆ ಪಾತ್ರಗಳು ಮತ್ತು ಸಂದರ್ಭ ಸೃಷ್ಟಿಯ ಕಲೆ ಸಿದ್ಧಿಸಿದೆ. ಇಲ್ಲಿನ ಕತೆಗಳ ವಿವಿಧ ಪಾತ್ರಗಳು ಮನುಷ್ಯರ ವರ್ತನೆಗಳನ್ನು ಅರ್ಥ ಮಾಡಿಕೊಳ್ಳಲು ಸಹಕರಿಸುತ್ತವೆ. ಇವು ವಾಸ್ತವದ ನೆಲೆಗಟ್ಟಿನಲ್ಲಿ ಬರೆದ ಕತೆಗಳಾದ ಕಾರಣ ಓದುಗರ ಮನಸ್ಸನ್ನು ತಟ್ಟುತ್ತವೆ.
ಮೊದಲ ಕತೆ “ಗೋಲಿ ಸೋಡಾ”ದ ಸುಬ್ರಾಯಜ್ಜಿ ಕಳೆದ ಶತಮಾನದ ಕೊಂಡಿಯಂತೆ ಕಾಣಿಸುತ್ತಾರೆ. ಅವರ ಬಾಲ್ಯ ಕಾಲದಲ್ಲಿ ಸುಲಭವಾಗಿ ಸಿಗುತ್ತಿದ್ದ ಗೋಲಿ ಸೋಡಾ ಈಗಲೂ ಸಿಗುತ್ತದೆ ಎಂಬುದು ಅವರ ನಂಬಿಕೆ. ಅದೀಗ ಸಿಗುವುದಿಲ್ಲ ಎಂದು ಮಗ ಮತ್ತು ಮೊಮ್ಮಗ ಎಷ್ಟು ತಿಳಿಸಿ ಹೇಳಿದರೂ ಅವರು ನಂಬಲೊಲ್ಲರು. ತನ್ನ ಕಾಲದಲ್ಲಿ ಅಜೀರ್ಣದ ಸಮಸ್ಯೆಗಳ ಪರಿಹಾರಕ್ಕೆ ಒಂದು ಗೋಲಿ ಸೋಡಾ ಕುಡಿದರೆ ಸರಿ ಹೋಗುತ್ತಿತ್ತು; ಈಗ ಮಾತ್ರೆ ನುಂಗಬೇಕು ಎಂಬುದೇ ಅವರ ಸಂಕಟ.
ಎರಡನೇ ಕತೆ “ಶಾಪ”ದಲ್ಲಿ ಗಂಡುಮಕ್ಕಳು ಬೇಕೆಂದು ಹಂಬಲಿಸುವ ಈಗಿನ ಕಾಲದಲ್ಲೂ ಹೆಣ್ಣು ಮಗು ಬೇಕೆಂದು ಕಾತರಿಸುವ ವನಜಾಕ್ಷಿಯ ಭಾವನೆಗಳು ಮೂಡಿ ಬಂದಿವೆ.
ಮೂರನೆಯ ಕತೆ “ಪಾತಕ್ಕ ಮತ್ತು ಮಂಡೆಕಾಗೆ”. ಪಾತಕ್ಕ ಎಂಬ ಅಜ್ಜಿಯ ಜೊತೆ ಕಾಗೆಯೊಂದರ ಸಂಬಂಧವನ್ನು ಈ ಕತೆ ಮನೋಜ್ಞವಾಗಿ ಚಿತ್ರಿಸುತ್ತದೆ. ದಿನದಿನವೂ ಪಾತಕ್ಕ ಪಾತ್ರೆ ತೊಳೆಯಲು ಬಾವಿಕಟ್ಟೆಯ ಬಳಿ ಬಂದಾಗ, ಆ ಪಾತ್ರೆಗಳ ತಳದಲ್ಲಿ ಉಳಿದಿರುವ ಆಹಾರದ ತುಣುಕಿಗಾಗಿ ಅದು ಹಾಜರು. ಅದು ಮಾಡುವ ಅನಾಹುತಗಳು ಒಂದೆರಡಲ್ಲ.
ಪಾಂಡ್ಯ ಗಟ್ಟಿಮುಟ್ಟಾದ ಆಳು. ಸೈಕಲಿನಲ್ಲಿ ಸರ್ಕಸ್ ಮಾಡುವ, ಆ ಮೂಲಕ ಹಣ ಗಳಿಸುವುದು ಅವನ ಗೀಳು, ಇದಕ್ಕೆ ಕಾರಣವಾದ ಅವನ ಬಡತನದ ಬದುಕಿನ ವಿವರ ನೀಡುವ ನಾಲ್ಕನೆಯ ಕತೆ “ಸಾಹಸ”. ಕೊನೆಗೆ ವಿವೇಕರಹಿತನಾಗಿ ಹುಚ್ಚು ಸಾಹಸಕ್ಕೆ ಕೈಹಾಕಿದ ಅವನ ದುರಂತದ ಸಮರ್ಥ ಚಿತ್ರಣ ಇಲ್ಲಿದೆ.
ಐದನೆಯ ಕತೆ “ಐಸ್ ಕ್ಯಾಂಡಿ”. ಅಪ್ಪ ರಾಮಚಂದ್ರನಿಗೆ ತನ್ನ ಬಾಲ್ಯದಲ್ಲಿ ಸವಿಯುತ್ತಿದ್ದ ಬಣ್ಣಬಣ್ಣದ ಐಸ್ ಕ್ಯಾಂಡಿಯ ಗುಂಗು. ಆದರೆ ಮಗನಿಗೆ ಅಪ್ಪ ಬೆಲ್ಲದ ಐಸ್ ಕ್ಯಾಂಡಿ ಕೊಟ್ಟಾಗ ಅವನ ಉದ್ಗಾರ “ವ್ಯಾಕ್…ಗಲೀಜು ಬಣ್ಣ… ಕೆಸರು ನೀರು ಇದ್ದ ಹಾಗಿದೆ”. ಕಾಲ ಹೇಗೆ ಬದಲಾಗುತ್ತದೆ ಎಂಬುದರ ಸೂಕ್ಷ್ಮ ಚಿತ್ರಣ ಇಲ್ಲಿದೆ.
ಗ್ರಾಮ ಮಟ್ಟದಿಂದ ಶುರು ಮಾಡಿ ರಾಷ್ಟ್ರ ಮಟ್ಟದ ವರೆಗೂ ಸರಕಾರದ ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರ ಹೇಗೆ ಬೇರು ಬಿಟ್ಟಿದೆ ಎಂಬುದರ ಸುತ್ತ ಹೆಣೆದಿರುವ ಕತೆ “ಹೆಳವನ ಹಾದಿಯಲಿ”.
ಮುಂದಿನ ಕತೆ “ಸೆಕೆಂಡ್ ಹ್ಯಾಂಡ್”. ಹಳೆಯ ಮಿಕ್ಸಿಯಿಂದ ಶುರುವಿಟ್ಟು ಕಾರುಗಳ ವರೆಗೆ ವಸ್ತುಗಳ ವಿಲೇವಾರಿಯಲ್ಲಿ ಪಳಗಿರುವ ಸೆಕೆಂಡ್ ಹ್ಯಾಂಡ್ ಬಾಬಣ್ಣನ ಚಾಕಚಕ್ಯತೆಯ ಪರಿಚಯ ಮಾಡಿಸುವ ಕತೆ. ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವ ಯೋಚನೆಯಲ್ಲಿದ್ದ ಬ್ಯಾಂಕ್ ಕ್ಲಾರ್ಕ್ ಒಬ್ಬ ಕೊನೆಗೂ ಬಾಬಣ್ಣನ ಬಲೆಗೆ ಬೀಳುತ್ತಾನೆ.
“ಹಳದಿ ಗೋಡೆ ಮತ್ತು ಅವನು” ಕತೆಯಲ್ಲಿ ಮುಖ್ಯ ಪಾತ್ರಧಾರಿಗಳು ಒಂದು ಕಚೇರಿಯ ಹಿರಿಯ ಉದ್ಯೋಗಿ (ಅವನು) ಮತ್ತು ಅವನ ಹಿಂದೆಯೇ ಕುಳಿತಿರುವ ಕಿರಿಯ ಉದ್ಯೋಗಿ (ಅವಳು). ಇವರಿಬ್ಬರ ನಡುವಣ ಸಂಬಂಧವನ್ನು “ಹಳದಿ” ಬಣ್ಣದ ರೂಪಕದ ಮೂಲಕ ಪರಿಣಾಮಕಾರಿಯಾಗಿ ಬಿಂಬಿಸಲಾಗಿದೆ.
ನಂತರದ ಕತೆ “ಭೂತದ ಕೋಳಿ”. ದೈವ ಅಥವಾ ಭೂತ ಎಂದಾಗ ಕರಾವಳಿಯ ಬಹುಪಾಲು ಜನರಿಗರ ಅವ್ಯಕ್ತ ಭಯ. ಭಟ್ಟರ ಹೊಲದ ಭತ್ತದ ಪೈರನ್ನು ಪಕ್ಕದ ಮನೆಯವಳ ಕೋಳಿಗಳು ಬಂದುಬಂದು ತಿನ್ನುತ್ತಿದ್ದವು. ಭಟ್ಟರು ಮತ್ತೆಮತ್ತೆ ತಮಗಾಗುವ ನಷ್ಟದ ಬಗ್ಗೆ ಹೇಳಿಕೊಂಡ ನಂತರ ನಾಲ್ಕು ಕೋಳಿಗಳ ಹೊರತಾಗಿ ಉಳಿದವನ್ನು ಆಕೆ ಮಾರುತ್ತಾಳೆ. ಈ ನಾಲ್ಕು ಕೋಳಿಗಳನ್ನು “ಭೂತಕ್ಕೆ ಬಿಟ್ಟಿದ್ದೇನೆ” ಎನ್ನುತ್ತಾಳೆ. ಭಯಭಕ್ತಿ ತುಂಬಿದ ಭಟ್ಟರು ಅನಂತರ ಆ ಕೋಳಿಗಳ ತಂಟೆಗೆ ಹೋಗೋದಿಲ್ಲ. ಕೊನೆಗೆ, ಅದಕ್ಕಾಗಿಯೇ ಆಕೆ ಆ ಸುಳ್ಳು ಹೇಳಿದ್ದಳು ಎಂದು ಅರಿವಾದಾಗ ಅವಾಕ್ಕಾಗುತ್ತಾರೆ.
“ಡೋಲು” ಕತೆಯ ಕಥಾನಾಯಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಹೆಣಗುವ ಒಬ್ಬ ಶಿಕ್ಷಕ. ಆದರೆ ಅವನಿಗಾಗದ ಕೆಲವರು ಮಸಲತ್ತು ಮಾಡಿ ಆತ ಊರು ಬಿಟ್ಟು ಹೋಗುವಂತೆ ಮಾಡುತ್ತಾರೆ. ಯಾರೋ ಸತ್ತಾಗ ಡಂಗುರ ಸಾರಲು ಬಾರಿಸುವ ಡೋಲನ್ನು ಈ ಸಂದರ್ಭದಲ್ಲಿಯೂ ಬಾರಿಸುವುದು ಇಲ್ಲಿ ಸಾಂಕೇತಿಕವಾಗಿ ಮೂಡಿ ಬಂದಿದೆ.
“ಒಂದು ದಳ ಶ್ರೀ ತುಳಸಿ” ಈ ಸಂಕಲನದ 11ನೇ ಕತೆ. ಕಥಾನಾಯಕ ಹೃದಯಾಘಾತದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾದ, ತನಗೆ ಅಪರಿಚಿತಳಲ್ಲದ ವೃದ್ಧೆಗೆ ಮಾನವೀಯತೆಯ ನೆಲೆಯಲ್ಲಿ ಮನೆಯಿಂದ ಹಲವು ದಿನ ಅನ್ನಾಹಾರ ತಂದಿತ್ತು ಉಪಚರಿಸುತ್ತಾನೆ. ಅವಳ ಮೂವರು ಮಕ್ಕಳಲ್ಲಿ ಒಬ್ಬರೂ ತಾಯಿಯ ಆರೈಕೆಗಾಗಿ ಬರುವುದೇ ಇಲ್ಲ. ಆದರೆ ಕೊನೆಗೆ ಅವರು ಒಬ್ಬರಿಗೂ ಕೃತಜ್ಞತೆಯ ಲವಲೇಶವೂ ಇರೋದಿಲ್ಲ. ಮಾನವೀಯತೆ, ಮಾನವ ಸಂಬಂಧಗಳಂತಹ ಮೌಲ್ಯಗಳು ಈಗಿನ ಕಾಲದಲ್ಲಿ ಹೇಗೆ ಮಾಯವಾಗುತ್ತಿವೆ ಎಂಬುದನ್ನು ಕಣ್ಣಿಗೆ ಕಟ್ಟುವಂತೆ ತಿಳಿಸುವ ಕತೆ ಇದು.
ಕೊನೆಯ ಕತೆ “ಋಣ”. ಕಷ್ಟಜೀವಿ ಸಾವಿತ್ರಿಗೆ ಮನೆಯ ಹತ್ತಿರ ಕೆಲವು ತೆಂಗಿನ ಸಸಿ ಮತ್ತು ಅಡಿಕೆ ಸಸಿಗಳನ್ನು ನೆಟ್ಟು ಬೆಳೆಸಿ, ಹೇಗಾದರೂ ಬದುಕು ಕಟ್ಟಿಕೊಳ್ಳುವ ಹಂಬಲ. ಆದರೆ ಅಕ್ಕಪಕ್ಕದವರಿಗೆ ಇವರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಮಳೆಗಾಲದಲ್ಲಿ ಧಾರಾಕಾರ ಮಳೆಯಿಂದಾಗಿ ಇವರ ತೋಟದಲ್ಲಿ ನೀರು ನಿಲ್ಲಲು ಅವರೇ ಕಾರಣ. ಇಂತಹ ಸನ್ನಿವೇಶದಲ್ಲಿಯೂ ಗಟ್ಟಿಗಿತ್ತಿ ಸಾವಿತ್ರಿ ಮಾನವೀಯತೆ ಮೆರೆಯುವ ಘಟನೆಯೊಂದಿಗೆ ಈ ಕತೆ ಮುಕ್ತಾಯ.