ಮದರ್ ತೇರೇಸಾರ ಪತ್ರಕ್ಕೆ ಪ್ರತಿಕ್ರಿಯೆ

4.6


ಮದರ್ ತೇರೇಸಾಗೆ ನೋಬೆಲ್ ಪ್ರಶಸ್ತಿ ಬಂದಾಗ ಓಷೋ ರಜನೀಶರು ತೇರೇಸಾರ ಸೇವೆಯ ಹಿಂದಿನ ಹುನ್ನಾರಗಳನ್ನು ಬಯಲಿಗೆಳೆದು ಆಕೆಯ ಸೇವೆಯನ್ನು ತೀವ್ರವಾದ ಟೀಕೆಗೆ ಒಳಪಡಿಸಿದ್ದರು. ಆಗ ಮದರ್ ತೇರೇಸಾ ಓಷೋ ರಜನೀಶರಿಗೊಂದು ದೀರ್ಘವಾದ ಪತ್ರವನ್ನು ಬರೆದಿದ್ದರು. ಆ ಪತ್ರಕ್ಕೆ ಪ್ರತಿಕ್ರಿಯಿಸಿ ಜನವರಿ ೮, ೧೯೮೧ರಂದು ರಜನೀಶರು ಹೇಳಿದ ಮಾತುಗಳಿವು:


ನನಗೆ ಆಕೆಯ ಪ್ರಾಮಾಣಿಕತೆಯ ಬಗ್ಗೆ ಸಂಶಯವಿಲ್ಲ. ಆಕೆ ನನಗೆ ಬರೆದ ಪತ್ರದ ಒಂದೊಂದು ಮಾತೂ ಪ್ರಾಮಾಣಿಕವಾದವು. ಆದರೆ ತಾನೇನು ಬರೆಯುತ್ತಿದ್ದೇನೆ ಎಂಬ ತಿಳುವಳಿಕೆಯೇ ಇಲ್ಲದಂತೆ ಆ ಪತ್ರವನ್ನು ಬರೆದಿದ್ದಳು. "ನಿಮ್ಮ ಬಗ್ಗೆ ನನಗೆ ಮರುಕ ಉಂಟಾಗುತ್ತದೆ. ನನಗೆ ನೀವು ನೀಡಿರುವ ಎಲ್ಲ ವಿಲಕ್ಷಣವಾದ ವಿಶೇಷಣಗಳನ್ನೂ ಮರೆತು ನಾನು ನಿಮ್ಮನ್ನು ಕ್ಷಮಿಸುತ್ತೇನೆ" ಎಂದು ಬರೆದಿದ್ದರು.

ನನ್ನ ಬಗ್ಗೆ ಆಕೆ ಏತಕ್ಕಾಗಿ ಮರುಕ ಪಡಬೇಕು? ನನಗೆ ಆ ಪತ್ರ ತುಂಬ ಮನರಂಜನೆಯನ್ನು ನೀಡಿತು. ನಾನು ನೀಡಿದ್ದ ವಿಶೇಷಣಗಳೇ ಆಕೆಗೆ ಅರ್ಥವಾದಂತಿರಲಿಲ್ಲ. ನೊಬೆಲ್ ಪ್ರಶಸ್ತಿಯನ್ನು ಸ್ವೀಕರಿಸಿದ್ದ ಆಕೆಯನ್ನು ನಾನು ’ವಂಚಕಿ’, ’ಮುಖವಾಡದವಳು’, ’ಢೋಂಗಿ ವೈದ್ಯೆ’ ಎಂದು ಕರೆದಿದ್ದೆ.

ಈ ಆಲ್ಫ್ರೆಡ್ ನೋಬೆಲ್ ಎಂಬ ವ್ಯಕ್ತಿ ಜಗತ್ತಿನ ಅತಿದೊಡ್ಡ ಅಪರಾಧಿ. ೧ನೇ ಮಹಾಯುದ್ಧ ನಡೆದದ್ದೇ ಅವನು ಸರಬರಾಜು ಮಾಡಿದ ಯುದ್ಧಶಸ್ತ್ರಗಳಿಂದ. ಆತ ಒಬ್ಬ ಶಸ್ತ್ರಾಸ್ತ್ರ ತಯಾರಕ. ಮೊದಲ ಮಹಾಯುದ್ಧ ಮುಗಿದ ಮೇಲೆ ಅವನು ಕೋಟ್ಯಾಧಿಪತಿಯಾದ. ಬರ್ಬರ ಹತ್ಯಾಕಾಂಡದಿಂದ ಶ್ರೀಮಂತನಾದ ಅವನು ತನ್ನ ಕ್ರಿಶ್ಚಿಯನ್ ಪಾಪಪ್ರಜ್ಞೆಯಿಂದ ಪಾರಾಗಲೆಂದೇ ತನ್ನ ಹೆಸರಿನಲ್ಲಿ ಒಂದು ಟ್ರಸ್ಟ್ ಸ್ಥಾಪಿಸಿದ್ದ; ಯುದ್ಧದಿಂದ ಬಂದ ಲಾಭವನ್ನೆಲ್ಲ ಆ ಟ್ರಸ್ಟ್‌ಗೆ ದಾನಮಾಡಿದ್ದ. ಇಂಥವನ ಸಂಸ್ಥೆ ನೀಡುವ ಪ್ರಶಸ್ತಿಯನ್ನು ’ಶಾಂತಿಯ’ ಹೆಸರಿನಲ್ಲಿ ಯಾರಾದರೂ ಪಡೆಯುವರೇ? ಆದ್ದರಿಂದಲೇ ನಾನು ಆಕೆಯನ್ನು ’ವಂಚಕಿ’ ಎಂದು ಕರೆದದ್ದು. ಆಕೆ ಖಂಡಿತವಾಗಿ ಗೊತ್ತಿದ್ದೂ ವಂಚನೆ ಮಾಡುತ್ತಿಲ್ಲ ಎಂದು ನಾನು ಬಲ್ಲೆ. ಆದರೆ ಸಮಾಜದಲ್ಲಿ ವ್ಯವಸ್ಥಿತವಾಗಿ ಶೋಷಣೆಯನ್ನು ಮುಂದುವರೆಸುವ ಶಕ್ತಿಗಳು ಇಂಥವರನ್ನು ತನ್ನ ಉದ್ದೇಶ ಸಾಧನೆಗೆ ಬಳಸಿಕೊಳ್ಳುತ್ತದೆ. ಅವರಿಗೆ ದೊಡ್ಡ ದೊಡ್ಡ ಪ್ರಶಸ್ತಿಗಳನ್ನು ನೀಡಿ ಪ್ರೋತ್ಸಾಹಿಸಿ ತನ್ನ ಉದ್ದೇಶವನ್ನು ಸುಗಮಗೊಳಿಸಿಕೊಳ್ಳುತ್ತದೆ. ಆ ಪ್ರಶಸ್ತಿಗಳಿಗೆ ಮಾರುಹೋಗುವ ಸಮಾಜ ಸೇವಕರು ತಮಗೂ ಆತ್ಮವಂಚನೆ ಮಾಡಿಕೊಳ್ಳುತ್ತಾರೆ, ಸಮಾಜಕ್ಕೂ ವಂಚನೆ ಮಾಡುತ್ತಾರೆ.

ಇನ್ನು ’ಮುಖವಾಡದವಳು’ ಎಂಬ ನನ್ನ ಎರಡನೆಯ ವಿಶೇಷಣಕ್ಕೆ ವಿವರಣೆ: ಒಬ್ಬ ನಿಜವಾದ ಧಾರ್ಮಿಕ ವ್ಯಕ್ತಿ,..ಅಂದರೆ ಯೇಸುಕ್ರಿಸ್ತನಂಥವನು ನೊಬೆಲ್ ಪ್ರಶಸ್ತಿಯನ್ನು ಪಡೆಯುವುದನ್ನು ಎಂದಾದರೂ ಊಹಿಸಲಾದೀತೇ? ಯೇಸು ತನ್ನ ಕಾಲದಲ್ಲಿ ಒಬ್ಬ ಅಪರಾಧಿ ಎಂದು ಕರೆಸಿಕೊಂಡಿದ್ದ. ಸಾಕ್ರಟೀಸನೂ ಅಥೆನ್ಸಿನ ಕಾನೂನಿನ ದೃಷ್ಟಿಯಲ್ಲಿ ತಪ್ಪಿತಸ್ಥನಾಗಿದ್ದ. ನಿಜವಾದ ಧಾರ್ಮಿಕ ವ್ಯಕ್ತಿ ಎಲ್ಲ ಕಾಲದಲ್ಲೂ ತನ್ನ ವರ್ತಮಾನದ ಜಗತ್ತಿಗೆ ಒಬ್ಬ ಅಪರಾಧಿಯಂತೆ ಕಾಣುವುದಾದರೆ ನೊಬೆಲ್ ಪ್ರಶಸ್ತಿಗಳನ್ನು ಪಡೆಯುವ ಮದರ್ ತೇರೇಸಾರಂತಹವರು ಢೋಂಗಿಗಳೆಂದೇ ತಾರ್ಕಿಕ ನಿರ್ಣಯವಾಗುತ್ತದೆ. ಢೋಂಗಿಗಳಿಗೆ ಆಗಾಗ ಸನ್ಮಾನಗಳೂ ಸಿಗುತ್ತಿರುತ್ತವೆ. ಏಕೆಂದರೆ ಢೋಂಗಿಗಳು ಸಮಾಜದ ವ್ಯವಸ್ಥೆಗೆ ಅಡಚಣೆಯಾಗದಂತೆ ಕೆಲಸ ಮಾಡುತ್ತಿರುತ್ತಾರೆ. ’ಮುಖವಾಡದವಳು’ ಎಂಬ ವಿಶೇಷಣವನ್ನೂ ತುಂಬ ಸರಿಯಾಗಿಯೇ ಬಳಸಿದ್ದೇನೆ. ಜನ ತಮ್ಮ ಸ್ವಾಭಾವಿಕ ಬದುಕನ್ನು ವಿಭಜಿಸಿಕೊಂಡು ಬಾಳುತ್ತಿರುತ್ತಾರೆ. ಪ್ರತಿಯೊಬ್ಬರಿಗೂ ಹೊರಗೊಂದು ಮುಖ, ಹಾಗೆಯೇ ಒಳಗೊಂದು ಮುಖ ಇರುತ್ತದೆ.

ನನ್ನ ಇನ್ನೊಂದು ಆಪಾದನೆಗೆ ಉತ್ತರಿಸುತ್ತ ಆಕೆ ಆ ಪತ್ರದಲ್ಲಿ ’ಆ ಪ್ರೊಟೆಸ್ಟಂಟ್ ಕುಟುಂಬಕ್ಕೆ ಮಗುವನ್ನು ದತ್ತು ನೀಡಲಾಗಲಿಲ್ಲ ನಿಜ, ಅದಕ್ಕೆ ಅವರು ಪ್ರೊಟೆಸ್ಟೆಂಟರು ಎಂಬುದು ಕಾರಣವಲ್ಲ. ಆ ಸಮಯಕ್ಕೆ ನಮ್ಮ ಆಶ್ರಮದಲ್ಲಿ ದತ್ತು ನೀಡಲು ಯಾವ ಅನಾಥ ಮಗುವೂ ಇರಲಿಲ್ಲ’ ಎಂದು ವಿವರಣೆ ನೀಡಿದ್ದರು. ನಾನು ಕೇಳುವುದಿಷ್ಟೇ. ಈಕೆಗೆ ನೊಬೆಲ್ ಪ್ರಶಸ್ತಿ ನೀಡಿರುವುದಾದರೂ ಏತಕ್ಕೆ? ಭಾರತದಂತಹ ದೇಶದ ಅನಾಥಾಶ್ರಮಗಳಲ್ಲಿ ಅನಾಥ ಮಕ್ಕಳು ಇಲ್ಲ ಎಂದರೆ ಯಾರು ನಂಬುವರು? ಅದೂ ಕಲ್ಕತ್ತಾದಂತಹ ನಗರದಲ್ಲಿ! ಅನಾಥ ಮಕ್ಕಳಿಲ್ಲ ಎಂದ ಮೇಲೆ ಮದರ್ ತೆರೇಸಾ ತನ್ನ ೭೦೦ ಜನ ಸನ್ಯಾಸಿನಿಯರೊಂದಿಗೆ ಏನು ಮಾಡುತ್ತಿದ್ದಾರೆ? ಆಶ್ರಮದಲ್ಲಿ ಮಕ್ಕಳಿಲ್ಲದಿದ್ದರೇನಾಯಿತು ಆಶ್ರಮದಿಂದ ನಾಲ್ಕು ಹೆಜ್ಜೆ ಮುಂದಕ್ಕೆ ನಡೆದರೆ ಹಾದಿ ಬೀದಿಗಳಲ್ಲಿ ಅನಾಥ ಮಕ್ಕಳು ಸಿಗುತ್ತವೆ. ಆ ಪ್ರೊಟೆಸ್ಟೆಂಟ್ ಕುಟುಂಬಕ್ಕೆ ಇವರು ಆ ಕೂಡಲೆ ’ದತ್ತು ಪಡೆಯಲು ಮಕ್ಕಳಿಲ್ಲ’ ಎಂದು ಹೇಳಿದ್ದರೆ ಅದು ಬೇರೆಯ ಮಾತು. ಆದರೆ ಹಾಗೇನೂ ಹೇಳಲಿಲ್ಲ. ’ಮಕ್ಕಳಿವೆ, ಅರ್ಜಿಯನ್ನು ಭರ್ತಿ ಮಾಡಿ’ ಎಂದೇ ಹೇಳಿದರು. ಅವರು ಅರ್ಜಿಯಲ್ಲಿ ಪ್ರೊಟೆಸ್ಟೆಂಟ್ ಎಂದು ನಮೂದಿಸಿದ ಮೇಲೆಯೇ ಸಮಸ್ಯೆ ಶುರುವಾದದ್ದು. ’ನೀವು ಪ್ರೊಟೆಸ್ಟೆಂಟರು ಹಾಗಾಗಿ ನಾವು ಮಕ್ಕಳನ್ನು ನೀಡಲಾರೆವು, ಇವರನ್ನು ರೋಮನ್ ಕ್ಯಾಥೋಲಿಕ್ ಸಂಪ್ರದಾಯಕ್ಕನುಗುಣವಾಗಿ ಬೆಳೆಸಿದ್ದೇವೆ’ ಎಂದು ನೇರವಾಗಿಯೂ ಹೇಳಲಿಲ್ಲ. ಇದನ್ನೇ ನಾನು ’ಮುಖವಾಡತನ’ ಎನ್ನುವುದು. ಅಂತಹ ಕಾರಣವನ್ನೇನಾದರೂ ನೀಡಿದ್ದರೆ ಆಗಲೂ ನಾನು ಟೀಕಿಸದೇ ಬಿಡುತ್ತಿರಲಿಲ್ಲ. ಸಂಪ್ರದಾಯ ವ್ಯತ್ಯಾಸವಾದರೆ ಮಕ್ಕಳ ಮಾನಸಿಕ ಬೆಳವಣಿಗೆಗೆ ಹಾನಿಯಾಗುತ್ತದೆ ಎಂದಾದರೆ ಪ್ರತಿಯೊಂದು ಅನಾಥ ಮಗುವಿಗೂ ಇವರು ಹಾನಿ ಮಾಡುತ್ತಲೇ ಬಂದಿದ್ದಾರೆ. ಏಕೆಂದರೆ ಇವರು ಪೋಷಿಸುತ್ತಿರುವ ಎಲ್ಲ ಮಕ್ಕಳೂ ಹಿಂದೂಗಳು. ಹಾಗೆ ನೋಡಿದರೆ ರೋಮನ್ ಕ್ಯಾಥೊಲಿಕ್ಕರಿಗೂ ಪ್ರೊಟೆಸ್ಟಂಟರಿಗೂ - ಕೆಲವು ಮೂರ್ಖ ಪದ್ಧತಿಗಳ ವಿಷಯದಲ್ಲಿ ಬಿಟ್ಟರೆ - ಸಂಪ್ರದಾಯದಲ್ಲಿ ಅಂತಹ ವ್ಯತ್ಯಾಸವೇನೂ ಇಲ್ಲ. ಸಂವಿಧಾನದಲ್ಲಿ ಮತಾಂತರ ವಿರೋಧಿ ಮಸೂದೆಯನ್ನು ಅಂಗೀಕರಿಸುವ ಪ್ರಸ್ತಾಪ ಬಂದಾಗ ಅದನ್ನು ಬಲವಾಗಿ ವಿರೋಧಿಸಿ ಪ್ರಧಾನ ಮಂತ್ರಿಗೆ ಪತ್ರ ಬರೆದವರು ಮದರ್ ತೇರೇಸಾ. ಆಕೆ ಹೇಳುವಂತೆ ಮಕ್ಕಳ ಮಾನಸಿಕ ಬೆಳವಣಿಗೆಯೇ ಆಕೆಯ ನಿಜವಾದ ಕಾಳಜಿಯಾಗಿದ್ದರೆ ಮತಾಂತರ ಪದ್ಧತಿಯನ್ನೇ ಆಕೆ ವಿರೋಧಿಸಿರುತ್ತಿದ್ದರು. ಆದರೆ ಈ ಮುಖವಾಡದವರಿಗೆ ತಮ್ಮ ಮಾತು-ಕೃತಿಗಳಲ್ಲಿ ಕಾಣಿಸುವ ವ್ಯತ್ಯಾಸ ಮುಖ್ಯವಲ್ಲ, ಮತಾಂತರಗೊಂಡವರ ಸಂಖ್ಯೆ ಹೆಚ್ಚಿಸುವುದಷ್ಟೇ ಮುಖ್ಯ.

’ನನ್ನ ಅಪಾರಪ್ರೀತಿಯು ಅವರು ನನಗೆ ನೀಡಿರುವ ವಿಶೇಷಣಗಳನ್ನು ಮರೆತು ಕ್ಷಮಿಸುತ್ತದೆ’ ಎಂದು ಬೇರೆ ಹೇಳುತ್ತಾರೆ. ಪ್ರೀತಿಗೆ ಕ್ಷಮಿಸುವ ಭಾಷೆ ಎಂದಾದರೂ ಗೊತ್ತಿರುವುದೇ? ಕ್ಷಮಿಸಬೇಕೆಂದರೆ ಮೊದಲು ಕೋಪಗೊಂಡಿರಬೇಕು. ಆಗ ಮಾತ್ರ ಕ್ಷಮೆ ಸಾಧ್ಯ. ನಾನಂತೂ ಮದರ್ ತೆರೇಸಾರನ್ನು ಕ್ಷಮಿಸುವ ಪ್ರಶ್ನೆ ಏಳುವುದಿಲ್ಲ ಏಕೆಂದರೆ ನನಗೆ ಆಕೆಯ ಮೇಲೆ ಕೋಪವೇ ಬಂದಿಲ್ಲ. ಇನ್ನು ’ಅಪಾರ ಪ್ರೀತಿಯಿಂದ’ ಕ್ಷಮಿಸುವರಂತೆ. ಪ್ರೀತಿಗೆಲ್ಲಾದರೂ ಪಾರ ಅಪಾರ ಎಂಬ ಅಳತೆಗೋಲು ಇರಲು ಸಾಧ್ಯವೇ? ಕೆ.ಜಿ. ಕ್ವಿಂಟಾಲ್, ಟನ್ ಇತ್ಯಾದಿ ಅಳತೆಯ ಲೆಕ್ಕದಲ್ಲಿ ಪ್ರೀತಿಯ ಬಗ್ಗೆ ಮಾತನಾಡುವುದು ಸರಿಯೇ?

ಅಷ್ಟಕ್ಕೂ ನಾನು ಮಾಡಿರುವ ಪಾಪವಾದರೂ ಏನು? ಕ್ಯಾಥೋಲಿಕ್ಕರಿಗೆ ಇದೊಂದು ಹಳೆಯ ವ್ಯಸನ. ಜೀವನವಿಡೀ ಎಲ್ಲರನ್ನೂ ಕ್ಷಮಿಸಿಕೊಂಡೇ ಓಡಾಡುವ ಜನ ಇವರು. ಕ್ಷಮಿಸಲು ನಾನೇನು ಇವರ ಮುಂದೆ ಮಂಡಿಯೂರಿ ಪಶ್ಚಾತ್ತಾಪ (ಕನ್‌ಫೆಷನ್) ಮಾಡಿಕೊಂಡಿದ್ದೆನೇ? ನಾನು ಆಕೆಗೆ ನೀಡಿದ ಯಾವ ಬಿರುದನ್ನೂ ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ. ಬದಲಿಗೆ ಇನ್ನೂ ಒಂದಷ್ಟು ಬಿರುದುಗಳನ್ನು ಸೇರಿಸುತ್ತೇನೆ. ಇವರೆಲ್ಲ ಹೆಡ್ಡರು, ಮೂರ್ಖ ಜನ. ಜಗತ್ತಿನಲ್ಲಿ ಯಾರಾದರೂ ಕ್ಷಮೆಗೆ ಅರ್ಹರಾಗಿದ್ದರೆ ಅದು ಆಕೆ, ನಾನಲ್ಲ. ಆಕೆ ಎಂಥ ಪಾಪಕರ್ಮದಲ್ಲಿ ತೊಡಗಿದ್ದಾರೆ ಎಂದು ಆಕೆಗಿನ್ನೂ ಅರ್ಥವಾದಂತಿಲ್ಲ. ’ಗರ್ಭಪಾತದ ಪಾಪವನ್ನು, ಅನಾಥ ಮಕ್ಕಳನ್ನು ಸ್ವೀಕರಿಸುವ ಮೂಲಕ ತೊಳೆಯುತ್ತಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ. ಗರ್ಭಪಾತ ಖಂಡಿತ ಪಾಪವಲ್ಲ. ಈಗಾಗಲೇ ದಿನೇ ದಿನೇ ಜನಸಂಖ್ಯೆ ಏರುತ್ತಿದೆ. ಒಂದುವೇಳೆ ಗರ್ಭಪಾತ ಪಾಪವಾಗಿದ್ದರೆ ಪೋಪ್, ತೆರೇಸಾ ಹಾಗು ಅವರ ಸಂಗಡಿಗರೇ ಅದಕ್ಕೆ ನೇರ ಹೊಣೆ. ಏಕೆಂದರೆ ಈ ಜನ ಮೊದಲಿನಿಂದಲೂ ಗರ್ಭನಿರೋಧಕ ಸಾಧನಗಳನ್ನು ವಿರೋಧಿಸಿ ಪ್ರಚಾರ ಮಾಡುತ್ತಿರುವವರು. ಜನ ಹೊಟ್ಟೆಗಿಲ್ಲದೇ ಸಾಯುತ್ತಿರುವಾಗ ಗರ್ಭನಿರೋಧಕಗಳನ್ನು ಬಳಸಬೇಡಿ ಎನ್ನುವವರಂತೂ ಕ್ಷಮೆಗೆ ಅರ್ಹರೇ ಅಲ್ಲ. ಅವರನ್ನು ಮಾನವವಿರೋಧಿಗಳೆನ್ನದೆ ಬೇರಾವ ಹೆಸರಿನಿಂದ ಕರೆಯಬೇಕು? ನಾನು ಇವರಂತೆ ಬಡವರ ಸೇವೆ ಮಾಡುವವನಲ್ಲ, ಬಡತನದ ನಿರ್ಮೂಲನೆಯನ್ನು ಬಯಸುವವನು. ೧೦ ಸಾವಿರ ವರ್ಷಗಳಿಂದ ಈ ಮೂರ್ಖರು ಬಡವರ ಸೇವೆ ಮಾಡಿಕೊಂಡೇ ಬಂದಿದ್ದಾರೆ. ಇನ್ನು ಇವರ ಸೇವೆ ಸಾಕು. ಬಡತನದ ನಿರ್ಮೂಲನೆ ಮಾಡಬಲ್ಲ ಸಾಕಷ್ಟು ತಂತ್ರಜ್ಞಾನ ನಮ್ಮಲ್ಲಿ ಬೆಳೆದಿದೆ. ’ನಾನು ನಿನ್ನನ್ನು ಕ್ಷಮಿಸಿದ್ದೇನೆ’ ಎಂಬ ಮಾತಿನಲ್ಲಿರುವ ಅಹಂಕಾರವನ್ನು ನೋಡಿ!

ನನಗಾಗಿ ಮರುಕ ಪಡುವಳಂತೆ, ’ಭಗವಂತ ನನ್ನ ಹೃದಯದಲ್ಲಿ ಪ್ರೀತಿಯನ್ನು ತುಂಬಲಿ’ ಎಂದು ಪ್ರಾರ್ಥಿಸುವಳಂತೆ. ನಾನು ಜೀವಮಾನದಲ್ಲೇ ದೇವರನ್ನು ನಂಬಿದವನಲ್ಲ. ನಾನೇನೂ ನಾಸ್ತಿಕನಲ್ಲ. ಅಂತಹ ದೇವರನ್ನು ನನ್ನಷ್ಟು ಹುಡುಕಾಡಿದವರು ಮತ್ತೆಲ್ಲೂ ಸಿಗಲಾರರು. ಆದ್ದರಿಂದಲೇ ದೇವರಿಲ್ಲವೆಂದು ಇಷ್ಟು ಧೈರ್ಯದಿಂದ ಹೇಳುತ್ತಿದ್ದೇನೆ. ದೇವರೇಕೆ ನನ್ನನ್ನು ಹರಸಬೇಕು? ನಾನೇ ನಿಮ್ಮ ಎಲ್ಲ ದೇವರುಗಳನ್ನೂ ಹರಸುತ್ತೇನೆ. ಅಷ್ಟಕ್ಕೂ ದೇವರೆಂದರೆ ಏನು? ನಮ್ಮೊಳಗಿನ ಅತ್ಯಂತ ಪವಿತ್ರವಾದ ವಸ್ತುವೇ ದೇವರು. ಎಚ್.ಜಿ. ವೇಲ್ಸ್ ಗೌತಮ ಬುದ್ಧನ ಬಗ್ಗೆ ಹೇಳಿದ ಒಂದು ಮಾತು ನನಗೆ ನೆನಪಾಗುತ್ತದೆ ’ಬುದ್ಧ ದೇವರನ್ನೊಪ್ಪದ ಅತ್ಯಂತ ದೈವೀಕ ವ್ಯಕ್ತಿ’. ಅಲ್ಲೆಲ್ಲೋ ಕುಳಿತು ನಮ್ಮನ್ನು ಸದಾ ನೋಡುತ್ತಿರುವ ವ್ಯಕ್ತಿಯಂತೆ ನಾನು ದೇವರನ್ನು ಪರಿಭಾವಿಸಲಾರೆ. ಪ್ರತಿಯೊಂದು ಕ್ಷಣದಲ್ಲೂ ನನ್ನ ಸುತ್ತಣ ಪ್ರತಿಯೊಂದು ಪದಾರ್ಥದಲ್ಲೂ ನನಗೆ ದೈವತ್ವ ಪ್ರತೀತವಾಗುತ್ತದೆ. ’ದೇವರು ನಿನ್ನೊಳಗೆ ಪ್ರೀತಿಯನ್ನು ತುಂಬಿ ಹರಸಲಿ’ ಎಂಬ ಆಜ್ಞಾರ್ಥ ಬೇರೆ. ಅಬ್ಬ, ಎಂತಹ ಔದಾರ್ಯ! ನನ್ನ ಹೃದಯದಲ್ಲಿ ಪ್ರೀತಿ ತುಂಬಿಯೇ ಇದೆ. ಇವರ ದೇವರು ಪ್ರೀತಿಯನ್ನು ತಂದು ಇಲ್ಲಿ ಸುರಿಯ ಬೇಕಿಲ್ಲ. ಹೊರಗಿನಿಂದ ತಂದ ಪ್ರೀತಿ ನನಗೆ ಬೇಕಿಲ್ಲ. ಇಂತಹ ಮೂರ್ಖತನವನ್ನೇ ಲೋಕದಲ್ಲಿ ಧಾರ್ಮಿಕತೆ ಎಂದು ಭಾವಿಸಿಕೊಳ್ಳಲಾಗಿದೆಯಲ್ಲ. ಇಲ್ಲಿಯ ತನಕ ನಾನು ಆಕೆಯನ್ನು ಮದರ್ ತೆರೇಸಾ ಎಂದು ಸಂಬೋಧಿಸುತ್ತಿದ್ದೆ. ಇನ್ನು ಮುಂದೆ ಆಕೆಯನ್ನು ಹಾಗೆ ಕರೆಯುವುದನ್ನು ನಿಲ್ಲಿಸಬೇಕು ಎನಿಸುತ್ತದೆ. ನಾನೇನು ಅಂತಹ ಸಭ್ಯನಲ್ಲವಾದರೂ ಇನ್ನೊಬ್ಬರ ಸಭ್ಯತೆಗೆ ಬೆಲೆ ಕೊಡದಿರುವಷ್ಟು ಅಸಭ್ಯನೂ ಅಲ್ಲ. ಆಕೆ ನನ್ನನ್ನು ’ಡಿಯರ್ ಮಿಸ್ಟರ್ ರಜನೀಶ್’ ಎಂದು ಸಂಬೋಧಿಸಿ ಪತ್ರ ಬರೆದಿದ್ದಾರೆ. ಇನ್ನು ಮುಂದೆ ನಾನೂ ಆಕೆಯನ್ನು ’ಡಿಯರ್ ಮಿಸ್ ತೆರೇಸಾ’ ಎಂದು ಸಂಬೋಧಿಸಬೇಕಲ್ಲವೇ?

ಕಲ್ಕತ್ತಾದ ಒಬ್ಬ ಪತ್ರಕರ್ತ ನನಗೆ ಹೇಳಿದ. ಪತ್ರಿಕೆಯಲ್ಲಿ ಬಂದಿದ್ದ ನನ್ನ ಹೇಳಿಕೆಯ ತುಣುಕನ್ನು ಆತ ತೆರೇಸಾಗೆ ತೋರಿಸಿ ಪ್ರತಿಕ್ರಿಯೆ ಕೇಳಿದನಂತೆ. ಆಕೆ ಕೂಡಲೆ ಸಿಡಿಮಿಡಿಗೊಂಡು ಆ ಕಾಗದ ತುಂಡನ್ನು ಹರಿದು ಚೂರು ಚೂರು ಮಾಡಿದರಂತೆ. ಪ್ರತಿಕ್ರಿಯಿಸಲೂ ಆಗದಷ್ಟು ಸಿಟ್ಟೇ. ಆಕೆ ಕಾಗದವನ್ನು ಹರಿದು ಹಾಕಿದ್ದೇ ಒಂದು ಪ್ರತಿಕ್ರಿಯೆಯಲ್ಲವೇ? ಆ ಪತ್ರಕರ್ತ ’ನಾನು ಸಂಗ್ರಹಿಸಲೆಂದು ಇಟ್ಟುಕೊಂಡಿದ್ದೆ, ಅದನ್ನೇಕೆ ಹರಿದಿರಿ’ ಎಂದು ಕೇಳಿದನಂತೆ. ಜನ ತಮ್ಮನ್ನು ತಾವು ಮಹಾನ್ ಸಾತ್ವಿಕರು ಎಂದು ಭಾವಿಸುತ್ತಾರೆ. ಆದರೆ ಈ ಪ್ರಕರಣದಿಂದ ಆಕೆ ಸಾಧಾರಣರಿಗಿಂತ ಮೂರ್ಖಳು ಎಂದು ಸಾಬೀತಾಗಿದೆ. ಜಗತ್ತಿನ ಎಲ್ಲ ಮೂಲೆಗಳಿಂದ ನನಗೂ ಪ್ರತಿದಿನ ಸಾಕಷ್ಟು ’ಅಭಿನಂದನೆ’ಗಳು ಬರುತ್ತಿರುತ್ತವೆ. ನಾನೂ ಇವರಂತೆ ಎಲ್ಲವನ್ನೂ ಹರಿಯುತ್ತ ಕೂತರೆ ಅದಕ್ಕೆ ಕೊನೆಯೆಲ್ಲಿ? ಅದೇ ನನಗೊಂದು ಒಳ್ಳೆಯ ವ್ಯಾಯಾಮವಾಗುವುದಿಲ್ಲವೇ?

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ರಜನೀಶ್ ಅವರು ಮದರ್ ತೆರೆಸಾ ಅವರ ಬಗ್ಗೆ ಬರೆದ ಈ ಲೇಖನದ ಬಗ್ಗೆ ಸ್ನೇಹಿತನೊಬ್ಬನಿಂದ ಕೇಳಿದ್ದೆ. ಆದರೆ ಆಗ ಇದನ್ನು ದೊರಕಿಸಿಕೊಳ್ಳುವ ಬಗೆ ನನಗೆ ಗೊತ್ತಿರಲಿಲ್ಲ್; ಏಕೆಂದರೆ ಆಗ ಈಗಿನಂತೆ ಇಂಟರ್ನೆಟ್ಟುಗಳಾಗಲಿ; ಬ್ರೇಕ್ನ ನಂತರ ಮುಂದುವರಿಯುವುದು ಎನ್ನುವ ಟಿ.ವಿ. ಮಾಧ್ಯಮಗಳಾಗಲಿ ಇರಲಿಲ್ಲ. ರಜನೀಶರ ಈ ಪ್ರತಿಕ್ರಿಯೆ ಖಂಡಿತವಾಗಿ ನೋಬಲ್ ಪ್ರಶಸ್ತಿ ಮತ್ತು ಅದನ್ನು ಸ್ವೀಕರಿಸುವವರ ಹಿನ್ನಲೆಯನ್ನು ಆಲೋಚಿಸುವಂತೆ ಮಾಡುತ್ತದೆ. ಈ ಬರಹಕ್ಕಾಗಿ ಧನ್ಯವಾದಗಳು ವಾಸುದೇವಮೂರ್ತಿಯವರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

thank you sir, ನಿಮ್ಮ ಷಡ್ದರ್ಶನಗಳ ವಿಚಾರಗಳನ್ನು ಓದುತ್ತಿದ್ದೇನೆ. ಅನುವಾದ ತುಂಬ ಚೆನ್ನಾಗಿ ಮೂಡಿ ಬರುತ್ತಿದೆ. ಷಡ್ದರ್ಶನ‌ಗಳ ಬಗ್ಗೆ ನಾವು (ಅಂದರೆ ನಾನು ಮತ್ತು ನನ್ನ ಕೆಲವು ಸ್ನೇಹಿತರು) ಮೊದಲಿನಿಂದಲೂ ಹಿರಿಯಣ್ಣನವರ ಅಭಿಮಾನಿಗಳು. ಅವರ ಕ್ರುತಿಗಳನ್ನು ಕೆ.ಬಿ. ರಾಮಕ್ರಿಷ್ಣರಾವ್ ಮೊದಲಾದವರು ಕನ್ನಡಕ್ಕೂ ಅನುವಾದಿಸಿದ್ದಾರೆ. ಹಿರಿಯಣ್ಣ ಸೂತ್ರದಲ್ಲೇ ಸಮಗ್ರವನ್ನೂ ಹೇಳಬಲ್ಲ ಕೌಶಲ್ಯ ಉಳ್ಳವರು. ಆದರೆ ಸ್ವಾಮಿ ಹರ್ಷಾನಂದರ ಬರವಣಿಗೆ ತುಂಬ ಸರಳವಾಗಿ ವಿವರಣಾತ್ಮಕವಾಗಿದೆ, ಎಲ್ಲ ವರ್ಗದ ಅಭಿರುಚಿಯ ಜನಗಳಿಗೂ ಅರ್ಥವಾಗುವಂತಿದೆ. ನಿಮ್ಮ ಜಿಜ್ನಾಸೆ ಹೀಗೆಯೇ ಮುಂದುವರೆಯಲಿ. ವಂದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸಾರ್, ನಿಮ್ಮ ಮಾತು ನಿಜ. ಹಿರಿಯಣ್ಣನವರನ್ನು ಸ್ವಾಮಿ ಹರ್ಷಾನಂದರೂ ಕೂಡ ತಮ್ಮ ಮುನ್ನುಡಿಯಲ್ಲಿ ಪ್ರಸ್ತಾಪಿಸಿದ್ದಾರೆ. ನೀವೆಂದಂತೆ ಅವರ ಪುಸ್ತಕಗಳು ಷಡ್ದರ್ಶನಗಳ ಬಗ್ಗೆ ಆಳವಾದ ಅಭ್ಯಾಸ ಮಾಡುವವರಿಗೆ ಹೆಚ್ಚು ಅನುಕೂಲವಾಗುತ್ತವೆ. ಅವರ ಬಗ್ಗೆ ವಿಕಿಪೀಡಿಯಾದಲ್ಲೂ ಇತ್ತೀಚೆಗೆ ಓದಿದೆ. ಅವರ ಬಗ್ಗೆ ಇನ್ನಷ್ಟು ವಿಷಯಗಳನ್ನು ತಿಳಿಸಿ ಉಪಕರಿಸಿದ್ದೀರ. ನಿಜ, ಸ್ವಾಮಿ ಹರ್ಷಾನಂದರ ಬರವಣಿಗೆ ಸಾಮಾನ್ಯ ಜನರನ್ನು ಲಕ್ಷ್ಯದಲ್ಲಿಟ್ಟುಕೊಂಡು ಬರೆದದ್ದು ಅದನ್ನೂ ಕೂಡ ಅವರು ಮುನ್ನುಡಿಯಲ್ಲಿ ಪ್ರಸ್ತಾಪಿಸಿದ್ದಾರೆ. ಅದೇ ಹುರುಪಿನಲ್ಲಿ ನಾನು ಅವರ ಕ್ರುತಿಯನ್ನು ಕನ್ನಡಕ್ಕೆ ಅನುವಾದಿಸುತ್ತಿರುವುದು. ನಿಮ್ಮ ಪ್ರೋತ್ಸಾಹದಾಯಕ ನುಡಿಗಳಿಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.