ಮನೆ ಜಗಳ, ಗುಟ್ಟಾಗಿರದಲ್ಲ !

4

ಜಗಳವಿರದ ಮನೆ ಮನಗಳಾದರೂ ಯಾವುದಿದೆ? ಎಲ್ಲಾ ಒಂದಲ್ಲಾ ಒಂದು ಬಾರಿ ಸಿಟ್ಟಿನೆ ಕೈಗೆ ಬುದ್ಧಿ ಕೊಟ್ಟು ಅದರ ಅವಕೃಪೆಗೆ ಪಾತ್ರರಾದವರೆ. ಕಾರಣಗಳೇನೆ ಇದ್ದರೂ ಸಿಟ್ಟು ಬಂದಾಗ ಮಾತ್ರ ಅವರ ಮಾಮೂಲಿನ ವ್ಯಕ್ತಿತ್ವವೆ ಮರೆತುಹೋಗಿ ಒಳಗಿನ ಅವಿತಿದ್ದ ವ್ಯಕ್ತಿತ್ವದ ಅನಾವರಣವಾಗುವುದು, ಸಾಧಾರಣವಾಗಿ ಕಾಣುವ ಪ್ರಕ್ರಿಯೆ. 

ಜಗಳ ಒಂದು ರೀತಿ ಸರ್ವ ವ್ಯಾಪಿ, ಸರ್ವಾಂತರ್ಯಾಮಿ ಎಂದೆ ಹೇಳಬಹುದು. ಕಾಲ ದೇಶಗಳ ಆಯಾಮಗಳೆಲ್ಲವನ್ನು ಮೀರಿದ ಈ ಕೇಡಿಗನನ್ನು ಬ್ರಹ್ಮದ ಅಸ್ತಿತ್ವಕ್ಜೆ ಧಾರಾಳವಾಗಿ ಹೋಲಿಸಬಹುದು - ಆಕಾರವಿರುವವನು - ಇಲ್ಲದವನು, ಕಾಣುವವನು - ಕಾಣದವನು, ಸ್ವಯಂಪ್ರಕಾಶನು...ಇತ್ಯಾದಿ ಬ್ರಹ್ಮ ಗುಣಗಳೆಲ್ಲವನ್ನು ಆರಾಮವಾಗಿ ಆರೋಪಿಸಿಬಿಡಬಹುದು ಜಗಳವೆಂಬ ಈ ಮಹನೀಯನಿಗೆ. ಅದೂ ಬರಿ ವ್ಯಕ್ತಿ ವ್ಯಕ್ತಿಗಳ ಜಗಳ ಮಾತ್ರವೆ ಆಗಬೇಕೆಂದೇನಿಲ್ಲ. ದೇಶಗಳ ಮಧ್ಯೆ, ರಾಜ್ಯಗಳ ನಡುವೆ, ಊರುಗಳ ಮಧ್ಯೆ - ಹೀಗೆ ಎಲ್ಲಿ ಬೇಕೆಂದರಲ್ಲಿ, ಯಾವಾಗ ಬೇಕೆಂದರಾವಾಗ ಪ್ರತ್ಯಕ್ಷವಾಗಿ ಕಾಡುವ ಅಪಾರ ಮಾಯ ಶಕ್ತಿಯ ಮಹನೀಯ. ಕಾರಣವಿರಲಿ, ಬಿಡಲಿ ಕೊನೆಗೆ ಪಿಳ್ಳೆ ನೆವ ಹುಡುಕಿಯಾದರೂ ಕಂಗೆಡಿಸುವ ಜೀಯ.

ಇನ್ನು ಮನೆಗಳಲ್ಲಿ ಜಗಳವಾಡಿಕೊಂಡೆ ಬೆಳೆಯುವ ಮಕ್ಕಳಿಗೆ ಯಾರೂ ಹೇಳಿಕೊಡದೆ ತಮಗೆ ತಾವೆ ಕಲಿಯುವ ಏಕೈಕ ವಿದ್ಯೆಯೆಂದರೆ ಜಗಳವೆ ಇರಬೇಕೆಂದು ಕಾಣುತ್ತದೆ. ಆಟವಾಡಲೊ, ಇಂತದ್ದೆ ಊಟದ ತಟ್ಟೆ ಬೆಕೆಂದೊ, ಆಟದಲ್ಲಿ ಮೋಸ ಮಾಡಿದ್ದಕ್ಕೊ - ಕೊನೆಗೆ ವಿನಾಕಾರಣ ಕೂಡ ಇದು ಸಂಭವಿಸಬಹುದು. ಇನ್ನು ಸೋದರ, ಸೋದರಿಯರ ಜತೆ, ಅಪ್ಪ, ಅಮ್ಮ, ಹತ್ತಿರದ ಬಂಧುಗಳ ಜತೆ ಯಾವುದಾದರೊಂದು ಕಾರಣಕ್ಕೆ ಮುನಿಸು, ಜಗಳಾಟ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವೆ ಸರಿ. ಆ ಹೊತ್ತಿನಲ್ಲಿ ಅವರ ಮನೆ ಕಾರ್ಯಕ್ಕೆ ಇವರು , ಇವರದ್ದಕ್ಕೆ ಅವರು ಬರುವಂತಿಲ್ಲ, ಹೋಗುವಂತಿಲ್ಲ. ಬೇರೆಯವರ ಮದುವೆಯಲ್ಲೊ ಮುಂಜಿಯಲ್ಲೊ ಕಂಡರೂ ಮುಖ ತಿರುಗಿಸಿ ನಡೆವ ಧುರ್ಯೋಧನ ಛಲ. ಅದೇ ರಾಜಿಯಾದಾಗ ಏನು ನಡೆಯದವರಂತೆ ಹೆಗಲ ಮೇಲೆ ಕೈಹಾಕಿ ನಡೆಯುವ ಅತಿಶಯದ ಕಾಲ!

ಇನ್ನು ಗಂಡ ಹೆಂಡಿರ ಜಗಳದ ವಿಷಯಕ್ಕೆ ಬಂದರಂತೂ ಮಾತಾಡುವಂತಿಲ್ಲ. ಇಬ್ಬರೂ ಪರಸ್ಪರ ಚೆನ್ನಾಗಿ ತಿಳಿದವರಾದ ಕಾರಣ, ಇಬ್ಬರು ಪರಸ್ಪರರ ಸೀಕ್ರೇಟ್ ಹಿಡಿದು ಚೆನ್ನಾಗಿ ದಬಾಯಿಸಿ ಜಾಡಿಸಬಹುದು ನೋಡಿ! ಅವರುಗಳು ಕಚ್ಚಾಡುವಾಗ ನೋಡಿಕೊಂಡು ಮಜಾ ಪಡೆಯುವ ಮಕ್ಕಳು , ಪ್ರಳಯ ಕಾಲದಲ್ಲಿ ಸಾಕ್ಷೀಭೂತಳಾಗಿ ವೀಕ್ಷಿಸುವ ಶಕ್ತಿಮಾತೆಯಷ್ಟೆ ನಿರ್ಲಿಪ್ತರೆನ್ನಲು ಅಡ್ಡಿಯಿಲ್ಲ. ಎಷ್ಟೋ ಸಾರಿ ಅವರೆ ಹುರಿದುಂಬಿಸಿ ಕಿಡಿ ಹಾರುವುದನ್ನು ನೋಡಿ ಆನಂದ ಪಡುವುದು ಉಂಟು. ಅಂತೆಯೆ ಎಷ್ಟೆ ಗುಟ್ಟಾಗಿ ಜಗಳ ಆಡಬೇಕೆಂದರು ಹೇಗೊ ಕಿಟಕಿ, ಗೋಡೆ ದಾಟಿ ವಠಾರಗಳ ಲೋಕಲ್ ಆಕಾಶವಾಣಿ ಹರಟೆ ವಾರ್ತೆಗಳಾಗಿ ಮಿಂಚಿನ ವೇಗದಲ್ಲಿ ಸಂಚರಿಸುವುದು ಸುಳ್ಳಲ್ಲ. 

ಅಂತ ಮನೆ ಜಗಳದ ತುಣುಕನ್ನು ನೆನಪಿಸಲೊಂದು ಪುಟ್ಟ ಕವನ, ಈ ಕೆಳಗೆ :-)

 ಮನೆ ಜಗಳ, ಗುಟ್ಟಾಗಿರದಲ್ಲ !
_________________________

ಯಾರಪ್ಪನ ಮನೆ ಸೊತ್ತು
ಮನೆ ಮನೆ ಜಗಳ ?
ನಮ್ಮ ಮನೆಯಲೂ ಉಂಟು
ನಮಗೂ ಬಡಿದಾಡಿ ಗೊತ್ತುಂಟು ||

ಮೊದಲು ಹಾಕುವೆವು ಕಿಟಕಿ
ಜನರಾಡದಂತೆ ಕಟಕಿ
ದನಿ ಏರಿಸುವ ಮೊದಲೆ ಜತನ
ಬರೆವ ಮುನ್ನ ಮಹಾ ಭಾರತವನ್ನ ||

ತರ್ಕ ವಿತರ್ಕಗಳೆಲ್ಲ ಧ್ವಂಸ
ಹಂಸ ಕ್ಷೀರ ನೋಡುವ ವಂಶ
ಮಾತಲೆ ಜುಟ್ಟೆಳೆಯುತ ಪರಸ್ಪರ
ನಿಜಕೂ ದಿನ ಒಟ್ಟಾಗಿರುವುದು ಇವರಾ? ||

ಹುಡುಕಾಡಿದ ಚರಿತ್ರೆಯ ಆಳ
ವರ್ಷಾಂತರದೆಲ್ಲಾ ಭೂ'ಗೋಳ'
ಒಂದೊಂದಾಗಿ ಬಿಡಿಸುತ ಜಾತಕ
ಅವರ ಗುಟ್ಟಿವರಿಗೆ ಕರತಲಾಮಲಕ ||

ವಂಶಾವಳಿ ಸಂತತಿಗೆಲ್ಲ ಸಾಲುಸಾಲಲಿ
ಅವರಪ್ಪಾ ಅಮ್ಮ ಇಬ್ಬರ ಬಾಯಲಿ
ಅಕ್ಕ ತಂಗಿ ಅಣ್ಣ ತಮ್ಮ ಬಂಧು ಪ್ರೇಮ
ಮಾತೆ ಆಡಿಸದಿದ್ದರೂ ಉಕ್ಕುತ ನಿರ್ನಾಮ ||

ಸಾಕ್ಷೀಭೂತ ಮೂಕ ಪ್ರೇಕ್ಷಕ ಮಕ್ಕಳು
ಪಾಪ, ಯಾರ ಕಡೆ ವಾದಿಸಬೇಕೆಂದರಿಯರು
ಚಾಣಕ್ಷ್ಯ ಮೌನವ್ರತ ಹಿಡಿಯೆ ಕೆಲವರು
ಬೆಂಕಿಯಲಿ ಗಳ ಹಿರಿದು ಖುಷಿ ಪಡುವ ದೈತ್ಯರು ||

ಅಂತೂ ಮುಗಿಯದ ನಿರಂತರ ಅನಂತ
ಬೈಗುಳ ಬರಲಿ ಬಿಡಲಿ ಅಭಿನಯ ಚಿತ್ತ
ಕೊನೆಗೊಮ್ಮೆ ಮುಗಿಸಲೆ ಬೇಕಾದ ಅನಿವಾರ್ಯ
ಗಂಗಾ ಯಮುನೆ ಕಣ್ಣಲಿ, ಗೋಳಾಟದಲಿ ಭಾರ್ಯಾ ||

ವಿಚಿತ್ರವೆಂದರೆ ಸುದ್ದಿ ಗೋಡೆ ದಾಟೊ ಬುದ್ಧಿ
ಬೆಳಗಿಗು ಮೊದಲೆ ಊರೆಲ್ಲ ಹರಡಿದ ಲದ್ದಿ
ಯಾರನು ಬೈಯಲಿ ತೂತು ಗೋಡೆಯಲಿರುವಾಗ
ಕಾವಲಿ ತೂತಿನ ದೋಸೆ, ತೂತಿನ ಇಡ್ಲಿ ಆದಾಗ ||

------------------------------------------------------------------------------------
ನಾಗೇಶ ಮೈಸೂರು, ಸಿಂಗಪುರ
-------------------------------------------------------------------------------------
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಎಲ್ಲಾ ಕಡೆ ಜಗಳಗಂಟರೇ..ಹೊಂದಿಕೊಂಡು ಬಾಳಲರಿಯದವರೇ..ಇರುವುದು.
ಮನೆಮನೆಯಲ್ಲೂ ಮನಮನದಲ್ಲೂ ಬರೀ ಜಗಳ ಜಗಳ ಜಗಳ
ಬಾಕಿ ಜನಕ್ಕೆ ಎಂಟರ್ಟೈನ್ಮೆಂಟ್ ಎಂಟರ್ಟೈನ್ಮೆಂಟ್ ಎಂಟರ್ಟೈನ್ಮೆಂಟ್
ನಾಗೇಶರೆ, ಕವನ ಹಾಗೂ ಬರಹ ಸೂಪರ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಗಣೇಶ್ ಜಿ, ಪ್ರತಿ ಮನೆಗೂ 'ಮನೆ ದೇವರು' ಇರುವ ಹಾಗೆ, ಮನೆ ಜಗಳ ಒಂದು ರೀತಿ ಎಲ್ಲರ ಮನೆಯ ಕಾಮನ್ 'ಮನೆ ದೇವರು' - ಜಗಳ ಆಡುವವರಿಗೆ ಸೆಂಟಿಮೆಂಟು, ನೋಡುವವರಿಗೆ ಎಂಟರ್ಟೈನ್ಮೆಂಟು :-)

ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವಾಸ್ತವಕ್ಕೆ ಹಿಡಿದ ಕನ್ನಡಿ ನಿಮ್ಮ " ಜಗಳ " ದ ಕವನ. ಕವನಕ್ಕೆ ಮುಂಚೆ ನಿಮ್ಮ ಬರಹದಲ್ಲಿ ತಿಳಿಸಿರುವಂತೆ ಜಗಳವಾಡದವರು ಜಗತ್ತಿನಲ್ಲಿ ಸಿಗುವುದು ಕಷ್ಟವೆ. ಯಾರೊಡನೆಯೂ ಜಗಳವಾಡದವನೆಂದರೆ ದೇವರು ಒಬ್ಬನೆ ಯಾಕೆಂದರೆ ಅವನನ್ನು ಬೈದರೂ, ಹೊಗಳಿದರೂ ಟೀಕಿಸಿದರೂ ಮೌನವಾಗಿರುತ್ತಾನೆ ಅಲ್ಲವೆ...? ......ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸತೀಶರೆ ನಮಸ್ಕಾರ. ದೇವರುಗಳ ವಿಷಯ ಹೇಗೆ ಇದ್ದರು, ಕೆಲವು 'ಮನೆ ದೇವರು'ಗಳು ಮಾತ್ರ ಕಿಲಾಡಿಗಳಂತೆ ಮೌನ ವ್ರತ ಹಿಡಿದು ಸಾಕ್ಷತ್ ದೇವರ ಅಪರಾವತಾರವಾಗಿಬಿಡುತ್ತಾರೆ! ಒಂದು ಕೈಯಲ್ಲಿ ಚಪ್ಪಾಳೆ ಆಗದಲ್ಲ? ಬರಿ ಒಂದೆ ಪಾರ್ಟಿ ಕೂಗಿ ಕೂಗಿ ಸಾಕಾಗಿ ಸುಮ್ಮನಾಗುವಂತೆ. ಒಟ್ಟಾರೆ ಒಬ್ವೊಬ್ವರದು ಒಂದೊಂದು ಸ್ಟ್ರಾಟೆಜಿ - ಅವರವರ ಅನುಭವ ಸಂಧರ್ಭದ ಅನುಸಾರ. ದೇವರದು ಮಾತ್ರ ತುಂಬಾ ವಿಶೇಷವಾದ ಸ್ಟ್ರಾಟೆಜಿ - ಯಾರಿಗೂ ಕೈಗೆ ಸಿಕ್ಕದಿರುವುದು; ಸಿಗದೆ ಇದ್ದ ಮೇಲೆ ಜಗಳವೆಲ್ಲಿಂದ ಬಂತು? ಎಲ್ಲಾ ಒನ್ ಸೈಡೆಡ್!  ಇನ್ನು ಗಂಡ ಹೆಂಡಿರ ಜಗಳ ದೇವರಲ್ಲೂ ಇದೆಯಾ -ಅನ್ನೋದು 'ದೇವ ರಹಸ್ಯ' :-)
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಾಗೇಶ ಮೈಸೂರು ರವರಿಗೆ ವಂದನೆಗಳು
ತಾವು ಭರ್ಜರಿ ಜಗಳದ ಮೂಡ್ ನಲ್ಲಿ ಇದ್ದಂತೆ ಕಾಣುತ್ತೆ, ಅದಕ್ಕೆ ಈ ವಾಸ್ತವತೆಯ ಸ್ಪರ್ಶ ಈ ಕವನಕ್ಕೆ ದಕ್ಕಿದೆ, ಧನ್ಯವಾದಗಳು ಸರ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾಟೀಲರೆ ನಮಸ್ಕಾರ,
ಜಗಳವಾಡಿದ ಮೂಡಿನಲ್ಲೆ ಬರೆದರೆ, ಆ ನೆಗಟಿವ್ ಎನರ್ಜಿಯೆಲ್ಲ ಬರಹದ ರೂಪದಲ್ಲಿ ಕರಗಿ ಪಾಸಿಟಿವ್ ಎನರ್ಜಿಯಾಗಿ ಬದಲಾಗಬಹುದಲ್ಲವೆ? ಭಯಂಕರ ಮೂಡಿಜ ಹೊತ್ತಲೆ ಬರೆದರೆ ಫಾಸ್ತವಕ್ಕೂ ಹತ್ತಿರವಿರುವ ಸಾಧ್ಯತೆ ಹೆಚ್ಚು..ಹೀಗಾಗಿ ನಿಮ್ಮ ಪ್ರತಿಕ್ರಿಯೆ ಹೆಚ್ಚು ಮೌಲಿಕ :-)
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.