ಮಾನೌಮಿ ಹರಕೆ

ಮಾನೌಮಿ ಹರಕೆ

ಕವನ

ಆಶ್ವಯುಜ ಶುದ್ಧ ಮಹರ್ನವವಮಿ ಬರಲೆಂದು
ಲೇಸಾಗಿ ಹರಸಿದೆವು ಬಾಲಕರು ಬಂದು ||ಪಲ್ಲವಿ||

ಆಯುರಾರೋಗ್ಯ ಐಶ್ವರ್ಯ ಹೆಚ್ಚಲೆಂದು
ಸಿರಿಯು ಸಂಪತ್ಕರವು ನಿಮಗಾಗಲೆಂದು
ಕಾಯಜನ ಪಿತನೌಮಿ ನಿಮಗಾಗಲೆಂದು
ಮಾಸ ಹನ್ನೆರಡಕ್ಕೆ ಮಾನೌಮಿ ನಿಮಗಾಗಲೆಂದು ||೧||

ಬಣ್ಣಬಂಗಾರದಾ ಪುಣ್ಯ ಹೆಚ್ಚಲೆಂದು
ಹಣ್ಣು ಸಕ್ಕರೆ ಹಾಲು ಅನುದಿನವು ತಿಂದು
ಸಣ್ಣಮಕ್ಕಳು ನೀವು ತಣ್ಣಗಿರಲೆಂದು
ಬಣ್ಣಿಸೀ ಹರಸಿದೆವು ಬಾಲಕರು ಬಂದು ||೨||

ಮೞೆ ಹೊಯ್ದು ಬೆಳೆ ಬೆಳೆದು ಇಳೆ ತಣಿಯಲೆಂದು
ತಿಳಿಗೊಳಗಳುಕ್ಕಿ ಗೋವ್ಗಳು ಕಱೆಯಲೆಂದು 
ನಳಿನಮುಖಿಯರು ಪುತ್ರಿಯರ ಪಡೆಯಲೆಂದು
ಇಳೆಯೊಳಗೆ ಹರಸಿದೆವು ಬಾಲಕರು ಬಂದು ||೩||

ನಡೆಯುಂಟು ಕೆಲವರಿಗೆ ನುಡಿವ ಗುಣವಿಲ್ಲ
ನುಡಿಯುಂಟು ಕೆಲವರಿಗೆ ನಡೆವ ಗುಣವಿಲ್ಲ
ನಡೆನುಡಿಗಳೆರಡುಂಟು ಕೊಡುವ ಗುಣವಿಲ್ಲ
ನಡೆನುಡಿಯು ಕೊಡುವ ಗುಣ ನಿಮಗಲ್ಲದಿಲ್ಲ ||೪||

                   ಅಜ್ಞಾತ ಜಾನಪದ ಕವಿ