ಮೃಗ ಮತ್ತು ಸುಂದರಿ

0

ಬೇಸರ ಕಳೆಯಲು ಸುಂದರಿ ನಡೆದಳು
ಹೂವಿನ ತೋಟದಲಿ
ಅರಳಿದ ಹೂಗಳ ಚೆಲುವನು ಸವಿಯುತ
ಸುಂದರ ಸಂಜೆಯಲಿ

ಕಂಪನು ಬೀರುವ ಕಣ್ಣಿನು ಸೆಳೆಯುವ
ಕುಸುಮವು ಕರೆದಿರಲು
ಅರಮನೆ ಅಂಗಳ ತುಂಬಿದ ಪರಿಮಳ
ಚೆಲುವೆಯು ಮೆಚ್ಚಿದಳು

ಮನೆಯನು ಮರೆತು ವನದಲಿ ಕುಳಿತು
ದಿನಗಳ ಕಳೆಯುತಲಿ
ಸುತ್ತಲ ಚಂದದ ಚೆಲುವಿನ ಜೊತೆಗೆ
ಬೆರೆತಳು ಒಲವಿನಲಿ

ಬಗೆ ಬಗೆ ಹೂಗಳ ನಡುವಣ ಬಾಲೆಯ
ಬದುಕು ಸಾಗುತಿರಲು
ನಗುವನು ತುಂಬಿದ ಹೂಗಳ ನೋಡುತ
ನೋವನು ಮರೆತಿಹಳು

ಹಾಡುತ ಕುಣಿಯುತ ಸಂಚಾರ ಮಾಡುತ
ಸಂಧ್ಯಾ ಸಮಯದಲಿ
ಗಿಡಗಳು ಎಲೆಗಳು ಹೂಗಳ ಮುಟ್ಟುತ್ತಾ
ವಾಯು ವಿಹಾರದಲಿ

ದೂರದಿ ನಿಂತು ಚೆಲುವೆಗೆ ಸೋತು
ಮೃಗವು ನಾಚುತಿಹುದು
ಎದುರಿಗೆ ಬಂದರೆ ಹೆದರುವಳೆಂದು
ಇಣುಕಿ ನೋಡುತಿಹುದು

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.