ರಾಜಕಾರಣಿಗಳು ಎಂದಿಗೂ ಸುಳ್ಳು ನುಡಿಯುವುದಿಲ್ಲ

ರಾಜಕಾರಣಿಗಳು ಎಂದಿಗೂ ಸುಳ್ಳು ನುಡಿಯುವುದಿಲ್ಲ

ಬರಹ


  (’ಹಾಸ್ಯ-ವಿಡಂಬನೆ’ ಪ್ರಕಾರದ ಬಗ್ಗೆ ಇದೇ ’ಸಂಪದ’ದಲ್ಲಿ ಇನ್ನೊಂದುಕಡೆ - ನನ್ನ ’ಶ್ರೀ ಶ್ರೀ..’ ಬರಹದ ಅಡಿಯಲ್ಲಿ - ಚರ್ಚೆ ನಡೆಯುತ್ತಿದೆ. ಒಳ್ಳೆಯ ಬೆಳವಣಿಗೆ. ಕಳೆದ ನಲವತ್ತೈದು ವರ್ಷಗಳಲ್ಲಿ - ಅಂಕಣಬರಹಗಳನ್ನು ಹೊರತುಪಡಿಸಿ - ಐನೂರಕ್ಕೂ ಹೆಚ್ಚು ನನ್ನ ಹಾಸ್ಯವಿಡಂಬನೆಗಳು ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಆ ಪೈಕಿ ನಾಲ್ಕಾರನ್ನಷ್ಟೇ ಇದುವರೆಗೆ ’ಸಂಪದ’ದಲ್ಲಿ ಮರುಪ್ರಕಟಿಸಿದ್ದೇನೆ. ಹಾಸ್ಯವಿಡಂಬನೆಗೆ ಉದಾಹರಣೆಯಾಗಿ, ’ತುಷಾರ’ ಹಾಸ್ಯಸಂಚಿಕೆಯಲ್ಲಿ ಈಚೆಗಷ್ಟೇ (ಮೇ ೨೦೧೦) ಪ್ರಕಟವಾಗಿರುವ ನನ್ನೊಂದು ಹಾಸ್ಯವಿಡಂಬನೆಯನ್ನಿಲ್ಲಿ ಪ್ರಸ್ತುತಪಡಿಸಿದ್ದೇನೆ. ಮೂಲತಃ ಕೈಬರಹದಲ್ಲಿರುವ ಸುದೀರ್ಘ ಹಾಸ್ಯವಿಡಂಬನೆಯನ್ನು ’ಸಂಪದ’ಕ್ಕಾಗಿ ಮೊಟಕುಗೊಳಿಸಿ, ಸರಳಗೊಳಿಸಿ, ಗಣಕಯಂತ್ರಕ್ಕೇರಿಸಿ, ಇದೋ ಇಲ್ಲಿ ನೀಡಿದ್ದೇನೆ.)
 
  ’ಬಾಯಿ ತೆರೆದರೆ ಸಾಕು, ರಾಜಕಾರಣಿಗಳ ಬಾಯಿಯಿಂದ ಬರೀ ಸುಳ್ಳುಗಳೇ ಹೊರಬರುತ್ತವೆ’ ಎಂದು ಜನರು ಭಾವಿಸಿದ್ದಾರೆ. ಜನರ ಈ ಭಾವನೆ ಸರಿಯಲ್ಲ. ರಾಜಕಾರಣಿಗಳು ಎಂದಿಗೂ ಸುಳ್ಳು ನುಡಿಯುವುದಿಲ್ಲ. ಅವರ ನುಡಿಗಳನ್ನು ಜನರು ಸರಿಯಾಗಿ ಅರ್ಥಮಾಡಿಕೊಳ್ಳುತ್ತಿಲ್ಲ, ಅಷ್ಟೆ. ಕೆಲವು ಉದಾಹರಣೆಗಳನ್ನು ನೋಡೋಣ.
  ’ಜನಹಿತಕ್ಕಾಗಿ ಜೀವ ಬಲಿಕೊಡಲೂ ಸಿದ್ಧ’ ಅನ್ನುತ್ತಾರೆ ರಾಜಕಾರಣಿಗಳು.
  ಇಲ್ಲಿ, ’ಜನ’ ಅಂದರೆ ’ಅವರ ಜನ’ ಎಂದರ್ಥ. ಅವರ ಕುಟುಂಬ, ಬಂಧುಮಿತ್ರರು ಮತ್ತು ಅವರ ಸಹವರ್ತಿಗಳು ಈ ಜನರ ಹಿತಕ್ಕಾಗಿ ಕುರಿ, ಕೋಳಿ, ದನ ಮತ್ತು ಬಡ ಅಮಾಯಕರ ಜೀವಗಳನ್ನು ಬಲಿಕೊಡಲು ರಾಜಕಾರಣಿಗಳು ಸಿದ್ಧ.
  ’ಇನ್ನೈದು ವರ್ಷಗಳಲ್ಲಿ ಎಲ್ಲರ ಉದ್ಯೋಗ ಖಾತ್ರಿ’ ಎಂದು ಘೋಷಿಸುತ್ತಾರೆ ನಮ್ಮ ರಾಜಕೀಯ ನೇತಾರರು.
  ಈ ಮಾತಿನ ಅರ್ಥವೇನು ಗೊತ್ತೆ? ’ಈ ನಾಡಿನಲ್ಲಿ ಎಲ್ಲರೂ ಏನಾದರೊಂದು ಉದ್ಯೋಗ ಮಾಡುತ್ತಲೇ ಇದ್ದಾರೆ, ಸುಮ್ಮನೆ ಕುಳಿತಿಲ್ಲ ಎಂಬುದನ್ನು ಇನ್ನೈದು ವರ್ಷಗಳಲ್ಲಿ ಖಾತ್ರಿಪಡಿಸಿಕೊಳ್ಳಲಾಗುವುದು’ ಎಂದು ಈ ಮಾತಿನ ಅರ್ಥ. ’ಉದ್ಯೋಗ’ ಎಂಬ ಪದಕ್ಕೆ ನಿಘಂಟಿನಲ್ಲಿ ’ಕೆಲಸ’ ಎಂಬ ಅರ್ಥವೂ ಇರುವುದನ್ನು ನಾವು ಗಮನಿಸಬೇಕು. ಜನರು ಉದ್ಯೋಗಮಾಡುತ್ತಿರುವುದನ್ನು ಖಾತ್ರಿಮಾಡಿಕೊಳ್ಳುವ ಯೋಜನೆಯೇ ನಮ್ಮ ಘನಸರ್ಕಾರದ ’ಉದ್ಯೋಗ ಖಾತ್ರಿ ಯೋಜನೆ’. ಸರ್ಕಾರಿ ನುಡಿಗಟ್ಟುಗಳನ್ನು ಪರ್ಫೆಕ್ಟಾಗಿ ಪರಿಗ್ರಹಿಸುವಲ್ಲಿ ನಾವು ಪಲ್ಟಿಹೊಡೆಯುತ್ತಿದ್ದೇವೆ, ಅಷ್ಟೆ.
  ’ಇಪ್ಪತ್ತ್ನಾಲ್ಕು ಗಂಟೆ ವಿದ್ಯುತ್’ ಎನ್ನುತ್ತಿದ್ದರು ಕೇಸೀಶ್ವರಪ್ಪ ಎಂಬ ಸಚಿವರು. ನುಡಿದಂತೆ ನಡೆದರು ಅವರು. ಪಟ್ಟಣಿಗರಿಗೆ ವಾರದಲ್ಲಿ ಇಪ್ಪತ್ತ್ನಾಲ್ಕು ಗಂಟೆ ಮತ್ತು ಗ್ರಾಮಸ್ಥರಿಗೆ ತಿಂಗಳಿನಲ್ಲಿ ಇಪ್ಪತ್ತ್ನಾಲ್ಕು ಗಂಟೆ ವಿದ್ಯುತ್ ನೀಡಿದರು. ’ದಿನದಲ್ಲಿ ಇಪ್ಪತ್ತ್ನಾಲ್ಕು ಗಂಟೆ(ಯೂ) ವಿದ್ಯುತ್’ ಎಂದೇನೂ ಅವರು ಹೇಳಿರಲಿಲ್ಲವಷ್ಟೆ.
  ’ಇಪ್ಪತ್ತ್ನಾಲ್ಕು ಗಂಟೆ ನಿರಂತರ ವಿದ್ಯುತ್’ ಎಂದು ’ವಿದ್ಯುತ್‌ಸದೃಶ ಮಾತುಗಾರ’ ಮುಖ್ಯಮಂತ್ರಿ ಬೀಸೆಡೂರಪ್ಪನವರು ಕೇಸೀಶ್ವರಪ್ಪನವರಿಂದ ವಿದ್ಯುತ್ ಖಾತೆ ಮರಳಿ ಪಡೆದ ಹೊಸತರಲ್ಲಿ ಹೇಳಿದ್ದರು. ಹಾಗೇ ನಡೆದುಕೊಂಡರು ಕೂಡ. ತಮ್ಮ ಮತ್ತು ಸಚಿವರುಗಳ ಮನೆಗಳಿಗೆ ದಿನಕ್ಕೆ ಇಪ್ಪತ್ತ್ನಾಲ್ಕು ಗಂಟೆ ನಿರಂತರ ವಿದ್ಯುತ್ ಸರಬರಾಜಾಗುವಂತೆ ಅವರು ನೋಡಿಕೊಳ್ಳುತ್ತಿದ್ದಾರೆ. ’ಇಪ್ಪತ್ತ್ನಾಲ್ಕು ಗಂಟೆ ನಿರಂತರ ವಿದ್ಯುತ್ ಯಾರಿಗೆ?’ ಎಂದು ಜನರು ಕೇಳಲಿಲ್ಲವಾದ್ದರಿಂದ ಬೀಸೆಡೂರಪ್ಪನವರು ಬಿಡಿಸಿ ಹೇಳಲಿಲ್ಲ. ಕೇಳದಿದ್ದ ತಪ್ಪು ಜನಗಳದ್ದು.
  ’ಸಾಲದ ಬಾಧೆ ತಾಳಲಾರದೆ ಯಾವ ರೈತನೂ ಆತ್ಮಹತ್ಯೆ ಮಾಡಿಕೊಂಡಿಲ್ಲ.’ ಇದು ನಮ್ಮ ರಾಜಕಾರಣಿಗಳ ಇನ್ನೊಂದು ಸತ್ಯನುಡಿ.
  ಕೊಂಚ ಯೋಚಿಸಿ ನೋಡಿ. ರೈತನು ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ? ಸಾಲದ ಬಾಧೆ ತಾಳಲಾರದೆ ಅಲ್ಲ. ಸಾಲದ ಬಾಧೆಯನ್ನು ಆದ್ಯಂತ ತಾಳಿಕೊಂಡೇ ಸಾಗಿರುತ್ತಾನೆ ಆತ. ಸಾಲವನ್ನು ತೀರಿಸಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಸಾಲದ ಬಾಧೆ ತಾಳಿಕೊಳ್ಳುವುದಕ್ಕೂ ಸಾಲ ತೀರಿಸುವುದಕ್ಕೂ ಬೇರೆ ಬೇರೆಯೇ ಅರ್ಥಗಳಿವೆ ತಾನೆ? ರಾಜಕಾರಣಿಗಳ ಬಳಿ ಜನರು ಭಾಷೆಯನ್ನು ಕಲಿಯಬೇಕಾಗಿದೆ.
  ’ನಮ್ಮದು ಜಾತ್ಯತೀತವಾದಂಥ ರಾಷ್ಟ್ರ’ ಎಂದು ರಾಜಕಾರಣಿಗಳು ಸದಾಕಾಲ ಹೇಳುತ್ತಲೇ ಇರುತ್ತಾರೆ.
  ’ಇದೇನಿದು! ದೇಶದಲ್ಲಿ ಎಲ್ಲಿ ನೋಡಿದರೂ ಜಾತಿ-ಮತಗಳ ವೈಷಮ್ಯ ಭುಗಿಲೇಳುತ್ತಿರುತ್ತದೆ; ಜಾತಿ-ಜಾತಿಗಳ ನಡುವಿನ ದ್ವೇಷವು ಕಾದ ಕಾವಲಿಯಮೇಲೆ ಚಿಮುಕಿಸಿದ ನೀರಿನಂತೆ ಚುರ್ರನೆ ಮೇಲೆದ್ದು ಹೊಗೆಯಾಡುತ್ತದೆ; ಹೀಗಿರುವಾಗ, ’ನಮ್ಮದು ಜಾತ್ಯತೀತವಾದಂಥ ರಾಷ್ಟ್ರ’ ಎಂದರೆ ಒಪ್ಪುವುದಾದರೂ ಹೇಗೆ?’ ಎಂದು ಜನರು ಪ್ರಶ್ನಿಸುತ್ತಾರೆ. ಹಾಗೆ ಪ್ರಶ್ನಿಸುವವರು ರಾಜಕಾರಣಿಗಳ ಈ ನುಡಿಯನ್ನೊಂದಿಷ್ಟು ಬಗೆ ಬಗಿದು ಅರ್ಥಮಾಡಿಕೊಳ್ಳಬೇಕು.
  ’ಜಾತ್ಯತೀತವಾದಂಥ’ ಎಂಬುದನ್ನು ಪದವಿಗ್ರಹ (ಪದ ವಿಗ್ರಹ. ಪದವಿ ಗ್ರಹ ಅಲ್ಲ) ಮಾಡಿ ಅರ್ಥೈಸಬೇಕು. ಪದವಿಗ್ರಹ ಮಾಡಿದಾಗ ಇದು ’ಜಾತಿ+ಅತೀ+ತವಾದಂಥ’ ಎಂದಾಗುತ್ತದೆ. ’ತವಾ’ ಎಂದರೆ ’ಕಾವಲಿ’. ’ಜಾತಿ ಅತಿಯಾಗಿ, (ಕಾದ) ತವಾದಂಥ ರಾಷ್ಟ್ರ ನಮ್ಮದಾಗಿದೆ’ ಎಂದು ಸದರಿ ಮಾತಿನ ಅರ್ಥ. ರಾಜಕಾರಣಿಗಳು ಎಂದಿಗೂ ಸುಳ್ಳು ಮಾತಾಡುವುದಿಲ್ಲ.
  ’ನಾವು ಅಧಿಕಾರಕ್ಕೆ ಬಂದರೆ ಲೋಕಾಯುಕ್ತಕ್ಕೆ ಪರಮಾಧಿಕಾರ ನೀಡುತ್ತೇವೆ’ ಎನ್ನುತ್ತಾರೆ ರಾಜಕಾರಣಿಗಳು.
  ಯಾವಾಗ ನೀಡುತ್ತೇವೆ ಎಂದು ಕಾಲಮಿತಿಯನ್ನೇನೂ ಇವರು ನಮಗೆ ತಿಳಿಸಿರುವುದಿಲ್ಲವಷ್ಟೆ. ಯಾವಾಗ ಬೇಕಾದರೂ ನೀಡಬಹುದು. ಅಂದಮೇಲೆ, ಇವರು ಸತ್ಯವನ್ನೇ ನುಡಿಯುತ್ತಿದ್ದಾರೆಂದು ಅರ್ಥ. ನಾವು ಇವರನ್ನು ಅಧಿಕಾರಕ್ಕೆ ತರುತ್ತಲೇ ಇರಬೇಕು, ಇವರು ಲೋಕಾಯುಕ್ತಕ್ಕೆ ಪರಮಾಧಿಕಾರ ನೀಡುತ್ತಲೇ ಇರುತ್ತಾರೆ. ಇವರ ಆಶ್ವಾಸನೆ ಒಂದು ರೀತಿ ’ಸಾರ್ವಕಾಲಿಕ ಸತ್ಯ’. ಇದನ್ನು ಪ್ರಜೆಗಳಾದ ನಾವು ಅರಿಯಬೇಕು.
  ಅಧಿಕಾರಗ್ರಹಣ ಸಂದರ್ಭದಲ್ಲಿ ಪ್ರಮಾಣವಚನ ಸ್ವೀಕರಿಸುವಾಗಲಂತೂ ನಮ್ಮ ರಾಜಕಾರಣಿಗಳದು ಎಂಥ ಸತ್ಯಸಂಧತೆ! ಬಹುತೇಕರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುತ್ತಾರೆ. ಪ್ರಮಾಣಮಾಡಿದಂತೆ ಭವಿಷ್ಯದಲ್ಲಿ ಇವರು ನಡೆದುಕೊಳ್ಳುತ್ತಾರೆಯೇ ಇಲ್ಲವೇ ಎಂದು ಪರೀಕ್ಷಿಸುವ ಹಕ್ಕು ಆಗ ದೇವರಿಗೆ ಮಾತ್ರ ಇರುವಂಥದು. ಆದ್ದರಿಂದ ನಾವ್ಯಾರೂ ಇವರ ಸತ್ಯಾಸತ್ಯಗಳನ್ನು ಪರೀಕ್ಷಿಸಬಾರದು. ಅರ್ಥಾತ್, ನ್ಯಾಯಾಲಯಗಳಲ್ಲಿ ನೀಡುವಂತೆ, ಇವರಿಗೆ ’ಸಂಶಯದ ಲಾಭ’ (ಬೆನಿಫಿಟ್ ಆಫ್ ಡೌಟ್) ನೀಡಿ ಸುಳ್ಳಿನ ಆರೋಪದಿಂದ ಇವರನ್ನು ಖುಲಾಸೆಗೊಳಿಸತಕ್ಕದ್ದು. ಅಂದರೆ, ಇವರು ಸತ್ಯಸಂಧರೆಂದೇ ಪರಿಗಣಿಸತಕ್ಕದ್ದು.
  ಕೆಲವರು ರೈತರ ಅಥವಾ ಮಠಾಧೀಶರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುತ್ತಾರೆ. ಇನ್ನು ಕೆಲವರು ಕುರ್ಚಿ, ಮೇಜು, ಮೈಕುಗಳ ಹೆಸರುಗಳಲ್ಲಿಯೂ ಪ್ರಮಾಣವಚನ ಸ್ವೀಕರಿಸಲು ಮುಂದಾಗುತ್ತಾರೆ. ಉಟ್ಟು ಓರಾಟಗಾರರಾದರೆ ಎಮ್ಮೆ ಅಥವಾ ಕತ್ತೆಯ ಹೆಸರಲ್ಲೂ ಹೊಚನ ಸ್ವೀಕರಿಸಿದರೆ ಆಶ್ಚರ್ಯವಿಲ್ಲ. ಇವರೆಲ್ಲರ ಇಂಗಿತ ಇಷ್ಟೆ: ದೇವರ ಸಾಕ್ಷಿಯಾಗಿ ಪ್ರಮಾಣವಚನ ಸ್ವೀಕರಿಸಿದರೆ ಹೇಗೆ ದೇವರೆಂದಿಗೂ ಸಾಕ್ಷಿ ಹೇಳಲು ಆಗಮಿಸುವುದಿಲ್ಲವೋ ಅದೇ ರೀತಿ ನಾಳೆ ರೈತರು, ಮಠಾಧೀಶರು, ಕುರ್ಚಿ, ಮೇಜು, ಮೈಕು, ಎಮ್ಮೆ, ಕತ್ತೆ, ಯಾರೂ (ಇವರ ವಿರುದ್ಧ) ಸಾಕ್ಷಿ ಹೇಳಲು ಬರಬಾರದು. ಅರ್ಥಾತ್, ಇವರಿಗೂ ಬೆನಿಫಿಟ್ ಆಫ್ ಡೌಟ್....
  ಕೆಲವು ಸಚಿವರು ಮುಖ್ಯಮಂತ್ರಿಯವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುತ್ತಾರೆ. ಮುಖ್ಯಮಂತ್ರಿಗಳು ಎಷ್ಟು ಸತ್ಯವಂತರೋ ತಾವೂ ಅಷ್ಟೇ ಸತ್ಯವಂತರು ಎಂದು ಇದರರ್ಥ. ಈ ಸಚಿವರು ಸತ್ಯಸಂಧರು ಮಾತ್ರವಲ್ಲ, ಪ್ರಾಮಾಣಿಕರು ಕೂಡ.
  ಯಾವುದೇ ಪಕ್ಷದ ಪ್ರತಿಯೊಬ್ಬ ರಾಜಕಾರಣಿಯೂ ವಿರೋಧಿ ಪಕ್ಷದ ಪ್ರತಿಯೊಬ್ಬ ರಾಜಕಾರಣಿಯನ್ನೂ ’ಭ್ರಷ್ಟ, ದುಷ್ಟ, ಅರಿಷ್ಟ’ ಎಂಬಿತ್ಯಾದಿಯಾಗಿ ಬಣ್ಣಿಸುತ್ತಿರುತ್ತಾನೆ. ಈ ಬಣ್ಣನೆಯಂತೂ ಶೇಕಡಾ ಇನ್ನೂರು ಸತ್ಯ. ಏಕೆಂದರೆ, ಬಣ್ಣನೆಗೊಳಗಾದ ರಾಜಕಾರಣಿಯೇ ತನಗೆ ದೊರೆತ ಬಣ್ಣನೆಯನ್ನು ಅಲ್ಲಗಳೆಯುವುದಿಲ್ಲ, ಬದಲಾಗಿ, ’ನನ್ನ ಭ್ರಷ್ಟಾಚಾರದ ಬಗ್ಗೆ ಹೇಳ್ತಾನಲ್ಲಾ, ಆತನ ಭ್ರಷ್ಟಾಚಾರದ ಬಗ್ಗೆಯೂ ನನ್ನ ಬಳಿ ಸಾಕಷ್ಟು ದಾಖಲೆಗಳಿವೆ, ಸೂಕ್ತ ಸಮಯದಲ್ಲಿ ಅವುಗಳನ್ನು ಬಹಿರಂಗಗೊಳಿಸ್ತೀನಿ’, ಎಂದು ಪತ್ರಿಕಾ ಹೇಳಿಕೆ ನೀಡಿ ಸುಮ್ಮನಾಗುತ್ತಾನೆ. ಪ್ರತಿ ರಾಜಕಾರಣಿಯೂ ಈ ವಿಷಯದಲ್ಲಿ ’ಕ್ರಿಯೆ-ಪ್ರತಿಕ್ರಿಯೆ’ ಎರಡರಲ್ಲೂ ಭಾಗಿಯಾಗುವುದರಿಂದ ಈ ಎಲ್ಲ ಬಣ್ಣನೆ ಹಾಗೂ ಹೇಳಿಕೆಗಳು ಶೇಕಡಾ ಇನ್ನೂರರಷ್ಟು ಸತ್ಯವೆನ್ನಿಸಿಕೊಳ್ಳಲರ್ಹ. ರಾಜಕಾರಣಿಗಳೆಲ್ಲಾದರೂ ಸುಳ್ಳು ಹೇಳುವುದುಂಟೇ? ಇಲ್ಲವು. ಇಲ್ಲವು.
  ರಾಜಕಾರಣಿಗಳೆಲ್ಲರೂ ಸತ್ಯಹರಿಶ್ಚಂದ್ರನ ವಂಶದವರು. ಆದ್ದರಿಂದಲೇ ಅವರ ಕೈಗೆ ನಾವು ನಾಡಿನ ಆಡಳಿತದ ಚುಕ್ಕಾಣಿ ಕೊಟ್ಟಿದ್ದೇವೆ. ಕೊಟ್ಟಮೇಲೆ ಮುಗಿಯಿತು, ಚುಕ್ಕಾಣಿ ಹಿಡಿದವರು ’ನಡೆ’ ಎಂದ ಕಡೆ ನಾವು ಹೋಗಬೇಕು.
  ಪದ ಕುಸಿಯೆ?
  ನೆಲವಿಹುದು.