ಲಕ್ಷ್ಮೀನರಸಿಂಹ ದೇವಾಲಯ - ಭದ್ರಾವತಿ

4.42857

 ಪೂಜಿತ ದೇವರ ಅತಿ ಸುಂದರ ಮೂರ್ತಿಗಳನ್ನು ನೋಡಬೇಕಾದರೆ ಭದ್ರಾವತಿಯ ಲಕ್ಷ್ಮೀನರಸಿಂಹ ದೇವಾಲಯಕ್ಕೆ ಭೇಟಿ ನೀಡಬೇಕು. ಇಲ್ಲಿ ಅದ್ಭುತವಾಗಿ ಕೆತ್ತಲಾಗಿರುವ ೫ ಮೂರ್ತಿಗಳಿವೆ - ಲಕ್ಷ್ಮೀನರಸಿಂಹ, ವೇಣುಗೋಪಾಲ, ಪುರುಷೋತ್ತಮ, ಗಣೇಶ ಮತ್ತು ಶಾರದಾ. ಈ ಮೂರ್ತಿಗಳನ್ನು ಕೆತ್ತಿದ ಶಿಲ್ಪಿ ಡಕ್ಕಣಾಚಾರಿ.

ದೇವಾಲಯದೊಳಗೆ ಚಿತ್ರ ತೆಗೆಯುವುದನ್ನು ನಿಷೇಧಿಸಲಾಗಿದ್ದರೂ ಈ ಮೂರ್ತಿಗಳ ಅದ್ಭುತ ಕೆತ್ತನೆಯನ್ನು ಕಂಡು ಹೇಗಾದರೂ ಮಾಡಿ ಚಿತ್ರ ತೆಗೆದೇ ಅಲ್ಲಿಂದ ಹೊರಹೋಗುವುದು ಎಂದು ನಿರ್ಧರಿಸಿದೆ. ಆಗ ನನ್ನ ಮನಸ್ಸನ್ನು ಓದಿದವರಂತೆ ಅಲ್ಲಿನ ಅರ್ಚಕರು ’ದೇವರ ಚಿತ್ರಗಳನ್ನು ತೆಗೆದರೆ ಕೆಡುಕುಂಟಾಗುತ್ತದೆ ಮತ್ತು ಚಿತ್ರ ತೆಗೆದ ಎಷ್ಟೋ ಜನರಿಗೆ ಅಪಾರ ಹಾನಿಯುಂಟಾಗಿದೆ’ ಎಂದುಬಿಟ್ಟರು.ತ್ರಿಕೂಟ ಶೈಲಿಯಲ್ಲಿರುವ ದೇವಾಲಯವು ಮೂರ್ನಾಲ್ಕು ಅಡಿ ಎತ್ತರದ ಜಗತಿಯ ಮೇಲೆ ನಿರ್ಮಾಣಗೊಂಡಿದೆ. ಎರಡು ಕಂಬಗಳ ಸುಂದರ ಮುಖಮಂಟಪವಿದ್ದು ಇಕ್ಕೆಲಗಳಲ್ಲಿ ಕಲ್ಲಿನ ಆಸನಗಳಿವೆ. ದೇವಾಲಯದೊಳಗೆ ಕಾಲಿಟ್ಟರೆ ಸುಖನಾಸಿ ಮತ್ತು ನಂತರ ನವರಂಗ. ನಾಲ್ಕು ಕಂಬಗಳನ್ನು ಹೊಂದಿರುವ ನವರಂಗದಿಂದಲೇ ಎಲ್ಲಾ ದೇವರ ಮೂರ್ತಿಗಳನ್ನು ವೀಕ್ಷಿಸಬೇಕು. ಮೂರೂ ಗರ್ಭಗುಡಿಗಳು ಪ್ರತ್ಯೇಕ ಅಂತರಾಳವನ್ನು ಹೊಂದಿದ್ದು, ಅಂತರಾಳಗಳ ದ್ವಾರಗಳೂ ಏಕಪ್ರಕಾರವಾಗಿದ್ದು ಸುಂದರ ಜಾಲಂಧ್ರಗಳನ್ನು ಹೊಂದಿವೆ.

ಪ್ರಮುಖ ಗರ್ಭಗುಡಿಯಲ್ಲಿ ಸುಖಾಸನ ಶೈಲಿಯಲ್ಲಿ ಲಕ್ಷ್ಮೀಯೊಂದಿಗೆ ಲಕ್ಷ್ಮೀನರಸಿಂಹ ವಿರಾಜಮಾನನಾಗಿದ್ದಾನೆ. ದಕ್ಷಿಣದಲ್ಲಿರುವ ಗರ್ಭಗುಡಿಯಲ್ಲಿ ಗರುಡ ಪೀಠದ ಮೇಲೆ ವೇಣುಗೋಪಾಲನ ಮನಮೋಹಕ ಮೂರ್ತಿಯಿದೆ. ಮರವೊಂದರ ಕೆಳಗೆ ಕೊಳಲು ನುಡಿಸುತ್ತಿರುವ ಭಂಗಿಯಲ್ಲಿ ವೇಣುಗೋಪಾಲನ ಮೂರ್ತಿಯನ್ನು ಕೆತ್ತಲಾಗಿದ್ದು, ಒಂದು ಬದಿಯಲ್ಲಿ ಗೋಪಿಕಾ ಸ್ತ್ರೀಯರು ಮತ್ತು ಗೋವುಗಳು ಹಾಗೂ ಇನ್ನೊಂದು ಬದಿಯಲ್ಲಿ ಗೋಪಾಲರು ಮತ್ತು ಗೋವುಗಳು ಕೊಳಲಿನಿಂದ ಹೊರಹೊಮ್ಮುತ್ತಿರುವ ಇಂಪಾದ ಸಂಗೀತವನ್ನು ಮೈಮರೆತು ಕೇಳುತ್ತಿರುವುದನ್ನು ಮನೋಜ್ಞವಾಗಿ ಕೆತ್ತಲಾಗಿದೆ. ಉತ್ತರ ದಿಕ್ಕಿನಲ್ಲಿರುವ ಗರ್ಭಗುಡಿಯಲ್ಲಿ ಗರುಡ ಪೀಠದ ಮೇಲೆ ಪುರುಷೋತ್ತಮ ಮೂರ್ತಿಯಿದೆ. ವಿಷ್ಣುವನ್ನು ’ಪುರುಷೋತ್ತಮ’ ರೂಪದಲ್ಲಿ ತೋರಿಸಿರುವ ನಿದರ್ಶನಗಳು ಬಹಳ ವಿರಳ.

ಪ್ರಮುಖ ಗರ್ಭಗುಡಿಯ ಅಂತರಾಳದ ದ್ವಾರದ ಇಕ್ಕೆಲಗಳಲ್ಲಿರುವ ಕವಾಟಗಳಲ್ಲಿ ಗಣೇಶ ಮತ್ತು ಶಾರದಾದೇವಿಯ ಆಕರ್ಷಕ ಮೂರ್ತಿಗಳಿವೆ. ಈ ಐದೂ ಮೂರ್ತಿಗಳ ಚಿತ್ರ ತೆಗೆಯಲು ಆಗುತ್ತಿಲ್ಲವಲ್ಲ ಎಂದು ಬಹಳ ಚಡಪಡಿಸಿದೆ. ದೇವಾಲಯದ ನವರಂಗದಲ್ಲೇ ಬಹಳ ಸಮಯ ಕಳೆದು ಎಲ್ಲಾ ಮೂರ್ತಿಗಳನ್ನು ಕಣ್ತುಂಬಾ ನೋಡಿದೆ.

ಇಲ್ಲಿರುವ ಅರ್ಚಕರು ದೇವಾಲಯದ ಬಗ್ಗೆ ಮಾಹಿತಿ ನೀಡಿದರು. ನಾಲ್ಕು ತಲೆಮಾರುಗಳಿಂದ ಅವರ ಮನೆಯವರೇ ಇಲ್ಲಿ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ.  ದೇವಾಲಯದ ಮುಖ್ಯ ದ್ವಾರದ ಹೊರಗೆ ನಿಂತವರಿಗೆ, ಲಕ್ಷ್ಮೀನರಸಿಂಹನ ಕಾಲುಗಳು ತಮ್ಮ ತಲೆಯ ಮೇಲೆ ಇರುವಂತೆ ಮತ್ತು ನವರಂಗದಲ್ಲಿ ಕುಳಿತರೆ ವೇಣುಗೋಪಾಲನ ಮತ್ತು ಪುರುಷೋತ್ತಮನ ಕಾಲುಗಳು ತಲೆಯ ಮೇಲೆ ಇರುವಂತೆ ಭಾಸವಾಗುವ ರೀತಿಯಲ್ಲಿ ಈ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಎಲ್ಲಾ ಹೊಯ್ಸಳ ದೇವಾಲಯಗಳಲ್ಲೂ ಇದೇ ರೀತಿಯಲ್ಲಿ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆಯಂತೆ! ಮೇ ತಿಂಗಳಲ್ಲಿ ದೇವಾಲಯದ ವಾರ್ಷಿಕ ಜಾತ್ರೆ ನಡೆಯುತ್ತದೆ ಎಂದು ಅವರು ತಿಳಿಸಿದರು.

ದೇವಾಲಯದ ಹೊರಗೋಡೆಯಲ್ಲಿ ತುಂಬಾ ಭಿತ್ತಿಗಳಿದ್ದರೂ ಯಾವುದೂ ಆಕರ್ಷಕವಾಗಿಲ್ಲ. ಇದಕ್ಕೆ ಪ್ರಮುಖ ಕಾರಣವೆಂದರೆ ಅವುಗಳ ಅಪೂರ್ಣ ಕೆತ್ತನೆ. ಎಲ್ಲಾ ಭಿತ್ತಿಚಿತ್ರಗಳನ್ನು ಕೊನೆಯ ಹಂತದವರೆಗೆ ಕೆತ್ತಲಾಗಿದ್ದು, ನೈಜ ರೂಪ ನೀಡುವ ಅಂತಿಮ ಹಂತ ಬಂದಾಗ ಕೆತ್ತನೆ ನಿಲ್ಲಿಸಿದಂತೆ ಕಾಣಬರುತ್ತದೆ. ಕೆಲವು ಭಿತ್ತಿಗಳ ಪೀಠಭಾಗದಲ್ಲಿ ಒಂದು ಅಕ್ಷರವನ್ನು ಕೆತ್ತಿರುವುದು ಕಂಡುಬರುತ್ತದೆ. ಶಿಲ್ಪಿಯ ಹೆಸರಿನ ಮೊದಲ ಅಕ್ಷರವಿರಬಹುದೇ?

ದೇವಾಲಯದ ದಕ್ಷಿಣ ಭಾಗದಲ್ಲಂತೂ ಭಿತ್ತಿಗಳನ್ನು ಕೆತ್ತಲು ಚೌಕಟ್ಟನ್ನು ಅಂತಿಮಗೊಳಿಸಿ ಹಾಗೇ ಬಿಡಲಾಗಿದೆ. ಹೊರಗೋಡೆಯ ತಳಭಾಗದಲ್ಲಿ ಆರು ಪಟ್ಟಿಕೆಗಳೇನೋ ಇವೆ ಆದರೆ ಅವುಗಳಲ್ಲಿ ಯಾವ ಕೆತ್ತನೆಗಳೂ ಇಲ್ಲ.

ಶಿಖರಗಳ ರಚನೆಯೂ ಅಪೂರ್ಣವಾಗಿದೆ. ಮೂರು ತಾಳಗಳನ್ನಷ್ಟೇ ನಿರ್ಮಿಸಿ ಅಷ್ಟಕ್ಕೇ ಕೈಬಿಟ್ಟಂತೆ ತೋರುತ್ತದೆ. ತಾಳಗಳ ಬಳಿಕ ಇರುವ ತಲೆಕೆಳಗಾಗಿರುವ ಪದ್ಮದ ಸುಳಿವು ಮೂರೂ ಶಿಖರಗಳಲ್ಲಿಲ್ಲ. ಅವಸರದಲ್ಲಿ ಗುಮ್ಮಟದಂತಹ ರಚನೆ ಮಾಡಿ ಶಿಖರದ ಮೇಲ್ಭಾಗವನ್ನು ಮುಚ್ಚಿರುವುದು ಕಾಣಬರುತ್ತದೆ. ದೇವಾಲಯವನ್ನು ವೀಕ್ಷಿಸಿದಾಗ ವಿಚಿತ್ರವಾಗಿರುವ ಶಿಖರದ ತುದಿಭಾಗಗಳೇ ಎದ್ದುಕಾಣುತ್ತವೆ.

ದೇವಾಲಯದ ಹೊರಗೋಡೆಯ ಮೇಲಿನ ಸಾಲಿನಲ್ಲಿರುವ ಸಣ್ಣ ಸಣ್ಣ ಗೋಪುರಗಳನ್ನು ಮಾತ್ರ ಸರಿಯಾಗಿ ಕೆತ್ತಲಾಗಿದೆ. ಭಿತ್ತಿಚಿತ್ರಗಳ ಕೆತ್ತನೆಯನ್ನು ಪೂರ್ಣಗೊಳಿಸಿದ್ದಲ್ಲಿ ಅವುಗಳು ಅದ್ಭುತ ಕಲಾಕೃತಿಗಳಾಗುತ್ತಿದ್ದವು.

೧೩ನೇ ಶತಮಾನದ ಮಧ್ಯಭಾಗದಲ್ಲಿ ಈ ದೇವಾಲಯದ ನಿರ್ಮಾಣವಾಗಿದೆ ಎನ್ನಲಾಗುತ್ತದೆ. ಈ ಬಗ್ಗೆ ಸ್ಪಷ್ಟ ದಾಖಲೆಗಳಿಲ್ಲ. ಇನ್ನೊಂದು ಅಭಿಪ್ರಾಯವೇನೆಂದರೆ ಪುರಾತನ ಕಾಲದಿಂದಲೂ ಇದ್ದ ದೇವಾಲಯದಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಹೊಯ್ಸಳರು ಅಭಿವೃದ್ಧಿಪಡಿಸಿದರು ಎಂದು. ಭದ್ರಾವತಿಯನ್ನು ಮೊದಲು ವಂಕಿಪುರ ಮತ್ತು ತದನಂತರ ಬೆಂಕಿಪುರವೆಂದು ಕರೆಯಲಾಗುತ್ತಿತ್ತು. ಮಹಾಭಾರತದಲ್ಲಿ ಈ ದೇವಾಲಯದ ಬಗ್ಗೆ ವಂಕಿಪುರದ ದೇವಾಲಯವೆಂದು ಉಲ್ಲೇಖವಿದ್ದು, ಈ ದೇವಾಲಯ ಮೊದಲಿನಿಂದಲೂ ಅಸ್ತಿತ್ವದಲ್ಲಿದ್ದ ವಾದಕ್ಕೆ ಪುಷ್ಟಿ ನೀಡುತ್ತದೆ ಎಂಬ ವಾದವೂ ಇದೆ.

ಅದೇನೇ ಇರಲಿ. ಅದ್ಭುತವಾಗಿರುವ ಐದು ಮೂರ್ತಿಗಳನ್ನು ನೋಡುವ ಸಲುವಾಗಿಯಾದರೂ ಇಲ್ಲಿಗೆ ಭೇಟಿ ನೀಡಲೇಬೇಕು.

ಮಾಹಿತಿ: ಪ್ರಾಚ್ಯ ವಸ್ತು ಇಲಾಖೆ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಅದ್ಭುತ ದೇವಾಲಯ, ಉತ್ತಮ ವಿವರಣೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

+೧ ಅಚ್ಚುಕಟ್ಟಾದ ಲೇಖನ. ಈ ದೇವಸ್ಥಾನದ ಚಿತ್ರಣ ನಾನು ಇತ್ತೀಚೆಗಷ್ಟೇ ನೋಡಿದ ಸೋಮನಾಥಪುರದ ದೇವಸ್ಥಾನದ ನೆನೆಪನ್ನು ಮರುಕಳಿಸಿತು. ಅಲ್ಲೂ ಬಹುಪಾಲು ಇಂತಹುದೇ ವಿನ್ಯಾಸ. ಅಲ್ಲಿ ಕೇಶವ, ಜನಾರ್ದನ ಮತ್ತು ವೇಣುಗೋಪಾಲ ಮೂರ್ತಿಗಳು. ಆದರೆ ಪೂಜೆಯಿಲ್ಲ.... ಕಾರಣ ಎಲ್ಲಾ ಮೂರ್ತಿಗಳೂ ಒಂದಲ್ಲಾ ಒಂದು ಕಡೆ ಭಗ್ನವಾಗಿವೆ. ಪ್ರಭು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ತುಂಬಾ ಉಪಯುಕ್ತವಾದ ಲೇಖನ. ನಾನು ಒಂದೂವರೆ ತಿಂಗಳಿನ ಹಿಂದೆ ಈ ದೇವಾಲಯಕ್ಕೆ ಭೇಟಿ ನೀಡಿದ್ದೆ. ಒಳ್ಳೆ ಚಿತ್ರಗಳಿವೆ. ಒಳಭಾಗದ ಚಿತ್ರ ತೆಗೆಯಲು ಅನುಮತಿಯಿಲ್ಲ. ಮೇಲಾಗಿ ಅರ್ಚಕರ ಪ್ರಕಾರ ಹಾಗೇನಾದರೂ ಬಲವಂತವಾಗಿ ಚಿತ್ರ ತೆಗೆದರೆ ಒಳ್ಳೆಯದಾಗುವುದಿರಲಿ ಬದಲಾಗಿ ಕೆಡಕು ಖಂಡಿತವೆಂದರು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಅದು ಡಕ್ಕಣಾಚಾರಿ ಅಲ್ಲ ಜಕಣಾಚಾರಿ ಆಗಬೇಕು ಅಲ್ಲವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಉತ್ತಮ ಲೇಖನ, ಚಿತ್ರಗಳು ಸಹ ಆಕರ್ಷಕವಾಗಿದೆ.ಮಾಹಿತಿಗಾಗಿ ಧನ್ಯವಾದಗಲಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

+1
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಈ ವರ್ಣಚಿತ್ರವು ಅಲ್ಲಿಯದೆ !  ಲಕ್ಶ್ಮಿನರಸಿಂಹ ದೇವಾಲಯದ್ದು!

ನನ್ನಲ್ಲಿ ಕರ್ನಾಟಕದ ವಿವಿದ ಲಕ್ಷ್ಮಿನರಸಿಂಹ ದೇವಾಲಯದ ವಿಗ್ರಹಗಳೆ ವರ್ಣಚಿತ್ರಗಳಿವೆ ನೇರವಾಗಿ ಕ್ಯಾಮರದಲ್ಲಿ ತೆಗೆದಿರುವುದು

ಅವುಗಳನ್ನು ಪ್ರಕಟಿಸಲು ಸರಕಾರಿ ಇಲಾಖೆಗಳ ಅನುಮತಿ ಬೇಕೊ ಎನೊ ಎಂಬ ಸಂಶಯದಲ್ಲಿರುವೆ. ನಿಮ್ಮ ಸಲಹೆ ?

ಮೂಲ ವರ್ಣಚಿತ್ರ : ಕೆಂಗೇರಿ ಶ್ರೀ ಚಕ್ರಪಾಣಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸರ್ , ತುಂಬಾ ಸುಂದರವಾಗಿದೆ, ನಾನು ಶಿವಮೊಗ್ಗೆಯಲ್ಲಿ ಇದ್ದಾಗ ಒಂದೆರಡು ಬಾರಿ ಭೇಟಿ ನೀಡಿದ್ದೆ. ತುಂಬಾ ಚೆನ್ನಾಗಿದೆ ವಿವರಣೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಅನಂತೇಶ, ಧನ್ಯವಾದ. ಪ್ರಭುನಂದನ, ಸೋಮನಾಥಪುರ ಮತ್ತು ಭದ್ರಾವತಿಯ ದೇವಾಲಯಗಳು ತ್ರಿಕೂಟ ಶೈಲಿಯವು. ಹಾಗಾಗಿ ಅವು ಒಂದೇ ರೀತಿ ಕಾಣುತ್ತವೆ. ಆದರೆ ಸೋಮನಾಥಪುರದ ದೇವಾಲಯ ಉತ್ಕೃಷ್ಟ ಕೆತ್ತನೆಗಳನ್ನು ಒಳಗೊಂಡಿದೆ. ಧನ್ಯವಾದ. ಸಂತೋಷ್, ನನಗೆ ತಿಳಿದ ಪ್ರಕಾರ - ಡಕ್ಕಣಾಚಾರಿ. ರಜನಿ, ಮಂಜುನಾಥ್ ಧನ್ಯವಾದ. ಪಾರ್ಥಸಾರಥಿ, "ಎಲ್ಲಿ ಪ್ರಕಟಿಸಬೇಕು ಎಂಬ ಇರಾದೆ ಹೊಂದಿದ್ದೀರಿ....” ಎಂಬುವುದರ ಮೇಲೆ ಅನುಮತಿ ಬೇಕೋ ಬೇಡವೋ ಎನ್ನುವುದು ನಿರ್ಭರವಾಗಿದೆ. ನಿಮ್ಮದೇ ಒಂದು ಪುಸ್ತಕ ಹೊರತರಬೇಕೆಂದಿದ್ದರೆ ಪ್ರಾಚ್ಯ ವಸ್ತು ಇಲಾಖೆಯಿಂದ ಅನುಮತಿ ಪಡೆದರೆ ಉತ್ತಮ. (ಅನುಮತಿ ಪಡೆಯದೇ ಇದ್ದರೂ ಏನೂ ಹಾನಿಯಿಲ್ಲ, ಆದರೆ ಪಡೆದರೆ ಎಲ್ಲಾ ರೀತಿಯಿಂದಲೂ ಉತ್ತಮ) ಇಲಾಖೆ ಕೂಡಾ ಯಾವುದೇ ಕಿರುಕುಳ ನೀಡದೆ ಸಂತೋಷದಿಂದಲೇ ಅನುಮತಿ ನೀಡುತ್ತದೆ. ಅಲ್ಲಿ ಇಲ್ಲಿ ಒಂದು ಲೇಖನ ಪ್ರಕಟಿಸುವುದಿದ್ದರೆ ಅಥವಾ ಚಿತ್ರ ಪ್ರಕಟಿಸುವುದಿದ್ದರೆ ಅದಕ್ಕೆ ಅನುಮತಿಯ ಅವಶ್ಯವಿಲ್ಲ. ಧನ್ಯವಾದ. ಗೋಪಾಲ್, ಧನ್ಯವಾದ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಒಳ್ಳೆಯ ಪರಿಚಯ ಲೇಖನ. ಧನ್ಯವಾದಗಳು. ಭದ್ರಾವತಿಯಲ್ಲಿ ಮಾಧ್ಯಮಿಕಶಾಲೆಯಲ್ಲಿ ಓದುತ್ತಿದ್ದಾಗ ಈ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿದ್ದ ಆರೆಸ್ಸೆಸ್ ಶಾಖೆಗೆ ಹೋಗುತ್ತಿದ್ದ ದಿನಗಳು ನೆನಪಾದವು. ದೇವಸ್ಥಾನಕ್ಕೆ ಮತ್ತೆ ಹೋಗಿಬರಬೇಕೆಂಬ ಭಾವನೆ ಮೂಡಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸು0ದರವಾದ ದೇವಾಲಯ. ನಿಮ್ಮ ಪರಿಚಯ ಲೇಖನವು ಸು0ದರವಾಗಿದೆ ಸರ್. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ರಾಜೇಶ್.. ಅಂದದ ಚಿತ್ರಗಳೊಂದಿಗೆ ಸುಂದರ ಲೇಖನ. ಹಳೆಯ ದೇವಾಲಯಗಳನ್ನು ಹುಡುಕಿಕೊಂಡು ಸುತ್ತುವ, ಅಧ್ಯಯನ ಮಾಡುವ ನಿಮ್ಮ ಈ ಹವ್ಯಾಸ ನಿಜವಾಗಿಯೂ ಅಸೂಯೆ ಉಂಟುಮಾಡುವಂತದ್ದು! :). ಮೊನ್ನೆ ಹದಿನೈದು ದಿನಗಳ ಹಿಂದೆ ಹಾಸನ ಜಿಲ್ಲೆಯ ಬಾಗೇಶಪುರ ಮತ್ತು ಸುತ್ತಲಿನ ಹಳ್ಳಿಗಳಿಗೆ ಹೋದ ನನಗೆ, ಹತ್ತಿರದ ಹುಲ್ಲೆಕೆರೆ (ಅರಸಿಕೆರೆ ತಾಲೂಕ)ಯ ಚನ್ನಕೇಶವ (?) ದೇವಾಲಯ ನೋಡುವ ಅವಕಾಶ ಸಿಕ್ಕಿತ್ತು. ಹೊಸಬರಿಗೆ ದೇವಸ್ಥಾನ ಇರುವ ಕುರುಹು ಕಾಣುವುದೇ ಕಷ್ಟ. ಮನೆಗಳ ಸಂದಿಯಿಂದ ಹಾದುಹೋದರೆ ಸಿಗುವ ಈ ದೇವಾಲಯ ಹೊರಗಿನಿಂದ ಯಾವುದೇ ಕುತೂಹಲ ಹುಟ್ಟಿಸದು. ಹಾಕಲ್ಪಟ್ಟ ದೊಡ್ಡ ಕಟ್ಟಿಗೆ ಬಾಗಿಲಿನ ಕೀಲಿ ತೆಗೆಸಿ, ಪಾಗಾರದ ಒಳಗೆ ಹೆಜ್ಜೆ ಇಟ್ಟರೆ ಅದ್ಬುತ ಲೋಕದ ಅನಾವರಣ. ಹೊಯ್ಸಳ ಶೈಲಿಯ ಅತಿ ಸುಂದರ ಕೆತ್ತನೆಗಳನ್ನು ಹೊಂದಿದ ದೇವಾಲಯ ಇದು. ಪುರಾತತ್ವ ಇಲಾಖೆ ಸಂರಕ್ಷಿತ ಪ್ರದೇಶ ಎಂಬ ಬೋರ್ಡನ್ನು ಹುಗಿಸಿದ್ದರೂ, ಕೀಲಿ ಹಾಕಿ ನಿಜವಾಗಿ ರಕ್ಷಣೆ ಮಾಡುತ್ತಿರುವವ ಅಲ್ಲಿಯೇ ಹತ್ತಿರದಲ್ಲಿ ವಾಸಿಸುತ್ತಿರುವ ಒಬ್ಬ ಮನುಷ್ಯ. ನಮ್ಮ ಪ್ರವಾಸೋದ್ಯಮ ಇಲಾಖೆ, ಪುರಾತತ್ವ ಇಲಾಖೆಯ ಅಸಡ್ಡಾಳ ಕಾರ್ಯಶೈಲಿ ಒಂದು ಪುರಾತನ, ಬೆಲೆ ಕಟ್ಟಲಾಗದ ಆಸ್ತಿಯನ್ನು ಹೇಗೆ ಹಾಳಗೆಡವಬಲ್ಲದೆಂಬುದಕ್ಕೆ ಈ ದೇವಾಲಯ ಒಂದು ಜ್ವಲಂತ ಉದಾಹರಣೆ. ನೀವಿನ್ನೂ ಹೋಗಿಲ್ಲವಾದಲ್ಲಿ ನೀವು ತಪ್ಪದೇ ಭೇಟಿ ನೀಡಬೇಕಾದ ಸ್ಥಳಗಳಲ್ಲಿ ಹುಲ್ಲೆಕೆರೆಯೂ ಒಂದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಾಗರಾಜ್, ಸುಮಂಗಲಾ ಧನ್ಯವಾದ. ವಿಜಯ್, ಹುಲ್ಲೇಕೆರೆ ಚನ್ನಕೇಶವ ದೇವಾಲಯಕ್ಕೆ ಭೇಟಿ ನೀಡಿದ್ದೇನೆ. ಸುಂದರವಾದ ದೇವಾಲಯವದು. ನೀವಂದಂತೆ ಪ್ರಾಂಗಣ ಪ್ರವೇಶಿಸಿದ ಬಳಿಕವೇ ದೇವಾಲಯದ ಅದ್ಭುತ ನೋಟ ಅನಾವರಣಗೊಳ್ಳುತ್ತದೆ. ಧನ್ಯವಾದ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಮ್ಮೂರಿನ ದೇವಾಲಯದ ಸುಂದರ ಚಿತ್ರಗಳು ಹಾಗೂ ವಿವರಣೆ ಮುದ ಕೊಟ್ಟಿತು. ನಿಜಕ್ಕೂ ಅದ್ಭುತ ಶಿಲ್ಪದ ದೇವಾಲಯ. ಆದರೆ ತುಂಬಾ ಹಾಳು ಮಾಡಿದ್ದಾರೆ. ಪ್ರಾಕಾರದಲ್ಲಿರುವ ಚಿಕ್ಕ ಚಿಕ್ಕ ಸುಂದರ ಮೂರ್ತಿಗಳ ಮುಖಗಳನ್ನೇ ಜಜ್ಜಿ ವಿಕಾರಗೊಳಿಸಿದ್ದಾರೆ. ಮೂರ್ತಿಯ ಪಕ್ಕದಲ್ಲೇ ಎಣ್ಣೆ ದೀಪಗಳನ್ನು ಹಚ್ಚಿಟ್ಟು ಮಸಿ ಹಿಡಿಯುವಂತೆ ಮಾಡಿದ್ದಾರೆ. ಅತಿರೇಕದ ಭಕ್ತಿ ಕೂಡ ಸುಂದರ ಶಿಲ್ಪಕಲೆಯನ್ನು ಹೇಗೆ ಹಾಳುಗೆಡುವ ಬಲ್ಲದು ಎಂಬುದು ಇಲ್ಲಿಗೆ ಹೋದಾಗ ನಮಗೆ ಚೆನ್ನಾಗಿ ತಿಳಿಯುತ್ತದೆ. ನಮ್ಮೂರಿನಲ್ಲಿ ಇತಿಹಾಸ ಪ್ರಸಿದ್ಧ ದೇವಾಲಯ ಇದೆ ಎನ್ನುವ ಹೆಮ್ಮೆ ಒಂದೇ ನಮಗೆ... ಧನ್ಯವಾದಗಳು ನಿಮಗೆ.. ಇಷ್ಟು ಸುಂದರ ಚಿತ್ರಣ ನೀಡಿದ್ದಕ್ಕೆ. ಶ್ಯಾಮಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶ್ಯಾಮಲಾ, ಭಕ್ತರ ಎಣ್ಣೆ ಅಭಿಷೇಕ ಪ್ರೀತಿಯಿಂದ ಹಲವಾರು ದೇವಾಲಯಗಳಲ್ಲಿ ಸುಂದರ ಮೂರ್ತಿಗಳು ಅವನತಿಗೊಂಡಿರುವುದು ಕಾಣಬರುತ್ತದೆ. ಭದ್ರಾವತಿಯ ದೇವಾಲಯದಲ್ಲಿ ಎಣ್ಣೆ ಪ್ರಭಾವದಿಂದ ಒಂದೆರಡು ಮೂರ್ತಿಗಳು ತಮ್ಮ ನೈಜ ರೂಪವನ್ನೇ ಕಳಕೊಂಡಿವೆ. ಧನ್ಯವಾದ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.