ಲೋಕಾಯುಕ್ತ ದಾಳಿ - ನನ್ನ ಅನುಭವಗಳು

4

 ಘಟನೆ ೧:

     ಇದು ಮೈಸೂರು ತಾಲ್ಲೂಕು ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ೧೯೮೧ರಲ್ಲಿ ನಡೆದ ಒಂದು ಘಟನೆ. ನಾನು ಕುಳಿತಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಕಸಬಾ ರೆವಿನ್ಯೂ ಇನ್ಸ್‌ಪೆಕ್ಟರ್ ಕೇಶವ (ಹೆಸರು ಬದಲಿಸಿದೆ) ಕಛೇರಿಗೆ ಬಂದಾಗ ಕುಳಿತು ಕೆಲಸ ಮಾಡುತ್ತಿದ್ದ ಸ್ಥಳವಿತ್ತು. ಒಮ್ಮೆ ಒಬ್ಬರು ಯಾವುದೋ ಧೃಢೀಕರಣ ಪತ್ರದ ಸಲುವಾಗಿ ಕೇಶವನನ್ನು ಕಾಣಲು ಬಂದಿದ್ದರು. ಕೆಲಸ ಮಾಡಿಕೊಡಲು ಕೋರಿದ ವ್ಯಕ್ತಿ ಕೇಶವನಿಗೆ ೫೦ ರೂಪಾಯಿ ಕೊಟ್ಟರು. ಕೇಶವ ತಿರಸ್ಕಾರದಿಂದ ಆ ನೋಟನ್ನು ಅವರ ಮುಖಕ್ಕೇ ವಾಪಸು ಎಸೆದ. ನೋಟು ಕೆಳಗೆ ಬಿತ್ತು. ಆ ವ್ಯಕ್ತಿ ನೋಟನ್ನು ತೆಗೆದುಕೊಂಡು ಕಣ್ಣಿಗೆ ಒತ್ತಿಕೊಂಡು ಕೇಶವನನ್ನು ಉದ್ದೇಶಿಸಿ "ಹಣವನ್ನು ಹೀಗೆಲ್ಲಾ ಎಸೆಯಬೇಡಿ. ಅದು ಲಕ್ಷ್ಮಿ. ನಿಮಗೆ ಅನ್ನ ಕೊಡುವ ದೇವರು. ನಿಮಗೆ ಹೆಚ್ಚು ಹಣ ಬೇಕಾದರೆ ಕೇಳಿ. ಕೊಡುತ್ತೇನೆ. ಐವತ್ತಲ್ಲದಿದ್ದರೆ ಐನೂರು ಕೊಡುತ್ತೇನೆ. ಈಗ ನನ್ನಲ್ಲಿ ನೂರು ರೂ. ಇದೆ. ಉಳಿದ ನಾಲ್ಕು ನೂರು ನಾಳೆ ಬೆಳಿಗ್ಗೆ ಕೊಡುತ್ತೇನೆ. ಅದರೆ ಒಂದು ಷರತ್ತು. ನಾಳೆ ಬೆಳಿಗ್ಗೆ ಬರುವಾಗ ಯಾವುದೇ ನೆಪ ಹೇಳದೆಂತೆ ನನ್ನ ಕೆಲಸ ಆಗಿರಬೇಕು" ಎಂದು ಹೇಳಿ ನೂರು ರೂ. ಕೊಟ್ಟರು. ಕೇಶವ ಹಣ ಇಟ್ಟುಕೊಂಡ. ವ್ಯಕ್ತಿ ಮರುದಿನ ಬರುವುದಾಗಿ ಹೊರಟುಹೋದರು. ಮರುದಿನ ಬೆಳಿಗ್ಗೆ -ಸುಮಾರು ೧೦-೪೫ ಗಂಟೆ ಇರಬಹುದು_ ಆ ವ್ಯಕ್ತಿ ಬಂದರು. "ಹೇಳಿದ ಕೆಲಸ ಆಗಿದೆಯಾ?" ಎಂದು ಕೇಳಿದರು. ಕೇಶವ ಆಗಿದೆಯೆಂದಾಗ ನಾಲ್ಕು ನೂರು ರೂ. ಕೊಟ್ಟರು. ಕೇಶವ ಆ ಹಣ ಪಡೆಯುತ್ತಿದ್ದಂತೆ, ಹಣ ಅವನ ಕೈಯಲ್ಲಿದ್ದಂತೆ ಧಿಢೀರನೆ ಇಬ್ಬರು ಹಾರಿಬಂದು ಕೇಶವನ ಎರಡೂ ಕೈಗಳನ್ನು ಹಿಡಿದುಕೊಂಡರು. ಅವರು ಲೋಕಾಯುಕ್ತ ಪೋಲೀಸರಾಗಿದ್ದರು. ಕೇಶವ ಬಿಳಿಚಿಹೋಗಿದ್ದ, ಮರಗಟ್ಟಿಹೋಗಿದ್ದ. ಅನುಕಂಪದ ಆಧಾರದಲ್ಲಿ ನೇಮಕ ಹೊಂದಿದ್ದ ಆತ ಕೆಲಸಕ್ಕೆ ಸೇರಿ ಎರಡು ವರ್ಷಗಳಾಗಿತ್ತಷ್ಟೇ. ಆತನ ದುರಾಸೆ, ಅಹಂಕಾರ ಅವನಿಗೇ ಮುಳುವಾಗಿತ್ತು.

ಘಟನೆ ೨: 

     ೧೯೮೪ರಲ್ಲಿ ಹೊಳೆನರಸಿಪುರದ ಹಳ್ಳಿಮೈಸೂರು ನಾಡಕಛೇರಿಯಲ್ಲಿ ನಡೆದ ಪ್ರಸಂಗವಿದು. ಆಗ ಪಹಣಿ ಪ್ರತಿಯನ್ನು ಕೈಯಲ್ಲಿ ಬರೆದು ಕೊಡುವ ಪದ್ಧತಿಯಿತ್ತು. ನಕಲು ಶುಲ್ಕವನ್ನು ಪಡೆದು ಅದನ್ನು ನಂತರ ಜಮಾ ಮಾಡುವ ಕ್ರಮವಿತ್ತು. ಒಂದು ಪಹಣಿಗೆ ಒಂದು ರೂ. ಶುಲ್ಕ. ಆದರೆ ಜನರು ಸಾಮಾನ್ಯವಾಗಿ ೫ ರಿಂದ ೧೦ ರೂ. ಕೊಟ್ಟು ನಕಲು ಪಡೆಯುತ್ತಿದ್ದರು. ಕೊಡದಿದ್ದವರಿಂದ ಗುಮಾಸ್ತ ಕೇಳಿ ಹೆಚ್ಚು ಪಡೆಯುವುದು ಎಲ್ಲರಿಗೂ ತಿಳಿದದ್ದೇ. ನಿರೀಕ್ಷಿಸಿದ ಮೊಬಲಗು ಸಿಗದಿದ್ದಾಗ ನಕಲು ಕೊಡಲು ಸತಾಯಿಸುವುದು, ತಡ ಮಾಡುವುದು ಆಗುತ್ತಿತ್ತು. ಒಂದು ದಿನ ಒಬ್ಬರು ಪಹಣಿ ನಕಲು ಕೇಳಲು ಬಂದವರು ೧೦ ರೂ. ಅನ್ನು ಗುಮಾಸ್ತ ಚಿಕ್ಕಯ್ಯರ ಬಳಿಯಿದ್ದ ದಪ್ಪ ಪಹಣಿ ಪುಸ್ತಕದ ಕೆಳಗೆ ಇಟ್ಟು ನಸುನಕ್ಕು ಹೊರಗೆ ಹೋದರು. ಕೆಲವೇ ನಿಮಿಷಕ್ಕೆ ಒಳನುಗ್ಗಿದ ಲೋಕಾಯುಕ್ತ ಪೋಲಿಸರನ್ನು ಕಂಡು ಗುಮಾಸ್ತ ಬೆಚ್ಚಿಬಿದ್ದ. ಅವನು ಹಣವನ್ನು ಮುಟ್ಟಿರಲಿಲ್ಲ. ಗುಮಾಸ್ತರ ಎರಡೂ ಕೈಗಳನ್ನು ಪೋಲಿಸರು ಹಿಡಿದುಕೊಂಡಾಗ ಅವನು ತನ್ನ ಕೈಗಳನ್ನು ಬೆನ್ನ ಹಿಂದಿರಿಸಿ ಬಿಗಿಯಾಗಿ ಮುಷ್ಟಿ ಕಟ್ಟಿದ್ದ. ತಾನು ಹಣ ಪಡೆದಿಲ್ಲವೆಂದು ಒತ್ತಿ ಒತ್ತಿ ಹೇಳುತ್ತಿದ್ದ. ಆಗ ಒಳಬಂದ ಲೋಕಾಯುಕ್ತ ಇನ್ಸ್ ಪೆಕ್ಟರರು ಅವರು ಹಣ ಮುಟ್ಟಿಲ್ಲವೆಂದು ಹೇಳುತ್ತಿದ್ದಾರೆ. ಕೈಬಿಡಿ ಎಂದು ಸಹಾಯಕ ಪೋಲಿಸರ ಕೈಬಿಡಿಸಿ ತಮ್ಮನ್ನು ಲೋಕಾಯುಕ್ತ ಇನ್ಸ್‌ಪೆಕ್ಟರ್ ಎಂದು ಪರಿಚಯಿಸಿಕೊಂಡು ಗುಮಾಸ್ತರ ಕೈ ಕುಲುಕಿದರು. "ಹಣ ಪಡೆಯದಿದ್ದ ಮೇಲೆ ಹೆದರಿಕೆಯೇಕೆ? ಪರೀಕ್ಷೆ ಮಾಡೋಣ. ಈ ದ್ರವದಲ್ಲಿ ಕೈ ಅದ್ದಿ. ದ್ರವ ಬಣ್ಣಕ್ಕೆ ತಿರುಗದಿದ್ದರೆ ಬಿಟ್ಟುಬಿಡುತ್ತೇವೆ" ಎಂದು ಆತನ ಕೈಯನ್ನು ಆಗ ಸಿದ್ಧಪಡಿಸಿದ ದ್ರವದಲ್ಲಿ ಅದ್ದಿಸಿದಾಗ ಅದು ಪಿಂಕ್ ಬಣ್ಣಕ್ಕೆ ತಿರುಗಿತು. ಆತ ಹಣ ಮುಟ್ಟಿರದಿದ್ದರೂ ದ್ರವ ರಾಸಾಯನಿಕ ಲೇಪಿಸಿದ ನೋಟು ಮುಟ್ಟಿದವರಂತೆ ಬಣ್ಣಕ್ಕೆ ತಿರುಗಿದ್ದು ಆಶ್ಚರ್ಯಕರವಾಗಿತ್ತು. ವಾಸ್ತವವಾಗಿ ಇನ್ಸ್ ಪೆಕ್ಟರರು ಗುಮಾಸ್ತರ ಕೈಕುಲುಕಿ ಗಟ್ಟಿಯಾಗಿ ಹಿಡಿದುಕೊಂಡಾಗ ಗುಮಾಸ್ತರ ಕೈಗೆ ಇನ್ಸ್ ಪೆಕ್ಟರರ ಕೈಯಿಂದ ರಾಸಾಯನಿಕ ಲೇಪನ ವರ್ಗಾವಣೆಯಾಗಿತ್ತು. ಹಣ ಮುಟ್ಟದಿದ್ದರೂ ಬಳಿಯಿದ್ದ ಮೇಜು, ಬೀರು, ಇತ್ಯಾದಿಗಳಲ್ಲಿ ಹಣ ಪತ್ತೆಯಾದರೂ ಪ್ರಕರಣ ದಾಖಲಿಸಲು ಸಾಕಿತ್ತು. ಆದರೆ ಕೇಸನ್ನು ಗಟ್ಟಿ ಮಾಡಲು ಈ ತಂತ್ರ ಬಳಕೆಯಾಗಿತ್ತು. ಹಲವಾರು ವರ್ಷಗಳ ಕಾಲ ಪ್ರಕರಣ ನಡೆದು ಗುಮಾಸ್ತ ನಿರ್ದೋಷಿಯೆಂಬ ಆದೇಶ ನ್ಯಾಯಾಲಯದಿಂದ ಹೊರಬಂದಿತ್ತು. 

ಘಟನೆ ೩:

     ಬೇಲೂರು ತಾಲ್ಲೂಕು ಕಛೇರಿಯಲ್ಲಿ (೧೯೮೭-೮೮ರಲ್ಲಿರಬಹುದು) ಸಹೋದ್ಯೋಗಿ ಶಿರಸ್ತೇದಾರರು, ಗುಮಾಸ್ತರು ಮತ್ತು ಇಬ್ಬರು ಗ್ರಾಮಸ್ಥರು ಕಛೇರಿಯ ಹಿಂಬಾಗಿಲ ಸಮೀಪದಲ್ಲಿ ನಿಂತು ಮಾತನಾಡುತ್ತಿದ್ದುದು ನನಗೆ ನಾನು ಕುಳಿತ ಸ್ಥಳದಿಂದ ಕಾಣಿಸುತ್ತಿತ್ತು. ನಂತರ ಅವರುಗಳು ಸಮೀಪದ ಹೋಟೆಲಿಗೆ ಹೋಗಿ ಕಾಫಿ ಕುಡಿದು ಬಂದರು. ಆ ಶಿರಸ್ತೇದಾರರು ವಾಪಸು ಬಂದು ಕುರ್ಚಿಯಲ್ಲಿ ಕುಳಿತದ್ದೇ ತಡ ಧಡಕ್ಕೆಂದು ಬಂದ ಲೋಕಾಯುಕ್ತ ಪೋಲಿಸರು ಅವರ ಎರಡೂ ಕೈಗಳನ್ನು ಬಿಗಿಯಾಗಿ ಹಿಡಿದುಬಿಟ್ಟರು. ಶಿರಸ್ತೇದಾರರು, ಅಕ್ಕಪಕ್ಕದ ಗುಮಾಸ್ತರುಗಳು ಬೆಚ್ಚಿಬಿದ್ದರು. ಕೆಲವೇ ನಿಮಿಷದಲ್ಲಿ ಲೋಕಾಯುಕ್ತ ದಾಳಿಯಾಗಿದೆಯೆಂದು ಅರಿವಿಗೆ ಬಂತು. ಶಿರಸ್ತೇದಾರರು ಮಾತನಾಡುವ ಸ್ಥಿತಿಯಲ್ಲೇ ಇರಲಿಲ್ಲ. ವಾಸ್ತವವಾಗಿ ಹಿಂದೆ ಇದ್ದ ಶಿರಸ್ತೇದಾರರು ಈ ಪ್ರಕರಣದಲ್ಲಿ ಲಂಚ ಕೊಟ್ಟವರನ್ನು ಸತಾಯಿಸಿದ್ದರು. ಕೆಲವೇ ದಿನಗಳ ಹಿಂದೆ ಅವರು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಈಗ ಸಿಕ್ಕಿಬಿದ್ದ ಶಿರಸ್ತೇದಾರರು ಕೆಲಸ ಮಾಡಲು ಬಂದಿದ್ದರು. ದೂರುದಾರರು ಗುಮಾಸ್ತರಿಗೆ ಲಂಚ ಕೊಟ್ಟಾಗ ಅವರು ಶಿರಸ್ತೇದಾರರಿಗೇ ಕೊಡಿ ಎಂದು ಹೇಳಿ ಶಿರಸ್ತೇದಾರರಿಗೆ ಕೊಡಿಸಿದ್ದರಂತೆ. ಶಿರಸ್ತೇದಾರರ ಪ್ಯಾಂಟಿನಲ್ಲಿ ಹಣ ಸಿಕ್ಕಿತು. ಗುಮಾಸ್ತರೊಬ್ಬರ ಮನೆಯಿಂದ ಲುಂಗಿ ತರಿಸಿಕೊಟ್ಟು ಶಿರಸ್ತೇದಾರರ ಪ್ಯಾಂಟನ್ನೂ ಸಹ ಅಮಾನತ್ತು ಪಡಿಸಿಕೊಂಡರು. ಈ ಹಂತದಲ್ಲಿ ಪೋಲಿಸರ ವರ್ತನೆಯೇ ಬದಲಾಗಿತ್ತು. ಅವರನ್ನು ಏಕವಚನದಲ್ಲಿ ಗದರಿಸುತ್ತಿದ್ದಲ್ಲದೇ ಕಪಾಳಕ್ಕೂ ಹೊಡೆದಿದ್ದರು. ಈ ಶಿರಸ್ತೇದಾರರಿಗೆ ರಾಜಕೀಯದವರ ಬೆಂಬಲವೂ ಇದ್ದಿದ್ದರಿಂದ ಕಛೇರಿಯಲ್ಲಿ ಬಹಳ ಜನ ಕೂಡಿ ಗಲಾಟೆ ಮಾಡಲು ಪ್ರಾರಂಭಿಸಿದರು. ದೂರು ನೀಡಿದ ವ್ಯಕ್ತಿಯನ್ನೂ ಜನರು ಹಿಗ್ಗಾಮುಗ್ಗಾ ಥಳಿಸಿದರು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಲೋಕಾಯುಕ್ತ ಪೋಲಿಸರು ಸ್ಥಳೀಯ ಪೋಲಿಸರ ಸಹಾಯ ಪಡೆದು ಜನರನ್ನು ಚದುರಿಸಿ ಪ್ರಕರಣ ದಾಖಲಿಸಿದರು. ಹಲವಾರು ವರ್ಷಗಳ ಕಾಲ ಪ್ರಕರಣ ನಡೆದು ಸಾಬೀತು ಪಡಿಸಲು ಪ್ರಾಸಿಕ್ಯೂಷನ್ ವಿಫಲರಾದರೆಂದು ನ್ಯಾಯಾಲಯದ ಆದೇಶ ಹೊರಬಂದಿತು. 


     ಇಂತಹ ಹಲವಾರು ಪ್ರಕರಣಗಳನ್ನು ನನ್ನ ಸೇವಾವಧಿಯಲ್ಲಿ ಗಮನಿಸಿದ್ದೇನೆ. ಕೆಲವು ಪ್ರಕರಣಗಳಲ್ಲಿ ಲಂಚ ಪಡೆದವರು ಸೇವೆಯಿಂದ ವಜಾಗೊಂಡಿದ್ದಾರೆ. ಮೇಲಿನ ಮೂರನೆಯ ಘಟನೆ ನಡೆದ ನಂತರದಲ್ಲಿ ನಾನು ಗಮನಿಸಿದ ಬೆಳವಣಿಗೆಗಳನ್ನು ಹಂಚಿಕೊಳ್ಳಲೇಬೇಕು. ತಿಂಗಳಿಗೊಮ್ಮೆ ಲೋಕಾಯುಕ್ತ ಅಧಿಕಾರಿಗಳು ಪ್ರವಾಸಿ ಮಂದಿರಕ್ಕೆ ಬಂದು ತಾಲ್ಲೂಕಿಗೆ ಸಂಬಂಧಿಸಿದ ದೂರುಗಳ ಬಗ್ಗೆ ಪರಿಶೀಲಿಸಲು, ವಿಚಾರಿಸಲು ಬರುತ್ತಿದ್ದರು. ಅಧಿಕಾರಿಗಳನ್ನು, ದೂರುದಾರರನ್ನು ಕರೆಸಿ ವಿಚಾರಿಸುತ್ತಿದ್ದರು. ಸಾಯಂಕಾಲ ಕಛೇರಿ ಅವಧಿಯ ನಂತರದಲ್ಲಿ ತಾಲ್ಲೂಕಿನ ಹಲವು ಅಧಿಕಾರಿಗಳು ಪ್ರವಾಸಿ ಮಂದಿರಕ್ಕೆ ಹೋಗಿ ಕಪ್ಪಕಾಣಿಕೆ ಸಲ್ಲಿಸಿಬರುತ್ತಿದ್ದರು. ಈ ಕೆಲಸ ನಿಯಮಿತವಾಗಿ ಪ್ರತಿತಿಂಗಳೂ ನಡೆಯುತ್ತಿತ್ತು. ನಾನು ಗಮನಿಸುವ ಮೊದಲಿನಿಂದಲೂ ಈ ಪದ್ಧತಿ ಇದ್ದಿರಬಹುದು. ಈ ಪ್ರಕರಣದ ನಂತರ ಮಾಮೂಲು ಒಪ್ಪಿಸುವ ಅಧಿಕಾರಿಗಳ ಸಂಖ್ಯೆ ಹೆಚ್ಚಿತ್ತು. ಕಪ್ಪ ಒಪ್ಪಿಸಿದ ಅಧಿಕಾರಿಗಳು ನಿಶ್ಚಿಂತರಾಗಿ 'ಅಭಯ' ಪಡೆದು ಹಿಂತಿರುಗುತ್ತಿದ್ದರು. 

 
 
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ತಮ್ಮ ಅನುಭವವನ್ನು ಮಧುಕರರಮ್ತೆ ಟೆಲಿಪೋನ್ ಮಾಡಿ ಕನ್ನಡಪ್ರಭವೊ ಎಲ್ಲಿಯಾದರೊ ಹ0ಚಿಕೊ0ಡಲ್ಲಿ ಲೋಕಾಯುಕ್ತವನ್ನು ಮುಚ್ಚಲು ಆಸಕ್ತರಾಗಿರುವ ಬಿಜೆಪಿ ಗೆ ಹಾಲುಕುಡಿದಮ್ತೆ ಅನ್ನುವುದು ಹಾಸ್ಯದ ಪ್ರತಿಕ್ರಿಯೆಯಾಗಬಹುದು ... ಆದರೆ . ಬ್ರಷ್ಟಾಚಾರದ ಕಬ0ಧಬಾಹುವಿನ ಉದ್ದ ಮತ್ತು ಹರವನ್ನು ನೆನೆಸಿದಾಗ ಚಿ0ತೆಯಾಗುತ್ತದೆ. ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಲೋಕಾಯುಕ್ತದ ಬಗ್ಗೆ ನನ್ನ ಅತಿಕಹಿಯಾದ ಅನುಭವವನ್ನು ಸದ್ಯದಲ್ಲಿಯೇ ಹಂಚಿಕೊಳ್ಳುವೆ. ನಾನು ಸಂಪದ ಹೊರತುಪಡಿಸಿ ನನ್ನ ಲೇಖನಗಳನ್ನು ಬೇರೆ ಎಲ್ಲಿಗೂ ಪ್ರಕಟಣೆಗೆ ಕಳುಹಿಸಿಲ್ಲ. ನಿಮ್ಮ ಅನಿಸಿಕೆಗೆ ಧನ್ಯವಾದಗಳು, ಪಾರ್ಥರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

>>>ತಾಲ್ಲೂಕಿನ ಹಲವು ಅಧಿಕಾರಿಗಳು ಪ್ರವಾಸಿ ಮಂದಿರಕ್ಕೆ ಹೋಗಿ ಕಪ್ಪಕಾಣಿಕೆ ಸಲ್ಲಿಸಿಬರುತ್ತಿದ್ದರು. ಈ ಕೆಲಸ ನಿಯಮಿತವಾಗಿ ಪ್ರತಿತಿಂಗಳೂ ನಡೆಯುತ್ತಿತ್ತು. :( ಕವಿನಾಗರಾಜರೆ, ಲೋಕಾಯುಕ್ತರ ಮೇಲೇ ದಾಳಿ ಮಾಡಿದಿರಲ್ಲಾ!? -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವ್ಯವಸ್ಥೆ ಹಾಗಿದೆ. ಆದರೆ ಲೋಕಾಯುಕ್ತ ಸಂಸ್ಥೆ ಇರಬೇಕು, ಸರಿಯಾದ ರೀತಿಯಲ್ಲಿರಬೇಕು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ತಮ್ಮ ಮಾತು ಸತ್ಯ ನಾಗರಾಜ್ ಸಾರ್, ವ್ಯವಸ್ಥೆ ಬದಲಾಗಬೇಕು. ಭ್ರಷ್ಟಾಚಾರ, ಅದು ಸಣ್ಣ ಸಸಿಯಾಗಿದ್ದಾಗಲೆ ಕುಡಿ ಚಿವುಟಿ ಹಾಕಬೇಕಿತ್ತು. ಆದರೆ ಅದೀಗ ಹೆಮ್ಮರವಾಗಿದೆ ಬರಿ ರೆಂಬೆ ಕೊಂಬೆಗಳನ್ನು ಕಡಿದರೆ ಉಪಯೋಗವಿಲ್ಲ. ಆ ರಾಕ್ಷಸನ ತಲೆ ಕಡಿದು ಬುಡದ ಸಮೇತ ಕಿತ್ತೊಗೆಯಬೇಕು. ಆದರ ವಿರುಧ್ಧ ದಾಳಿ ಏಕ ಕಾಲಕ್ಕೆ ಎಲ್ಲ ಕಡೆಯಿಂದ ಪ್ರಾರಂಭವಾಗಬೇಕು. ಸಮಾಜ ಮನಸ್ಸು ಮಾಡಬೇಕು. ‍ಧನ್ಯವಾದಗಳು ರಾಮಮೋಹನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದ, ರಾಮಮೋಹನರೇ. ವ್ಯವಸ್ಥೆ ಎಷ್ಟು ಬಲಿತಿದೆಯೆಂದರೆ ಭ್ರಷ್ಠಾಚಾರದ ವಿರುದ್ಧ ಹೋರಾಡುವವರ ವಿರುದ್ಧ ಏಕಕಾಲದಲ್ಲಿ ಎಲ್ಲ ಕಡೆಯಿಂದ ಪೆಟ್ಟುಗಳು ಬೀಳುತ್ತವೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಮ್ಮ ಮಾತು ನಿಜ ನಾಗರಾಜ್ ರವರೇ ಈಗಿನ ವ್ಯವಸ್ಥೆಯಲ್ಲಿ ಪ್ರಮಾಣಿಕವಾಗಿ ಸರ್ಕಾರಿ ಕೆಲಸ ನಿರ್ವಹಿಸುವವರಿಗೆ ಬಹಳ ಕಷ್ಟಗಳು ಎದುರಾಗುತ್ತದೆ ...ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಅಣ್ಣಾ ಹಜಾರೆಯವರ ಹೋರಾಟದ ಮುಂಚೂಣಿಯಲ್ಲಿರುವವರ ಮೇಲಾಗುತ್ತಿರುವ ಪ್ರಹಾರಗಳು ತಾಜಾ ನಿದರ್ಶನ, ಸತೀಶರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಇದು ಪರಮ ಅನ್ಯಾಯು ಕವಿಗಳೇ! ನಿಮಗೆ ನಾನ್ಯಾವ ಕೇಡು ಬಗೆದಿದ್ದೆ? ನಿಜವಾಗಿಯೂ ದುರಹಂಕಾರಿ-ದುರ್ಮಾರ್ಗಿಯಾಗಿದ್ದ ಆ ರೆವಿನ್ಯೂ ಇನ್ಸ್ಪೆಕ್ಟರ್ ನ ಹೆಸರನ್ನು ಗೋಪ್ಯವಾಗಿರಿಸುವುದಕ್ಕೆಂದು ಹೆಸರು ಬದಲಿಸಿದಾಗ ನಿಮಗೆ ನನ್ನ ಹೆಸರೇ ಬೇಕಿತ್ತೇ? !!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ತಪ್ಪು, ತಪ್ಪು!! ಆದರೆ ಅವನ ನಿಜ ಹೆಸರು ಕೇಶವನ ಇನ್ನೊಂದು ಹೆಸರೇ ಆಗಿದೆಯಲ್ಲಾ!ಹೋಗಲಿ, ನಾರಾಯಣ ಎಂದು ಇಡೋಣವೆಂದರೆ ಇನ್ಯಾರಾದರೂ ನಾರಾಯಣರು ಆಕ್ಷೇಪಿಸುವರು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕವಿ ನಾಗರಾಜ ಅವ್ರೆ ನಿಮ್ಮ ಸ್ವಾನುಭಾವನನ್ನ ಅಸ್ಟು ವರ್ಷಗಳ ನಂತರವೂ ನೆನಪಿಟ್ಟುಕೊಂಡು ನೀವು ಬರೆದ ೩ ಘಟನೆಗಳು ಬ್ರಷ್ಟಾಚಾರ ನಮ್ಮೆಲ್ಲ ವ್ಯವಸ್ತೆಯಲ್ಲಿ ಅದೆಷ್ಟು ಬಲವಾಗಿ ಹೊಕ್ಕಿದೆ ಮತ್ತು ಪಟ್ಟಾಗಿ ಬೇರೂರಿದೆ ಎಂಬುದರ ಅರಿವಾಗುತ್ತೆ. ಆದರೆ ತೀರ ಇತ್ತೇಚೆಗೆ 'ಹಣ್ಣ' ಅವ್ರ ಚಳುವಳಿಯಿಂದಾಗಿ ಜನ ಎಚ್ಚೆತ್ತಿದ್ದು ಅಲ್ಲಲ್ಲಿ ಅದರ ಬಿಸಿ ಮುಟ್ಟುತ್ತಿದೆ, ಆದರೆ ಸೂಕ್ತ ಆಧಾರ -ಧಾಖಲೆ ಇಲ್ಲದೆ. ಬ್ರಸ್ಟಚಾರದ ಆಪಾದನೆಗೆ ತುತ್ತಾದವರೆಲ್ಲ ಕಾನೂನಿನ ಕೈ ನಿಂದ ತಪ್ಪಿಸಿಕೊಂಡು ಹೊರಬಂದದ್ದು? ನಿಮ್ಮ ಮುಂದಿನ ಭಾಗವನ್ನ ಕುತೂಹಲದಿಂದ ನಿರೀಕ್ಸಿಸುತ್ತ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

'ಅಣ್ಣಾ'ರವರ ಹೋರಾಟದ ಬಿಸಿ ಉಳಿದಿದೆಯೆಂದು ಅನ್ನಿಸುತ್ತಿಲ್ಲ. ಧನ್ಯವಾದಗಳು, ವೆಂಕಟೇಶರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವ್ಯವಸ್ತೆ ಇಷ್ಟೊಂದು ಹಾಳಾದಾಗ .ಯಾವ ಮಟ್ಟದಿಂದ/ಮೂಲದಿಂದ ಇದನ್ನು ಶುದ್ದಗೊಳಿಸಬೇಕೆಂಬುದೆ ದೊಡ್ಡ ಸವಾಲು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಜನರಲ್ಲಿ ಜಾಗೃತಿ ಆಗಬೇಕು! ಆಗುವುದೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಚಿಲ್ಲರೆ ದುಡ್ಡೂ ಪಡೆದವ್ರು ಕೆ0ಪು ಕೈಯ್ಯಾಗಿ ಸಿಕ್ಕಿಕೊ0ಡು ನರಳುತ್ತಾರೆ ... ಕೋಟಿ ಕದ್ದವರು ರಾಜಾರೋಷವಾಗಿ ಊರೂರು ತಿರುಗಿಕೊ0ಡು ಮತಭಿಕ್ಷೆ ಕೇಳ್ತಾರೆ :‍((((
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಮ್ಮ ಅಭಿಪ್ರಾಯ ಸರಿ!!!!!!! :((
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಮ್ಮ ಲೇಖನ, ಮಧುಕರ ಶೆಟ್ಟಿಯವರಿಗೆ ಸ್ವಲ್ಪ ಸಮಾಧಾನ ತರಬಹುದೇನೋ! ಆದರೆ ಭ್ರಷ್ಟಾಚಾರದ ಕಬ೦ಧ ಬಾಹುಗಳು ಚಾಚಿರುವ ಉದ್ಧವನ್ನು ಲೆಕ್ಕ ಹಾಕಲು ಅದಿನ್ನೆ೦ಥಾ ಟೇಪು ತರಬೇಕೋ ನಾನರಿಯೆ!! :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪ್ರಿಯ ಮಂಜು, ನಿಜ ಹೇಳಬೇಕೆಂದರೆ ಮಧುಕರಶೆಟ್ಟಿರವರ ಲೇಖನ ನಾನು ಓದಿಯೇ ಇಲ್ಲ. ಲೋಕಾಯುಕ್ತದ ಈಗಿನ ವ್ಯವಸ್ಥೆಯ ಸ್ವರೂಪ ಬದಲಾಗುವ ಅಗತ್ಯವಿದೆ. ಈ ಕುರಿತು ನನ್ನ ಅನಿಸಿಕೆಯನ್ನು ಮುಂದೆ ವ್ಯಕ್ತಪಡಿಸುವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.