ವಿಜಯನಾರಸಿಂಹ - ಒಂದು ನೆನಪು

4.833335

(ಚಿತ್ರದಲ್ಲಿ : R.N. ಜಯಗೋಪಾಲ್, ಚಿ.ಉದಯಶಂಕರ್, ವಿಜಯನಾರಸಿಂಹ copyright: Sudatta G)  

ಶ್ರೀನಾಥ ಭಲ್ಲೆಯವರೊಂದಿಗೆ ಹರಟುತ್ತಿದ್ದಾಗ ಅವರು ನನ್ನ ಅಜ್ಜ ಚಿತ್ರ ಸಾಹಿತಿ ವಿಜಯನಾರಸಿಂಹ ಅವರ ಬಗ್ಗೆ ಇನ್ನಷ್ಟು ತಿಳಿಯುವ ಆಸೆ ವ್ಯಕ್ತಪಡಿಸಿದರು. ಅದರೊಂದಿಗೆ ನೆನಪಿನ ಬುತ್ತಿ ಬಿಚ್ಚಿಕೊಂಡಿತ್ತು. 
೧೯೯೮-೯೯ ಇರಬಹುದು. ತಾತನವರ ಕಣ್ಣು ಸಂಪೂರ್ಣ ದಯಾಬೆಟಿಕ್ ರೆಟಿನೋಪತಿಗೆ ಒಳಗಾಗಿ ಹಾಳಾಗಿತ್ತು. ಮಂಜಾದ ಕಣ್ಣಿನಿಂದಲೇ, ಮನೆಯಿಂದಲೇ ತಮ್ಮ ಬರವಣಿಗೆಯನ್ನು ಮುಂದುವರೆಸಿದ್ದರು ತಾತನವರು. ಸದಾ ಪಕ್ಕದಲ್ಲಿ ಬಿಳಿಹಾಳೆ, ದೊಡ್ಡ ಲೆನ್ಸುಗಳು, ಪ್ರ್ಟಿತಿಯ ಪಾರ್ಕರ ಪೆನ್ನು ಹೋಗಿ ಈಗ ದಪ್ಪನೆಯ ಮಾರ್ಕರ ಪೆನ್ನುಗಳು ಸದಾ ಅವರ ಸಂಗಾತಿ. ಅವರು ಹಾಗೆ ಬರೆದಿದ್ದನ್ನು  ಅಜ್ಜಿ ಸರಸ್ವತಮ್ಮ ಮತ್ತೆ ತಿಳಿಯಾದ ಹಾಳೆಯಲ್ಲಿ ಬರೆದು ಇಡುತ್ತಿದ್ದರು. 
ಆಗಷ್ಟೇ ಸೂಪರ್ ಹಿಟ್ಟಾದ ಕನ್ನಡ ಸಿನಿಮಾ ಒಂದರ ಹಾಡುಗಳು ಎಲ್ಲರ ಬಾಯಿಯಲ್ಲೂ ಇದ್ದವು. ಈ ಒಂದು ಸಿನಿಮಾದೊಂದಿಗೆ ಅಚಾನಕ್ಕಾಗಿ ಖ್ಯಾತನಾಮರಾದ ಸಂಗೀತ ನಿರ್ದೇಶಕರು ಒಂದು ದಿನ ತಾತನವರನ್ನು ನೋಡಲೆಂದು ಮನೆಗೆ ಬಂದರು.   ನನಗೋ ಆ ಸಂಗೀತ ನಿರ್ದೇಶಕರನ್ನು ನೋಡಿದ್ದೇ ಖುಶಿ. ಅಲ್ಲಿಯೇ ಹಾಲಿನಲ್ಲಿ ಅವರ ಮಾತುಗಳನ್ನು ಕೇಳುತ್ತಾ ಕುಳಿತಿದ್ದೆ. 
"ನೋಡಿ ವಿಜಯನಾರಸಿಂಹ. ಈಗ ಕಾಲ ಬದಲಾಗಿದೆ. ಪ್ರೀತಿ, ಸೌಂದರ್ಯ ಇದಕ್ಕೆಲ್ಲಾ ಜನಕ್ಕೆ ಟೈಮ್ ಇಲ್ಲ. ಜನಕ್ಕೆ ಕ್ರಿಯೇಟಿವಿಟಿ ಬೇಕು. ಅದು ಇನ್ಸ್ಟಂಟ್ ಆಗಿರಬೇಕು. ಈಗ ನೋಡಿ, ಆ ಫೋನು ರಿಂಗ್ ಆಗ್ತಾ ಇದೆ. ಅದನ್ನ ನೋಡಿದ ತಕ್ಷಣ ಹೀರೋ ಮನಸ್ಸಲ್ಲಿ ಹಾಡು ಗುನುಗ್ಬೇಕು. ಅದು ಹೀರೋಯಿನ್ ನಿರೀಕ್ಷೆಲಿ ಇರಬಹುದು ಅಥವಾ ಹಾಗೇ ಅವನ ಜೋಷ್ ಬಗ್ಗೆ ಇರಬಹುದು. ಹಾಗೆ ನಾವು ಓಪನ್ ಅಪ್ ಆಗಬೇಕು. ನೀವು ಅಂಥಾ ಹಾಡು ಬರೀರಿ, ನಾನು ಮುಂದಿನ ಸಿನಿಮಾಲಿ ಹಾಕ್ತೀನಿ. ನೋಡಿ ಎಂಥಾ ಸೂಪರ್ ಹಿಟ್ ಅಂತಾ!..." ಹೀಗೆ ಮೂದುವರೆದಿತ್ತು. ವಾಹ್! ಎಂಥಾ ಕ್ರಿಯೇಟಿವಿಟಿ ಅಂತಾ ನಾನೂ ಕಿವಿ ಬಿಚ್ಚಿ ಕೇಳ್ತಾ ಇದ್ದೆ. ತಾತನವರು ಸಹ ತಮ್ಮ ಕೈಯ್ಯಲ್ಲಿದ್ದ ದೊಡ್ಡ ಲೋಟದಲ್ಲಿ ಸುಡುಬಿಸಿ ಕಾಫಿಯನ್ನು ಹೀರುತ್ತಾ ಕೇಳುತ್ತಲೇ ಇದ್ದರು. ಸಂಗೀತ ನಿರ್ದೇಶಕರು ಹೊರಟಾಗ ಸಂತೋಷದಿಂದಲೇ ಬೀಳ್ಕೋಂಡರು. 
ಇದಾದ ಕೆಲವು ದಿನಗಳಲ್ಲಿ ತಾತನವರು ಶುಗರ್ ಹೆಚ್ಚಾಗಿ ಆಸ್ಪತ್ರೆ ಸೇರಿದ್ದರು. ಅವರ ಆರೈಕೆಗೆ ಎಂದು ನನಗೂ ಆಸ್ಪತ್ರೆ ವಾಸ. ಗೊತ್ತಲ್ಲ, ಆಸ್ಪತ್ರೆ ಎಂದರೆ ಮಹಾ ಬೋರು. ಅದರಲ್ಲೂ ಈಗಿನಂತೆ ಸ್ಮಾರ್ಟ್ ಫೋನ್ ಇರದ ಕಾಲ. ಕಾಲ ಕಳೆಯಲು ಹರಟುತ್ತಾ ತಾತನವರ ಬಳಿ ಆ ಸಂಗೀತ ನಿರ್ದೇಶಕರ ವಿಷಯ ತೆಗೆದೆ. 
"ಅಲ್ಲ ತಾತ, ಅವರು ಆವತ್ತು ಎಷ್ಟು ಚೆನ್ನಾಗಿ ಹೇಳಿದ್ರು ನೋಡು. ನೀನು ಯಾಕೆ ಆ ಥರ ಹಾಡು ಬರೆಯಲ್ಲ? ಅವರಿಗೆ ನೀನು ಯಾಕೆ ಆ ಥರಾ ಒಂದು  ಇನ್ಸ್ಟಂಟ್-ಮಾಡರ್ನ್ ಹಾಡು ಬರೆದು ಕೊಡಬಾರದು......  " ಹೀಗೇ ನನ್ನ ಧಾಟಿ ಮುಂದುವರೆದಿತ್ತು. 
 
ಸಾಧಾರಣವಾಗಿ ಇಂತಹ ನನ್ನ ವಾದಗಳಿಗೆ ತಾತ ಪ್ರತಿಕ್ರಿಯಿಸುವವರಲ್ಲ. ಆದರೆ ಅಂದೇಕೋ ಅವರು ಸುಮ್ಮನಿರಲಿಲ್ಲ. "ನೋಡಪ್ಪ, ಇಂಡಸ್ಟ್ರೀಲಿ ಒಂದು ಸಿನಿಮಾ ಹಿಟ್ ಆದ ತಕ್ಷಣ ನನ್ನ ಕೋಳಿ ಕೂಗಿದ್ರೇನೆ ಬೆಳಗಾಗೋದು ಅನ್ನೋ ಜನ ಜಾಸ್ತಿ. ಇಂತವ್ರು ಬರ್ತಲೇ ಇರ್ತಾರೆ. ಜನರ ಮನಸ್ಸಲ್ಲಿ ಶಾಶ್ವತವಾಗಿ ನಿಲ್ಲೋದು ಪ್ರೀತಿ, ಸೌಂದರ್ಯನೋ ಅಥವಾ ಫೋನ್ ರಿಂಗ್ ಆಗೋದೋ ಕಾಲ ನಿರ್ಣಯ ಮಾಡುತ್ತೆ. ಇಂಥವರ ಮಾತು ಕೇಳಿ ನಾನು ಬದಲಾಗಬೇಕಿಲ್ಲಪ್ಪ" ಎಂದು ಸುಮ್ಮನಾದರು. 
ಅದಾದ ಒಂದು ವರ್ಷಕ್ಕೆ ಆ ಸಂಗೀತ ನಿರ್ದೇಶಕರ ಹೆಸರು ಎಲ್ಲೂ ಇರಲಿಲ್ಲ. ಇಂದಿಗೂ ವಿಜಯನಾರಸಿಂಹ ಅವರ ಹೆಸರು ಉಳಿದಿದೆ. 
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ಆತ್ಮೀಯ ಸುದತ್ತಾ ಅವರಿಗೆ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ವಿಜಯನಾರಸಿಂಹ ರ ಮೊಮ್ಮಗನಾಗಿ ಅವರ ಬದುಕಿನ ಮಜಲೊಂದನ್ನು ಚನ್ನಾಗಿ ತಿಳಿಸಿದ್ದೀರಿ. ಹೀಗೆಯೇ ಅವರ ಒಡನಾಟ, ವಿಚಾರ, ಘಟನಾವಳಿಗಳ ಕುರಿತು ಬರೆದು, ನಮ್ಮೆಲ್ಲಾ ಸಂಪದಿಗರಿರೊಂದು ರೀತಿ ಕನ್ನಡತನದ ಐತಿಹಾಸಿಕ ಧಾರಾ ರಸವನ್ನು ಉಣಿಸಿ, ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಇದ್ದಕ್ಕಿದ್ದಂತೆ ಮೋಡ ಮುಸುಕಿ ಸುರಿಸಿ ಹೋಗೋ ಮಳೆ ಭುವಿಗೆ ಕೊಂಚ ನೀರುಣಿಸಿದರೂ, ಹೆಚ್ಚುಕಾಲ ನಿಲ್ಲೋದು ನಿಧಾನಗತಿಯಲ್ಲೇ ಸಾಗಿ ನಿರಂತರವಾಗಿ ಜಿನುಗೋ ಮಳೆ ...

ಹೌದು,ಸಂಪದಿಗರಿಗೆ ಶ್ರೀ.ವಿಜಯನಾರಸಿಂಹ ಅವರ ಬಗ್ಗೆ ನಿಮ್ಮ ಅನುಭವಗಳ ಧಾರಾವಾಹಿ ಬರಲಿ.ಶುಭವಾಗಲಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.