ವಿಟ್ಠಲನಿಗೊಂದು ಅಷ್ಟಕ

ವಿಟ್ಠಲನಿಗೊಂದು ಅಷ್ಟಕ

ಕವನ

ಜಂಗುಳಿಯ ನಡುವೆ ಕಂಬಳಿಯ ಹೊದ್ದು ಹಂಬಲಿಸುವವರ ಕಾವ
ಬಡವರಿಗೆ ಒಡೆಯ ತಡವಿರದೆ ಒಲಿವ ಇವ ಎಣಿಸ ತಪ್ಪು ತಡೆಯ ||

ಶಶಿಖಂಡ ತೀರ ವಿಷತುಮುಲ ದೂರ ಖಲು ಪುಂಡಲೀಕ ವರದ |
ದಾಸರಿಗೆ ದುಡಿದ ಅವರೊಡನೆ ನಡೆದ ಲೆಕ್ಕಿಸದೆ ಮಡದಿ ದುಗುಡ ||

ಕಲ್ಲಾಗಿ ಅಲ್ಲ ಕಲ್ಲೊಳಗೆ ಇರುವ ಎಲ್ಲರಿಗೂ ತಲುಪಿ ಸವೆವ |
ಭಕುತರಲಿ ಮೋಹ ತಾಳಕ್ಕೆ ಕುಣಿವ ನಾದದಲಿ ಮೇಳೈಸಿ ಮೆರೆವ ||

ಕಟಿಯಲ್ಲಿ ಕರವಿಟ್ಟು ತುಳಸಿ ಹಾರವ ತೊಟ್ಟು ನಿಂತ ಇಟ್ಟಿಗೆಯ ಮೇಲೆ
ಸಂತರಿಗೆ ಪ್ರೀಯ ಏಕಾಂತ ಗೆಳೆಯ ಶಾಂತ ಮೂರುತಿ ನಮ್ಮ ಜೀಯ ||

ಪದವಿಲ್ಲಿ ದಾಸೋಹ ಪದವಿಯಲಿ ವೈರಾಗ್ಯ ಪದಸಖ್ಯ ಭಾಗ್ಯ ವೇದ್ಯ |
ಹಿಂಡು ದಿಂಡಿಯ ದಂಡು ಸೇರಿ ಹಾಡಿಕೊಂಡವರಿಗೆ ನಿಜ ಸೌಖ್ಯ ಲಭ್ಯ ||