ಸಂಕಟ ಮೋಚನ ಹನುಮಾನ್@ಮೌಂಟ್ ಮಡೋನ

4.333335

ಕ್ಯಾಲಿಫೋರ್ನಿಯಾದ ಸ್ಯಾನ್ ಹೋಸೆ, ಬೇ ಏರಿಯಾ ಬಳಿ ದೇವಸ್ಥಾನಗಳಿಗೆ ಕೊರತೆಯಿಲ್ಲ. ಲಿವರ್ಮೋರ್ ಶಿವ-ವಿಷ್ಣು ದೇಗುಲ ನಯನ ಮನೋಹರ. ಹೊಸದಾಗಿ ಆದ ದೇವಸ್ಥಾನಗಳು ಸಹ ಹಲವು. ಆದರೆ ಸಾಂತಾ ಕ್ರುಜ್ ಬಳಿಯ ಸುಂದರ ಪರ್ವತಗಳ ನಡುವೆ ಒಂದು ಹನುಮಾನ್ ದೇಗುಲವಿದೆ ಎಂದು ಕೇಳಿ ಆಶ್ಚರ್ಯವಾಗಿತ್ತು. ಕೊನೆಗೂ ಅಲ್ಲಿಗೆ ಭೇಟಿ ನೀಡುವ ಯೋಗ ಈ ವಾರಾಂತ್ಯ ಒದಗಿತು.

ನಿಮಗೆ ಬೇ ಏರಿಯಾ ಪರಿಚಿತವಿದ್ದಲ್ಲಿ ೧೦೧ ಫ್ರೀವೆ ಕೇಳಿಯೇ ಇರುತ್ತೀರ. ಹಾಗೆಯೇ ಗಿಲ್ರಾಯ್ (gilroy)ಶಾಪಿಂಗಿಗೆ ಪ್ರಸಿದ್ಧ. ಗಿಲ್ರಾಯ್ ಪಟ್ಟಣದಿಂದ ಸಾಂತಾ ಕ್ರುಜ್ ಕಡೆಗೆ ಹೋಗಲು ಕಡಿದಾದ ಪರ್ವತವೊಂದನ್ನು ದಾಟಿ ಹೋಗಬೇಕು. ಆ ಪರ್ವತವೆ ಮೌಂಟ್ ಮಡೋನ. ಆಗುಂಬೆಯ ಘಟ್ಟಗಳನ್ನು ನೆನಪಿಸುವ ತಿರುವುಗಳು, ನಯನ ಮನೋಹರವಾದ ಎತ್ತರದ ರೆಡ್-ವುಡ್ ಮರಗಳು ತುಂಬಿದ ಸುಂದರ ಪರ್ವತ. ಆ ಪರ್ವತದ ಶಿಖರದ ಬಳಿ ಇದೆ ಈ ದೇವಸ್ಥಾನ.

ದೇಗುಲ ಪರ್ವತಗಳ ಮಧ್ಯೆ ಇರುವುದರಿಂದ ಇಲ್ಲಿಗೆ ಭೇಟಿ ನೀಡಲು ತಯಾರಿ ಅತ್ಯವಶ್ಯ. ವಾರಾಂತ್ಯ ಜನಜಂಗುಳಿ ಜಾಸ್ತಿಯಾದರೆ ಪಾರ್ಕಿಂಗ್ ವ್ಯವಸ್ಥೆ ಮಾಡಲು ಅನುಕೂಲವಾಗಲೆಂದು ದೇಗುಲದವರು ಮೊದಲೇ ರಿಸರ್ವ್ ಮಾಡಲು ಕೇಳಿಕೊಳ್ಳುತ್ತಾರೆ. ಹಾಗೆಯೇ ಹೋಗುವ ಮುನ್ನ http://www.hanumanfellowship.org/temple/home/ ಗೆ ಹೋಗಿ ಭೇಟಿಯ ಸಮಯಗಳನ್ನು ಪರಿಶೀಲಿಸಿ.

ನಾವು ಹೋದಾಗ ಶನಿವಾರ ಮಧ್ಯಾಹ್ನ ೧ ಗಂಟೆ. ಬಿಸಿಲು ಹೆಚ್ಚಿಲ್ಲದ ಚಳಿಯೂ ಇಲ್ಲದ ಸುಂದರವಾದ ದಿನ.  ದೇಗುಲದ ಪಕ್ಕದಲ್ಲಿರುವ ಕೊಳದ ಬಳಿ ಪಾರ್ಕಿಂಗ್ ದೊರೆತಿತ್ತು.

ದೇಗುಲದ ಮೊದಲ ನೋಟ ಸುಂದರವಾಗಿತ್ತು. ವಿಶಾಲವಾದ ಮೆಟ್ಟಿಲುಗಳು. ಅದರ ಮೇಲೆ ಹನುಮಂತನ ವಿವಿಧ ಭಂಗಿಗಳ ಪ್ರತಿಮೆಗಳು! ಭಾರತದಿಂದ ಅಷ್ಟು ದೂರ ಇದ್ದೇವೆಂದು ಅನ್ನಿಸದಷ್ಟು ಮನೋಹರವಾಗಿವೆ.

ಮೇಲಿನ ದೇಗುಲ ಸಣ್ಣ, ಸ್ವಚ್ಚ ಹಾಗು ಆಡಂಬರರಹಿತ! ಹನುಮಂತನ ಮೂರ್ತಿಗೆ ಬಣ್ಣವೇ ಅಲಂಕಾರ. ಗರ್ಭಗುಡಿಯ ಬಳಿ ನಿಂತ ಅರ್ಚಕರು ಯಾವುದೇ ದಕ್ಷಿಣೆ ಮುಟ್ಟುವುದಿಲ್ಲ. ಆರತಿ ಏನಿದ್ದರು ಸಂಜೆ ಆರಕ್ಕೆ. ಮಕ್ಕಳಿಗೆ ಶುಗರ್-ಲೆಸ್ ಚಾಕಲೇಟು, ದೊಡ್ಡವರಿಗೆ ಬಾದಾಮಿ ಪ್ರಸಾದ.  ಪಕ್ಕದಲ್ಲಿ ಸಣ್ಣದಾದ ಗಣಪತಿ ಗುಡಿಯ ಬಳಿ ಹೊಸದಾಗಿ ಕಟ್ಟಿರುವ ಜಲಪಾತ ಬಹಳ ಆಕರ್ಷಕವಾಗಿದೆ.

ದೇಗುಲದ ಸುತ್ತ  ಕಾಣುವ ಪೆಸಿಫಿಕ್ ಸಾಗರದ ದೃಶ್ಯ ಚಿತ್ತಾಕರ್ಷಕ. ಅಲ್ಲಿರುವ ಸಣ್ಣ ಕೆಫೆಯಲ್ಲಿ ಕಾಫಿ-ಸಮೋಸಾ ಕೊಂಡು ಮೆಲ್ಲುತ್ತಾ ಪರ್ವತ-ಸಾಗರಗಳ ದೃಶ್ಯಾವಳಿಯನ್ನು ಕ್ಯಾಮೆರಾದಲ್ಲಿಯು ಮನದಲ್ಲಿಯೂ ಸೆರೆ ಹಿಡಿವಲ್ಲಿ, ಬೆಟ್ಟಗಳ ನಡುವೆ ಡ್ರೈವ್ ಮಾಡಿ ಬಂದ ಆಯಾಸವೆಲ್ಲಾ ಮಾಯ!

ನೋಡಿ, ಮುಂದಿನ ಶನಿವಾರ ಟೈಮ್ ಇದ್ದಾರೆ ಹೋಗಿ ಬನ್ನಿ!

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ಮಾಹಿತಿಪೂರ್ಣ ಲೇಖನ. ಆದರೆ ನಿಮ್ಮ ಚಿತ್ರಗಳನ್ನೂ ಕಸಿ ಮಾಡಿ ಹಾಕಿ. (ಟ್ರಿಮ್)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.