ಸಂಕ್ರಾಂತಿ ದೇವಿಗೆ, ಸಂಕ್ರಾಂತಿ ದೇಣಿಗೆ..

3

ಹಬ್ಬಗಳ ಸಾಲಲ್ಲಿ ಪ್ರಾಯಶಃ ಸಂಕ್ರಾಂತಿಗೊಂದು ವಿಶಿಷ್ಠ ಸ್ಥಾನ - ಅಧುನಿಕ ಹೊಸ ವರ್ಷದ ಲೆಕ್ಕಾಚಾರದಲ್ಲಿ ನಾವು ನೋಡುವ, ಆಚರಿಸುವ ಮೊದಲ ಪ್ರಮುಖ ಹಬ್ಬ ಸಂಕ್ರಾಂತಿ. ಸೂರ್ಯರಥ ಸಂಕ್ರಮಣದ ಪಥ ಬದಲಿಸುವ ಸಾಂಕೇತಿಕತೆಯೂ ಬದಲಾವಣೆಯ ಕುರುಹಾಗುವ ಮಹತ್ವ. 

ಅಖಂಡ ಬೆಳಕಿನ ಶಕ್ತಿಯ ಪ್ರಣೀತ ಸೂರ್ಯ. ಅವಿರತ ನಿರ್ವಹಿಸುವ ತನ್ನ ಕಾರ್ಯಭಾರದ ಹೊಣೆ ಅವನ ಶಕ್ತಿಯ ಭಂಡಾರವನ್ನೆಲ್ಲ ಹೀರಿ ಖಾಲಿಯಾಗಿಸದಿದ್ದರೂ, ಸಾಕಷ್ಟು ಸಾರವನ್ನು ಮೂಲದಿಂದ ಹೀರಿ ಹಾಕುವುದು ನಿಜ. ಆ ಸೋರಿಹೋದ ಸಾರಸತ್ವವನ್ನು ಮತ್ತೆ ತುಂಬಿಕೊಂಡು , ಹೊಸ ಹುರುಪಿನಿಂದ ತನ್ನ ಉತ್ತರಾಯಣ ಮರು ಪಯಣ ಆರಂಭಿಸುವ ಪ್ರಕ್ರಿಯೆಗೆ ಚಾಲನೆ ಕೊಡುವುದೂ ಸಂಕ್ರಾಂತಿಯ ಸಂಕ್ರಮಣದಿಂದಲೆ ಎಂದು ನನ್ನ ಅನಿಸಿಕೆ. ಅಗಣಿತ ಶಕ್ತಿಮೂಲವಾದ ಆ ವಿಶ್ವಶಕ್ತಿ  - ಸಂಕ್ರಾಂತಿ ದೇವಿಯ ರೂಪದಲ್ಲಿ ಖಾಲಿಯಾದ ರವಿ ಚೇತನವನ್ನು ಮತ್ತೆ ತುಂಬಿ, ಅವನ ಸಾಮರ್ಥ್ಯವನ್ನು ಮತ್ತೆ ಮೂಲ ಮೊತ್ತವಾಗಿಸಿ, ಹೊಸಪಯಣಕ್ಕೆ ಹುರಿದುಂಬಿಸುವ, ತನ್ಮೂಲಕ ಸೃಷ್ಟಿಯ ಪ್ರಕ್ರಿಯೆಗಳೆಲ್ಲ ಸರಾಗವಾಗಿ ನಡೆಯುತ್ತಿರುವಂತೆ ನೋಡಿಕೊಳ್ಳುವ ದೈವ ನಿಯಮ. 

ಖಗೋಳ ವಿಜ್ಞಾನದ ಪರಿಗಣನೆಯಲ್ಲಿ ಸುತ್ತುತ್ತಿರುವುದು ಭೂಮಿಯೆ ಹೊರತು ಸೂರ್ಯನಲ್ಲ. ಹೀಗಾಗಿ ಈ ಸಂಕ್ರಮಣ, ಭೂಮಿ ಸೂರ್ಯನ ಸುತ್ತಲ ಅಂಡಾಕಾರದ ಪರಿಕ್ರಮದಲ್ಲಿ, ದೂರದ ಬದಿಯ ತಂಪಾದ ಉದ್ದನೆಯ ಪಥವನ್ನು ಕ್ರಮಿಸಿ, ಈಗ ಸೂರ್ಯನ ಹತ್ತಿರ ಹತ್ತಿರವಾಗುತ್ತ ಸನಿಹದ ಬೆಚ್ಚನೆಯ ಪಥದಲ್ಲಿ ಸುತ್ತುವ ಹೊತ್ತು. ಹತ್ತಿರದಿಂದ ಸುತ್ತಬೇಕೆಂದ ಮೇಲೆ ಹೆಚ್ಚು ಬೆಳಕು, ಹೆಚ್ಚು ಬಿಸಿಲು, ಚಳಿಯ ತೆಕ್ಕೆಯಿಂದ ಬಿಸಿಲಿನತ್ತ ಬದಲಾಗುವ ಋತು - ಎಲ್ಲವು ಸಹಜ ಪ್ರಕ್ರಿಯೆಗಳೆ. ಇದೆಲ್ಲ ಬದಲಾವಣೆಗೆ ನಾಂದಿಯಾಗಿ ಮುನ್ನುಡಿ ಹಾಕುವ ಸಂಕ್ರಾಂತಿ , ಸಂಕ್ರಮಣದ ರೂಪದಲ್ಲಿ ಬರುವ ನಿರಂತರ ಬದಲಾವಣೆಯ ಚಕ್ರದ ಸಂಕೇತ. ಹಾಗೆಯೆ ಸೂರ್ಯನ ಅತೀ ಸಮೀಪಕ್ಕೆ ಬರುವ ಧಾರಿಣಿಯ ವಾರ್ಷಿಕ ಸಾಂಗತ್ಯದ ವೇಳಾಪಟ್ಟಿ. ಯಾರಿಗೆ ಗೊತ್ತು? ಈ ಸಾಮೀಪ್ಯ ಭ್ರಮಣದಲ್ಲಿ ಬೇಕಾದ ಎಲ್ಲಾ ಶಕ್ತಿ ಸಂಚಯಿಸಿಕೊಂಡು, ನಂತರದ ದೂರಪಥ ಕ್ರಮಣದಲ್ಲಿ ಮಿತವಾಗಿ ಬಳಸುತ್ತ ಖರ್ಚು ಮಾಡುವ ನಿಸರ್ಗದಾಟವೂ ಇರಬಹುದೇನೊ?

ಇದೆಲ್ಲಾ ಸ್ತರಗಳ ಪದರಗಳನ್ನು ಬದಿಗಿಟ್ಟು ನಮ್ಮ ದೈನಂದಿನ ಜೀವನದ, ಸಂಭ್ರಮಾಚರಣೆಯ ದೃಷ್ಟಿಕೋನದಲ್ಲಿ ನೋಡಿದರೆ ತಟ್ಟನೆ ಮನದಲ್ಲಿ ಮೂಡುವ ಸಾಲುಗಳು - "ಎಳ್ಳು ತಿಂದು ಒಳ್ಳೆಯ ಮಾತಾಡು :-)" . ಎಳ್ಳು ಬೀರುವ ಸಂಭ್ರಮದಲ್ಲಿ ಹೊಸ ಉಡುಗೆ, ಆಭರಣಗಳನ್ನು ತೊಟ್ಟು ಎಳ್ಳು, ಬೆಲ್ಲ, ಸಕ್ಕರೆ ಅಚ್ಚು, ಕಬ್ಬಿನ ಜಲ್ಲೆಯ ತುಂಡುಗಳನ್ನು ಹಿಡಿದು ಹೊರಡುವ ಹೆಂಗಳೆಯರ ಸಡಗರವೆ ಮತ್ತೊಂದು ಬಗೆಯದು. ಸಂಕ್ರಾಂತಿಯ ಸಂಜೆಗೂ, ಎಳ್ಳು ಬೀರಲು ಹೊರಟ ಹುಡುಗಿಯರಿಗೂ ಅದೆಂತದೊ ಅವಿನಾಭಾವ ಸಂಬಂಧ - ಕನಿಷ್ಠ ಕವಿಗಳ ಕಣ್ಣಲ್ಲಿ...

ಈ ಗಳಿಗೆಯಲ್ಲಿ ಹಳೆಯದೊಂದು ತುಣುಕು ನೆನಪಾಗುತ್ತಿದೆ : ಹಿರಿಯ ಅಜ್ಜಿಯೊಬ್ಬರ ಮನೆಯಲ್ಲಿ ಪ್ರತಿ ಸಂಕ್ರಾಂತಿಗೂ ನನಗೆ ಬಿಡದೆ ಎಳ್ಳು, ಬೆಲ್ಲ ತಿನ್ನಿಸುತ್ತಿದ್ದರು. ಅಲ್ಲಿದ್ದ ಕಡಲೆ ಕಾಯಿ ಬೀಜ, ಎಳ್ಳು, ಸಕ್ಕರೆ ಅಚ್ಚು , ಕಬ್ಬು - ಎಲ್ಲವನ್ನು ಮುಗಿಸಿ ಒಳ್ಳೆ ಮಾತೊಂದನ್ನು ಆಡಬೇಕು. ಒಮ್ಮೆ ನನ್ನ ಜತೆಗೆ ಬಂದಿದ್ದ ತುಂಟ ಗೆಳೆಯನೊಬ್ಬ 'ಇದೆಲ್ಲ ಹಬ್ಬದ ನೆಪದಲ್ಲಿ ನಾವು ಬೇಕಾದ್ದು ಮಾಡಿಕೊಂಡು ತಿನ್ನುವ ನೆಪವಷ್ಟೆ..' ಎಂದು ಗೇಲಿ ಮಾಡಿದ. ಸರಿ, ಅಲ್ಲೆ ಚಕ್ಕನೆ ಶುರುವಾಯ್ತು ನೋಡಿ ಉಪದೇಶ! 

" ಗೂಬೆ ಮುಂಡೆದೆ...(ಕ್ಷಮಿಸಿ , ಸಂಕ್ರಾಂತಿಗೆ ಒಳ್ಳೆ ಮಾತಾಡುವುದೆ ರೂಲ್ಸು ಆದರೂ ಅಜ್ಜಿ ಬಾಯಿಂದ ಯಾವಾಗಲೂ ಮೊದಲು ಹೊರಡುವ ಪದಗುಚ್ಛ ಇದೆ ಆದ್ದರಿಂದ, ಇದಕ್ಕೊಂದು ರೀತಿ 'ಸಂಕ್ರಾಂತಿ ಮನ್ನ' ನೀಡದೆ ಬೇರೆ ದಾರಿಯಿರಲಿಲ್ಲ).. ಬರಿ ಮಾಡ್ಕೊಂಡು ತಿನ್ನೊದಲ್ವೊ ಲೆಕ್ಕ...ಈಗ ಚಳಿಗಾಲ...ದೇಹಕ್ಕೆ ಹೆಚ್ಚು ಶಕ್ತಿ ಬೇಕು ಬೆಚ್ಚಗಿರೋಕೆ..ಅದಕ್ಕೆ ಎಳ್ಳು, ಕಡ್ಲೆಕಾಯಿಬೀಜ, ಅವರೆ ಕಾಳು, ಕಬ್ಬಿನ ತರ ಜಿಡ್ಡು, ಸಕ್ಕರೆ ಜಾಸ್ತಿಯಿರೊ ಪದಾರ್ಥನ ತಿಂದ್ರೆ ಚಳಿ ತಡ್ಕೊಳ್ಳೊ ಶಕ್ತಿ ಬರುತ್ತೆ...ಅದ್ರಲ್ಲು ಚಳಿಯಿಂದ ಬಿಸಿಲ್ಗೆ ಕಾಲ ಬದಲಾಗೊ ಸಂಕ್ರಮಣದ ಹೊತ್ನಲ್ಲಿ ಬದಲಾವಣೆ ತಡೆಯೋಕೆ ಹೆಚ್ಚು ಶಾಖ, ಶಕ್ತಿ ಬೇಕು...ಅದಕ್ಕೆ ಈ ಟೈಮಲ್ಲಿ ಜಾಸ್ತಿ ತಿನ್ನೋದು...ಏನು ಗೂಬೆಗಳೊ, ಹಳೆ ಕಾಲದ್ದು ಅಂದ್ರೆ ಸಾಕು, ಸುಮ್ನೆ ಮೂಗು ಮುರಿಯೋದೆ ಫ್ಯಾಷನ್ ಮಾಡ್ಕೊಂಬಿಟ್ಟಿವೆ " ಅಂತ ಜಾಡಿಸುತ್ತ 'ಪರ್ಫೆಕ್ಟ್' ವೈಜ್ಞಾನಿಕ ವಿವರಣೆ ಕೊಟ್ಟಾಗ ನನ್ನ ಗೆಳೆಯ ಗಪ್ ಚಿಪ್ :-)

ನಮ್ಮ ಹಬ್ಬಗಳ, ಸಂಪ್ರದಾಯದ ಹಿಂದಿರುವ ಮಹತ್ವ, ಹಿರಿಮೆಗೆ ಇದಕ್ಕಿಂತ ಉತ್ತಮ ವ್ಯಾಖ್ಯಾನ ಕೊಡಲು ಸಾಧ್ಯವಿಲ್ಲವೆಂದು ಕಾಣುತ್ತದೆ. ಈ ವ್ಯಾಖ್ಯಾನದ ಒಳ್ಳೆಯ ಮಾತಿಂದಲೆ (ಅಜ್ಜಿಯ, 'ಗೂಬೆ ಮುಂಡೇದೆ' ಚರಣವನ್ನು ಹೊರತುಪಡಿಸಿ) ಈ ಸಂಕ್ರಾಂತಿಯನ್ನು ಆರಂಭಿಸೋಣ. ಸಮಸ್ತ ಸಂಪದಿಗ ಗೆಳೆಯರಿಗೆ ಮತ್ತು ಕನ್ನಡಿಗರೆಲ್ಲರಿಗೆ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು - ಜತೆಗೆ ಈ ಸಂಕ್ರಮಣದ ಸ್ವಾಗತಕ್ಕೆ ಅರ್ಪಿತವಾದ ಈ ಕೆಳಗಿನ ಕಾವ್ಯ ರಸಾಯನದೊಂದಿಗೆ :-)

ಸಂಕ್ರಾಂತಿ ದೇವಿಗೆ..
_______________

ಮಕರ ಸಂಕ್ರಮಣ ದ್ಯುತಿ
ಕರುಣಿಸಿ ಸಂಕ್ರಾಂತಿ ಪ್ರೀತಿ
ದಿನಕರನಿಗೆ ಹೊಸ ವರ್ಷ
ಬೆಳಕ ಮಳೆ ಚೆಲ್ಲಿ ಸುಹರ್ಷ ||

ಉತ್ತರಾಯಣ ಪಯಣ
ಮೇಲೇರೆ ರವಿ ಭ್ರಮಣ
ಉರಿದುರುವಲ ಉದುರಿಸಿ
ಹೊಸ ಉರುವಲ ಪೇರಿಸಿ ||

ನಿತ್ಯ ನಿರಂತರ ಸ್ವಪ್ರಕಾಶ
ಸಾಲ ಕೊಟ್ಟಂತೆ ಸನ್ನಿವೇಶ
ಪಡೆದವ ಮೆರೆವ ಪ್ರಭಾಸ
ಅರುಣ ರಾಗದೆ ಸುಹಾಸ ||

ರಥವೇರಲಿಹ ಸಂಕ್ರಾಂತಿಗೆ
ಭುವಿ ರವಿಗೆ ಹತ್ತಿರದ ಒಸಗೆ
ಇಳೆಯಿಂದ ಹತ್ತಿರದ ದಾರಿ
ಸ್ವರ್ಗಾರೋಹಣಕೆ ರಹದಾರಿ ||

ದಕ್ಷಿಣಾಯಣ ಬಳಸು ಸುತ್ತು
ಕೆಳಗಿಳಿವ ರಥ ಬಳಲಿಸಿತ್ತು
ಛವಿ ಶಕ್ತಿ ಉಡುಗಿ ಕರಗಿತ್ತು
ಸದ್ಯ, ಸಂಕ್ರಾಂತಿ ಮರಳಿತ್ತು ||

ಸಂಕ್ರಾಂತಿ ದೇವಿ ಕರುಣೆ
ಮುಕ್ತಿ ಮೋಕ್ಷಕೆ ಸ್ಮರಣೆ
ತೇಜೋಪುಂಜ ಭರಿಸಲೆಲ್ಲಿ
ಭಾಸ್ಕರನಲಿ ತಂಪಾದ ತಲ್ಲಿ ||

ದೇವಿ ಚಿತ್ತಾನಂದ ಮೊತ್ತ
ಜೀವಿ ಪರಮಾನಂದದತ್ತ
ಅಳಿಸುತೆಲ್ಲ ಮನೊ ವೈಕಲ್ಯ
ಗುರಿ ಮುಟ್ಟಿಸಿದರದೆ ಕೈವಲ್ಯ || 

------------------------------------ 
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು, ಸಿಂಗಪುರ
-------------------------------------
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಆತ್ಮೀಯ ನಾಗೇಶ ಜಿ, ಸಂಕ್ರಾಂತಿ ದೇವಿಗೆ, ಸಂಕ್ರಾಂತಿ ದೇಣಿಗೆ,' ಲೇಖನ ತುಂಬ ಅಂದವಾಗಿ, ಸುಂದರವಾಗಿದೆ, ಅಲ್ಲಲ್ಲಿ ಇಣುಕುವ ಹಾಸ್ಯ ಪ್ರಜ್ಞೆಯೂ ಕೂಡ ಮನಹಿಡಿಸಿತು. ಅಜ್ಜಿಯ ಮಾತು ಅಕ್ಷರಶ: ಸತ್ಯ. ಅಂದಹಾಗೆ ನಾಟಕದ ಡಯಲಾಗ್ ಕೇಳಿದಂಗಾತು. ತಮಗೂ ಸಂಕ್ರಾಂತಿಯ ಶುಭಾಶಯಗಳು ಸರ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹೌದು ಇತ್ನಾಳರೆ, ಲೇಖನ, ಕವನ, ಹಾಸ್ಯ, ನಾಟಕ, ಅಜ್ಜಿಕತೆ, ವಿಜ್ಞಾನ...ಎಲ್ಲವೂ ಇದೆ.ನಾಗೇಶರ "ಸಂಕ್ರಾಂತಿ ದೇಣಿಗೆ" ಚೆನ್ನಾಗಿದೆ. ಎಲ್ಲರಿಗೂ ಸಂಕ್ರಾಂತಿ ಶುಭಾಶಯಗಳು.
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಗಣೇಶ್ ಜಿ, ಇಟ್ನಾಳ್ ಜಿ, ಬರಹದ ಸಾರವನ್ನು ಒಂದೆರಡೆ ಸಾಲಲ್ಲಿ ಹಿಡಿದು ಸುಂದರವಾಗಿ ವ್ಯಾಖ್ಯಾನಿಸಿದ್ದೀರ. ಪ್ರತಿಕ್ರಿಯೆಯ ದೇಣಿಗೆ, ಲೇಖನದ ದೇಣಿಗೆಗೆ ಪೂರಕವಾಗಿ - ಎಳ್ಳು ತಿಂದು ಒಳ್ಳೆ ಮಾತಿಂದ ಸಂಕ್ರಾಂತಿ ಆರಂಭಿಸಿದಂತಾಗಿದೆ. ಅಂದ ಹಾಗೆ ಇದೆ ಸಂಧರ್ಭದಲ್ಲಿ ಹಿನ್ನಲೆಯಲ್ಲಿ ಎಲ್ಲವನ್ನು ಅಚ್ಚುಕಟ್ಟಾಗಿ ನಡೆಸುತ್ತಿರುವ 'ಸಂಪದ ಆಡಳಿತ / ಕಾರ್ಯಕಾರಿ' ತಂಡಕ್ಕೂ ಸಂಕ್ರಾಂತಿಯ ಎಳ್ಳು ಬೆಲ್ಲದ ಹಾರೈಕೆಗಳು :-)
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಾಗೇಶ ಮೈಸೂರು ರವರಿಗೆ ವಂದನೆಗಳು
ಸಂಕ್ರಂತಿ ದೇವಿಗೆ ಸಂಕ್ರಾಂತಿ ದೇಣಿಗೆ ಈ ಹಬ್ಬದ ಆಚರಣೆಯ ಪದ್ಧತಿ ಮತ್ತು ಅರ್ಥಗಳನ್ನು ಚೆನ್ನಾಗಿ ನಿಮ್ಮ ಬರಹ ನಿರೂಪಿಸಿದೆ, ಅಂತೆಯೆ ಕವನವೂ ಸಹ ಮನ ಮುಟ್ಟುವಂಇತದೆ, ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾಟೀಲರೆ, ತಮ್ಮ ಎಂದಿನ ಸಕ್ರೀಯ ಪ್ರತಿಕ್ರಿಯೆಗೆ ಧನ್ಯವಾದಗಳು. ಸಾಧ್ಯವಿದ್ದಷ್ಟು ಎಲ್ಲಾ ಲೇಖನಕ್ಕೂ ಓದಿ ಪ್ರತಿಕ್ರಿಯಿಸುವ ನಿಮ್ಮ ಭಾಷಾ ಪ್ರೇಮ, ಕ್ರಿಯಾಶಕ್ತಿ, ಇಚ್ಛಾಶಕ್ತಿಗಳಿಗೂ ಅಷ್ಟೆ ದೊಡ್ಡ ನಮನ :-)
ಧನ್ಯವಾದಗಳೊಂದಿಗೆ  
ನಾಗೇಶ ಮೈಸೂರು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.